ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೭೯
ಭರದ್ವಾಜನು ಜೀವದ ಅಸ್ತಿತ್ವದ ಕುರಿತಾದ ತನ್ನ ಸಂದೇಹಗಳನ್ನು ಯುಕ್ತಿಗಳಿಂದ ಪ್ರತಿಪಾದಿಸಿದುದು (೧-೧೫).
12179001 ಭರದ್ವಾಜ ಉವಾಚ|
12179001a ಯದಿ ಪ್ರಾಣಾಯತೇ ವಾಯುರ್ವಾಯುರೇವ ವಿಚೇಷ್ಟತೇ|
12179001c ಶ್ವಸಿತ್ಯಾಭಾಷತೇ ಚೈವ ತಸ್ಮಾಜ್ಜೀವೋ ನಿರರ್ಥಕಃ||
ಭರದ್ವಾಜನು ಹೇಳಿದನು: “ಒಂದುವೇಳೆ ನೀನು ಹೇಳಿದಂತೆ ವಾಯುವೇ ದೇಹಿಗಳನ್ನು ಪ್ರಾಣಯುಕ್ತರನ್ನಾಗಿ ಮಾಡುವುದಾದರೆ, ಅದೇ ಪ್ರಾಣಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುವುದಾದರೆ, ಅದೇ ಉಚ್ಛ್ವಾಸ-ನಿಃಶ್ವಾಸಗಳನ್ನು ಮಾಡುವುದಾದರೆ, ಮತ್ತು ಮಾತಿಗೂ ವಾಯುವೇ ಕಾರಣವಾದರೆ – ಈ ಶರೀರದಲ್ಲಿ ಜೀವ ಎಂಬ ಬೇರೊಂದಿದೆ ಎಂದು ಹೇಳುವುದೇ ನಿರರ್ಥಕವಾಗುತ್ತದೆ.
12179002a ಯದ್ಯೂಷ್ಮಭಾವ ಆಗ್ನೇಯೋ ವಹ್ನಿನಾ ಪಚ್ಯತೇ ಯದಿ|
12179002c ಅಗ್ನಿರ್ಜರಯತೇ ಚೈವ ತಸ್ಮಾಜ್ಜೀವೋ ನಿರರ್ಥಕಃ||
ಶರೀರದಲ್ಲಿರುವ ಉಷ್ಣವು ಅಗ್ನಿ, ತಿಂದ ಪದಾರ್ಥಗಳನ್ನು ಪಚನಮಾಡುವುದು ಅಗ್ನಿ, ಜೀರ್ಣಗೊಳಿಸುವುದು ಅಗ್ನಿ ಎಂದಾದರೆ ಜೀವ ಎಂಬ ಬೇರೊಂದು ವಸ್ತುವು ಶರೀರದಲ್ಲಿದೆ ಎಂದು ಹೇಳುವುದು ನಿರರ್ಥಕವಾಗುತ್ತದೆ.
12179003a ಜಂತೋಃ ಪ್ರಮೀಯಮಾಣಸ್ಯ ಜೀವೋ ನೈವೋಪಲಭ್ಯತೇ|
12179003c ವಾಯುರೇವ ಜಹಾತ್ಯೇನಮೂಷ್ಮಭಾವಶ್ಚ ನಶ್ಯತಿ||
ಜಂತುವು ಮರಣಹೊಂದಿದಾಗ ಅಲ್ಲಿ ಜೀವವು ಉಪಲಭ್ಯವಾಗುವುದಿಲ್ಲ. ವಾಯುವೂ ಶರೀರವನ್ನು ತ್ಯಜಿಸಿರುತ್ತದೆ ಮತ್ತು ಉಷ್ಣಭಾವವೂ ಶರೀರದಲ್ಲಿರುವುದಿಲ್ಲ.
12179004a ಯದಿ ವಾತೋಪಮೋ[1] ಜೀವಃ ಸಂಶ್ಲೇಷೋ ಯದಿ ವಾಯುನಾ|
12179004c ವಾಯುಮಂಡಲವದ್ದೃಶ್ಯೋ ಗಚ್ಚೇತ್ಸಹ ಮರುದ್ಗಣೈಃ||
ಒಂದು ವೇಳೆ ಜೀವವು ವಾಯುಸಮ ಮತ್ತು ಜೀವಕ್ಕೆ ವಾಯುವಿನೊಡನೆ ಅತಿ ಹತ್ತಿರದ ಸಂಬಂಧವಿದೆಯೆಂದಾದರೆ ವಾಯುಮಂಡಲದಂತೆ ಅದರ ಪ್ರತ್ಯಕ್ಷ ಅನುಭವವು ಆಗಬೇಕು. ಮರಣದ ಸಮಯದಲ್ಲಿ ವಾಯುವು ಹೋಗುವುದು ಕಾಣಬೇಕಾಗುತ್ತಿತ್ತು.
12179005a ಶ್ಲೇಷೋ ಯದಿ ಚ ವಾತೇನ ಯದಿ ತಸ್ಮಾತ್ಪ್ರಣಶ್ಯತಿ|
12179005c ಮಹಾರ್ಣವವಿಮುಕ್ತತ್ವಾದನ್ಯತ್ಸಲಿಲಭಾಜನಮ್||
ವಾಯುವಿನೊಂದಿಗೆ ಜೀವದ ಗಾಢ ಸಂಬಂಧವಿದ್ದಿದ್ದರೆ ಮೃತ್ಯುವಿನ ನಂತರ ಮಹಾಸಾಗರದಲ್ಲಿ ನೀರುತುಂಬಿದ ಪಾತ್ರೆಯನ್ನು ಬರಿದುಮಾಡುವಂತೆ ಶರೀರದಲ್ಲಿರುವ ವಾಯುವಿನ ಕೇವಲ ಸ್ಥಳಾಂತರವಾಯಿತೆಂದಾಯಿತಲ್ಲವೇ?
12179006a ಕೂಪೇ ವಾ ಸಲಿಲಂ ದದ್ಯಾತ್ಪ್ರದೀಪಂ ವಾ ಹುತಾಶನೇ|
12179006c ಪ್ರಕ್ಷಿಪ್ತಂ ನಶ್ಯತಿ ಕ್ಷಿಪ್ರಂ ಯಥಾ ನಶ್ಯತ್ಯಸೌ ತಥಾ||
12179007a ಪಂಚಸಾಧಾರಣೇ ಹ್ಯಸ್ಮಿನ್ ಶರೀರೇ ಜೀವಿತಂ ಕುತಃ|
12179007c ಯೇಷಾಮನ್ಯತರತ್ಯಾಗಾಚ್ಚತುರ್ಣಾಂ ನಾಸ್ತಿ ಸಂಗ್ರಹಃ||
ಅಥವಾ ಬಾವಿಯಲ್ಲಿ ನೀರನ್ನು ಸುರಿದರೆ ಅಥವಾ ಉರಿಯುತ್ತಿರುವ ಬೆಂಕಿಗೆ ಉರಿಯುತ್ತಿರುವ ದೀಪವನ್ನು ಹಾಕಿದರೆ ಅವೆರಡೂ ಶೀಘ್ರದಲ್ಲಿಯೇ ತಮ್ಮ ಪ್ರತ್ಯೇಕ ಅಸ್ತಿತ್ವಗಳನ್ನು ಕಳೆದುಕೊಂಡುಬಿಡುತ್ತವೆ. ಅದೇ ರೀತಿಯಲ್ಲಿ ಪಂಚಭೌತಿಕ ಶರೀರವು ನಾಶವಾದಾಗ ಜೀವವೂ ಕೂಡ ಐದೂ ತತ್ತ್ವಗಳಲ್ಲಿ ವಿಲೀನಗೊಂಡು ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದಾದರೆ ಶರೀರದಲ್ಲಿ ಜೀವಕ್ಕೆ ಅಸ್ತಿತ್ವವೆಲ್ಲಿದೆ? ಇದರಿಂದ ಇಷ್ಟು ಸಿದ್ಧವಾಗುತ್ತದೆ: ಪಂಚಭೂತಗಳ ಸಂಘಾತದ ಹೊರತಾಗಿ ಜೀವ ಎನ್ನುವುದು ಪ್ರತ್ಯೇಕವಲ್ಲ. ಒಟ್ಟಾಗಿ ಸೇರಿರುವ ಈ ಪಂಚಭೂತಗಳಲ್ಲಿ ಯಾವುದಾದರೂ ಒಂದರ ಅಭಾವವಾದರೂ ಉಳಿದ ನಾಲ್ಕು ಉಳಿಯುವುದಿಲ್ಲ. ಇದನ್ನೇ ಮೃತ್ಯು ಎನ್ನುತ್ತಾರೆ.
12179008a ನಶ್ಯಂತ್ಯಾಪೋ ಹ್ಯನಾಹಾರಾದ್ವಾಯುರುಚ್ಚ್ವಾಸನಿಗ್ರಹಾತ್|
12179008c ನಶ್ಯತೇ ಕೋಷ್ಠಭೇದಾತ್ಖಮಗ್ನಿರ್ನಶ್ಯತ್ಯಭೋಜನಾತ್||
ಪ್ರಾಣಿಯು ನೀರನ್ನು ಕುಡಿಯದೇ ಇದ್ದರೆ ಶರೀರದಲ್ಲಿನ ಜಲತತ್ತ್ವವು ನಾಶವಾಗುತ್ತದೆ. ಶ್ವಾಸವನ್ನು ನಿಗ್ರಹಿಸುವುದರಿಂದ ಶರೀರದಲ್ಲಿರುವ ವಾಯುತತ್ತ್ವವು ನಾಶವಾಗುತ್ತದೆ. ಹೊಟ್ಟೆಯನ್ನು ಸೀಳುವುದರಿಂದ ಆಕಾಶತತ್ತ್ವವು ನಾಶವಾಗುತ್ತದೆ. ಊಟಮಾಡದೇ ಇರುವುದರಿಂದ ಶರೀರದಲ್ಲಿಯ ಅಗ್ನಿತತ್ತ್ವವು ನಾಶವಾಗುತ್ತದೆ.
12179009a ವ್ಯಾಧಿವ್ರಣಪರಿಕ್ಲೇಶೈರ್ಮೇದಿನೀ ಚೈವ ಶೀರ್ಯತೇ|
12179009c ಪೀಡಿತೇಽನ್ಯತರೇ ಹ್ಯೇಷಾಂ ಸಂಘಾತೋ ಯಾತಿ ಪಂಚಧಾ||
ವ್ಯಾಧಿ-ವ್ರಣಗಳೇ ಮೊದಲಾದ ಪರಿಕ್ಲೇಶಗಳಿಂದ ಶರೀರದಲ್ಲಿರುವ ಪೃಥ್ವಿತತ್ತ್ವವೂ ನಾಶವಾಗುತ್ತದೆ. ಶರೀರದಲ್ಲಿರುವ ಈ ಐದು ತತ್ತ್ವಗಳಲ್ಲಿ ಯಾವುದೇ ಒಂದಕ್ಕೆ ಹಾನಿಯಾದರೂ ಸಮೂಹವೇ ನಾಶವಾಗುತ್ತದೆ.
12179010a ತಸ್ಮಿನ್ಪಂಚತ್ವಮಾಪನ್ನೇ ಜೀವಃ ಕಿಮನುಧಾವತಿ|
12179010c ಕಿಂ ವೇದಯತಿ ವಾ ಜೀವಃ ಕಿಂ ಶೃಣೋತಿ ಬ್ರವೀತಿ ವಾ||
ಪಂಚಭೂತಗಳ ಸಂಘಾತದಿಂದುಂಟಾಗಿರುವ ಈ ಶರೀರವು ನಾಶವಾದ ಬಳಿಕ ಜೀವವು ಇರುವುದೇ ಆದರೆ ಅದು ಪಂಚಭೂತಗಳಲ್ಲಿ ಯಾವುದರ ಹಿಂದೆ ಹೋಗುತ್ತದೆ? ಪಂಚತತ್ತ್ವಗಳಿಂದ ವಿಹೀನವಾದ ಆ ಜೀವಕ್ಕೆ ಯಾವ ಅನುಭವಾಗುತ್ತದೆ? ಅದು ಏನನ್ನು ಕೇಳುತ್ತದೆ ಮತ್ತು ಏನನ್ನು ಹೇಳುತ್ತದೆ?
12179011a ಏಷಾ ಗೌಃ ಪರಲೋಕಸ್ಥಂ ತಾರಯಿಷ್ಯತಿ ಮಾಮಿತಿ|
12179011c ಯೋ ದತ್ತ್ವಾ ಮ್ರಿಯತೇ ಜಂತುಃ ಸಾ ಗೌಃ ಕಂ ತಾರಯಿಷ್ಯತಿ||
ಮೃತ್ಯುಸಮಯದಲ್ಲಿ ಜನರು ಗೋವು ಪರಲೋಕಕ್ಕೆ ಹೋಗುವಾಗ ನನ್ನನ್ನು ಪಾರುಮಾಡುತ್ತದೆ ಎಂಬ ಆಶಯದಿಂದ ಗೋದಾನವನ್ನು ಮಾಡುತ್ತಾರೆ. ಆದರೆ ಜೀವವಾದರೋ ಗೋದಾನವನ್ನು ಮಾಡಿ ಸತ್ತುಹೋದ ನಂತರ ಆ ಗೋವು ಯಾರನ್ನು ಪಾರುಮಾಡುತ್ತದೆ[2]?
12179012a ಗೌಶ್ಚ ಪ್ರತಿಗ್ರಹೀತಾ ಚ ದಾತಾ ಚೈವ ಸಮಂ ಯದಾ|
12179012c ಇಹೈವ ವಿಲಯಂ ಯಾಂತಿ ಕುತಸ್ತೇಷಾಂ ಸಮಾಗಮಃ||
ಗೋವು, ಗೋದಾನವನ್ನು ಮಾಡಿದವನು ಮತ್ತು ಗೋವನ್ನು ಪಡೆದುಕೊಂಡವನು – ಈ ಮೂವರೂ ಇಲ್ಲಿಯೇ ತೀರಿಹೋದನಂತರ ಪರಲೋಕದಲ್ಲಿ ಅವರ ಸಮಾಗಮವು ಹೇಗಾಗುತ್ತದೆ?
12179013a ವಿಹಗೈರುಪಯುಕ್ತಸ್ಯ ಶೈಲಾಗ್ರಾತ್ಪತಿತಸ್ಯ ವಾ|
12179013c ಅಗ್ನಿನಾ ಚೋಪಯುಕ್ತಸ್ಯ ಕುತಃ ಸಂಜೀವನಂ ಪುನಃ||
ಇವರಲ್ಲಿ ಯಾರು ಸಾಯುತ್ತಾರೋ ಅವರನ್ನು ಪಕ್ಷಿಗಳು ತಿಂದುಬಿಡುತ್ತವೆ ಅಥವಾ ಅವು ಪರ್ವತದ ಶಿಖರದಿಂದ ಕೆಳಗೆ ಬಿದ್ದು ಚೂರು ಚೂರಾಗುತ್ತವೆ ಅಥವಾ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿಬಿಡುತ್ತಾರೆ. ಹೀಗಿರುವಾಗ ಪುನಃ ಅವರು ಜೀವಿತರಾಗುವುದು ಹೇಗೆ ಸಾಧ್ಯ?
12179014a ಚಿನ್ನಸ್ಯ ಯದಿ ವೃಕ್ಷಸ್ಯ ನ ಮೂಲಂ ಪ್ರತಿರೋಹತಿ|
12179014c ಬೀಜಾನ್ಯಸ್ಯ ಪ್ರವರ್ತಂತೇ ಮೃತಃ ಕ್ವ ಪುನರೇಷ್ಯತಿ||
ವೃಕ್ಷವನ್ನು ಬುಡಸಹಿತ ಕಿತ್ತಮೇಲೆ ಅದು ಪುನಃ ಚಿಗುರುವುದಿಲ್ಲ. ಆ ವೃಕ್ಷದ ಬೀಜಗಳು ಮಾತ್ರ ಅಂಕುರಿಸುತ್ತವೆ. ಅಂತೆಯೇ ಸತ್ತುಹೋದವನು ಪುನಃ ಎಲ್ಲಿಂದ ಬರುತ್ತಾನೆ?
12179015a ಬೀಜಮಾತ್ರಂ ಪುರಾ ಸೃಷ್ಟಂ ಯದೇತತ್ಪರಿವರ್ತತೇ|
12179015c ಮೃತಾ ಮೃತಾಃ ಪ್ರಣಶ್ಯಂತಿ ಬೀಜಾದ್ಬೀಜಂ ಪ್ರವರ್ತತೇ||
ಪೂರ್ವಕಾಲದಲ್ಲಿ ಬೀಜಮಾತ್ರದ ಸೃಷ್ಟಿಯಾಯಿತು. ಅದರಿಂದಲೇ ಈ ಜಗತ್ತು ನಡೆದುಕೊಂಡು ಬಂದಿದೆ. ಸತ್ತವರು ನಷ್ಟವಾಗಿ ಹೋಗುತ್ತಾರೆ ಮತ್ತು ಬೀಜದಿಂದ ಬೀಜವು ಉತ್ಪನ್ನವಾಗುತ್ತಿರುತ್ತದೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜೀವಸ್ಯರೂಪಾಪೇಕ್ಷೇ ಏಕೋನಾಶೀತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜೀವಸ್ಯರೂಪಾಪೇಕ್ಷ ಎನ್ನುವ ನೂರಾಎಪ್ಪತ್ತೊಂಭತ್ತನೇ ಅಧ್ಯಾಯವು.
[1] ವಾಯುಮಯೋ (ಗೀತಾ ಪ್ರೆಸ್/ಭಾರತ ದರ್ಶನ).
[2] ಮನುಷ್ಯನು ಮರಣದ ಸಮಯದಲ್ಲಿ “ಈ ಹಸುವು ಪರಲೋಕಕ್ಕೆ ಹೋಗಲಿರುವ ನನ್ನನ್ನು ಪಾರುಮಾಡುತ್ತದೆ” ಎಂದು ಸಂಕಲ್ಪಿಸಿ ದಾನಕೊಟ್ಟು ಮರಣಹೊಂದುತ್ತಾನೆ. ದಾನಕೊಟ್ಟ ಹಸುವಿಗೆ ದಾನಿಯನ್ನು ಉದ್ಧರಿಸುವ ಸಾಮರ್ಥ್ಯವಿದೆ ಎಂದು ಭಾವಿಸಿದರೂ ಆ ಹಸುವು ಯಾರನ್ನು ಉದ್ಧರಿಸುತ್ತದೆ? ಶರೀರವನ್ನು ಬಿಟ್ಟುಹೋದ ಪಂಚಭೂತಗಳನ್ನೇ ಅಥವಾ ಜೀವನನ್ನೇ? (ಭಾರತ ದರ್ಶನ)