Shanti Parva: Chapter 177

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೭

ಪಂಚಮಹಾಭೂತಗಳ ಗುಣಗಳ ವಿಸ್ತೃತ ವರ್ಣನೆ (೧-೩೯).

12177001 ಭರದ್ವಾಜ ಉವಾಚ|

12177001a ಏತೇ ತೇ ಧಾತವಃ ಪಂಚ ಬ್ರಹ್ಮಾ ಯಾನಸೃಜತ್ಪುರಾ|

12177001c ಆವೃತಾ ಯೈರಿಮೇ ಲೋಕಾ ಮಹಾಭೂತಾಭಿಸಂಜ್ಞಿತೈಃ||

ಭರದ್ವಾಜನು ಹೇಳಿದನು: “ಈ ಲೋಕವನ್ನು ಆವೃತವಾಗಿರುವ ಮತ್ತು ಹಿಂದೆ ಬ್ರಹ್ಮನು ಸೃಷ್ಟಿಸಿದ ಈ ಅದಿ ಧಾತುಗಳು ಮಹಾಭೂತಗಳು ಎಂದು ಸೂಚಿತಗೊಂಡಿವೆ.

12177002a ಯದಾಸೃಜತ್ಸಹಸ್ರಾಣಿ ಭೂತಾನಾಂ ಸ ಮಹಾಮತಿಃ|

12177002c ಪಂಚಾನಾಮೇವ ಭೂತತ್ವಂ ಕಥಂ ಸಮುಪಪದ್ಯತೇ||

ಆ ಮಹಾಮತಿಯು ಸಹಸ್ರಾರು ಭೂತಗಳನ್ನು ಸೃಷ್ಟಿಸಿರುವಾಗ ಈ ಐದಕ್ಕೇ ಹೇಗೆ ಭೂತತ್ವವು ಪ್ರಾಪ್ತವಾಯಿತು?”

12177003 ಭೃಗುರುವಾಚ|

12177003a ಅಮಿತಾನಾಂ ಮಹಾಶಬ್ದೋ ಯಾಂತಿ ಭೂತಾನಿ ಸಂಭವಮ್|

12177003c ತತಸ್ತೇಷಾಂ ಮಹಾಭೂತಶಬ್ದೋಽಯಮುಪಪದ್ಯತೇ||

ಭೃಗುವು ಹೇಳಿದನು: “ಇವುಗಳಿಗೆ ಮಿತಿಯೇ ಇಲ್ಲದಿರುವುದರಿಂದ ಇವುಗಳಿಗೆ ಮಹಾ ಎಂಬ ಶಬ್ದವನ್ನು ಜೋಡಿಸಲಾಗಿದೆ. ಇವುಗಳಿಂದಲೇ ಭೂತಗಳ ಉತ್ಪತ್ತಿಯಾಗುತ್ತದೆ. ಆದುದರಿಂದ ಇವುಗಳಿಗೇ ಮಹಾಭೂತಗಳು ಎನ್ನುವುದು ಸುಸಂಗತವಾಗಿದೆ.

12177004a ಚೇಷ್ಟಾ ವಯೂಃ ಖಮಾಕಾಶಮೂಷ್ಮಾಗ್ನಿಃ ಸಲಿಲಂ ದ್ರವಃ|

12177004c ಪೃಥಿವೀ ಚಾತ್ರ ಸಂಘಾತಃ ಶರೀರಂ ಪಾಂಚಭೌತಿಕಮ್||

ಪ್ರಾಣಿಗಳ ಶರೀರವು ಈ ಪಂಚ ಮಹಾಭೂತಗಳ ಸಂಘಾತವೇ ಆಗಿದೆ. ಇದರಲ್ಲಿ ಚೇಷ್ಟೆಯು ವಾಯುವಿನ ಭಾಗ, ಉದರವು ಆಕಾಶದ ಅಂಶ, ಉಷ್ಣವು ಅಗ್ನಿಯ ಅಂಶ, ದ್ರವಗಳು ಜಲದ ಅಂಶಗಳು ಮತ್ತು ಎಲುಬು-ಮಾಂಸಗಳು ಪೃಥ್ವಿಯ ಅಂಶಗಳು.

12177005a ಇತ್ಯೇತೈಃ ಪಂಚಭಿರ್ಭೂತೈರ್ಯುಕ್ತಂ ಸ್ಥಾವರಜಂಗಮಮ್|

12177005c ಶ್ರೋತ್ರಂ ಘ್ರಾಣಂ ರಸಃ ಸ್ಪರ್ಶೋ ದೃಷ್ಟಿಶ್ಚೇಂದ್ರಿಯಸಂಜ್ಞಿತಾಃ||

ಹೀಗೆ ಸ್ಥಾವರಜಂಗಮಗಳೆಲ್ಲವೂ ಈ ಐದು ಭೂತಗಳಿಂದ ಯುಕ್ತವಾಗಿವೆ. ಇವುಗಳ ಸೂಕ್ಷ್ಮ ಅಂಶಗಳೇ ಇಂದ್ರಿಯಗಳೆಂದು ಕರೆಯಲ್ಪಟ್ಟಿರುವ ಕೇಳುವುದು, ಮೂಸುವುದು, ರುಚಿ, ಸ್ಪರ್ಶ, ಮತ್ತು ದೃಷ್ಟಿ.”

12177006 ಭರದ್ವಾಜ ಉವಾಚ|

12177006a ಪಂಚಭಿರ್ಯದಿ ಭೂತೈಸ್ತು ಯುಕ್ತಾಃ ಸ್ಥಾವರಜಂಗಮಾಃ|

12177006c ಸ್ಥಾವರಾಣಾಂ ನ ದೃಶ್ಯಂತೇ ಶರೀರೇ ಪಂಚ ಧಾತವಃ||

ಭರದ್ವಾಜನು ಹೇಳಿದನು: “ಒಂದುವೇಳೆ ಸ್ಥಾವರಜಂಗಮಗಳೆಲ್ಲವೂ ಈ ಪಂಚಭೂತಗಳಿಂದ ಯುಕ್ತವಾದವುಗಳೆಂದರೆ ಸ್ಥಾವರಗಳ ಶರೀರದಲ್ಲಿ ಐದು ಧಾತುಗಳಿರುವುದು ಕಾಣಿಸುವುದಿಲ್ಲವಲ್ಲ.

12177007a ಅನೂಷ್ಮಣಾಮಚೇಷ್ಟಾನಾಂ ಘನಾನಾಂ ಚೈವ ತತ್ತ್ವತಃ|

12177007c ವೃಕ್ಷಾಣಾಂ ನೋಪಲಭ್ಯಂತೇ ಶರೀರೇ ಪಂಚ ಧಾತವಃ||

ವೃಕ್ಷಗಳಲ್ಲಿ ಉಷ್ಣತೆಯೂ ಇಲ್ಲ ಮತ್ತು ಚಲನೆಯೂ ಇಲ್ಲ. ವಾಸ್ತವವಾಗಿ ಅವು ಘನವಾದವುಗಳು. ಆದುದರಿಂದ ವೃಕ್ಷಗಳಲ್ಲಿ ಐದೂ ಭೂತಗಳು ಉಪಲಬ್ಧವಾಗುವುದಿಲ್ಲ.

12177008a ನ ಶೃಣ್ವಂತಿ ನ ಪಶ್ಯಂತಿ ನ ಗಂಧರಸವೇದಿನಃ|

12177008c ನ ಚ ಸ್ಪರ್ಶಂ ವಿಜಾನಂತಿ ತೇ ಕಥಂ ಪಾಂಚಭೌತಿಕಾಃ||

ವೃಕ್ಷಗಳು ಕೇಳುವುದಿಲ್ಲ, ನೋಡುವುದಿಲ್ಲ ಮತ್ತು ಗಂಧ-ರಸಗಳನ್ನು ತಿಳಿಯುವುದಿಲ್ಲ. ಸ್ಪರ್ಶವನ್ನೂ ಅವು ಗುರುತಿಸುವುದಿಲ್ಲ. ಹಾಗಿದ್ದಾಗ ಅವು ಹೇಗೆ ಪಂಚಭೌತಿಕಗಳಾದವು?

12177009a ಅದ್ರವತ್ವಾದನಗ್ನಿತ್ವಾದಭೌಮತ್ವಾದವಾಯುತಃ|

12177009c ಆಕಾಶಸ್ಯಾಪ್ರಮೇಯತ್ವಾದ್ವೃಕ್ಷಾಣಾಂ ನಾಸ್ತಿ ಭೌತಿಕಮ್||

ವೃಕ್ಷಗಳಲ್ಲಿ ದ್ರವತ್ವವಾಗಲೀ ಅಗ್ನಿತ್ವವಾಗಲೀ, ಭೌಮತ್ವವಾಗಲೀ ಅಥವಾ ವಾಯುತ್ವವಾಗಲೀ ನೋಡಲು ಸಿಗುವುದಿಲ್ಲ. ಅಪ್ರಮೇಯ ಆಕಾಶವೂ ಅವುಗಳಲ್ಲಿ ಕಾಣುವುದಿಲ್ಲ. ಆದುದರಿಂದ ವೃಕ್ಷಗಳು ಪಂಚಭೌತಿಕವಾದವುಗಳು ಎಂದಾಗುವುದಿಲ್ಲ.”

12177010 ಭೃಗುರುವಾಚ|

12177010a ಘನಾನಾಮಪಿ ವೃಕ್ಷಾಣಾಮಾಕಾಶೋಽಸ್ತಿ ನ ಸಂಶಯಃ|

12177010c ತೇಷಾಂ ಪುಷ್ಪಫಲೇ ವ್ಯಕ್ತಿರ್ನಿತ್ಯಂ ಸಮುಪಲಭ್ಯತೇ||

ಭೃಗುವು ಹೇಳಿದನು: “ಘನವಾಗಿದ್ದರೂ ವೃಕ್ಷಗಳಲ್ಲಿ ಆಕಾಶತತ್ತ್ವವಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದಲೇ ಅವುಗಳಲ್ಲಿ ನಿತ್ಯವೂ ಫಲ-ಪುಷ್ಪಗಳ ಉತ್ಪತ್ತಿಯಾಗುತ್ತದೆ.

12177011a ಊಷ್ಮತೋ ಗ್ಲಾನಪರ್ಣಾನಾಂ ತ್ವಕ್ಫಲಂ ಪುಷ್ಪಮೇವ ಚ|

12177011c ಮ್ಲಾಯತೇ ಚೈವ ಶೀತೇ ನ ಸ್ಪರ್ಶಸ್ತೇನಾತ್ರ ವಿದ್ಯತೇ||

ಉಷ್ಣದಿಂದಲೇ ಎಲೆಗಳು ಒಣಗುತ್ತವೆ; ಫಲ-ಪುಷ್ಪಗಳು ಬಾಡುತ್ತವೆ. ತೊಗಡೆಯು ಒಣಗುತ್ತದೆ. ಮುಟ್ಟಿದರೆ ಅವು ಬಾಡುತ್ತವೇ ಅಥವಾ ಉದುರಿ ಬೀಳುತ್ತವೆ. ಅದರಿಂದ ವೃಕ್ಷಗಳಲ್ಲಿ ಉಷ್ಣ ಮತ್ತು ಸ್ಪರ್ಶ ಈ ಎರಡೂ ಗುಣಗಳಿವೆಯೆಂದು ತಿಳಿಯುತ್ತದೆ.

12177012a ವಾಯ್ವಗ್ನ್ಯಶನಿನಿಷ್ಪೇಷೈಃ ಫಲಪುಷ್ಪಂ ವಿಶೀರ್ಯತೇ|

12177012c ಶ್ರೋತ್ರೇಣ ಗೃಹ್ಯತೇ ಶಬ್ದಸ್ತಸ್ಮಾಚ್ಚೃಣ್ವಂತಿ ಪಾದಪಾಃ||

ವಾಯು, ಅಗ್ನಿ ಮತ್ತು ಸಿಡಿಲುಗಳ ಶಬ್ದವು ಕೇಳಿದ ಕೂಡಲೇ ಫಲ-ಪುಷ್ಪಗಳು ಶೀರ್ಣವಾಗಿ ಕೆಳಗೆ ಬೀಳುತ್ತವೆ. ವೃಕ್ಷಗಳು ಶ್ರೋತ್ರದಿಂದಲೇ ಶಬ್ದವನ್ನು ಗ್ರಹಿಸುತ್ತವೆ. ಆದುದರಿಂದ ಅವೂ ಕೂಡ ಕೇಳುತ್ತವೆ.

12177013a ವಲ್ಲೀ ವೇಷ್ಟಯತೇ ವೃಕ್ಷಂ ಸರ್ವತಶ್ಚೈವ ಗಚ್ಚತಿ|

12177013c ನ ಹ್ಯದೃಷ್ಟೇಶ್ಚ ಮಾರ್ಗೋಽಸ್ತಿ ತಸ್ಮಾತ್ಪಶ್ಯಂತಿ ಪಾದಪಾಃ||

ಬಳ್ಳಿಯು ಮರವನ್ನು ಸುತ್ತಿಕೊಂಡು ಎಲ್ಲ ಕಡೆ ಹಬ್ಬುತ್ತದೆ. ಕಣ್ಣಿಲ್ಲದವನಿಗೆ ಮಾರ್ಗವಿಲ್ಲವೆನ್ನುವುದು ಸ್ವಭಾವಸಿದ್ಧ. ಆದುದರಿಂದ ವೃಕ್ಷಗಳೂ ನೋಡುತ್ತವೆ.

12177014a ಪುಣ್ಯಾಪುಣ್ಯೈಸ್ತಥಾ ಗಂಧೈರ್ಧೂಪೈಶ್ಚ ವಿವಿಧೈರಪಿ|

12177014c ಅರೋಗಾಃ ಪುಷ್ಪಿತಾಃ ಸಂತಿ ತಸ್ಮಾಜ್ಜಿಘ್ರಂತಿ ಪಾದಪಾಃ||

ಪವಿತ್ರ-ಅಪವಿತ್ರ ವಿವಿಧ ಗಂಧ-ಧೂಪಗಳ ಚಿಕಿತ್ಸೆಗೊಳಗಾದ ವೃಕ್ಷಗಳು ರೋಗರಹಿತಗೊಂಡು ಪುಷ್ಪ-ಫಲಗಳಿಂದ ಸಮೃದ್ಧವಾಗುತ್ತವೆ. ಆದುದರಿಂದ ವೃಕ್ಷಗಳೂ ವಾಸನೆಯನ್ನು ತೆಗೆದುಕೊಳ್ಳುತ್ತವೆ.

12177015a ಪಾದೈಃ ಸಲಿಲಪಾನಂ ಚ ವ್ಯಾಧೀನಾಮಪಿ ದರ್ಶನಮ್|

12177015c ವ್ಯಾಧಿಪ್ರತಿಕ್ರಿಯತ್ವಾಚ್ಚ ವಿದ್ಯತೇ ರಸನಂ ದ್ರುಮೇ||

ಅವು ಬೇರುಗಳಿಂದ ನೀರನ್ನು ಕುಡಿಯುತ್ತವೆ. ಅವುಗಳಿಗೂ ವ್ಯಾಧಿಗಳಾಗುತ್ತವೆ ಎನ್ನುವುದನ್ನು ಕಾಣುತ್ತೇವೆ. ವ್ಯಾಧಿಗಳಿಗೆ ಔಷಧಗಳನ್ನೂ ಕೂಡ ವೃಕ್ಷಗಳಿಗೆ ನೀಡಲಾಗುತ್ತದೆ. ಇದರಿಂದ ವೃಕ್ಷಗಳಿಗೂ ರಸಗ್ರಹಣ ಶಕ್ತಿಯಿದೆ ಎಂದು ತಿಳಿಯುತ್ತದೆ.

12177016a ವಕ್ತ್ರೇಣೋತ್ಪಲನಾಲೇನ ಯಥೋರ್ಧ್ವಂ ಜಲಮಾದದೇತ್|

12177016c ತಥಾ ಪವನಸಂಯುಕ್ತಃ ಪಾದೈಃ ಪಿಬತಿ ಪಾದಪಃ||

ಕಮಲದ ನಾಳವನ್ನು ಬಾಯಲ್ಲಿಟ್ಟುಕೊಂಡು ಉಸಿರನ್ನು ಎಳೆದುಕೊಳ್ಳುವುದರ ಮೂಲಕ ನೀರನ್ನು ಮೇಲಕ್ಕೆ ಸೆಳೆದುಕೊಳ್ಳುವಂತೆ ವೃಕ್ಷಗಳು ವಾಯುವಿನ ಸಹಾಯದಿಂದ ಬೇರುಗಳ ಮೂಲಕ ಕೆಳಗಿರುವ ನೀರನ್ನು ಕುಡಿಯುತ್ತವೆ.

12177017a ಗ್ರಹಣಾತ್ಸುಖದುಃಖಸ್ಯ ಚಿನ್ನಸ್ಯ[1] ಚ ವಿರೋಹಣಾತ್|

12177017c ಜೀವಂ ಪಶ್ಯಾಮಿ ವೃಕ್ಷಾಣಾಮಚೈತನ್ಯಂ ನ ವಿದ್ಯತೇ||

ವೃಕ್ಷಗಳು ಸುಖ-ದುಃಖಗಳನ್ನು ಅನುಭವಿಸುತ್ತವೆ. ಕೊಡಲಿಯನ್ನು ಹಿಡಿದವನು ಹತ್ತಿರ ಹೋದರೆ ದುಃಖಿಸುತ್ತವೆ. ನೀರೆರೆಯುವವನು ಹತ್ತಿರ ಹೋದರೆ ಸಂತೋಷಪಡುತ್ತವೆ. ಕತ್ತರಿಸಿದರೆ ಪುನಃ ಅದು ಚಿಗುರುತ್ತದೆ. ವೃಕ್ಷಗಳಲ್ಲಿ ಜೀವವನ್ನು ಕಾಣುತ್ತೇನೆ. ಅವು ಅಚೇತನಗಳೆಂದು ತಿಳಿಯುವುದಿಲ್ಲ.

12177018a ತೇನ ತಜ್ಜಲಮಾದತ್ತಂ ಜರಯತ್ಯಗ್ನಿಮಾರುತೌ|

12177018c ಆಹಾರಪರಿಣಾಮಾಚ್ಚ ಸ್ನೇಹೋ ವೃದ್ಧಿಶ್ಚ ಜಾಯತೇ||

ಬೇರುಗಳಿಂದ ತೆಗೆದುಕೊಂಡ ನೀರನ್ನು ವೃಕ್ಷದೊಳಗಿರುವ ಅಗ್ನಿ-ಮಾರುತಗಳು ಅರಗಿಸುತ್ತವೆ. ಹೀಗೆ ಆಹಾರದ ಪರಿಣಾಮದಿಂದಲೇ ವೃಕ್ಷದಲ್ಲಿ ಸ್ನಿಗ್ಧತೆಯಿದೆ ಮತ್ತು ಅದು ಬೆಳೆಯುತ್ತದೆ.

12177019a ಜಂಗಮಾನಾಂ ಚ ಸರ್ವೇಷಾಂ ಶರೀರೇ ಪಂಚ ಧಾತವಃ|

12177019c ಪ್ರತ್ಯೇಕಶಃ ಪ್ರಭಿದ್ಯಂತೇ ಯೈಃ ಶರೀರಂ ವಿಚೇಷ್ಟತೇ||

ಸರ್ವ ಜಂಗಮಗಳ ಶರೀರದಲ್ಲಿಯೂ ಪಂಚಧಾತುಗಳಿವೆ. ಆದರೆ ಅಲ್ಲಿ ಅವುಗಳ ಸ್ವರೂಪದಲ್ಲಿ ಭೇದವಿದೆ. ಆ ಪಂಚಭೂತಗಳ ಸಹಯೋಗದಿಂದಲೇ ಶರೀರವು ಚಲಿಸುತ್ತದೆ.

12177020a ತ್ವಕ್ಚ ಮಾಂಸಂ ತಥಾಸ್ಥೀನಿ ಮಜ್ಜಾ ಸ್ನಾಯು ಚ ಪಂಚಮಮ್|

12177020c ಇತ್ಯೇತದಿಹ ಸಂಖ್ಯಾತಂ ಶರೀರೇ ಪೃಥಿವೀಮಯಮ್||

ಶರೀರದಲ್ಲಿ ಚರ್ಮ, ಮಾಂಸ, ಎಲುಬು, ಮಜ್ಜೆ ಮತ್ತು ಸ್ನಾಯು – ಈ ಐದು ವಸ್ತುಗಳ ಸಮುದಾಯವು ಪೃಥ್ವೀಮಯವು.

12177021a ತೇಜೋಽಗ್ನಿಶ್ಚ ತಥಾ ಕ್ರೋಧಶ್ಚಕ್ಷುರೂಷ್ಮಾ ತಥೈವ ಚ|

12177021c ಅಗ್ನಿರ್ಜರಯತೇ ಚಾಪಿ ಪಂಚಾಗ್ನೇಯಾಃ ಶರೀರಿಣಃ||

ತೇಜಸ್ಸು, ಕ್ರೋಧ, ನೇತ್ರ, ಉಷ್ಣತೆ ಮತ್ತು ಜಠರಾನಲ – ಶರೀರದಲ್ಲಿರುವ ಈ ಐದು ವಸ್ತುಗಳು ಅಗ್ನಿಮಯವು.

12177022a ಶ್ರೋತ್ರಂ ಘ್ರಾಣಮಥಾಸ್ಯಂ ಚ ಹೃದಯಂ ಕೋಷ್ಠಮೇವ ಚ|

12177022c ಆಕಾಶಾತ್ಪ್ರಾಣಿನಾಮೇತೇ ಶರೀರೇ ಪಂಚ ಧಾತವಃ||

ಕಿವಿಗಳು, ಮೂಗು, ಮುಖ, ಹೃದಯ ಮತ್ತು ಹೊಟ್ಟೆ – ಪ್ರಾಣಿಗಳ ಶರೀರದಲ್ಲಿರುವ ಈ ಐದು ಧಾತುಗಳು ಆಕಾಶದಿಂದ ಉತ್ಪನ್ನವಾದವುಗಳು.

12177023a ಶ್ಲೇಷ್ಮಾ ಪಿತ್ತಮಥ ಸ್ವೇದೋ ವಸಾ ಶೋಣಿತಮೇವ ಚ|

12177023c ಇತ್ಯಾಪಃ ಪಂಚಧಾ ದೇಹೇ ಭವಂತಿ ಪ್ರಾಣಿನಾಂ ಸದಾ||

ಕಫ, ಪಿತ್ತ, ಬೆವರು, ಕೊಬ್ಬು ಮತ್ತು ರಕ್ತ – ಪ್ರಾಣಿಗಳ ಶರೀರದಲ್ಲಿರುವ ಈ ಐದು ವಸ್ತುಗಳು ಜಲರೂಪಗಳು[2].

12177024a ಪ್ರಾಣಾತ್ಪ್ರಣೀಯತೇ ಪ್ರಾಣೀ ವ್ಯಾನಾದ್ವ್ಯಾಯಚ್ಚತೇ ತಥಾ|

12177024c ಗಚ್ಚತ್ಯಪಾನೋಽವಾಕ್ಚೈವ ಸಮಾನೋ ಹೃದ್ಯವಸ್ಥಿತಃ||

12177025a ಉದಾನಾದುಚ್ಚ್ವಸಿತಿ ಚ ಪ್ರತಿಭೇದಾಚ್ಚ ಭಾಷತೇ|

12177025c ಇತ್ಯೇತೇ ವಾಯವಃ ಪಂಚ ಚೇಷ್ಟಯಂತೀಹ ದೇಹಿನಮ್||

ಪ್ರಾಣದಿಂದ ಪ್ರಾಣಿಯು ಚಲಿಸುತ್ತವೆ. ವ್ಯಾನದಿಂದ ವ್ಯಾಯಾಮವನ್ನು ಮಾಡುತ್ತವೆ. ಅಪಾನ ವಾಯುವು ಮೇಲಿಂದ ಕೆಳಗೆ ಹೋಗುತ್ತದೆ. ಸಮಾನ ವಾಯುವು ಹೃದಯದಲ್ಲಿ ನೆಲೆಸಿರುತ್ತದೆ. ಉದಾನದಿಂದ ಪ್ರಾಣಿಯು ಉಚ್ಛ್ವಾಸವನ್ನು ತೆಗೆದುಕೊಳ್ಳುತ್ತದೆ ಹಾಗೂ ಕಂಠ-ತಾಲುಗಳ ಭೇದದಿಂದ ಶಬ್ದ-ಅಕ್ಷರಗಳ ಉಚ್ಛಾರಣೆಯಾಗುತ್ತದೆ. ಹೀಗೆ ಈ ಐದು ವಾಯುಗಳು ದೇಹಿಯು ಚಲಿಸುವಂತೆ ಮಾಡುತ್ತವೆ[3].

12177026a ಭೂಮೇರ್ಗಂಧಗುಣಾನ್ವೇತ್ತಿ ರಸಂ ಚಾದ್ಭ್ಯಃ ಶರೀರವಾನ್|

12177026c ಜ್ಯೋತಿಃ ಪಶ್ಯತಿ ಚಕ್ಷುರ್ಭ್ಯಾಂ ಸ್ಪರ್ಶಂ ವೇತ್ತಿ ಚ ವಾಯುನಾ||

ಶರೀರವಂತನು ಭೂಮಿಯಿಂದ ಗಂಧಗುಣವನ್ನು ಮತ್ತು ನೀರಿನಿಂದ ರಸವನ್ನು ತಿಳಿಯುತ್ತಾನೆ. ಕಣ್ಣುಗಳಿಂದ ಜ್ಯೋತಿಯಿಂದ ನೋಡುತ್ತಾನೆ ಮತ್ತು ವಾಯುವಿನಿಂದ ಸ್ಪರ್ಶವನ್ನು ತಿಳಿಯುತ್ತಾನೆ.

[4]12177027a ತಸ್ಯ ಗಂಧಸ್ಯ ವಕ್ಷ್ಯಾಮಿ ವಿಸ್ತರಾಭಿಹಿತಾನ್ಗುಣಾನ್|

12177027c ಇಷ್ಟಶ್ಚಾನಿಷ್ಟಗಂಧಶ್ಚ ಮಧುರಃ ಕಟುರೇವ ಚ||

12177028a ನಿರ್ಹಾರೀ ಸಂಹತಃ ಸ್ನಿಗ್ಧೋ ರೂಕ್ಷೋ ವಿಶದ ಏವ ಚ|

12177028c ಏವಂ ನವವಿಧೋ ಜ್ಞೇಯಃ ಪಾರ್ಥಿವೋ ಗಂಧವಿಸ್ತರಃ[5]||

ಇವುಗಳಲ್ಲಿ ಗಂಧದ ಗುಣಗಳ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಇಷ್ಟ-ಅನಿಷ್ಟ ಗಂಧಗಳು, ಮಧುರ-ಕಟು ಗಂಧಗಳು, ನಿರ್ಹಾರೀ, ಸಂಹತ, ಸ್ನಿಗ್ಧ, ರೂಕ್ಷ, ವಿಶದ – ಹೀಗೆ ಭೂಸಂಬಂಧವಾದ ಒಂಭತ್ತು ಬಗೆಯ ಗಂಧಗಳನ್ನು ಹೇಳುತ್ತಾರೆ[6].

[7]12177029a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸಶ್ಚಾಪಾಂ[8] ಗುಣಾಃ ಸ್ಮೃತಾಃ|

12177029c ರಸಜ್ಞಾನಂ ತು ವಕ್ಷ್ಯಾಮಿ ತನ್ಮೇ ನಿಗದತಃ ಶೃಣು||

ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ಜಲದ ಗುಣಗಳೆಂದು ಹೇಳಿದ್ದಾರೆ. ರಸಜ್ಞಾನದ ಕುರಿತು ಹೇಳುತ್ತೇನೆ. ಅದನ್ನು ಕೇಳು.

12177030a ರಸೋ ಬಹುವಿಧಃ ಪ್ರೋಕ್ತಃ ಸೂರಿಭಿಃ[9] ಪ್ರಥಿತಾತ್ಮಭಿಃ|

12177030c ಮಧುರೋ ಲವಣಸ್ತಿಕ್ತಃ ಕಷಾಯೋಽಮ್ಲಃ ಕಟುಸ್ತಥಾ|

12177030e ಏಷ ಷಡ್ವಿಧವಿಸ್ತಾರೋ ರಸೋ ವಾರಿಮಯಃ ಸ್ಮೃತಃ[10]||

ರಸವು ಬಹುವಿಧವೆಂದು ಸುವಿಖ್ಯಾತ ಋಷಿಗಳು ಹೇಳುತ್ತಾರೆ. ಸಿಹಿ, ಉಪ್ಪು, ಕಹಿ, ಒಗರು, ಹುಳಿ ಮತ್ತು ಖಾರ – ಈ ಆರು ಜಲಮಯ ರಸಗಳೆಂದು ಹೇಳಿದ್ದಾರೆ.

12177031a ಶಬ್ದಃ ಸ್ಪರ್ಶಶ್ಚ ರೂಪಂ ಚ ತ್ರಿಗುಣಂ ಜ್ಯೋತಿರುಚ್ಯತೇ|

12177031c ಜ್ಯೋತಿಃ ಪಶ್ಯತಿ ರೂಪಾಣಿ ರೂಪಂ ಚ ಬಹುಧಾ ಸ್ಮೃತಮ್||

ಶಬ್ದ, ಸ್ಪರ್ಶ ಮತ್ತು ರೂಪ ಈ ಮೂರು ಗುಣಗಳು ಜ್ಯೋತಿಯಲ್ಲಿವೆ ಎಂದು ಹೇಳುತ್ತಾರೆ. ಜ್ಯೋತಿಯು ರೂಪಗಳನ್ನು ನೋಡುತ್ತದೆ ಮತ್ತು ರೂಪಗಳು ಅನೇಕ ಎಂದು ಹೇಳಿದ್ದಾರೆ.

12177032a ಹ್ರಸ್ವೋ ದೀರ್ಘಸ್ತಥಾ ಸ್ಥೂಲಶ್ಚತುರಸ್ರೋಽಣು ವೃತ್ತವಾನ್|

12177032c ಶುಕ್ಲಃ ಕೃಷ್ಣಸ್ತಥಾ ರಕ್ತೋ ನೀಲಃ ಪೀತೋಽರುಣಸ್ತಥಾ|

12177032e ಏವಂ ದ್ವಾದಶವಿಸ್ತಾರೋ ಜ್ಯೋತೀರೂಪಗುಣಃ ಸ್ಮೃತಃ[11]||

ಹೃಸ್ವ, ದೀರ್ಘ, ಸ್ಥೂಲ, ಚಚ್ಚೌಕ, ಅಣು, ವೃತ್ತ, ಬಿಳಿಪು, ಕಪ್ಪು, ಕೆಂಪು, ನೀಲಿ, ಹಳದಿ ಮತ್ತು ಆಕಾಶನೀಲಿ ಬಣ್ಣ – ಹೀಗೆ ಜ್ಯೋತಿಯ ರೂಪಗುಣಗಳು ವಿಸ್ತಾರವಾಗಿ ಹನ್ನೆರಡು ಎಂದು ಹೇಳಿದ್ದಾರೆ.

12177033a ಶಬ್ದಸ್ಪರ್ಶೌ ತು ವಿಜ್ಞೇಯೌ ದ್ವಿಗುಣೋ ವಾಯುರುಚ್ಯತೇ|

12177033c ವಾಯವ್ಯಸ್ತು ಗುಣಃ ಸ್ಪರ್ಶಃ ಸ್ಪರ್ಶಶ್ಚ ಬಹುಧಾ ಸ್ಮೃತಃ||

ಶಬ್ದ-ಸ್ಪರ್ಶಗಳು ವಾಯುವಿನ ಎರಡು ಗುಣಗಳೆಂದು ಹೇಳಿದ್ದಾರೆ. ವಾಯುವಿನ ಪ್ರಮುಖ ಗುಣವು ಸ್ಪರ್ಶ. ಸ್ಪರ್ಶದಲ್ಲಿಯೂ ಅನೇಕ ಭೇದಗಳಿವೆ ಎಂದು ಹೇಳಿದ್ದಾರೆ.

12177034a ಕಠಿನಶ್ಚಿಕ್ಕಣಃ ಶ್ಲಕ್ಷ್ಣಃ ಪಿಚ್ಚಲೋ ಮೃದುದಾರುಣಃ|

12177034c ಉಷ್ಣಃ ಶೀತಃ ಸುಖೋ ದುಃಖಃ ಸ್ನಿಗ್ಧೋ ವಿಶದ ಏವ ಚ|

12177034e ಏವಂ ದ್ವಾದಶವಿಸ್ತಾರೋ ವಾಯವ್ಯೋ ಗುಣ ಉಚ್ಯತೇ[12]||

ಕಠಿನ, ನುಣುಪು, ತೆಳವು, ಜಿಡ್ಡು, ಮೃದು, ದಾರುಣ, ಉಷ್ಣ, ಶೀತ, ಸುಖ, ದುಃಖ, ಸ್ನಿಗ್ಧ, ವಿಶದ – ಹೀಗೆ ವಾಯುವಿನ ವಿಸ್ತಾರ ಗುಣಗಳು ಹನ್ನೆರಡು ಎಂದು ಹೇಳುತ್ತಾರೆ.

12177035a ತತ್ರೈಕಗುಣಮಾಕಾಶಂ ಶಬ್ದ ಇತ್ಯೇವ ತತ್ ಸ್ಮೃತಮ್|

12177035c ತಸ್ಯ ಶಬ್ದಸ್ಯ ವಕ್ಷ್ಯಾಮಿ ವಿಸ್ತರಂ ವಿವಿಧಾತ್ಮಕಮ್||

ಆಕಾಶದ ಗುಣವು ಒಂದೆ – ಶಬ್ದ ಎಂದು ಹೇಳಿದ್ದಾರೆ. ಶಬ್ದದ ವಿವಿಧಾತ್ಮಕ ವಿಸ್ತಾರವನ್ನು ಹೇಳುತ್ತೇನೆ.

12177036a ಷಡ್ಜ ಋಷಭಗಾಂಧಾರೌ ಮಧ್ಯಮಃ ಪಂಚಮಸ್ತಥಾ|

12177036c ಧೈವತಶ್ಚಾಪಿ ವಿಜ್ಞೇಯಸ್ತಥಾ ಚಾಪಿ ನಿಷಾದಕಃ||

12177037a ಏಷ ಸಪ್ತವಿಧಃ ಪ್ರೋಕ್ತೋ ಗುಣ ಆಕಾಶಲಕ್ಷಣಃ|

12177037c ತ್ರೈಸ್ವರ್ಯೇಣ[13] ತು ಸರ್ವತ್ರ ಸ್ಥಿತೋಽಪಿ ಪಟಹಾದಿಷು[14]||

ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ – ಇವು ಆಕಾಶದ ಏಳು ಗುಣ ಲಕ್ಷಣಗಳೆಂದು ಹೇಳಿದ್ದಾರೆ. ಶಬ್ದವು ಶ್ರೇಷ್ಠತೆಯನ್ನು ಹೊಂದಿ ಸರ್ವತ್ರವ್ಯಾಪ್ತವಾಗಿದ್ದರೂ ನಗಾರಿಯೇ ಮೊದಲಾದ ವಾದ್ಯಗಳಲ್ಲಿ ಇದು ವಿಷೇಷರೂಪದಿಂದ ಅಭಿವ್ಯಕ್ತವಾಗುತ್ತದೆ.

12177038a ಆಕಾಶಜಂ ಶಬ್ದಮಾಹುರೇಭಿರ್ವಾಯುಗುಣೈಃ ಸಹ|

12177038c ಅವ್ಯಾಹತೈಶ್ಚೇತಯತೇ ನ ವೇತ್ತಿ ವಿಷಮಾಗತೈಃ||

ವಾಯುಸಂಬಂಧ ಗುಣಗಳೊಂದಿಗೆ ಶಬ್ದವು ಆಕಾಶದಲ್ಲಿ ಹುಟ್ಟಿದೆಯೆಂದು ಹೇಳುತ್ತಾರೆ. ವಾಯುಸಂಬಂಧೀ ಗುಣವು ಬಾಧಿತವಾಗದೇ ಶಬ್ದದೊಡನಿರುವಾಗ ಮನುಷ್ಯನು ಶಬ್ದವನ್ನು ಕೇಳುತ್ತಾನೆ.

12177039a ಆಪ್ಯಾಯಂತೇ ಚ ತೇ ನಿತ್ಯಂ ಧಾತವಸ್ತೈಸ್ತು ಧಾತುಭಿಃ|

12177039c ಆಪೋಽಗ್ನಿರ್ಮಾರುತಶ್ಚೈವ ನಿತ್ಯಂ ಜಾಗ್ರತಿ ದೇಹಿಷು[15]||

ಶಬ್ದಾದಿಗಳ ಉತ್ಪಾದಕ ಧಾತುವು ಧಾತುಗಳ ಮೂಲಕವೇ ಪೋಷಿತಗೊಳ್ಳುತ್ತವೆ. ಜಲ, ಅಗ್ನಿ ಮತ್ತು ವಾಯು ಇವು ಮೂರು ದೇಹಧಾರಿಗಳಲ್ಲಿ ಸದಾ ಜಾಗ್ರತವಾಗಿರುತ್ತವೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಸಪ್ತಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಪ್ಪತ್ತೇಳನೇ ಅಧ್ಯಾಯವು.

[1] ಸುಖದುಃಖಯೋಶ್ಚ ಗ್ರಹಣಾಚ್ಛಿನ್ನಸ್ಯ (ಭಾರತ ದರ್ಶನ/ಗೀತಾ ಪ್ರೆಸ್).

[2] ಬ್ರಹ್ಮಜ್ಞಾನ ತಂತ್ರದಲ್ಲಿ ಇದನ್ನೇ ಸ್ವಲ್ಪ ವ್ಯತ್ಯಾಸದಿಂದ ಹೇಳಿದ್ದಾರೆ: ಅಸ್ತಿ ಮಾಂಸಂ ನಖಂ ಚೈವ ನಾಡೀ ತ್ವಕ್ಚೇತಿ ಪಂಚಮೀ| ಪೃಥ್ವೀ ಪಂಚಗುಣಾ ಪ್ರೋಕ್ತಾ ಬ್ರಹ್ಮಜ್ಞಾನೇನ ಭಾಷಿತಮ್||೧|| ಮಲಂ ಮೂತ್ರಂ ತಥಾ ಶುಕ್ರಂ ಶ್ಲೇಷ್ಮಾ ಶೋಣಿತಮೇವ ಚ| ತೋಯಂ ಪಂಚಗುಣಂ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್||೨|| ಹ್ರಾಸೋ ನಿದ್ರಾ ಕ್ಷುಧಾ ಚೈವ ಭ್ರಾಂತಿರಾಲಸ್ಯಮೇವ ಚ| ತೇಜಃ ಪಂಚಗುಣಂ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್||೩|| ಧಾರಣಂ ಚಾಲನಂ ಕ್ಷೇಪಃ ಸಂಕೋಚಃ ಪ್ರಸಸ್ತಥಾ| ವಾಯುಃ ಪಂಚಗುಣಃ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್||೪|| ಕಾಮಃ ಕ್ರೋಧಸ್ತಥಾ ಲೋಭಸ್ತ್ರಪಾ ಮೋಹಶ್ಚ ಪಂಚಮಃ| ನಭಃ ಪಂಚಗುಣಂ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್||೫|| (ಭಾರತ ದರ್ಶನ).

[3]ಮರಸಿಂಹನು ಪಂಚವಾಯುಗಳಿರುವ ಸ್ಥಾನಗಳನ್ನು ಹೀಗೆ ವರ್ಣಿಸಿದ್ದಾನೆ: ಹೃದಿ ಪ್ರಾಣೋ ಗುದೇಽಪಾನಃ ಸಮಾನೋ ನಾಭಿಸಂಸ್ಥಿತಃ| ಉದಾನಃ ಕಂಠದೇಶಸ್ಥೋ ವ್ಯಾನಃ ಸರ್ವ ಶರೀರಗಃ|| (ಭಾರತ ದರ್ಶನ).

[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಗಂಧಸ್ಪರ್ಶೋ ರಸೋ ರೂಪಂ ಶಬ್ದಶ್ಚಾತ್ರ ಗುಣಾಃ ಸ್ಮೃತಾಃ| (ಭಾರತ ದರ್ಶನ/ಗೀತಾ ಪ್ರೆಸ್).

[5] ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಬ್ರಹ್ಮನು ಹತ್ತು ಗಂಧಗಳ ಕುರಿತು ಹೇಳಿದ್ದುದು ಇದೆ (ಶ್ಲೋಕ ೪೨): ಇಷ್ಟಶ್ಚಾನಿಷ್ಟ ಗಂಧಶ್ಚ ಮಧುರೋಽಮ್ಲಃ ಕಟುಸ್ತಥಾ| ನಿರ್ಹಾರೀ ಸಂಹತಃ ಸ್ನಿಗ್ಧೋ ರೂಕ್ಷೋ ವಿಶದ ಏವ ಚ| ಏವಂ ದಶವಿಧೋ ಜ್ಞೇಯಃ ಪಾರ್ಥಿವೋ ಗಂಧ ಇತ್ಯುತ||

[6] ಈ ಒಂಭತ್ತು ಬಗೆಯ ಗಂಧಗಳ ಉದಾಹರಣೆಗಳನ್ನು ವ್ಯಾಖ್ಯಾನಕಾರರು ಈ ರೀತಿ ನೀಡಿದ್ದಾರೆ: (೧) ಇಷ್ಟ ಗಂಧ – ಕಸ್ತೂರಿಯೇ ಮೊದಲಾದ ಸುಗಂಧಗಳು (೨) ಅನಿಷ್ಟ ಗಂಧ – ಶವವೇ ಮೊದಲಾದವುಗಳಿಂದ ಬರುವ ದುರ್ಗಂಧ (೩) ಮಧುರ ಗಂಧ – ಪುಷ್ಪಗಳಿಂದ ಬರುವ ಸುವಾಸನೆ (೪) ಕಟು ಗಂಧ – ಮೆಣಸಿನ ಪುಡಿಯ ವಾಸನೆ (೫) ನಿರ್ಹಾರಿ – ಉಳಿದ ವಾಸನೆಗಳನ್ನು ನಾಶಪಡಿಸುವ ಇಂಗು-ಈರುಳ್ಳಿ ಇತ್ಯಾದಿ (೬) ಸಂಹತ – ಅನೇಕ ದ್ರವ್ಯಗಳನ್ನು ಸೇರಿಸುವುದರಿಂದ ಬರುವ ವಾಸನೆ (೭) ಸ್ನಿಗ್ಧ – ತತ್ಕ್ಷಣದಲ್ಲಿ ತೃಪ್ತಿಯನ್ನುಂಟುಮಾಡುವ ತುಪ್ಪವೇ ಮೊದಲಾದವುಗಳ ವಾಸನೆ (೮) ರೂಕ್ಷ – ಸಾಸಿವೆ ಎಣ್ಣೆ ಮೊದಲಾದವುಗಳ ವಾಸನೆ (೯) ವಿಶದ – ಶಾಲ್ಯನ್ನಾದಿಗಳ ಪರಿಮಳ (ಭಾರತ ದರ್ಶನ).

[7] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಜ್ಯೋತಿಃ ಪಶ್ಯತಿ ಚಕ್ಷುರ್ಭ್ಯಾಂ ಸ್ಪರ್ಶಂ ವೇತ್ತಿ ಚ ವಾಯುನಾ| (ಗೀತಾ ಪ್ರೆಸ್/ಭಾರತ ದರ್ಶನ).

[8] ರಸಶ್ಚಾಪಿ (ಗೀತಾ ಪ್ರೆಸ್/ಭಾರತ ದರ್ಶನ).

[9] ಋಷಿಭಿಃ (ಗೀತಾ ಪ್ರೆಸ್/ಭಾರತ ದರ್ಶನ).

[10] ಇದೇ ಶ್ಲೋಕವು ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಶ್ಲೋಕ ೪೪ ರಲ್ಲಿ ಬರುತ್ತದೆ.

[11] ಈ ಹನ್ನೆರಡು ತೇಜಸ್ಸಿನ ರೂಪಗಳ ಕುರಿತು ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಶ್ಲೋಕ ೪೬ ರಲ್ಲಿ ಬರುತ್ತದೆ. ಆದರೆ ಗೀತಾ ಪ್ರೆಸ್/ಭಾರತ ದರ್ಶನಗಳಲ್ಲಿ ಜ್ಯೋತಿ-ರೂಪದ ಗುಣವು ಹದಿನಾರು ಎಂದಿದೆ: ಹ್ರಸ್ವೋ ದೀರ್ಘಸ್ತಥಾ ಸ್ಥೂಲಶ್ಚತುರಸ್ರೋಽನುವೃತ್ತವಾನ್| ಶುಕ್ಲಃ ಕೃಷ್ಣಸ್ತಥಾ ರಕ್ತಃ ಪೀತೋ ನೀಲಾರುಣಸ್ತಥಾ|| ಕಠಿನಶ್ಚಿಕ್ಕಣಃ ಶ್ಲಕ್ಷ್ಣಃ ಪಿಚ್ಛಲೋ ಮೃದುದಾರುಣಃ| ಏವಂ ಷೋಡಶವಿಸ್ತಾರೋ ಜೋತೀರುಪಗುಣಃ ಸ್ಮೃತಃ||

[12] ಈ ಹನ್ನೆರಡು ವಾಯು/ಸ್ಪರ್ಶದ ಕುರಿತು ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಶ್ಲೋಕ ೪೯ ರಲ್ಲಿ ಬರುತ್ತದೆ. ಆದರೆ ಗೀತಾ ಪ್ರೆಸ್/ಭಾರತ ದರ್ಶನಗಳಲ್ಲಿ ಸ್ಪರ್ಶ-ವಾಯುವಿನ ಬೇರೆಯೇ ಹನ್ನೆರಡು ಗುಣಗಳ ಕುರಿತಿದೆ: ಉಷ್ಣಃ ಶೀತಃ ಸುಖೋ ದುಃಖಃ ಸ್ನಿಗ್ಧೋ ವಿಶದ ಏವ ಚ| ತಥಾ ಖರೋ ಮೃದೂ ರೂಕ್ಷೋ ಲಘುರ್ಗುರುತರೋಽಪಿ ಚ| ಏವಂ ದ್ವಾದಶಧಾ ಸ್ಪರ್ಶೋ ವಾಯವ್ಯೋ ಗುಣ ಉಚ್ಯತೇ||

[13] ಐಶ್ವರ್ಯೇಣ (ಭಾರತ ದರ್ಶನ/ಗೀತಾ ಪ್ರೆಸ್).

[14] ಇದರ ನಂತರ ಈ ಅಧಿಕ ಶ್ಲೋಕಗಳಿವೆ: ಮೃದಂಗಭೇರೀಶಂಖಾಣಾಂ ಸ್ತನಯಿತ್ನೋ ರಥಸ್ಯ ಚ| ಯಃ ಕಶ್ಚಿಚ್ಛ್ರೂಯತೇ ಶಬ್ದಃ ಪ್ರಾಣಿನೋಽಪ್ರಾಣಿನೋಽಪಿ ವಾ|| ಏತೇಷಾಮೇವ ಸರ್ವೇಷಾಂ ವಿಷಯೇ ಸಂಪ್ರಕೀರ್ತಿತಃ| ಏವಂ ಬಹುವಿಧಾಕಾರಃ ಶಬ್ದ ಆಕಾಶಸಂಭವಃ|| (ಗೀತಾ ಪ್ರೆಸ್/ಭಾರತ ದರ್ಶನ).

[15] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಮೂಲಮೇತೇ ಶರೀರಸ್ಯ ವ್ಯಾಪ್ಯ ಪ್ರಾಣಾನಿಹ ಸ್ಥಿತಾಃ| (ಗೀತಾ ಪ್ರೆಸ್/ಭಾರತ ದರ್ಶನ).

Comments are closed.