Shanti Parva: Chapter 116

ಶಾಂತಿ ಪರ್ವ: ರಾಜಧರ್ಮ ಪರ್ವ

೧೧೬

ರಾಜನಲ್ಲಿಯೂ ರಾಜಸೇವಕರಲ್ಲಿಯೂ ಇರಬೇಕಾದ ಅವಶ್ಯ ಗುಣಗಳು (1-22).

12116001 ಯುಧಿಷ್ಠಿರ ಉವಾಚ|

12116001a ಪಿತಾಮಹ ಮಹಾಪ್ರಾಜ್ಞ ಸಂಶಯೋ ಮೇ ಮಹಾನಯಮ್|

12116001c ಸ ಚ್ಚೇತ್ತವ್ಯಸ್ತ್ವಯಾ ರಾಜನ್ ಭವಾನ್ ಕುಲಕರೋ ಹಿ ನಃ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ರಾಜನ್! ನನ್ನಲ್ಲಿ ಈ ಒಂದು ಮಹಾ ಸಂಶಯವಿದೆ. ಅದನ್ನು ನೀನು ನಿವಾರಿಸಬಲ್ಲೆ. ಏಕೆಂದರೆ ನೀನು ನಮ್ಮ ಕುಲಕರನೇ ಅಲ್ಲವೇ?

12116002a ಪುರುಷಾಣಾಮಯಂ ತಾತ ದುರ್ವೃತ್ತಾನಾಂ ದುರಾತ್ಮನಾಮ್|

12116002c ಕಥಿತೋ ವಾಕ್ಯಸಂಚಾರಸ್ತತೋ ವಿಜ್ಞಾಪಯಾಮಿ ತೇ||

ಅಯ್ಯಾ! ನೀನು ಈಗ ದುರಾತ್ಮ ಪುರುಷರ ದುರ್ವೃತ್ತಿಯ ಕುರಿತು ಹೇಳಿದೆಯಲ್ಲಿಯಲ್ಲವೇ? ಅದಕ್ಕೆ ಸಂಬಂಧಿಸಿದಂತೆ ಇದನ್ನು ವಿಜ್ಞಾಪಿಸುತ್ತೇನೆ.

12116003a ಯದ್ಧಿತಂ ರಾಜ್ಯತಂತ್ರಸ್ಯ ಕುಲಸ್ಯ ಚ ಸುಖೋದಯಮ್|

12116003c ಆಯತ್ಯಾಂ ಚ ತದಾತ್ವೇ ಚ ಕ್ಷೇಮವೃದ್ಧಿಕರಂ ಚ ಯತ್||

ರಾಜತಂತ್ರಕ್ಕೆ ಹಿತವಾದ, ಕುಲಕ್ಕೆ ಸುಖೋದಯವಾದ, ಈಗ ಮತ್ತು ಮುಂದೆ ಕ್ಷೇಮಾಭಿವೃದ್ಧಿಯನ್ನು ನೀಡುವಂಥವುದು ಯಾವುದು?

12116004a ಪುತ್ರಪೌತ್ರಾಭಿರಾಮಂ ಚ ರಾಷ್ಟ್ರವೃದ್ಧಿಕರಂ ಚ ಯತ್|

12116004c ಅನ್ನಪಾನೇ ಶರೀರೇ ಚ ಹಿತಂ ಯತ್ತದ್ ಬ್ರವೀಹಿ ಮೇ||

ಪುತ್ರಪೌತ್ರರಿಗೂ ಸುಖಕರವಾಗಿರುವ, ರಾಷ್ಟ್ರವೃದ್ಧಿಯನ್ನೂ ಮಾಡುವ, ಶರೀರದ ಅನ್ನಪಾನಗಳಲ್ಲಿ ಹಿತಕರವಾದುದು ಏನು? ಅದನ್ನು ನನಗೆ ಹೇಳು.

12116005a ಅಭಿಷಿಕ್ತೋ ಹಿ ಯೋ ರಾಜಾ ರಾಜ್ಯಸ್ಥೋ ಮಿತ್ರಸಂವೃತಃ|

12116005c ಅಸುಹೃತ್ಸಮುಪೇತೋ[1] ವಾ ಸ ಕಥಂ ರಂಜಯೇತ್ ಪ್ರಜಾಃ||

ರಾಜ್ಯಸ್ಥನಾಗಿ ಅಭಿಷಿಕ್ತನಾದ ರಾಜನು ಮಿತ್ರರಿಂದ ಅಥವಾ ಅಮಿತ್ರರಿಂದ ಸಂವೃತನಾಗಿರುತ್ತಾನೆ. ಅವನು ಹೇಗೆ ಪ್ರಜೆಗಳನ್ನು ರಂಜಿಸಬಹುದು?

12116006a ಯೋ ಹ್ಯಸತ್ಪ್ರಗ್ರಹರತಿಃ ಸ್ನೇಹರಾಗಬಲಾತ್ಕೃತಃ|

12116006c ಇಂದ್ರಿಯಾಣಾಮನೀಶತ್ವಾದಸಜ್ಜನಬುಭೂಷಕಃ||

12116007a ತಸ್ಯ ಭೃತ್ಯಾ ವಿಗುಣತಾಂ ಯಾಂತಿ ಸರ್ವೇ ಕುಲೋದ್ಗತಾಃ|

12116007c ನ ಚ ಭೃತ್ಯಫಲೈರರ್ಥೈಃ ಸ ರಾಜಾ ಸಂಪ್ರಯುಜ್ಯತೇ||

ಅಸದ್ವಸ್ತುಗಳ ಸಂಗ್ರಹದಲ್ಲಿಯೇ ಆಸಕ್ತನಾಗಿರುವ, ಸ್ನೇಹ-ರಾಗಗಳಿಗೆ ಅಧೀನನಾದ, ಇಂದ್ರಿಯಗಳನ್ನು ವಶಪಡಿಸಿಕೊಳ್ಳದೇ ಅಸಜ್ಜನರನ್ನೇ ಸಂಗ್ರಹಿಸಿರುವ ರಾಜನ ಸೇವಕರೆಲ್ಲರೂ ಕುಲಪ್ರಸೂತರಾಗಿದ್ದರೂ ಸದ್ಗುಣವಿಲ್ಲದವರೇ ಆಗಿರುತ್ತಾರೆ. ಆಗ ರಾಜನು ಸೇವಕರಿಂದ ಪಡೆಯಬಹುದಾದ ಫಲಗಳಿಂದ ವಂಚಿತನಾಗುತ್ತಾನೆ.

12116008a ಏತಾನ್ಮೇ ಸಂಶಯಸ್ಥಸ್ಯ ರಾಜಧರ್ಮಾನ್ಸುದುರ್ಲಭಾನ್|

12116008c ಬೃಹಸ್ಪತಿಸಮೋ ಬುದ್ಧ್ಯಾ ಭವಾನ್ ಶಂಸಿತುಮರ್ಹತಿ||

ಹೀಗೆ ಸುದುರ್ಲಭವಾದ ರಾಜಧರ್ಮದ ಕುರಿತು ನನಗೆ ಈ ಸಂಶಯಗಳಿವೆ. ಬುದ್ಧಿಯಲ್ಲಿ ಬೃಹಸ್ಪತಿಸಮನಾಗಿರುವ ನೀನು ಹೇಳಬೇಕು.

12116009a ಶಂಸಿತಾ ಪುರುಷವ್ಯಾಘ್ರ ತ್ವಂ ನಃ ಕುಲಹಿತೇ ರತಃ|

12116009c ಕ್ಷತ್ತಾ ಚೈವ ಪಟುಪ್ರಜ್ಞೋ ಯೋ ನಃ ಶಂಸತಿ ಸರ್ವದಾ||

ಪುರುಷವ್ಯಾಘ್ರ! ನಮ್ಮ ಕುಲದ ಹಿತದಲ್ಲಿಯೇ ನಿರತನಾಗಿರುವ ನೀನು ನಮಗೆ ಉಪದೇಶಮಾಡಬಹುದು. ಪಟುಪ್ರಜ್ಞ ಕ್ಷತ್ತನೂ ಕೂಡ ನಮಗೆ ಸರ್ವದಾ ಉಪದೇಶ ನೀಡುತ್ತಿರುತ್ತಾನೆ.

12116010a ತ್ವತ್ತಃ ಕುಲಹಿತಂ ವಾಕ್ಯಂ ಶ್ರುತ್ವಾ ರಾಜ್ಯಹಿತೋದಯಮ್|

12116010c ಅಮೃತಸ್ಯಾವ್ಯಯಸ್ಯೇವ ತೃಪ್ತಃ ಸ್ವಪ್ಸ್ಯಾಮ್ಯಹಂ ಸುಖಮ್||

ಕುಲಹಿತವಾಗಿರುವ ಮತ್ತು ರಾಜ್ಯದ ಹಿತವನ್ನು ಹೆಚ್ಚಿಸುವ ನಿನ್ನ ಮಾತನ್ನು ಕೇಳಿ ಅಮೃತವನ್ನು ಸೇವಿಸಿದವನಷ್ಟೇ ತೃಪ್ತನಾಗಿ ನಾನು ಸುಖವಾಗಿ ನಿದ್ರಿಸುತ್ತೇನೆ.

12116011a ಕೀದೃಷಾಃ ಸಂನಿಕರ್ಷಸ್ಥಾ ಭೃತ್ಯಾಃ ಸ್ಯುರ್ವಾ ಗುಣಾನ್ವಿತಾಃ|

12116011c ಕೀದೃಶೈಃ ಕಿಂಕುಲೀನೈರ್ವಾ ಸಹ ಯಾತ್ರಾ ವಿಧೀಯತೇ||

ಗುಣಾನ್ವಿತರಾದ ಎಂಥಹ ಸೇವಕರು ರಾಜನ ಸಮೀಪದಲ್ಲಿರಲು ಇಚ್ಛಿಸುತ್ತಾರೆ? ಯಾವ ಕುಲದಲ್ಲಿ ಹುಟ್ಟಿದ ಎಂಥವರೊಂದಿಗೆ ರಾಜನು ಯಾತ್ರೆಯನ್ನು ಕೈಗೊಳ್ಳಬಹುದು?

12116012a ನ ಹ್ಯೇಕೋ ಭೃತ್ಯರಹಿತೋ ರಾಜಾ ಭವತಿ ರಕ್ಷಿತಾ|

12116012c ರಾಜ್ಯಂ ಚೇದಂ ಜನಃ ಸರ್ವಸ್ತತ್ಕುಲೀನೋಽಭಿಶಂಸತಿ||

ಭೃತ್ಯರಹಿತನಾದ ರಾಜನು ಒಬ್ಬನೇ ರಾಜ್ಯವನ್ನು ರಕ್ಷಿಸಲಾರನು. ಕುಲೀನರಾದ ಸರ್ವರೂ ರಾಜ್ಯವನ್ನು ಬಯಸುತ್ತಾರೆ.

[2]12116013a ನ ಹಿ ಪ್ರಶಾಸ್ತುಂ ರಾಜ್ಯಂ ಹಿ ಶಕ್ಯಮೇಕೇನ ಭಾರತ|

12116013c ಅಸಹಾಯವತಾ ತಾತ ನೈವಾರ್ಥಾಃ ಕೇ ಚಿದಪ್ಯುತ|

12116013e ಲಬ್ಧುಂ ಲಬ್ಧ್ವಾ ಚಾಪಿ ಸದಾ ರಕ್ಷಿತುಂ ಭರತರ್ಷಭ||

ಭಾರತ! ಭರತರ್ಷಭ! ರಾಜನು ಒಬ್ಬನೇ ರಾಜ್ಯವನ್ನಾಳಲು ಶಕ್ಯವಿಲ್ಲ. ಅಯ್ಯಾ! ಸಹಾಯವಿಲ್ಲದೇ ಬೇರೆ ಯಾವ ಅರ್ಥಸಿದ್ಧಿಯೂ ಸಾಧ್ಯವಾಗುವುದಿಲ್ಲ. ರಾಜ್ಯವನ್ನು ಪಡೆದುಕೊಂಡರೂ ಸಹಾಯಕರಿಲ್ಲದೇ ಅದನ್ನು ರಕ್ಷಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ.”

12116014 ಭೀಷ್ಮ ಉವಾಚ|

12116014a ಯಸ್ಯ ಭೃತ್ಯಜನಃ ಸರ್ವೋ ಜ್ಞಾನವಿಜ್ಞಾನಕೋವಿದಃ|

12116014c ಹಿತೈಷೀ ಕುಲಜಃ ಸ್ನಿಗ್ಧಃ ಸ ರಾಜ್ಯಫಲಮಶ್ನುತೇ||

ಭೀಷ್ಮನು ಹೇಳಿದನು: “ಯಾರ ಭೃತ್ಯಜನರೆಲ್ಲರೂ ಜ್ಞಾನವಿಜ್ಞಾನಕೋವಿದರೂ, ಹಿತೈಷಿಗಳೂ, ಉತ್ತಮ ಕುಲೀನರೂ ಮತ್ತು ಸ್ನೇಹಪರರೂ ಆಗಿರುವರೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116015a ಮಂತ್ರಿಣೋ ಯಸ್ಯ ಕುಲಜಾ ಅಸಂಹಾರ್ಯಾಃ ಸಹೋಷಿತಾಃ|

12116015c ನೃಪತೇರ್ಮತಿದಾಃ ಸಂತಿ ಸಂಬಂಧಜ್ಞಾನಕೋವಿದಾಃ||

12116016a ಅನಾಗತವಿಧಾತಾರಃ ಕಾಲಜ್ಞಾನವಿಶಾರದಾಃ|

12116016c ಅತಿಕ್ರಾಂತಮಶೋಚಂತಃ ಸ ರಾಜ್ಯಫಲಮಶ್ನುತೇ||

ಯಾರ ಮಂತ್ರಿಗಳು ಉತ್ತಮ ಕುಲೀನರೂ, ಅಸಂಹಾರ್ಯರೂ[3], ಜೊತೆಗೇ ವಾಸಮಾಡುವವರೂ, ನೃಪತಿಗೆ ಬುದ್ಧಿಹೇಳುವವರೂ, ಸಂಬಂಧಜ್ಞಾನಕೋವಿದರೂ, ಮುಂದಾಗುವುದನ್ನು ತಿಳಿದು ಕಾರ್ಯಮಾಡುವವರೂ, ಕಾಲಜ್ಞಾನ ವಿಶಾರದರೂ, ಕಳೆದುಹೋದುದಕ್ಕೆ ಶೋಕಪಡದಿರುವವರೂ ಆಗಿರುತ್ತಾರೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116017a ಸಮದುಃಖಸುಖಾ ಯಸ್ಯ ಸಹಾಯಾಃ ಸತ್ಯಕಾರಿಣಃ[4]|

12116017c ಅರ್ಥಚಿಂತಾಪರಾ ಯಸ್ಯ ಸ ರಾಜ್ಯಫಲಮಶ್ನುತೇ||

ಯಾರ ಸಹಾಯಕರು ಸಮದುಃಖಿಗಳೂ ಸಮಸುಖಿಗಳೂ ಆಗಿರುವರೋ, ಸತ್ಯವಾದುದನ್ನೇ ಮಾಡುವವರೋ, ರಾಜನ ಉದ್ದೇಶಗಳ ಕುರಿತೇ ಚಿಂತಿಸುವವರೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116018a ಯಸ್ಯ ನಾರ್ತೋ ಜನಪದಃ ಸಂನಿಕರ್ಷಗತಃ ಸದಾ|

12116018c ಅಕ್ಷುದ್ರಃ ಸತ್ಪಥಾಲಂಬೀ ಸ ರಾಜ್ಯಫಲಭಾಗ್ಭವೇತ್||

ಯಾರ ಜನಪದವು ಆರ್ತವಾಗಿಲ್ಲವೋ, ಸದಾ ಒಗ್ಗಟ್ಟಿನಲ್ಲಿಯೇ ಇರುವುದೋ, ಅಕ್ಷುದ್ರವಾಗಿದೆಯೋ ಮತ್ತು ಸತ್ಪಥವನ್ನು ಅವಲಂಬಿಸಿರುವುದೋ ಆ ರಾಜನು ರಾಜ್ಯಫಲವನ್ನು ಭೋಗಿಸುತ್ತಾನೆ.

12116019a ಕೋಶಾಕ್ಷಪಟಲಂ[5] ಯಸ್ಯ ಕೋಶವೃದ್ಧಿಕರೈರ್ಜನೈಃ|

12116019c ಆಪ್ತೈಸ್ತುಷ್ಟೈಶ್ಚ ಸತತಂ ಧಾರ್ಯತೇ[6] ಸ ನೃಪೋತ್ತಮಃ||

ಯಾರ ಕೋಶವೃದ್ಧಿಕಾರಕ ಜನರು ಆಪ್ತರೂ ತುಷ್ಟರೂ ಮತ್ತು ಕೋಶವನ್ನು ವೃದ್ಧಿಸುವುದರಲ್ಲಿಯೇ ಸದಾ ನಿರತರೂ ಆಗಿರುತ್ತಾರೋ ಆ ನೃಪೋತ್ತಮನು ಸತತವೂ ರಾಜ್ಯವನ್ನಿಟ್ಟುಕೊಂಡಿರುತ್ತಾನೆ.

12116020a ಕೋಷ್ಠಾಗಾರಮಸಂಹಾರ್ಯೈರಾಪ್ತೈಃ ಸಂಚಯತತ್ಪರೈಃ|

12116020c ಪಾತ್ರಭೂತೈರಲುಬ್ಧೈಶ್ಚ ಪಾಲ್ಯಮಾನಂ ಗುಣೀಭವೇತ್||

ಧನಲೋಭದಿಂದ ಆಕರ್ಷಿತರಾಗದ, ವಿಶ್ವಾಸಪಾತ್ರ, ಕೋಶಸಂಹಶೀಲ, ಸತ್ಪಾತ್ರ, ಲೋಭರಹಿತ ಜನರು ಧಾನ್ಯಾದಿಗಳಿಂದ ಕೂಡಿರುವ ಉಗ್ರಾಣಗಳನ್ನೂ ಬೊಕ್ಕಸವನ್ನೂ ರಕ್ಷಿಸುತ್ತಿದ್ದರೆ ಕೋಷ್ಠಾಗಾರಗಳು ಇಮ್ಮಡಿಯಾಗುತ್ತವೆ.

12116021a ವ್ಯವಹಾರಶ್ಚ ನಗರೇ ಯಸ್ಯ ಕರ್ಮಫಲೋದಯಃ|

12116021c ದೃಶ್ಯತೇ ಶಂಖಲಿಖಿತಃ ಸ ಧರ್ಮಫಲಭಾಗ್ಭವೇತ್||

ಯಾರ ನಗರದಲ್ಲಿ ಕರ್ಮಫಲದಿಂದುಂಟಾದ ಶಂಖ-ಲಿಖಿತ ಮುನಿಗಳು[7] ತೋರಿಸಿಕೊಟ್ಟಿರುವ ನ್ಯಾಯವನ್ನು ಪಾಲಿಸಲಾಗುತ್ತದೆಯೋ ಅಂತಹ ರಾಜನು ಧರ್ಮಫಲವನ್ನು ಭೋಗಿಸುತ್ತಾನೆ.

12116022a ಸಂಗೃಹೀತಮನುಷ್ಯಶ್ಚ ಯೋ ರಾಜಾ ರಾಜಧರ್ಮವಿತ್|

12116022c ಷಡ್ವರ್ಗಂ ಪ್ರತಿಗೃಹ್ಣನ್ಸ ಧರ್ಮಾತ್ ಫಲಮುಪಾಶ್ನುತೇ||

ರಾಜಧರ್ಮವನ್ನು ತಿಳಿದ ಯಾವ ರಾಜನು ಸತ್ಪುರುಷರನ್ನು ಸಂಗ್ರಹಿಸುವನೋ ಮತ್ತು ಸಮಯಾನುಸಾರವಾಗಿ ಸಂಧಿ-ವಿಗ್ರಹಗಳೇ ಮೊದಲಾದ ಆರು ಗುಣಗಳನ್ನು ಪ್ರಯೋಗಿಸುವನೋ ಅವನು ರಾಜಧರ್ಮವನ್ನು ಪಾಲಿಸಿದ ಫಲವನ್ನು ಭೋಗಿಸುತ್ತಾನೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಷೋಡಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ನೂರಾಹದಿನಾರನೇ ಅಧ್ಯಾಯವು.

Zinnia flower on a white background | Stock image | Colourbox

[1] ಸಸುಹೃತ್ಸಮುಪೇತೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಈ ಶ್ಲೋಕದ ಮೊದಲು ಭೀಷ್ಮ ಉವಾಚ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಧನಲೋಭಕ್ಕೆ ಒಳಗಾಗಿ ರಾಜನಿಂದ ಪ್ರತ್ಯೇಕವಾಗದಿರುವವರು (ಭಾರತ ದರ್ಶನ).

[4] ಪ್ರಿಯಕಾರಿಣಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಕೋಟಾಖ್ಯಪಟಲಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಚೀಯತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಇದೇ ಶಾಂತಿಪರ್ವದ ಅಧ್ಯಾಯ 24ರಲ್ಲಿ ವ್ಯಾಸನು ಯುಧಿಷ್ಠಿರನಿಗೆ ಶಂಖ-ಲಿಖಿತರ ಆಖ್ಯಾನವನ್ನು ಹೇಳಿದ್ದನು.

Comments are closed.