Shanti Parva: Chapter 180

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೮೦

ಭೃಗುವು ಜೀವದ ಅಸ್ತಿತ್ವ ಮತ್ತು ನಿತ್ಯತೆಯನ್ನು ಯುಕ್ತಿಗಳಿಂದ ಸಿದ್ಧಪಡಿಸಿದುದು (೧-೩೦).

12180001 ಭೃಗುರುವಾಚ|

12180001a ನ ಪ್ರಣಾಶೋಽಸ್ತಿ ಜೀವಾನಾಂ ದತ್ತಸ್ಯ ಚ ಕೃತಸ್ಯ ಚ|

12180001c ಯಾತಿ ದೇಹಾಂತರಂ ಪ್ರಾಣೀ ಶರೀರಂ ತು ವಿಶೀರ್ಯತೇ||

ಭೃಗುವು ಹೇಳಿದನು: “ದೇಹ ನಾಶವಾದರೂ ಜೀವವು ನಾಶಹೊಂದುವುದಿಲ್ಲ. ಕೊಟ್ಟ ದಾನವಾಗಲೀ ಮಾಡಿದ ಕರ್ಮಫಲವಾಗಲೀ ಎಂದಿಗೂ ನಾಶವಾಗುವುದಿಲ್ಲ. ಶರೀರ ಮಾತ್ರ ನಷ್ಟವಾಗುತ್ತದೆ ಮತ್ತು ಪ್ರಾಣಿಯು ದೇಹಾಂತರವನ್ನು ಹೊಂದುತ್ತದೆ.

12180002a ನ ಶರೀರಾಶ್ರಿತೋ ಜೀವಸ್ತಸ್ಮಿನ್ನಷ್ಟೇ ಪ್ರಣಶ್ಯತಿ|

12180002c ಯಥಾ ಸಮಿತ್ಸು ದಗ್ಧಾಸು ನ ಪ್ರಣಶ್ಯತಿ ಪಾವಕಃ||

ಸಮಿತ್ತು ಸುಟ್ಟುಹೋದರೂ ಹೇಗೆ ಅಗ್ನಿಯು ನಾಶವಾಗುವುದಿಲ್ಲವೋ ಹಾಗೆ ಶರೀರವು ನಾಶವಾದರೆ ಶರೀರಾಶ್ರಿತ ಜೀವವು ನಷ್ಟವಾಗುವುದಿಲ್ಲ.”

12180003 ಭರದ್ವಾಜ ಉವಾಚ|

12180003a ಅಗ್ನೇರ್ಯಥಾ ತಥಾ ತಸ್ಯ ಯದಿ ನಾಶೋ ನ ವಿದ್ಯತೇ|

12180003c ಇಂಧನಸ್ಯೋಪಯೋಗಾಂತೇ ಸ ಚಾಗ್ನಿರ್ನೋಪಲಭ್ಯತೇ||

ಭರದ್ವಾಜನು ಹೇಳಿದನು: “ಒಂದು ವೇಳೆ ಅಗ್ನಿಯಂತೆ ಜೀವದ ನಾಶವೂ ಆಗುವುದಿಲ್ಲವೆಂದಾದರೆ ಇಂಧನವು ಸುಟ್ಟುಹೋದ ನಂತರ ಆರಿಹೋಗುತ್ತದೆ ಮತ್ತು ಅದರಲ್ಲಿ ಆಗ ಅಗ್ನಿಯು ಉಪಲಬ್ಧವಾಗುವುದಿಲ್ಲ.

12180004a ನಶ್ಯತೀತ್ಯೇವ ಜಾನಾಮಿ ಶಾಂತಮಗ್ನಿಮನಿಂಧನಮ್|

12180004c ಗತಿರ್ಯಸ್ಯ ಪ್ರಮಾಣಂ ವಾ ಸಂಸ್ಥಾನಂ ವಾ ನ ದೃಶ್ಯತೇ||

ಆದುದರಿಂದ ಇಂಧನರಹಿತ ಆರಿಹೋಗಿರುವ ಅಗ್ನಿಯನ್ನು ನಷ್ಟವಾದುದೆಂದೇ ತಿಳಿಯುತ್ತೇನೆ. ಏಕೆಂದರೆ ಯಾವುದರ ಗತಿ, ಪ್ರಮಾಣ ಅಥವಾ ಸ್ಥಿತಿಯಿಲ್ಲವೋ ಅದನ್ನು ನಾಶವಾದುದೆಂದೇ ತಿಳಿಯಬೇಕಾಗುತ್ತದೆ. ಜೀವದ್ದೂ ಇದೇ ಪರಿಸ್ಥಿತಿಯಾಗಿದೆ.”

12180005 ಭೃಗುರುವಾಚ|

12180005a ಸಮಿಧಾಮುಪಯೋಗಾಂತೇ ಸನ್ನೇವಾಗ್ನಿರ್ನ ದೃಶ್ಯತೇ[1]|

12180005c ಆಕಾಶಾನುಗತತ್ವಾದ್ಧಿ ದುರ್ಗ್ರಹಃ ಸ ನಿರಾಶ್ರಯಃ||

ಭೃಗುವು ಹೇಳಿದನು: “ಸಮಿತ್ತುಗಳನ್ನು ಉಪಯೋಗಿಸಿದ ನಂತರ ಅಗ್ನಿಯು ಕಾಣುವುದಿಲ್ಲ ಅಷ್ಟೇ. ಅದು ಆಕಾಶದಲ್ಲಿ ಅವ್ಯಕ್ತರೂಪದಲ್ಲಿ ಸ್ಥಿತವಾಗಿಬಿಡುತ್ತದೆ. ಆದುದರಿಂದ ಅದು ಉಪಲಬ್ಧವಾಗುವುದಿಲ್ಲ. ಏಕೆಂದರೆ ಆಶ್ರಯರಹಿತ ಅಗ್ನಿಯನ್ನು ಗ್ರಹಿಸುವುದು ಅತ್ಯಂತ ಕಠಿಣ.

12180006a ತಥಾ ಶರೀರಸಂತ್ಯಾಗೇ ಜೀವೋ ಹ್ಯಾಕಾಶವತ್ ಸ್ಥಿತಃ|

12180006c ನ ಗೃಹ್ಯತೇ ಸುಸೂಕ್ಷ್ಮತ್ವಾದ್ಯಥಾ ಜ್ಯೋತಿರ್ನ ಸಂಶಯಃ||

ಹಾಗೆಯೇ ಶರೀರಸಂತ್ಯಾಗದಲ್ಲಿ ಜೀವವು ಆಕಾಶವನ್ನು ಸೇರಿರುತ್ತದೆ. ಅದು ಅತ್ಯಂತ ಸೂಕ್ಷ್ಮವಾಗಿರುವುದರ ಕಾರಣ ಆರಿಹೋದ ಅಗ್ನಿಯಂತೆ ಅನುಭವಕ್ಕೆ ಸಿಗುವುದಿಲ್ಲ. ಆದರೆ ಅವಶ್ಯವಾಗಿಯೂ ಅದು ಇರುತ್ತದೆ. ಅದರಲ್ಲಿ ಸಂಶಯವೇ ಇಲ್ಲ.

12180007a ಪ್ರಾಣಾನ್ಧಾರಯತೇ ಹ್ಯಗ್ನಿಃ ಸ ಜೀವ ಉಪಧಾರ್ಯತಾಮ್|

12180007c ವಾಯುಸಂಧಾರಣೋ ಹ್ಯಗ್ನಿರ್ನಶ್ಯತ್ಯುಚ್ಚ್ವಾಸನಿಗ್ರಹಾತ್||

ಅಗ್ನಿಯು ಪ್ರಾಣಗಳನ್ನು ಧರಿಸುತ್ತದೆ. ಅದನ್ನೇ ಜೀವವೆಂದು ತಿಳಿ. ಆ ಅಗ್ನಿಯನ್ನು ವಾಯುವು ದೇಹದೊಳಗೆ ಧರಿಸಿರುತ್ತದೆ. ಶ್ವಾಸವು ನಿಂತಾಗ ವಾಯುವಿನೊಂದಿಗೆ ಅಗ್ನಿಯೂ ನಷ್ಟವಾಗುತ್ತದೆ.

12180008a ತಸ್ಮಿನ್ನಷ್ಟೇ ಶರೀರಾಗ್ನೌ ಶರೀರಂ ತದಚೇತನಮ್|

12180008c ಪತಿತಂ ಯಾತಿ ಭೂಮಿತ್ವಮಯನಂ ತಸ್ಯ ಹಿ ಕ್ಷಿತಿಃ||

12180009a ಜಂಗಮಾನಾಂ ಹಿ ಸರ್ವೇಷಾಂ ಸ್ಥಾವರಾಣಾಂ ತಥೈವ ಚ|

12180009c ಆಕಾಶಂ ಪವನೋಽಭ್ಯೇತಿ ಜ್ಯೋತಿಸ್ತಮನುಗಚ್ಚತಿ|

12180009e ತತ್ರ ತ್ರಯಾಣಾಮೇಕತ್ವಂ ದ್ವಯಂ ಭೂಮೌ ಪ್ರತಿಷ್ಠಿತಮ್||

ಶರೀರದಲ್ಲಿರುವ ಅಗ್ನಿಯು ನಷ್ಟವಾದಾಗ ಅಚೇತನ ಶರೀರವು ಭೂಮಿಯ ಮೇಲೆ ಬಿದ್ದು ಭೂಮಿತ್ವವನ್ನು ಹೊಂದುತ್ತದೆ. ಅಚೇತನ ವಸ್ತುವಿಗೆ ಭೂಮಿಯೇ ಆಶ್ರಯಸ್ಥಾನವು. ಸರ್ವ ಸ್ಥಾವರ-ಜಂಗಮಗಳ ಪ್ರಾಣವಾಯುವೂ ಆಕಾಶವನ್ನು ಸೇರುತ್ತದೆ. ಅಗ್ನಿಯೂ ವಾಯುವನ್ನು ಅನುಸರಿಸಿ ಹೋಗುತ್ತದೆ. ಹೀಗೆ ಆಕಾಶ, ವಾಯು ಮತ್ತು ಅಗ್ನಿಗಳು ಒಂದೆಡೆ ಸೇರಿದ ನಂತರ ಜಲತತ್ತ್ವ ಮತ್ತು ಭೂಮಿತತ್ತ್ವಗಳು ಶವರೂಪದಲ್ಲಿ ಭೂಮಿಯ ಮೇಲಿರುತ್ತವೆ.

12180010a ಯತ್ರ ಖಂ ತತ್ರ ಪವನಸ್ತತ್ರಾಗ್ನಿರ್ಯತ್ರ ಮಾರುತಃ|

12180010c ಅಮೂರ್ತಯಸ್ತೇ ವಿಜ್ಞೇಯಾ ಆಪೋ ಮೂರ್ತಾಸ್ತಥಾ ಕ್ಷಿತಿಃ[2]||

ಎಲ್ಲಿ ಆಕಾಶವಿರುವುದೋ ಅಲ್ಲಿ ವಾಯುವಿರುತ್ತದೆ ಮತ್ತು ಎಲ್ಲಿ ವಾಯುವಿದೆಯೋ ಅಲ್ಲಿ ಅಗ್ನಿಯೂ ಇರುತ್ತದೆ. ಈ ಮೂರೂ ತತ್ತ್ವಗಳು ನಿರಾಕಾರವೆಂದು ತಿಳಿಯಬೇಕು. ಜಲ ಮತ್ತು ಪೃಥ್ವಿ ತತ್ತ್ವಗಳಿಗೆ ಆಕಾರಗಳಿವೆ.”

12180011 ಭರದ್ವಾಜ ಉವಾಚ|

12180011a ಯದ್ಯಗ್ನಿಮಾರುತೌ ಭೂಮಿಃ ಖಮಾಪಶ್ಚ ಶರೀರಿಷು|

12180011c ಜೀವಃ ಕಿಂಲಕ್ಷಣಸ್ತತ್ರೇತ್ಯೇತದಾಚಕ್ಷ್ವ ಮೇಽನಘ||

ಭರದ್ವಾಜನು ಹೇಳಿದನು: “ಅನಘ! ಒಂದು ವೇಳೆ ದೇಹಧಾರಿಗಳ ಶರೀರದಲ್ಲಿ ಕೇವಲ ಅಗ್ನಿ, ವಾಯು, ಭೂಮಿ, ಆಕಾಶ ಮತ್ತು ಜಲತತ್ತ್ವಗಳೇ ಇರುವುದಾದರೆ ಆ ಶರೀರಗಳಲ್ಲಿರುವ ಜೀವದ ಲಕ್ಷಣಗಳೇನು? ಅದನ್ನು ನನಗೆ ಹೇಳು.

12180012a ಪಂಚಾತ್ಮಕೇ ಪಂಚರತೌ ಪಂಚವಿಜ್ಞಾನಸಂಯುತೇ|

12180012c ಶರೀರೇ ಪ್ರಾಣಿನಾಂ ಜೀವಂ ಜ್ಞಾತುಮಿಚ್ಚಾಮಿ ಯಾದೃಶಮ್||

ಪಂಚಭೂತಗಳಿಂದಾದ, ಪಂಚವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ, ಪಂಚ ಜ್ಞಾನೇಂದ್ರಿಯಗಳನ್ನು ಹೊಂದಿರುವ ಪ್ರಾಣಿಗಳ ಶರೀರದಲ್ಲಿ ವಾಸಿಸುವ ಜೀವವು ಎಂಥಹುದು ಎನ್ನುವುದನ್ನು ತಿಳಿಯ ಬಯಸುತ್ತೇನೆ.

12180013a ಮಾಂಸಶೋಣಿತಸಂಘಾತೇ ಮೇದಃಸ್ನಾಯ್ವಸ್ಥಿಸಂಚಯೇ|

12180013c ಭಿದ್ಯಮಾನೇ ಶರೀರೇ ತು ಜೀವೋ ನೈವೋಪಲಭ್ಯತೇ||

ರಕ್ತ-ಮಾಂಸಗಳ ಸಮೂಹದಿಂದ ಕೂಡಿರುವ, ಮೇಧಸ್ಸು-ಕರುಳು ಮತ್ತು ಮೂಳೆಗಳ ಸಂಚಯದಿಂದ ರೂಪಗೊಂಡಿರುವ ಈ ಶರೀರವನ್ನು ಕತ್ತರಿಸಿದರೆ ಜೀವವು ಸಿಗುವುದಿಲ್ಲ.

12180014a ಯದ್ಯಜೀವಂ ಶರೀರಂ ತು ಪಂಚಭೂತಸಮನ್ವಿತಮ್|

12180014c ಶಾರೀರೇ ಮಾನಸೇ ದುಃಖೇ ಕಸ್ತಾಂ ವೇದಯತೇ ರುಜಮ್||

ಪಂಚಭೂತಾತ್ಮಿಕ ಶರೀರದಲ್ಲಿ ಜೀವ ಎಂಬ ಪ್ರತ್ಯೇಕ ವಸ್ತು ಇಲ್ಲ ಎಂದು ತಿಳಿದರೆ ಶಾರೀರಿಕ ಮತ್ತು ಮಾನಸಿಕ ದುಃಖವನ್ನು ಅನುಭವಿಸುವವರು ಯಾರು?

12180015a ಶೃಣೋತಿ ಕಥಿತಂ ಜೀವಃ ಕರ್ಣಾಭ್ಯಾಂ ನ ಶೃಣೋತಿ ತತ್|

12180015c ಮಹರ್ಷೇ ಮನಸಿ ವ್ಯಗ್ರೇ ತಸ್ಮಾಜ್ಜೀವೋ ನಿರರ್ಥಕಃ||

ಮಹರ್ಷೇ! ಜೀವನು ಬೇರೆಯವರು ಹೇಳುವ ಮಾತುಗಳನ್ನು ಕಿವಿಗಳಿಂದ ಕೇಳುತ್ತಲೇ ಇರುತ್ತಾನೆ. ಆದರೆ ಮನಸ್ಸು ವ್ಯಗ್ರವಾಗಿತೆಂದರೆ ಮುಂದಿನ ಮಾತುಗಳು ಕಿವಿಗೆ ಕೇಳಿಸುವುದೇ ಇಲ್ಲ. ಆದುದರಿಂದ ಮನಸ್ಸಿಗಿಂತಲೂ ಅತಿರಿಕ್ತವಾದ ಜೀವದ ಅಸ್ತಿತ್ವವು ನಿರರ್ಥಕವೆಂದು ಭಾವಿಸುತ್ತೇನೆ.

12180016a ಸರ್ವಂ ಪಶ್ಯತಿ ಯದ್ದೃಶ್ಯಂ ಮನೋಯುಕ್ತೇನ ಚಕ್ಷುಷಾ|

12180016c ಮನಸಿ ವ್ಯಾಕುಲೇ ತದ್ಧಿ ಪಶ್ಯನ್ನಪಿ ನ ಪಶ್ಯತಿ||

ಮನಸ್ಸಿನಿಂದ ಯುಕ್ತವಾದ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಾನೆ. ಮನಸ್ಸು ವ್ಯಗ್ರವಾಯಿತೆಂದರೆ ಮುಂದೆ ಕಾಣುವ ದೃಶ್ಯವನ್ನು ಕಣ್ಣುಗಳು ನೋಡುತ್ತಿದ್ದರೂ ಮನಸ್ಸು ಗ್ರಹಿಸುವುದೇ ಇಲ್ಲ.

12180017a ನ ಪಶ್ಯತಿ ನ ಚ ಬ್ರೂತೇ ನ ಶೃಣೋತಿ ನ ಜಿಘ್ರತಿ|

12180017c ನ ಚ ಸ್ಪರ್ಶರಸೌ ವೇತ್ತಿ ನಿದ್ರಾವಶಗತಃ ಪುನಃ||

ಪುನಃ ನಿದ್ರಾವಶನಾದವನು ನೋಡುವುದಿಲ್ಲ, ಮಾತನಾಡುವುದಿಲ್ಲ, ಕೇಳುವುದಿಲ್ಲ, ಮೂಸುವುದಿಲ್ಲ. ಅವನು ಸ್ಪರ್ಶ-ರಸಗಳನ್ನೂ ತಿಳಿಯುವುದಿಲ್ಲ.

12180018a ಹೃಷ್ಯತಿ ಕ್ರುಧ್ಯತಿ ಚ ಕಃ ಶೋಚತ್ಯುದ್ವಿಜತೇ ಚ ಕಃ|

12180018c ಇಚ್ಚತಿ ಧ್ಯಾಯತಿ ದ್ವೇಷ್ಟಿ ವಾಚಮೀರಯತೇ ಚ ಕಃ||

ಆದುದರಿಂದ ಈ ಜಿಜ್ಞಾಸೆಯುಂತಾಗುತ್ತದೆ – ಈ ಶರೀರದಲ್ಲಿರುವ ಯಾರು ಹರ್ಷಪಡುತ್ತಾರೆ ಮತ್ತು ಯಾರು ಕ್ರೋಧಕ್ಕೊಳಗಾಗುತ್ತಾರೆ? ಯಾರಿಗೆ ಶೋಕ ಮತ್ತು ಉದ್ವೇಗಗಳುಂಟಾಗುತ್ತವೆ? ಇಚ್ಛೆ, ಧ್ಯಾನ, ದ್ವೇಷ ಮತ್ತು ಮಾತುಕತೆಗಳನ್ನು ಯಾರು ಮಾಡುತ್ತಾರೆ?”

12180019 ಭೃಗುರುವಾಚ|

12180019a ನ ಪಂಚಸಾಧಾರಣಮತ್ರ ಕಿಂ ಚಿಚ್

ಚರೀರಮೇಕೋ ವಹತೇಽಂತರಾತ್ಮಾ|

12180019c ಸ ವೇತ್ತಿ ಗಂಧಾಂಶ್ಚ ರಸಾನ್ ಶ್ರುತಿಂ ಚ

ಸ್ಪರ್ಶಂ ಚ ರೂಪಂ ಚ ಗುಣಾಶ್ಚ ಯೇಽನ್ಯೇ||

ಭೃಗುವು ಹೇಳಿದನು: “ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳ ಸಂಬಂಧವು ಮನಸ್ಸಿಗೂ ಇರುವುದರಿಂದ ಮನಸ್ಸೂ ಪಂಚಭೂತಾತ್ಮಕವೇ ಆಗಿದೆ. ಮನಸ್ಸು ಈ ತತ್ತ್ವಗಳಿಗಿಂತಲೂ ಭಿನ್ನವಾದ ತತ್ತ್ವವಲ್ಲ. ಆದರೆ ಮನಸ್ಸು ಶರೀರನಿರ್ವಾಹಕವಲ್ಲ. ಅಂತರಾತ್ಮನೊಬ್ಬನೇ ಈ ಶರೀರವನ್ನು ಧರಿಸಿದ್ದಾನೆ. ಅವನೇ ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳನ್ನೂ ಇತರ ಗುಣಗಳನ್ನೂ ಅನುಭವಿಸುತ್ತಾನೆ.

12180020a ಪಂಚಾತ್ಮಕೇ ಪಂಚಗುಣಪ್ರದರ್ಶೀ

ಸ ಸರ್ವಗಾತ್ರಾನುಗತೋಽಂತರಾತ್ಮಾ|

12180020c ಸ ವೇತ್ತಿ ದುಃಖಾನಿ ಸುಖಾನಿ ಚಾತ್ರ

ತದ್ವಿಪ್ರಯೋಗಾತ್ತು ನ ವೇತ್ತಿ ದೇಹಃ||

ಪಂಚೇಂದ್ರಿಯಗಳ ಗುಣಗಳನ್ನು ಧರಿಸುವ ಮನಸ್ಸನ್ನು ನೋಡಿಕೊಳ್ಳುವವನು ಆ ಅಂತರಾತ್ಮನೇ ಮತ್ತು ಅವನೇ ಈ ಪಂಚಭೂತಾತ್ಮಕ ಶರೀರದ ಸಂಪೂರ್ಣ ಅವಯವಗಳಲ್ಲಿ ವ್ಯಾಪ್ತನಾಗಿ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತಾನೆ. ಯಾವಾಗ ಶರೀರದೊಡನೆ ಅವನ ಸಂಬಂಧವು ಮುರಿದುಹೋಗುತ್ತದೆಯೋ ಆಗ ಆ ಶರೀರಕ್ಕೆ ಸುಖ-ದುಃಖಗಳ ಅನುಭವವಾಗುವುದಿಲ್ಲ[3].

12180021a ಯದಾ ನ ರೂಪಂ ನ ಸ್ಪರ್ಶೋ ನೋಷ್ಮಭಾವಶ್ಚ ಪಾವಕೇ|

12180021c ತದಾ ಶಾಂತೇ ಶರೀರಾಗ್ನೌ ದೇಹಂ ತ್ಯಕ್ತ್ವಾ ಸ ನಶ್ಯತಿ||

ಯಾವಾಗ ಪಂಚಭೂತಾತ್ಮಿಕ ಶರೀರದಲ್ಲಿ ರೂಪ, ಸ್ಪರ್ಶ ಮತ್ತು ಉಷ್ಣದ ಭಾವಗಳಿಲ್ಲದಿರುವುದೋ ಆಗ ಶರೀರಸ್ಥ ಅಗ್ನಿಯು ಆರಿಹೋಗಿರುತ್ತದೆ. ಆಗ ಜೀವಾತ್ಮನು ಶರೀರವನ್ನು ತ್ಯಜಿಸಿದರೂ ನಾಶಹೊಂದುವುದಿಲ್ಲ.

12180022a ಅಮ್ಮಯಂ ಸರ್ವಮೇವೇದಮಾಪೋ[4] ಮೂರ್ತಿಃ ಶರೀರಿಣಾಮ್|

12180022c ತತ್ರಾತ್ಮಾ ಮಾನಸೋ ಬ್ರಹ್ಮಾ ಸರ್ವಭೂತೇಷು ಲೋಕಕೃತ್||

ಸರ್ವವೂ ಜಲಮಯವು. ಪ್ರಾಣಿಗಳ ಶರೀರಗಳೂ ಜಲಮಯವು. ಈ ಜಲಮಯ ಶರೀರದಲ್ಲಿ ಇರುವ ಆತ್ಮನು ಮನಸ್ಸಿನಲ್ಲಿ ಅಭಿವ್ಯಕ್ತನಾಗುತ್ತಾನೆ. ಅವನೇ ಸರ್ವಭೂತಗಳ ಮತ್ತು ಸರ್ವಲೋಕಗಳ ಕರ್ತಾ ಬ್ರಹ್ಮ[5].

[6]12180023a ಆತ್ಮಾನಂ ತಂ ವಿಜಾನೀಹಿ ಸರ್ವಲೋಕಹಿತಾತ್ಮಕಮ್|

12180023c ತಸ್ಮಿನ್ಯಃ ಸಂಶ್ರಿತೋ ದೇಹೇ ಹ್ಯಬ್ಬಿಂದುರಿವ ಪುಷ್ಕರೇ||

ಆತ್ಮನು ಸರ್ವಲೋಕಹಿತಾತ್ಮಕನೆಂದು ತಿಳಿ. ಅವನು ಪ್ರಾಣಿಗಳ ಶರೀರದಲ್ಲಿ  - ಕಮಲಪತ್ರದ ಮೇಲಿರುವ ನೀರಿನ ಬಿಂದುವು ಕಮಲಪತ್ರಕ್ಕೆ ಅಂಟಿಯೂ ಅಂಟಿಕೊಂಡಿರದಂತೆ  - ಇರುತ್ತಾನೆ.

12180024a ಕ್ಷೇತ್ರಜ್ಞಂ ತಂ ವಿಜಾನೀಹಿ ನಿತ್ಯಂ ಲೋಕಹಿತಾತ್ಮಕಮ್|

12180024c ತಮೋ ರಜಶ್ಚ ಸತ್ತ್ವಂ ಚ ವಿದ್ಧಿ ಜೀವಗುಣಾನಿಮಾನ್||

ಆ ಕ್ಷೇತ್ರಜ್ಞನನ್ನೂ ನಿತ್ಯವೂ ಲೋಕಹಿತಾತ್ಮಕನೆನ್ನುವುದೆಂದು ತಿಳಿ. ತಮೋ, ರಜ ಮತ್ತು ಸತ್ತ್ವಗಳು ಜೀವದ ಗುಣಗಳೆಂದು ತಿಳಿ.

12180025a ಸಚೇತನಂ ಜೀವಗುಣಂ ವದಂತಿ

ಸ ಚೇಷ್ಟತೇ ಚೇಷ್ಟಯತೇ ಚ ಸರ್ವಮ್|

12180025c ತತಃ ಪರಂ ಕ್ಷೇತ್ರವಿದಂ ವದಂತಿ

ಪ್ರಾವರ್ತಯದ್ಯೋ ಭುವನಾನಿ ಸಪ್ತ||

ಜೀವಗುಣವು ಚೇತನಾಯುಕ್ತವಾದುದು ಎಂದು ಹೇಳುತ್ತಾರೆ. ಅದು ಸ್ವಯಂ ಚಲಿಸುತ್ತದೆ ಮತ್ತು ಶರೀರದ ಎಲ್ಲಕಡೆ ಚಲನೆಯನ್ನುಂಟುಮಾಡುತ್ತದೆ. ಶರೀರತತ್ತ್ವವನ್ನು ತಿಳಿದವರು ಕ್ಷೇತ್ರಜ್ಞನಾದ ಜೀವಕ್ಕಿಂತ ಏಳು ಭುವನಗಳನ್ನು ಸೃಷ್ಟಿಸಿದ ಪರಮಾತ್ಮನೇ ಶ್ರೇಷ್ಠ ಎಂದು ಹೇಳುತ್ತಾರೆ.

12180026a ನ ಜೀವನಾಶೋಽಸ್ತಿ ಹಿ ದೇಹಭೇದೇ

ಮಿಥ್ಯೈತದಾಹುರ್ಮೃತ ಇತ್ಯಬುದ್ಧಾಃ|

12180026c ಜೀವಸ್ತು ದೇಹಾಂತರಿತಃ ಪ್ರಯಾತಿ

ದಶಾರ್ಧತೈವಾಸ್ಯ ಶರೀರಭೇದಃ||

ದೇಹವು ನಾಶವಾದರೂ ಜೀವನವು ನಾಶವಾಗುವುದಿಲ್ಲ. ಅಜ್ಞಾನಿಗಳು ಮಾತ್ರ ಜೀವವು ಮೃತನಾದನೆಂದು ಹೇಳುತ್ತಾರೆ. ಜೀವವಾದರೋ ಮೃತದೇಹವನ್ನು ತ್ಯಜಿಸಿ ಬೇರೊಂದು ದೇಹವನ್ನು ಸೇರುತ್ತಾನೆ. ಶರೀರದಲ್ಲಿರುವ ಪಂಚಭೂತಗಳು ಪ್ರತ್ಯೇಕಗೊಳ್ಳುವುದೇ ಶರೀರದ ನಾಶ.

12180027a ಏವಂ ಸರ್ವೇಷು ಭೂತೇಷು ಗೂಢಶ್ಚರತಿ ಸಂವೃತಃ|

12180027c ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ತತ್ತ್ವದರ್ಶಿಭಿಃ||

ಹೀಗೆ ಸರ್ವಭೂತಗಳಲ್ಲಿಯೂ ಆತ್ಮನು ನಿಗೂಢನಾಗಿ ಅಜ್ಞಾನದಿಂದ ಆವೃತನಾಗಿರುತ್ತಾನೆ. ತತ್ತ್ವದರ್ಶಿಗಳ ತೀಕ್ಷ್ಣ ಮತ್ತು ಸೂಕ್ಷ್ಮ ಬುದ್ಧಿಗಳಿಂದ ಮಾತ್ರ ಅವನನ್ನು ನೋಡಬಹುದು.

12180028a ತಂ ಪೂರ್ವಾಪರರಾತ್ರೇಷು ಯುಂಜಾನಃ ಸತತಂ ಬುಧಃ|

12180028c ಲಘ್ವಾಹಾರೋ ವಿಶುದ್ಧಾತ್ಮಾ ಪಶ್ಯತ್ಯಾತ್ಮಾನಮಾತ್ಮನಿ||

ಲಘುವಾದ ಆಹಾರವನ್ನು ಸೇವಿಸುತ್ತಾ ರಾತ್ರಿಯ ಮೊದಲ ಮತ್ತು ಚರಮ ಪ್ರಹರಗಳಲ್ಲಿ ಧ್ಯಾನಯೋಗವನ್ನು ಅಭ್ಯಾಸಮಾಡುತ್ತಾ ಅಂತಃಕರಣವನ್ನು ಶುದ್ಧಿಮಾಡಿಕೊಂಡ ವಿದ್ವಾಂಸನು ಆ ಆತ್ಮವನ್ನು ಸಾಕ್ಷಾತ್ಕಾರಮಾಡಿಕೊಳ್ಳಬಹುದು.

12180029a ಚಿತ್ತಸ್ಯ ಹಿ ಪ್ರಸಾದೇನ ಹಿತ್ವಾ ಕರ್ಮ ಶುಭಾಶುಭಮ್|

12180029c ಪ್ರಸನ್ನಾತ್ಮಾತ್ಮನಿ ಸ್ಥಿತ್ವಾ ಸುಖಮಕ್ಷಯಮಶ್ನುತೇ||

ಚಿತ್ತಶುದ್ಧಿಯಾದ ನಂತರ ಅವನು ಶುಭಾಶುಭ ಕರ್ಮಗಳಿಂದ ತನ್ನ ಸಂಬಂಧವನ್ನು ಕತ್ತರಿಸಿಕೊಂಡು ಪ್ರಸನ್ನಚಿತ್ತನಾಗಿ ಆತ್ಮಸ್ವರೂಪದಲ್ಲಿ ಸ್ಥಿತನಾಗುತ್ತಾನೆ ಮತ್ತು ಅನಂತ ಆನಂದವನ್ನು ಅನುಭವಿಸುತ್ತಾನೆ.

12180030a ಮಾನಸೋಽಗ್ನಿಃ ಶರೀರೇಷು ಜೀವ ಇತ್ಯಭಿಧೀಯತೇ|

12180030c ಸೃಷ್ಟಿಃ ಪ್ರಜಾಪತೇರೇಷಾ ಭೂತಾಧ್ಯಾತ್ಮವಿನಿಶ್ಚಯೇ||

ಸಮಸ್ತ ಶರೀರಗಳೊಳಗಿರುವ ಅಗ್ನಿಪ್ರಕಾಶಸ್ವರೂಪ ಚೈತನ್ಯವೇನಿದೆಯೋ ಅದನ್ನೇ ಸಮಷ್ಟಿ ಜೀವಸ್ವರೂಪ ಪ್ರಜಾಪತಿ ಎಂದು ಕರೆಯುತ್ತಾರೆ. ಅದೇ ಪ್ರಜಾಪತಿಯಿಂದ  ಈ ಸೃಷ್ಟಿಯುಂಟಾಯಿತು. ಆಧ್ಯಾತ್ಮತತ್ತ್ವವನ್ನು ನಿಶ್ಚಯಿಸಿಯೇ ಇದನ್ನು ಹೇಳಿದ್ದಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜೀವಸ್ವರೂಪನಿರೂಪಣೇ ಆಶೀತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜೀವಸ್ವರೂಪನಿರೂಪಣ ಎನ್ನುವ ನೂರಾಎಂಭತ್ತನೇ ಅಧ್ಯಾಯವು.

[1] ಯಥಾಗ್ನಿರ್ನೋಪಲಭ್ಯತೇ| (ಗೀತಾ ಪ್ರೆಸ್/ಭಾರತ ದರ್ಶನ).

[2] ಮೂರ್ತಿಮಂತಃ ಶರೀರಿಣಾಮ್|| (ಗೀತಾ ಪ್ರೆಸ್/ಭಾರತ ದರ್ಶನ).

[3] ಇದರಿಂದ ಮನಸ್ಸಿಗೂ ಅತಿರಿಕ್ತವಾಗಿ ಅದರ ಸಾಕ್ಷೀ ಆತ್ಮದ ಅಸ್ತಿತ್ವವು ಸ್ವತಃ ಸಿದ್ಧವಾಗುತ್ತದೆ (ಗೀತಾ ಪ್ರೆಸ್).

[4] ಆಪೋಮಯಮಿದಂ ಸರ್ವಮಾಪೋ (ಗೀತಾ ಪ್ರೆಸ್/ಭಾರತ ದರ್ಶನ).

[5] ಇಲ್ಲಿ ಮನುಷ್ಯನ ಶರೀರವೇ ನೀರು, ಅದರಲ್ಲಿ ಮಲಗಿರುವ ಶೇಷಶಾಯೀ ನಾರಾಯಣ ಮತ್ತು ಅವನ ನಾಭಿಕಮಲದಲ್ಲಿರುವ ಬ್ರಹ್ಮ  - ಈ ಕಲ್ಪನೆಯು ಬರುತ್ತದೆ.

[6] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಆತ್ಮಾ ಕ್ಷೇತ್ರಜ್ಞ ಇತ್ಯುಕ್ತಃ ಸಂಯುಕ್ತಃ ಪ್ರಾಕೃತೈರ್ಗುಣೈಃ| ತೈರೇವ ತು ವಿನಿರ್ಮುಕ್ತಃ ಪರಮಾತ್ಮೇತ್ಯುದಾಹೃತಃ|| ಅರ್ಥಾತ್: ಆತ್ಮನು ಯಾವಾಗ ಪ್ರಾಕೃತಗುಣಗಳಿಂದ ಯುಕ್ತನಾಗಿರುತ್ತಾನೋ ಅವನು ಕ್ಷೇತ್ರಜ್ಞ ಅಥವಾ ಜೀವ ಎಂದೆನಿಸಿಕೊಳ್ಳುತ್ತಾನೆ. ಪ್ರಾಕೃತ ಗುಣಗಳಿಂದ ಆತ್ಮನು ಮುಕ್ತನಾದಾಗ ಅವನು ಪರಮಾತ್ಮಾ ಎಂದು ಕರೆಯಲ್ಪಡುತ್ತಾನೆ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.