Shanti Parva: Chapter 98

ಶಾಂತಿ ಪರ್ವ: ರಾಜಧರ್ಮ ಪರ್ವ

೯೮

ಮಹಾಜನರನ್ನು ಸಂಹರಿಸಿದರೂ ರಾಜನಾದವನು ಹೇಗೆ ಪುಣ್ಯಲೋಕವನ್ನು ಜಯಿಸಬಲ್ಲನು ಎನ್ನುವುದನ್ನು ಭೀಷ್ಮನು ಯುಧಿಷ್ಠಿರನಿಗೆ ಉಪದೇಶಿಸುವುದು (1-31)

12098001 ಯುಧಿಷ್ಠಿರ ಉವಾಚ|

12098001a ಕ್ಷತ್ರಧರ್ಮಾನ್ನ ಪಾಪೀಯಾನ್ ಧರ್ಮೋಽಸ್ತಿ ಭರತರ್ಷಭ|

12098001c ಅಭಿಯಾನೇ ಚ ಯುದ್ಧೇ ಚ ರಾಜಾ ಹಂತಿ ಮಹಾಜನಮ್||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಕ್ಷತ್ರಿಯ ಧರ್ಮಕ್ಕಿಂತಲೂ ಪಾಪೀಯ ಧರ್ಮವು ಇನ್ನೊಂದಿಲ್ಲ. ಅಭಿಯಾನದಿಂದ ಅಥವಾ ಯುದ್ಧದಿಂದ ರಾಜನು ಮಹಾಜನರನ್ನು ಸಂಹರಿಸುತ್ತಾನೆ.

12098002a ಅಥ ಸ್ಮ ಕರ್ಮಣಾ ಯೇನ ಲೋಕಾನ್ ಜಯತಿ ಪಾರ್ಥಿವಃ|

12098002c ವಿದ್ವಂಜಿಜ್ಞಾಸಮಾನಾಯ ಪ್ರಬ್ರೂಹಿ ಭರತರ್ಷಭ||

ಭರತರ್ಷಭ! ಹೀಗಿರುವಾಗ ಯಾವ ಪುಣ್ಯ ಕರ್ಮಗಳನ್ನು ಮಾಡಿ ಪಾರ್ಥಿವನು ಪುಣ್ಯ ಲೋಕಗಳನ್ನು ಜಯಿಸುತ್ತಾನೆ? ವಿದ್ವನ್! ಇದರ ಕುರಿತು ಸಂದೇಹವುಳ್ಳ ನನಗೆ ಹೇಳು.”

12098003 ಭೀಷ್ಮ ಉವಾಚ|

12098003a ನಿಗ್ರಹೇಣ ಚ ಪಾಪಾನಾಂ ಸಾಧೂನಾಂ ಪ್ರಗ್ರಹೇಣ ಚ|

12098003c ಯಜ್ಞೈರ್ದಾನೈಶ್ಚ ರಾಜಾನೋ ಭವಂತಿ ಶುಚಯೋಽಮಲಾಃ||

ಭೀಷ್ಮನು ಹೇಳಿದನು: “ಪಾಪಿಗಳ ನಿಗ್ರಹ, ಸಾಧುಪುರುಷರ ರಕ್ಷಣೆ, ಮತ್ತು ಯಜ್ಞ-ದಾನಗಳಿಂದ ರಾಜರು ಶುಚರೂ ಅಮಲರೂ ಆಗುತಾರೆ.

12098004a ಉಪರುಂಧಂತಿ ರಾಜಾನೋ ಭೂತಾನಿ ವಿಜಯಾರ್ಥಿನಃ|

12098004c ತ ಏವ ವಿಜಯಂ ಪ್ರಾಪ್ಯ ವರ್ಧಯಂತಿ ಪುನಃ ಪ್ರಜಾಃ||

ವಿಜಯಾರ್ಥಿಗಳಾದ ರಾಜರು ಯುದ್ಧದ ಸಮಯದಲ್ಲಿ ಅನೇಕ ಜೀವಿಗಳಿಗೆ ತೊಂದರೆಯನ್ನುಂಟುಮಾಡುತ್ತಾರೆ. ಅವರೇ ವಿಜಯವನ್ನು ಗಳಿಸಿದ ನಂತರ ಪುನಃ ಪ್ರಜೆಗಳಿಗೆ ಅಭಿವೃದ್ಧಿಯನ್ನು ತರುತ್ತಾರೆ.

12098005a ಅಪವಿಧ್ಯಂತಿ ಪಾಪಾನಿ ದಾನಯಜ್ಞತಪೋಬಲೈಃ|

12098005c ಅನುಗ್ರಹೇಣ ಭೂತಾನಾಂ ಪುಣ್ಯಮೇಷಾಂ ಪ್ರವರ್ಧತೇ||

ಅವರು ತಮ್ಮ ಪಾಪಗಳನ್ನು ದಾನ-ಯಜ್ಞ ಮತ್ತು ತಪೋಬಲಗಳಿಂದ ತೊಳೆದುಕೊಳ್ಳುತ್ತಾರೆ. ಪ್ರಾಣಿಗಳ ಅನುಗ್ರಹದಿಂದಲೂ ಅವರ ಪುಣ್ಯವು ವೃದ್ಧಿಸುತ್ತದೆ.

12098006a ಯಥೈವ ಕ್ಷೇತ್ರನಿರ್ದಾತಾ ನಿರ್ದನ್ವೈ ಕ್ಷೇತ್ರಮೇಕದಾ|

12098006c ಹಿನಸ್ತಿ ಕಕ್ಷಂ ಧಾನ್ಯಂ ಚ ನ ಚ ಧಾನ್ಯಂ ವಿನಶ್ಯತಿ||

12098007a ಏವಂ ಶಸ್ತ್ರಾಣಿ ಮುಂಚಂತೋ ಘ್ನಂತಿ ವಧ್ಯಾನಥೈಕದಾ|

12098007c ತಸ್ಯೈಷಾ ನಿಷ್ಕೃತಿಃ ಕೃತ್ಸ್ನಾ ಭೂತಾನಾಂ ಭಾವನಂ ಪುನಃ||

ಗದ್ದೆಯನ್ನು ಕಳೆಯನ್ನು ಕೀಳುವಾಗ ಕಳೆಗಳ ಜೊತೆಯಲ್ಲಿಯೇ ಒಂದೆರಡು ಧಾನ್ಯಗಳ ಸಸಿಗಳೂ ಕೈತಪ್ಪಿ ಕಿತ್ತುಹೋಗಬಹುದು. ಆದರೆ ಪೈರಿನ ಸಸಿಗಳನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ. ಕಳೆಯನ್ನು ಕೀಳುವುದು ಬೆಳೆಯು ಚೆನ್ನಾಗಿ ಬೆಳೆಯಲೆಂದೇ. ಅದೇ ರೀತಿ ರಾಜನೂ ಕೂಡ ಯುದ್ಧಮಾಡುವಾಗ ಆಯುಧಗಳನ್ನು ಪ್ರಯೋಗಿಸಿ ವಧಾರ್ಹರಾದ ಅನೇಕರನ್ನು ನಾಶಪಡಿಸುತ್ತಾನೆ. ಜೊತೆಯಲ್ಲಿ ವಧಾರ್ಹರಲ್ಲದವರೂ ವಿನಾಶಹೊಂದಬಹುದು. ಆದರೆ ಅವನ ಆ ಪಾಪವು ಯುದ್ಧಾನಂತರ ಪ್ರಜೆಗಳನ್ನು ಪುನಃ ಪರಿಪಾಲಿಸುವುದರಿಂದ ಪರಿಹಾರವಾಗುತ್ತದೆ.

12098008a ಯೋ ಭೂತಾನಿ ಧನಜ್ಯಾನಾದ್ವಧಾತ್ ಕ್ಲೇಶಾಚ್ಚ ರಕ್ಷತಿ[1]|

12098008c ದಸ್ಯುಭ್ಯಃ ಪ್ರಾಣದಾನಾತ್ಸ ಧನದಃ ಸುಖದೋ ವಿರಾಟ್||

ಯಾರು ಸಮಸ್ತ ಪ್ರಜೆಗಳನ್ನೂ ಧನಕ್ಷಯ, ಪಾಣಕ್ಷಯ ಮತ್ತು ಕ್ಲೇಶಗಳಿಂದ ರಕ್ಷಿಸುವನೋ ಮತ್ತು ದಸ್ಯುಗಳಿಂದ ರಕ್ಷಿಸಿ ಪ್ರಾಣದಾನವನ್ನು ಮಾಡುವನೋ ಆ ರಾಜನು ಪ್ರಜೆಗಳಿಗೆ ಧನವನ್ನೂ ಸುಖವನ್ನೂ ನೀಡುವ ಪರಮೇಶ್ವರನೇ ಸರಿ.

12098009a ಸ ಸರ್ವಯಜ್ಞೈರೀಜಾನೋ ರಾಜಾಥಾಭಯದಕ್ಷಿಣೈಃ|

12098009c ಅನುಭೂಯೇಹ ಭದ್ರಾಣಿ ಪ್ರಾಪ್ನೋತೀಂದ್ರಸಲೋಕತಾಮ್||

ಅಭಯ ದಕ್ಷಿಣೆಗಳಿಂದ ಕೂಡೀದ ಸರ್ವ ಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿ ಪ್ರಜೆಗಳಿಗೆ ಅಭಯದಾಕನಾಗಿರುವ ರಾಜನು ಈ ಲೋಕದಲ್ಲಿ ಸಕಲ ಸುಖೋಪಭೋಗಗಳನ್ನು ಅನುಭವಿಸಿ ಪರಲೋಕದಲ್ಲಿ ಇಂದ್ರನಂತೆ ಸ್ವರ್ಗಕ್ಕೆ ಅಧಿಕಾರಿಯಾಗುತ್ತಾನೆ.

12098010a ಬ್ರಾಹ್ಮಣಾರ್ಥೇ ಸಮುತ್ಪನ್ನೇ ಯೋಽಭಿನಿಃಸೃತ್ಯ ಯುಧ್ಯತೇ|

12098010c ಆತ್ಮಾನಂ ಯೂಪಮುಚ್ಚ್ರಿತ್ಯ ಸ ಯಜ್ಞೋಽನಂತದಕ್ಷಿಣಃ||

ಬ್ರಾಹ್ಮಣರಿಗೋಸ್ಕರವಾಗಿ ನಡೆದ ಯುದ್ಧದಲ್ಲಿ ಯಾವ ರಾಜನು ಮುನ್ನುಗ್ಗಿ ಹೋರಾಡಿ ಯೂಪಸದೃಶವಾದ ತನ್ನನ್ನೇ ಅಲ್ಲಿ ಆಹುತಿಯನ್ನಾಗಿ ಕೊಡುತ್ತಾನೋ ಅದು ಅನಂತ ದಕ್ಷಿಣೆಗಳುಳ್ಳ ಯಜ್ಞದಂತಾಗುತ್ತದೆ.

12098011a ಅಭೀತೋ ವಿಕಿರನ್ ಶತ್ರೂನ್ ಪ್ರತಿಗೃಹ್ಣನ್ ಶರಾಂಸ್ತಥಾ|

12098011c ನ ತಸ್ಮಾತ್ತ್ರಿದಶಾಃ ಶ್ರೇಯೋ ಭುವಿ ಪಶ್ಯಂತಿ ಕಿಂ ಚನ||

ಅಭೀತನಾಗಿ ಶತ್ರುಗಳ ಮೇಲೆ ಶರಗಳನ್ನು ಹರಡುತ್ತಾ ಅವರ ಶರಗಳ ಆಘಾತವನ್ನೂ ಸಹಿಸಿಕೊಳ್ಳುತ್ತಾನೋ ಅಂತಹ ರಾಜನ ಶ್ರೇಯಸ್ಕರ ಕರ್ಮಕ್ಕಿಂತ ಅತಿಶಯವಾದುದು ಭುವಿಯಲ್ಲಿಯೇ ಇಲ್ಲವೆಂದು ತ್ರಿದಶರ ಕಾಣುತ್ತಾರೆ.

12098012a ತಸ್ಯ ಯಾವಂತಿ ಶಸ್ತ್ರಾಣಿ[2] ತ್ವಚಂ ಭಿಂದಂತಿ ಸಂಯುಗೇ|

12098012c ತಾವತಃ ಸೋಽಶ್ನುತೇ ಲೋಕಾನ್ಸರ್ವಕಾಮದುಹೋಽಕ್ಷಯಾನ್||

ಯುದ್ಧದಲ್ಲಿ ಅವನ ಚರ್ಮಕ್ಕೆ ಎಷ್ಟು ಕಡೆ ಶಸ್ತ್ರಗಳು ನಾಟುತ್ತವೆಯೋ ಅಷ್ಟು ಸಂಖ್ಯೆಯಲ್ಲಿ ಸರ್ವಕಾಮನಗಳನ್ನೂ ಪೂರೈಸುವ ಅಕ್ಷಯ ಲೋಕಗಳನ್ನು ಅವನು ಪಡೆದುಕೊಳ್ಳುತ್ತಾನೆ.

12098013a ನ ತಸ್ಯ ರುಧಿರಂ ಗಾತ್ರಾದಾವೇಧೇಭ್ಯಃ ಪ್ರವರ್ತತೇ|

12098013c ಸ ಹ ತೇನೈವ ರಕ್ತೇನ ಸರ್ವಪಾಪೈಃ ಪ್ರಮುಚ್ಯತೇ||

ಯುದ್ಧಭೂಮಿಯಲ್ಲಿ ಅವನ ಶರೀರದಿಂದ ಎಷ್ಟು ರಕ್ತವು ಹರಿದು ಹೋಗುತ್ತದೆಯೋ ಆ ರಕ್ತದೊಡನೆ ಅವನು ಸರ್ವಪಾಪಗಳಿಂದಲೂ ವಿಮುಕ್ತನಾಗುತ್ತಾನೆ.

12098014a ಯಾನಿ ದುಃಖಾನಿ ಸಹತೇ ವ್ರಣಾನಾಮಭಿತಾಪನೇ|

12098014c ನ ತತೋಽಸ್ತಿ ತಪೋ ಭೂಯ ಇತಿ ಧರ್ಮವಿದೋ ವಿದುಃ||

ಯುದ್ಧದಲ್ಲಿ ಗಾಯಗೊಂಡು ಗಾಯಗಳಿಂದುಂಟಾದ ದುಃಖವನ್ನು ಎಷ್ಟು ಅವನು ಸಹಿಸಿಕೊಳ್ಳುತ್ತಾನೋ ಅಷ್ಟೇ ಪ್ರಮಾಣದ ತಪಸ್ಸನ್ನು ಅವನು ಮಾಡಿದಂತಾಗುತ್ತದೆ ಎಂದು ಧರ್ಮವಿದುಗಳು ತಿಳಿದಿದ್ದಾರೆ.

12098015a ಪೃಷ್ಠತೋ ಭೀರವಃ ಸಂಖ್ಯೇ ವರ್ತಂತೇಽಧಮಪೂರುಷಾಃ|

12098015c ಶೂರಾಚ್ಚರಣಮಿಚ್ಚಂತಃ ಪರ್ಜನ್ಯಾದಿವ ಜೀವನಮ್||

ಪರ್ಜನ್ಯದಿಂದ ಜೀವನವನ್ನು ಹೇಗೋ ಹಾಗೆ ರಣಹೇಡಿಗಳಾದ ಅಧಮಪುರುಷರು ಯುದ್ಧದಲ್ಲಿ ಶೂರರ ರಕ್ಷಣೆಯನ್ನು ಬಯಸಿ ಅವರ ಹಿಂದೆಯೇ ಇರುತ್ತಾರೆ.

12098016a ಯದಿ ಶೂರಸ್ತಥಾ ಕ್ಷೇಮೇ ಪ್ರತಿರಕ್ಷೇತ್ತಥಾ ಭಯೇ|

12098016c ಪ್ರತಿರೂಪಂ ಜನಾಃ ಕುರ್ಯುರ್ನ ಚ ತದ್ವರ್ತತೇ ತಥಾ||

ಅಂಥಹ ಭಯದ ಸನ್ನಿವೇಶದಲ್ಲಿಯೂ ಶೂರನಾದವನು ಹಿಂಬಾಲಿಗರ ಕ್ಷೇಮವನ್ನು ಬಯಸಿ ಅವರನ್ನು ಯುದ್ಧಾಭಿಮುಖರನ್ನಾಗಿ ಮಾಡಬಾರದು. ಹಾಗೆ ಮಾಡುವುದರಿಂದ ಅವನಿಗೆ ಆಶ್ರಿತ ಜನರನ್ನು ರಕ್ಷಣೆಮಾಡಿದ ಪುಣ್ಯವು ಲಭಿಸುತ್ತದೆ.

12098017a ಯದಿ ತೇ ಕೃತಮಾಜ್ಞಾಯ ನಮಸ್ಕುರ್ಯುಃ ಸದೈವ ತಮ್|

12098017c ಯುಕ್ತಂ ನ್ಯಾಯ್ಯಂ ಚ ಕುರ್ಯುಸ್ತೇ ನ ಚ ತದ್ವರ್ತತೇ ತಥಾ||

ಅವನೇನಾದರೂ ಹಾಗೆ ಮಾಡಿದರೆ ಅವನ ಕೃತ್ಯವನ್ನು ಅರ್ಥಮಾಡಿಕೊಂಡು ಅವರು ಸದೈವ ಅವನನ್ನು ನಮಸ್ಕರಿಸುತ್ತಾರೆ. ಆ ಸನ್ನಿವೇಶದಲ್ಲಿ ಅವರು ಹಾಗೆ ಮಾಡುವುದು ಯುಕ್ತವೂ ನ್ಯಾಯವೂ ಆಗಿರುತ್ತದೆ. ಇಲ್ಲದಿದ್ದರೆ ಅವರು ತಮ್ಮ ಕರ್ತವ್ಯವನ್ನು ಮಾಡಿದಂತೆ ಆಗುವುದಿಲ್ಲ.

12098018a ಪುರುಷಾಣಾಂ ಸಮಾನಾನಾಂ ದೃಶ್ಯತೇ ಮಹದಂತರಮ್|

12098018c ಸಂಗ್ರಾಮೇಽನೀಕವೇಲಾಯಾಮುತ್ಕ್ರುಷ್ಟೇಽಭಿಪತತ್ಸು ಚ||

ಎಲ್ಲ ವೀರಪುರುಷರೂ ನೋಡಲು ಒಂದೇ ಸಮನಾಗಿ ತೋರುತ್ತಾರೆ. ಆದರೆ ಸಂಗ್ರಾಮದಲ್ಲಿ ಸೇನೆಗಳ ಅಲೆಗಳು ಮೇಲಿಂದ ಮೇಲೆ ಬೀಳುತ್ತಿರುವಾಗ ಮತ್ತು ಎಲ್ಲ ಕಡೆಗಳಿಂದ ವೀರ ಗರ್ಜನೆಗಳು ಕೇಳಿ ಬರುತ್ತಿರುವಾಗ ಅವರಲ್ಲಿರುವ ವಿಶೇಷ ವ್ಯತ್ಯಾಸಗಳು ಕಂಡುಬರುತ್ತವೆ.

12098019a ಪತತ್ಯಭಿಮುಖಃ ಶೂರಃ ಪರಾನ್ ಭೀರುಃ ಪಲಾಯತೇ|

12098019c ಆಸ್ಥಾಯಾಸ್ವರ್ಗ್ಯಮಧ್ವಾನಂ ಸಹಾಯಾನ್ವಿಷಮೇ ತ್ಯಜನ್||

ಶೂರನಾದವನು ಶತ್ರುಗಳನ್ನು ಎದುರಿಸಿ ಮುನ್ನುಗ್ಗುತ್ತಾನೆ. ಹೇಡಿಯು ಪಲಾಯನ ಮಾಡುತ್ತಾನೆ. ಅವನು ಸ್ವರ್ಗಮಾರ್ಗದಲ್ಲಿದ್ದರೂ ವಿಷಮ ಪರಿಸ್ಥಿತಿಯಲ್ಲಿರುವ ಸಹಾಯಕರನ್ನೂ ತೊರೆದು ಓಡಿ ಹೋಗುತ್ತಾನೆ.

12098020a ಮಾ ಸ್ಮ ತಾಂಸ್ತಾದೃಶಾಂಸ್ತಾತ ಜನಿಷ್ಠಾಃ ಪುರುಷಾಧಮಾನ್|

12098020c ಯೇ ಸಹಾಯಾನ್ರಣೇ ಹಿತ್ವಾ ಸ್ವಸ್ತಿಮಂತೋ ಗೃಹಾನ್ಯಯುಃ||

ಅಯ್ಯಾ! ಹೀಗೆ ಸಹಾಯಕರನ್ನು ರಣದಲ್ಲಿಯೇ ಬಿಟ್ಟು ತಾನು ಕುಶಲಿಯಾಗಿ ಮನೆಗೆ ಹಿಂದಿರುವಂತಹ ಪುರುಷಾಧಮ ಜನರನ್ನು ನೀನು ಪಡೆದುಕೊಳ್ಳಬೇಡ.

12098021a ಅಸ್ವಸ್ತಿ ತೇಭ್ಯಃ ಕುರ್ವಂತಿ ದೇವಾ ಇಂದ್ರಪುರೋಗಮಾಃ|

12098021c ತ್ಯಾಗೇನ ಯಃ ಸಹಾಯಾನಾಂ ಸ್ವಾನ್ ಪ್ರಾಣಾಂಸ್ತ್ರಾತುಮಿಚ್ಚತಿ||

12098022a ತಂ ಹನ್ಯುಃ ಕಾಷ್ಠಲೋಷ್ಟೈರ್ವಾ ದಹೇಯುರ್ವಾ ಕಟಾಗ್ನಿನಾ|

12098022c ಪಶುವನ್ಮಾರಯೇಯುರ್ವಾ ಕ್ಷತ್ರಿಯಾ ಯೇ ಸ್ಯುರೀದೃಶಾಃ||

ಅವರಿಗೆ ಇಂದ್ರನೇ ಮೊದಲಾದ ದೇವತೆಗಳು ಅಮಂಗಳವನ್ನುಂಟುಮಾಡುತ್ತಾರೆ. ಸಹಾಯಕರನ್ನು ತ್ಯಾಗಮಾಡಿ ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ಬಯಸುವವನನ್ನು ವೀರ ಕ್ಷತ್ರಿಯರು ದೊಣ್ಣೆಗಳಿಂದ ಬಡಿದು ಅಥವಾ ಮಣ್ಣುಹೆಂಟೆಗಳಿಂದ ಹೊಡೆದು, ಅಥವಾ ಹುಲ್ಲುಮೆದೆಯೊಂದಿಗೆ ಸುತ್ತಿ ಸುಟ್ಟು ಅಥವಾ ಪಶುವಿನಂತೆ ಹೊಡೆದು ಕೊಲ್ಲುತ್ತಾರೆ.

12098023a ಅಧರ್ಮಃ ಕ್ಷತ್ರಿಯಸ್ಯೈಷ ಯಚ್ಚಯ್ಯಾಮರಣಂ ಭವೇತ್|

12098023c ವಿಸೃಜನ್ ಶ್ಲೇಷ್ಮಪಿತ್ತಾನಿ ಕೃಪಣಂ ಪರಿದೇವಯನ್||

12098024a ಅವಿಕ್ಷತೇನ ದೇಹೇನ ಪ್ರಲಯಂ ಯೋಽಧಿಗಚ್ಚತಿ|

12098024c ಕ್ಷತ್ರಿಯೋ ನಾಸ್ಯ ತತ್ಕರ್ಮ ಪ್ರಶಂಸಂತಿ ಪುರಾವಿದಃ||

ಹಾಸಿಗೆಯ ಮೇಲೆ ಮಲಗಿರುವಾಗ ಮರಣವಾದರೆ ಅದು ಕ್ಷತ್ರಿಯನಿಗೆ ಅಧರ್ಮವೆನಿಸುತ್ತದೆ. ಕಫ-ಮಲ-ಮೂತ್ರ ವಿಸರ್ಜನೆ ಮಾಡುತ್ತಾ ದೀನನಾಗಿ ನರಳುತ್ತಾ ಗಾಯವಾಗದೇ ಇರುವ ದೇಹದಿಂದ ಕೂಡಿದವನಾಗಿ ಮೃತ್ಯುವಶನಾಗುವ ಕ್ಷತ್ರಿಯನ ಕರ್ಮವನ್ನು ಪುರಾಣವನ್ನು ತಿಳಿದವರು ಪ್ರಶಂಸಿಸುವುದಿಲ್ಲ.

12098025a ನ ಗೃಹೇ ಮರಣಂ ತಾತ ಕ್ಷತ್ರಿಯಾಣಾಂ ಪ್ರಶಸ್ಯತೇ|

12098025c ಶೌಟೀರಾಣಾಮಶೌಟೀರಮಧರ್ಮ್ಯಂ ಕೃಪಣಂ ಚ ತತ್||

ಅಯ್ಯಾ! ಮನೆಯಲ್ಲಿ ಮರಣಹೊಂದುವುದು ಕ್ಷತ್ರಿಯರಿಗೆ ಪ್ರಶಂಸನೀಯವಲ್ಲ. ವೀರ ಪುರುಷನಿಗೆ ಇಂತರ ಹೇಡಿತನ ಮತ್ತು ದೈನ್ಯಭಾವವು ಅಧರ್ಮವೇ ಆಗುತ್ತದೆ.

12098026a ಇದಂ ದುಃಖಮಹೋ ಕಷ್ಟಂ ಪಾಪೀಯ ಇತಿ ನಿಷ್ಟನನ್|

12098026c ಪ್ರತಿಧ್ವಸ್ತಮುಖಃ ಪೂತಿರಮಾತ್ಯಾನ್ ಬಹು ಶೋಚಯನ್||

12098027a ಅರೋಗಾಣಾಂ ಸ್ಪೃಹಯತೇ ಮುಹುರ್ಮೃತ್ಯುಮಪೀಚ್ಚತಿ|

12098027c ವೀರೋ ದೃಪ್ತೋಽಭಿಮಾನೀ ಚ ನೇದೃಶಂ ಮೃತ್ಯುಮರ್ಹತಿ||

“ಅಯ್ಯೋ! ದುಃಖವೇ! ಕಷ್ಟವೇ! ಪಾಪದ ಫಲವೇ!” ಹೀಗೆ ಮುಖವನ್ನು ವಿಕಾರಮಾಡಿಕೊಂಡು ಆರ್ತನಾದಮಾಡುವುದು, ದುರ್ಗಂಧಿತ ಶರೀರದಿಂದ ಅಮಾತ್ಯರೊಂದಿಗೆ ಶೋಕಪಡುವುದು, ಆರೋಗ್ಯವಂತರನ್ನು ನೋಡಿ ಹಲುಬುವುದು, ಮೃತ್ಯುವು ಬರಲಿ ಎಂದು ಕೂಗಿಕೊಳ್ಳುವುದು – ಹೀಗೆ ದಾರುಣ ಮರಣವನ್ನು ಪಡೆಯುವುದು ವೀರನಾದ ಆತ್ಮಾಭಿಮಾನಿ ಕ್ಷತ್ರಿಯನಿಗೆ ಯೋಗ್ಯವಲ್ಲ.

12098028a ರಣೇಷು ಕದನಂ ಕೃತ್ವಾ ಜ್ಞಾತಿಭಿಃ ಪರಿವಾರಿತಃ|

12098028c ತೀಕ್ಷ್ಣೈಃ ಶಸ್ತ್ರೈಃ ಸುವಿಕ್ಲಿಷ್ಟಃ ಕ್ಷತ್ರಿಯೋ ಮೃತ್ಯುಮರ್ಹತಿ||

ರಣದಲ್ಲಿ ಕದನವನ್ನಾಡಿ ಜ್ಞಾತಿಬಾಂಧವರಿಂದ ಸುತ್ತುವರೆಯಲ್ಪಟ್ಟು ತೀಕ್ಷ್ಣ ಶಸ್ತ್ರಗಳಿಂದ ಅತ್ಯಂತ ಪೀಡಿತನಾಗಿ ಮೃತ್ಯುವನ್ನಪ್ಪುವುದು ಕ್ಷತ್ರಿಯನಿಗೆ ಅರ್ಹವಾದುದು.

12098029a ಶೂರೋ ಹಿ ಸತ್ಯಮನ್ಯು[3]ಭ್ಯಾಮಾವಿಷ್ಟೋ ಯುಧ್ಯತೇ ಭೃಶಮ್|

12098029c ಕೃತ್ಯಮಾನಾನಿ ಗಾತ್ರಾಣಿ ಪರೈರ್ನೈವಾವಬುಧ್ಯತೇ||

ಶೂರನಾದವನು ಸತ್ಯ ಮತ್ತು ರೋಷಗಳಿಂದ ಆವಿಷ್ಟನಾಗಿ ಜೋರಾಗಿ ಯುದ್ಧಮಾಡುತ್ತಾನೆ. ಅವನ ಶರೀರವು ಗಾಯಗೊಂಡಿದ್ದರೂ ಅದರ ಅರಿವೇ ಇಲ್ಲದಂತೆ ಶತ್ರುವಿನೊಂದಿಗೆ ಹೋರಾಡುತ್ತಾನೆ.

12098030a ಸ ಸಂಖ್ಯೇ ನಿಧನಂ ಪ್ರಾಪ್ಯ ಪ್ರಶಸ್ತಂ ಲೋಕಪೂಜಿತಮ್|

12098030c ಸ್ವಧರ್ಮಂ ವಿಪುಲಂ ಪ್ರಾಪ್ಯ ಶಕ್ರಸ್ಯೈತಿ ಸಲೋಕತಾಮ್||

ರಣದಲ್ಲಿ ಅವನು ಪ್ರಶಸ್ತವಾದ ಮತ್ತು ಲೋಕಪೂಜಿತವಾದ ನಿಧನವನ್ನು ಹೊಂದಿ, ವಿಪುಲ ಸ್ವಧರ್ಮವನ್ನು ಪಡೆದುಕೊಂಡು ಸಕ್ರನೊಡಲೇ ಸಾಲೋಕ್ಯವನ್ನು ಪಡೆಯುತ್ತಾನೆ.

12098031a ಸರ್ವೋ ಯೋಧಃ ಪರಂ ತ್ಯಕ್ತುಮಾವಿಷ್ಟಸ್ತ್ಯಕ್ತಜೀವಿತಃ[4]|

12098031c ಪ್ರಾಪ್ನೋತೀಂದ್ರಸ್ಯ ಸಾಲೋಕ್ಯಂ ಶೂರಃ ಪೃಷ್ಠಮದರ್ಶಯನ್[5]||

ತನ್ನ ಪ್ರಾಣದ ಮೇಲಿನ ಹಂಗನ್ನೇ ತೊರೆದು ಶತ್ರುವಿಗೆ ತನ್ನ ಬೆನ್ನು ತೋರಿಸದೇ ಯುದ್ಧಮಾಡಿ ಮಡಿದವನು ಇಂದ್ರನ ಲೋಕವನ್ನೇ ಪಡೆಯುತ್ತಾನೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಅಷ್ಟನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ತೊಂಭತ್ತೆಂಟನೇ ಅಧ್ಯಾಯವು.

Single Flower Bud Of Gladiolus Red, White, Yellow And Pink Flowers.. Stock  Photo, Picture And Royalty Free Image. Image 67944734.

[1] ಯೋ ಭೂತಾನಿ ಧನಾಕ್ರಾಂತ್ಯಾ ವಧಾತ್ಕ್ಲೇಶಾಚ್ಚ ರಕ್ಷತಿ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ತಸ್ಯ ಶಸ್ತ್ರಾಣಿ ಯಾವಂತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಕಾಮಮನ್ಯು ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಸರ್ವೋಪಾಯೈ ರಣಮುಖಮಾತಿಷ್ಠಂಸ್ತ್ಯಕ್ತಜೀವಿತಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಇದರ ನಂತರ ಭಾರತದರ್ಶನದಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಯತ್ರ ಯತ್ರ ಹತಃ ಶೂರಃ ಶತ್ರುಭಿಃ ಪರಿವಾರಿತಃ| ಅಕ್ಷಯಾನ್ಲಭತೇ ಲೋಕಾನ್ಯದಿ ದೈನ್ಯಂ ನ ಸೇವತೇ||

Comments are closed.