Shanti Parva: Chapter 95

ಶಾಂತಿ ಪರ್ವ: ರಾಜಧರ್ಮ ಪರ್ವ

೯೫

ವಾಮದೇವನು ರಾಜಧರ್ಮೋಪದೇಶವನ್ನು ಮುಂದುವರೆಸಿದುದು (1-13).

12095001 ವಾಮದೇವ ಉವಾಚ|

12095001a ಅಯುದ್ಧೇನೈವ ವಿಜಯಂ ವರ್ಧಯೇದ್ವಸುಧಾಧಿಪಃ|

12095001c ಜಘನ್ಯಮಾಹುರ್ವಿಜಯಂ ಯೋ ಯುದ್ಧೇನ ನರಾಧಿಪ||

ವಾಮದೇವನು ಹೇಳಿದನು: “ವಸುಧಾಧಿಪನು ಯುದ್ಧ ಮಾಡದೆಯೇ ವಿಜಯವನ್ನು ಗಳಿಸಬೇಕು. ನರಾಧಿಪ! ಯುದ್ಧಮಾಡಿ ವಿಜಯವನ್ನು ಗಳಿಸುವುದು ಕೀಳುಮಟ್ಟದ ರಾಜನೀತಿಯೆಂದು ಹೇಳುತ್ತಾರೆ.

12095002a ನ ಚಾಪ್ಯಲಬ್ಧಂ ಲಿಪ್ಸೇತ ಮೂಲೇ ನಾತಿದೃಢೇ ಸತಿ|

12095002c ನ ಹಿ ದುರ್ಬಲಮೂಲಸ್ಯ ರಾಜ್ಞೋ ಲಾಭೋ ವಿಧೀಯತೇ||

ರಾಜ್ಯದ ಮೂಲವು ದೃಢವಾಗಿಲ್ಲದೇ ಇದ್ದರೆ ಅಲಬ್ಧವಾದುದನ್ನು ಪಡೆದುಕೊಳ್ಳಲು ಬಯಸಬಾರದು. ಮೂಲವೇ ದುರ್ಬಲವಾಗಿದ್ದ ರಾಜನಿಗೆ ರಾಜ್ಯಲಾಭವಾಗುವುದಿಲ್ಲ.

12095003a ಯಸ್ಯ ಸ್ಫೀತೋ ಜನಪದಃ ಸಂಪನ್ನಃ ಪ್ರಿಯರಾಜಕಃ|

12095003c ಸಂತುಷ್ಟಪುಷ್ಟಸಚಿವೋ ದೃಢಮೂಲಃ ಸ ಪಾರ್ಥಿವಃ||

ಯಾರ ಜನಪದವು ಸಂಪದ್ಭರಿತವಾಗಿದೆಯೋ, ಧನಧಾನ್ಯಗಳಿಂದ ಸಂಪನ್ನವಾಗಿದೆಯೋ ಮತ್ತು ಪ್ರಜೆಗಳು ರಾಜನನ್ನು ಪ್ರೀತಿಸುತ್ತಾರೋ ಹಾಗೂ ಯಾರಿಗೆ ಸಂತುಷ್ಟರೂ ಪುಷ್ಟರೂ ಆದ ಸಚಿವರು ಇರುವರೋ ಆ ಪಾರ್ಥಿವನ ಮೂಲವು ದೃಢವಾಗಿರುತ್ತದೆ.

12095004a ಯಸ್ಯ ಯೋಧಾಃ ಸುಸಂತುಷ್ಟಾಃ ಸಾಂತ್ವಿತಾಃ ಸೂಪಧಾಸ್ಥಿತಾಃ|

12095004c ಅಲ್ಪೇನಾಪಿ ಸ ದಂಡೇನ ಮಹೀಂ ಜಯತಿ ಭೂಮಿಪಃ||

ಯಾರ ಯೋಧರು ಸಂತುಷ್ಟರಾಗಿರುವರೋ, ರಾಜನಿಂದ ಸಾಂತ್ವನವನ್ನು ಪಡೆಯುವರೋ, ಮತ್ತು ಶತ್ರುಗಳನ್ನು ವಂಚಿಸುವುದರಲ್ಲಿ ಚತುರರೋ ಅಂತಹ ರಾಜನು ಅಲ್ಪಸೈನ್ಯದಿಂದಲೇ ಭೂಮಂಡಲವನ್ನು ಜಯಿಸಲು ಸಮರ್ಥನಾಗುತ್ತಾನೆ.

12095005a ಪೌರಜಾನಪದಾ ಯಸ್ಯ ಸ್ವನುರಕ್ತಾಃ ಸುಪೂಜಿತಾಃ|

12095005c ಸಧನಾ ಧಾನ್ಯವಂತಶ್ಚ ದೃಢಮೂಲಃ ಸ ಪಾರ್ಥಿವಃ||

ಯಾರ ನಗರ-ಗ್ರಾಮಗಳಲ್ಲಿ ವಾಸಿಸುವ ಜನರು ಸಮಸ್ತ ಜೀವಿಗಳ ಮೇಲೆ ದಯಾಪರರಾಗಿರುವರೋ ಧನವಂತರೂ ಧಾನವಂತರೂ ಆಗಿರುವರೋ ಆ ರಾಜನು ದೃಢಮೂಲನೆಂದು ಎನಿಸಿಕೊಳ್ಳುತ್ತಾನೆ.

12095006a ಪ್ರಭಾವಕಾಲಾವಧಿಕೌ[1] ಯದಾ ಮನ್ಯೇತ ಚಾತ್ಮನಃ|

12095006c ತದಾ ಲಿಪ್ಸೇತ ಮೇಧಾವೀ ಪರಭೂಮಿಂ ಧನಾನ್ಯುತ||

ತನ್ನ ಮೇಲ್ಗೈಯನ್ನು ತೋರಿಸಲು ಸರಿಯಾದ ಕಾಲವು ಬಂದಿದೆ ಎಂದು ತಿಳಿದೇ ಮೇಧಾವೀ ರಾಜನು ಶತ್ರುವಿನ ಭೂಮಿ-ಧನವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು.

12095007a ಭೋಗೇಷ್ವದಯಮಾನಸ್ಯ ಭೂತೇಷು ಚ ದಯಾವತಃ|

12095007c ವರ್ಧತೇ ತ್ವರಮಾಣಸ್ಯ ವಿಷಯೋ ರಕ್ಷಿತಾತ್ಮನಃ||

ಯಾರ ಬೋಗ-ವೈಭವಗಳು ದಿನದಿನಕ್ಕೂ ಅಭಿವೃದ್ಧಿಯನ್ನು ಹೊಂದುತ್ತಿವೆಯೋ, ಯಾರು ಸಕಲಜೀವಿಗಳಲ್ಲಿಯೂ ದಯಾವಂತನಾಗಿರುವನೋ ಮತ್ತು ಯಾರು ತನ್ನನ್ನು ತಾನು ರಕ್ಷಿಸಿಕೊಂಡಿರುವನೋ ಆ ರಾಜನ ರಾಜ್ಯವು ಬೇಗನೇ ವೃದ್ಧಿಯಾಗುತ್ತದೆ.

12095008a ತಕ್ಷತ್ಯಾತ್ಮಾನಮೇವೈಷ ವನಂ ಪರಶುನಾ ಯಥಾ|

12095008c ಯಃ ಸಮ್ಯಗ್ವರ್ತಮಾನೇಷು ಸ್ವೇಷು ಮಿಥ್ಯಾ ಪ್ರವರ್ತತೇ||

ಸದಾಚಾರಿಗಳಾದ ತನ್ನವರೊಡನೆಯೇ ಸುಳ್ಳಾಗಿ ನಡೆದುಕೊಳ್ಳುವ ರಾಜನು ಮರದ ಕಾಂಡವಿರುವ ಕೊಡಲಿಯೇ ಅರಣ್ಯದ ಮರಗಳನ್ನು ಕತ್ತರಿಸುವಂತೆ ತನ್ನನ್ನೇ ತಾನು ವಿನಾಶಮಾಡಿಕೊಳ್ಳುತ್ತಾನೆ.

12095009a ನ ವೈ ದ್ವಿಷಂತಃ ಕ್ಷೀಯಂತೇ ರಾಜ್ಞೋ ನಿತ್ಯಮಪಿ ಘ್ನತಃ[2]|

12095009c ಕ್ರೋಧಂ ನಿಯಂತುಂ ಯೋ ವೇದ ತಸ್ಯ ದ್ವೇಷ್ಟಾ ನ ವಿದ್ಯತೇ||

ದ್ವೇಷಿಗಳನ್ನು ನಿತ್ಯವೂ ನಾಶಪಡಿಸುತ್ತಿದ್ದರೂ ರಾಜನ ದ್ವೇಷಿಗಳು ಕಡಿಮೆಯಾಗುವುದಿಲ್ಲ. ಯಾರು ಕ್ರೋಧವನ್ನು ನಿಯಂತ್ರಿಸಿಕೊಳ್ಳುವುದನ್ನು ತಿಳಿದುಕೊಂಡಿರುವನೋ ಅವನಿಗೆ ದ್ವೇಷವೆಂಬುದೇ ಇರುವುದಿಲ್ಲ.

12095010a ಯದಾರ್ಯಜನವಿದ್ವಿಷ್ಟಂ ಕರ್ಮ ತನ್ನಾಚರೇದ್ಬುಧಃ|

12095010c ಯತ್ಕಲ್ಯಾಣಮಭಿಧ್ಯಾಯೇತ್ತತ್ರಾತ್ಮಾನಂ ನಿಯೋಜಯೇತ್||

ಆರ್ಯಜನರು ಯಾವುದನ್ನು ಮಾಡಬಾರದೆಂದು ಹೇಳುತ್ತಾರೋ ಅದನ್ನು ತಿಳಿದವನು ಮಾಡಲೇ ಬಾರದು. ಯಾವುದು ಎಲ್ಲರಿಗೂ ಕಲ್ಯಾಣಕಾರಿಯೋ ಅದನ್ನೇ ಮಾಡಲು ರಾಜನು ಪ್ರಯತ್ನಿಸಬೇಕು.

12095011a ನೈನಮನ್ಯೇಽವಜಾನಂತಿ ನಾತ್ಮನಾ ಪರಿತಪ್ಯತೇ|

12095011c ಕೃತ್ಯಶೇಷೇಣ ಯೋ ರಾಜಾ ಸುಖಾನ್ಯನುಬುಭೂಷತಿ||

ಯಾವ ರಾಜನು ತನ್ನ ಕರ್ತವ್ಯಗಳನ್ನು ಸಂಪೂರ್ಣವಾಗಿ ಮಾಡ? ನಂತರ ಸುಖವನ್ನನುಭವಿಸಲು ಇಚ್ಛಿಸುವನೋ ಅವನನ್ನು ಯಾರೂ ಅನಾದರಿಸುವುದಿಲ್ಲ. ರಾಜನೂ ಪರಿತಪಿಸಬೇಕಾಗಿರುವುದಿಲ್ಲ.

12095012a ಇದಂವೃತ್ತಂ ಮನುಷ್ಯೇಷು ವರ್ತತೇ ಯೋ ಮಹೀಪತಿಃ|

12095012c ಉಭೌ ಲೋಕೌ ವಿನಿರ್ಜಿತ್ಯ ವಿಜಯೇ ಸಂಪ್ರತಿಷ್ಠತೇ||

ಯಾವ ಮಹೀಪತಿಯು ಮನುಷ್ಯರೊಡನೆ ಈ ರೀತಿ ವರ್ತಿಸುತ್ತಾನೋ ಅವನು ಎರಡೂ ಲೋಕಗಳನ್ನು ಜಯಿಸಿ ವಿಜಯದಲ್ಲಿ ನೆಲೆಸಿರುತ್ತಾನೆ.””

12095013 ಭೀಷ್ಮ ಉವಾಚ|

12095013a ಇತ್ಯುಕ್ತೋ ವಾಮದೇವೇನ ಸರ್ವಂ ತತ್ ಕೃತವಾನ್ನೃಪಃ|

12095013c ತಥಾ ಕುರ್ವಂಸ್ತ್ವಮಪ್ಯೇತೌ ಲೋಕೌ ಜೇತಾ ನ ಸಂಶಯಃ||

ಭೀಷ್ಮನು ಹೇಳಿದನು: “ವಾಮದೇವನು ಹೀಗೆ ಹೇಳಲು ಅವೆಲ್ಲವನ್ನೂ ನೃಪನು ಮಾಡಿದನು. ನೀನೂ ಕೂಡ ಹಾಗೆಯೇ ನಡೆದುಕೊಂಡರೆ ಎರಡೂ ಲೋಕಗಳನ್ನು ಜಯಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಾಮದೇವಗೀತಾಸು ಪಂಚನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಾಮದೇವಗೀತ ಎನ್ನುವ ತೊಂಭತ್ತೈದನೇ ಅಧ್ಯಾಯವು.

8,379 Flowers White Background Videos and HD Footage - Getty Images

[1] ಪ್ರತಾಪಕಾಲಮಧಿಕಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ನೈವ ದ್ವಿಷಂತೋ ಹೀಯಂತೇ ರಾಜ್ಞೋ ನಿತ್ಯಮನಿಘ್ನತಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.