Shanti Parva: Chapter 287

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೮೭

ಪರಾಶರ ಗೀತೆಯ ಉಪಸಂಹಾರ (೧-೪೨).

12287001 ಭೀಷ್ಮ ಉವಾಚ|

12287001a ಪುನರೇವ ತು ಪಪ್ರಚ್ಚ ಜನಕೋ ಮಿಥಿಲಾಧಿಪಃ|

12287001c ಪರಾಶರಂ ಮಹಾತ್ಮಾನಂ ಧರ್ಮೇ ಪರಮನಿಶ್ಚಯಮ್||

ಭೀಷ್ಮನು ಹೇಳಿದನು: “ಅನಂತರ ಮಿಥಿಲಾಧಿಪ ಜನಕನು ಪುನಃ ಧರ್ಮದ ಪರಮನಿಶ್ಚಯಿ ಮಹಾತ್ಮ ಪರಾಶರನನ್ನು ಪ್ರಶ್ನಿಸಿದನು:

12287002a ಕಿಂ ಶ್ರೇಯಃ ಕಾ ಗತಿರ್ಬ್ರಹ್ಮನ್ಕಿಂ ಕೃತಂ ನ ವಿನಶ್ಯತಿ|

12287002c ಕ್ವ ಗತೋ ನ ನಿವರ್ತೇತ ತನ್ಮೇ ಬ್ರೂಹಿ ಮಹಾಮುನೇ||

“ಮಹಾಮುನೇ! ಶ್ರೇಯಸ್ಸಿನ ಸಾಧನವ್ಯಾವುದು? ಉತ್ತಮ ಗತಿಯು ಯಾವುದು? ಯಾವ ಕರ್ಮವು ನಷ್ಟವಾಗುವುದಿಲ್ಲ? ಎಲ್ಲಿಗೆ ಹೋದರೆ ಜೀವವು ಅಲ್ಲಿಂದ ಹಿಂದಿರುಗುವುದಿಲ್ಲ? ಇದರ ಕುರಿತು ನನಗೆ ಹೇಳು”

12287003 ಪರಾಶರ ಉವಾಚ|

12287003a ಅಸಂಗಃ ಶ್ರೇಯಸೋ ಮೂಲಂ ಜ್ಞಾನಂ ಜ್ಞಾನಗತಿಃ ಪರಾ[1]|

12287003c ಚೀರ್ಣಂ ತಪೋ ನ ಪ್ರಣಶ್ಯೇದ್ವಾಪಃ ಕ್ಷೇತ್ರೇ ನ ನಶ್ಯತಿ||

ಪರಾಶರನು ಹೇಳಿದನು: “ಅಸಂಗತ್ವವೇ ಶ್ರೇಯಸ್ಸಿನ ಮೂಲ. ಜ್ಞಾನವೇ ಪರಮ ಗತಿ. ತಾನೇ ಮಾಡಿದ ತಪಸ್ಸು ಮತ್ತು ಸುಪಾತ್ರನಿಗೆ ನೀಡಿದ ದಾನ ಇವು ಎಂದೂ ನಷ್ಟವಾಗುವುದಿಲ್ಲ.

12287004a ಚಿತ್ತ್ವಾಧರ್ಮಮಯಂ ಪಾಶಂ ಯದಾ ಧರ್ಮೇಽಭಿರಜ್ಯತೇ|

12287004c ದತ್ತ್ವಾಭಯಕೃತಂ ದಾನಂ ತದಾ ಸಿದ್ಧಿಮವಾಪ್ನುಯಾತ್||

ಅಧರ್ಮಮಯ ಪಾಶವನ್ನು ಕತ್ತರಿಸಿ ಧರ್ಮದಲ್ಲಿ ಅನುರಕ್ತನಾದಾಗ ಮತ್ತು ಸರ್ವಪ್ರಾಣಿಗಳಿಗೂ ಅಭಯದಾನ ನೀಡಿದಾಗ ಅವನಿಗೆ ಸಿದ್ಧಿಯುಂಟಾಗುತ್ತದೆ.

12287005a ಯೋ ದದಾತಿ ಸಹಸ್ರಾಣಿ ಗವಾಮಶ್ವಶತಾನಿ ಚ|

12287005c ಅಭಯಂ ಸರ್ವಭೂತೇಭ್ಯಸ್ತದ್ದಾನಮತಿವರ್ತತೇ||

ಸಹಸ್ರ ಗೋವುಗಳನ್ನೂ ನೂರು ಅಶ್ವಗಳನ್ನೂ ದಾನಮಾಡಿ ಸರ್ವಭೂತಗಳಿಗೂ ಅಭಯವನ್ನೀಡುವವನ ದಾನವು ವೃದ್ಧಿಯಾಗುತ್ತಿರುತ್ತದೆ.

12287006a ವಸನ್ವಿಷಯಮಧ್ಯೇಽಪಿ ನ ವಸತ್ಯೇವ ಬುದ್ಧಿಮಾನ್|

12287006c ಸಂವಸತ್ಯೇವ ದುರ್ಬುದ್ಧಿರಸತ್ಸು ವಿಷಯೇಷ್ವಪಿ||

ಬುದ್ಧಿವಂತನು ವಿಷಯಗಳ ಮಧ್ಯೆ ವಾಸಿಸುತ್ತಿದ್ದರೂ ಅಸಂಗತ್ವದಿಂದಾಗಿ ಅವುಗಳ ಜೊತೆಗಿಲ್ಲದವನ ಸಮಾನನು. ಆದರೆ ದುರ್ಬುದ್ಧಿಯು ವಿಷಯಗಳಿಂದ ದೂರವಿದ್ದರೂ ಸದಾ ಅವುಗಳಲ್ಲಿಯೇ ಆಸಕ್ತನಾಗಿರುತ್ತಾನೆ.

12287007a ನಾಧರ್ಮಃ ಶ್ಲಿಷ್ಯತೇ ಪ್ರಾಜ್ಞಮಾಪಃ ಪುಷ್ಕರಪರ್ಣವತ್|

12287007c ಅಪ್ರಾಜ್ಞಮಧಿಕಂ ಪಾಪಂ ಶ್ಲಿಷ್ಯತೇ ಜತು ಕಾಷ್ಠವತ್||

ನೀರು ಕಮಲದ ಎಲೆಯನ್ನು ಹೇಗೆ ಒದ್ದೆಮಾಡುವುದಿಲ್ಲವೋ ಹಾಗೆ ಅಧರ್ಮವು ಪ್ರಾಜ್ಞನಿಗೆ ತಗಲುವುದಿಲ್ಲ. ಆದರೆ ಮುಳ್ಳಗಸೇಗಿಡವು ಬಟ್ಟೆಗೆ ಬಿಗಿಯಾಗಿ ಅಂಟಿಕೊಳ್ಳುವಂತೆ ಪಾಪವು ಅಜ್ಞಾನಿಯನ್ನು ಅಂಟಿಕೊಂಡಿರುತ್ತದೆ.

12287008a ನಾಧರ್ಮಃ ಕಾರಣಾಪೇಕ್ಷೀ ಕರ್ತಾರಮಭಿಮುಂಚತಿ|

12287008c ಕರ್ತಾ ಖಲು ಯಥಾಕಾಲಂ ತತ್ಸರ್ವಮಭಿಪದ್ಯತೇ|

ಅಧರ್ಮವು ತನ್ನನ್ನು ಆಶ್ರಯಿಸಿದರವರಿಗೆ ಫಲವನ್ನು ದೊರಕಿಸುವುದಕ್ಕೇ ಕಾಯುತ್ತಿರುತ್ತದೆ ಮತ್ತು ಅಲ್ಲಿಯವರೆಗೆ ಅದು ಅವನನ್ನು ಬಿಟ್ಟುಹೋಗುವುದಿಲ್ಲ. ಆದುದರಿಂದ ಅಧರ್ಮಕರ್ಮಿಯು ಅದರ ಫಲವನ್ನು ಕಾಲಾನುಗುಣವಾಗಿ ಅನುಭವಿಸಿಯೇ ತೀರುತ್ತಾನೆ.

12287008e ನ ಭಿದ್ಯಂತೇ ಕೃತಾತ್ಮಾನ ಆತ್ಮಪ್ರತ್ಯಯದರ್ಶಿನಃ||

12287009a ಬುದ್ಧಿಕರ್ಮೇಂದ್ರಿಯಾಣಾಂ ಹಿ ಪ್ರಮತ್ತೋ ಯೋ ನ ಬುಧ್ಯತೇ|

12287009c ಶುಭಾಶುಭೇಷು ಸಕ್ತಾತ್ಮಾ ಪ್ರಾಪ್ನೋತಿ ಸುಮಹದ್ಭಯಮ್||

ಪವಿತ್ರ ಅಂತಃಕರಣಯುಕ್ತ ಆತ್ಮಜ್ಞಾನಿಯು ಕರ್ಮಗಳ ಶುಭಾಶುಭ ಫಲಗಳಿಂದ ಎಂದೂ ವಿಚಲಿತಗೊಳ್ಳುವುದಿಲ್ಲ. ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳ ಪ್ರಮಾದದಿಂದಾಗುವ ಪಾಪಗಳ ಕುರಿತು ಯೋಚಿಸದಿರುವವನು ಮತ್ತು ಶುಭಾಶುಭಫಲಗಳಲ್ಲಿ ಆಸಕ್ತಿಯಿರುವವನು ಮಹಾ ಭಯವನ್ನು ಹೊಂದುತ್ತಾನೆ.

12287010a ವೀತರಾಗೋ ಜಿತಕ್ರೋಧಃ ಸಮ್ಯಗ್ಭವತಿ ಯಃ ಸದಾ|

12287010c ವಿಷಯೇ ವರ್ತಮಾನೋಽಪಿ ನ ಸ ಪಾಪೇನ ಯುಜ್ಯತೇ||

ಆದರೆ ಸದಾ ಸದಾಚಾರಗಳಲ್ಲಿರುವ ವೀತರಾಗ ಜಿತಕ್ರೋಧನು ವಿಷಯಗಳೊಂದಿಗೆ ಒಡನಾಡುತ್ತಿದ್ದರೂ ಪಾಪವನ್ನು ಹೊಂದುವುದಿಲ್ಲ.

12287011a ಮರ್ಯಾದಾಯಾಂ ಧರ್ಮಸೇತುರ್ನಿಬದ್ಧೋ ನೈವ ಸೀದತಿ|

12287011c ಪುಷ್ಟಸ್ರೋತ ಇವಾಯತ್ತಃ ಸ್ಫೀತೋ ಭವತಿ ಸಂಚಯಃ||

ನದಿಯಲ್ಲಿ ಕಟ್ಟಿದ ಬಲವಾದ ಅಣೆಕಟ್ಟು ಹೇಗೆ ಒಡೆಯುವುದಿಲ್ಲವೋ ಮತ್ತು ಅದರಿಂದಾಗಿ ಅಲ್ಲಿ ನೀರಿನ ಮಟ್ಟವು ಹೇಗೆ ಹೆಚ್ಚುತ್ತದೆಯೋ ಹಾಗೆ ಧರ್ಮಸೇತುವೆಯ ಮರ್ಯಾದೆಗಳಿಗೆ ಬದ್ಧನಾದವನ ಬಂಧನವು ಒಡೆಯುವುದಿಲ್ಲ ಮತ್ತು ಅವನ ಸಂಚಿತ ಪುಣ್ಯಗಳು ವೃದ್ಧಿಹೊಂದುತ್ತವೆ.

12287012a ಯಥಾ ಭಾನುಗತಂ ತೇಜೋ ಮಣಿಃ ಶುದ್ಧಃ ಸಮಾಧಿನಾ|

12287012c ಆದತ್ತೇ ರಾಜಶಾರ್ದೂಲ ತಥಾ ಯೋಗಃ ಪ್ರವರ್ತತೇ||

ರಾಜಶಾರ್ದೂಲ! ಸೂರ್ಯಕಾಂತಮಣಿಯು ಹೇಗೆ ಸೂರ್ಯನ ತೇಜಸ್ಸನ್ನು ಪಡೆದುಕೊಳ್ಳುತ್ತದೆಯೋ ಹಾಗೆ ಯೋಗಸಾಧಕನು ಸಮಾಧಿಯ ಮೂಲಕ ಬ್ರಹ್ಮನ ಸ್ವರೂಪವನ್ನು ಪಡೆದುಕೊಳ್ಳುತ್ತಾನೆ.

12287013a ಯಥಾ ತಿಲಾನಾಮಿಹ ಪುಷ್ಪಸಂಶ್ರಯಾತ್

ಪೃಥಕ್ಪೃಥಗ್ಯಾತಿ ಗುಣೋಽತಿಸೌಮ್ಯತಾಮ್|

12287013c ತಥಾ ನರಾಣಾಂ ಭುವಿ ಭಾವಿತಾತ್ಮನಾಂ

ಯಥಾಶ್ರಯಂ ಸತ್ತ್ವಗುಣಃ ಪ್ರವರ್ತತೇ||

ಎಳ್ಳೆಣ್ಣೆಯು ಹೇಗೆ ಬೇರೆ ಬೇರೆ ಹೂವುಗಳ ಸಂಸರ್ಗದಿಂದ ಪ್ರತ್ಯೇಕ ಪ್ರತ್ಯೇಕ ಮನೋರಮ ಸುವಾಸನೆಗಳನ್ನು ಪಡೆದುಕೊಳ್ಳುತ್ತದೆಯೋ ಹಾಗೆ ಭುವಿಯಲ್ಲಿ ಭಾವಿತಾತ್ಮ ನರರ ಸಂಸರ್ಗದಿಂದ ಸತ್ತ್ವಗುಣವು ವೃದ್ಧಿಸುತ್ತದೆ.

12287014a ಜಹಾತಿ ದಾರಾನಿಹತೇ ನ ಸಂಪದಃ

ಸದಶ್ವಯಾನಂ ವಿವಿಧಾಶ್ಚ ಯಾಃ ಕ್ರಿಯಾಃ|

12287014c ತ್ರಿವಿಷ್ಟಪೇ ಜಾತಮತಿರ್ಯದಾ ನರಸ್

ತದಾಸ್ಯ ಬುದ್ಧಿರ್ವಿಷಯೇಷು ಭಿದ್ಯತೇ||

ಯಾವಾಗ ಮನುಷ್ಯನು ಸರ್ವೋತ್ತಮ ಪದವನ್ನು ಪಡೆಯಲು ಉತ್ಸುಕನಾಗುತ್ತಾನೋ ಆಗ ಅವನ ಬುದ್ಧಿಯು ವಿಷಯಗಳಿಂದ ಬೇರಾಗುತ್ತದೆ ಮತ್ತು ಅದು ಸ್ತ್ರೀ, ಸಂಪತ್ತು, ಪದವಿ, ವಾಹನ, ಮತ್ತು ನಾನಾವಿಧದ ಕ್ರಿಯೆಗಳನ್ನೂ ಪರಿತ್ಯಜಿಸುತ್ತದೆ.

12287015a ಪ್ರಸಕ್ತಬುದ್ಧಿರ್ವಿಷಯೇಷು ಯೋ ನರೋ

ಯೋ ಬುಧ್ಯತೇ ಹ್ಯಾತ್ಮಹಿತಂ ಕದಾ ಚ ನ|

12287015c ಸ ಸರ್ವಭಾವಾನುಗತೇನ ಚೇತಸಾ

ನೃಪಾಮಿಷೇಣೇವ ಝಷೋ ವಿಕೃಷ್ಯತೇ||

ಆದರೆ ವಿಷಯಾಸಕ್ತ ಬುದ್ಧಿಯಿರುವ ನರನು ಆತ್ಮಹಿತವನ್ನು ಎಂದೂ ತಿಳಿದುಕೊಳ್ಳುವುದಿಲ್ಲ. ನೃಪ! ಮೀನು ಹೇಗೆ ಮಾಂಸದ ಆಮಿಶಕ್ಕೆ ಆಸೆಪಟ್ಟು ದುಃಖವನ್ನು ಪಡೆದುಕೊಳ್ಳುತ್ತದೆಯೋ ಹಾಗೆ ಚೇತನವು ವಿಷಯಸುಖದಿಂದ ಆಕರ್ಷಿತಗೊಂಡು ದುಃಖವನ್ನನುಭವಿಸುತ್ತದೆ.

12287016a ಸಂಘಾತವಾನ್ಮರ್ತ್ಯಲೋಕಃ ಪರಸ್ಪರಮಪಾಶ್ರಿತಃ|

12287016c ಕದಲೀಗರ್ಭನಿಃಸಾರೋ ನೌರಿವಾಪ್ಸು ನಿಮಜ್ಜತಿ||

ಶರೀರದಲ್ಲಿರುವ ಅಂಗ ಪ್ರತ್ಯಂಗಗಳು ಹೇಗೆ ಪರಸ್ಪರರನ್ನು ಆಶ್ರಯಿಸಿರುವವೋ ಹಾಗೆ ಈ ಮರ್ತ್ಯಲೋಕವೂ ಕೂಡ ಪರಸ್ಪರರನ್ನು ಆಶ್ರಯಿಸಿರುವ ಜೀವ ಸಮುದಾಯಗಳಿಂದ ಕೂಡಿದೆ. ಆದರೆ ಈ ಸಂಸಾರವು ಬಾಳೆಯ ದಿಂಡಿನಂತೆ ನಿಃಸ್ಸಾರವಾದುದು ಮತ್ತು ಪ್ರವಾಹದಲ್ಲಿ ಸಿಕ್ಕಿಬಿದ್ದ ನೌಕೆಯಂತೆ ಮುಳುಗಿಹೋಗುವಂಥಹುದು.

12287017a ನ ಧರ್ಮಕಾಲಃ ಪುರುಷಸ್ಯ ನಿಶ್ಚಿತೋ

ನ ಚಾಪಿ ಮೃತ್ಯುಃ ಪುರುಷಂ ಪ್ರತೀಕ್ಷತೇ|

12287017c ಕ್ರಿಯಾ ಹಿ ಧರ್ಮಸ್ಯ ಸದೈವ ಶೋಭನಾ

ಯದಾ ನರೋ ಮೃತ್ಯುಮುಖೇಽಭಿವರ್ತತೇ||

ಮನುಷ್ಯನಿಗೆ ಧರ್ಮಪಾಲನೆಮಾಡಲು ವಿಶೇಷ ಸಮಯವೆಂದೇನೂ ಇಲ್ಲ. ಏಕೆಂದರೆ ಮೃತ್ಯುವು ಯಾವ ಮನುಷ್ಯನನ್ನೂ ಪ್ರತೀಕ್ಷಿಸುವುದಿಲ್ಲ. ನರನು ಸದಾ ಮೃತ್ಯುಮುಖನಾಗಿಯೇ ಇರುವಾಗ ಸದೈವ ಧರ್ಮಕ್ರಿಯೆಗಳಲ್ಲಿ ತೊಡಗಿರುವುದೇ ಅವನಿಗೆ ಶೋಭನೀಯವು.

12287018a ಯಥಾಂಧಃ ಸ್ವಗೃಹೇ ಯುಕ್ತೋ ಹ್ಯಭ್ಯಾಸಾದೇವ ಗಚ್ಚತಿ|

12287018c ತಥಾ ಯುಕ್ತೇನ ಮನಸಾ ಪ್ರಾಜ್ಞೋ ಗಚ್ಚತಿ ತಾಂ ಗತಿಮ್||

ಕುರುಡನು ತನ್ನ ಮನೆಯಲ್ಲಿ ಅಭ್ಯಾಸಬಲದಿಂದ ಸ್ವಲ್ಪವೂ ತೊಂದರೆಯಿಲ್ಲದೇ ಹೇಗೆ ನಡೆಯುತ್ತಾನೋ ಹಾಗೆ ಪ್ರಾಜ್ಞನು ಯೋಗಯುಕ್ತ ಮನಸ್ಸಿನಿಂದ ಆ ಪರಮ ಗತಿಯನ್ನು ಪಡೆದುಕೊಳ್ಳುತ್ತಾನೆ.

12287019a ಮರಣಂ ಜನ್ಮನಿ ಪ್ರೋಕ್ತಂ ಜನ್ಮ ವೈ ಮರಣಾಶ್ರಿತಮ್|

12287019c ಅವಿದ್ವಾನ್ಮೋಕ್ಷಧರ್ಮೇಷು ಬದ್ಧೋ ಭ್ರಮತಿ ಚಕ್ರವತ್||

ಜನ್ಮವು ಮರಣಸ್ಥಿತಿಯನ್ನು ಹೇಳುತ್ತದೆ ಮತ್ತು ಮೃತ್ಯುವಿನಲ್ಲಿ ಜನ್ಮವು ಆಶ್ರಯಿಸಿದೆ. ಮೋಕ್ಷಧರ್ಮಗಳ ಅವಿದ್ಯಾವಂತನು ಈ ಜನ್ಮ-ಮೃತ್ಯುಗಳ ಚಕ್ರದಲ್ಲಿ ಬದ್ಧನಾಗಿ ತಿರುಗುತ್ತಿರುತ್ತಾನೆ.

[2]12287020a ಯಥಾ ಮೃಣಾಲೋಽನುಗತಮಾಶು ಮುಂಚತಿ ಕರ್ದಮಮ್|

12287020c ತಥಾತ್ಮಾ ಪುರುಷಸ್ಯೇಹ ಮನಸಾ ಪರಿಮುಚ್ಯತೇ|

12287020e ಮನಃ ಪ್ರಣಯತೇಽತ್ಮಾನಂ ಸ ಏನಮಭಿಯುಂಜತಿ||

ನೀರಿನಿಂದ ಕೀಳುವಾಗ ಕಮಲದ ದಂಟಿಗೆ ಅಂಟಿಕೊಂಡಿದ್ದ ಕೆಸರು ಕೂಡಲೇ ನೀರಿನಲ್ಲಿ ಹೇಗೆ ಲೀನವಾಗುತ್ತದೆಯೋ ಅದೇ ರೀತಿ ತ್ಯಾಗಿಯ ಆತ್ಮವು ಕಲುಷಿತ ಮನಸ್ಸನ್ನು ಬಿಟ್ಟು ಹೊರಬರುತ್ತದೆ. ಮನಸ್ಸು ಆತ್ಮವನ್ನು ಯೋಗದ ಕಡೆ ಒಯ್ಯುತ್ತದೆ ಮತ್ತು ಯೋಗಿಯು ಮನಸ್ಸನ್ನು ಆತ್ಮನಲ್ಲಿ ಲೀನಗೊಳಿಸುತ್ತಾನೆ.

12287021a ಪರಾರ್ಥೇ ವರ್ತಮಾನಸ್ತು ಸ್ವಕಾರ್ಯಂ ಯೋಽಭಿಮನ್ಯತೇ|

12287021c ಇಂದ್ರಿಯಾರ್ಥೇಷು ಸಕ್ತಃ ಸನ್ ಸ್ವಕಾರ್ಯಾತ್ಪರಿಹೀಯತೇ||

ಇನ್ನೊಬ್ಬರಿಗಾಗಿ ಅಂದರೆ ಈ ಬಾಹ್ಯ ಇಂದ್ರಿಗಳ ತೃಪ್ತಿಗಾಗಿ ವಿಷಯ ಭೋಗದಲ್ಲಿ ಪ್ರವೃತ್ತನಾಗಿ ಅದೇ ತನ್ನ ಮುಖ್ಯ ಕಾರ್ಯವೆಂದು ತಿಳಿದುಕೊಳ್ಳುವವನು ತನ್ನ ವಾಸ್ತವಿಕ ಕರ್ತವ್ಯದಿಂದ ಚ್ಯುತನಾಗಿಬಿಡುತ್ತಾನೆ.

12287022a ಅಧಸ್ತಿರ್ಯಗ್ಗತಿಂ ಚೈವ ಸ್ವರ್ಗೇ ಚೈವ ಪರಾಂ ಗತಿಮ್|

12287022c ಪ್ರಾಪ್ನೋತಿ ಸ್ವಕೃತೈರಾತ್ಮಾ ಪ್ರಾಜ್ಞಸ್ಯೇಹೇತರಸ್ಯ ಚ||

ಪ್ರಾಜ್ಞನಾಗಿರಲೀ ಅಥವಾ ಇನ್ನ್ಯಾವುದೇ ರೀತಿಯಲ್ಲಿರಲಿ, ಈ ಲೋಕದಲ್ಲಿ ಪ್ರತಿಯೊಬ್ಬನ ಆತ್ಮವೂ ತಾನು ಮಾಡಿದ ಕರ್ಮಗಳಿಗನುಸಾರವಾಗಿ ನರಕವನ್ನೋ, ಪಶು-ಪಕ್ಷಿ ಮೊದಲಾದ ತಿರ್ಯಗ್ಯೋನಿಯನ್ನೋ, ಸ್ವರ್ಗವನ್ನೋ ಅಥವಾ ಪರಮ ಗತಿಯನ್ನೋ ಪಡೆದುಕೊಳ್ಳುತ್ತದೆ.

12287023a ಮೃಣ್ಮಯೇ ಭಾಜನೇ ಪಕ್ವೇ[3] ಯಥಾ ವೈ ನ್ಯಸ್ಯತೇ[4] ದ್ರವಃ|

12287023c ತಥಾ ಶರೀರಂ ತಪಸಾ ತಪ್ತಂ ವಿಷಯಮಶ್ನುತೇ||

ಪಕ್ವವಾದ ಮಣ್ಣಿನ ಪಾತ್ರೆಯಲ್ಲಿಟ್ಟ ದ್ರವದಂತೆ[5] ತಪಸ್ಸಿನಿಂದ ಸುಡಲ್ಪಟ್ಟ ಶರೀರವು ಬ್ರಹ್ಮಲೋಕದ ವರೆಗಿನ ವಿಷಯಗಳನ್ನು ಅನುಭವಿಸುತ್ತದೆ.

12287024a ವಿಷಯಾನಶ್ನುತೇ ಯಸ್ತು ನ ಸ ಭೋಕ್ಷ್ಯತ್ಯಸಂಶಯಮ್|

12287024c ಯಸ್ತು ಭೋಗಾಂಸ್ತ್ಯಜೇದಾತ್ಮಾ ಸ ವೈ ಭೋಕ್ತುಂ ವ್ಯವಸ್ಯತಿ||

ವಿಷಯಗಳನ್ನು ಭೋಗಿಸುವವನು ನಿಶ್ಚಯವಾಗಿಯೂ ಬ್ರಹ್ಮಾನಂದದ ಅನುಭವದಿಂದ ವಂಚಿತನಾಗುತ್ತಾನೆ. ಆದರೆ ವಿಷಯಭೋಗಗಳನ್ನು ತ್ಯಜಿಸಿದವನು ಅವಶ್ಯವಾಗಿಯೂ ಬ್ರಹ್ಮಾನಂದದ ಅನುಭವಕ್ಕೆ ಸಮರ್ಥನಾಗುತ್ತಾನೆ.

12287025a ನೀಹಾರೇಣ ಹಿ ಸಂವೀತಃ ಶಿಶ್ನೋದರಪರಾಯಣಃ|

12287025c ಜಾತ್ಯಂಧ ಇವ ಪಂಥಾನಮಾವೃತಾತ್ಮಾ ನ ಬುಧ್ಯತೇ||

ಹುಟ್ಟುಕುರುಡನಿಗೆ ಹೇಗೆ ದಾರಿಕಾಣುವುದಿಲ್ಲವೋ ಹಾಗೆ ಶಿಶ್ನೋದರಪರಾಯಣನಾಗಿ ಮಂಜಿನಂತಿರುವ ಮಾಯೆಯಿಂದ ಆವೃತನಾಗಿ ವಿಷಯಸುಖದಲ್ಲಿಯೇ ತತ್ಪರನಾಗಿರುವವನಿಗೆ ಜ್ಞಾನಮಾರ್ಗವು ಕಾಣಿಸುವುದಿಲ್ಲ.

12287026a ವಣಿಗ್ಯಥಾ ಸಮುದ್ರಾದ್ವೈ ಯಥಾರ್ಥಂ ಲಭತೇ ಧನಮ್|

12287026c ತಥಾ ಮರ್ತ್ಯಾರ್ಣವೇ ಜಂತೋಃ ಕರ್ಮವಿಜ್ಞಾನತೋ ಗತಿಃ||

ವರ್ತಕನು ಹೇಗೆ ಸಮುದ್ರದಾಚೆ ಹೋಗಿ ತನ್ನ ಮೂಲ ಬಂಡವಾಳಕ್ಕೆ ಅನುಗುಣವಾಗಿ ಲಾಭವನ್ನು ಸಂಪಾದಿಸಿಕೊಳ್ಳುತ್ತಾನೋ ಅದೇ ರೀತಿ ಸಂಸಾರಸಾಗರದಲ್ಲಿ ಜೀವನಿಗೆ ತನ್ನ ಕರ್ಮ ಮತ್ತು ಜ್ಞಾನಗಳಿಗನುಗುಣವಾದ ಗತಿಯು ದೊರೆಯುತ್ತದೆ.

12287027a ಅಹೋರಾತ್ರಮಯೇ ಲೋಕೇ ಜರಾರೂಪೇಣ ಸಂಚರನ್|

12287027c ಮೃತ್ಯುರ್ಗ್ರಸತಿ ಭೂತಾನಿ ಪವನಂ ಪನ್ನಗೋ ಯಥಾ||

ಹಗಲು-ರಾತ್ರಿಗಳಿಂದ ಕೂಡಿರುವ ಈ ಲೋಕದಲ್ಲಿ ಮೃತ್ಯುವು ಮುಪ್ಪಿನ ರೂಪವನ್ನು ಧರಿಸಿ ಹಾವು ಗಾಳಿಯನ್ನು ಹೇಗೋ ಹಾಗೆ ಜೀವಗಳನ್ನು ನುಂಗುತ್ತಿರುತ್ತದೆ.

12287028a ಸ್ವಯಂ ಕೃತಾನಿ ಕರ್ಮಾಣಿ ಜಾತೋ ಜಂತುಃ ಪ್ರಪದ್ಯತೇ|

12287028c ನಾಕೃತಂ ಲಭತೇ ಕಶ್ಚಿತ್ಕಿಂ ಚಿದತ್ರ ಪ್ರಿಯಾಪ್ರಿಯಮ್||

ಜೀವವು ಇಲ್ಲಿ ಜನ್ಮವನ್ನು ತಾಳಿ ತಾನೇ ಮಾಡಿದ ಕರ್ಮಗಳ ಫಲವನ್ನು ಭೋಗಿಸುತ್ತದೆ. ಹಿಂದಿನ ಜನ್ಮಗಳಲ್ಲಿ ತಾನೇ ಮಾಡಿದ ಕರ್ಮಗಳಿಂದಲ್ಲದೇ ಬೇರೆ ಯಾವುದರಿಂದಲೂ ಅವನು ಈ ಜನ್ಮದಲ್ಲಿ ಪ್ರಿಯ-ಅಪ್ರಿಯ ಫಲವನ್ನು ಅನುಭವಿಸುವುದಿಲ್ಲ.

12287029a ಶಯಾನಂ ಯಾಂತಮಾಸೀನಂ ಪ್ರವೃತ್ತಂ ವಿಷಯೇಷು ಚ|

12287029c ಶುಭಾಶುಭಾನಿ ಕರ್ಮಾಣಿ ಪ್ರಪದ್ಯಂತೇ ನರಂ ಸದಾ||

ಮನುಷ್ಯನು ಮಲಗಿರಲಿ, ಸಂಚರಿಸುತ್ತಿರಲಿ, ಕುಳಿತಿರಲಿ ಅಥವಾ ವಿಷಯಭೋಗಪ್ರವೃತ್ತನಾಗಿರಲಿ. ಅವನ ಶುಭಾಶುಭಕರ್ಮಫಲಗಳು ಅವನನ್ನು ಅನುಸರಿಸುತ್ತಲೇ ಇರುತ್ತವೆ.

12287030a ನ ಹ್ಯನ್ಯತ್ತೀರಮಾಸಾದ್ಯ ಪುನಸ್ತರ್ತುಂ ವ್ಯವಸ್ಯತಿ|

12287030c ದುರ್ಲಭೋ ದೃಶ್ಯತೇ ಹ್ಯಸ್ಯ ವಿನಿಪಾತೋ ಮಹಾರ್ಣವೇ||

ಈಜಿ ಅನ್ಯ ತೀರವನ್ನು ಸೇರಿದವನು ಪುನಃ ಅಲ್ಲಿಂದ ಈಜಿ ಬರಲು ಹೇಗೆ ಬಯಸುವುದಿಲ್ಲವೋ ಹಾಗೆ ಈ ಮಹಾರ್ಣವವನ್ನು ದಾಟಿದವನು ಪುನಃ ಅದರಲ್ಲಿ ಬೀಳುವುದು ಅತ್ಯಂತ ದುರ್ಲಭವೆಂದು ತೋರುತ್ತದೆ.

12287031a ಯಥಾ ಭಾರಾವಸಕ್ತಾ ಹಿ ನೌರ್ಮಹಾಂಭಸಿ ತಂತುನಾ|

12287031c ತಥಾ ಮನೋಽಭಿಯೋಗಾದ್ವೈ ಶರೀರಂ ಪ್ರತಿಕರ್ಷತಿ||

ಗಂಭೀರಸಮುದ್ರದಲ್ಲಿರುವ ನೌಕೆಯು ಹೇಗೆ ನಾವಿಕನು ಹಗ್ಗವನ್ನು ಎಳೆದಂತೆ ಅವನ ಇಷ್ಟಕ್ಕನುಸಾರವಾಗಿ ಹೋಗುವುದೋ ಹಾಗೆ ಜೀವನು ಶರೀರರೂಪೀ ನೌಕೆಯನ್ನು ತನ್ನ ಮನಸ್ಸಿಗೆ ಅನುಗುಣವಾಗಿ ನಡೆಸುತ್ತಿರುತ್ತಾನೆ.

12287032a ಯಥಾ ಸಮುದ್ರಮಭಿತಃ ಸಂಸ್ಯೂತಾಃ ಸರಿತೋಽಪರಾಃ|

12287032c ತಥಾದ್ಯಾ ಪ್ರಕೃತಿರ್ಯೋಗಾದಭಿಸಂಸ್ಯೂಯತೇ ಸದಾ||

ಹೇಗೆ ಎಲ್ಲ ನದಿಗಳೂ ಎಲ್ಲಕಡೆಗಳಿಂದಲೂ ಬಂದು ಸಮುದ್ರವನ್ನೇ ಸೇರುತ್ತವೆಯೋ ಹಾಗೆ ಯೋಗದಲ್ಲಿರಿಸಿದ ಮನಸ್ಸು ಸದಾ ಮೂಲಪ್ರಕೃತಿಯಲ್ಲಿ ಲೀನವಾಗುತ್ತದೆ.

12287033a ಸ್ನೇಹಪಾಶೈರ್ಬಹುವಿಧೈರಾಸಕ್ತಮನಸೋ ನರಾಃ|

12287033c ಪ್ರಕೃತಿಸ್ಥಾ ವಿಷೀದಂತಿ ಜಲೇ ಸೈಕತವೇಶ್ಮವತ್||

ಬಹುವಿಧದ ಸ್ನೇಹಪಾಶಗಳಿಂದ ಆಸಕ್ತಮನಸ್ಕರಾಗಿರುವ ನರರು ಪ್ರಕೃತಿಸ್ಥ[6] ಜೀವಜಲದಲ್ಲಿ ಕಟ್ಟಿದ ಮರಳಿನ ಮನೆಯಂತೆ ನಾಶಹೊಂದುತ್ತಾರೆ.

12287034a ಶರೀರಗೃಹಸಂಸ್ಥಸ್ಯ ಶೌಚತೀರ್ಥಸ್ಯ ದೇಹಿನಃ|

12287034c ಬುದ್ಧಿಮಾರ್ಗಪ್ರಯಾತಸ್ಯ ಸುಖಂ ತ್ವಿಹ ಪರತ್ರ ಚ||

ಅಂತಃಶುದ್ಧಿ-ಬಹಿಃಶುದ್ಧಿಗಳಿಂದ ಪೂಣ್ಯಕ್ಷೇತ್ರರೂಪವೆಂಬ ಶರೀರವೇ ಮನೆಯಾಗಿರುವ ಮತ್ತು ಜ್ಞಾನಮಾರ್ಗದಲ್ಲಿಯೇ ಹೋಗುತ್ತಿರುವ ಜೀವನಿಗೆ ಇಲ್ಲಿಯೂ ಸುಖವಿದೆ ಮತ್ತು ಪರಲೋಕದಲ್ಲಿಯೂ ಸುಖವಿದೆ.

12287035a ವಿಸ್ತರಾಃ ಕ್ಲೇಶಸಂಯುಕ್ತಾಃ ಸಂಕ್ಷೇಪಾಸ್ತು ಸುಖಾವಹಾಃ|

12287035c ಪರಾರ್ಥಂ ವಿಸ್ತರಾಃ ಸರ್ವೇ ತ್ಯಾಗಮಾತ್ಮಹಿತಂ ವಿದುಃ||

ಕರ್ಮಗಳು ವಿಸ್ತಾರವಾದಷ್ಟೂ ಕ್ಲೇಶಗಳು ವಿಸ್ತಾರಗೊಳ್ಳುತ್ತವೆ. ವಿಸ್ತೃತಗೊಂಡ ಕರ್ಮಗಳೆಲ್ಲವೂ ಪರಾರ್ಥಕ್ಕಾಗಿ ಅಂದರೆ ಇಂದ್ರಿಯಸುಖಕ್ಕಾಗಿ. ಕರ್ಮಗಳನ್ನು ಸಂಕ್ಷೇಪಗೊಳಿಸುವುದೇ ಸುಖವನ್ನೀಯುವುದು. ತ್ಯಾಗವೆಂಬ ಸಂಕ್ಷೇಪಕರ್ಮವು ಆತ್ಮಹಿತಸಾಧಕವೆಂದು ವಿದ್ವಾಂಸರು ಹೇಳುತ್ತಾರೆ.

12287036a ಸಂಕಲ್ಪಜೋ ಮಿತ್ರವರ್ಗೋ ಜ್ಞಾತಯಃ ಕಾರಣಾತ್ಮಕಾಃ|

12287036c ಭಾರ್ಯಾ ದಾಸಾಶ್ಚ ಪುತ್ರಾಶ್ಚ ಸ್ವಮರ್ಥಮನುಯುಂಜತೇ||

ಯಾವುದಾದರೂ ಸಂಕಲ್ಪವನ್ನಿಟ್ಟುಕೊಂಡೇ ಮಿತ್ರವರ್ಗವು ಹುಟ್ಟಿಕೊಳ್ಳುತ್ತದೆ. ಕುಟುಂಬದವರೂ ಯಾವುದಾದರೂ ಕಾರಣದಿಂದಲೇ ಕುಟುಂಬದವರಾಗಿರುತ್ತಾರೆ. ಹೆಂಡತಿ, ಸೇವಕರು ಮತ್ತು ಪುತ್ರರು ಕೂಡ ತಮ್ಮ ತಮ್ಮ ಸ್ವಾರ್ಥಗಳನ್ನೇ ಅನುಸರಿಸುತ್ತಾರೆ.

12287037a ನ ಮಾತಾ ನ ಪಿತಾ ಕಿಂ ಚಿತ್ಕಸ್ಯ ಚಿತ್ಪ್ರತಿಪದ್ಯತೇ|

12287037c ದಾನಪಥ್ಯೋದನೋ ಜಂತುಃ ಸ್ವಕರ್ಮಫಲಮಶ್ನುತೇ||

ತಂದೆಯಾಗಲೀ ಅಥವಾ ತಾಯಿಯಾಗಲೀ ಯಾರೂ ಪರಲೋಕಸಾಧನೆಗೆ ಸ್ವಲ್ಪವೂ ಸಹಾಯಕರಾಗುವುದಿಲ್ಲ. ಪರಲೋಕದ ಮಾರ್ಗದಲ್ಲಿ ತಾನು ಮಾಡಿದ ದಾನ ಅಥವಾ ತ್ಯಾಗವೇ ದಾರಿಖರ್ಚಿಗಾಗುತ್ತದೆ. ಪ್ರತ್ಯೇಕ ಜೀವವೂ ತಾನು ಮಾಡಿದ ಕರ್ಮಗಳ ಫಲಗಳನ್ನೇ ಭೋಗಿಸುತ್ತದೆ.

12287038a ಮಾತಾ ಪುತ್ರಃ ಪಿತಾ ಭ್ರಾತಾ ಭಾರ್ಯಾ ಮಿತ್ರಜನಸ್ತಥಾ|

12287038c ಅಷ್ಟಾಪದಪದಸ್ಥಾನೇ ತ್ವಕ್ಷಮುದ್ರೇವ ನ್ಯಸ್ಯತೇ||

ತಾಯಿ, ಮಗ, ತಂದೆ, ಸಹೋದರ, ಪತ್ನಿ ಮತ್ತು ಮಿತ್ರಜನರು ಚಿನ್ನದ ಸಂಪುಟದ ಮೇಲೆ ರಕ್ಷಣೆಗಾಗಿ ಒತ್ತಿದ ಅರಗಿನ ಮುದ್ರೆಯಂತೆ.

12287039a ಸರ್ವಾಣಿ ಕರ್ಮಾಣಿ ಪುರಾ ಕೃತಾನಿ

ಶುಭಾಶುಭಾನ್ಯಾತ್ಮನೋ ಯಾಂತಿ ಜಂತೋಃ|

12287039c ಉಪಸ್ಥಿತಂ ಕರ್ಮಫಲಂ ವಿದಿತ್ವಾ

ಬುದ್ಧಿಂ ತಥಾ ಚೋದಯತೇಽಂತರಾತ್ಮಾ||

ಹಿಂದೆ ಮಾಡಿದ ಎಲ್ಲ ಶುಭಾಶುಭಕರ್ಮಗಳೂ ಜೀವವನ್ನು ಅನುಸರಿಸಿಕೊಂಡು ಹೋಗುತ್ತವೆ. ಆದುದರಿಂದ ಪ್ರಾಪ್ತ ಪರಿಸ್ಥಿತಿಯು ತನ್ನ ಕರ್ಮಗಳ ಫಲವೆಂದು ತಿಳಿದು ಅಂತರ್ಮುಖಿಯು ಭವಿಷ್ಯದಲ್ಲಿ ದುಃಖವನ್ನು ಪಡೆಯಬಾರದೆಂದು ತನ್ನ ಬುದ್ಧಿಗೆ ಶುಭಕರ್ಮಗಳ ಪ್ರೇರಣೆಯನ್ನು ನೀಡುತ್ತಾನೆ.

12287040a ವ್ಯವಸಾಯಂ ಸಮಾಶ್ರಿತ್ಯ ಸಹಾಯಾನ್ಯೋಽಧಿಗಚ್ಚತಿ|

12287040c ನ ತಸ್ಯ ಕಶ್ಚಿದಾರಂಭಃ ಕದಾ ಚಿದವಸೀದತಿ||

ಪ್ರಯತ್ನಶೀಲನಾಗಿ ತನ್ನ ಪ್ರಯತ್ನಕ್ಕೆ ಅನುಕೂಲಕರ ಸಹಾಯವನ್ನು ಪಡೆದುಕೊಳ್ಳುವವನು ಆರಂಭಿಸಿದ ಯಾವುದೇ ಕಾರ್ಯವೂ ನಷ್ಟವಾಗುವುದಿಲ್ಲ.

12287041a ಅದ್ವೈಧಮನಸಂ ಯುಕ್ತಂ ಶೂರಂ ಧೀರಂ ವಿಪಶ್ಚಿತಮ್|

12287041c ನ ಶ್ರೀಃ ಸಂತ್ಯಜತೇ ನಿತ್ಯಮಾದಿತ್ಯಮಿವ ರಶ್ಮಯಃ||

ಕಿರಣಗಳು ಸೂರ್ಯನನ್ನು ತ್ಯಜಿಸದೇ ಇರುವಂತೆ ನಿಶ್ಚಲಮನಸ್ಸಿನ ಉದ್ಯೋಗಶೀಲ ಶೂರ ಧೀರ ವಿದ್ವಾಂಸನನ್ನು ಸಂಪತ್ತು ಬಿಟ್ಟುಹೋಗುವುದಿಲ್ಲ.

12287042a ಆಸ್ತಿಕ್ಯವ್ಯವಸಾಯಾಭ್ಯಾಮುಪಾಯಾದ್ವಿಸ್ಮಯಾದ್ಧಿಯಾ|

12287042c ಯಮಾರಭತ್ಯನಿಂದ್ಯಾತ್ಮಾ ನ ಸೋಽರ್ಥಃ ಪರಿಸೀದತಿ||

ನಿಷ್ಕಳಂಕನು ಆಸ್ತಿಕ್ಯ, ಪ್ರಯತ್ನ, ಉಪಾಯಗಳನ್ನು ಮತ್ತು ಗರ್ವವಿಲ್ಲದೇ[7] ಉತ್ತಮ ಬುದ್ಧಿಯನ್ನುಪಯೋಗಿಸಿ ಆರಂಭಿಸಿದ ಕಾರ್ಯಗಳು ಯಾವುದೇ ಕಾರಣಕ್ಕೂ ನಿಷ್ಫಲವಾಗುವುದಿಲ್ಲ.

12287043a ಸರ್ವಃ ಸ್ವಾನಿ ಶುಭಾಶುಭಾನಿ ನಿಯತಂ

                  ಕರ್ಮಾಣಿ ಜಂತುಃ ಸ್ವಯಂ

ಗರ್ಭಾತ್ಸಂಪ್ರತಿಪದ್ಯತೇ ತದುಭಯಂ

                  ಯತ್ತೇನ ಪೂರ್ವಂ ಕೃತಮ್|

12287043c ಮೃತ್ಯುಶ್ಚಾಪರಿಹಾರವಾನ್ಸಮಗತಿಃ

                  ಕಾಲೇನ ವಿಚ್ಚೇದಿತಾ        ದಾರೋಶ್ಚೂರ್ಣಮಿವಾಶ್ಮಸಾರವಿಹಿತಂ

                  ಕರ್ಮಾಂತಿಕಂ ಪ್ರಾಪಯೇತ್||

ಎಲ್ಲ ಜೀವಗಳೂ ಪೂರ್ವಜನ್ಮದಲ್ಲಿ ಮಾಡಿದ ಶುಭಾಶುಭಕರ್ಮಗಳ ನಿರ್ದಿಷ್ಟ ಫಲಗಳನ್ನು ಗರ್ಭಪ್ರವೇಶಮಾಡುವ ಸಮಯದಲ್ಲಿಯೇ ಪಡೆದುಕೊಳ್ಳುತ್ತವೆ ಮತ್ತು ಕ್ರಮಶಃ ಭೋಗಿಸತೊಡಗುತ್ತವೆ. ಮರವನ್ನು ಕೊಯ್ಯುವಾಗ ಗರಗಸದಿಂದ ಉದುರುವ ಮರದ ಹೊಟ್ಟನ್ನು ಗಾಳಿಯು ಹಾರಿಸಿಕೊಂಡು ಹೋಗುವಂತೆ ಅಪರಿಹಾರ್ಯ ಮೃತ್ಯುವು ವಿನಾಶಕಾರೀ ಕಾಲದೊಡನೆ ಸೇರಿ ಜೀವವನ್ನು ಹಾರಿಸಿಕೊಂಡು ಹೋಗುತ್ತದೆ.

12287044a ಸ್ವರೂಪತಾಮಾತ್ಮಕೃತಂ ಚ ವಿಸ್ತರಂ

ಕುಲಾನ್ವಯಂ ದ್ರವ್ಯಸಮೃದ್ಧಿಸಂಚಯಮ್|

12287044c ನರೋ ಹಿ ಸರ್ವೋ ಲಭತೇ ಯಥಾಕೃತಂ

ಶುಭಾಶುಭೇನಾತ್ಮಕೃತೇನ ಕರ್ಮಣಾ||

ಸರ್ವ ನರರೂ ತಮ್ಮ ತಮ್ಮ ಶುಭಾಶುಭ ಕರ್ಮಗಳ ಅನುಸಾರವಾಗಿಯೇ ಸುಂದರ ಅಥವಾ ಅಸುಂದರ ರೂಪ, ತನಗಾಗುವ ಯೋಗ್ಯ-ಅಯೋಗ್ಯ ಪುತ್ರ-ಪೌತ್ರಾದಿಗಳ ವಿಸ್ತಾರ, ಅಧಮ ಅಥವಾ ಉತ್ತಮ ಕುಲದಲ್ಲಿ ಜನ್ಮ ಹಾಗೂ ದ್ರವ್ಯ ಸಮೃದ್ಧಿ-ಸಂಚಯ ಮೊದಲಾದವುಗಳನ್ನು ಪಡೆದುಕೊಳ್ಳುತ್ತಾರೆ.”

12287045 ಭೀಷ್ಮ ಉವಾಚ|

12287045a ಇತ್ಯುಕ್ತೋ ಜನಕೋ ರಾಜನ್ಯಥಾತಥ್ಯಂ ಮನೀಷಿಣಾ|

12287045c ಶ್ರುತ್ವಾ ಧರ್ಮವಿದಾಂ ಶ್ರೇಷ್ಠಃ ಪರಾಂ ಮುದಮವಾಪ ಹ||

ಭೀಷ್ಮನು ಹೇಳಿದನು: “ರಾಜನ್! ಮನೀಷಿಣಿಯ ಯಥಾತಥ್ಯ ಮಾತನ್ನು ಕೇಳಿದ ಧರ್ವವಿದರಲ್ಲಿ ಶ್ರೇಷ್ಠ ಜನಕನು ಪರಮಾನಂದವನ್ನು ಹೊಂದಿದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಪರಾಶರಗೀತಾಯಾಂ ಸಪ್ತಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತೇಳನೇ ಅಧ್ಯಾಯವು.

[1] ಜ್ಞಾನಂ ಚೈವ ಪರಾ ಗತಿಃ| (ಗೀತಾ ಪ್ರೆಸ್).

[2] ಗೀತಾ ಪ್ರೆಸ್ ಮತ್ತು ಭಾರದ ದರ್ಶನಗಳಲ್ಲಿ ಇದಕ್ಕೆ ಮೊದಲು ಈ ಒಂದೂವರೆ ಅಧಿಕ ಶ್ಲೋಕಗಳಿವೆ. ಆದರೆ ಪುಣೆಯ ಸಂಪುಟದಲ್ಲಿ ಈ ಶ್ಲೋಕಗಳು ಶ್ಲೋಕ ೩೪-೩೫ರಲ್ಲಿ ಬರುತ್ತವೆ: ಬುದ್ಧಿಮಾರ್ಗಪ್ರಯಾತಸ್ಯ ಸುಖಂ ತ್ವಿಹ ಪರತ್ರ ಚ| ವಿಸ್ತರಾಃ ಕ್ಲೇಶಸಂಯುಕ್ತಾಃ ಸಂಕ್ಷೇಪಾಸ್ತು ಸುಖಾವಹಾಃ| ಪರಾರ್ಥಂ ವಿಸ್ತರಾಃ ಸರ್ವೇ ತ್ಯಾಗಮಾತ್ಮಹಿತಂ ವಿದುಃ|| ಅರ್ಥಾತ್: ಆದರೆ ಜ್ಞಾನಮಾರ್ಗವನ್ನು ಆಶ್ರಯಿಸಿದವನಿಗೆ ಇಹದಲ್ಲಿಯೂ ಪರದಲ್ಲಿಯೂ ಸುಖವಿದೆ. ಕರ್ಮಗಳು ವಿಸ್ತಾರವಾದಷ್ಟೂ ಕ್ಲೇಶಗಳು ವಿಸ್ತಾರಗೊಳ್ಳುತ್ತವೆ. ವಿಸ್ತೃತಗೊಂಡ ಕರ್ಮಗಳೆಲ್ಲವೂ ಪರಾರ್ಥಕ್ಕಾಗಿ ಅಂದರೆ ಇಂದ್ರಿಯಸುಖಕ್ಕಾಗಿ. ಕರ್ಮಗಳನ್ನು ಸಂಕ್ಷೇಪಗೊಳಿಸುವುದೇ ಸುಖವನ್ನೀಯುವುದು. ತ್ಯಾಗವೆಂಬ ಸಂಕ್ಷೇಪಕರ್ಮವು ಆತ್ಮಹಿತಸಾಧಕವೆಂದು ವಿದ್ವಾಂಸರು ಹೇಳುತ್ತಾರೆ. (ಗೀತಾ ಪ್ರೆಸ್/ಭಾರತ ದರ್ಶನ).

[3] ಭಾಜನೇಽಪಕ್ವೇ (ಭಾರತ ದರ್ಶನ).

[4] ನಶ್ಯತಿ (ಗೀತಾ ಪ್ರೆಸ್/ಭಾರತ ದರ್ಶನ).

[5] ಪಕ್ವವಾದ ಮಣ್ಣಿನ ಪಾತ್ರೆಯಲ್ಲಿಟ್ಟ ನೀರು ಹೇಗೆ ನಾಶಹೊಂದುವುದಿಲ್ಲವೋ ಹಾಗೆ ತಪಸ್ಸಿನಿಂದ ಪಕ್ವವಾದ ಶರೀರವು ಬ್ರಹ್ಮಲೋಕಾಂತವಾಗಿ ವ್ಯಾಪಿಸುತ್ತದೆ. ವಿಷಯಂ ಬ್ರಹ್ಮಲೋಕಾಂತಂ ಅಶ್ನುತೇ ವ್ಯಾಪ್ನೋತಿ (ಭಾರತ ದರ್ಶನ).

[6] ಪ್ರಾಕೃತಜನರು (ಭಾರತ ದರ್ಶನ); ಪ್ರಕೃತಿಯಲ್ಲಿ ಸ್ಥಿತವಾಗಿರುವ (ಗೀತಾ ಪ್ರೆಸ್).

[7] ವಿಸ್ಮಯಾತ್ ಎಂಬುದಕ್ಕೆ ವ್ಯಾಖ್ಯಾನಕಾರರು ಸ್ಮಯಃ=ಗರ್ವಃ, ತದಭಾವಾತ್ ವಿಸ್ಮಯಾತ್ = ಗರ್ವವಿಲ್ಲದೇ ಇರುವುದು ಎಂದು ಅರ್ಥೈಸಿದ್ದಾರೆ (ಭಾರತ ದರ್ಶನ).

Comments are closed.