ಅನುಶಾಸನ ಪರ್ವ: ದಾನಧರ್ಮ ಪರ್ವ
೧೨೧
ಮೈತ್ರೇಯ ಭಿಕ್ಷ
13121001 ಯುಧಿಷ್ಠಿರ ಉವಾಚ|
13121001a ವಿದ್ಯಾ ತಪಶ್ಚ ದಾನಂ ಚ ಕಿಮೇತೇಷಾಂ ವಿಶಿಷ್ಯತೇ|
13121001c ಪೃಚ್ಚಾಮಿ ತ್ವಾ ಸತಾಂ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ವಿದ್ಯೆ, ತಪಸ್ಸು, ಮತ್ತು ದಾನ ಇವುಗಳಲ್ಲಿ ಯಾವುದು ವಿಶಿಷ್ಟವಾದುದು? ಸಂತರಲ್ಲಿ ಶ್ರೇಷ್ಠ! ನಿನ್ನನ್ನು ಕೇಳುತ್ತಿದ್ದೇನೆ. ಹೇಳು.”
13121002 ಭೀಷ್ಮ ಉವಾಚ|
13121002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
13121002c ಮೈತ್ರೇಯಸ್ಯ ಚ ಸಂವಾದಂ ಕೃಷ್ಣದ್ವೈಪಾಯನಸ್ಯ ಚ||
ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಮೈತ್ರೇಯ ಮತ್ತು ಕೃಷ್ಣದ್ವೈಪಾಯನರ ಸಂವಾದವನ್ನು ಉದಾಹರಿಸುತ್ತಾರೆ.
13121003a ಕೃಷ್ಣದ್ವೈಪಾಯನೋ ರಾಜನ್ನಜ್ಞಾತಚರಿತಂ ಚರನ್|
13121003c ವಾರಾಣಸ್ಯಾಮುಪಾತಿಷ್ಠನ್ಮೈತ್ರೇಯಂ ಸ್ವೈರಿಣೀಕುಲೇ||
ರಾಜನ್! ಕೃಷ್ಣದ್ವೈಪಾಯನನು ಅಜ್ಞಾತವಾಗಿ ಸಂಚರಿಸುತ್ತಾ ವಾರಣಸಿಯನ್ನು ತಲುಪಿ ಅಲ್ಲಿ ಸ್ವೈರಿಣೀಕುಲದ ಮೈತ್ರೇಯನನ್ನು ಕಂಡನು.
13121004a ತಮುಪಸ್ಥಿತಮಾಸೀನಂ ಜ್ಞಾತ್ವಾ ಸ ಮುನಿಸತ್ತಮಮ್|
13121004c ಅರ್ಚಿತ್ವಾ ಭೋಜಯಾಮಾಸ ಮೈತ್ರೇಯೋಽಶನಮುತ್ತಮಮ್||
ಅಲ್ಲಿಗೆ ಆಗಮಿಸಿ ಕುಳಿತಿದ್ದ ಆ ಮುನಿಸತ್ತಮನನ್ನು ತಿಳಿದುಕೊಂಡು ಮೈತ್ರೇಯನು ಅವನನ್ನು ಅರ್ಚಿಸಿ ಉತ್ತಮ ಅನ್ನದಿಂದ ಭೋಜನ ಮಾಡಿಸಿದನು.
13121005a ತದನ್ನಮುತ್ತಮಂ ಭುಕ್ತ್ವಾ ಗುಣವತ್ಸಾರ್ವಕಾಮಿಕಮ್|
13121005c ಪ್ರತಿಷ್ಠಮಾನೋಽಸ್ಮಯತ ಪ್ರೀತಃ ಕೃಷ್ಣೋ ಮಹಾಮನಾಃ||
ಸಾರ್ವಕಾಮಿಕವಾದ ಗುಣವತ್ತಾದ ಆ ಉತ್ತಮ ಅನ್ನವನ್ನು ಭುಂಜಿಸಿ ಪ್ರೀತನಾದ ಮಹಾಮನಸ್ವೀ ಕೃಷ್ಣನು ಹೊರಡುವಾಗ ಮುಗುಳ್ನಕ್ಕನು.
13121006a ತಮುತ್ಸ್ಮಯಂತಂ ಸಂಪ್ರೇಕ್ಷ್ಯ ಮೈತ್ರೇಯಃ ಕೃಷ್ಣಮಬ್ರವೀತ್|
13121006c ಕಾರಣಂ ಬ್ರೂಹಿ ಧರ್ಮಾತ್ಮನ್ಯೋಽಸ್ಮಯಿಷ್ಠಾಃ ಕುತಶ್ಚ ತೇ|
13121006e ತಪಸ್ವಿನೋ ಧೃತಿಮತಃ ಪ್ರಮೋದಃ ಸಮುಪಾಗತಃ||
ಅವನ ಮುಗುಳ್ನಗೆಯನ್ನು ನೋಡಿ ಮೈತ್ರೇಯನು ಕೃಷ್ಣನಿಗೆ ಕೇಳಿದನು: “ಧರ್ಮಾತ್ಮ! ನಿನ್ನ ಈ ಮುಗುಳ್ನಗೆಗೆ ಕಾರಣವನ್ನು ಹೇಳು. ತಪಸ್ವಿಯೂ ಧೃತಮತನೂ ಆಗಿರುವ ನಿನಗೆ ಎಲ್ಲಿಂದ ಈ ಪ್ರಮೋದವುಂಟಾಗಿದೆ?
13121007a ಏತತ್ಪೃಚ್ಚಾಮಿ ತೇ ವಿದ್ವನ್ನಭಿವಾದ್ಯ ಪ್ರಣಮ್ಯ ಚ|
13121007c ಆತ್ಮನಶ್ಚ ತಪೋಭಾಗ್ಯಂ ಮಹಾಭಾಗ್ಯಂ ತಥೈವ ಚ||
ವಿದ್ವನ್! ನಾನು ನಿನ್ನನ್ನು ಅಭಿವಾದಿಸಿ ನಮಸ್ಕರಿಸಿ ಇದನ್ನು ಕೇಳುತ್ತಿದ್ದೇನೆ. ನಾನು ನನ್ನಲ್ಲಿ ತಪೋಭಾಗ್ಯ ಮತ್ತು ಮಹಾಭಾಗ್ಯವನ್ನು ಕಂಡಿದ್ದೇನೆ.
13121008a ಪೃಥಗಾಚರತಸ್ತಾತ ಪೃಥಗಾತ್ಮನಿ ಚಾತ್ಮನೋಃ|
13121008c ಅಲ್ಪಾಂತರಮಹಂ ಮನ್ಯೇ ವಿಶಿಷ್ಟಮಪಿ ವಾ ತ್ವಯಾ||
ಜೀವಾತ್ಮಾ ಮತ್ತು ಪರಮಾತ್ಮರಲ್ಲಿ ಸ್ವಲ್ಪವೆ ಅಂತರವನ್ನು ಕಾಣುತ್ತೇನೆ. ಸರ್ವಪದಾರ್ಥಗಳೊಂದಿಗೆ ಪರಮಾತ್ಮನ ಸಂಬಂಧವಿದೆ. ಏಕೆಂದರೆ ಅವನು ಸರ್ವವ್ಯಾಪಿಯು. ಈ ಕಾರಣದಿಂದ ನಾನು ಪರಮಾತ್ಮನು ಜೀವಾತ್ಮನಿಗಿಂತ ಶ್ರೇಷ್ಠ ಎಂದೂ ಭಾವಿಸುತ್ತೇನೆ. ನೀನೂ ಕೂಡ ಜೀವಾತ್ಮ-ಪರಮಾತ್ಮರು ಅಭಿನ್ನ ಎಂದು ತಿಳಿದವನಾಗಿದ್ದೀಯೆ. ಆದರೂ ನಿನ್ನ ಆಚರಣೆಯು ಭಿನ್ನವಾಗಿದೆ. ನಿನಗೆ ಸ್ವಲ್ಪ ವಿಸ್ಮಯವಾಗಿದೆ ಮತ್ತು ನನಗೆ ವಿಸ್ಮಯವಾಗುತ್ತಿಲ್ಲ.”
13121009 ವ್ಯಾಸ ಉವಾಚ|
13121009a ಅತಿಚ್ಚೇದಾತಿವಾದಾಭ್ಯಾಂ ಸ್ಮಯೋಽಯಂ ಸಮುಪಾಗತಃ|
13121009c ಅಸತ್ಯಂ ವೇದವಚನಂ ಕಸ್ಮಾದ್ವೇದೋಽನೃತಂ ವದೇತ್||
ವ್ಯಾಸನು ಹೇಳಿದನು: “ನನಗೆ ಇಲ್ಲಿ ಅತಿಚ್ಛಂದ[1] ಮತ್ತು ಅತಿವಾದ[2] ಇವೆರಡೂ ಪ್ರಾಪ್ತವಾಗಿದೆ. ಈ ಕಾರಣದಿಂದಲೇ ನನ್ನಲ್ಲಿ ವಿಸ್ಮಯ ಮತ್ತು ಹರ್ಷೋಲ್ಲಾಸವು ಪ್ರಕಟವಾಯಿತು. ವೇದವಾಕ್ಯವು ಎಂದೂ ಸುಳ್ಳಾಗುವುದಿಲ್ಲ. ವೇದವನ್ನು ಯಾರು ಅಸತ್ಯ ಎಂದು ಹೇಳುತ್ತಾರೆ?
13121010a ತ್ರೀಣ್ಯೇವ ತು ಪದಾನ್ಯಾಹುಃ ಪುರುಷಸ್ಯೋತ್ತಮಂ ವ್ರತಮ್|
13121010c ನ ದ್ರುಹ್ಯೇಚ್ಚೈವ ದದ್ಯಾಚ್ಚ ಸತ್ಯಂ ಚೈವ ಪರಂ ವದೇತ್|
[3]13121010e ಇದಾನೀಂ ಚೈವ ನಃ ಕೃತ್ಯಂ ಪುರಸ್ತಾಚ್ಚ ಪರಂ ಸ್ಮೃತಮ್||
ಪುರುಷನ ಉತ್ತಮ ವ್ರತಗಳು ಮೂರು ಎಂದು ವೇದವು ಹೇಳುತ್ತದೆ: ಯಾರಿಗೂ ದ್ರೋಹವನ್ನೆಸಗದೇ ಇರುವುದು, ದಾನನೀಡುವುದು ಮತ್ತು ಇತರರಿಗೆ ಸದಾ ಸತ್ಯವನ್ನೇ ಹೇಳುವುದು. ನಾವು ಇದನ್ನು ಬಹಳ ಹಿಂದೆಯೇ ಕೇಳಿದ್ದೇವೆ ಮತ್ತು ಈ ಸಮಯದಲ್ಲಿ ಕೂಡ ವೇದದ ಈ ಆಜ್ಞೆಯನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.
13121011a ಅಲ್ಪೋಽಪಿ ತಾದೃಶೋ ದಾಯೋ ಭವತ್ಯುತ ಮಹಾಫಲಃ|
13121011c ತೃಷಿತಾಯ ಚ ಯದ್ದತ್ತಂ ಹೃದಯೇನಾನಸೂಯತಾ||
ಅಲ್ಪವಾದರೂ ಕೊಟ್ಟ ದಾನವು ಮಹಾಫಲವನ್ನು ನೀಡುತ್ತದೆ ಎಂದು ಹೇಳುತ್ತಾರೆ. ನೀನು ಹಸಿದಿದ್ದ ಮತ್ತು ಬಾಯಾರಿದ್ದ ಅತಿಥಿಗೆ ಅಸೂಯಾರಹಿತನಾಗಿ ಹೃದಯಪೂರ್ವಕವಾಗಿ ಅನ್ನ-ಜಲದ ದಾನವನ್ನು ನೀಡಿದ್ದೀಯೆ.
13121012a ತೃಷಿತಸ್ತೃಷಿತಾಯ ತ್ವಂ ದತ್ತ್ವೈತದಶನಂ ಮಮ|
13121012c ಅಜೈಷೀರ್ಮಹತೋ ಲೋಕಾನ್ಮಹಾಯಜ್ಞೈರಿವಾಭಿಭೋ|
13121012e ಅತೋ ದಾನಪವಿತ್ರೇಣ ಪ್ರೀತೋಽಸ್ಮಿ ತಪಸೈವ ಚ||
ವಿಭೋ! ನಾನು ಹಸಿದಿದ್ದೆ ಮತ್ತು ಬಾಯಾರಿದ್ದೆ. ನೀನು ಅನ್ನ-ಜಲಗಳನ್ನಿತ್ತು ನನ್ನ ಹಸಿವು-ಬಾಯಾರಿಕೆಗಳನ್ನು ತೃಪ್ತಿಪಡಿಸಿದೆ. ಈ ಪುಣ್ಯದ ಪ್ರಭಾವದಿಂದ ನೀನು ಮಹಾ ಯಜ್ಞಗಳಿಂದ ಪ್ರಾಪ್ತವಾಗುವ ಮಹಾನ್ ಲೋಕಗಳನ್ನು ಜಯಿಸಿದ್ದೀಯೆ. ಇದು ನನಗೆ ಪ್ರತ್ಯಕ್ಷ ಕಾಣುತ್ತಿದೆ. ಈ ಪವಿತ್ರ ದಾನ ಮತ್ತು ತಪಸ್ಸಿನಿಂದ ನಾನು ಪ್ರೀತನಾಗಿದ್ದೇನೆ.
13121013a ಪುಣ್ಯಸ್ಯೈವ ಹಿ ತೇ ಗಂಧಃ[4] ಪುಣ್ಯಸ್ಯೈವ ಚ ದರ್ಶನಮ್|
13121013c ಪುಣ್ಯಶ್ಚ ವಾತಿ ಗಂಧಸ್ತೇ ಮನ್ಯೇ ಕರ್ಮವಿಧಾನತಃ||
ನಿನ್ನ ಗಂಧವು ಪುಣ್ಯವಾದುದು. ನಿನ್ನ ದರ್ಶನವೂ ಪುಣ್ಯವಾದುದು. ನಿನ್ನಿಂದ ಬರುವ ಈ ಪುಣ್ಯ ಸುಗಂಧವು ನಿನ್ನ ಕರ್ಮವಿಧಾನಗಳ ಅನುಷ್ಠಾನದಿಂದುಂಟಾಗಿದೆ ಎಂದು ನನಗೆ ಅನಿಸುತ್ತದೆ.
13121014a ಅಧಿಕಂ ಮಾರ್ಜನಾತ್ತಾತ ತಥೈವಾಪ್ಯನುಲೇಪನಾತ್|
13121014c ಶುಭಂ ಸರ್ವಪವಿತ್ರೇಭ್ಯೋ ದಾನಮೇವ ಪರಂ ಭವೇತ್[5]||
ಅಯ್ಯಾ! ದಾನವು ತೀರ್ಥಸ್ನಾನ ಮತ್ತು ವೈದಿಕವ್ರತವನ್ನು ಪೂರೈಸುವುದಕ್ಕಿಂತಲೂ ಅಧಿಕವಾದುದು. ಎಲ್ಲ ಪವಿತ್ರ ಕರ್ಮಗಳಿಗಿಂತಲೂ ದಾನವೇ ಪರಮ ಶುಭವಾದುದು.
13121015a ಯಾನೀಮಾನ್ಯುತ್ತಮಾನೀಹ ವೇದೋಕ್ತಾನಿ ಪ್ರಶಂಸಸಿ|
13121015c ತೇಷಾಂ ಶ್ರೇಷ್ಠತಮಂ ದಾನಮಿತಿ ಮೇ ನಾಸ್ತಿ ಸಂಶಯಃ||
ವೇದೋಕ್ತವಾದ ಯಾವ ಯಾವ ಉತ್ತಮ ಕರ್ಮಗಳನ್ನು ಪ್ರಶಂಸಿಸುತ್ತೀಯೋ ಅವೆಲ್ಲವುಗಳಲ್ಲಿ ದಾನವೇ ಶ್ರೇಷ್ಠವಾದುದು. ನನಗೆ ಅದರಲ್ಲಿ ಸಂಶಯವೇ ಇಲ್ಲ.
13121016a ದಾನಕೃದ್ಭಿಃ ಕೃತಃ ಪಂಥಾ ಯೇನ ಯಾಂತಿ ಮನೀಷಿಣಃ|
13121016c ತೇ ಹಿ ಪ್ರಾಣಸ್ಯ ದಾತಾರಸ್ತೇಷು ಧರ್ಮಃ ಪ್ರತಿಷ್ಠಿತಃ||
ದಾನಿಗಳು ಮಾಡಿಕೊಟ್ಟ ಮಾರ್ಗದಲ್ಲಿಯೇ ಮನೀಷಿಣರು ಹೋಗುತ್ತಾರೆ. ದಾನಮಾಡುವವನನ್ನು ಪ್ರಾಣದಾತನೆಂದು ಪರಿಗಣಿಸುತ್ತಾರೆ. ಅವನಲ್ಲಿಯೇ ದರ್ಮವು ಪ್ರತಿಷ್ಠಿತಗೊಂಡಿದೆ.
13121017a ಯಥಾ ವೇದಾಃ ಸ್ವಧೀತಾಶ್ಚ ಯಥಾ ಚೇಂದ್ರಿಯಸಂಯಮಃ|
13121017c ಸರ್ವತ್ಯಾಗೋ ಯಥಾ ಚೇಹ ತಥಾ ದಾನಮನುತ್ತಮಮ್||
ಹೇಗೆ ವೇದಗಳ ಸ್ವಾಧ್ಯಾಯ, ಇಂದ್ರಿಯಸಂಯಮ ಮತ್ತು ಸರ್ವತ್ಯಾಗವು ಉತ್ತಮವೋ ಹಾಗೆ ದಾನವೂ ಅತ್ಯಂತ ಉತ್ತಮವೆಂದು ಹೇಳುತ್ತಾರೆ.
13121018a ತ್ವಂ ಹಿ ತಾತ ಸುಖಾದೇವ[6] ಸುಖಮೇಷ್ಯಸಿ ಶೋಭನಮ್|
13121018c ಸುಖಾತ್ಸುಖತರಪ್ರಾಪ್ತಿಮಾಪ್ನುತೇ ಮತಿಮಾನ್ನರಃ||
ಅಯ್ಯಾ! ಈ ದಾನದ ಕಾರಣದಿಂದ ನೀನು ಸುಖಕ್ಕಿಂತಲೂ ಉತ್ತಮ ಸುಖವನ್ನು ಪಡೆದುಕೊಳ್ಳುತ್ತೀಯೆ. ಮತಿಮಾನ್ ನರನು ದಾನದಿಂದ ಉತ್ತರೋತ್ತರ ಸುಖವನ್ನು ಪಡೆದುಕೊಳ್ಳುತ್ತಾನೆ.
13121019a ತನ್ನಃ ಪ್ರತ್ಯಕ್ಷಮೇವೇದಮುಪಲಬ್ಧಮಸಂಶಯಮ್|
13121019c ಶ್ರೀಮಂತಮಾಪ್ನುವಂತ್ಯರ್ಥಾ ದಾನಂ ಯಜ್ಞಸ್ತಥಾ ಸುಖಮ್||
ಇದು ನಮ್ಮ ಮುಂದೆ ಪ್ರತ್ಯಕ್ಷವಾಗಿದೆ. ನಿಃಸಂದೇಹವಾಗಿ ಇದನ್ನು ನಾವು ತಿಳಿದುಕೊಳ್ಳಬೇಕು. ನಿನ್ನಂತಹ ಶ್ರೀಸಂಪನ್ನನು ಅರ್ಥವನ್ನು ಪಡೆದುಕೊಂಡು ಅದರಿಂದ ದಾನ, ಯಜ್ಞ ಮತ್ತು ಸುಖವನ್ನು ಪಡೆದುಕೊಳ್ಳುತ್ತಾನೆ.
13121020a ಸುಖಾದೇವ ಪರಂ ದುಃಖಂ ದುಃಖಾದನ್ಯತ್ಪರಂ ಸುಖಮ್|
13121020c ದೃಶ್ಯತೇ ಹಿ ಮಹಾಪ್ರಾಜ್ಞ ನಿಯತಂ ವೈ ಸ್ವಭಾವತಃ||
ವಿಷಯಸುಖಗಳಲ್ಲಿ ಆಸಕ್ತರಾಗಿರುವವರು ಸುಖದಿಂದಲೇ ಪರಮ ದುಃಖವನ್ನು ಪಡೆದುಕೊಳ್ಳುತ್ತಾರೆ. ಮತ್ತು ತಪಸ್ಸಿನಿಂದ ದುಃಖವನ್ನು ಸಹಿಸಿಕೊಳ್ಳುವವರು ದುಃಖದಿಂದಲೇ ಸುಖವನ್ನು ಪಡೆದುಕೊಳ್ಳುತ್ತಾರೆ. ಮಹಾಪ್ರಾಜ್ಞ! ಸುಖ-ದುಃಖಗಳು ಮನುಷ್ಯನ ಸ್ವಭಾವಕ್ಕನುಗುಣವಾಗಿ ನಿಯತವಾಗಿರುತ್ತವೆ ಎನ್ನುವುದು ಕಾಣುತ್ತದೆ.
13121021a ತ್ರಿವಿಧಾನೀಹ ವೃತ್ತಾನಿ ನರಸ್ಯಾಹುರ್ಮನೀಷಿಣಃ|
13121021c ಪುಣ್ಯಮನ್ಯತ್ಪಾಪಮನ್ಯನ್ನ ಪುಣ್ಯಂ ನ ಚ ಪಾಪಕಮ್||
ಮನೀಷಿಗಳು ಮನುಷ್ಯನ ಮೂರು ಪ್ರಕಾರದ ಆಚರಣೆಗಳ ಕುರಿತು ಹೇಳಿದ್ದಾರೆ: ಪುಣ್ಯಮಯ, ಪಾಪಮಯ ಮತ್ತು ಪುಣ್ಯ-ಪಾಪಗಳಿಂದ ರಹಿತವಾದ ಆಚರಣೆ.
13121022a ನ ವೃತ್ತಂ ಮನ್ಯತೇಽನ್ಯಸ್ಯ ಮನ್ಯತೇಽನ್ಯಸ್ಯ ಪಾಪಕಮ್|
13121022c ತಥಾ ಸ್ವಕರ್ಮನಿರ್ವೃತ್ತಂ ನ ಪುಣ್ಯಂ ನ ಚ ಪಾಪಕಮ್||
ಬ್ರಹ್ಮನಿಷ್ಠ ಪುರುಷನು ಕರ್ತಾರನೆಂಬ ಅಭಿಮಾನದಿಂದ ರಹಿತನಾಗಿರುತ್ತಾನೆ. ಆದುದರಿಂದ ಅವನು ಮಾಡಿದ ಕರ್ಮಗಳು ಪುಣ್ಯ ಅಥವಾ ಪಾಪವೆಂದು ಪರಿಗಣಿಸಲ್ಪಡುವುದಿಲ್ಲ. ಅವನಿಗೆ ಅವನ ಕರ್ಮಜನಿತ ಪುಣ್ಯ ಅಥವಾ ಪಾಪಗಳು ಪ್ರಾಪ್ತವಾಗುವುದೇ ಇಲ್ಲ.
[7]13121023a ರಮಸ್ವೈಧಸ್ವ ಮೋದಸ್ವ ದೇಹಿ ಚೈವ ಯಜಸ್ವ ಚ|
13121023c ನ ತ್ವಾಮಭಿಭವಿಷ್ಯಂತಿ ವೈದ್ಯಾ ನ ಚ ತಪಸ್ವಿನಃ||
ನೀನು ಆನಂದಪೂರ್ವಕವಾಗಿ ಸ್ವಧರ್ಮ ಪಾಲನೆಯಲ್ಲಿ ನಿರತನಾಗಿರು. ನಿರಂತರವಾಗಿ ನಿನ್ನ ಉನ್ನತಿಯಾಗಲಿ. ನೀನು ಪ್ರಸನ್ನನಾಗಿರು. ದಾನನೀಡು ಮತ್ತು ಯಜ್ಞಮಾಡು. ವಿದ್ವಾಂಸರು ಮತ್ತು ತಪಸ್ವಿಗಳು ನಿನ್ನನ್ನು ಪರಾಭವಗೊಳಿಸಲಾರರು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮೈತ್ರೇಯಭಿಕ್ಷಾಯಾಂ ಏಕವಿಂಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಮೈತ್ರೇಯಭಿಕ್ಷ ಎನ್ನುವ ನೂರಾಇಪ್ಪತ್ತೊಂದನೇ ಅಧ್ಯಾಯವು.
[1] ಅತಿಥಿಗೆ ಅತ್ಯಂತ ಗೌರವವನ್ನಿತ್ತು ಅವನ ಇಚ್ಛಾನುಸಾರ ಸತ್ಕಾರಮಾಡುವುದಕ್ಕೆ “ಅತಿಚ್ಛಂದ” ಎಂದು ಹೇಳುತ್ತಾರೆ.
[2] ಮಾತಿನಿಂದ ಅತಿಥಿಯನ್ನು ಗೌರವಿಸುವುದನ್ನು “ಅತಿವಾದ” ಎನ್ನುತ್ತಾರೆ.
[3] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಇತಿ ವೇದೋಕ್ತಮೃಷಿಭಿಃ ಪುರಸ್ತಾತ್ ಪರಿಕಲ್ಪಿತಮ್|
[4] ಸತ್ತ್ವಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[5] ಗೀತಾ ಪ್ರೆಸ್ ನಲ್ಲಿ ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ನೋ ಚೇತ್ ಸರ್ವಪವಿತ್ರೇಭ್ಯೋ ದಾನಮೇವ ಪರಂ ಭವೇತ್|
[6] ಮಹಾಬುದ್ಧೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[7] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ಯಜ್ಞದಾನತಪಃಶೀಲಾ ನರಾ ವೈ ಪುಣ್ಯಕರ್ಮಿಣಃ| ಯೇಽಭಿದ್ರುಹ್ಯಂತಿ ಭೂತಾನಿ ತೇ ವೈ ಪಾಪಕೃತೋ ಜನಾಃ|| ದ್ರವ್ಯಾಣ್ಯಾದದತೇ ಚೈವ ದುಃಖಂ ಯಾಂತಿ ಪತಂತಿ ಚ| ತತೋಽನ್ಯತ್ಕರ್ಮ ಯತ್ಕಿಂಚಿನ್ನ ಪುಣ್ಯಂ ನ ಚ ಪಾತಕಮ್||