ಶಾಂತಿ ಪರ್ವ: ಆಪದ್ಧರ್ಮ ಪರ್ವ
೧೪೧
ಕಪೋಥ-ಲುಬ್ಧಕ ಸಂವಾದ
ಶರಣಾಗತರ ರಕ್ಷಣೆಯ ಕುರಿತಾಗಿ ಕಪೋಥ-ಲುಬ್ಧಕರ ಸಂವಾದಕಥನದ ಪ್ರಾರಂಭ (1-5). ಭಿರುಗಾಳಿ-ಮಳೆಗೆ ಸಿಲುಕಿ ಪೀಡಿತನಾದ ವ್ಯಾಧನು ಪಾರಿವಾಳಗಳು ವಾಸಿಸುತ್ತಿದ್ದ ಮರದ ಬುಡಕ್ಕೆ ಶರಣಾಗತನಾಗಿ ಬಂದುದು (6-27).
12141001 ಯುಧಿಷ್ಠಿರ ಉವಾಚ|
12141001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ|
12141001c ಶರಣಂ ಪಾಲಯಾನಸ್ಯ ಯೋ ಧರ್ಮಸ್ತಂ ವದಸ್ವ ಮೇ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಶರಣಾಗತನನನ್ನು ಪರಿಪಾಲಿಸುವವನಿಗೆ ಯಾವ ಧರ್ಮವು ಪ್ರಾಪ್ತವಾಗುತ್ತದೆ ಎನ್ನುವುದನ್ನು ನನಗೆ ಹೇಳು.”
12141002 ಭೀಷ್ಮ ಉವಾಚ|
12141002a ಮಹಾನ್ ಧರ್ಮೋ ಮಹಾರಾಜ ಶರಣಾಗತಪಾಲನೇ|
12141002c ಅರ್ಹಃ ಪ್ರಷ್ಟುಂ ಭವಾಂಶ್ಚೈವ ಪ್ರಶ್ನಂ ಭರತಸತ್ತಮ||
ಭೀಷ್ಮನು ಹೇಳಿದನು: “ಮಹಾರಾಜ! ಭರತಸತ್ತಮ! ಶರಣಾಗತಪಾಲನೆಯು ಮಹಾನ್ ಧರ್ಮವು. ಈ ಪ್ರಶ್ನೆಯನ್ನು ಕೇಳಲು ನೀನು ಅರ್ಹನಾಗಿರುವೆ.
12141003a ನೃಗಪ್ರಭೃತಯೋ[1] ರಾಜನ್ ರಾಜಾನಃ ಶರಣಾಗತಾನ್|
12141003c ಪರಿಪಾಲ್ಯ ಮಹಾರಾಜ ಸಂಸಿದ್ಧಿಂ ಪರಮಾಂ ಗತಾಃ||
ರಾಜನ್! ಮಹಾರಾಜ! ನೃಗನೇ ಮೊದಲಾದ ರಾಜರು ಶರಣಾಗತರನ್ನು ಪರಿಪಾಲಿಸಿ ಪರಮ ಸಂಸಿದ್ಧಿಯನ್ನು ಪಡೆದುಕೊಂಡರು.
12141004a ಶ್ರೂಯತೇ ಹಿ ಕಪೋತೇನ ಶತ್ರುಃ ಶರಣಮಾಗತಃ|
12141004c ಪೂಜಿತಶ್ಚ ಯಥಾನ್ಯಾಯಂ ಸ್ವೈಶ್ಚ ಮಾಂಸೈರ್ನಿಮಂತ್ರಿತಃ||
ಪಾರಿವಾಳವೊಂದು ಶರಣಾಗತನಾದ ಶತ್ರುವನ್ನು ಯಥಾನ್ಯಾಯವಾಗಿ ಸತ್ಕರಿಸಿ ತನ್ನ ಮಾಂಸವನ್ನೇ ತಿನ್ನಲು ಆಮಂತ್ರಿಸಿತು ಎಂದು ಕೇಳಿದ್ದೇವೆ.”
12141005 ಯುಧಿಷ್ಠಿರ ಉವಾಚ|
12141005a ಕಥಂ ಕಪೋತೇನ ಪುರಾ ಶತ್ರುಃ ಶರಣಮಾಗತಃ|
12141005c ಸ್ವಮಾಂಸೈರ್ಭೋಜಿತಃ ಕಾಂ ಚ ಗತಿಂ ಲೇಭೇ ಸ ಭಾರತ||
ಯುಧಿಷ್ಠಿರನು ಹೇಳಿದನು: “ಭಾರತ! ಹಿಂದೆ ಪಾರಿವಾಳವು ಶರಣಾಗತನಾದ ಶತ್ರುವಿಗೆ ಹೇಗೆ ತನ್ನ ಮಾಂಸವನ್ನೇ ಉಣ್ಣಿಸಿತು ಮತ್ತು ಹೀಗೆ ಮಾಡಿದ ಅದಕ್ಕೆ ಯಾವ ಸದ್ಗತಿಯು ಪ್ರಾಪ್ತವಾಯಿತು?”
12141006 ಭೀಷ್ಮ ಉವಾಚ|
12141006a ಶೃಣು ರಾಜನ್ ಕಥಾಂ ದಿವ್ಯಾಂ ಸರ್ವಪಾಪಪ್ರಣಾಶಿನೀಮ್|
12141006c ನೃಪತೇರ್ಮುಚುಕುಂದಸ್ಯ ಕಥಿತಾಂ ಭಾರ್ಗವೇಣ ಹ||
ಭೀಷ್ಮನು ಹೇಳಿದನು: “ರಾಜನ್! ನೃಪತಿ ಮುಚುಕುಂದನಿಗೆ ಭಾರ್ಗವನು[2] ಹೇಳಿದ್ದ ಈ ಸರ್ವಪಾಪಪ್ರಣಾಶಿನೀ ದಿವ್ಯ ಕಥೆಯನ್ನು ಕೇಳು.
12141007a ಇಮಮರ್ಥಂ ಪುರಾ ಪಾರ್ಥ ಮುಚುಕುಂದೋ ನರಾಧಿಪಃ|
12141007c ಭಾರ್ಗವಂ ಪರಿಪಪ್ರಚ್ಚ ಪ್ರಣತೋ ಭರತರ್ಷಭ||
ಪಾರ್ಥ! ಭರತರ್ಷಭ! ಹಿಂದೆ ನರಾಧಿಪ ಮುಚುಕುಂದನು ಭಾರ್ಗವನಿಗೆ ನಮಸ್ಕರಿಸಿ ಇದೇ ಪ್ರಶ್ನೆಯನ್ನು ಕೇಳಿದ್ದನು.
12141008a ತಸ್ಮೈ ಶುಶ್ರೂಷಮಾಣಾಯ ಭಾರ್ಗವೋಽಕಥಯತ್ಕಥಾಮ್|
12141008c ಇಯಂ ಯಥಾ ಕಪೋತೇನ ಸಿದ್ಧಿಃ ಪ್ರಾಪ್ತಾ ನರಾಧಿಪ||
ಕೇಳಲು ಉತ್ಸುಕನಾಗಿದ್ದ ನರಾಧಿಪನಿಗೆ ಭಾರ್ಗವನು ಸಿದ್ಧಿಯನ್ನು ಪಡೆದುಕೊಂಡ ಪಾರಿವಾಳದ ಈ ಕಥೆಯನ್ನು ಹೇಳಿದನು.
12141009a ಧರ್ಮನಿಶ್ಚಯಸಂಯುಕ್ತಾಂ ಕಾಮಾರ್ಥಸಹಿತಾಂ ಕಥಾಮ್|
12141009c ಶೃಣುಷ್ವಾವಹಿತೋ ರಾಜನ್ ಗದತೋ ಮೇ ಮಹಾಭುಜ||
ರಾಜನ್! ಮಹಾಭುಜ! ಧರ್ಮನಿಶ್ಚಯಸಂಯುಕ್ತವಾದ ಮತ್ತು ಕಾಮಾರ್ಥಸಹಿತವಾದ ಈ ಕಥೆಯನ್ನು ಹೇಳುತ್ತೇನೆ. ಸಮಾಹಿತನಾಗಿ ಕೇಳು.
12141010a ಕಶ್ಚಿತ್ ಕ್ಷುದ್ರಸಮಾಚಾರಃ ಪೃಥಿವ್ಯಾಂ ಕಾಲಸಂಮತಃ|
12141010c ಚಚಾರ ಪೃಥಿವೀಂ ಪಾಪೋ ಘೋರಃ ಶಕುನಿಲುಬ್ಧಕಃ||
ಯಾವುದೋ ಒಂದು ಮಹಾವನದಲ್ಲಿ ಓರ್ವ ಹಕ್ಕಿಗಳನ್ನು ಹಿಡಿಯುವ ವ್ಯಾಧನು ಸಂಚರಿಸುತ್ತಿದ್ದನು. ಅವನು ಪಾಪಿಯೂ ಘೋರನೂ ಆಗಿದ್ದು ಭೂಮಿಯ ಮೇಲಿನ ಕಾಲನಂತೆಯೇ ತೋರುತ್ತಿದ್ದನು.
12141011a ಕಾಕೋಲ ಇವ ಕೃಷ್ಣಾಂಗೋ ರೂಕ್ಷಃ ಪಾಪಸಮಾಹಿತಃ[3]|
12141011c ಯವಮಧ್ಯಃ ಕೃಶಗ್ರೀವೋ ಹ್ರಸ್ವಪಾದೋ ಮಹಾಹನುಃ[4]||
ಅವನ ಶರೀರವು ಕಾಕೋಲ ಕಾಗೆಯಂತೆ ಕಪ್ಪಾಗಿತ್ತು. ಕಠೋರನಾಗಿದ್ದನು ಮತ್ತು ಪಾಪಸಮಾಹಿತನಾಗಿದ್ದನು. ಅವನ ಹೊಟ್ಟೆಯು ದೊಡ್ಡದಾಗಿತ್ತು. ಕತ್ತು ಸಣ್ಣದಾಗಿತ್ತು. ಕಾಲುಗಳು ಸಣ್ಣಗಾಗಿದ್ದವು ಮತ್ತು ಅವನ ಹಲ್ಲುಗಳು ದೊಡ್ಡವಾಗಿದ್ದವು.
12141012a ನೈವ ತಸ್ಯ ಸುಹೃತ್ಕಶ್ಚಿನ್ನ ಸಂಬಂಧೀ ನ ಬಾಂಧವಃ|
12141012c ಸ ಹಿ ತೈಃ ಸಂಪರಿತ್ಯಕ್ತಸ್ತೇನ ಘೋರೇಣ ಕರ್ಮಣಾ||
ಅವನಿಗೆ ಸ್ನೇಹಿತರ್ಯಾರೂ ಇರಲಿಲ್ಲ. ಸಂಬಂಧಿ-ಬಾಂಧವರೂ ಇರಲಿಲ್ಲ. ಅವನ ಘೋರ ಕರ್ಮಗಳಿಂದಾಗಿ ಎಲ್ಲರೂ ಅವನನ್ನು ಪರಿತ್ಯಜಿಸಿದ್ದರು.
[5]12141013a ಸ ವೈ ಕ್ಷಾರಕಮಾದಾಯ ದ್ವಿಜಾನ್ ಹತ್ವಾ ವನೇ ಸದಾ|
12141013c ಚಕಾರ ವಿಕ್ರಯಂ ತೇಷಾಂ ಪತಂಗಾನಾಂ ನರಾಧಿಪ||
ನರಾಧಿಪ! ಪ್ರತಿದಿನ ಅವನು ಬಲೆಯನ್ನು ತೆಗೆದುಕೊಂಡು ವನಕ್ಕೆ ಹೋಗಿ ಅನೇಕ ಪಕ್ಷಿಗಳನ್ನು ಕೊಂದು ಆ ಪಕ್ಷಿಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದನು.
12141014a ಏವಂ ತು ವರ್ತಮಾನಸ್ಯ ತಸ್ಯ ವೃತ್ತಿಂ ದುರಾತ್ಮನಃ|
12141014c ಅಗಮತ್ಸುಮಹಾನ್ಕಾಲೋ ನ ಚಾಧರ್ಮಮಬುಧ್ಯತ||
ಆ ದುರಾತ್ಮನು ಬಹಳ ಕಾಲದ ವರೆಗೆ ಹೀಗೆಯೇ ತನ್ನ ವೃತ್ತಿಯು ನಡೆಸಿಕೊಂಡು ಬಂದನು. ಆದರೂ ಅವನಿಗೆ ತನ್ನ ಅಧರ್ಮದ ಕುರಿತು ಅರಿವೆಯೇ ಮೂಡಲಿಲ್ಲ.
12141015a ತಸ್ಯ ಭಾರ್ಯಾಸಹಾಯಸ್ಯ ರಮಮಾಣಸ್ಯ ಶಾಶ್ವತಮ್|
12141015c ದೈವಯೋಗವಿಮೂಢಸ್ಯ ನಾನ್ಯಾ ವೃತ್ತಿರರೋಚತ||
ಸದಾ ತನ್ನ ಪತ್ನಿಯೊಡನೆ ಸಂಚರಿಸುತ್ತಿದ್ದ ಆ ವ್ಯಾಧನು ದೈವಯೋಗದಿಂದ ಎಂಥಹ ವಿಮೂಢನಾಗಿದ್ದನೆಂದರೆ ಅವನಿಗೆ ಬೇರೆ ಯಾವ ವೃತ್ತಿಯೂ ಹಿಡಿಸುತ್ತಿರಲಿಲ್ಲ.
12141016a ತತಃ ಕದಾ ಚಿತ್ತಸ್ಯಾಥ ವನಸ್ಥಸ್ಯ ಸಮುದ್ಗತಃ|
12141016c ಪಾತಯನ್ನಿವ ವೃಕ್ಷಾಂಸ್ತಾನ್ಸುಮಹಾನ್ವಾತಸಂಭ್ರಮಃ||
ಅನಂತರ ಒಂದು ದಿನ ಅವನು ವನದಲ್ಲಿ ಸಂಚರಿಸುತ್ತಿದ್ದಾಗ ನಾಲ್ಕೂ ಕಡೆಗಳಿಂದ ಜೋರಾದ ಭಿರುಗಾಳಿಯು ಬೀಸತೊಡಗಿತು. ಗಾಳಿಯ ಪ್ರಚಂಡ ವೇಗದಿಂದ ಸಮಸ್ತ ವೃಕ್ಷಗಳು ಕೆಳಗುರುಳುತ್ತವೆಯೋ ಎಂದು ತೋರುತ್ತಿತ್ತು.
12141017a ಮೇಘಸಂಕುಲಮಾಕಾಶಂ ವಿದ್ಯುನ್ಮಂಡಲಮಂಡಿತಮ್|
12141017c ಸಂಚನ್ನಂ ಸುಮುಹೂರ್ತೇನ ನೌಸ್ಥಾನೇನೇವ ಸಾಗರಃ||
12141018a ವಾರಿಧಾರಾಸಮೂಹೈಶ್ಚ ಸಂಪ್ರಹೃಷ್ಟಃ ಶತಕ್ರತುಃ|
12141018c ಕ್ಷಣೇನ ಪೂರಯಾಮಾಸ ಸಲಿಲೇನ ವಸುಂಧರಾಮ್||
ಮಿಂಚಿನ ಮಂಡಲಗಳ ಮಧ್ಯೆ ಆಕಾಶದಲ್ಲಿ ಮೇಘಸಂಕುಲಗಳು ಕಾಣಿಸಿಕೊಂಡವು. ಕ್ಷಣದಲ್ಲಿಯೇ ಸಮುದ್ರದಲ್ಲಿ ನಾವೆಗಳು ತುಂಬಿಕೊಳ್ಳುವಂತೆ ಶತಕ್ರತುವು ಸಂಪ್ರಹೃಷ್ಟನಾಗಿ ಧಾರಕಾರ ಮಳೆಯ ಸಮೂಹಗಳಿಂದ ಕ್ಷಣಮಾತ್ರದಲ್ಲಿ ಭೂಮಿಯನ್ನು ತುಂಬಿಸಿಬಿಟ್ಟನು.
12141019a ತತೋ ಧಾರಾಕುಲೇ ಲೋಕೇ[6] ಸಂಭ್ರಮನ್ನಷ್ಟಚೇತನಃ|
12141019c ಶೀತಾರ್ತಸ್ತದ್ವನಂ ಸರ್ವಮಾಕುಲೇನಾಂತರಾತ್ಮನಾ||
ಹೀಗೆ ಲೋಕದಲ್ಲಿ ಧಾರಾಕಾರ ಮಳೆಯು ಸುರಿಯುತ್ತಿರಲು ವ್ಯಾಧನು ಛಳಿಯಿಂದ ಪೀಡಿತನಾಗಿ ನಷ್ಟಚೇತನನಾದನು ಮತ್ತು ವ್ಯಾಕುಲನಾಗಿ ವನದಲ್ಲೆಲ್ಲಾ ತಿರುಗಾಡತೊಡಗಿದನು.
12141020a ನೈವ ನಿಮ್ನಂ ಸ್ಥಲಂ ವಾಪಿ ಸೋಽವಿಂದತ ವಿಹಂಗಹಾ|
12141020c ಪೂರಿತೋ ಹಿ ಜಲೌಘೇನ ಮಾರ್ಗಸ್ತಸ್ಯ ವನಸ್ಯ ವೈ||
ಅವನು ನಡೆಯುತ್ತಿದ್ದ ಆ ವನ ಮಾರ್ಗವು ನೀರಿನಲ್ಲಿ ಮುಳುಗಿಹೋಗಿತ್ತು. ಅವನಿಗೆ ತಗ್ಗು-ಎತ್ತರವು ಎಲ್ಲಿ ಎಂದು ಏನೂ ತಿಳಿಯುವಂತಿರಲಿಲ್ಲ.
12141021a ಪಕ್ಷಿಣೋ ವಾತವೇಗೇನ ಹತಾ ಲೀನಾಸ್ತದಾಭವನ್|
12141021c ಮೃಗಾಃ ಸಿಂಹಾ ವರಾಹಾಶ್ಚ ಸ್ಥಲಾನ್ಯಾಶ್ರಿತ್ಯ ತಸ್ಥಿರೇ||
ಭಿರುಗಾಳಿಯ ವೇಗಕ್ಕೆ ಸಿಲುಕಿ ಹಲವಾರು ಪಕ್ಷಿಗಳು ಹತಗೊಂಡು ಕೆಳಗೆ ಬಿದ್ದವು. ಕೆಲವೊಂದಿಷ್ಟು ತಮ್ಮ ಗೂಡುಗಳಲ್ಲಿ ಅಡಗಿಕೊಂಡವು. ಸಿಂಹ-ವರಾಹ ಮೊದಲಾದ ಮೃಗಗಳು ಗುಹೆಗಳನ್ನು ಆಶ್ರಯಿಸಿ ನಿಂತುಕೊಂಡವು.
12141022a ಮಹತಾ ವಾತವರ್ಷೇಣ ತ್ರಾಸಿತಾಸ್ತೇ ವನೌಕಸಃ|
12141022c ಭಯಾರ್ತಾಶ್ಚ ಕ್ಷುಧಾರ್ತಾಶ್ಚ ಬಭ್ರಮುಃ ಸಹಿತಾ ವನೇ||
ಭಾರೀ ಚಂಡಮಾರುತ ಮತ್ತು ಮಳೆಯಿಂದ ಆತಂಕಕ್ಕೊಳಗಾದ ವನೌಕಸ ಜೀವಜಂತುಗಳು ಭಯ ಮತ್ತು ಹಸಿವೆಯಿಂದ ಪೀಡಿತಗೊಂಡು ಹಿಂಡು ಹಿಂಡಾಗಿ ವನದಲ್ಲಿ ಸುತ್ತುವರೆಯುತ್ತಿದ್ದವು.
12141023a ಸ ತು ಶೀತಹತೈರ್ಗಾತ್ರೈರ್ಜಗಾಮೈವ ನ ತಸ್ಥಿವಾನ್|
[7]12141023c ಸೋಽಪಶ್ಯದ್ವನಷಂಡೇಷು ಮೇಘನೀಲಂ ವನಸ್ಪತಿಮ್||
ಛಳಿಯಿಂದ ಅಂಗಾಗಗಳೆಲ್ಲವೂ ನಡುಗುತ್ತಿದ್ದ ಆ ವ್ಯಾಧನು ನಡೆಯಲಾರನಾಗಿದ್ದನು ಮತ್ತು ಎಲ್ಲಿಯೂ ನಿಲ್ಲಲೂ ಅವನಿಗೆ ಕಷ್ಟವಾಗುತ್ತಿತ್ತು. ಇದೇ ಅವಸ್ಥೆಯಲ್ಲಿ ಅವನು ವೃಕ್ಷಸಮೂಹಗಳ ಮಧ್ಯದಲ್ಲಿ ಒಂದು ಮೇಘನೀಲ ವೃಕ್ಷವನ್ನು ಕಂಡನು.
[8]12141024a ತಾರಾಢ್ಯಂ ಕುಮುದಾಕಾರಮಾಕಾಶಂ ನಿರ್ಮಲಂ ಚ ಹ|
12141024c ಮೇಘೈರ್ಮುಕ್ತಂ ನಭೋ ದೃಷ್ಟ್ವಾ ಲುಬ್ಧಕಃ ಶೀತವಿಹ್ವಲಃ||
12141025a ದಿಶೋಽವಲೋಕಯಾಮಾಸ ವೇಲಾಂ ಚೈವ ದುರಾತ್ಮವಾನ್|
12141025c ದೂರೇ ಗ್ರಾಮನಿವೇಶಶ್ಚ ತಸ್ಮಾದ್ದೇಶಾದಿತಿ ಪ್ರಭೋ|
12141025e ಕೃತಬುದ್ಧಿರ್ವನೇ ತಸ್ಮಿನ್ವಸ್ತುಂ ತಾಂ ರಜನೀಂ ತದಾ||
ಪ್ರಭೋ! ತಾರೆಗಳಿಂದ ತುಂಬಿದ್ದ ಅತ್ಯಂತ ನಿರ್ಮಲ ಆಕಾಶವು ವಿಕಸಿತ ಕುಮುದಕುಸುಮಗಳಿಂದ ಸುಶೋಭಿತ ಸರೋವರದಂತೆ ತೋರುತ್ತಿತ್ತು. ಆಕಾಶವು ಮೇಘಗಳಿಂದ ಮುಕ್ತವಾದುದನ್ನು ನೋಡಿ ಛಳಿಯಿಂದ ನಡುಗುತ್ತಿದ್ದ ಆ ವ್ಯಾಧನು ಎಲ್ಲದಿಕ್ಕುಗಳಲ್ಲಿಯೂ ಕಣ್ಣುಹಾಯಿಸಿ ಗಾಢ ಅಂಧಕಾರದಿಂದ ತುಂಬಿದ್ದ ರಾತ್ರಿಯನ್ನು ಕಂಡು ತನ್ನ ನಿವಾಸ ಗ್ರಾಮವು ಇಲ್ಲಿಂತ ಅತಿ ದೂರದಲ್ಲಿದೆ ಎಂದು ಮನದಲ್ಲಿಯೇ ಯೋಚಿಸಿ, ಅಲ್ಲಿಯೇ ಉಳಿದು ಆ ರಾತ್ರಿಯನ್ನು ವನದಲ್ಲಿಯೇ ಕಳೆಯುವ ಮನಸ್ಸುಮಾಡಿದನು.
12141026a ಸೋಽಂಜಲಿಂ ಪ್ರಯತಃ ಕೃತ್ವಾ ವಾಕ್ಯಮಾಹ ವನಸ್ಪತಿಮ್|
12141026c ಶರಣಂ ಯಾಮಿ ಯಾನ್ಯಸ್ಮಿನ್ ದೈವತಾನೀಹ ಭಾರತ||
ಭಾರತ! ಕೈಮುಗಿದು ನಮಸ್ಕರಿಸಿ ಅವನು ಆ ವೃಕ್ಷಕ್ಕೆ “ಈ ವೃಕ್ಷದಲ್ಲಿರುವ ದೇವತೆಗಳ ಶರಣುಹೊಗುತ್ತೇನೆ” ಎಂದು ಹೇಳಿದನು.
12141027a ಸ ಶಿಲಾಯಾಂ ಶಿರಃ ಕೃತ್ವಾ ಪರ್ಣಾನ್ಯಾಸ್ತೀರ್ಯ ಭೂತಲೇ|
12141027c ದುಃಖೇನ ಮಹತಾವಿಷ್ಟಸ್ತತಃ ಸುಷ್ವಾಪ ಪಕ್ಷಿಹಾ||
ಹೀಗೆ ಹೇಳಿ ನೆಲದ ಮೇಲೆ ಎಲೆಗಳನ್ನು ಹಾಸಿ ಒಂದು ಶಿಲೆಯ ಮೇಲೆ ತಲೆಯನ್ನಿಟ್ಟು ಮಹಾ ದುಃಖದಿಂದ ಮಲಗಿದ ಆ ಪಕ್ಷಿವ್ಯಾಧನು ನಿದ್ರಿಸಿದನು.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕಪೋತಲುಬ್ಧಕಸಂವಾದೋಪಕ್ರಮೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕಪೋತಲುಬ್ಧಕಸಂವಾದೋಪಕ್ರಮ ಎನ್ನುವ ನೂರಾನಲ್ವತ್ತೊಂದನೇ ಅಧ್ಯಾಯವು.
[1] ಶಿಬಿಪ್ರಭೃತಯೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[2] ಭಾರ್ಗವ ಪರಶುರಾಮ (ಗೀತಾ ಪ್ರೆಸ್).
[3] ರಕ್ತಾಕ್ಷಃ ಕಾಲಸಮ್ಮಿತಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[4] ದೀರ್ಘಜಂಘೋ ಹ್ರಸ್ವಪಾದೋ ಮಹಾವಕ್ತ್ರೋ ಮಹಾಹನುಃ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[5] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ನರಃ ಪಾಪಸಮಾಚಾರಸ್ತ್ಯಕ್ತವ್ಯೋ ದೂರತೋ ಬುಧೈಃ| ಆತ್ಮಾನಂ ಯೋಽಭಿಸಂಧತ್ತೇ ಸೋಽನ್ಯಸ್ಯ ಸ್ತ್ಯಾತ್ಕಥಂ ಹಿತಃ|| ಯೇ ನೃಶಂಸಾ ದುರಾತ್ಮಾನಃ ಪ್ರಾಣಿಪ್ರಾಣಹರಾ ನರಾಃ| ಉದ್ದೇಜನೀಯಾ ಭೂತಾನಾಂ ವ್ಯಾಲಾ ಇವ ಭವಂತಿ ತೇ||
[6] ಕಾಲೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[7] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡೂವರೆ ಅಧಿಕ ಶ್ಲೋಕಗಳಿವೆ: ದದರ್ಶ ಪತಿತಾಂ ಭೂಮೌ ಕಪೋತೀಂ ಶೀತವಿಹ್ವಲಾಮ್| ದೃಷ್ಟ್ವಾಽಽರ್ತೋಽಪಿ ಹಿ ಪಪಾತ್ಮಾ ಸತಾಂ ಪಂಜರಕೇಽಕ್ಷಿಪತ್| ಸ್ವಯಂ ದುಃಖಾಭಿಭೂತೋಽಪಿ ದುಃಖಮೇವಾಕರೋತ್ಪರೇ|| ಪಾಪಾತ್ಮಾ ಪಾಪಕಾರಿತ್ವಾತ್ ಪಾಪಮೆವ ಚಕಾರ ಸಃ|
[8] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ಸೇವ್ಯಮಾನಂ ವಿಹಂಗೈಘೈಶ್ಛಾಯಾವಾಸಫಲಾರ್ಥಿಭಿಃ| ಧಾತ್ರಾ ಪರೋಪಕಾರಾಯ ಸ ಸಾಧುರಿವ ನಿರ್ಮಿತಃ|| ಅಥಾಭವತ್ ಕ್ಷಣೇನೈವ ವಿಯದ್ವಿಮಲತಾರಕಮ್| ಮಹತ್ಸರ ಇವೋತ್ಫುಲ್ಲಂ ಕುಮುದನ್ಛುರಿತೋದಕಮ್||