Shanti Parva: Chapter 94

ಶಾಂತಿ ಪರ್ವ: ರಾಜಧರ್ಮ ಪರ್ವ

೯೪

ವಾಮದೇವನು ವಸುಮನಸನಿಗೆ ರಾಜೋಚಿತ ವ್ಯವಹಾರಗಳನ್ನು ವರ್ಣಿಸಿದುದು (1-38)

12094001 ವಾಮದೇವ ಉವಾಚ|

12094001a ಯತ್ರಾಧರ್ಮಂ ಪ್ರಣಯತೇ ದುರ್ಬಲೇ ಬಲವತ್ತರಃ|

12094001c ತಾಂ ವೃತ್ತಿಮುಪಜೀವಂತಿ ಯೇ ಭವಂತಿ ತದನ್ವಯಾಃ||

ವಾಮದೇವನು ಹೇಳಿದನು: “ಯಾವ ರಾಜ್ಯದಲ್ಲಿ ಬಲಶಾಲೀ ರಾಜನು ದುರ್ಬಲರ ಮೇಲೆ ಬಲಾತ್ಕಾರವಾಗಿ ಅಧರ್ಮದಿಂದ ವರ್ತಿಸುವನೋ ಅವನ ವೃತ್ತಿಯನ್ನು ಅವನ ಅನುಯಾಯಿಗಳೂ  ಕುಟುಂಬದವರೂ ಅನುಸರಿಸುತ್ತಾರೆ.

12094002a ರಾಜಾನಮನುವರ್ತಂತೇ ತಂ ಪಾಪಾಭಿಪ್ರವರ್ತಕಮ್|

12094002c ಅವಿನೀತಮನುಷ್ಯಂ ತತ್ ಕ್ಷಿಪ್ರಂ ರಾಷ್ಟ್ರಂ ವಿನಶ್ಯತಿ||

ಅನುಯಾಯಿಗಳು ಪಾಪಪ್ರವರ್ತಕನಾದ ರಾಜನನ್ನೇ ಅನುಸರಿಸುತ್ತಾರೆ. ಈ ರೀತಿಯ ಉದ್ದಂಡ ಮನುಷ್ಯರಿಂದಲೇ ರಾಷ್ಟ್ರವು ಕ್ಷಿಪ್ರವಾಗಿ ವಿನಾಶ ಹೊಂದುತ್ತದೆ.

12094003a ಯದ್ವೃತ್ತಿಮುಪಜೀವಂತಿ ಪ್ರಕೃತಿಸ್ಥಸ್ಯ ಮಾನವಾಃ|

12094003c ತದೇವ ವಿಷಮಸ್ಥಸ್ಯ ಸ್ವಜನೋಽಪಿ ನ ಮೃಷ್ಯತೇ||

ರಾಜನು ಸುಖದಿಂದಿರುವಾಗ ಅವನ ಅಧರ್ಮಕಾರ್ಯಗಳನ್ನು ಪ್ರೋತ್ಸಾಹಿಸಿ ಜೀವಿಸುತ್ತಿದ್ದ ಮಾನವರು ಅದೇ ರಾಜನು ವಿಷಮಸ್ಥಿತಿಯನ್ನು ಪಡೆದಾಗ, ಕುಟುಂಬದವರೇ ಆಗಿದ್ದರೂ, ಅವನನ್ನು ಸಹಿಸಿಕೊಳ್ಳುವುದಿಲ್ಲ.

12094004a ಸಾಹಸಪ್ರಕೃತಿರ್ಯತ್ರ ಕುರುತೇ ಕಿಂ ಚಿದುಲ್ಬಣಮ್|

12094004c ಅಶಾಸ್ತ್ರಲಕ್ಷಣೋ ರಾಜಾ ಕ್ಷಿಪ್ರಮೇವ ವಿನಶ್ಯತಿ||

ಸಾಹಸ ಪ್ರಕೃತಿಯುಳ್ಳ ಮತು ಶಾಸ್ತ್ರಗಳಂತೆ ನಡೆದುಕೊಳ್ಳದೇ ಇರುವ ರಾಜನು ಸ್ವಲ್ಪವೇ ಸಾಹಸವನ್ನು ತೋರಿಸಿದರೂ ಕ್ಷಿಪ್ರವಾಗಿ ನಾಶಹೊಂದುತ್ತಾನೆ.

12094005a ಯೋಽತ್ಯಂತಾಚರಿತಾಂ ವೃತ್ತಿಂ ಕ್ಷತ್ರಿಯೋ ನಾನುವರ್ತತೇ|

12094005c ಜಿತಾನಾಮಜಿತಾನಾಂ ಚ ಕ್ಷತ್ರಧರ್ಮಾದಪೈತಿ ಸಃ||

ಗೆದ್ದ ಮತ್ತು ಗೆಲ್ಲದೇ ಇದ್ದವರೊಡನೆ ಅತ್ಯಂತವಾಗಿ ಆಚರಿಸಬೇಕಾದ ಕ್ಷತ್ರಿಯ ವೃತ್ತಿಯನ್ನು ಯಾರು ಅನುಸರಿಸುವುದಿಲ್ಲವೋ ಅವನು ಕ್ಷತ್ರಿಯಧರ್ಮದಿಂದ ಚ್ಯುತನಾಗುತ್ತಾನೆ.

12094006a ದ್ವಿಷಂತಂ ಕೃತಕರ್ಮಾಣಂ ಗೃಹೀತ್ವಾ ನೃಪತೀ ರಣೇ|

12094006c ಯೋ ನ ಮಾನಯತೇ ದ್ವೇಷಾತ್ ಕ್ಷತ್ರಧರ್ಮಾದಪೈತಿ ಸಃ||

ಹಿಂದೆ ಉಪಕಾರ ಮಾಡಿದವನು ಈಗ ಶತ್ರುವಾಗಿ ರಣದಲ್ಲಿ ಸೆರೆಹಿಡಿಯಲ್ಪಟ್ಟರೆ ಯಾವ ನೃಪತಿಯು ಅವನನ್ನು ದ್ವೇಷದ ಕಾರಣದಿಂದ ಗೌರವಿಸುವುದಿಲವೋ ಅವನು ಕ್ಷತ್ರಿಯಧರ್ಮದಿಂದ ಚ್ಯುತನಾದಂತೆ.

12094007a ಶಕ್ತಃ ಸ್ಯಾತ್ಸುಮುಖೋ ರಾಜಾ ಕುರ್ಯಾತ್ಕಾರುಣ್ಯಮಾಪದಿ[1]|

12094007c ಪ್ರಿಯೋ ಭವತಿ ಭೂತಾನಾಂ ನ ಚ ವಿಭ್ರಶ್ಯತೇ ಶ್ರಿಯಃ||

ರಾಜನಾದವನು ಶಕ್ತನಾಗಿರಬೇಕು. ಸುಮುಖನಾಗಿರಬೇಕು. ಆಪತ್ತು ಒದಗಿದವರಿಗೆ ಕರುಣೆಯನ್ನು ತೋರಿಸಬೇಕು. ಇರುವ ಜೀವಿಗಳಿಗೆ ಪ್ರಿಯನಾಗಿರಬೇಕು. ಅಂಥವನು ರಾಜ್ಯಶ್ರೀಯಿಂದ ಭ್ರಷ್ಟನಾಗುವುದಿಲ್ಲ.

12094008a ಅಪ್ರಿಯಂ ಯಸ್ಯ ಕುರ್ವೀತ ಭೂಯಸ್ತಸ್ಯ ಪ್ರಿಯಂ ಚರೇತ್|

12094008c ನಚಿರೇಣ ಪ್ರಿಯಃ ಸ ಸ್ಯಾದ್ಯೋಽಪ್ರಿಯಃ ಪ್ರಿಯಮಾಚರೇತ್||

ಹಿಂದೆ ಯಾರಿಗೆ ಅಪ್ರಿಯವಾದುದನ್ನು ಮಾಡಿದ್ದನೋ ಅವನಿಗೆ ಪುನಃ ಪ್ರಿಯವಾದುದನ್ನು ಮಾಡಬೇಕು. ಹಾಗೆ ಮಾಡುವುದರಿಂದ ಸ್ವಲ್ಪವೇ ಸಮಯದಲ್ಲಿ ಅಪ್ರಿಯನಾದವನೂ ಪ್ರಿಯನಾಗುತ್ತಾನೆ.

12094009a ಮೃಷಾವಾದಂ ಪರಿಹರೇತ್ಕುರ್ಯಾತ್ ಪ್ರಿಯಮಯಾಚಿತಃ|

12094009c ನ ಚ ಕಾಮಾನ್ನ ಸಂರಂಭಾನ್ನ ದ್ವೇಷಾದ್ಧರ್ಮಮುತ್ಸೃಜೇತ್||

ಸುಳ್ಳುಹೇಳುವುದನ್ನು ಸಂಪೂರ್ಣವಾಗಿ ಬಿಡಬೇಕು. ಯಾಚನೆ ಮಾಡದಿದ್ದರೂ ಪ್ರಿಯವಾದುದನ್ನೇ ಮಾಡಬೇಕು. ಕಾಮದಿಂದಾಗಲೀ ಕ್ರೋಧದಿಂದಾಗಲೀ ಅಥವಾ ದ್ವೇಷದಿಂದಾಗಲೀ ಧರ್ಮವನ್ನು ಬಿಡಬಾರದು.

12094010a ನಾಪತ್ರಪೇತ ಪ್ರಶ್ನೇಷು ನಾಭಿಭವ್ಯಾಂ ಗಿರಂ ಸೃಜೇತ್|

12094010c ನ ತ್ವರೇತ ನ ಚಾಸೂಯೇತ್ತಥಾ ಸಂಗೃಹ್ಯತೇ ಪರಃ||

ಪ್ರಶ್ನಿಸಿದಾಗ ಉತ್ತರಿಸಲು ಸಂಕೋಚಪಡಬಾರದು. ಅಸಂಭವವಾದ ಮಾತುಗಳನ್ನು ಆಡಬಾರದು. ಅವಸರ ಮಾಡಬಾರದು. ಅಸೂಯೆಪಡಬಾರದು. ಆಗ ಶತ್ರುವನ್ನೂ ವಶಪಡಿಸಿಕೊಳ್ಳಬಹುದು.

12094011a ಪ್ರಿಯೇ ನಾತಿಭೃಶಂ ಹೃಷ್ಯೇದಪ್ರಿಯೇ ನ ಚ ಸಂಜ್ವರೇತ್|

12094011c ನ ಮುಹ್ಯೇದರ್ಥಕೃಚ್ಚ್ರೇಷು ಪ್ರಜಾಹಿತಮನುಸ್ಮರನ್||

ಪ್ರಿಯವಾದುದು ನಡೆದಾಗ ಅತಿಯಾಗಿ ಹರ್ಷಿಸಬಾರದು. ಅಪ್ರಿಯವಾದುದು ನಡೆದಾಗ ಹೆಚ್ಚಾಗಿ ಚಿಂತಿಸಬಾರದು ಕೂಡ. ಹಣದ ಮುಗ್ಗಟ್ಟು ಒದಗಿ ಬಂದಾಗಿ ಪ್ರಜಾಹಿತವನ್ನು ಸ್ಮರಿಸಿಕೊಂಡು ಮೋಹಿತನಾಗಬಾರದು.

12094012a ಯಃ ಪ್ರಿಯಂ ಕುರುತೇ ನಿತ್ಯಂ ಗುಣತೋ ವಸುಧಾಧಿಪಃ|

12094012c ತಸ್ಯ ಕರ್ಮಾಣಿ ಸಿಧ್ಯಂತಿ ನ ಚ ಸಂತ್ಯಜ್ಯತೇ ಶ್ರಿಯಾ||

ಗುಣವಂತನಾದ ಯಾವ ವಸುಧಾಧಿಪನು ನಿತ್ಯವೂ ಪ್ರಿಯವಾದುದನ್ನೇ ಮಾಡುತ್ತಾನೋ ಅವನ ಕರ್ಮಗಳು ಸಿದ್ಧಿಸುತ್ತವೆ. ಮತ್ತು ಶ್ರೀಯು ಅವನನ್ನು ತ್ಯಜಿಸುವುದಿಲ್ಲ.

12094013a ನಿವೃತ್ತಂ ಪ್ರತಿಕೂಲೇಭ್ಯೋ ವರ್ತಮಾನಮನುಪ್ರಿಯೇ|

12094013c ಭಕ್ತಂ ಭಜೇತ ನೃಪತಿಸ್ತದ್ವೈ ವೃತ್ತಂ ಸತಾಮಿಹ||

ತನಗೆ ಪ್ರತಿಕೂಲವಾದನ್ನೇ ಮಾಡುವ ಮತ್ತು ನಿತ್ಯವೂ ಪ್ರಿಯವನ್ನೇ ಮಾಡುವ ಸೇವಕನ ಕುರಿತು ನೃಪತಿಯಾದವನು ಗಮನವಿಟ್ಟು ಅನುರಕ್ತನಾಗಿರಬೇಕು.

12094014a ಅಪ್ರಕೀರ್ಣೇಂದ್ರಿಯಂ ಪ್ರಾಜ್ಞಮತ್ಯಂತಾನುಗತಂ ಶುಚಿಮ್|

12094014c ಶಕ್ತಂ ಚೈವಾನುರಕ್ತಂ ಚ ಯುಂಜ್ಯಾನ್ಮಹತಿ ಕರ್ಮಣಿ||

ರಾಜನಾದವನು ತನ್ನನ್ನು ಅತಿಯಾಗಿ ಅನುಸರಿಸಿ ನಡೆಯುತ್ತಿರುವ ಮತ್ತು ತನ್ನಲ್ಲಿಯೇ ಅನುರಕ್ತನಾಗಿರುವ ಜಿತೇಂದ್ರಿಯನೂ ಪ್ರಾಜ್ಞನೂ ಮತ್ತು ಶುಚಿಯೂ ಆದವನನ್ನು ದೊಡ್ಡ ದೊಡ್ಡ ಕೆಲಸಗಳಿಗೆ ನಿಯೋಜಿಸಬೇಕು,

12094015a ಏವಮೇವ ಗುಣೈರ್ಯುಕ್ತೋ ಯೋ ನ ರಜ್ಯತಿ ಭೂಮಿಪಮ್|

12094015c ಭರ್ತುರರ್ಥೇಷ್ವಸೂಯಂತಂ ನ ತಂ ಯುಂಜೀತ ಕರ್ಮಣಿ||

ಈ ಗುಣಗಳಿಂದ ಕೂಡಿರುವ, ಭೂಮಿಪನನ್ನು ರಂಜಿಸಲು ಸಮರ್ಥನಾಗಿರುವ, ಒಡೆಯನ ಆರ್ಥಿಕ ವಿಷಯದಲ್ಲಿ ಅಪ್ರಮತ್ತನಾಗಿರದವನನ್ನು ಧನದ ವ್ಯವಸ್ಥೆಗೆ ನಿಯೋಜಿಸಬೇಕು.

12094016a ಮೂಢಮೈಂದ್ರಿಯಕಂ ಲುಬ್ಧಮನಾರ್ಯಚರಿತಂ ಶಠಮ್|

12094016c ಅನತೀತೋಪಧಂ ಹಿಂಸ್ರಂ ದುರ್ಬುದ್ಧಿಮಬಹುಶ್ರುತಮ್||

12094017a ತ್ಯಕ್ತೋಪಾತ್ತಂ ಮದ್ಯರತಂ ದ್ಯೂತಸ್ತ್ರೀಮೃಗಯಾಪರಮ್|

12094017c ಕಾರ್ಯೇ ಮಹತಿ ಯೋ ಯುಂಜ್ಯಾದ್ಧೀಯತೇ ಸ ನೃಪಃ ಶ್ರಿಯಃ||

ಮೂಢ, ಇಂದ್ರಿಯಲೋಲುಪ, ಲೋಭಿ, ದುರಾಚಾರಿ, ಶಠ, ಕಪಟಿ, ಹಿಂಸಕ, ದುರ್ಬುದ್ಧಿ, ಶಾಸ್ತ್ರಜ್ಞಾನಶೂನ್ಯ, ಸ್ವಭಾವತಃ ಉದಾತ್ತನಾಗಿಲ್ಲದವನು, ಮದ್ಯಪಾನಾಸಕ್ತ, ಜೂಜಾಡುವ ಸ್ತ್ರೀಲಂಪಟ ಮತ್ತು ಬೇಟೆಯಾಡುವುದರಲ್ಲಿಯೇ ಆಸಕ್ತಿಯಿರುವವನನ್ನು ಮಹತ್ವದ ಕಾರ್ಯಗಳಲ್ಲಿ ನಿಯಮಿಸುವ ರಾಜನು ಬಹಳ ಬೇಗ ಲಕ್ಷ್ಮಿಯಿಂದ ವಿಹೀನನಾಗುತ್ತಾನೆ.

12094018a ರಕ್ಷಿತಾತ್ಮಾ ತು ಯೋ ರಾಜಾ ರಕ್ಷ್ಯಾನ್ಯಶ್ಚಾನುರಕ್ಷತಿ|

12094018c ಪ್ರಜಾಶ್ಚ ತಸ್ಯ ವರ್ಧಂತೇ ಧ್ರುವಂ ಚ ಮಹದಶ್ನುತೇ||

ಯಾವ ರಾಜನು ತನ್ನನ್ನು ರಕ್ಷಿಸಿಕೊಳ್ಳುತ್ತಾ ಪ್ರಜೆಗಳನ್ನು ರಕ್ಷಿಸುವನೋ ಅವನ ಪ್ರಜೆಗಳು ಅಭಿವೃದ್ಧಿ ಹೊಂದುತ್ತಾರೆ. ರಾಜನು ಮಹತ್ತಾದ ಫಲವನ್ನು ಪಡೆದುಕೊಳ್ಳುತ್ತಾನೆ.

12094019a ಯೇ ಕೇ ಚಿದ್ಭೂಮಿಪತಯಸ್ತಾನ್ಸರ್ವಾನನ್ವವೇಕ್ಷಯೇತ್|

12094019c ಸುಹೃದ್ಭಿರನಭಿಖ್ಯಾತೈಸ್ತೇನ ರಾಜಾ ನ ರಿಷ್ಯತೇ||

ಯಾವ ರಾಜನು ತನ್ನ ಅಜ್ಞಾತರಾಗಿರುವ ಸುಹೃದರ ಮೂಲಕ ಸಮಸ್ತ ಭೂಪತಿಗಳ ವಿಷಯಗಳನ್ನೂ ತಿಳಿದುಕೊಳ್ಳುವನೋ ಅವನು ಎಲ್ಲ ರಾಜರನ್ನೂ ಅತಿಶಯಿಸುತ್ತಾನೆ.

12094020a ಅಪಕೃತ್ಯ ಬಲಸ್ಥಸ್ಯ ದೂರಸ್ಥೋಽಸ್ಮೀತಿ ನಾಶ್ವಸೇತ್|

12094020c ಶ್ಯೇನಾನುಚರಿತೈರ್ಹ್ಯೇತೇ ನಿಪತಂತಿ ಪ್ರಮಾದ್ಯತಃ||

ಬಲಿಷ್ಠ ಶತ್ರುವಿಗೆ ತೊಂದರೆ ಕೊಟ್ಟು ಅವನು ನನಗೇನೂ ಮಾಡಲಾರ ಎಂದು ನಂಬಿ ರಾಜನು ನಿಶ್ಚಿಂತನಾಗಿರಬಾರದು. ಅವರು ಗಿಡುಗದಂತೆ ಅವನು ಅಜಾಗರೂಕನಾಗಿರುವಾಗಲೇ ಎರಗಿ ಬೀಳುತ್ತಾರೆ.

12094021a ದೃಢಮೂಲಸ್ತ್ವದುಷ್ಟಾತ್ಮಾ ವಿದಿತ್ವಾ ಬಲಮಾತ್ಮನಃ|

12094021c ಅಬಲಾನ್ ಅಭಿಯುಂಜೀತ ನ ತು ಯೇ ಬಲವತ್ತರಾಃ||

ಅದುಷ್ಟಾತ್ಮ ರಾಜನು ರಾಷ್ಟ್ರದಲ್ಲಿ ತನ್ನ ಅಧಿಕಾರವನ್ನು ಭದ್ರಪಡಿಸಿಕೊಂಡು ತನ್ನ ಬಲವೇನು ಎಂದು ಚೆನ್ನಾಗಿ ಅರಿತುಕೊಂಡು ತನಗಿಂತಲೂ ದುರ್ಬಲರಾದವನ್ನು ಮಾತ್ರ ಆಕ್ರಮಿಸಬೇಕು. ತನಗಿಂತಲೂ ಬಲಿಷ್ಠನಾದವನ ಮೇಲೆ ಯುದ್ಧಕ್ಕೆ ಹೋಗಲೇ ಬಾರದು.

12094022a ವಿಕ್ರಮೇಣ ಮಹೀಂ ಲಬ್ಧ್ವಾ ಪ್ರಜಾ ಧರ್ಮೇಣ ಪಾಲಯನ್|

12094022c ಆಹವೇ ನಿಧನಂ ಕುರ್ಯಾದ್ರಾಜಾ ಧರ್ಮಪರಾಯಣಃ||

ವಿಕ್ರಮದಿಂದ ಮಹಿಯನ್ನು ಪಡೆದುಕೊಂಡು, ಧರ್ಮದಿಂದ ಪ್ರಜೆಗಳನ್ನು ಪಾಲಿಸಿ, ಯುದ್ಧದಲ್ಲಿ ನಿಧನಹೊಂದುವ ರಾಜನು ಧರ್ಮಪರಾಯಣನು.

12094023a ಮರಣಾಂತಮಿದಂ ಸರ್ವಂ ನೇಹ ಕಿಂ ಚಿದನಾಮಯಮ್|

12094023c ತಸ್ಮಾದ್ಧರ್ಮೇ ಸ್ಥಿತೋ ರಾಜಾ ಪ್ರಜಾ ಧರ್ಮೇಣ ಪಾಲಯೇತ್||

ಈ ಪ್ರಪಂಚದಲ್ಲಿ ಎಲ್ಲರೂ ಮರಣದಲ್ಲಿಯೇ ಅಂತ್ಯರಾಗುತ್ತಾರೆ. ಯಾರೂ ರೋಗರಹಿತರಾಗಿರುವುದಿಲ್ಲ ಅಥವಾ ಅವಿನಾಶಿಯಾಗಿರುವುದಿಲ್ಲ. ಆದುದರಿಂದ ರಾಜನಾದವನು ಧರ್ಮಮಾರ್ಗದಲ್ಲಿದ್ದುಕೊಂಡೇ ಪ್ರಜೆಗಳನ್ನು ಧರ್ಮದಿಂದ ಪರಿಪಾಲನೆ ಮಾಡಬೇಕು.

12094024a ರಕ್ಷಾಧಿಕರಣಂ ಯುದ್ಧಂ ತಥಾ ಧರ್ಮಾನುಶಾಸನಮ್|

12094024c ಮಂತ್ರಚಿಂತ್ಯಂ ಸುಖಂ ಕಾಲೇ ಪಂಚಭಿರ್ವರ್ಧತೇ ಮಹೀ||

ರಕ್ಷಣೆಗೆ ಬೇಕಾದುದನ್ನು ಮಾಡುವುದು, ಯುದ್ಧ, ಧರ್ಮಾನುಶಾಸನ, ಮಂತ್ರಾಲೋಚನೆ, ಯಥಾಕಾಲದಲ್ಲಿ ಎಲ್ಲರಿಗೂ ಸುಖವನ್ನು ನೀಡುವುದು – ಈ ಐದು ಕಾರ್ಯಗಳಿಂದ ರಾಜ್ಯವು ಅಭಿವೃದ್ಧಿಹೊಂದುತ್ತದೆ.

12094025a ಏತಾನಿ ಯಸ್ಯ ಗುಪ್ತಾನಿ ಸ ರಾಜಾ ರಾಜಸತ್ತಮ|

12094025c ಸತತಂ ವರ್ತಮಾನೋಽತ್ರ ರಾಜಾ ಭುಂಕ್ತೇ[2] ಮಹೀಮಿಮಾಮ್||

ಇವುಗಳನ್ನು ಗುಪ್ತವಾಗಿ ಯಾರು ಮಾಡುತ್ತಾನೋ ಆ ರಾಜನೇ ಸಾಜಸತ್ತಮನಾಗುತ್ತಾನೆ. ಈ ಐದು ಕಾರ್ಯಗಳನ್ನೂ ಮಾಡುವ ರಾಜನು ಈ ಮಹಿಯನ್ನು ಭೋಗಿಸುತ್ತಾನೆ.

12094026a ನೈತಾನ್ಯೇಕೇನ ಶಕ್ಯಾನಿ ಸಾತತ್ಯೇನಾನ್ವವೇಕ್ಷಿತುಮ್|

12094026c ಏತೇಷ್ವಾಪ್ತಾನ್ಪ್ರತಿಷ್ಠಾಪ್ಯ ರಾಜಾ ಭುಂಕ್ತೇ ಮಹೀಂ ಚಿರಮ್||

ರಾಜನೊಬ್ಬನೇ ಇವೆಲ್ಲವನ್ನೂ ಮಾಡಲು ಶಲ್ಯನಿಲ್ಲ. ಆದುದರಿಂದ ಅವನು ಎಲ್ಲ ಅಧಿಕಾರಗಳನ್ನೂ ಯೋಗ್ಯ ಅಧಿಕಾರಿಗಳಲ್ಲಿ ಪ್ರತಿಷ್ಠಾಪಿಸಿದ ರಾಜನು ಚಿರಕಾಲದ ವರೆಗೆ ರಾಜ್ಯವನ್ನು ಭೋಗಿಸುತ್ತಾನೆ.

12094027a ದಾತಾರಂ ಸಂವಿಭಕ್ತಾರಂ ಮಾರ್ದವೋಪಗತಂ ಶುಚಿಮ್|

12094027c ಅಸಂತ್ಯಕ್ತಮನುಷ್ಯಂ ಚ ತಂ ಜನಾಃ ಕುರ್ವತೇ ಪ್ರಿಯಮ್||

ದಾನಶೀಲನಾದ, ಸರಿಯಾಗಿ ವಿಭಜಿಸಿ ಭೋಗಿಸುವ, ಮೃದುಸ್ವಭಾವದ, ಶುಚಿಯಾದ ಮತ್ತು ಯಾವುದೇ ಕಾರಣಗಳಿಮ್ದಲೂ ಪ್ರಜೆಗಳನ್ನು ತ್ಯಾಗಮಾಡದ ರಾಜನನ್ನು ಜನರು ಪ್ರೀತಿಸುತ್ತಾರೆ.

12094028a ಯಸ್ತು ನಿಃಶ್ರೇಯಸಂ ಜ್ಞಾತ್ವಾ ಜ್ಞಾನಂ ತತ್ ಪ್ರತಿಪದ್ಯತೇ|

12094028c ಆತ್ಮನೋ ಮತಮುತ್ಸೃಜ್ಯ ತಂ ಲೋಕೋಽನುವಿಧೀಯತೇ||

ಕಲ್ಯಾಣಮಯ ಉಪದೇಶವನ್ನು ಕೇಳಿದನಂತರವೂ ತನ್ನ ಅಭಿಪ್ರಾಯವೇ ಸರಿ ಎಂಬ ದುರಾಗ್ರಹವನ್ನು ತೊರೆದು ನಿಜವಾದ ಜ್ಞಾನವನ್ನು ಪಡೆದುಕೊಳ್ಳುವ ರಾಜನನ್ನು ಲೋಕವೇ ಅನುಸರಿಸುತ್ತದೆ.

12094029a ಯೋಽರ್ಥಕಾಮಸ್ಯ ವಚನಂ ಪ್ರಾತಿಕೂಲ್ಯಾನ್ನ ಮೃಷ್ಯತೇ|

12094029c ಶೃಣೋತಿ ಪ್ರತಿಕೂಲಾನಿ ವಿಮನಾ ನಚಿರಾದಿವ||

12094030a ಅಗ್ರಾಮ್ಯಚರಿತಾಂ ಬುದ್ಧಿಮತ್ಯಂತಂ ಯೋ ನ ಬುಧ್ಯತೇ|

12094030c ಜಿತಾನಾಮಜಿತಾನಾಂ ಚ ಕ್ಷತ್ರಧರ್ಮಾದಪೈತಿ ಸಃ||

ತನ್ನ ಅಭಿಪ್ರಾಯಕ್ಕೆ ವಿರೋಧವಾಗಿದೆ ಎಂಬ ಕಾರಣದಿಂದ ತನ್ನ ಅರ್ಥಸಿದ್ಧಿಯನ್ನು ಅಪೇಕ್ಷಿಸುವ ಸುಹೃದನ ಮಾತನ್ನು ಯಾವ ರಾಜನು ಸಹಿಸುವುದಿಲ್ಲವೋ, ತನ್ನ ಅರ್ಥಸಿದ್ಧಿಗೆ ಪ್ರತಿಕೂಲ ಮಾತುಗಳನ್ನೇ ಕೇಳುವನೋ, ಸರ್ವಕಾಲದಲ್ಲಿಯೂ ವಿಮನಸ್ಕನಾಗಿರುವನೋ, ವಿದ್ವಾಂಸರಿಂದಲೂ-ಶಿಷ್ಟರಿಂದಲೂ ಆಚರಿಸಲ್ಪಟ್ಟ ಸದ್ವೃತ್ತಿಯನ್ನು ಯಾರು ನಿತ್ಯವೂ ಸೇವಿಸುವುದಿಲ್ಲವೋ, ಮತ್ತು ತಾನು ಗೆದ್ದ ಮತ್ತು ತಾನು ಸೋತ ರಾಜರುಗಳೊಡನೆ ಪರಂಪರಾಗತವಾದ ಸಂಪ್ರದಾಯಗಳನ್ನು ಅನುಷ್ಠಾನಕ್ಕೆ ತರುವುದಿಲ್ಲವೋ ಆ ರಾಜನು ಕ್ಷತ್ರಿಯಧರ್ಮದಿಂದ ಚ್ಯುತನಾದಂತೆ.

12094031a ಮುಖ್ಯಾನಮಾತ್ಯಾನ್ಯೋ ಹಿತ್ವಾ ನಿಹೀನಾನ್ಕುರುತೇ ಪ್ರಿಯಾನ್|

12094031c ಸ ವೈ ವ್ಯಸನಮಾಸಾದ್ಯ ಗಾಧಮಾರ್ತೋ ನ ವಿಂದತಿ||

ಮುಖ್ಯ ಅಮಾತ್ಯರನ್ನು ತ್ಯಜಿಸಿ ಹೀನರೊಂದಿಗೆ ಸ್ನೇಹಬೆಳೆಸುವ ರಾಜನು ಸಂಕಟವೆಂಬ ಸಮುದ್ರದಲ್ಲಿ ಬಿದ್ದು ಯಾರ ಆಶ್ರಯವೂ ಇಲ್ಲದೇ ಪೀಡಿತರಾಗುತ್ತಾನೆ.

12094032a ಯಃ ಕಲ್ಯಾಣಗುಣಾಂಜ್ಞಾತೀನ್ ದ್ವೇಷಾನ್ನೈವಾಭಿಮನ್ಯತೇ|

12094032c ಅದೃಢಾತ್ಮಾ ದೃಢಕ್ರೋಧೋ ನಾಸ್ಯಾರ್ಥೋ ರಮತೇಽಂತಿಕೇ||

ಕಲ್ಯಾಣಗುಣಸಂಪನ್ನರಾದ ಜ್ಞಾತಿಬಾಂಧವರನ್ನು ದ್ವೇಷಿಸಿ ಸಮ್ಮಾನಿಸದಿರುವ, ಚಂಚಲ ಚಿತ್ತನೂ ದೃಢವಾದ ರೋಷವುಳ್ಳವನೂ ಆಗಿರುವ ರಾಜನು ಮೃತ್ಯುವಿನ ಸಮೀಪದಲ್ಲಿಯೇ ಇರುತ್ತಾನೆ.

12094033a ಅಥ ಯೋ ಗುಣಸಂಪನ್ನಾನ್ ಹೃದಯಸ್ಯಾಪ್ರಿಯಾನಪಿ|

12094033c ಪ್ರಿಯೇಣ ಕುರುತೇ ವಶ್ಯಾಂಶ್ಚಿರಂ ಯಶಸಿ ತಿಷ್ಠತಿ||

ತನ್ನ ಹೃದಯಕ್ಕೆ ಅಪ್ರಿಯರೆಂದು ಕಂಡರೂ ಗುಣಸಂಪನ್ನರಾದವರನ್ನು ಪ್ರೀತಿಪೂರ್ವಕವಾಗಿ ತನ್ನವರನ್ನಾಗಿರಿಸಿಕೊಂಡ ರಾಜನು ಬಹುಕಾಲದ ವರೆಗೆ ಯಶಸ್ವಿಯಾಗಿರುತ್ತಾನೆ.

12094034a ನಾಕಾಲೇ ಪ್ರಣಯೇದರ್ಥಾನ್ನಾಪ್ರಿಯೇ ಜಾತು ಸಂಜ್ವರೇತ್|

12094034c ಪ್ರಿಯೇ ನಾತಿಭೃಶಂ ಹೃಷ್ಯೇದ್ಯುಜ್ಯೇತಾರೋಗ್ಯಕರ್ಮಣಿ||

ರಾಜನಾದವನು ಅಕಾಲದಲ್ಲಿ ಧನಸಂಗ್ರಹಕ್ಕೆ ಪ್ರಯತ್ನಿಸಬಾರದು. ಅಪ್ರಿಯವಾದದ್ದು ನಡೆದುಹೋದರೂ ಅದರ ಕುರಿತು ಚಿಂತಾಮಗ್ನನಾಗಿರಬಾರದು. ಪ್ರಿಯವಾದುದು ನಡೆದರೆ ಅತಿಯಾಗಿ ಹಿಗ್ಗಲೂ ಬಾರದು. ನಿರೋಗಿಯಾಗಿ ಸುದೃಢನಾಗಿರಲು ಪ್ರಯತ್ನಿಸಬೇಕು.

12094035a ಕೇ ಮಾನುರಕ್ತಾ ರಾಜಾನಃ ಕೇ ಭಯಾತ್ಸಮುಪಾಶ್ರಿತಾಃ|

12094035c ಮಧ್ಯಸ್ಥದೋಷಾಃ ಕೇ ಚೈಷಾಮಿತಿ ನಿತ್ಯಂ ವಿಚಿಂತಯೇತ್||

ಯಾವ ರಾಜರು ತನ್ನಲ್ಲಿ ಅನುರಕ್ತರಾಗಿದ್ದಾರೆ, ಯಾರು ಭಯದಿಂದ ತನ್ನನ್ನು ಆಶ್ರಯಿಸಿದ್ದಾರೆ, ಯಾರು ಮಧ್ಯಸ್ಥರು, ಯಾರು ಶತ್ರುಗಳು – ಈ ವಿಷಯಗಳನ್ನು ರಾಜನು ಸದಾ ಚಿಂತಿಸುತ್ತಿರಬೇಕು.

12094036a ನ ಜಾತು ಬಲವಾನ್ ಭೂತ್ವಾ ದುರ್ಬಲೇ ವಿಶ್ವಸೇತ್ಕ್ವ ಚಿತ್|

12094036c ಭಾರುಂಡಸದೃಶಾ ಹ್ಯೇತೇ ನಿಪತಂತಿ ಪ್ರಮಾದ್ಯತಃ||

ತಾನು ಬಲಿಷ್ಠನಾಗಿದ್ದರೂ ದುರ್ಬಲ ರಾಜರ ಮೇಲೆ ವಿಶ್ವಾಸವನ್ನಿಡಬಾರದು. ಗಂಡಭೇರುಂಡ ಪಕ್ಷಿಯಂತಿರುವ ಅವರು ಅಪ್ರಮತ್ತನಾಗಿರುವಾಗಲೇ ಮೇಲೆ ಬೀಳುತ್ತಾರೆ.

12094037a ಅಪಿ ಸರ್ವೈರ್ಗುಣೈರ್ಯುಕ್ತಂ ಭರ್ತಾರಂ ಪ್ರಿಯವಾದಿನಮ್|

12094037c ಅಭಿದ್ರುಹ್ಯತಿ ಪಾಪಾತ್ಮಾ ತಸ್ಮಾದ್ಧಿ ವಿಭಿಷೇಜ್ಜನಾತ್||

ಸರ್ವಗುಣ ಸಂಪನ್ನನ್ನಾದ ಪ್ರಿಯವಾದಿನಿಯಾದ ಒಡೆಯನಿಗೆ ವಿನಾಕಾರಣ ದ್ರೋಹವನ್ನೆಸಗುವ ಪಾಪಾತ್ಮನು ಸರ್ವಗುಣಗಳಿಂದ ಯುಕ್ತನಾಗಿದ್ದರೂ ಅವನ ಮೇಲೆ ವಿಶ್ವಾಸವಿಡಬಾರದು.

12094038a ಏತಾಂ ರಾಜೋಪನಿಷದಂ ಯಯಾತಿಃ ಸ್ಮಾಹ ನಾಹುಷಃ|

12094038c ಮನುಷ್ಯವಿಜಯೇ ಯುಕ್ತೋ ಹಂತಿ ಶತ್ರೂನನುತ್ತಮಾನ್||

ಈ ರಾಜೋಪನಿಷತ್ತನ್ನು ನಹುಷನ ಮಗ ಯಯಾತಿಯು ಹೇಳಿದ್ದನು. ಇದನ್ನು ಕೇಳಿದವನು ಮನುಷ್ಯವಿಜಯದಲ್ಲಿ ಯುಕ್ತನಾಗಿ ಶತ್ರುಗಳನ್ನು   ನಾಶಪಡಿಸುತ್ತಾನೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವಾಮದೇವಗೀತಾಸು ಚತುರ್ನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವಾಮದೇವಗೀತ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.

white flower png - white flower transparent background PNG image with transparent  background | TOPpng

[1] ಶಕ್ತಃ ಸ್ಯಾತ್ಸುಸುಖೋ ರಾಜಾ ಕುರ್ಯಾತ್ಕರಣಮಾಪದಿ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಧತ್ತಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.