ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಸಾಂಖ್ಯಯೋಗವನ್ನು ವಿಸ್ತರಿಸುವ ಈ ಯಾಜ್ಞವಲ್ಕ್ಯ-ಜನಕರ ಸಂವಾದವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ ೨೯೮-೩೦೭ ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು.

***

ಯುಧಿಷ್ಠಿರನು ಹೇಳಿದನು:

“ಯಾವುದು ಧರ್ಮಾಧರ್ಮಗಳಿಂದಲೂ, ಸರ್ವ ಸಂಶಯಗಳಿಂದಲೂ, ಜನ್ಮ-ಮೃತ್ಯುಗಳಿಂದಲೂ, ಪುಣ್ಯ-ಪಾಪಗಳಿಂದಲೂ ವಿಮುಕ್ತವಾಗಿರುವುದೋ ಮತ್ತು ಯಾವುದು ನಿತ್ಯವೂ, ಅಭಯವೂ, ಮಂಗಳವೂ, ಅಕ್ಷರವೂ, ಅವ್ಯಯವೂ, ಪವಿತ್ರವೂ, ಕ್ಲೇಶರಹಿತವೂ ಆಗಿರುವುದೋ ಆ ಪರಮತತ್ತ್ವದ ಕುರಿತು ನನಗೆ ಹೇಳಬೇಕು.”

ಭೀಷ್ಮನು ಹೇಳಿದನು:

“ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಯಾಜ್ಞವಲ್ಕ್ಯ ಮತ್ತು ಜನಕರ ಸಂವಾದವನ್ನು ಹೇಳುತ್ತೇನೆ.”

***

ದೇವರಾತನ ಮಗ, ಮಹಾಯಶಸ್ವೀ, ಪ್ರಶ್ನಿಸುವವರಲ್ಲಿ ಶ್ರೇಷ್ಠ ರಾಜಾ ಜನಕನು ಋಷಿಶ್ರೇಷ್ಠ ಯಾಜ್ಞವಲ್ಕ್ಯನನ್ನು ಕೇಳಿದನು:

“ವಿಪ್ರರ್ಷೇ! ಇಂದ್ರಿಯಗಳು ಎಷ್ಟಿವೆ? ಪೃಕೃತಿಯಲ್ಲಿ ಎಷ್ಟು ಭೇದಗಳಿವೆ? ಅವ್ಯಕ್ತವೆನ್ನುವುದು ಯಾವುದು? ಅದಕ್ಕಿಂತಲೂ ಅತೀತವಾಗಿರುವ ಪರಬ್ರಹ್ಮನ ಸ್ವರೂಪವೇನು? ವಿಪ್ರೇಂದ್ರ! ನಿನ್ನ ಅನುಗ್ರಹವನ್ನೇ ಬಯಸುವ ನನಗೆ ಇವುಗಳ ಸೃಷ್ಟಿ ಮತ್ತು ಕಾಲಪ್ರಮಾಣಗಳ ಕುರಿತು ಹೇಳಬೇಕು. ಅಜ್ಞಾನದಿಂದ ಕೇಳುತ್ತಿದ್ದೇನೆ. ನೀನು ಜ್ಞಾನಮಯ ಮತ್ತು ನಿಧಿ. ಆದುದರಿಂದ ಇವೆಲ್ಲವುಗಳನ್ನೂ ನಿಸ್ಸಂಶಯವಾಗಿ ನಿನ್ನಿಂದ ಕೇಳ ಬಯಸುತ್ತೇನೆ.”

ಯಾಜ್ಞವಲ್ಕ್ಯನು ಹೇಳಿದನು:

“ಅವನೀಪಾಲ! ನೀನು ಕೇಳಿದ ಪ್ರಶ್ನೆಗಳು ಯೋಗಿಗಳ ಪರಮ ಜ್ಞಾನಕ್ಕೆ ಮತ್ತು ಅದರಲ್ಲೂ ವಿಶೇಷವಾಗಿ ಸಾಂಖ್ಯರ ಜ್ಞಾನಕ್ಕೆ ಸಂಬಂಧಿಸಿವೆ. ಕೇಳು. ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ಆದರೂ ನನ್ನಿಂದ ಕೇಳಿ ತಿಳಿಯಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿರುವೆ. ಕೇಳಿದವನಿಗೆ ಹೇಳಬೇಕು ಎನ್ನುವುದು ಸನಾತನ ಧರ್ಮವಾಗಿದೆ.

ಪ್ರಕೃತಿಗಳು ಎಂಟೆಂದು ಹೇಳುತ್ತಾರೆ. ಅವುಗಳ ವಿಕಾರಗಳು ಹದಿನಾರು. ಅವುಗಳನ್ನು ಏಳು ವ್ಯಕ್ತವಾದವುಗಳು ಎಂದು ಆಧ್ಯಾತ್ಮಚಿಂತಕರು ಹೇಳುತ್ತಾರೆ. ಅವ್ಯಕ್ತ, ಮಹತ್ತತ್ತ್ವ, ಅಹಂಕಾರ, ಪೃಥ್ವಿ, ವಾಯು, ಆಕಾಶ, ಜಲ ಮತ್ತು ಐದನೆಯದಾದ ಜ್ಯೋತಿ – ಇವೇ ಎಂಟು ಪ್ರಕೃತಿಗಳು. ಅವುಗಳ ವಿಕಾರಗಳನ್ನು ಕೇಳು. ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು – ಇವು ಐದು ಜ್ಞಾನೇಂದ್ರಿಯಗಳು. ಶಬ್ದ, ಸ್ಪರ್ಶ, ರೂಪ, ರಸ, ಗಂಧ – ಇವು ಐದು ಪಂಚತನ್ಮಾತ್ರಗಳು. ನಾಲಿಗೆ, ಕೈಗಳು, ಕಾಲುಗಳು, ಗುದ ಮತ್ತು ಜನನೇಂದ್ರಿಯ – ಇವು ಐದು ಕರ್ಮೇಂದ್ರಿಯಗಳು. ರಾಜೇಂದ್ರ! ಐದು ಕರ್ಮೇಂದ್ರಿಯಗಳನ್ನೂ ಮತ್ತು ಪಂಚ ತನ್ಮಾತ್ರಗಳನ್ನೂ ವಿಶೇಷಗಳೆಂದು ಕರೆಯುತ್ತಾರೆ. ಮೈಥಿಲ! ಐದು ಜ್ಞಾನೇಂದ್ರಿಯಗಳನ್ನು ಸವಿಶೇಷಗಳೆಂದು ಕರೆಯುತ್ತಾರೆ. ವಿಶೇಷ-ಸವಿಶೇಷಗಳೆರಡೂ ಪಂಚಮಹಾಭೂತಗಳಲ್ಲಿಯೇ ಇವೆ. ಆಧ್ಯಾತ್ಮಗತಿಚಿಂತಕರು ಮನಸ್ಸನ್ನು ಹದಿನಾರನೆಯ ವಿಕಾರ ಎನ್ನುತ್ತಾರೆ. ನಿನ್ನ ಮತ್ತು ಇತರ ಬುದ್ಧಿವಿಶಾರದ ವಿದ್ವಾಂಸರ ಮತವೂ ಇದೇ ಆಗಿದೆ.

ಪಾರ್ಥಿವ! ಮಹತ್ತು ಅಥವಾ ಅವ್ಯಕ್ತವು ತಾನೇ ಉತ್ಪನ್ನವಾಗುತ್ತದೆ[1]. ಇದನ್ನೇ ವಿದ್ವಾಂಸರು ಮೊದಲನೆಯ ಮತ್ತು ಪ್ರಧಾನ ಸೃಷ್ಟಿಯೆಂದು ಹೇಳುತ್ತಾರೆ. ನರಾಧಿಪ! ಮಹತ್ತಿನಿಂದ ಅಹಂಕಾರವು ಉತ್ಪನ್ನವಾಗುತ್ತದೆ. ಇದನ್ನು ಎರಡನೆಯ ಸೃಷ್ಟಿಯೆಂದು ಹೇಳುತ್ತಾರೆ. ಇದು ಬುದ್ಧ್ಯಾತ್ಮಕ ಸೃಷ್ಟಿ ಎಂದೂ ತಿಳಿಯಲ್ಪಟ್ಟಿದೆ. ಪಂಚಭೂತಗಳ ಮತ್ತು ಗುಣಗಳನ್ನು ಹೊಂದಿರುವ ಮನಸ್ಸು ಅಹಂಕಾರದಿಂದ ಹುಟ್ಟುತ್ತದೆ. ಇದನ್ನು ಮೂರನೆಯ ಸೃಷ್ಟಿ ಮತ್ತು ಆಹಂಕಾರಿಕ ಸೃಷ್ಟಿ ಎಂದು ಹೇಳುತ್ತಾರೆ. ನರಾಧಿಪ! ಮನಸ್ಸಿನಿಂದ ಮಹಾಭೂತಗಳು ಹುಟ್ಟುತ್ತವೆ. ಇದನ್ನು ನಾಲ್ಕನೆಯ ಸೃಷ್ಟಿ ಮತ್ತು ಮಾನಸ ಸೃಷ್ಟಿ ಎಂದು ಕರೆಯುತ್ತಾರೆ. ಪಂಚಮಹಾಭೂತಗಳಿಂದ ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ ಇವು ಹುಟ್ಟುತ್ತವೆ. ಭೂತಚಿಂತಕರು ಇದನ್ನು ಐದನೆಯ ಸೃಷ್ಟಿಯೆಂದೂ ಭೌತಿಕ ಸೃಷ್ಟಿಯೆಂದೂ ಹೇಳುತ್ತಾರೆ.  ಶಬ್ದ-ಸ್ಪರ್ಶಾದಿ ತನ್ಮಾತ್ರಗಳಿಂದ ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಐದನೆಯದಾಗಿ ಮೂಗು ಇವುಗಳು ಹುಟ್ಟುತ್ತವೆ. ಇದನ್ನು ಆರನೆಯ ಸೃಷ್ಟಿ ಮತ್ತು ಬಹುಚಿಂತಾತ್ಮಕ ಸೃಷ್ಟಿ ಎಂದು ಕರೆಯುತ್ತಾರೆ. ನರಾಧಿಪ! ಅನಂತರ ಕೆಳಗಿನವುಗಳಾದ ಕಿವಿಯೇ ಮೊದಲಾದ ಕರ್ಮೇಂದ್ರಿಯಗಳ ಗುಂಪು ಹುಟ್ಟುತ್ತದೆ. ಇದನ್ನು ಏಳನೆಯ ಸೃಷ್ಟಿಯೆಂದು ಹೇಳುತ್ತಾರೆ. ಇದು ಐಂದ್ರಿಯಕ ಸೃಷ್ಟಿಯೆಂದೂ ತಿಳಿಯಲ್ಪಟ್ಟಿದೆ. ನರಾಧಿಪ! ಅನಂತರ ಮೇಲಕ್ಕೆ ಪ್ರವಹಿಸುವ ಮತ್ತು ಅಡ್ಡಡ್ಡವಾಗಿ ಸಂಚರಿಸುವ ಸಮಾನ, ವ್ಯಾನ ಮತ್ತು ಉದಾನ ವಾಯುಗಳು ಹುಟ್ಟುತ್ತವೆ. ತಿಳಿದವರು ಇದನ್ನು ಎಂಟನೆಯ ಸೃಷ್ಟಿಯೆಂದು ಮತ್ತು ಆರ್ಜವಕ ಸೃಷ್ಟಿಯೆಂದು ಹೇಳುತ್ತಾರೆ. ನರಾಧಿಪ! ಅಡ್ಡಡ್ಡವಾಗಿ ಸಂಚರಿಸುವ ಸಮಾನ-ವ್ಯಾನ-ಉದಾನ ವಾಯುಗಳು ಅಧೋಗತಿಗೆ ತಿರುಗಿದಾಗ ಅಪಾನವು ಹುಟ್ಟುತ್ತದೆ. ಆರ್ಜಕವೆಂದೇ ತಿಳಿದವರು ಕರೆಯುವ ಇದು ಒಂಭತ್ತನೆಯ ಸೃಷ್ಟಿ. ನರಾಧಿಪ! ಇವೇ ಶ್ರುತಿಗಳಲ್ಲಿ ನಿದರ್ಶನಗಳೊಂದಿಗೆ ಹೇಳಲ್ಪಟ್ಟಿರುವ ಒಂಭತ್ತು ಸೃಷ್ಟಿಗಳು ಮತ್ತು ಇಪ್ಪತ್ನಾಲ್ಕು ತತ್ತ್ವಗಳು. ಮಹಾರಾಜ! ಇನ್ನು ಮುಂದೆ ಮಹಾತ್ಮರು ಹೇಳಿರುವ ಇವುಗಳ ಗುಣ ಮತ್ತು ಕಾಲಸಂಖ್ಯೆಯನ್ನು ನನ್ನಿಂದ ಕೇಳು.

ನರಶ್ರೇಷ್ಠ! ಅವ್ಯಕ್ತದ[2] ಕಾಲ ಪರಿಮಿತಿಯನ್ನು ಕೇಳು. ಹತ್ತುಸಾವಿರ ಕಲ್ಪಗಳು[3] ಅವ್ಯಕ್ತದ ಒಂದು ಹಗಲು. ನರಾಧಿಪ! ಅವ್ಯಕ್ತದ ರಾತ್ರಿಯೂ ಅಷ್ಟೇ ಪ್ರಮಾಣದ್ದಾಗಿದೆ. ಮೊಟ್ಟಮೊದಲು ಸರ್ವದೇಹಿಗಳ ಜೀವನಕ್ಕಾಗಿ ಆಹಾರ-ಓಷಧಿಗಳ ಸೃಷ್ಟಿಯಾಯಿತು. ಅನಂತರ ಹಿರಣ್ಯ ಅಂಡದಿಂದ ಹೊರಬಂದ ಬ್ರಹ್ಮನ ಸೃಷ್ಟಿಯಾಯಿತು. ಆ ಮೂರ್ತಿಯೇ ಸರ್ವಭೂತಗಳ ಜನ್ಮಸ್ಥಾನವೆಂದು ಕೇಳಿದ್ದೇವೆ. ಮಹಾಮುನಿ ಪ್ರಜಾಪತಿಯು ಒಂದು ಸಂವತ್ಸರ ಆ ಅಂಡದಲ್ಲಿಯೇ ವಾಸಿಸಿದ್ದು, ನಂತರ ಹೊರಬಂದು ಅದನ್ನು ಭೂಮಿ ಮತ್ತು ದಿವವೆಂದು ಎರಡಾಗಿ ವಿಭಜಿಸಿದನು. ರಾಜನ್! ಇವು ದ್ಯಾವಾಪೃಥಿವೀ ಎಂದೇ ವೇದಗಳಲ್ಲಿ ಹೇಳಲ್ಪಟ್ಟಿವೆ. ಈ ಎರಡು ಭಾಗಗಳ ಮಧ್ಯೆ ಪ್ರಭುವು ಆಕಾಶವನ್ನು ಸೃಷ್ಟಿಸಿದನು. ವೇದವೇದಾಂಗಪಾರಗರು ಬ್ರಹ್ಮನ ಕಾಲಪರಿಮಿತಿಯು ಹತ್ತುಸಾವಿರ ಕಲ್ಪಗಳಿಗಿಂದ ಒಂದು ಪಾದ ಊನ ಎಂದರೆ ಏಳು ಸಾವಿರದ ಐದು ನೂರು ಕಲ್ಪಗಳು ಬ್ರಹ್ಮನ ಒಂದು ಹಗಲು ಎಂದು ಹೇಳಿದ್ದಾರೆ. ಆಧ್ಯಾತ್ಮ ಚಿಂತಕರು ಬ್ರಹ್ಮನ ರಾತ್ರಿಯೂ ಅಷ್ಟೇ ಸಮಯವುಳ್ಳದ್ದು ಎಂದು ಹೇಳುತ್ತಾರೆ. ಇವುಗಳನ್ನು ಸೃಷ್ಟಿಸಿ ನಂತರ ಋಷಿಯು ಅಹಂಕಾರವೆಂಬ ದಿವ್ಯ ಭೂತವನ್ನು ಸೃಷ್ಟಿಸಿದನು. ಆ ಮಹಾನೃಷಿಯು ದೇಹವನ್ನು ಪಡೆಯುವುದರ ಮೊದಲೇ ನಾಲ್ಕು[4] ಮಕ್ಕಳನ್ನು ಪಡೆದುಕೊಂಡನು. ರಾಜಸತ್ತಮ! ಅವರು ಪಿತೃಗಳಿಗೂ ಪಿತೃಗಳೆಂದು ಕೇಳಿದ್ದೇವೆ. ನರಶ್ರೇಷ್ಠ! ದೇವತೆಗಳು[5] ಪಿತೃಗಳಿಗೆ[6] ಮಕ್ಕಳೆಂದು ಕೇಳಿದ್ದೇವೆ. ಅವರಿಂದಲೇ ಚರಾಚರ ಲೋಕಗಳೆಲ್ಲವೂ ಆವೃತವಾಗಿವೆ. ಪರಮೇಷ್ಠೀ ಅಹಂಕಾರವು ಪೃಥಿವೀ, ವಾಯು, ಆಕಾಶ, ಜಲ ಮತ್ತು ಐದನೆಯದಾದ ತೇಜಸ್ಸುಗಳೆಂಬ ಪಂಚ ಭೂತಗಳನ್ನು ಸೃಷ್ಟಿಸಿದೆ. ಮೂರನೆಯ ಸೃಷ್ಟಿಯಾದ ಅಹಂಕಾರದ ಕಾಲಪರಿಮಾಣವನ್ನೂ ವಿದ್ವಾಂಸರು ಹೇಳಿದ್ದಾರೆ. ಐದು ಸಾವಿರ ಕಲ್ಪಗಳು ಅಹಂಕಾರದ ಒಂದು ರಾತ್ರಿಯಾಗುತ್ತದೆ. ಅಷ್ಟೇ ಪರಿಮಾಣದ ಹಗಲೂ ಸೇರಿ ಅಹಂಕಾರದ ಒಂದು ದಿನವಾಗುತ್ತದೆ. ರಾಜೇಂದ್ರ! ಪಾರ್ಥಿವ! ಪಂಚಮಹಾಭೂತಗಳಲ್ಲಿ ಅನುಕ್ರಮವಾಗಿ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ವಿಶೇಷ ಗುಣಗಳಿವೆ. ಇವು ನಿತ್ಯವೂ ಇರುವವುಗಳನ್ನು ಆವೇಶಿಸಿರುತ್ತವೆ. ಇವುಗಳು ಭೂತಗಳನ್ನು ಆವೇಶಿಸಿರುವುದರಿಂದ ಅನ್ಯೋನ್ಯರಲ್ಲಿ ಸ್ನೇಹವುಂಟಾಗುತ್ತದೆ. ಅನ್ಯೋನ್ಯರ ಹಿತದಲ್ಲಿ ನಿರತರಾಗಿರುತ್ತಾರೆ. ಅನ್ಯೋನ್ಯರನ್ನು ಗೌರವಿಸುತ್ತಾರೆ ಮತ್ತು ಅನ್ಯೋನ್ಯರಲ್ಲಿ ಸ್ಪರ್ಧಿಸುತ್ತಾರೆ ಕೂಡ. ಅನ್ಯೋನ್ಯರನ್ನು ಕೊಂದುಹಾಕುತ್ತಾ ವಿಷಯಾಸಕ್ತ ಪ್ರಾಣಿಗಳು ತಿರ್ಯಗ್ಯೋನಿಗಳಲ್ಲಿ ಪ್ರವೇಶಿಸಿ ಪ್ರಪಂಚದಲ್ಲಿ ಸುತ್ತಾಡುತ್ತಿರುತ್ತವೆ. ಮೂರು ಸಾವಿರ ಕಲ್ಪಗಳು ಇವುಗಳ ಒಂದು ಹಗಲೆಂದು ಹೇಳುತ್ತಾರೆ. ಅಷ್ಟೇ ಸಮಯದ ರಾತ್ರಿಯೂ ಇವಕ್ಕಿವೆ. ನರಾಧಿಪ! ಇದೇ ಕಾಲಮಾನವನ್ನು ಮನಸ್ಸಿಗೂ ಹೇಳಿದ್ದಾರೆ. ರಾಜೇಂದ್ರ! ಇಂದ್ರಿಯಗಳಿಂದ ಸಂಚಾಲಿತಗೊಂಡ ಮನಸ್ಸು ಎಲ್ಲ ವಿಷಯಗಳ ಬಳಿಗೂ ಹೋಗುತ್ತದೆ. ಇಂದ್ರಿಯಗಳು ವಿಷಯಗಳನ್ನು ನೋಡುವುದಿಲ್ಲ. ಮನಸ್ಸು ಮಾತ್ರ ವಿಷಯಗಳನ್ನು ನೋಡುತ್ತದೆ. ಕಣ್ಣು ರೂಪಗಳನ್ನು ನೋಡುತ್ತದೆಯಾದರೂ ಅದು ಮನಸ್ಸಿನ ಮೂಲಕ ನೋಡುತ್ತದೆ. ಮನಸ್ಸಿಲ್ಲದೇ ಕಣ್ಣುಗಳು ರೂಪಗಳನ್ನು ನೋಡುವುದಿಲ್ಲ. ಮನಸ್ಸು ವ್ಯಾಕುಲಗೊಂಡಿರುವಾಗ ಕಣ್ಣುಗಳು ನೋಡುತ್ತಿದ್ದರೂ ನೋಡುತ್ತಿರುವುದಿಲ್ಲ. ಹಾಗೆಯೇ ಇಂದ್ರಿಯಗಳೆಲ್ಲವೂ ತಾವೇ ತಮ್ಮ ಕೆಲಸಗಳನ್ನು ಮಾಡುತ್ತಿರುವಂತೆ ತೋರುತ್ತದೆ. ರಾಜೇಂದ್ರ! ಮನಸ್ಸು ವಿಷಯಗಳಿಂದ ವಿಮುಖಗೊಂಡರೆ ಇಂದ್ರಿಯಗಳೂ ವಿಷಯಗಳಿಂದ ನಿವೃತ್ತವಾಗುತ್ತವೆ. ಆದರೆ ಇಂದ್ರಿಯಗಳು ವಿರಕ್ತವಾದರೂ ಮನಸ್ಸು ವಿರಕ್ತವಾಗುವುದಿಲ್ಲ. ಆದುದರಿಂದ ಇಂದ್ರಿಯಗಳೆಲ್ಲವುಗಳ ಒಡೆಯನು ಮನಸ್ಸು ಎಂದು ಹೇಳುತ್ತಾರೆ. ಈ ಮಹಾಯಶಸ್ವೀ ಮನಸ್ಸು ಸರ್ವ ಭೂತಗಳನ್ನೂ ಆವೇಶಿಸಿದೆ.

ಇದೂವರೆಗೆ ನಾನು ತತ್ತ್ವಗಳ ಸೃಷ್ಟಿಸಂಖ್ಯೆಗಳನ್ನೂ ಕಾಲಸಂಖ್ಯೆಗಳನ್ನೂ ಅನುಕ್ರಮವಾಗಿ ಹೇಳಿದ್ದೇನೆ. ಈಗ ಸಂಹಾರಕ್ರಮದ ಕುರಿತು ಕೇಳು. ನಿತ್ಯ, ಅಕ್ಷರ, ಅನಾದಿನಿಧನ ಬ್ರಹ್ಮನು ಪುನಃ ಪುನಃ ಹೇಗೆ ಜಂತುಗಳನ್ನು ಸೃಷ್ಟಿಸುತ್ತಾನೆ ಮತ್ತು ಸಂಹರಿಸುತ್ತಾನೆ ಎನ್ನುವುದನ್ನೂ ಕೇಳು. ಭಗವಾನ್ ಅವ್ಯಕ್ತನು ಹಗಲು ಕಳೆಯಿತೆಂದು ತಿಳಿದು ರಾತ್ರಿ ಮಲಗಬೇಕೆಂದು ಮನಸ್ಸುಮಾಡಿ ಅಹಂಕಾರಕೃತ ನರನನ್ನು ಪ್ರಚೋದಿಸುತ್ತಾನೆ. ಅನಂತರ ಅವ್ಯಕ್ತನಿಂದ ಪ್ರಚೋದಿತನಾಗಿ ಅಹಂಕಾರನು ಶತಸಹಸ್ರಾಂಶು ಸೂರ್ಯನಾಗಿ ತನ್ನನ್ನು ಹನ್ನೆರಡು ರೂಪಗಳನ್ನಾಗಿ ವಿಭಾಗಿಸಿಕೊಂಡು ಅಗ್ನಿಯೋಪಾದಿಯಲ್ಲಿ ಪ್ರಜ್ವಲಿಸುತ್ತಾನೆ. ನರಾಧಿಪ! ಅವನು ತನ್ನ ಪ್ರಖರ ತೇಜಸ್ಸಿನಿಂದ ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭಿಜ್ಜಗಳೆಂಬ ನಾಲ್ಕು ಪ್ರಕಾರದ ಜೀವಗಳನ್ನೂ ಭಸ್ಮಮಾಡುತ್ತಾನೆ. ಕಣ್ಣುಮುಚ್ಚಿ ತೆಗೆಯುವುದರೊಳಗೆ ಸ್ಥಾವರ-ಜಂಗಮಗಳೆಲ್ಲವೂ ನಾಶಹೊಂದಿ ಭೂಮಿಯು ಸುತ್ತಲೂ ಆಮೆಯ ಬೆನ್ನಿನಂತೆ ಕಾಣುತ್ತದೆ. ಆ ಅಮಿತಬಲಶಾಲಿಯು ಜಗತ್ತನ್ನು ಭಸ್ಮಮಾಡಿ ಉಳಿದ ಕೇವಲ ಭೂಮಿಯನ್ನು ಪ್ರಬಲವಾದ ನೀರಿನ ಪ್ರವಾಹದಿಂದ ಬೇಗನೇ ಎಲ್ಲಕಡೆಗಳಿಂದ ತುಂಬುತ್ತಾನೆ. ರಾಜೇಂದ್ರ! ಅನಂತರ ಕಾಲಾಗ್ನಿಗೆ ಸಿಲುಕಿ ನೀರು ಬತ್ತಿಹೋಗುತ್ತದೆ. ನೀರು ನಷ್ಟವಾದ ನಂತರ ಆ ಮಹಾ ಅನಲನು ಪ್ರಜ್ವಲಿಸುತ್ತಾನೆ. ಸರ್ವಭೂತಗಳಿಗೂ ಶಾಖವನ್ನುಂಟುಮಾಡುವ ಮಹಾಬಲ ಧಗ-ಧಗಿಸುತ್ತಿರುವ ಏಳು ವಿಧದ ಜ್ವಾಲೆಗಳಿಂದ ಕೂಡಿದ ಅಗ್ನಿಯನ್ನು ಅಪ್ರಮೇಯ ಮಹಾಬಲಿಷ್ಠ ಭಗವಾನ್ ವಾಯುವು ಎಂಟು ವಿಧದ ರೂಪಗಳನ್ನು ಧರಿಸಿ ಮೇಲೆ-ಕೆಳಗೆ ಮತ್ತು ಅಡ್ಡಡ್ಡವಾಗಿ ರಭಸದಿಂದ ಬೀಸುತ್ತಾ ಭಕ್ಷಿಸಿಬಿಡುತ್ತಾನೆ. ಆ ಅಪ್ರತಿಮ ಬಲಶಾಲೀ ಭಯಂಕರ ವಾಯುವನ್ನು ಆಕಾಶವು ನುಂಗಿಬಿಡುತ್ತದೆ. ಗರ್ಜನ-ತರ್ಜನಗಳನ್ನು ಮಾಡುವ ಆಕಾಶವನ್ನು ಅದಕ್ಕಿಂತಲೂ ಅಧಿಕ ಬಲಶಾಲಿಯಾದ ಮನಸ್ಸು ನುಂಗಿಬಿಡುತ್ತದೆ. ಸರ್ವಾತ್ಮಾ ಪ್ರಜಾಪತಿ ಅಹಂಕಾರವು ಮನಸ್ಸನ್ನು ನುಂಗುತ್ತದೆ. ಅನಂತರ ಭೂತ-ಭವ್ಯ-ಭವಿಷ್ಯತ್ತುಗಳನ್ನು ತಿಳಿದಿರುವ ಮಹಾನ್ ಆತ್ಮವು ಅಹಂಕಾರವನ್ನು ನುಂಗುತ್ತದೆ. ಅನಂತರ ಎಲ್ಲಕಡೆಗಳಲ್ಲಿಯೂ ಕೈ-ಕಾಲು-ಕಣ್ಣು-ಶಿರಸ್ಸು-ಮುಖ-ಕಿವಿಗಳಿರುವ, ಸಮಸ್ತಲೋಕಗಳನ್ನೂ ಆವರಿಸಿ ನಿಂತಿರುವ, ಅಂಗುಷ್ಠದ ಗಿಣ್ಣಿನಷ್ಟು ಮಾತ್ರವೇ ಆಕಾರದಲ್ಲಿ ಎಲ್ಲ ಪ್ರಾಣಿಗಳ ಹೃದಯಗಳಲ್ಲಿಯೂ ವಿರಾಜಮಾನನಾಗಿರುವ, ಅಣಿಮ-ಲಘಿಮಾ-ಪ್ರಾಪ್ತಿ ಮೊದಲಾದ ಅಷ್ಟೈಶ್ವರ್ಯಗಳಿಗೆ ಒಡೆಯನಾಗಿರುವ, ಜ್ಯೋತಿ, ಅವ್ಯಯ ಮಹಾತ್ಮ ವಿಶ್ವದ ಈಶ್ವರನು ಅನಂತ ಮಹತ್ತತ್ತ್ವವನ್ನು ನುಂಗುತ್ತಾನೆ. ಆಗ ಅಕ್ಷಯ ಅವ್ಯಯ ನಿರ್ವಿಕಾರ ಪರಮಾತ್ಮನ ಸ್ವರೂಪವೇ ಎಲ್ಲವೂ ಆಗುತ್ತವೆ. ಅವನಿಂದಲೇ ಭೂತ-ಭವ್ಯ-ಮನುಷ್ಯರ ಸ್ರಷ್ಟಾರ ಅನಘನ ಸೃಷ್ಟಿಯೂ ಆಗುತ್ತದೆ. ರಾಜೇಂದ್ರ! ಹೀಗೆ ನಾನು ಸಂಹಾರಕ್ರಮವನ್ನು ಯಥಾವತ್ತಾಗಿ ಹೇಳಿದ್ದೇನೆ. ಮುಂದೆ ನೀನು ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವಗಳ ಕುರಿತು ಕೇಳು.

ತತ್ತ್ವದರ್ಶಿ ಬ್ರಾಹ್ಮಣರು ಎರಡು ಕಾಲುಗಳನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೋಗಬೇಕಾದ ಸ್ಥಾನವು ಅಧಿಭೂತ. ವಿಷ್ಣುವು ಅದರ ಅಧಿದೈವತನು. ತತ್ತ್ವಾರ್ಥದರ್ಶಿಗಳು ಗುದವನ್ನು ಅಧ್ಯಾತ್ಮವೆನ್ನುತ್ತಾರೆ. ಮಲತ್ಯಾಗವು ಅಧಿಭೂತ ಮತ್ತು ಮಿತ್ರವು ಅಧಿದೈವತವು. ಯೋಗನಿದರ್ಶವನ್ನು ತಿಳಿದವರು ಜನನೇಂದ್ರಿಯವು ಅಧ್ಯಾತ್ಮ. ಆನಂದವು ಅಧಿಭೂತ ಮತ್ತು ಪ್ರಜಾಪತಿಯು ಅಧಿದೈವತ ಎಂದು ಹೇಳುತ್ತಾರೆ. ಸಾಂಖ್ಯನಿದರ್ಶನದಂತೆ ಹಸ್ತಗಳು ಅಧ್ಯಾತ್ಮವು. ಕರ್ತವ್ಯವು ಅಧಿಭೂತ. ಇಂದ್ರನು ಅವುಗಳ ಅಧಿದೈವತ. ಶ್ರುತಿನಿದರ್ಶನವನ್ನು ತಿಳಿದವರು ಮಾತನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೇಳಬೇಕಾದುದನ್ನು ಅಧಿಭೂತವು. ಅಗ್ನಿಯು ಅಲ್ಲಿ ಅಧಿದೇವತೆಯು. ಶ್ರುತಿನಿದರ್ಶನದಂತೆ ಕಣ್ಣುಗಳನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಅಲ್ಲಿ ರೂಪವು ಅಧಿಭೂತ ಮತ್ತು ಸೂರ್ಯನು ಅಧಿದೈವತ. ಶ್ರುತಿನಿದರ್ಶನದಂತೆ ಕಿವಿಗಳು ಅಧ್ಯಾತ್ಮವೆಂದು ಹೇಳುತ್ತಾರೆ. ಅದರಲ್ಲಿ ಶಬ್ದವು ಅಧಿಭೂತ ಮತ್ತು ದಿಕ್ಕುಗಳು ಅಧಿದೇವತೆ. ತತ್ತ್ವನಿದರ್ಶನದಂತೆ ನಾಲಿಗೆಯನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ರಸವು ಇದರ ಅಧಿಭೂತ ಮತ್ತು ಆಪವು ಅಧಿದೇವತೆ. ಶ್ರುತಿನಿದರ್ಶನದಂತೆ ಮೂಗನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಗಂಧವು ಇದರ ಅಧಿಭೂತ ಮತ್ತು ಪೃಥ್ವಿಯು ಅಧಿದೇವತೆ. ತತ್ತ್ವಬುದ್ಧಿವಿಶಾರದರು ಚರ್ಮವನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಸ್ಪರ್ಶವು ಇದರ ಅಧಿಭೂತ ಮತ್ತು ವಾಯುವು ಅಧಿದೇವತೆ. ಶ್ರುತಿನಿದರ್ಶನದಂತೆ ಮನಸ್ಸನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಮನನಮಾಡಬೇಕಾದುದು ಅಧಿಭೂತ ಮತ್ತು ಚಂದ್ರನು ಅಧಿದೇವತೆ. ತತ್ತ್ವನಿದರ್ಶನದಂತೆ ಅಹಂಕಾರವನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಅಭಿಮಾನವು ಅಧಿಭೂತ ಮತ್ತು ಭವನು ಅಧಿದೇವತೆ. ವೇದನಿದರ್ಶನದಂತೆ ಬುದ್ಧಿಯನ್ನು ಅಧ್ಯಾತ್ಮವೆನ್ನುತ್ತಾರೆ. ತಿಳಿದುಕೊಳ್ಳಬೇಕಾದುದು ಅಧಿಭೂತ. ಕ್ಷೇತ್ರಜ್ಞನು ಅದರ ಅಧಿದೇವತೆ. ತತ್ತ್ವವಿದುವೇ! ರಾಜನ್! ಸೃಷ್ಟಿ, ಮಧ್ಯಕಾಲ ಮತ್ತು ಅಂತ್ಯಕಾಲಗಳಲ್ಲಿ ಯಥಾವತ್ತಾಗಿ ಪ್ರಕಾಶಿಸುವ ವ್ಯಕ್ತಿಗತ ವಿಭೂತಿಗಳನ್ನು ಹೇಳಿದ್ದೇನೆ.

ಮಹಾರಾಜ! ಪ್ರಕೃತಿಯು ಸ್ವಚ್ಛಂದದಿಂದ ಆಟವಾಡುವ ಸಲುವಾಗಿ ನೂರಾರು ಸಹಸ್ರಾರು ಗುಣಗಳನ್ನು ಉಂಟುಮಾಡುತ್ತದೆ. ಮನುಷ್ಯನು ಹೇಗೆ ಒಂದು ದೀಪದಿಂದ ಸಾವಿರಾರು ದೀಪಗಳನ್ನು ಹಚ್ಚುವನೋ ಹಾಗೆ ಪ್ರಕೃತಿಯು ಪುರುಷನ ಸಲುವಾಗಿ ಒಂದು ಗುಣದಿಂದ ಅನೇಕ ಗುಣಗಳನ್ನು ಸೃಷ್ಟಿಸುತ್ತದೆ. ಸತ್ತ್ವ, ಆನಂದ, ಉದ್ರೇಕ, ಪ್ರೀತಿ, ಪ್ರಕಾಶ, ಸುಖ, ಶುದ್ಧಿ, ಆರೋಗ್ಯ, ಸಂತೋಷ, ಶ್ರದ್ಧೆ, ದೀನತೆಯಿಲ್ಲದಿರುವುದು, ಕ್ರೋಧವಿಲ್ಲದಿರುವುದು, ಕ್ಷಮೆ, ಧೃತಿ, ಅಹಿಂಸತಾ, ಸಮತಾ, ಸತ್ಯ, ಯಾರಿಗೂ ಋಣಿಯಾಗದಿರುವಿಕೆ, ಮೃದುತ್ವ, ಲಜ್ಜೆ, ಅಚಪಲತೆ, ಶೌಚ, ಸರಳತೆ, ಸದಾಚಾರ, ಅಲೋಲುಪತೆ, ಇಷ್ಟ-ಅನಿಷ್ಟ-ವಿಯೋಗಗಳಲ್ಲಿ ಹೃದಯವು ಸಂಭ್ರಮಿಸದೇ ಇರುವುದು, ಮಾಡಿದುದನ್ನು ಕೊಚ್ಚಿಕೊಳ್ಳದೇ ಇರುವುದು, ದಾನದಿಂದ ಸರ್ವವನ್ನೂ ತ್ಯಾಗಮಾಡಿ ಆತ್ಮಾನುಸಂಧಾನಮಾಡುವುದು, ಇತರರ ವಸ್ತುವಿನಲ್ಲಿ ನಿಸ್ಪ್ರುಹತೆಯಿಂದಿರುವುದು, ಪರೋಪಕಾರಮಾಡುವುದು, ಸರ್ವಭೂತದಯೆ ಇವೆಲ್ಲವು ಸತ್ತ್ವಗುಣಗಳೆಂದು ಹೇಳಲ್ಪಟ್ಟಿವೆ. ರೂಪ, ಐಶ್ವರ್ಯ, ಕಲಹ, ತ್ಯಾಗದ ಅಭಾವ, ನಿಷ್ಕರುಣೆ, ಸುಖ-ದುಃಖಗಳ ಉಪಭೋಗ, ಪರನಿಂದೆಯಲ್ಲಿ ಆಸಕ್ತಿ, ವಾದ-ವಿವಾದಗಳಲ್ಲಿ ಅಭಿರುಚಿ, ಅಹಂಕಾರ, ಮಾನನೀಯರನ್ನು ಸತ್ಕರಿಸದಿರುವುದು, ಚಿಂತೆ, ವೈರಭಾವ, ಸಂತಾಪ, ಪರವಿತ್ತವನ್ನು ಅಪಹರಿಸುವುದು, ನಿರ್ಲಜ್ಜೆ, ಕುಟಿಲತೆ, ಬೇದಬುದ್ಧಿ, ಕ್ರೌರ್ಯ, ಕಾಮ, ಕ್ರೋಧ, ಮದ, ದರ್ಪ, ದ್ವೇಷ, ಹೆಚ್ಚುಮಾತು – ಇವೆಲ್ಲವೂ ರಜಸ್ಸಿನ ಗುಣಗಳೆಂದು ಹೇಳಲ್ಪಟ್ಟಿವೆ. ಮೋಹ, ಅಜ್ಞಾನ, ಕತ್ತಲೆ, ಕಗ್ಗತ್ತಲೆ – ಇವು ತಮೋಗುಣದ ಲಕ್ಷಣಗಳು. ಕ್ರೋಧವನ್ನು ಕತ್ತಲೆಯೆಂದು ಹೇಳುತ್ತಾರೆ. ಕಗ್ಗತ್ತಲೆಯು ಮರಣವೆಂದು ಹೇಳುತ್ತಾರೆ. ಯಾವಾಗಲೂ ತಿನ್ನುತ್ತಿರಬೇಕೆಂಬ ಆಸೆ, ಎಷ್ಟು ಊಟಮಾಡಿದರೂ ತೃಪ್ತಿಯಾಗದೇ ಇರುವುದು, ಎಷ್ಟು ಕುಡಿದರೂ ತೃಪ್ತಿಯಾಗದೇ ಇರುವುದು, ದುರ್ಗಂಧಯುಕ್ತ ಮಲಿನ ಬಟ್ಟೆಗಳನ್ನು ಧರಿಸುವುದು, ಅನುಚಿತ ವಿಹಾರ, ಮಲಗುವುದು, ಮತ್ತು ಯಾವಾಗಲೂ ಸುಮ್ಮನೇ ಕುಳಿತಿರುವುದರಲ್ಲಿ ಹೆಚ್ಚಿನ ಆಸಕ್ತಿ, ಹಗಲು ನಿದ್ದೆ, ವಾದ-ವಿವಾದ ಮತ್ತು ಪ್ರಮಾದಗಳಲ್ಲಿ ಪ್ರೀತಿ, ನೃತ್ಯ-ಗೀತ-ವಿವಿಧ ವಾದ್ಯಸಂಗೀತಗಳಲ್ಲಿ ಅತಿ ಶ್ರದ್ಧೆ, ಧರ್ಮಕಾರ್ಯಗಳ ಕುರಿತು ದ್ವೇಷ -ಇವುಗಳೆಲ್ಲವೂ ತಮಸ್ಸಿನ ಗುಣಗಳು.

ಪುರುಷಸತ್ತಮ! ಈ ಮೂರು ಪ್ರಕೃತಿಯ ಗುಣಗಳಾಗಿವೆ. ಈ ಗುಣಗಳು ಸಂಪೂರ್ಣಜಗತ್ತನ್ನೂ ವ್ಯಾಪಿಸಿಕೊಂಡಿವೆ. ಯಾವಾಗಲೂ ಈ ಗುಣಗಳು ಜಗತ್ತನ್ನು ಬಿಟ್ಟುಹೋಗುವುದೇ ಇಲ್ಲ. ಅವ್ಯಕ್ತನು ಪ್ರಕೃತಿಯ ಸಾಹಚರ್ಯದಿಂದ ನೂರಾರು, ಸಾವಿರಾರು, ಲಕ್ಷೋಪಲಕ್ಷ, ಕೋಟ್ಯಾನುಕೋಟಿ ರೂಪಗಳನ್ನು ತನ್ನಿಂದಲೇ ಪ್ರಕಟಪಡಿಸಿಕೊಳ್ಳುತ್ತಾನೆ. ಆಧ್ಯಾತ್ಮಚಿಂತಕರು ಸಾತ್ತ್ವಿಕನು ಉತ್ತಮನೆಂದೂ, ರಾಜಸನು ಮಧ್ಯಮನೆಂದೂ ಮತ್ತು ತಾಮಸನು ಅಧಮನೆಂದೂ ಹೇಳುತ್ತಾರೆ. ಕೇವಲ ಪುಣ್ಯಕಾರ್ಯಗಳಿಂದಲೇ ಜೀವವು ಮೇಲಿನ ಲೋಕವನ್ನು ಪಡೆದುಕೊಳ್ಳುತ್ತದೆ. ಪುಣ್ಯ ಮತ್ತು ಪಾಪಕರ್ಮಗಳೆರಡನ್ನೂ ಮಾಡುವುದರಿಂದ ಮಾನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ. ಅಧರ್ಮದಿಂದ ಅಧೋಗತಿಯನ್ನು ಪಡೆದುಕೊಳ್ಳುತ್ತದೆ. ಸತ್ತ್ವ, ರಜಸ್ಸು, ತಮೋಗುಣ ಈ ಮೂರರ ದ್ವಂದ್ವ ಮತ್ತು ಸಂನಿಪಾತಗಳ ಪರಿಣಾಮಗಳನ್ನು ಯಥಾವತ್ತಾಗಿ ಹೇಳುತ್ತೇನೆ. ಕೇಳು. ಸತ್ತ್ವದೊಂದಿಗೆ ರಜೋಗುಣವು ಸೇರಿರುವುದು, ರಜೋಗುಣದೊಂದಿಗೆ ತಮೋಗುಣವು ಸೇರಿರುವುದು ಮತ್ತು ತಮೋಗುಣದೊಂದಿಗೆ ಸತ್ತ್ವಗುಣವು ಸೇರಿರುವುದು ಕಂಡುಬರುತ್ತದೆ. ಅವ್ಯಕ್ತವು ಕೇವಲ ಸತ್ತ್ವದೊಂದಿಗೆ ಸೇರಿರುವುದೂ ಕಂಡುಬರುತ್ತದೆ. ಅವ್ಯಕ್ತ-ಸತ್ತ್ವ ಸಂಯುಕ್ತನಾದ ಜೀವವು ದೇವಲೋಕವನ್ನು ಪಡೆದುಕೊಳ್ಳುತ್ತದೆ. ರಜಸ್ಸು ಮತ್ತು ಸತ್ತ್ವ ಸಮಾಯುಕ್ತ ಜೀವವು ಮನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ. ರಜೋಗುಣ ಮತ್ತು ತಮೋಗುಣಗಳ ಸಂಯುಕ್ತ ಜೀವವು ಕೀಳಯೋನಿಯನ್ನು ಪಡೆದುಕೊಳ್ಳುತ್ತದೆ. ರಜೋಗುಣ-ತಮೋಗುಣ ಮತ್ತು ಸತ್ತ್ವಗುಣ ಯುಕ್ತವಾದ ಜೀವವು ಮಾನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ. ಪುಣ್ಯ-ಪಾಪಗಳಿಂದ ಮುಕ್ತರಾದವರು ಶಾಶ್ವತವೂ, ಅವ್ಯಯವೂ ಮತ್ತು ಅಕ್ಷರವೂ ಆದ ಅಭಯವನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿದವರು ಹೇಳುತ್ತಾರೆ. ಜ್ಞಾನಿಗಳಿಗೆ ಅವಿನಾಶಿಯಾದ, ಚ್ಯುತವಾಗದ, ಇಂದ್ರಿಯಾತೀತವಾದ, ಪಾಪ-ಪುಣ್ಯಗಳಿಗೆ ಅವಕಾಶವೇ ಇಲ್ಲದ, ಹುಟ್ಟು-ಸಾವುಗಳನ್ನೂ ಅಜ್ಞಾನವನ್ನೂ ತೊಡೆದುಹಾಕುವ ಶ್ರೇಷ್ಠ ಪರಮ ಪದವು ಪ್ರಾಪ್ತವಾಗುತ್ತದೆ. ನರಾಧಿಪ! ಅವ್ಯಕ್ತಸ್ಥನಾದ ಪರಮಾತ್ಮನ ಕುರಿತು ನೀನು ಹೇಳಿದುದಕ್ಕೆ ಉತ್ತರವು ಇದಾಗಿದೆ. ಅವನೇ ಶರೀರದಲ್ಲಿರುವುದರಿಂದ ಅವನನ್ನು ಪ್ರಕೃತಿಸ್ಥನೆಂದೂ ಕರೆಯುತ್ತಾರೆ. ಪಾರ್ಥಿವ! ಅಚೇತನ ಅಥವಾ ಜಡವಾಗಿದ್ದರೂ ಪ್ರಕೃತಿಯು ಅವ್ಯಕ್ತ ಪರಮಾತ್ಮನಿಂದ ಆಶ್ರಯಿಸಲ್ಪಟ್ಟಿರುವುದರಿಂದ ಸೃಷ್ಟಿ-ಸಂಹಾರ ಕಾರ್ಯಗಳನ್ನು ಮಾಡುತ್ತದೆ.”

ಜನಕನು ಹೇಳಿದನು:

“ಮಹಾಮುನೇ! ಪ್ರಕೃತಿ-ಪುರುಷರಿಬ್ಬರೂ ಅನಾದಿನಿಧನರು. ಅಮೂರ್ತರು. ಅಚಲರು. ತಮ್ಮ ತಮ್ಮ ಗುಣಗಳಲ್ಲಿ ಸ್ಥಿರವಾಗಿರತಕ್ಕವರು ಮತ್ತು ನಿರ್ಗುಣರು. ಋಷಿಶಾರ್ದೂಲ! ಅವರು ಬುದ್ಧಿಗೆ ಅಗೋಚರರು. ಹೀಗಿರುವಾಗ ಅವುಗಳಲ್ಲಿ ಒಂದೇ ಹೇಗೆ ಜಡವಾಯಿತು? ಮತ್ತೊಂದು ಚೇತನವುಳ್ಳದ್ದು ಹೇಗಾಯಿತು? ಮತ್ತು ಅದನ್ನು ಕ್ಷೇತ್ರಜ್ಞ ಎಂದು ಏಕೆ ಕರೆಯುತ್ತಾರೆ?  ವಿಪ್ರೇಂದ್ರ! ನೀನು ಸಂಪೂರ್ಣವಾಗಿ ಮೋಕ್ಷಧರ್ಮವನ್ನು ಉಪಾಸಿಸುತ್ತೀದ್ದೀಯೆ. ಆದುದರಿಂದ ಸಂಪೂರ್ಣ ಮೋಕ್ಷಧರ್ಮವನ್ನು ತತ್ತ್ವತಃ ನಿನ್ನಿಂದ ಕೇಳಬೇಕೆಂದಿದ್ದೇನೆ. ಪುರುಷನ ಅಸ್ತಿತ್ವ, ಕೇವಲತ್ವ, ಪ್ರಕೃತಿಯೊಂದಿಗೆ ಸಂಬಂಧವಿಲ್ಲದೇ ಇರುವಿಕೆ ಮತ್ತು ಮರಣಹೊಂದುತ್ತಿರುವ ದೇಹಿಯ ಉತ್ಕ್ರಮಣಸ್ಥಾನವು ಯಾವುದು ಮತ್ತು ದ್ವಿಜ! ಮರಣಾನಂತರ ಅವನು ಯಾವ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನುವುದನ್ನೂ ನೀನು ನನಗೆ  ಹೇಳು. ಸತ್ತಮ! ಸಾಂಖ್ಯಜ್ಞಾನವನ್ನು ಮತ್ತು ಪ್ರತ್ಯೇಕವಾಗಿ ಯೋಗಜ್ಞಾನವನ್ನೂ, ಮೃತ್ಯುಸೂಚಕ ಲಕ್ಷಣಗಳನ್ನೂ ತತ್ತ್ವಪೂರ್ವಕವಾಗಿ ಹೇಳಬೇಕು. ಅಂಗೈಯಲ್ಲಿರುವ ನೆಲ್ಲೀಕಾಯಿಯಂತೆ ನಿನಗೆ ಈ ವಿಷಯಗಳೆಲ್ಲವೂ ಸಂಪೂರ್ಣವಾಗಿ ತಿಳಿದಿವೆ.”

ಯಾಜ್ಞವಲ್ಕ್ಯನು ಹೇಳಿದನು:

“ವಿಶಾಂಪತೇ! ಅಯ್ಯಾ! ನಿರ್ಗುಣನನ್ನು ಸಗುಣನನ್ನಾಗಿ ಮಾಡಲು ಶಕ್ಯವಿಲ್ಲ. ಹಾಗೆಯೇ ಸಗುಣನನ್ನು ನಿರ್ಗುಣನನ್ನಾಗಿ ಮಾಡಲು ಸಾಧ್ಯವಿಲ್ಲ. ಅದರ ಕುರಿತು ಯಥಾತತ್ತ್ವವನ್ನು ಕೇಳು. ಗುಣಗಳೊಡನೆ ಸಂಪರ್ಕವಿರುವವನನ್ನು ಗುಣವಂತನೆಂದೂ ಗುಣಗಳೊಡನೆ ಸಂಪರ್ಕವಿಲ್ಲದವನನ್ನು ನಿರ್ಗುಣನೆಂದೂ ತತ್ತ್ವದರ್ಶಿ ಮಹಾತ್ಮರು ಹೇಳುತ್ತಾರೆ. ಅವ್ಯಕ್ತಪ್ರಕೃತಿಯು ಸ್ವಾಭಾವಿಕವಾಗಿಯೇ ಗುಣಯುಕ್ತವಾದುದು. ಅದು ಎಂದೂ ಗುಣಗಳನ್ನು ಅತಿಕ್ರಮಿಸುವುದಿಲ್ಲ. ಆ ಗುಣಗಳನ್ನೇ ತನ್ನ ಅಸ್ತಿತ್ವಕ್ಕಾಗಿ ಸರ್ವದಾ ಉಪಯೋಗಿಸಿಕೊಳ್ಳುತ್ತದೆ. ಮತ್ತು ಅವ್ಯಕ್ತವು ಸ್ವಭಾವತಃ ಅಜ್ಞಾನಿಯೂ ಆಗಿದೆ. ಅವ್ಯಕ್ತ ಪ್ರಕೃತಿಗೆ ತನ್ನ ಜೊತೆಯಿರುವ ಪುರುಷನು ಸ್ವಭಾವತಃ ಜ್ಞಾನಿ ಎನ್ನುವುದನ್ನು ತಿಳಿದಿರುವುದಿಲ್ಲ. ಆದುದರಿಂದ ಅದು ತನಗಿಂತಲೂ ಶೇಷ್ಠವಾದುದು ಬೇರೆ ಯಾವುದೂ ಇಲ್ಲವೆಂದು ನಿತ್ಯವೂ ಭಾವಿಸಿಕೊಳ್ಳುತ್ತದೆ. ಈ ಕಾರಣದಿಂದಲೇ ಅವ್ಯಕ್ತಪ್ರಕೃತಿಯು ಜಡವಾಗಿದೆ. ಅದು ನಿತ್ಯವೂ ಕ್ಷರವೂ, ವಿಕಾರಶೀಲವೂ ಮತ್ತು ವಿನಾಶಶೀಲವು ಆಗಿರುವುದರಿಂದ ಪ್ರಕೃತಿಯು ಜಡವಲ್ಲದೇ ಬೇರೆ ಯಾವುದೂ ಆಗಲು ಸಾಧ್ಯವೇ ಇಲ್ಲ. ಎಲ್ಲಿಯವರೆಗೆ ಚೇತನನು ಅಜ್ಞಾನದಿಂದ ಗುಣಗಳ ಸಂಸರ್ಗವನ್ನು ಪುನಃ ಪುನಃ ಮಾಡುತ್ತಿರುತ್ತಾನೋ ಮತ್ತು ತನ್ನ ಅಸಂಗ ಸ್ವರೂಪವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವನು ಅವ್ಯಕ್ತನೆಂದೇ ಕರೆಯಲ್ಪಡುತ್ತಾನೆ. ತತ್ತ್ವಗಳ ಕರ್ತೃತ್ವದಿಂದಾಗಿ ಅವನನ್ನು ತತ್ತ್ವಧರ್ಮಿ ಎಂದು ಕರೆಯುತ್ತಾರೆ. ಯೋನಿಗಳ ಕರ್ತೃತ್ವದಿಂದ ಅವನನ್ನು ಯೋನಿಧರ್ಮಾ ಎಂದು ಕರೆಯುತ್ತಾರೆ. ಪ್ರಕೃತಿಗಳ ಕರ್ತೃತ್ವದಿಂದ ಅವನನ್ನು ಪಕೃತಿಧರ್ಮೀ ಎಂದೂ ಬೀಜಗಳ ಕರ್ತೃತ್ವದಿಂದಾಗಿ ಅವನನ್ನು ಬೀಜಧರ್ಮೀ ಎಂದೂ ಕರೆಯುತ್ತಾರೆ. ಗುಣಗಳ ಸೃಷ್ಟಿಯನ್ನು ಮಾಡುವುದರಿಂದ ಅವನನ್ನು ಪ್ರಸವಧರ್ಮನೆಂದೂ ಮತ್ತು ಪ್ರಲಯಗಳ ಕರ್ತೃತ್ವದಿಂದ ಪ್ರಲಯಧರ್ಮನೆಂದೂ ಕರೆಯುತ್ತಾರೆ. ಪೃಕೃತಿಗೆ ಮತ್ತು ಪ್ರಲಯಕ್ಕೆ ಬೀಜರೂಪವಾಗಿರುವುದರಿಂದ, ಪ್ರಕೃತಿಗೆ ಸಾಕ್ಷಿಯಾಗಿರುವುದರಿಂದ, ಪ್ರಕೃತಿಯಿಂದ ಅನ್ಯವಾಗಿರುವುದರಿಂದ ಮತ್ತು ಅದ್ವಿತೀಯವಾಗಿರುವುದರಿಂದ ಅದನ್ನು ಕೇವಲ ಎಂದು ಕರೆಯುತ್ತಾರೆ. ಆಧ್ಯಾತ್ಮಜ್ಞ ಚಿಂತಾರಹಿತ ಸಿದ್ಧ ಯತಿಗಳಿಂದ ಇದನ್ನು ಕೇಳಿದ್ದೇವೆ: ಪುರುಷನು ನಿತ್ಯವೂ ಅವ್ಯಕ್ತನೂ ಆಗಿದ್ದರೂ ಪ್ರಕೃತಿಯ ಸಂಸರ್ಗದಿಂದ ಅನಿತ್ಯನೂ ವ್ಯಕ್ತನೂ ಆಗಿ ಕಾಣಿಸುತ್ತಾನೆ. ಸರ್ವಭೂತದಯಾವಂತರು ಮತ್ತು ಕೇವಲ ಜ್ಞಾನವನ್ನಾಶ್ರಯಿಸಿರುವವರು ಪ್ರಕೃತಿಯು ಒಂದು ಮತ್ತು ಪುರುಷನು ಅನೇಕ ಎಂದು ಅಭಿಪ್ರಾಯಪಡುತ್ತಾರೆ. ಪುರುಷನು ಪ್ರಕೃತಿಗಿಂತ ಭಿನ್ನನು ಹಾಗೂ ಅವ್ಯಕ್ತ ಪ್ರಕೃತಿಯು ಪುರುಷನಿಗಿಂತ ಭಿನ್ನ ಹಾಗೂ ಅನಿತ್ಯವಾದುದು. ಜಂಡು ಹುಲ್ಲಿನಿಂದ ಮುಂಜವನ್ನು ಹೇಗೆ ಬೇರ್ಪಡಿಸಬಹುದೋ ಹಾಗೆ ಪ್ರಕೃತಿಯೂ ಪುರುಷನಿಂದ ಬೇರೆಯಾಗಿದೆ. ಅತ್ತಿ ಹಣ್ಣು ಮತ್ತು ಅದರಲ್ಲಿರುವ ಕೀಟಗಳು ಜೊತೆಯಲ್ಲಿಯೇ ಒಂದಾಗಿದ್ದರೂ ಹೇಗೆ ಬೇರೆ ಬೇರೆ ತೋರುತ್ತವೆಯೋ, ಅತ್ತೀಹಣ್ಣಿನ ಸಂಸರ್ಗದಿಂದ ಕೀಟವು ಹೇಗೆ ಅದರಲ್ಲಿ ಲಿಪ್ತವಾಗಿರುವುದಿಲ್ಲವೋ ಮತ್ತು ಮೀನು ಮತ್ತು ನೀರು ಹೇಗೆ ಪ್ರತ್ಯೇಕ ವಸ್ತುಗಳೋ ಮತ್ತು ಹೇಗೆ ನೀರಿನ ಸ್ಪರ್ಶದಿಂದ ಯಾವ ಮೀನೂ ಎಂದೂ ನೀರಿನಲ್ಲಿ ಲಿಪ್ತವಾಗುವುದಿಲ್ಲವೋ ಹಾಗೆಯೇ ಪ್ರಕೃತಿ ಮತ್ತು ಪುರುಷರು ಬೇರೆ ಬೇರೆ. ಹೇಗೆ ಅಗ್ನಿ ಮತ್ತು ಮಣ್ಣಿನ ಇಟ್ಟಿಗೆಗಳು ಪ್ರತ್ಯೇಕ ವಸ್ತುಗಳೋ ಹಾಗೆ ಪ್ರಕೃತಿ ಮತ್ತು ಪುರುಷರ ಭೇದವನ್ನು ನಿತ್ಯ ತಿಳಿದುಕೋ. ಗಡಿಗೆಯಲ್ಲಿರುವ ಅಗ್ನಿಯು ಗಡಿಗೆಯ ಸಂಸ್ಪರ್ಷದಿಂದ ದೂಷಿತಗೊಳ್ಳುವುದಿಲ್ಲ. ಕಮಲ ಮತ್ತು ನೀರು ಹೇಗೆ ಬೇರೆ ಬೇರೆಯಾಗಿರುವವೋ ಮತ್ತು ನೀರಿನ ಸ್ಪರ್ಷದಂತೆ ಕಮಲವು ಹೇಗೆ ನೀರಿನಲ್ಲಿ ಲಿಪ್ತವಾಗುವುದಿಲ್ಲವೋ ಹಾಗೆ ಪ್ರಕೃತಿ-ಪುರುಷರು ಭಿನ್ನರು ಮತ್ತು ಅಸಂಗರು. ಪ್ರಾಕೃತ ಜನರು ಇವರ ಸಹವಾಸ ಮತ್ತು ನಿವಾಸಗಳನ್ನು ಎಂದೂ ಸರಿಯಾಗಿ ತಿಳಿಯಲಾರರು. ಇವೆರಡರ ಸ್ವರೂಪಗಳನ್ನು ಯಾರು ಅನ್ಯಥಾ ತಿಳಿದಿರುತ್ತಾರೋ ಅಂದರೆ ಪ್ರಕೃತಿ ಮತ್ತು ಪುರುಷರು ಪರಸ್ಪರ ಭಿನ್ನರಲ್ಲ ಎಂದು ತಿಳಿದಿರುತ್ತಾರೋ ಅವರ ದೃಷ್ಟಿಯು ಸರಿಯಲ್ಲ. ಅವರು ಅವಶ್ಯವಾಗಿ ಪುನಃ ಪುನಃ ಘೋರ ನರಕಗಳಲ್ಲಿ ಬೀಳುತ್ತಾರೆ. ಹೀಗೆ ನಾನು ನಿನಗೆ ಈ ಉತ್ತಮ ಸಾಂಖ್ಯದರ್ಶನವನ್ನು ವರ್ಣಿಸಿದ್ದೇನೆ. ಸಾಂಖ್ಯರು ಇದನ್ನು ತಿಳಿದು ಕೈವಲ್ಯವನ್ನು ಹೊಂದುತ್ತಾರೆ. ಅನ್ಯ ತತ್ತ್ವಕುಶಲರದ್ದೂ ಇದೇ ನಿದರ್ಶನವಾಗಿದೆ. ಇನ್ನು ಮುಂದೆ ನಾನು ನಿನಗೆ ಯೋಗಿಗಳ ದರ್ಶನದ ಕುರಿತು ಹೇಳುತ್ತೇನೆ.

ನೃಪಸತ್ತಮ! ನಾನು ನಿನಗೆ ಸಾಂಖ್ಯಜ್ಞಾನದ ಕುರಿತು ಹೇಳಿದೆನು. ಈಗ ಯೋಗಜ್ಞಾನದ ಕುರಿತು ನಾನು ಹೇಗೆ ಕೇಳಿರುವೆನೋ ಮತ್ತು ಹೇಗೆ ಅನುಭವದಲ್ಲಿ ಕಂಡುಕೊಂಡಿರುವೆನೋ ಅದನ್ನು ಯಥಾವತ್ತಾಗಿ ಕೇಳು. ಸಾಂಖ್ಯಸಮನಾದ ಜ್ಞಾನವಿಲ್ಲ ಮತ್ತು ಯೋಗಸಮನಾದ ಬಲವಿಲ್ಲ. ಇವೆರಡರ ಲಕ್ಷ್ಯವೂ ಒಂದೇ ಮತ್ತು ಇವೆರಡೂ ಮೃತ್ಯುನಿವಾರಣ ಕಾರಕವೆಂದು ಹೇಳಿದ್ದಾರೆ. ಅಲ್ಪಬುದ್ಧಿರತ ನರರು ಸಾಂಖ್ಯ ಮತ್ತು ಯೋಗಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡುತ್ತಾರೆ. ರಾಜನ್! ನಾನಾದರೋ ಇವೆರಡೂ ಒಂದೇ ಎಂದು ನಿಶ್ಚಯಿಸಿದ್ದೇನೆ. ಯೋಗಿಗಳು ಯಾವ ತತ್ತ್ವದ ಸಾಕ್ಷಾತ್ಕಾರವನ್ನು ಕಾಣುತ್ತಾರೋ ಅದನ್ನೇ ಸಾಂಖ್ಯದಲ್ಲಿಯೂ ನೋಡಬಹುದು. ಆದುದರಿಂದ ಸಾಂಖ್ಯ ಮತ್ತು ಯೋಗಗಳನ್ನು ಒಂದೇ ಎಂದು ಕಾಣುವವನೇ ತತ್ತ್ವವಿದುವು. ಪರಂತಪ! ಯೋಗಸಾಧನೆಯಲ್ಲಿ ರುದ್ರ ಅಥವಾ ಪ್ರಾಣವು ಪ್ರಧಾನವು. ಇದನ್ನು ಚೆನ್ನಾಗಿ ತಿಳಿದುಕೋ. ಪ್ರಾಣವನ್ನು ತನ್ನ ವಶದಲ್ಲಿ ಇರಿಸಿಕೊಂಡ ಯೋಗಿಯು ತನ್ನದೇ ಶರೀರದಿಂದ ಹತ್ತೂ ದಿಕ್ಕುಗಳಲ್ಲಿ ಸ್ವಚ್ಛಂದವಾಗಿ ಸಂಚರಿಸಬಲ್ಲನು. ಅನಘ! ಎಲ್ಲಿಯವರಿಗೆ ಮೃತ್ಯುವುಂಟಾಗುವುದಿಲ್ಲವೋ ಅಲ್ಲಿಯವರೆಗೆ ಯೋಗಿಯು ಯೋಗಬಲದಿಂದ ಸ್ಥೂಲ ಶರೀರವನ್ನು ಇಲ್ಲಿಯೇ ಬಿಟ್ಟು ಅಷ್ಟವಿಧ ಐಶ್ವರ್ಯಯುಕ್ತನಾಗಿ ಸೂಕ್ಷ್ಮಶರೀರದ ಮೂಲಕ ಲೋಕ-ಲೋಕಾಂತರಗಳಲ್ಲಿ ಸುಖವಾಗಿ ವಿಹರಿಸಬಹುದು. ನೃಪಸತ್ತಮ! ಮನೀಷಿಣರು ವೇದಗಳಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಎರಡೂ ಪ್ರಕಾರದ ಯೋಗಗಳ ವರ್ಣನೆಯಿದೆ ಎಂದು ಹೇಳುತ್ತಾರೆ. ಇದರಲ್ಲಿ ಸ್ಥೂಲಯೋಗವು ಅಣಿಮಾ ಮೊದಲಾದ ಆರು ಪ್ರಕಾರದ ಸಿದ್ಧಿಯನ್ನು ಕೊಡುತ್ತದೆ. ಸೂಕ್ಷ್ಮಯೋಗವು ಎಂಟು ಗುಣಗಳಿಂದ[7] ಯುಕ್ತವಾಗಿದೆ. ಬೇರೆ ಏನಿಲ್ಲ. ಯೋಗದ ಮುಖ್ಯ ಸಾಧನವು ಎರಡು ಪ್ರಕಾರಗಳೆಂದು ಹೇಳಿದ್ದಾರೆ: ಸಗುಣ ಮತ್ತು ನಿರ್ಗುಣ[8]. ಇದೇ ಶಾಸ್ತ್ರನಿದರ್ಶನವು. ಪಾರ್ಥಿವ! ಮನಸ್ಸನ್ನು ಯಾವುದರಲ್ಲಿಯಾದರೂ ಸ್ಥಾಪಿಸುವುದಕ್ಕೆ ಧಾರಣ ಎನ್ನುತ್ತಾರೆ. ಮನಸ್ಸಿನ ಧಾರಣೆಯ ಜೊತೆ ಮಾಡುವ ಪ್ರಾಣಾಯಾಮವು ಸಗುಣ ಮತ್ತು ದೇಶ-ವಿಶೇಷವನ್ನು ಆಶ್ರಯಿಸಿ ಮನಸ್ಸನ್ನು ನಿರ್ಬೀಜ ಸಮಾಧಿಯಲ್ಲಿ ಏಕಾಗ್ರಗೊಳಿಸುವ ಧಾರಣೆಯನ್ನು ನಿರ್ಗುಣ ಎಂದು ಹೇಳುತ್ತಾರೆ. ಮೈಥಿಲಸತ್ತಮ! ಪೂರಕ ಮೊದಲಾದ ಸಮಯ ನಿಯತ ದೇವತಾದಿಗಳನ್ನು ಧ್ಯಾನದ ಮೂಲಕ ಸಾಕ್ಷಾತ್ಕಾರ ಮಾಡಿಕೊಳ್ಳದೇ ಪ್ರಾಣವಾಯುವಿನ ರೇಚನ ಮಾಡುವುದರಿಂದ ಶರೀರದಲ್ಲಿ ವಾಯುವಿನ ಪ್ರಕೋಪವು ಅಧಿಕವಾಗುತ್ತದೆ. ಆದುದರಿಂದ ಧ್ಯಾನರಹಿತ ಪ್ರಾಣಾಯಾಮವನ್ನು ಮಾಡಬಾರದು. ರಾತ್ರಿಯ ಮೊದಲ ಪ್ರಹರದಲ್ಲಿ ವಾಯುವನ್ನು ಧಾರಣೆ ಮಾಡುವ ಹನ್ನೆರಡು ಪ್ರೇರಣೆಗಳನ್ನು ಹೇಳಿದ್ದಾರೆ. ಮಧ್ಯರಾತ್ರಿಯಲ್ಲಿ ರಾತ್ರಿಯ ಹಿಂದಿನ ಎರಡು ಪ್ರಹರಗಳಲ್ಲಿ ನಿದ್ರಿಸಬೇಕು ಮತ್ತು ಪುನಃ ಅಂತಿಮ ಪ್ರಹರದಲ್ಲಿ ಹನ್ನೆರಡು ಪ್ರೇರಣೆಗಳ ಅಭ್ಯಾಸಮಾಡಬೇಕು[9]. ಹೀಗೆ ಪ್ರಾಣಾಯಾಮದ ಮೂಲಕ ಮನಸ್ಸನ್ನು ವಶಮಾಡಿಕೊಂಡು ಶಾಂತ ಮತ್ತು ಜಿತೇಂದ್ರಿಯನಾಗಿ, ಏಕಾಂತವಾಸದಲ್ಲಿದ್ದುಕೊಂಡು ಆತ್ಮಾರಾಮ ಜ್ಞಾನಿಯು ಮನಸ್ಸನ್ನು ಪರಮಾತ್ಮನಲ್ಲಿ ನೆಲೆಸಬೇಕು. ಇದರಲ್ಲಿ ಸಂಶಯವಿಲ್ಲ.  ಮೈಥಿಲ! ಶಬ್ಧ, ಸ್ಪರ್ಶ, ರೂಪ, ರಸ, ಮತ್ತು ಗಂಧ ಇವು ಪಂಚೇಂದ್ರಿಯಗಳ ಐದು ದೋಷಗಳು. ಈ ದೋಷಗಳನ್ನು ದೂರೀಕರಿಸಿಕೊಳ್ಳಬೇಕು. ಅನಂತರ ಲಯ ಮತ್ತು ವಿಕ್ಷೇಪಗಳನ್ನು ಶಾಂತಗೊಳಿಸಿ ಸಂಪೂರ್ಣ ಇಂದ್ರಿಯಗಳನ್ನು ಮನಸ್ಸಿನಲ್ಲಿ ಸ್ಥಿರೀಕರಿಸಬೇಕು. ನರಾಧಿಪ! ಅನಂತರ ಮನಸ್ಸನ್ನು ಅಹಂಕಾರದಲ್ಲಿ, ಅಹಂಕಾರವನ್ನು ಬುದ್ಧಿಯಲ್ಲಿ ಮತ್ತು ಬುದ್ಧಿಯನ್ನು ಪ್ರಕೃತಿಯಲ್ಲಿ ಸ್ಥಾಪಿಸಬೇಕು. ಈ ರೀತಿ ಎಲ್ಲವನ್ನೂ ಲಯಗೊಳಿಸಿ ಕೇವಲ ರಜೋಗುಣ ರಹಿತ, ನಿರ್ಮಲ, ನಿತ್ಯ, ಅನಂತ, ಶುದ್ಧ, ಛಿದ್ರರಹಿತ, ಕೂಟಸ್ಥ, ಅಂತರ್ಯಾಮೀ, ಅಭೇದ್ಯ, ಅಜರ, ಅಮರ, ಅವಿಕಾರೀ, ಎಲ್ಲರ ಶಾಸಕ, ಮತ್ತು ಸನಾತನ ಬ್ರಹ್ಮಾ, ಆ ಪರಮಾತ್ಮನ ಧ್ಯಾನಮಾಡಬೇಕು. ಮಹಾರಾಜ! ಈಗ ಸಾಮಾಧಿಸ್ಥಿತ ಯೋಗಿಯ ಲಕ್ಷಣಗಳ ಕುರಿತು ಕೇಳು. ತೃಪ್ತನಾದವನು ಸುಖವಾಗಿ ನಿದ್ರಿಸುವಂತೆ ಯೋಗ ಯುಕ್ತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ ಮತ್ತು ಅವನು ಸಮಾಧಿಯಿಂದ ವಿರತನಾಗಲು ಬಯಸುವುದಿಲ್ಲ. ಇದೇ ಅವನ ಪ್ರಸನ್ನತೆಯ ಗುರುತು. ಎಣ್ಣೆ ತುಂಬಿದ ದೀಪವು ಗಾಳಿಯಿಲ್ಲದ ಸ್ಥಳದಲ್ಲಿ ಹೇಗೆ ಒಂದೇ ಸಮನೆ ಅಲುಗಾಡದೇ ಉರಿಯುತ್ತಿರುತ್ತದೆಯೋ ಮತ್ತು ಹೇಗೆ ಅದರ ಜ್ವಾಲೆಯು ಸ್ಥಿರಭಾವದಿಂದ ಮೇಲ್ಮುಖನಾಗಿಯೇ ಇರುತ್ತದೆಯೋ ಹಾಗೆ ಸಮಾಧಿನಿಷ್ಠ ಯೋಗಿಯೂ ಕೂಡ ಸ್ಥಿರನಾಗಿರುತ್ತಾನೆ ಎಂದು ಮನೀಷಿಣರು ಹೇಳುತ್ತಾರೆ. ಮೋಡಗಳು ಸುರಿಸಿದ ಮಳೆಯ ಆಘಾತದಿಂದ ಪರ್ವತವು ಹೇಗೆ ಚಂಚಲಗೊಳ್ಳುವುದಿಲ್ಲವೋ ಅದೇ ರೀತಿಯಲ್ಲಿ ಅನೇಕ ಪ್ರಕಾರದ ವಿಕ್ಷೇಪಗಳೂ ಯೋಗಿಯನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ. ಇದೇ ಯೋಗಯುಕ್ತನ ಲಕ್ಷಣವು. ಅವನ ಎದಿರು ನಡೆಯುವ ಶಂಖ-ದುಂದುಭಿಗಳ ನಿರ್ಘೋಷಗಳಿಂದಲೂ, ವಿವಿಧ ಗೀತ-ವಾದ್ಯಗಳಿಂದಲೂ ಯೋಗ ಯುಕ್ತನು ಹಂದಾಡುವುದಿಲ್ಲ. ಇದೇ ಯೋಗ ಯುಕ್ತನ ನಿದರ್ಶನವು. ಮನಸ್ಸನ್ನು ಸಂಯಮದಲ್ಲಿರಿಸಿಕೊಂಡು ಸಾವಧಾನ ಚಿತ್ತನಾದ ಮನುಷ್ಯನು ಹೇಗೆ ಕೈಯಲ್ಲಿ ಎಣ್ಣೆತುಂಬಿದ ಪಾತ್ರೆಯನ್ನು ಹಿಡಿದು ಮೆಟ್ಟಿಲುಗಳನ್ನು ಏರುವಾಗ ಎದುರಿನಿಂದ ಖಡ್ಗಗಳನ್ನು ಹಿಡಿದು ಅವನನ್ನು ಕಡಿಯಲು ಬಂದರೂ ಹೆದರದೇ ಎಣ್ಣೆಯ ಒಂದು ಹನಿಯನ್ನೂ ಕೆಳಗೆ ಬೀಳಿಸುವುದಿಲ್ಲವೋ ಹಾಗೆ ಯೋಗದ ಉಚ್ಛಸ್ಥಿತಿಯನ್ನು ತಲುಪಿದ ಏಕಾಗ್ರಚಿತ್ತ ಯೋಗಿಯು ಇಂದ್ರಿಯಗಳ ಸ್ಥಿರತೆ ಮತ್ತು ಮನಸ್ಸಿನ ಅವಿಚಲ ಸ್ಥಿತಿಯ ಕಾರಣದಿಂದ ಸಮಾಧಿಯಿಂದ ವಿಚಲಿತನಾಗುವುದಿಲ್ಲ. ಇದೇ ಯೋಗಸಿದ್ಧ ಮುನಿಯ ಲಕ್ಷಣವೆಂದು ತಿಳಿಯಬೇಕು. ಹೀಗೆ ಯೋಗಯುಕ್ತನಾದವನು ಮಹಾ ಅಂಧಕಾರದ ಮಧ್ಯೆ ಪ್ರಕಾಶಿಸುವ ಪ್ರಜ್ವಲಿತ ಅಗ್ನಿಯಂತೆ ಹೃದಯದಲ್ಲಿ ನೆಲೆಸಿರುವ ಅವಿನಾಶೀ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ರಾಜನ್! ಈ ಸಾಧನೆಯಿಂದ ಮನುಷ್ಯನು ದೀರ್ಘಕಾಲದ ನಂತರ ಈ ಆಚೇತನ ದೇಹವನ್ನು ಪರಿತ್ಯಜಿಸಿ ಕೇವಲ ಅಂದರೆ ಪ್ರಕೃತಿ ಸಂಸರ್ಗ ರಹಿತ ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾನೆ. ಹೀಗೆ ಸನಾತನ ಶೃತಿಯಿದೆ. ಇದೇ ಯೋಗಿಗಳ ಯೋಗವು. ಇದಲ್ಲದೇ ಯೋಗದ ಬೇರೆ ಯಾವ ಲಕ್ಷಣಗಳು ಇರಬಲ್ಲವು? ಇದನ್ನು ತಿಳಿದ ಮನಿಷಿಣರು ತಮ್ಮನ್ನು ತಾವು ಕೃತಕೃತ್ಯರೆಂದು ತಿಳಿಯುತ್ತಾರೆ.

ನೃಪ! ಪ್ರಾಣೋತ್ಕ್ರಮಣಸಮಯದಲ್ಲಿ ಶರೀರದ ಯಾವ ಯಾವ ಭಾಗಗಳಿಂದ ಪ್ರಾಣವು ಹೊರಟರೆ ಎಂತೆಂತಹ ಗತಿಯು ದೊರೆಯುವುನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಪಾದಗಳ ಮೂಲಕ ಪ್ರಾಣೋತ್ಕ್ರಮಣವಾದರೆ ವಿಷ್ಣುಸ್ಥಾನವು ದೊರೆಯುತ್ತದೆ ಎನ್ನುತ್ತಾರೆ. ಮೊಣಕಾಲುಗಳ ಮೂಲಕ ಪ್ರಾಣೋತ್ಕ್ರಮಣವಾದರೆ ವಸುಗಳ ಲೋಕವನ್ನು ಸೇರುತ್ತಾರೆಂದು ನಾವು ಕೇಳಿದ್ದೇವೆ. ಮಂಡಿಗಳ ಮೂಲಕ ಪ್ರಾಣೋತ್ಕ್ರಮಣವಾದ ಮಹಾಭಾಗರು ಸಾಧ್ಯರ ಲೋಕಗಳನ್ನು ಪಡೆಯುತ್ತಾರೆ. ಗುದದ್ವಾರದ ಮೂಲಕ ಪ್ರಾಣೋತ್ಕ್ರಮಣವಾದರೆ ಮಿತ್ರನ ಸ್ಥಾನವನ್ನು ಪಡೆಯುತ್ತಾರೆ. ಸೊಂಟದಿಂದ ಪ್ರಾಣವು ಹೊರಟರೆ ಪೃಥ್ವೀಲೋಕವನ್ನೂ ಮತ್ತು ಎರಡೂ ತೊಡೆಗಳಿಂದ ಪ್ರಾಣೋತ್ಕ್ರಮಣವಾದರೆ ಪ್ರಜಾಪತಿ ಲೋಕವನ್ನೂ ಪಡೆಯುತ್ತಾರೆ. ಪಾರ್ಶ್ವಗಳಿಂದ ಪ್ರಾಣಹೋದರೆ ಮರುತ್ತರ ಲೋಕವನ್ನೂ, ಮೂಗಿನಿಂದ ಹೋದರೆ ಚಂದ್ರಲೋಕವನ್ನೂ, ಬಾಹುಗಳಿಂದ ಹೋದರೆ ಇಂದ್ರತ್ವವನ್ನೂ ಮತ್ತು ಎದೆಯಿಂದ ಪ್ರಾಣೋತ್ಕ್ರಮಣವಾದರೆ ರುದ್ರಲೋಕವನ್ನೂ ಪಡೆಯುತ್ತಾರೆ. ಕುತ್ತಿಗೆಯಿಂದ ಪ್ರಾಣವು ಹೋದರೆ ಆ ಋಷಿಶ್ರೇಷ್ಠ ನರನ ಅನುತ್ತಮ ಲೋಕವನ್ನು ಪಡೆದುಕೊಳ್ಳುತ್ತಾನೆ. ಮುಖದಿಂದ ಪ್ರಾಣವು ಹೋದರೆ ವಿಶ್ವೇದೇವರ ಲೋಕ ಮತ್ತು ಕಿವಿಗಳಿಂದ ಪ್ರಾಣವು ಹೋದರೆ ದಿಕ್ಕುಗಳ ಅಧಿದೇವತೆಗಳ ಸ್ಥಾನವನ್ನು ಸೇರುತ್ತಾನೆ. ಮೂಗಿನಿಂದ ಪ್ರಾಣಗಳ ಉತ್ಕ್ರಮಣವಾದರೆ ವಾಯುದೇವತೆಯ, ಎರಡೂ ಕಣ್ಣುಗಳಿಂದ ಆದರೆ ಸೂರ್ಯ, ಹುಬ್ಬುಗಳ ಮಧ್ಯೆ ಆದರೆ ಅಶ್ವಿನೀ ದೇವತೆಗಳು ಮತ್ತು ಹಣೆಯಲ್ಲಿ ಆದರೆ ಪಿತೃಗಳ ಲೋಕಗಳನ್ನು ಸೇರುತ್ತಾರೆ. ಮಿಥಿಲೇಶ್ವರ! ನೆತ್ತಿಯಿಂದ ಪ್ರಾಣಪರಿತ್ಯಾಗವಾದರೆ ಅಂಥವನು ದೇವಾಗ್ರಜ ವಿಭು ಬ್ರಹ್ಮ ಲೋಕಕ್ಕೆ ಹೋಗುತ್ತಾನೆ. ಇದೋ ನಾನು ಪ್ರಾಣಗಳ ಉತ್ಕ್ರಮಣಸ್ಥಾನಗಳ ಕುರಿತು ಹೇಳಿದ್ದೇನೆ. ಈಗ ನಾನು ಮನೀಷಿಗಳು ಹೇಳಿರುವ ಅಮಂಗಲ ಅಥವಾ ಮೃತ್ಯುಸೂಚಕ ಚಿಹ್ನೆಗಳನ್ನು ವರ್ಣಿಸುತ್ತೇನೆ. ಇದು ದೇಹಧಾರಿಯು ಶರೀರವನ್ನು ತ್ಯಜಿಸಲು ಕೇವಲ ಒಂದು ವರ್ಷಇರುವಾಗ ಅವನ ಎದಿರು ಪ್ರಕಟಗೊಳ್ಳುತ್ತವೆ. ಮೊದಲು ನೋಡಿದ್ದ ಅರುಂಧತಿ ಮತ್ತು ಧೃವ ನಕ್ಷತ್ರಗಳನ್ನು ನೋಡಲಿಕ್ಕಾಗದ; ಮತ್ತು ಪೂರ್ಣಚಂದ್ರ ಮಂಡಲ ಮತ್ತು ದೀಪದ ಶಿಖೆಯು ಯಾರ ಎಡಭಾಗಕ್ಕೆ ಖಂಡಿಸಿ ಬೀಳುತ್ತದೆಯೋ ಅಂಥವರು ಕೇವಲ ಒಂದು ವರ್ಷದವರೆಗೇ ಜೀವಿತರಾಗಿರುತ್ತಾರೆ. ಪಾರ್ಥಿವ! ಯಾರ ನೆರಳು ಇನ್ನೊಬ್ಬರಿಗೆ ಕಾಣುವುದಿಲ್ಲವೋ ಅವರ ಆಯಸ್ಸು ಒಂದೇ ವರ್ಷ ಉಳಿದಿದೆ ಎಂದು ತಿಳಿಯಬೇಕು. ಒಮ್ಮೆ ಅತಿಯಾದ ಕಾಂತಿಯುಕ್ತನಾಗಿ ಮತ್ತು ಇನ್ನೊಮ್ಮೆ ಕಾಂತಿರಹಿತನಾಗಿ ಕಾಣುವುದು, ಒಮ್ಮೆ ಅತಿಯಾದ ಪ್ರಜ್ಞೆ ಮತ್ತು ಇನ್ನೊಮ್ಮೆ ಪ್ರಜ್ಞೆಯಿಲ್ಲದವನಂತೆ ತೋರುವುದು, ಹಾಗೂ ಪ್ರಕೃತಿಯಲ್ಲಿ ಏರು-ಪೇರುಗಳು ಕಂಡುಬಂದರೆ ಆ ವ್ಯಕ್ತಿಯು ಆರು ತಿಂಗಳ ಒಳಗೆ ಮೃತ್ಯುವನ್ನಪ್ಪುವುದನ್ನು ಸೂಚಿಸುತ್ತದೆ.  ಕಪ್ಪುವರ್ಣದವರಾಗಿದ್ದರೂ ಬಿಳಿಚಿಕೊಂಡಿರುವ, ದೇವತೆಗಳನ್ನು ಅನಾದರಿಸುವ ಮತ್ತು ಬ್ರಾಹ್ಮಣರನ್ನು ವಿರೋಧಿಸುವವರೂ ಕೂಡ ಅರು ತಿಂಗಳಿಗಿಂತ ಹೆಚ್ಚು ಸಮಯ ಜೀವಿತರಾಗಿರಲಾರರು. ಇದು ಈ ಲಕ್ಷಣಗಳಿಂದ ಸೂಚಿತಗೊಳ್ಳುತ್ತದೆ. ಸೂರ್ಯ ಮತ್ತು ಚಂದ್ರಮಂಡಲಗಳು ತುಂಡಾದ ಕುಂಬಾರನ ಚಕ್ರಗಳಂತೆ ಕಾಣುವವನಿಗೆ ಏಳು ರಾತ್ರಿಗಳಲ್ಲಿ ಮೃತ್ಯುವೊದಗುತ್ತದೆ.  ಯಾರಿಗೆ ದೇವಾಲಯದ ಸುಗಂಧಿತ ವಸ್ತುಗಳಿಂದ ಶವದ ದುರ್ಗಂಧದ ಅನುಭವವವಾಗುತ್ತದೆಯೋ ಅವನು ಏಳು ರಾತ್ರಿಗಳಲ್ಲಿ ವೃತ್ಯುವಶನಾಗುತ್ತಾನೆ. ನರಾಧಿಪ! ಮೂಗು ಮತ್ತು ಕಿವಿಗಳು ಓರಯಾದರೆ, ಹಲ್ಲು ಮತ್ತು ಕಣ್ಣುಗಳ ಬಣ್ಣವು ಬದಲಾದರೆ, ಮೂರ್ಛೆತಪ್ಪಿದರೆ, ಶರೀರವು ತಣ್ಣಗಾದರೆ, ಎಡಗಣ್ಣಿನಲ್ಲಿ ಅಕಸ್ಮಾತ್ ಕಣ್ಣೀರು ಸುರಿಯತೊಡಗಿದರೆ, ಮತ್ತು ನೆತ್ತಿಯಿಂದ ಹೊಗೆಯು ಹೊರಟರೆ ಅವನಿಗೆ ತತ್ಕಾಲದಲ್ಲಿಯೇ ಮೃತ್ಯುವೊದಗುತ್ತದೆ. ಇವು ತತ್ಕಾಲದಲ್ಲಿಯೇ ಆಗುವ ಮೃತ್ಯುವಿನ ಸೂಚನೆಗಳು. ಈ ಮೃತ್ಯುಸೂಚಕ ಲಕ್ಷಣಗಳನ್ನು ತಿಳಿದು ಮನಸ್ಸನ್ನು ವಶದಲ್ಲಿಟ್ಟುಕೊಳ್ಳುವ ಸಾಧಕನು ದಿನ-ರಾತ್ರಿ ಪರಮಾತ್ಮನ ಧ್ಯಾನವನ್ನು ಮಾಡಬೇಕು ಮತ್ತು ಮೃತ್ಯುವಿನ ಕಾಲವನ್ನು ಪ್ರತೀಕ್ಷಿಸುತ್ತಿರಬೇಕು. ಮೃತ್ಯುವು ಇಷ್ಟವಾಗದಿದ್ದರೆ ಮತ್ತು ಇನ್ನೂ ಈ ಜಗತ್ತಿನಲ್ಲಿ ಇರಬೇಕೆಂದಾದರೆ ಅಂಥವನು ಪೂರ್ವೋಕ್ತ ರೀತಿಯಲ್ಲಿ ಪಂಚಭೂತವಿಷಯಗಳನ್ನು ಧಾರಣೆಮಾಡಿ ಪೃಥ್ವೀ ಮೊದಲಾದವುಗಳ ಮೇಲೆ ವಿಜಯವನ್ನು ಸಾಧಿಸಿ ಸಂಪೂರ್ಣ ಗಂಧ, ರಸ ಮತ್ತು ರೂಪಗಳೇ ಮೊದಲಾದ ವಿಷಯಗಳನ್ನು ಸ್ವಾಧೀನಗೊಳಿಸಿಕೊಳ್ಳಬೇಕು[10]. ಹಾಗೆ ತನ್ನ ಪರಮ ಅಂತರಾತ್ಮನಿಂದಲೇ ಮೃತ್ಯುವನ್ನು ಜಯಿಸಿಕೊಳ್ಳಬಹುದು. ಮನುಜರ್ಷಭ! ಸಾಂಖ್ಯ ಮತ್ತು ಯೋಗದ ಅನುಸಾರ ಧಾರಣಪೂರ್ವಕವಾಗಿ ಆತ್ಮತತ್ತ್ವದ ಜ್ಞಾನವನ್ನು ಪಡೆದುಕೊಂಡು ಧ್ಯಾನ ಯೋಗದ ಮೂಲಕ ಅಂತರಾತ್ಮನನ್ನು ಪರಮಾತ್ಮನಲ್ಲಿರಿಸುವುದರಿಂದ ಯೋಗಿಯು ಮೃತ್ಯುವನ್ನು ಗೆಲ್ಲುತ್ತಾನೆ. ಇದರಿಂದ ಅವನು ಅಶುದ್ಧಚಿತ್ತದವರಿಗೆ ದುರ್ಲಭವಾದ ಆ ಅಕ್ಷಯ, ಅಜನ್ಮಾ, ಅಚಲ, ಅವಿಕಾರೀ, ಪೂರ್ಣ, ಮತ್ತು ಕಲ್ಯಾಣಮಯ ಸನಾತನ ಪದವನ್ನು ಪಡೆಯುತ್ತಾನೆ.

ನರಾಧಿಪ! ಅವ್ಯಕ್ತ ಪರಬ್ರಹ್ಮನ ಕುರಿತು ನೀನು ಕೇಳಿದ ಪ್ರಶ್ನೆಯು ಪರಮ ಗುಹ್ಯವಾದುದು. ನೃಪ! ಏಕಾಗ್ರಚಿತ್ತನಾಗಿ ಕೇಳು. ಮಿಥಿಲಾಧಿಪ! ಆರ್ಷ ವಿಧಿಗಳಿಂದ ವಿನಮ್ರನಾಗಿ ನಡೆದುಕೊಂಡು ನಾನು ಆದಿತ್ಯನಿಂದ ಯಜುರ್ವೇದವನ್ನು ಹೇಗೆ ಪಡೆದುಕೊಂಡೆ ಎನ್ನುವುದನ್ನು ಕೇಳು. ಅನಘ! ಮಹಾ ತಪಸ್ಸಿನಿಂದ ದೇವ ತಪಿಷ್ಠನನ್ನು ನಾನು ಸೇವಿಸಿದೆ. ಅದರಿಂದ ಪ್ರೀತನಾದ ವಿಭು ಸೂರ್ಯನು ನನಗೆ ಹೀಗೆ ಹೇಳಿದನು:

“ವಿಪ್ರರ್ಷೇ! ವರವನ್ನು ಕೇಳು. ಎಷ್ಟೇ ದುರ್ಲಭವಾಗಿದ್ದರೂ ನಿನಗಿಷ್ಟವಾದುದನ್ನು ಪ್ರೀತಾತ್ಮನಾದ ನಾನು ನಿನಗೆ ನೀಡುತ್ತೇನೆ. ದುರ್ಲಭವಾಗಿದ್ದರೂ ನನ್ನ ಪ್ರಸಾದದಿಂದ ಅದು ದೊರೆಯುತ್ತದೆ.”

ಆಗ ನಾನು ಶಿರಸಾ ವಂದಿಸಿ ತಪನ ಶ್ರೇಷ್ಠನಿಗೆ ಹೇಳಿದೆನು:

“ಇದೂವರೆಗೂ ಯಾರೂ ಉಪಯೋಗಿಸಿರದ ಯಜುಸ್ಸುಗಳನ್ನು ಕ್ಷಿಪ್ರವಾಗಿ ತಿಳಿಯಬಯಸುತ್ತೇನೆ.”

ಆಗ ಭಗವಂತನು ನನಗೆ ಹೇಳಿದನು:

“ದ್ವಿಜ! ನಿನಗೆ ನೀಡುತ್ತೇನೆ. ಇದೋ. ಸರಸ್ವತಿಯು ವಾಗ್ಭೂತಳಾಗಿ ನಿನ್ನ ಶರೀರವನ್ನು ಪ್ರವೇಶಿಸುತ್ತಾಳೆ.”

ಆಗ ಭಗವಂತನು ನನಗೆ ಬಾಯಿಯನ್ನು ಕಳೆಯಲು ಹೇಳಿದನು. ನಾನು ಬಾಯಿಕಳೆಯಲು ಸರಸ್ವತಿಯು ಅದನ್ನು ಪ್ರವೇಶಿಸಿದಳು. ಅನಘ! ಆಗ ದಹಿಸುತ್ತಿದ್ದ ನಾನು, ಭಾಸ್ಕರನ ಮಹಾತ್ಮೆಯನ್ನು ತಿಳಿಯದಿದ್ದ ಮತ್ತು ಅಸಹನಶೀಲನಾಗಿದ್ದ ನಾನು, ನೀರನ್ನು ಪ್ರವೇಶಿಸಿದೆನು.  ಸುಡುತ್ತಿರುವ ನನಗೆ ಭಗವಾನ್ ರವಿಯು ಹೇಳಿದನು:

“ಮುಹೂರ್ತಕಾಲ ಈ ದಾಹವನ್ನು ಸಹಿಸಿಕೋ. ನಂತರ ಶೀತಲನಾಗುತ್ತೀಯೆ.”

ನಾನು ತಣ್ಣಗಾದುದನ್ನು ನೋಡಿ ಭಗವಾನ್ ಭಾಸ್ಕರನು ಹೇಳಿದನು:

“ದ್ವಿಜ! ಖಿಲಗಳಿಂದಲೂ ಉಪನಿಷತ್ತುಗಳಿಂದಲೂ ಸಹಿತವಾದ ಸಂಪೂರ್ಣ ವೇದವು ನಿನ್ನಲ್ಲಿ ಪ್ರತಿಷ್ಠಿತವಾಗುತ್ತದೆ. ದ್ವಿಜರ್ಷಭ! ನೀನು ಸಂಪೂರ್ಣವಾದ ಶತಪಥ ಬ್ರಾಹ್ಮಣವನ್ನು ರಚಿಸಿದ ನಂತರ ನಿನ್ನ ಬುದ್ಧಿಯು ಮೋಕ್ಷಮಾರ್ಗದಲ್ಲಿಯೇ ಸ್ಥಿರವಾಗುವುದು. ಸಾಂಖ್ಯಯೋಗಿಗಳಿಗೆ ಇಷ್ಟವಾಗಿರುವ ಪರಮ ಪದವನ್ನು ನೀನೂ ಪಡೆದುಕೊಳ್ಳುತ್ತೀಯೆ.”

ಹೀಗೆ ಹೇಳಿ ಭಗವಾನನು ಅಲ್ಲಿಯೇ ಅಂತರ್ಧಾನನಾದನು. ಹಾಗೆ ದೇವ ವಿಭಾವಸುವು ಅಂತರ್ಹೃತನಾಗಲು ಅವನು ಹೇಳಿದುದನ್ನು ಕೇಳಿ ಸಂಹೃಷ್ಟನಾಗಿ ಮನೆಗೆ ಬಂದು ಸರಸ್ವತಿಯ ಕುರಿತೇ ಚಿಂತಿಸಿದೆನು. ಆಗ ಅತಿಶುಭ ಸ್ವರವ್ಯಂಜನ ವಿಭೂಷಿತ ಓಂಕಾರವನ್ನು ಉಚ್ಚರಿಸುತ್ತಾ ದೇವೀ ಸರಸ್ವತಿಯು ನನ್ನ ಮುಂದೆ ನಿಂತಳು.

ಆಗ ನಾನು ವಿಧಿವತ್ತಾಗಿ ಸರಸ್ವತಿಗೂ ತಪನರಲ್ಲಿ ಶ್ರೇಷ್ಠ ಸೂರ್ಯನಿಗೂ ಅರ್ಘ್ಯಗಳನ್ನಿತ್ತು ಅವರನ್ನೇ ಧ್ಯಾನಿಸುತ್ತಾ ಕುಳಿತೆನು. ಆಗ ನಾನು ಪರಮ ಹರ್ಷದಿಂದ ರಹಸ್ಯ-ಸಂಗ್ರಹ-ಪರಿಶಿಷ್ಟಗಳಿಂದ ಕೂಡಿದ ಸಂಪೂರ್ಣ ಶತಪಥ ಬ್ರಾಹ್ಮಣವನ್ನು ರಚಿಸಿದೆ. ಅನಂತರ ನಾನು ನೂರು ಉತ್ತಮ ಶಿಷ್ಯರಿಗೆ ಅದನ್ನು ಅಧ್ಯಯನ ಮಾಡಿಸಿದೆ. ಮಹಾರಾಜ! ಬಳಿಕ ನಾನು ಶಿಷ್ಯಸಹಿತನಾಗಿದ್ದ ಮಹಾತ್ಮ ನನ್ನ ಸೋದರಮಾವ ವೈಶಂಪಾಯನನಿಗೆ ಪ್ರತೀಕಾರ ಮಾಡುವ ಸಲುವಾಗಿ ಕಿರಣಗಳಿಂದ ಕೂಡಿದ ಸೂರ್ಯನಂತೆ ಶಿಷ್ಯರಿಂದೊಡಗೂಡಿ ನಾನು ನಿನ್ನ ಮಹಾತ್ಮ ತಂದೆಯನ್ನು ಯಜ್ಞದಲ್ಲಿ ತೊಡಗಿಸಿದೆನು. ಆಗ ಮಾವನ ಆಗ್ರಹದ ಮೇರೆಗೆ ದೇವಲನು ನೋಡುತ್ತಿದ್ದಂತೆಯೇ ವೇದ ದಕ್ಷಿಣೆಯ ಅರ್ಧವನ್ನು ಅವನಿಗೆ ಕೊಟ್ಟೆ ಮತ್ತು ಅರ್ಧವನ್ನು ನಾನೇ ತೆಗೆದುಕೊಂಡೆ. ಅನಂತರ ಸುಮಂತು, ಪೈಲ, ಜೈಮಿನಿ, ನಿನ್ನ ತಂದೆ ಮತ್ತು ಅನ್ಯ ಮುನಿಗಳು ನನ್ನನ್ನು ಸತ್ಕರಿಸಿದರು. ಅನಘ! ಹೀಗೆ ಅರ್ಕನಿಂದ ನಾನು ಶುಕ್ಲಯಜುರ್ವೇದದ ಹದಿನೈದು ಶಾಖೆಗಳನ್ನು ಪಡೆದುಕೊಂಡೆನು. ಹಾಗೆಯೇ ಲೋಮಹರ್ಷಣನಿಂದ ಪುರಾಣಗಳನ್ನು ಕಲಿತುಕೊಂಡೆನು. ನರಾಧಿಪ! ಅನಂತರ ನಾನು ಬೀಜರೂಪ ಪ್ರಣವ ಮತ್ತು ಸರಸ್ವತೀ ದೇವಿಯನ್ನು ಎದುರಿಟ್ಟುಕೊಂಡು ಭಗವಾನ್ ಸೂರ್ಯನ ಕೃಪೆಯಿಂದ ಶತಪಥದ ರಚನೆಯನ್ನು ಆರಂಭಿಸಿದೆ ಮತ್ತು ಈ ಅಪೂರ್ವ ಗ್ರಂಥವನ್ನು ಪೂರ್ಣಗೊಳಿಸಿದೆ. ಮತ್ತು ನನ್ನ ಅಭಿಲಾಷೆಯ ಮೋಕ್ಷಮಾರ್ಗವನ್ನೂ ಕಂಡುಕೊಂಡೆನು. ನಂತರ ನಾನು ಶಿಷ್ಯರಿಗೆ ಆ ಎಲ್ಲ ಗ್ರಂಥ ರಹಸ್ಯಗಳನ್ನೂ ಸಂಗ್ರಹಸಹಿತ ಕಲಿಸಿದೆನು ಮತ್ತು ಅವರ ಮನೆಗಳಿಗೆ ತೆರಳಲು ಅನುಮತಿಯನ್ನಿತ್ತೆನು. ಆಗ ಆ ಎಲ್ಲ ಶುಚಿ ಶಿಷ್ಯರೂ ಪರಮ ಹರ್ಷಿತರಾಗಿ ತಮ್ಮ ಮನೆಗಳಿಗೆ ತೆರಳಿದರು. ಭಾಸ್ಕರನು ತೋರಿಸಿಕೊಟ್ಟ ಈ ಶುಕ್ಲಯಜುರ್ವೇದದ ಹದಿನೈದು ಶಾಖೆಗಳ ಜ್ಞಾನವನ್ನು ಪಡೆದುಕೊಂಡು ನಾನು ಇಚ್ಛಾನುಸಾರ ವೇದ್ಯತತ್ತ್ವದ ಕುರಿತು ಚಿಂತಿಸಿದ್ದೇನೆ.

ರಾಜನ್! ಒಮ್ಮೆ ವೇದಾಂತಜ್ಞಾನ ಕುಶಲ ವಿಶ್ವಾವಸು ಎಂಬ ಹೆಸರಿನ ಗಂಧರ್ವನು ನನ್ನ ಬಳಿಬಂದು

“ಬ್ರಾಹ್ಮಣ ಜಾತಿಗೆ ಹಿತಕರವಾದುದು ಯಾವುದು? ಸತ್ಯ ಮತ್ತು ತಿಳಿಯಲು ಸರ್ವೋತ್ತಮವಾದ ವಸ್ತು ಯಾವುದು?”

ಎಂದು ಕೇಳತೊಡಗಿದನು. ಪಾರ್ಥಿವ! ಅನಂತರ ಅವನು ವೇದದ ಕುರಿತಾದ ಇಪ್ಪತ್ನಾಲ್ಕು ಪ್ರಶ್ನೆಗಳನ್ನು ಕೇಳಿದನು. ಅನಂತರ ಆನ್ವೀಕ್ಷಿಕೀ ವಿದ್ಯೆಯ ಕುರಿತಾದ ಇಪ್ಪತ್ತೈದನೆಯ ಪ್ರಶ್ನೆಯನ್ನು ಮುಂದಿಟ್ಟನು. ಆ ಇಪ್ಪತ್ನಾಲ್ಕು ಪ್ರಶ್ನೆಗಳು ಈ ರೀತಿ ಇದ್ದವು: (೧) ವಿಶ್ವವು ಏನು? (೨) ಅವಿಶ್ವವು ಏನು? (೩) ಅಶ್ವಾವು ಏನು? (೪) ಅಶ್ವವು ಏನು? (೫) ಮಿತ್ರವು ಏನು? (೬) ವರುಣವು ಏನು? (೭) ಜ್ಞಾನವು ಏನು? (೮) ಜ್ಯೇಯವಾದದ್ದು ಯಾವುದು? (೯) ಜ್ಞಾತನು ಯಾರು? (೧೦) ಅಜ್ಞವು ಯಾವುದು? (೧೧) ಕ ಯಾರು? (೧೨) ತಪಸ್ವಿಯು ಯಾರು? (೧೩) ಅತಪಸ್ವಿಯು ಯಾರು? (೧೪) ಸೂರ್ಯನು ಯಾರು? (೧೫) ಅತಿಸೂರ್ಯನು ಯಾರು? (೧೬) ವಿದ್ಯೆಯು ಯಾವುದು? (೧೭) ಅವಿದ್ಯೆಯು ಯಾವುದು? (೧೮) ವೇದ್ಯವು ಯಾವುದು? (೧೯) ಅವೇದ್ಯವು ಯಾವುದು? (೨೦) ಚಲ ಎಂದರೆ ಯಾವುದು? (೨೧) ಅಚಲ ಎಂದರೆ ಯಾವುದು? (೨೨) ಅಪೂರ್ವವು ಯಾವುದು? (೨೩) ಅಕ್ಷಯವು ಯಾವುದು? (೨೪) ವಿನಾಶಶೀಲವು ಯಾವುದು? ರಾಜನ್! ಇವೇ ಅವನ ಪರಮ ಉತ್ತಮ ಪ್ರಶ್ನೆಗಳಾಗಿದ್ದವು.

ರಾಜನ್! ಅದಕ್ಕೆ ನಾನು ರಾಜಾ ಗಂಧರ್ವಸತ್ತಮನಿಗೆ ಹೇಳಿದೆನು:

“ನೀನು ಕ್ರಮಶಃ ಅತಿ ಉತ್ತಮ ಪ್ರಶ್ನೆಗಳನ್ನೇ ಇಟ್ಟಿದ್ದೀಯೆ. ನೀನು ಅರ್ಥವನ್ನು ತಿಳಿದುಕೊಂಡಿರುವೆ. ಸ್ವಲ್ಪ ಹೊತ್ತು ನಿಲ್ಲು. ಅಷ್ಟರಲ್ಲಿ ನಾನು ನಿನ್ನ ಈ ಪ್ರಶ್ನೆಗಳ ಕುರಿತು ವಿಚಾರಿಸುತ್ತೇನೆ.”

ಆಗ ಹಾಗೆಯೇ ಆಗಲೆಂದು ಗಂಧರ್ವರಾಜನು ಸುಮ್ಮನೇ ಕುಳಿತುಕೊಂಡನು. ಆಗ ನಾನು ಪುನಃ ದೇವೀ ಸರಸ್ವತಿಯನ್ನು ಸ್ಮರಿಸಿದೆನು. ಮೊಸರಿನಿಂದ ತುಪ್ಪವು ಮೇಲೇಳುವಂತೆ ನನ್ನ ಮನಸ್ಸಿನಲ್ಲಿ ಆ ಪ್ರಶ್ನೆಗಳಿಗೆ ಉತ್ತರಗಳು ಕಾಣಿಸಿಕೊಂಡವು. ಅಯ್ಯಾ! ಪಾರ್ಥಿವ! ಅಲ್ಲಿ ನಾನು ಉಪನಿಷತ್, ಅದರ ಪರಿಶಿಷ್ಟ ಭಾಗ, ಮತ್ತು ಪರಮ ಅನ್ವೀಕ್ಷಿಕೀ ವಿದ್ಯೆಗಳನ್ನು ಕಂಡು ಮನಸ್ಸಿನಲ್ಲಿಯೇ ಅವುಗಳ ಮಂಥನ ಮಾಡಿದೆನು. ರಾಜಶಾರ್ದೂಲ! ಈ ಅನ್ವೀಕ್ಷಿಕೀ ವಿದ್ಯೆಯನ್ನು ನಾಲ್ಕನೆಯ[11] ವಿದ್ಯೆ ಎಂದು ಹೇಳುತ್ತಾರೆ. ಇದು ಮೋಕ್ಷ ಸಹಾಯಕವಾಗಿದೆ. ಇಪ್ಪತ್ತೈದನೇ ತತ್ತ್ವರೂಪ ಪುರುಷನಿಂದ ಅಧಿಷ್ಠಿತ ಆ ವಿದ್ಯೆಯನ್ನು ನಿನಗೆ ಈ ಮೊದಲೇ ಹೇಳಿದ್ದೇನೆ. ರಾಜನ್! ಆಗ ನಾನು ರಾಜಾ ವಿಶ್ವಾವಸುವಿಗೆ ಹೇಳಿದೆನು:

“ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕೇಳು. ಗಂಧರ್ವೇಂದ್ರ! ವಿಶ್ವ-ಅವಿಶ್ವ ಎಂದು ನೀನೇನು ಪ್ರಶ್ನಿಸಿದೆಯೋ ಅವುಗಳಲ್ಲಿ ವಿಶ್ವಾ ಎನ್ನುವುದು ಅವ್ಯಕ್ತ ಪ್ರಕೃತಿಯ ಹೆಸರು. ಸಂಸಾರಬಂಧನದಲ್ಲಿ ತೊಡಗಿಸುವ ಕಾರಣದಿಂದ ಅದು ಭೂತ, ಭವಿಷ್ಯ ಮತ್ತು ವರ್ತಮಾನ – ಈ ಮೂರೂ ಕಾಲಗಳಲ್ಲಿಯೂ ಭಯಂಕರವಾಗಿರುತ್ತದೆ. ಇದನ್ನು ಚೆನ್ನಾಗಿ ತಿಳಿದುಕೋ. ವಿಶ್ವಾ ಅಥವಾ ಅವ್ಯಕ್ತ ಪ್ರಕೃತಿಯು ತ್ರಿಗುಣಮಯಿಯು. ಏಕೆಂದರೆ ಅದು ತ್ರಿಗುಣಾತ್ಮಕ ಜಗತ್ತಿನ ಉತ್ಪತ್ತಿಕಾರಕವು. ಅದಕ್ಕಿಂತಲೂ ಭಿನ್ನವಾದ ನಿಷ್ಕಲ ಅಂದರೆ ಕಲೆಗಳಿಲ್ಲದ ಆತ್ಮವನ್ನೇ ಅವಿಶ್ವ ಎಂದು ಹೇಳುತ್ತಾರೆ. ಅಶ್ವ ಮತ್ತು ಅಶ್ವಾಗಳ ಜೋಡಿಯನ್ನೂ ಹೀಗೆಯೇ ವರ್ಣಿಸಿದ್ದಾರೆ. ಅರ್ಥಾತ್ ಅಶ್ವಾ ಅವ್ಯಕ್ತ ಪ್ರಕೃತಿ ಮತ್ತು ಅಶ್ವ ಪುರುಷ. ಅವ್ಯಕ್ತ ಪ್ರಕೃತಿಯನ್ನು ಸಗುಣವೆಂದೂ ಪುರುಷನನ್ನು ನಿರ್ಗುಣನೆಂದೂ ಹೇಳಿದ್ದಾರೆ. ಇದೇ ರೀತಿ ವರುಣನನ್ನು ಪ್ರಕೃತಿಯೆಂದೂ ಮಿತ್ರನನ್ನು ಪುರುಷನೆಂದೂ ಅರ್ಥಮಾಡಿಕೊಳ್ಳಬೇಕು. ಜ್ಞಾನವು ಪ್ರಕೃತಿ ಮತ್ತು ಜ್ಞೇಯವು ನಿಷ್ಕಲ ಪುರುಷ ಆತ್ಮ ಎಂದು ಹೇಳುತ್ತಾರೆ. ಹೀಗೆಯೇ ಅಜ್ಞವು ಪ್ರಕೃತಿ ಮತ್ತು ನಿಷ್ಕಲ ಪುರುಷನು ಜ್ಞಾತಾ ಎಂದು ಹೇಳಿದ್ದಾರೆ. ಕ, ತಪಾ ಮತ್ತು ಅತಪಾ ಇವುಗಳ ಕುರಿತು ಕೇಳಿದ್ದೀಯೆ. ಪುರುಷನೇ ಕ ಎಂದು ಹೇಳಿದ್ದಾರೆ. ಪ್ರಕೃತಿಯು ತಪಾ ಮತ್ತು ನಿಷ್ಕಲ ಪುರುಷನು ಅತಪಾ ಎಂದು ಹೇಳಿದ್ದಾರೆ. ಹೀಗೆಯೇ ಅವ್ಯಕ್ತ ಪ್ರಕೃತಿಯನ್ನು ಅವೇದ್ಯ ಎಂದೂ ಪುರುಷನನ್ನು ವೇದ್ಯ ಎಂದೂ ಹೇಳಿದ್ದಾರೆ. ಚಲ ಮತ್ತು ಅಚಲ ಇವುಗಳ ಕುರಿತು ನೀನು ಕೇಳಿದ್ದೀಯೆ. ಅವುಗಳ ಕುರಿತೂ ಕೇಳು. ಸೃಷ್ಟಿ ಮತ್ತು ಸಂಹಾರಗಳ ಕಾರಣೀಭೂತ ಪ್ರಕೃತಿಯನ್ನು ಚಲಾ ಎನ್ನುತ್ತಾರೆ ಮತ್ತು ಸೃಷ್ಟಿ-ಪ್ರಲಯಗಳ ಕರ್ತಾ ಪುರುಷನೇ ನಿಶ್ಚಲ ಪುರುಷನೆಂದು ಹೇಳಿದ್ದಾರೆ. ಆಧ್ಯಾತ್ಮಗತಿನಿಶ್ಚಯಿಗಳು ಪ್ರಕೃತಿ ಮತ್ತು ಪುರುಷ ಎರಡೂ ಅಜ್ಞಗಳು. ಎರಡೂ ನಿಶ್ಚಲವಾದವುಗಳು ಮತ್ತು ಎರಡೂ ಅಕ್ಷಯ, ಅಜನ್ಮ ಮತ್ತು ನಿತ್ಯವಾದವುಗಳು ಎಂದು ಹೇಳುತ್ತಾರೆ. ಜನ್ಮವನ್ನು ಸ್ವೀಕರಿಸಿದರೂ ಕ್ಷಯರಹಿತನಾಗಿರುವುದರಿಂದ ಪುರುಷನು ಅಜನ್ಮ, ಅವಿನಾಶೀ ಮತ್ತು ಅಕ್ಷಯನೆಂದು ಹೇಳಿದ್ದಾರೆ. ಏಕೆಂದರೆ ಎಂದೂ ಅದರ ಕ್ಷಯವಾಗುವುದಿಲ್ಲ. ಗುಣಗಳ ಕ್ಷಯವಾಗುವ ಕಾರಣದಿಂದ ಪ್ರಕೃತಿಯು ಕ್ಷಯಶೀಲ ಎಂದೂ ಮತ್ತು ಅದರ ಪ್ರೇರಕವಾಗಿರುವುದರಿಂದ ಪುರುಷನು ಅಕ್ಷಯನೆಂದೂ ವಿದ್ವಾನರು ಹೇಳಿದ್ದಾರೆ. ಈಗ ನಿನಗೆ ಹೇಳಿದುದೇ ಮೋಕ್ಷಕ್ಕೆ ಸಹಾಯಕವಾಗುವ ನಾಲ್ಕನೆಯ ಅನ್ವೀಕ್ಷಿಕೀ ವಿದ್ಯೆ. ವಿಶ್ವಾವಸೋ! ಈ ಅನ್ವೀಕ್ಷಿಕೀ ವಿದ್ಯೆಯೊಡನೆ ವೇದವಿದ್ಯಾರೂಪೀ ಧನವನ್ನು ಗಳಿಸಿ ನಿತ್ಯಕರ್ಮದಲ್ಲಿ ತೊಡಗಿಕೊಂಡಿರಬೇಕು. ಎಲ್ಲ ವೇದಗಳೂ ಏಕಾಂತದರ್ಶನಗಳೆಂದು ಹೇಳಿದ್ದಾರೆ. ಗಂಧರ್ವಸತ್ತಮ! ಎಲ್ಲವೂ ಯಾವುದರಿಂದ ಉತ್ಪನ್ನವಾಗಿದೆಯೋ, ಯಾವುದರಲ್ಲಿ ಸ್ಥಿತವಾಗಿದೆಯೋ ಮತ್ತು ಯಾವುದರಲ್ಲಿ ಲೀನವಾಗುವುದೋ ಆ ವೇದಾರ್ಥ ವೇದ್ಯ ಪರಮಾತ್ಮನನ್ನು ಅರಿಯದೇ ಇರುವವರು ಅದರಿಂದ ಚ್ಯುತರಾಗಿ ಪುನಃ ಪುನಃ ಹುಟ್ಟುತ್ತಾರೆ ಮತ್ತು ಸಾಯುತ್ತಾರೆ. ಸಾಂಗೋಪಾಂಗವಾದ ಪಂಚ ವೇದಗಳನ್ನು ಪಡೆದುಕೊಂಡೂ ವೇದವೇದ್ಯನಾದ ಪರಮಾತ್ಮನನ್ನು ಅರಿತುಕೊಳ್ಳದವರು ಕೇವಲ ವೇದಗಳ ಭಾರವನ್ನು ಹೊರುತ್ತಾರೆ. ಗಂಧರ್ವಸತ್ತಮ! ತುಪ್ಪವನ್ನು ಬಯಸಿದವನು ಒಡೆದ ಹಾಲನ್ನು ಕಡೆದರೆ ಅವನಿಗೆ ಅದರಲ್ಲಿ ಮಲವು ದೊರಕುವುದೇ ಹೊರತು ಬೆಣ್ಣೆಯಾಗಲೀ ತುಪ್ಪವಾಗಲೀ ದೊರಕುವುದಿಲ್ಲ. ಹಾಗೆಯೇ ವೇದಾಧ್ಯಯನ ಮಾಡಿದ್ದರೂ ವೇದ್ಯ ಮತ್ತು ಅವೇದ್ಯಗಳ ತತ್ತ್ವವನ್ನು ಅರಿಯದ ಮೂಢ ಬುದ್ಧಿ ಮಾನವನು ಕೇವಲ ಜ್ಞಾನದ ಹೊರೆಯನ್ನು ಹೊರವವನೆಂದು ಹೇಳುತ್ತಾರೆ. ನಿತ್ಯವೂ ಅಂತರಾತ್ಮನ ಮೂಲಕ ಪ್ರಕೃತಿ ಮತ್ತು ಪುರುಷರ ಜ್ಞಾನವನ್ನು ಪಡೆದುಕೊಳ್ಳಬೇಕು. ಅದರಿಂದ ಅವನು ಪುನಃ ಪುನಃ ಜನ್ಮ-ನಿಧನಗಳ ಚಕ್ರದಲ್ಲಿ ಸಿಲುಕುವುದಿಲ್ಲ. ಸಂಸಾರದಲ್ಲಿ ಜನ್ಮ-ನಿಧನಗಳು ನಿರಂತರವಾಗಿ ನಡೆಯುತ್ತವೆ ಎಂದು ಯೋಚಿಸಿ ವೈದಿಕ ಕರ್ಮಕಾಂಡಗಳಲ್ಲಿ ಹೇಳಿರುವ ಎಲ್ಲ ಕರ್ಮಗಳೂ ಮತ್ತು ಅವುಗಳ ಫಲಗಳೂ ವಿನಾಶಶೀಲ ಎಂದು ತಿಳಿದು ಅವುಗಳನ್ನು ಪರಿತ್ಯಜಿಸಿ ಮನುಷ್ಯನು ಇಲ್ಲಿ ಅಕ್ಷಯ ಧರ್ಮವನ್ನು ಆಶ್ರಯಿಸಬೇಕು. ಕಾಶ್ಯಪ! ಪ್ರತಿದಿನ ಪರಮಾತ್ಮನ ಸ್ವರೂಪದ ಕುರಿತು ಚಿಂತನೆಯನ್ನು ಮಾಡುವ ಸಾಧಕನಿಗೆ ಪ್ರಕೃತಿಯ ಸಂಸರ್ಗ ರಹಿತನಾದ ಇಪ್ಪತ್ತಾರನೇ ತತ್ತ್ವರೂಪ ಪರಮೇಶ್ವರನು ಪ್ರಾಪ್ತನಾಗುತ್ತಾನೆ. ಅನ್ಯರು ಆತ್ಮನ ಕುರಿತು ದ್ವೈತಭಾವವನ್ನು ತಾಳಿ “ಸನಾತನ ಅವ್ಯಕ್ತ ಪರಮಾತ್ಮನು ಬೇರೆ ಮತ್ತು ಇಪ್ಪತ್ತೈದನೇ ತತ್ತ್ವರೂಪ ಜೀವಾತ್ಮನು ಬೇರೆ ಎಂದು ಹೇಳುತ್ತಾರೆ. ಆದರೆ ಸಾಧುಗಳು ಇವೆರಡೂ ಒಂದೇ ಎಂದು ಹೇಳುತ್ತಾರೆ. ಜನ್ಮ-ಮೃತ್ಯುಗಳ ಭಯರಹಿತರಾದ ಪರಮ ಪದವನ್ನು ಪಡೆಯಲಿಚ್ಛಿಸುವ ಸಾಂಖ್ಯ ಯೋಗಿಗಳು ಜೀವಾತ್ಮಾ ಮತ್ತು ಪರಮಾತ್ಮರು ಪರಸ್ಪರರಿಂದ ಭಿನ್ನರಲ್ಲರೆಂದೇ ಅಭಿಪ್ರಾಯಪಡುತ್ತಾರೆ. ಆದರೂ ಅವರು ಜೀವ ಮತ್ತು ಈಶ್ವರರನ್ನು ಭಿನ್ನರೆಂದು ಕಾಣುವ ದರ್ಶನವನ್ನೂ ಅಭಿನಂದಿಸುತ್ತಾರೆ.”

ವಿಶ್ವಾವಸುವು ಹೇಳಿದನು:

“ಬ್ರಾಹ್ಮಣಸತ್ತಮ! ನೀನು ಹೇಳಿದ ಈ ಇಪ್ಪತ್ತೈದನೆಯ ತತ್ತ್ವರೂಪ, ಪರಮಾತ್ಮನಿಗಿಂತ ಭಿನ್ನವಾಗಿಲ್ಲದ, ಜೀವಾತ್ಮದ ಕುರಿತು ನನಗೊಂದು ಸಂದೇಹವಿದೆ. ಜೀವಾತ್ಮನು ಪರಮಾತ್ಮನಿಗಿಂತ ಅಭಿನ್ನವೋ ಅಥವಾ ಅಲ್ಲವೋ? ಇದರ ಕುರಿತು ನನಗೆ ಹೇಳಬೇಕು. ಜೈಗೀಷವ್ಯ, ಅಸಿತ, ದೇವಲ, ವಿಪ್ರರ್ಷಿ ಪರಾಶರ, ಧೀಮತ ವಾರ್ಷಗಣ್ಯ, ಭಿಕ್ಷು ಪಂಚಶಿಖ, ಕಪಿಲ, ಶುಕ, ಗೌತಮ, ಆರ್ಷ್ಟಿಷೇಣ, ಮಹಾತ್ಮಾ ಗರ್ಗ, ನಾರದ, ಆಸುರಿ, ಧೀಮತ ಪುಲಸ್ತ್ಯ, ಸನತ್ಕುಮಾರ, ಮಹಾತ್ಮಾ ಶುಕ್ರ ಮತ್ತು ತಂದೆ ಕಶ್ಯಪ ಇವರಿಂದಲೂ ಕೂಡ ಹಿಂದೆ ನಾನು ಈ ವಿಷಯದ ಕುರಿತು ಕೇಳಿದ್ದೆ. ತದನಂತರ ರುದ್ರ, ಧೀಮತ ವಿಶ್ವರೂಪ, ಅನ್ಯ ದೇವತೆಗಳು, ಪಿತೃಗಳು ಮತ್ತು ದೈತ್ಯರಿಂದಲೂ ಕೂಡ ಅಲ್ಲಲ್ಲಿಂದ ನಾನು ಸಂಪೂರ್ಣ ಜ್ಞಾನವನ್ನು ಪಡೆದುಕೊಂಡೆನು. ಅವರೆಲ್ಲರೂ ವೇದ್ಯವಾದುದನ್ನು ಪೂರ್ಣ ಮತ್ತು ನಿತ್ಯ ಎಂದು ಹೇಳುತ್ತಾರೆ. ಬ್ರಾಹ್ಮಣ! ಈಗ ನಾನು ಈ ವಿಷಯದಲ್ಲಿ ನಿನ್ನ ಬುದ್ಧಿಯ ನಿರ್ಣಯವನ್ನು ಕೇಳ ಬಯಸುತ್ತೇನೆ. ಏಕೆಂದರೆ ನೀನು ವಿದ್ವಾನರಲ್ಲಿ ಶ್ರೇಷ್ಠನು. ಶಾಸ್ತ್ರಗಳ ಪ್ರಗಲ್ಭ ಪಂಡಿತನು ಮತ್ತು ಅತ್ಯಂತ ಬುದ್ಧಿವಂತನೂ ಹೌದು. ಬ್ರಾಹ್ಮಣ! ನಿನಗೆ ತಿಳಿಯದೇ ಇರುವ ವಿಷಯವ್ಯಾವುದೂ ಇಲ್ಲ. ನಿನ್ನನ್ನು ವೈದಿಕ ಜ್ಞಾನದ ಭಂಡಾರವೆಂದು ತಿಳಿಯುತ್ತಾರೆ. ದೇವಲೋಕ ಮತ್ತು ಪಿತೃಲೋಕಗಳಲ್ಲಿಯೂ ನಿನ್ನ ಖ್ಯಾತಿಯಿದೆ. ಬ್ರಹ್ಮಲೋಕಕ್ಕೆ ಹೋಗಿರುವ ಮಹರ್ಷಿಗಳೂ ನಿನ್ನ ಕುರಿತು ಹೇಳುತ್ತಾರೆ. ತಪತರ ಪತಿ ಆದಿತ್ಯನು ನಿನಗೆ ವೇದಗಳನ್ನು ಉಪದೇಶಿಸಿದ್ದಾನೆ. ಬ್ರಹ್ಮನ್! ಯಾಜ್ಞವಲ್ಕ್ಯ! ನೀನು ಸಂಪೂರ್ಣ ಸಾಂಖ್ಯ ಮತ್ತು ಯೋಗ ಶಾಸ್ತ್ರದ ವಿಶೇಷ ಜ್ಞಾನಿಯು.  ನೀನು ಪ್ರಬುದ್ಧನು ಎನ್ನುವುದರಲ್ಲಿ ಸಂದಿಗ್ಧತೆಯೇ ಇಲ್ಲ. ಚರಾಚರಗಳನ್ನೂ ನೀನು ತಿಳಿದುಕೊಂಡಿದ್ದೀಯೆ. ಬೆಣ್ಣೆಯಿಂದ ಕೂಡಿದ ತುಪ್ಪದಂತಿರುವ ಆ ಜ್ಞಾನವನ್ನು ಕೇಳಬಯಸುತ್ತೇನೆ.”

ಆಗ ಅವನಿಗೆ ನಾನು ಹೇಳಿದೆನು:

“ಗಂಧರ್ವ ಸತ್ತಮ! ರಾಜನ್! ನೀನು ಸಂಪೂರ್ಣ ಜ್ಞಾನವನ್ನೂ ಧರಿಸಬಲ್ಲೆ ಎಂದು ತಿಳಿಯುತ್ತೇನೆ. ನೀನು ಸಂಪೂರ್ಣ ಜ್ಞಾನಿಯಾಗಿದ್ದರೂ ನನ್ನ ಮತವನ್ನು ಕೇಳಿ ತಿಳಿಯಲು ಬಯಸುತ್ತಿರುವೆ. ಆದುದರಿಂದ ನಾನು ಕೇಳಿದುದನ್ನು ನೀನು ಕೇಳು. ಗಂಧರ್ವ! ಜಡವಾದ ಪ್ರಕೃತಿಯನ್ನು ಇಪ್ಪತ್ತೈದನೆಯ ತತ್ತ್ವ ಜೀವಾತ್ಮನು ಅರಿತುಕೊಂಡಿದ್ದಾನೆ, ಆದರೆ ಪ್ರಕೃತಿಗೆ ಜೀವಾತ್ಮನ ಅರಿವಿಲ್ಲ. ಸಾಂಖ್ಯಯೋಗದ ತತ್ತ್ವಜ್ಞರು ಶೃತಿಯ ನಿದರ್ಶನದಂತೆ ನೀರಿನಲ್ಲಿ ಪ್ರತಿಬಿಂಬಿತಗೊಳ್ಳುವ ಚಂದ್ರಮನಂತೆ ಪ್ರಕೃತಿಯಲ್ಲಿ ಜ್ಞಾನಸ್ವರೂಪ ಜೀವಾತ್ಮಕನ ಅರಿವು ಉಂಟಾಗುವುದರಿಂದ ಪ್ರಕೃತಿಯನ್ನು ಪ್ರಧಾನ ಎಂದು ಕರೆಯುತ್ತಾರೆ. ಅನಘ! ಜೀವಾತ್ಮನು ಜಾಗ್ರತಾದಿ ಅವಸ್ಥೆಗಳಲ್ಲಿ ಎಲ್ಲವನ್ನೂ ನೋಡುತ್ತಾನೆ. ಸುಷುಪ್ತಿ ಮತ್ತು ಸಮಾಧಿ ಅವಸ್ಥೆಗಳಲ್ಲಿ ಏನನ್ನೂ ನೋಡುವುದಿಲ್ಲ. ಹಾಗೆಯೇ ಪರಮಾತ್ಮನು ಸದಾ ಇಪ್ಪತ್ತಾರನೆಯ ತತ್ತ್ವರೂಪ ಅಂದರೆ ತನ್ನನ್ನು ತಾನು, ಇಪ್ಪತ್ತೈದನೆಯ ತತ್ತ್ವರೂಪ ಜೀವಾತ್ಮಕ ಮತ್ತು ಇಪ್ಪತ್ನಾಲ್ಕನೆಯ ತತ್ತ್ವರೂಪ ಪ್ರಕೃತಿ – ಇವುಗಳನ್ನು ನೋಡುತ್ತಿರುತ್ತಾನೆ. ಪರಮಾತ್ಮನು ಅದನ್ನು ನಿರಂತರವಾಗಿ ನೋಡುತ್ತಿದ್ದರೂ ಜೀವಾತ್ಮವು ತನಗಿಂತ ಹೆಚ್ಚಿನ ಬೇರೆಯಾವುದೂ ಇಲ್ಲ ಎಂದು ಅಭಿಮಾನ ಪಟ್ಟರೆ ಅದು ಬುದ್ಧಿಯಿದ್ದರೂ ತಿಳುವಳಿಕೆಯಿಲ್ಲದ ಹಾಗೆ. ಜ್ಞಾನದರ್ಶೀ ಮನುಷ್ಯರು ಇಪ್ಪತ್ನಾಲ್ಕನೆಯ ತತ್ತ್ವರೂಪ ಪ್ರಕೃತಿಯನ್ನು ಆತ್ಮಭಾವದಿಂದ ಗ್ರಹಿಸಬಾರದು. ಮೀನು ನೀರಿನಲ್ಲಿ ಓಡಾಡುತ್ತಿದ್ದರೂ ತನ್ನನ್ನು ಹೇಗೆ ನೀರಿಗಿಂತ ಭಿನ್ನ ಎಂದು ತಿಳಿದುಕೊಂಡಿರುತ್ತದೆಯೋ ಹಾಗೆ ಮನುಷ್ಯನು ತನ್ನ ಪ್ರಕೃತಿಯಂತೆ ನಡೆದುಕೊಳ್ಳುತ್ತಿದ್ದರೂ ಪ್ರಕೃತಿಯೇ ತನ್ನ ಸ್ವರೂಪವೆಂದು ತಿಳಿದುಕೊಳ್ಳಬಾರದು. ಮೀನು ನೀರಿನಲ್ಲಿದ್ದುಕೊಂಡೂ ಹೇಗೆ ನೀರನ್ನು ತನಗಿಂತ ಭಿನ್ನ ಎಂದು ತಿಳಿಯುತ್ತದೆಯೋ ಹಾಗೆ ಜೀವಾತ್ಮನು ಪ್ರಾಕೃತ ಶರೀರದಲ್ಲಿ ಇದ್ದುಕೊಂಡೂ ತಾನು ಪ್ರಕೃತಿಗಿಂತ ಭಿನ್ನ ಎಂದು ತಿಳಿದುಕೊಳ್ಳುತ್ತಾನೆ. ಆದರೂ ಅವನು ಶರೀರದ ಮೇಲಿನ ಸ್ನೇಹ, ಸಹವಾಸ ಮತ್ತು ಅಭಿಮಾನದ ಕಾರಣದಿಂದ ಪರಮಾತ್ಮನೊಂದಿಗೆ ತನ್ನ ಏಕತೆಯನ್ನು ಅನುಭವಿಸದೇ ಇರುವುದರಿಂದ ಕಾಲದ ಸಮುದ್ರದಲ್ಲಿ ಮುಳುಗಿಹೋಗುತ್ತಾನೆ.  ಸಮತ್ವಬುದ್ಧಿಯಿಂದ ತನ್ನ ಮತ್ತು ಪರಮಾತ್ಮನ ಏಕತೆಯನ್ನು ಅರಿತುಕೊಂಡಾಗ ಆ ಕಾಲಸಮುದ್ರದಿಂದ ಅವನ ಉದ್ಧಾರವಾಗುತ್ತದೆ. ದ್ವಿಜನು ಯಾವಾಗ ತಾನು ಅನ್ಯ ಮತ್ತು ಈ ಪ್ರಾಕೃತ ಶರೀರ ಅಥವಾ ಅನ್ನಾತ್ಮ ಜಗತ್ತು ತನಗಿಂತ ಸರ್ವಥಾ ಭಿನ್ನವಾಗಿದೆ ಎಂದು ತಿಳಿದುಕೊಳ್ಳುತ್ತಾನೋ ಆಗ ಅವನು ಪ್ರಕೃತಿಯ ಸಂಸರ್ಗ ರಹಿತನಾಗಿ ಇಪ್ಪತ್ತಾರನೆಯ ತತ್ತ್ವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ರಾಜನ್! ಪರಮಾತ್ಮನು ಭಿನ್ನ ಮತ್ತು ಜೀವಾತ್ಮನು ಭಿನ್ನ. ಏಕೆಂದರೆ ಪರಮಾತ್ಮನು ಜೀವಾತ್ಮಕ್ಕೆ ಆಶ್ರಯನು. ಆದರೆ ಜ್ಞಾನೀ ಸಂತ ಮಹಾತ್ಮರು ಇವೆರಡನ್ನೂ ಒಂದೇ ಎಂದು ನೋಡುತ್ತಾರೆ ಮತ್ತು ತಿಳಿಯುತ್ತಾರೆ ಕೂಡ. ಕಾಶ್ಯಪ! ಜನ್ಮ-ಮೃತ್ಯುಗಳ ಭಯದಿಂದ ಭೀತರಾದ ಸಾಂಖ್ಯ ಮತ್ತು ಯೋಗ ಸಾಧಕರು ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೇ ಎಂದು ಕಾಣುತ್ತಾರೆ ಮತ್ತು ಆ ಅಭೇದ-ದರ್ಶನವನ್ನು ಅಭಿನಂದಿಸುತ್ತಾರೆ. ಯಾವಾಗ ಜೀವಾತ್ಮವು ಪ್ರಕೃತಿಯ ಸಂಸರ್ಗದಿಂದ ಹೊರಬಂದು ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತದೆಯೋ ಆಗ ಅವನು ಸರ್ವಜ್ಞನಾಗಿ ಈ ಸಂಸಾರದಲ್ಲಿ ಪುನರ್ಜನ್ಮವನ್ನು ಹೊಂದುವುದಿಲ್ಲ. ಅನಘ! ಹೀಗೆ ನಾನು ನಿನಗೆ ಜಡ ಪ್ರಕೃತಿ, ಚೇತನ ಜೀವಾತ್ಮಾ ಮತ್ತು ಬೋಧಸ್ವರೂಪ ಪರಮಾತ್ಮರನ್ನು ಶ್ರುತಿಯ ಅನುಸಾರವಾಗಿ ಯಥಾವತ್ತಾಗಿ ನಿರೂಪಿಸಿದ್ದೇನೆ. ಕಾಶ್ಯಪ! ಜೀವಾತ್ಮ ಮತ್ತು ಪ್ರಕೃತಿಗಳು ಬೇರೆಯೆಂದು ತಿಳಿಯದ ಮನುಷ್ಯನು ಮಂಗಲಕಾರೀ ತತ್ತ್ವದ ಮೇಲೆ ದೃಷ್ಟಿಯನ್ನು ಹಾಯಿಸುವುದಿಲ್ಲ. ಆಗ ಅವನು ಕೇವಲ[12] ಮತ್ತು ಅಕೇವಲ[13], ಸರ್ವಕ್ಕೆ ಆದಿಕಾರಣ ಪರಮಾತ್ಮನನ್ನು ಯಥಾರ್ಥರೂಪದಲ್ಲಿ ತಿಳಿಯುವುದಿಲ್ಲ.”

ವಿಶ್ವಾವಸುವು ಹೇಳಿದನು:

“ವಿಭೋ! ದೇವತೆಗಳ ಆದಿಕಾರಣ ಬ್ರಹ್ಮನ ವಿಷಯದಲ್ಲಿ ನೀನು ಯಥಾವತ್ತಾಗಿ ವರ್ಣಿಸಿದುದು ಸತ್ಯ, ಶುಭ, ಸುಂದರ ಮತ್ತು ಪರಮ ಮಂಗಲಕಾರಿಯಾಗಿದೆ. ನಿನ್ನ ಮನಸ್ಸು ಸದಾ ಹೀಗೆ ಜ್ಞಾನದಲ್ಲಿ ಸ್ಥಿತವಾಗಿರಲಿ ಮತ್ತು ನಿನಗೆ ನಿತ್ಯವೂ ಅಕ್ಷಯ ಕಲ್ಯಾಣವಾಗಲಿ! ನಮಸ್ಕಾರ!”

ರಾಜನ್! ಹೀಗೆ ಹೇಳಿ ಮಹಾತ್ಮಾ ಗಂಧರ್ವರಾಜನು ತನ್ನ ಕಾಂತಿಯುಕ್ತ ದರ್ಶನದಿಂದ ಪ್ರಕಾಶಿತನಾಗಿ ನನ್ನನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಸ್ವರ್ಗಲೋಕಕ್ಕೆ ಹೊರಟುಹೋದನು. ಆಗ ನಾನೂ ಕೂಡ ಅತ್ಯಂತ ಸಂತೋಷದಿಂದ ಅವನ ಕಡೆ ನೋಡುತ್ತಿದ್ದೆ. ನರೇಂದ್ರ! ಆಕಾಶದಲ್ಲಿ ಸಂಚರಿಸುವ ಬ್ರಹ್ಮಾದಿ ದೇವತೆಗಳು, ಭೂಮಿಯ ಮೇಲೆ ವಾಸಿಸುವ ಮನುಷ್ಯರು, ಮತ್ತು ಭೂಮಿಯ ಕೆಳಗಿನ ಲೋಕಗಳಲ್ಲಿರುವವರಲ್ಲಿ ಮೋಕ್ಷಮಾರ್ಗದ ಆಶ್ರಯವನ್ನು ಪಡೆದಿರುವ ಎಲ್ಲರಿಗೂ ಅವರಿದ್ದಲ್ಲಿಗೇ ಹೋಗಿ ವಿಶ್ವಾವಸುವು ನಾನು ಹೇಳಿದ ಆ ಸತ್ಯದರ್ಶನದ ಉಪದೇಶವನ್ನು ನೀಡಿದನು. ಸಾಂಖ್ಯಧರ್ಮರತ ಸರ್ವ ಸಾಂಖ್ಯರಿಗೂ, ಯೋಗಧರ್ಮರತ ಸರ್ವ ಯೋಗಿಗಳಿಗೂ ಮತ್ತು ಅನ್ಯ ಮೋಕ್ಷಕಾಮೀ ಮನುಷ್ಯರಿಗೂ ಈ ಉಪದೇಶವು ಜ್ಞಾನದ ಪ್ರತ್ಯಕ್ಷ ಫಲವನ್ನು ನೀಡುತ್ತದೆ. ನರೇಂದ್ರ! ಜ್ಞಾನದಿಂದಲೇ ಮೋಕ್ಷವುಂಟಾಗುತ್ತದೆ. ಅಜ್ಞಾನದಿಂದಲ್ಲ. ಇದನ್ನು ವಿದ್ವಾಂಸರು ಹೇಳುತ್ತಾರೆ. ಆದುದರಿಂದ ತನ್ನನ್ನು ತಾನು ಜನ್ಮ-ಮೃತ್ಯುವಿನ ಬಂಧನದಿಂದ ಬಿಡಿಸಿಕೊಳ್ಳಬಹುದಾದ ಯಥಾರ್ಥ ಜ್ಞಾನವನ್ನು ಅನ್ವೇಷಿಸಬೇಕು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅಥವಾ ನೀಚ ವರ್ಣಗಳಲ್ಲಿ ಜನಿಸಿದ ಪುರುಷರಿಂದಲೂ ಜ್ಞಾನವು ದೊರೆಯುವುದಾದರೆ ಅವರಿಂದ ಜ್ಞಾನವನ್ನು ಪಡೆದುಕೊಂಡು ಶ್ರದ್ಧಾಲು ಮನುಷ್ಯನು ಸದಾ ಅದರಲ್ಲಿ ಶ್ರದ್ಧೆಯನ್ನಿಡಬೇಕು. ಯಾರಲ್ಲಿ ಶ್ರದ್ಧೆಯಿದೆಯೋ ಅವನಲ್ಲಿ ಜನ್ಮ-ಮೃತ್ಯುವಿನ ಪ್ರವೇಶವಾಗುವುದಿಲ್ಲ. ಬ್ರಹ್ಮನಿಂದ ಹುಟ್ಟಿದ ಕಾರಣದಿಂದ ಸರ್ವವರ್ಣದವರೂ ಬ್ರಾಹ್ಮಣರೇ. ಎಲ್ಲರೂ ಸದಾ ಬ್ರಹ್ಮನ ಉಚ್ಚಾರಣೆಯನ್ನೇ ಮಾಡುತ್ತಾರೆ. ನಾನು ಬ್ರಹ್ಮಬುದ್ಧಿಯಿಂದಲೇ ಯಥಾರ್ಥ ಶಾಸ್ತ್ರದ ಸಿದ್ಧಾಂತವನ್ನು ಹೇಳುತ್ತಿದ್ದೇನೆ. ಈ ಸಂಪೂರ್ಣ ಜಗತ್ತು, ಈ ಎಲ್ಲ ದೃಶ್ಯಪ್ರಪಂಚವೂ ಬ್ರಹ್ಮವೇ ಆಗಿದೆ. ಬ್ರಹ್ಮನ ಮುಖದಿಂದ ಬ್ರಾಹ್ಮಣರು ಹುಟ್ಟಿದರು. ಅವನ ಬಾಹುಗಳಿಂದ ಕ್ಷತ್ರಿಯರು ಹುಟ್ಟಿದರು. ನಾಭಿಯಿಂದ ವೈಶ್ಯರು ಮತ್ತು ಪಾದಗಳಿಂದ ಶೂದ್ರರು ಹುಟ್ಟಿದರು. ಆದುದರಿಂದ ಸರ್ವ ವರ್ಣದವರೂ ಬ್ರಹ್ಮರೂಪಿಗಳು. ಅನ್ಯಥಾ ತಿಳಿದುಕೊಳ್ಳಬಾರದು. ರಾಜನ್! ಅಜ್ಞಾನದ ಕಾರಣದಿಂದ ಮನುಷ್ಯನು ಕರ್ಮಗಳ ಫಲವಾಗಿ ಬೇರೆ ಬೇರೆ ಯೋನಿಗಳಲ್ಲಿ ಜನ್ಮವೆತ್ತುತ್ತಾನೆ ಮತ್ತು ಸಾಯುತ್ತಾನೆ. ಜ್ಞಾನಹೀನ ಮನುಷ್ಯನು ತನ್ನ ಭಯಂಕರ ಅಜ್ಞಾನದ ಕಾರಣದಿಂದಲೇ ನಾನಾ ಪ್ರಕಾರದ ಪ್ರಾಕೃತ ಯೋನಿಗಳಲ್ಲಿ ಬೀಳುತ್ತಾನೆ. ಆದುದರಿಂದ ಎಲ್ಲಕಡೆಗಳಿಂದಲೂ ಜ್ಞಾನಪ್ರಾಪ್ತಿಗೆ ಪ್ರಯತ್ನಿಸಬೇಕು. ನಾನು ನಿನಗೆ ಮೊದಲೇ ಹೇಳಿದಂತೆ ಎಲ್ಲವರ್ಣದವರೂ ತಮ್ಮ ತಮ್ಮ ಆಶ್ರಮಗಳಲ್ಲಿದ್ದುಕೊಂಡೇ ಜ್ಞಾನ ಪ್ರಾಪ್ತಿಯನ್ನು ಮಾಡಿಕೊಳ್ಳಬಹುದು. ಆದುದರಿಂದ ಜ್ಞಾನದಲ್ಲಿ ಸ್ಥಿತನಾಗಿರುವ ಬ್ರಾಹ್ಮಣ ಅಥವ ಇತರ ವರ್ಣದವರಿಗೂ ನಿತ್ಯ ಮೋಕ್ಷಪ್ರಾಪ್ತಿಯ ಕುರಿತು ಹೇಳಲಾಗಿದೆ. ರಾಜನ್! ನೀನು ಕೇಳಿದುದಕ್ಕೆ ನಾನು ನಿನಗೆ ಯಥಾತಥ್ಯ ಉಪದೇಶವನ್ನು ನೀಡಿದ್ದೇನೆ. ಈಗ ನೀನು ಶೋಕರಹಿತನಾಗು ಮತ್ತು ಈ ತತ್ತ್ವಜ್ಞಾನದಲ್ಲಿ ಪಾರಂಗತನಾಗು. ನಾನು ನಿನಗೆ ಜ್ಞಾನದ ಉತ್ತಮ ಉಪದೇಶವನ್ನು ನೀಡಿದ್ದೇನೆ. ನಿನಗೆ ನಿತ್ಯವೂ ಮಂಗಳವಾಗಲಿ!””

ಧೀಮತ ಯಾಜ್ಞವಲ್ಕ್ಯನ ಈ ರೀತಿಯ ಉಪದೇಶದಿಂದ ಮಿಥಿಲಾಧಿಪತಿ ರಾಜಾ ಜನಕನು ಅತ್ಯಂತ ಪ್ರಸನ್ನನಾದನು. ಆ ಮುನಿವರನಿಗೆ ಪ್ರದಕ್ಷಿಣೆ ನಮಸ್ಕಾರಗೈಯಲು ಅವನು ಹೊರಟು ಹೋದನು. ಆಗ ಮೋಕ್ಷವಿದು ದೇವರಾತನಂದನ ರಾಜಾ ಜನಕನು ಕುಳಿತಲ್ಲಿಂದಲೇ ಕೋಟಿ ಗೋವುಗಳನ್ನು ಸ್ಪರ್ಶಿಸಿ ಬ್ರಾಹ್ಮಣರಿಗೆ ದಾನಮಾಡಿದನು ಮತ್ತು ಪ್ರತ್ಯೇಕ ಬ್ರಾಹ್ಮಣನಿಗೆ ಒಂದೊಂದು ಬೊಗಸೆ ರತ್ನ ಮತ್ತು ಸುವರ್ಣಗಳನ್ನಿತ್ತನು. ಅನಂತರ ಮಿಥಿಲಾಧಿಪನು ವಿದೇಹ ರಾಜ್ಯವನ್ನು ತನ್ನ ಮಗನಲ್ಲಿ ಪ್ರತಿಷ್ಠಾಪಿಸಿ ಯತಿಧರ್ಮವನ್ನು ಪಾಲಿಸುತ್ತಾ ಇರತೊಡಗಿದನು. ರಾಜೇಂದ್ರ! ನರಾಧಿಪ! ಅವನು ಸಂಪೂರ್ಣ ಸಾಂಖ್ಯ, ಜ್ಞಾನ ಮತ್ತು ಯೋಗಶಾಸ್ತ್ರಗಳನ್ನು ಸ್ವಾಧ್ಯಾಯಗೈದು ಪ್ರಾಕೃತ ಧರ್ಮ ಮತ್ತು ಅಧರ್ಮಗಳನ್ನು ತ್ಯಾಜ್ಯವೆಂದು ಪರಿಗಣಿಸಿ “ನಾನು ಅನಂತ” ಎನ್ನುವ ನಿಶ್ಚಯಕ್ಕೆ ಬಂದನು. ಧರ್ಮ-ಅಧರ್ಮ, ಪಾಪ-ಪುಣ್ಯ, ಸತ್ಯ-ಅಸತ್ಯ ಮತ್ತು ಜನ್ಮ-ಮೃತ್ಯುಗಳು ವ್ಯಕ್ತ ಮತ್ತು ಅವ್ಯಕ್ತಗಳ ಕಾರ್ಯವೆಂದು ತಿಳಿದು, ಎಲ್ಲವೂ ಪ್ರಕೃತಿಜನ್ಯ ಮಿಥ್ಯವೆಂದು ತಿಳಿದು ಪ್ರಕೃತಿಸಂಸರ್ಗ ರಹಿತ ತನ್ನ ಶುದ್ಧ ಮತ್ತು ನಿತ್ಯ ಸ್ವರೂಪದ ಚಿಂತನೆಯಲ್ಲಿ ತೊಡಗಿದನು.

***

ಭೀಷ್ಮನು ಹೇಳಿದನು:

“ಸಾಂಖ್ಯ ಮತ್ತು ಯೋಗ ವಿದ್ವಾಂಸರು ತಮ್ಮ ತಮ್ಮ ಶಾಸ್ತ್ರಗಳಲ್ಲಿ ವರ್ಣಿತ ಲಕ್ಷಣಗಳ ಅನುಸಾರ ಬ್ರಹ್ಮನು ಇಷ್ಟ ಮತ್ತು ಅನಿಷ್ಟಗಳಿಂದ ಮುಕ್ತನು, ಅಚಲ ಭಾವದಿಂದಿರುವವನು ಮತ್ತು ಪರಾತ್ಪರನು ಎಂದು ಕಾಣುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ. ವಿದ್ವಾಂಸರು ಆ ಬ್ರಹ್ಮನನ್ನು ನಿತ್ಯ ಮತ್ತು ಪವಿತ್ರ ಎಂದು ಹೇಳುತ್ತಾರೆ. ಅದನ್ನು ತಿಳಿದುಕೊಂಡು ನೀನೂ ಕೂಡ ಪವಿತ್ರನಾಗು. ನರಶ್ರೇಷ್ಠ! ಕೊಟ್ಟಿದ್ದುದು, ಸ್ವೀಕರಿಸಿದವನು, ಕೊಡುವವನು, ದಾನಕ್ಕೆ ಅನುಮೋದಿಸಿದವನು ಎಲ್ಲರೂ ಆ ಅವ್ಯಕ್ತ ಪರಮಾತ್ಮನೇ ಹೌದು. ಪರಮಾತ್ಮನೇ ಈ ಎಲ್ಲವನ್ನೂ ಕೊಡುತ್ತಾನೆ ಮತ್ತು ತೆಗೆದುಕೊಳ್ಳುತ್ತಾನೆ. ಪರಮಾತ್ಮನೊಬ್ಬನೇ ಆತ್ಮೀಯನು. ಅವನಿಗಿಂತ ಹೆಚ್ಚಿನ ಅತ್ಮೀಯನು ಬೇರೆ ಯಾರಾಗಲು ಸಾಧ್ಯ? ಸದಾ ನೀನು ಇದನ್ನೇ ಸ್ವೀಕರಿಸು; ಅನ್ಯಥಾ ಯೋಚಿಸಬೇಡ. ಅವ್ಯಕ್ತ ಪ್ರಕೃತಿಯ ಜ್ಞಾನವಾಗಿರದ ಮತ್ತು ಸಗುಣ-ನಿರ್ಗುಣ ಪರಮಾತ್ಮನ ಅರಿವಾಗಿರದ ವಿದ್ವಾನನು ತೀರ್ಥಯಾತ್ರೆ ಮತ್ತು ಯಜ್ಞಗಳ ಅನುಷ್ಠಾನ ಮಾಡಬೇಕು. ಕುರುನಂದನ! ಮಹೀಪತೇ! ಸ್ವಾಧ್ಯಾಯ, ತಪಸ್ಸು ಅಥವಾ ಯಜ್ಞಗಳಿಂದ ಮೋಕ್ಷ ಅಥವಾ ಪರಮಾತ್ಮಪದವು ಪ್ರಾಪ್ತವಾಗುವುದಿಲ್ಲ. ಇವುಗಳ ಮುಖಾಂತರ ಮನುಷ್ಯನು ಪರಮಾತ್ಮನ ಸ್ಪಷ್ಟ ಜ್ಞಾನವನ್ನು ಪಡೆದುಕೊಳ್ಳಬಹುದು. ಹಾಗೆಯೇ ಮಹತ್ತತ್ತ್ವ ಮತ್ತು ಅಹಂಕಾರಗಳನ್ನು ಉಪಾಸನೆಮಾಡುವವನು ಅಹಂಕಾರವನ್ನು ಪಡೆದುಕೊಳ್ಳುತ್ತಾನೆ. ಆದರೆ ಅವರು ಮಹತ್ತತ್ತ್ವ ಮತ್ತು ಅಹಂಕಾರಕ್ಕಿಂತಲೂ ಶ್ರೇಷ್ಠವಾದ ಸ್ಥಾನವನ್ನು ಪಡೆದುಕೊಳ್ಳಬೇಕು. ಶಾಸ್ತ್ರಗಳ ಸ್ವಾಧ್ಯಾಯದಲ್ಲಿ ತತ್ಪರರಾಗಿರುವವರು ಪ್ರಕೃತಿಯ ಆಚೆಯಿರುವ ನಿತ್ಯ, ಜನ್ಮ-ಮೃತ್ಯು ರಹಿತ, ಮುಕ್ತ ಮತ್ತು ಸದಸತ್ಸ್ವರೂಪ ಪರಮಾತ್ಮನ ಜ್ಞಾನವನ್ನು ಪಡೆದುಕೊಳ್ಳುತ್ತಾರೆ. ಈ ಜ್ಞಾನವು ನನಗೆ ಹಿಂದೆ ಜನಕನಿಂದಲೇ ದೊರಕಿತ್ತು ಮತ್ತು ಜನಕನಿಗೆ ಅದು ಯಾಜ್ಞವಲ್ಕ್ಯನಿಂದ ಪ್ರಾಪ್ತವಾಗಿತ್ತು. ಜ್ಞಾನವು ಎಲ್ಲಕ್ಕಿಂತಲೂ ಉತ್ತಮ ಸಾಧನವು. ಯಜ್ಞವು ಇದರ ಸಮನಾಗಲಾರದು. ಜ್ಞಾನದಿಂದಲೇ ಮನುಷ್ಯನು ಈ ದುರ್ಗಮ ಸಂಸಾರ ಸಾಗರದಿಂದ ಪಾರಾಗಬಲ್ಲನು. ಯಜ್ಞದಿಂದ ಅಲ್ಲ. ರಾಜನ್! ಭೌತಿಕ ಜನ್ಮ-ಮೃತ್ಯುಗಳನ್ನು ದಾಟುವುದು ಅತ್ಯಂತ ಕಠಿಣವೆಂದು ಜ್ಞಾನವಿದರು ಹೇಳುತ್ತಾರೆ. ಯಜ್ಞಾದಿಗಳಿಂದಲೂ ಆ ದುರ್ಗಮ ಸಂಕಟದಿಂದ ಪಾರಾಗಲು ಸಾಧ್ಯವಿಲ್ಲ. ಯಜ್ಞ, ತಪಸ್ಸು, ನಿಯಮ ಮತ್ತು ವ್ರತಗಳ ಮೂಲಕ ಜನರು ಸ್ವರ್ಗಲೋಕಕ್ಕೆ ಹೋಗುತ್ತಾರೆ ಮತ್ತು ಪುಣ್ಯ ಕ್ಷೀಣವಾಗಲು ಪುನಃ ಈ ಭೂಮಿಗೆ ಬೀಳುತ್ತಾರೆ. ಆದುದರಿಂದ ನೀನು ಪರ, ಮಹತ್, ಪವಿತ್ರ, ಕಲ್ಯಾಣಮಯ, ನಿರ್ಮಲ, ಶುದ್ಧ ಮತ್ತು ಮೋಕ್ಷಸ್ವರೂಪ ಬ್ರಹ್ಮನನ್ನು ಉಪಾಸಿಸು. ಪಾರ್ಥಿವ! ಕ್ಷೇತ್ರವನ್ನು ತಿಳಿದುಕೊಂಡು ಮತ್ತು ಜ್ಞಾನಯಜ್ಞವನ್ನು ಆಶ್ರಯಿಸಿ ನೀನು ನಿಶ್ಚಯವಾಗಿಯೂ ತತ್ತ್ವಜ್ಞಾನೀ ಋಷಿಯಾಗುತ್ತೀಯೆ. ಹಿಂದೆ ಯಾಜ್ಞವಲ್ಕ್ಯನು ರಾಜಾ ಜನಕನಿಗೆ ಯಾವ ಉಪನಿಷತ್ತಿನ ಉಪದೇಶವನ್ನಿತ್ತಿದ್ದನೋ ಅದನ್ನು ಮನನ ಮಾಡುವುದರಿಂದ ಮನುಷ್ಯನು ಹಿಂದೆ ಹೇಳಿದ ಸನಾತನ ಅವಿನಾಶೀ ಶುಭ ಅಮೃತಮಯ ಮತ್ತು ಶೋಕರಹಿತ ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾನೆ.”

[1] ಮಹತ್ತು ಅಥವಾ ಅವ್ಯಕ್ತವು ಪ್ರಧಾನದಿಂದ ಉತ್ಪತ್ತಿಯಾಗುತ್ತದೆ?

[2] ಪ್ರಧಾನಕ್ಕೆ ಕಾಲವಿಲ್ಲ? ಇದು ಅವ್ಯಕ್ತ ಪ್ರಕೃತಿಯೇ?

[3] 1 ಕಲ್ಪ=864 ಕೋಟಿ ಸೌರವರ್ಷಗಳು.

[4] ಬುದ್ಧಿ, ಅಹಂಕಾರ, ಮನಸ್ಸು ಮತ್ತು ಚಿತ್ತ.

[5] ಇಂದ್ರಿಯಗಳು

[6] ಪಂಚಮಹಾಭೂತಗಳಿಗೆ

[7] ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ – ಅಷ್ಟಾಂಗ ಯೋಗ (ಗೀತಾ ಪ್ರೆಸ್).

[8] ಸಬೀಜ ಮತ್ತು ನಿರ್ಬೀಜ (ಗೀತಾ ಪ್ರೆಸ್).

[9] ಒಂದು ಪ್ರಾಣಾಯಾಮದಲ್ಲಿ ಪೂರಕ, ಕುಂಭಕ ಮತ್ತು ರೇಚಕಗಳೆಂಬ ಮೂರು ಪ್ರೇರಣೆಗಳಿವೆ. ಇಲ್ಲಿ ಹನ್ನೆರಡು ಪ್ರೇರಣೆಗಳು ಅಂದರೆ ನಾಲ್ಕು ಪ್ರಾಣಾಯಾಮಗಳೆಂದು ತಿಳಿದುಕೊಳ್ಳಬೇಕು. ರಾತ್ರಿಯ ಮೊದಲನೆಯ ಮತ್ತು ಹಿಂದಿನ ಪ್ರಹರಗಳಲ್ಲಿ ಧ್ಯಾನಪೂರ್ವಕ ಕ್ರಮವಾಗಿ ನಾಲ್ಕು-ನಾಲ್ಕು ಪ್ರಾಣಾಯಮಗಳನ್ನು ನಿತ್ಯವೂ ಮಾಡುವುದು ಯೋಗಿಗೆ ಅತ್ಯಂತ ಅವಶ್ಯಕವಾದುದು (ಗೀತಾ ಪ್ರೆಸ್).

[10] ಧಾರಣೆಯಿಂದ ಪಂಚಭೂತಗಳ ಮೇಲೆ ವಿಜಯ ಅಥವಾ ಅಧಿಕಾರವನ್ನು ಪಡೆದುಕೊಂಡು ಯೋಗಿಯು ಜನ್ಮ-ಮುಪ್ಪು ಮತ್ತು ಮೃತ್ಯು ಮೊದಲಾದವುಗಳನ್ನು ಗೆಲ್ಲಬಹುದು ಎಂಬ ವಿಷಯದಲ್ಲಿ ಈ ಸೂತ್ರವೂ ಪ್ರಮಾಣವನ್ನು ನೀಡುತ್ತದೆ: ಪೃಥ್ವ್ಯಪ್ತೇಜೋಽನಿಲಖೇ ಸಮುತ್ಥಿತೇ ಪಂಚಾತ್ಮಕೇ ಯೋಗಗುಣೇ ಪ್ರವೃತ್ತೇ| ನ ತಸ್ಯ ರೋಗೋ ನ ಚರಾ ನ ಮೃತ್ಯುಃ ಪ್ರಾಪ್ತಸ್ಯ ಯೋಗಾಗ್ನಿಮಯಂ ಶರೀರಮ್|| ಧ್ಯಾನಯೋಗದ ಸಾಧನೆಯನ್ನು ಮಾಡುತ್ತಾ ಯಾವಾಗ ಪೃಥ್ವೀ, ಜಲ, ತೇಜ, ವಾಯು ಮತ್ತು ಆಕಾಶ – ಈ ಐದು ಮಹಾಭೂತಗಳ ಮೇಲೆ ಸಾಧಕನ ಅಧಿಕಾರವುಂಟಾದಾಗ ಮತ್ತು ಈ ಐದು ಮಹಾಭೂತಗಳೊಂದಿಗೆ ಸಂಬಂಧವನ್ನಿಟ್ಟುಕೊಂಡಿರುವ ಯೋಗವಿಷಯಕ ಐದು ಸಿದ್ಧಿಗಳು ಪ್ರಕಟವಾದಾಗ ಆ ಸಮಯದಲ್ಲಿ ಯೋಗಾಗ್ನಿಮಯ ಶರೀರವು ಪ್ರಾಪ್ತವಾಗುತ್ತದೆ. ಅಂಥಹ ಶರೀರದಲ್ಲಿ ರೋಗವುಂಟಾಗುವುದಿಲ್ಲ. ವೃದ್ಧಾಪ್ಯವುಂಟಾಗುವುದಿಲ್ಲ ಮತ್ತು ಅವನಿಗೆ ಮೃತ್ಯುವೂ ಆಗುವುದಿಲ್ಲ. ಅವನ ಇಷ್ಟವಿಲ್ಲದೇ ಅವನ ಶರೀರವು ನಷ್ಟವಾಗುವುದಿಲ್ಲ (ಯೋಗದರ್ಪಣ, ೩:೪೬,೪೭) (ಗೀತಾ ಪ್ರೆಸ್).

[11] ತ್ರಯೀ, ವಾರ್ತಾ ಮತ್ತು ದಂಡನೀತಿ ಇವು ಉಳಿದ ಮೂರು ವಿದ್ಯೆಗಳು (ಗೀತಾ ಪ್ರೆಸ್).

[12] ಪ್ರಕೃತಿಯ ಸಂಸರ್ಗ ರಹಿತ (ಗೀತಾ ಪ್ರೆಸ್).

[13] ಪ್ರಕೃತಿಯ ಸಂಸರ್ಗಯುಕ್ತ (ಗೀತಾ ಪ್ರೆಸ್).

Leave a Reply

Your email address will not be published. Required fields are marked *