ಶಾಂತಿ ಪರ್ವ: ಆಪದ್ಧರ್ಮ ಪರ್ವ
೧೪೪
ಹೆಣ್ಣು ಪಾರಿವಾಳದ ವಿಲಾಪ ಮತ್ತು ಅಗ್ನಿಪ್ರವೇಶ; ಎರಡೂ ಪಾರಿವಾಳಗಳಿಗೂ ಸ್ವರ್ಗಲೋಕಪ್ರಾಪ್ತಿ (1-12).
12144001 ಭೀಷ್ಮ ಉವಾಚ|
12144001a ತತೋ ಗತೇ ಶಾಕುನಿಕೇ ಕಪೋತೀ ಪ್ರಾಹ ದುಃಖಿತಾ|
12144001c ಸಂಸ್ಮೃತ್ಯ ಭರ್ತಾರಮಥೋ ರುದತೀ ಶೋಕಮೂರ್ಚಿತಾ||
ಭೀಷ್ಮನು ಹೇಳಿದನು: “ವ್ಯಾಧನು ಹೊರಟುಹೋದನಂತರ ಶೋಕಮೂರ್ಛಿತಳಾದ ಕಪೋತಿಯು ಪತಿಯನ್ನು ಸ್ಮರಿಸಿಕೊಳ್ಳುತ್ತಾ ದುಃಖದಿಂದ ರೋದಿಸತೊಡಗಿದಳು:
12144002a ನಾಹಂ ತೇ ವಿಪ್ರಿಯಂ ಕಾಂತ ಕದಾ ಚಿದಪಿ ಸಂಸ್ಮರೇ|
12144002c ಸರ್ವಾ ವೈ ವಿಧವಾ ನಾರೀ ಬಹುಪುತ್ರಾಪಿ ಖೇಚರ|
“ಕಾಂತ! ಖೇಚರ! ನೀನು ನನಗೆ ಎಂದೂ ಅಪ್ರಿಯವನ್ನು ಮಾಡಿದುದು ನೆನಪಿಲ್ಲ. ಅನೇಕ ಪುತ್ರರಿಗೆ ತಾಯಿಯಾಗಿದ್ದರೂ ವಿಧವೆ ನಾರಿಯು ದುಃಖದಲ್ಲಿ ಮುಳುಗಿ ಹೋಗುತ್ತಾಳೆ.
12144002e ಶೋಚ್ಯಾ ಭವತಿ ಬಂಧೂನಾಂ ಪತಿಹೀನಾ ಮನಸ್ವಿನೀ||
12144003a ಲಾಲಿತಾಹಂ ತ್ವಯಾ ನಿತ್ಯಂ ಬಹುಮಾನಾಚ್ಚ ಸಾಂತ್ವಿತಾ|
ಪತಿಹೀನ ಮನಸ್ವಿನಿಯು ಬಂಧುಗಳಿಗೆ ಶೋಚನೀಯಳಾಗುತ್ತಾಳೆ. ನಿತ್ಯವೂ ನೀನು ನನ್ನನ್ನು ಲಾಲಿಸಿದೆ ಮತ್ತು ಬಹಳ ಆದರದಿಂದ ನನ್ನನ್ನು ಸಂತವಿಸುತ್ತಿದ್ದೆ.
12144003c ವಚನೈರ್ಮಧುರೈಃ ಸ್ನಿಗ್ಧೈರಸಕೃತ್ಸುಮನೋಹರೈಃ||
12144004a ಕಂದರೇಷು ಚ ಶೈಲಾನಾಂ ನದೀನಾಂ ನಿರ್ಝರೇಷು ಚ|
12144004c ದ್ರುಮಾಗ್ರೇಷು ಚ ರಮ್ಯೇಷು ರಮಿತಾಹಂ ತ್ವಯಾ ಪ್ರಿಯ||
12144005a ಆಕಾಶಗಮನೇ ಚೈವ ಸುಖಿತಾಹಂ ತ್ವಯಾ ಸುಖಮ್|
ನೀನು ಸ್ನೇಹಯುಕ್ತ ಸುಖವನ್ನೀಡುವ ಮನೋಹರ ಮಧುರ ವಚನಗಳಿಂದ ನನ್ನನ್ನು ಆನಂದಗೊಳಿಸಿದೆ. ನಾನು ನಿನ್ನೊಡನೆ ಪರ್ವತಗಳ ಗುಹೆಗಳಲ್ಲಿ, ನದೀತಟಗಳಲ್ಲಿ, ಜಲಪಾತಗಳ ಬಳಿ ಮತ್ತು ವೃಕ್ಷಗಳ ಸುರಮ್ಯ ಶಿಖರಗಳ ಮೇಲೆ ರಮಿಸಿದೆನು. ಆಕಾಶಯಾತ್ರೆಯಲ್ಲಿಯೂ ಕೂಡ ನಾನು ಸದಾ ನಿನ್ನೊಡನೆ ಸುಖವಾಗಿ ಸಂಚರಿಸುತ್ತಿದ್ದೆ.
12144005c ವಿಹೃತಾಸ್ಮಿ ತ್ವಯಾ ಕಾಂತ ತನ್ಮೇ ನಾದ್ಯಾಸ್ತಿ ಕಿಂ ಚನ||
12144006a ಮಿತಂ ದದಾತಿ ಹಿ ಪಿತಾ ಮಿತಂ ಮಾತಾ ಮಿತಂ ಸುತಃ|
12144006c ಅಮಿತಸ್ಯ ತು ದಾತಾರಂ ಭರ್ತಾರಂ ಕಾ ನ ಪೂಜಯೇತ್||
ಕಾಂತ! ನಿನ್ನೊಡನೆ ನಾನು ಎಷ್ಟು ವಿಹರಿಸಿದ್ದೆನೋ ಇಂದು ಅವೆಲ್ಲವೂ ಇಲ್ಲವಾಗಿದೆ. ನಾರಿಗೆ ತಂದೆ, ತಾಯಿ ಮತ್ತು ಮಕ್ಕಳು ಮಿತವಾದ ಸುಖವನ್ನೇ ನೀಡಬಲ್ಲರು. ಕೇವಲ ಪತಿಯು ಅವಳಿಗೆ ಅಪರಿಮಿತ ಸುಖವನ್ನು ನೀಡುತ್ತಾನೆ. ಅಂಥಹ ಪತಿಯನ್ನು ಯಾವ ನಾರಿಯು ತಾನೇ ಪೂಜಿಸುವುದಿಲ್ಲ?
12144007a ನಾಸ್ತಿ ಭರ್ತೃಸಮೋ ನಾಥೋ ನ ಚ ಭರ್ತೃಸಮಂ ಸುಖಮ್|
12144007c ವಿಸೃಜ್ಯ ಧನಸರ್ವಸ್ವಂ ಭರ್ತಾ ವೈ ಶರಣಂ ಸ್ತ್ರಿಯಾಃ||
ಪತಿಯ ಸಮನಾದ ನಾಥನಿಲ್ಲ. ಪತಿಗೆ ಸಮನಾದ ಸುಖವಿಲ್ಲ. ಸರ್ವ ಧನವನ್ನು ಬಿಟ್ಟು ಸ್ತ್ರೀಯರು ಪತಿಯನ್ನೇ ಆಶ್ರಯಿಸಿರುತ್ತಾರೆ.
12144008a ನ ಕಾರ್ಯಮಿಹ ಮೇ ನಾಥ ಜೀವಿತೇನ ತ್ವಯಾ ವಿನಾ|
12144008c ಪತಿಹೀನಾಪಿ ಕಾ ನಾರೀ ಸತೀ ಜೀವಿತುಮುತ್ಸಹೇತ್||
ನಾಥ! ನೀನಿಲ್ಲದೇ ನನಗಿಲ್ಲಿ ಜೀವಿಸಿದ್ದು ಮಾಡಬೇಕಾದ್ದಾದರೂ ಏನಿದೆ? ಪತಿವಿಹೀನಳಾದ ಯಾವ ಸತೀ ನಾರಿಯು ಜೀವಿತವಾಗಿರಲು ಬಯಸುತ್ತಾಳೆ?”
12144009a ಏವಂ ವಿಲಪ್ಯ ಬಹುಧಾ ಕರುಣಂ ಸಾ ಸುದುಃಖಿತಾ|
12144009c ಪತಿವ್ರತಾ ಸಂಪ್ರದೀಪ್ತಂ ಪ್ರವಿವೇಶ ಹುತಾಶನಮ್||
ಹೀಗೆ ಅನೇಕ ರೀತಿಯಲ್ಲಿ ಕರುಣಾಜನಕವಾಗಿ ವಿಲಪಿಸಿ ಸುದುಃಖಿತಳಾದ ಆ ಪತಿವ್ರತೆಯು ಪ್ರಜ್ವಲಿಸುತ್ತಿದ್ದ ಅಗ್ನಿಯನ್ನು ಪ್ರವೇಶಿಸಿದಳು.
12144010a ತತಶ್ಚಿತ್ರಾಂಬರಧರಂ ಭರ್ತಾರಂ ಸಾನ್ವಪಶ್ಯತ|
12144010c ವಿಮಾನಸ್ಥಂ ಸುಕೃತಿಭಿಃ ಪೂಜ್ಯಮಾನಂ ಮಹಾತ್ಮಭಿಃ||
ಅಲ್ಲಿ ಅವಳು ವಿಮಾನಸ್ಥನಾಗಿದ್ದ ಸುಕೃತ ಮಹಾತ್ಮರಿಂದ ಪೂಜಿಸಲ್ಪಡುತ್ತಿದ್ದ ಮತ್ತು ಬಣ್ಣಬಣ್ಣದ ವಸ್ತ್ರವನ್ನು ಧರಿಸಿದ್ದ ತನ್ನ ಪತಿಯನ್ನು ನೋಡಿದಳು.
12144011a ಚಿತ್ರಮಾಲ್ಯಾಂಬರಧರಂ ಸರ್ವಾಭರಣಭೂಷಿತಮ್|
12144011c ವಿಮಾನಶತಕೋಟೀಭಿರಾವೃತಂ ಪುಣ್ಯಕೀರ್ತಿಭಿಃ||
ಅವನು ಬಣ್ಣ ಬಣ್ಣದ ಮಾಲೆ-ವಸ್ತ್ರಗಳನ್ನು ಧರಿಸಿದ್ದನು. ಸರ್ವಾಭರಣಭೂಷಿತನಾಗಿದ್ದನು. ಪುಣ್ಯಕೀರ್ತಿಗಳ ನೂರುಕೋಟಿ ವಿಮಾನಗಳು ಅವನ ಸುತ್ತಲೂ ಇದ್ದವು.
12144012a ತತಃ ಸ್ವರ್ಗಗತಃ ಪಕ್ಷೀ ಭಾರ್ಯಯಾ ಸಹ ಸಂಗತಃ|
12144012c ಕರ್ಮಣಾ ಪೂಜಿತಸ್ತೇನ ರೇಮೇ ತತ್ರ ಸ ಭಾರ್ಯಯಾ||
ಅನಂತರ ಆ ಪಕ್ಷಿಯು ಪತ್ನಿಯೊಡನೆ ಸ್ವರ್ಗಕ್ಕೆ ಹೋಯಿತು. ತನ್ನ ಸತ್ಕರ್ಮಗಳಿಂದ ಪೂಜಿಸಲ್ಪಟ್ಟು ಅಲ್ಲಿ ಅವನು ಪತ್ನಿಯೊಡನೆ ರಮಿಸಿದನು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಕಪೋತಸ್ವರ್ಗಗಮನೇ ಚತುಶ್ಚತ್ವಾರಿಂಶದಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಕಪೋತಸ್ವರ್ಗಗಮನ ಎನ್ನುವ ನೂರಾನಲ್ವತ್ನಾಲ್ಕನೇ ಅಧ್ಯಾಯವು.