Shanti Parva: Chapter 93

ಶಾಂತಿ ಪರ್ವ: ರಾಜಧರ್ಮ ಪರ್ವ

೯೩

ವಾಮದೇವಗೀತಾ

ರಾಜಧರ್ಮದ ಕುರಿತು ವಸುಮನಸನಿಗೆ ವಾಮದೇವನ ಉಪದೇಶ (1-19).

12093001 ಯುಧಿಷ್ಠಿರ ಉವಾಚ|

12093001a ಕಥಂ ಧರ್ಮೇ ಸ್ಥಾತುಮಿಚ್ಚನ್ರಾಜಾ ವರ್ತೇತ ಧಾರ್ಮಿಕಃ|

12093001c ಪೃಚ್ಚಾಮಿ ತ್ವಾ ಕುರುಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಧಾರ್ಮಿಕನಾದ ರಾಜನು ಹೇಗೆ ತಾನೇ ಧರ್ಮದಲ್ಲಿಯೇ ನೆಲೆಸಿ ನಡೆದುಕೊಳ್ಳಬಹುದು? ಕುರುಶ್ರೇಷ್ಠ! ಪಿತಾಮಹ! ನಿನ್ನನ್ನು ಕೇಳುತ್ತಿರುವ ನನಗೆ ಹೇಳು.”

12093002 ಭೀಷ್ಮ ಉವಾಚ|

12093002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12093002c ಗೀತಂ ದೃಷ್ಟಾರ್ಥತತ್ತ್ವೇನ ವಾಮದೇವೇನ ಧೀಮತಾ||

ಭೀಷ್ಮನು ಹೇಳಿದನು: “ಇದರ ಕುರಿತು ಪುರಾತನ ಇತಿಹಾಸವಾದ ಧೀಮತ ವಾಮದೇವನು ಅರ್ಥತ್ತತ್ತ್ವಗಳನ್ನು ತೋರಿಸಿದ ಗೀತೆಯನ್ನು ಉದಾಹರಿಸುತ್ತಾರೆ.

12093003a ರಾಜಾ ವಸುಮನಾ ನಾಮ ಕೌಸಲ್ಯೋ ಬಲವಾನ್ ಶುಚಿಃ|

12093003c ಮಹರ್ಷಿಂ ಪರಿಪಪ್ರಚ್ಚ ವಾಮದೇವಂ ಯಶಸ್ವಿನಮ್||

ಬಲವಂತನೂ ಶುಚಿಯೂ ಆಗಿದ್ದ ವಸುಮನಾ ಎಂಬ ಹೆಸರಿನ ಕೋಸಲದ ರಾಜನು ಯಶಸ್ವಿ ಮಹರ್ಷಿ ವಾಮದೇವನನ್ನು ಪ್ರಶ್ನಿಸಿದನು:

12093004a ಧರ್ಮಾರ್ಥಸಹಿತಂ ವಾಕ್ಯಂ ಭಗವನ್ನನುಶಾಧಿ ಮಾಮ್|

12093004c ಯೇನ ವೃತ್ತೇನ ವೈ ತಿಷ್ಠನ್ನ ಚ್ಯವೇಯಂ ಸ್ವಧರ್ಮತಃ||

“ಭಗವನ್! ಧಾರ್ಮಾರ್ಥ ಸಹಿತ ಮಾತುಗಳಿಂದ ನನಗೆ ಆದೇಶವನ್ನು ನೀಡಿ. ಯಾವ ವರ್ತನೆಯಿಂದ ನಡೆದುಕೊಂಡರೆ ನಾನು ಸ್ವಧರ್ಮದಿಂದ ಚ್ಯುತನಾಗದೇ ಸ್ಥಿರನಾಗಿರಬಹುದು?”

12093005a ತಮಬ್ರವೀದ್ವಾಮದೇವಸ್ತಪಸ್ವೀ ಜಪತಾಂ ವರಃ|

12093005c ಹೇಮವರ್ಣಮುಪಾಸೀನಂ ಯಯಾತಿಮಿವ ನಾಹುಷಮ್||

ಆಗ ಜಪಿಗಳಲ್ಲಿ ಶ್ರೇಷ್ಠ ತಪಸ್ವೀ ವಾಮದೇವನು ನಾಹುಷ ಯಯಾತಿಯಂತೆ ಕುಳಿತಿದ್ದ ಹೇಮವರ್ಣದ ವಸುಮನನಿಗೆ ಹೇಳಿದನು:

12093006a ಧರ್ಮಮೇವಾನುವರ್ತಸ್ವ ನ ಧರ್ಮಾದ್ವಿದ್ಯತೇ ಪರಮ್|

12093006c ಧರ್ಮೇ ಸ್ಥಿತಾ ಹಿ ರಾಜಾನೋ ಜಯಂತಿ ಪೃಥಿವೀಮಿಮಾಮ್||

“ಧರ್ಮವನ್ನೇ ಅನುಸರಿಸು. ಧರ್ಮಕ್ಕಿಂತಲೂ ಶ್ರೇಷ್ಠವಾದುದು ಇಲ್ಲ. ಧರ್ಮದಲ್ಲಿ ಸ್ಥಿತನಾದ ರಾಜನು ಈ ಪೃಥ್ವಿಯನ್ನು ಜಯಿಸುತ್ತಾನೆ.

12093007a ಅರ್ಥಸಿದ್ಧೇಃ ಪರಂ ಧರ್ಮಂ ಮನ್ಯತೇ ಯೋ ಮಹೀಪತಿಃ|

12093007c ಋತಾಂ ಚ ಕುರುತೇ ಬುದ್ಧಿಂ ಸ ಧರ್ಮೇಣ ವಿರೋಚತೇ||

ಅರ್ಥಸಿದ್ಧಿಗಿಂತಲೂ ಧರ್ಮಸಿದ್ಧಿಯೇ ಹಿರಿದಾದುದೆಂದು ಭಾವಿಸುವ ಮತ್ತು ಋತನಾಗಿರುವ ಮನಸ್ಸುಮಾಡಿರುವವನು ಧರ್ಮದಿಂದ ಪ್ರಕಾಶಿಸುತ್ತಾನೆ.

12093008a ಅಧರ್ಮದರ್ಶೀ ಯೋ ರಾಜಾ ಬಲಾದೇವ ಪ್ರವರ್ತತೇ|

12093008c ಕ್ಷಿಪ್ರಮೇವಾಪಯಾತೋಽಸ್ಮಾದುಭೌ ಪ್ರಥಮಮಧ್ಯಮೌ||

ಧರ್ಮವನ್ನು ಗಮನಿಸದೇ ಯಾವ ರಾಜನು ಕೇವಲ ಬಲವನ್ನುಪಯೋಗಿಸಿ ನಡೆದುಕೊಳ್ಳುತ್ತಾನೋ ಅವನನ್ನು ಮೊದಲನೆಯ ಧರ್ಮ ಮತ್ತು ಮಧ್ಯಮ ಅರ್ಥ ಇವೆರಡೂ ತೊರೆಯುತ್ತವೆ.

12093009a ಅಸತ್ಪಾಪಿಷ್ಠಸಚಿವೋ ವಧ್ಯೋ ಲೋಕಸ್ಯ ಧರ್ಮಹಾ|

12093009c ಸಹೈವ ಪರಿವಾರೇಣ ಕ್ಷಿಪ್ರಮೇವಾವಸೀದತಿ||

ಅಸತ್ಪುರುಷರೂ ಪಾಪಿಷ್ಠರೂ ಆದ ಸಚಿವರ ಸಹಾಯದಿಂದ ಧರ್ಮವನ್ನು ನಾಶಗೊಳಿಸುವ ರಾಜನು ಲೋಕದಲ್ಲಿ ವಧೆಗೆ ಅರ್ಹನಾಗುತ್ತಾನೆ. ಪರಿವಾರಸಮೇತನಾಗಿ ಬಹಳ ಬೇಗ ವಿನಾಶವನ್ನು ಹೊಂದುತ್ತಾನೆ.

12093010a ಅರ್ಥಾನಾಮನನುಷ್ಠಾತಾ ಕಾಮಚಾರೀ ವಿಕತ್ಥನಃ|

12093010c ಅಪಿ ಸರ್ವಾಂ ಮಹೀಂ ಲಬ್ಧ್ವಾ ಕ್ಷಿಪ್ರಮೇವ ವಿನಶ್ಯತಿ||

ಅರ್ಥಸಿದ್ಧಿಗೆ ಪ್ರಯತ್ನಿಸದ, ಸ್ವೇಚ್ಛಾಚಾರಿಯಾದ ಮತ್ತು ಆತ್ಮಪ್ರಶಂಸೆಯನ್ನೇ ಮಾಡಿಕೊಳ್ಳುವ ರಾಜನು ಮಹಿಯಲ್ಲವನ್ನು ಪಡೆದಿದ್ದರೂ ಬೇಗನೇ ನಾಶಹೊಂದುತ್ತಾನೆ.

12093011a ಅಥಾದದಾನಃ ಕಲ್ಯಾಣಮನಸೂಯುರ್ಜಿತೇಂದ್ರಿಯಃ|

12093011c ವರ್ಧತೇ ಮತಿಮಾನ್ರಾಜಾ ಸ್ರೋತೋಭಿರಿವ ಸಾಗರಃ||

ಕಲ್ಯಾಣವಾದುದ್ದನ್ನು ಗ್ರಹಿಸುವ ಮತ್ತು ಮಾಡುವ, ಅನಸೂಯನೂ ಜಿತೇಂದ್ರಿಯನೂ ಆದ ಮತಿಮಂತ ರಾಜನು ನದಿಗಳಿಂದ ಸಾಗರವು ಹೇಗೋ ಹಾಗೆ ಅಭಿವೃದ್ಧಿ ಹೊಂದುತ್ತಾನೆ.

12093012a ನ ಪೂರ್ಣೋಽಸ್ಮೀತಿ ಮನ್ಯೇತ ಧರ್ಮತಃ ಕಾಮತೋಽರ್ಥತಃ|

12093012c ಬುದ್ಧಿತೋ ಮಿತ್ರತಶ್ಚಾಪಿ ಸತತಂ ವಸುಧಾಧಿಪಃ||

ವಸುಧಾಧಿಪನು ಯಾವಾಗಲೂ ಧರ್ಮದ ವಿಷಯದಲ್ಲಿ, ಕಾಮದ ವಿಷಯದಲ್ಲಿ, ಅರ್ಥದ ವಿಷಯದಲ್ಲಿ, ಬುದ್ಧಿಯ ವಿಷಯದಲ್ಲಿ ಮತ್ತು ಮಿತ್ರರ ವಿಷಯದಲ್ಲಿ ಸಂಪನ್ನನಾಗಿದ್ದರೂ ಪೂರ್ಣನಾಗಿರುವೆನೆಂದು ಭಾವಿಸಬಾರದು.

12093013a ಏತೇಷ್ವೇವ ಹಿ ಸರ್ವೇಷು ಲೋಕಯಾತ್ರಾ ಪ್ರತಿಷ್ಠಿತಾ|

12093013c ಏತಾನಿ ಶೃಣ್ವಽಲ್ಲಭತೇ ಯಶಃ ಕೀರ್ತಿಂ ಶ್ರಿಯಃ ಪ್ರಜಾಃ||

ರಾಜನ ಲೋಕಯಾತ್ರೆಯು ಇವೆಲ್ಲವುಗಳನ್ನೇ ಅವಂಬಿಸಿದೆ. ಇವುಗಳನ್ನು ಕೇಳಿದವನಿಗೆ ಯಶಸ್ಸು, ಕೀರ್ತಿ, ಸಂಪತ್ತು ಮತ್ತು ಪ್ರಜೆಗಳು ದೊರಕುತ್ತಾರೆ.

12093014a ಏವಂ ಯೋ ಧರ್ಮಸಂರಂಭೀ ಧರ್ಮಾರ್ಥಪರಿಚಿಂತಕಃ|

12093014c ಅರ್ಥಾನ್ಸಮೀಕ್ಷ್ಯಾರಭತೇ ಸ ಧ್ರುವಂ ಮಹದಶ್ನುತೇ||

ಹೀಗೆ ಧರ್ಮದಲ್ಲಿ ಆಸಕ್ತಿಯುಳ್ಳವನಾಗಿ ಧರ್ಮಾರ್ಥ ಪರಿಚಿಂತಕನಾಗಿ ಅರ್ಥಗಳನ್ನು ಸಮೀಕ್ಷಿಸಿ ಸೇವಿಸುವ ರಾಜನು ನಿಶ್ಚಯವಾಗಿಯೂ ಮಹಾಫಲವನ್ನು ಪಡೆದುಕೊಳ್ಳುತ್ತಾನೆ.

12093015a ಅದಾತಾ ಹ್ಯನತಿಸ್ನೇಹೋ ದಂಡೇನಾವರ್ತಯನ್ ಪ್ರಜಾಃ|

12093015c ಸಾಹಸಪ್ರಕೃತೀ ರಾಜಾ ಕ್ಷಿಪ್ರಮೇವ ವಿನಶ್ಯತಿ||

ದುಃಸಾಹಸಿಯಾದ, ದಾನಶೀಲನಲ್ಲದ, ಸ್ನೇಹಶೂನ್ಯನಾದ ಮತ್ತು ಪ್ರಜೆಗಳನ್ನು ದಂಡಿಸುವ ರಾಜನು ಕ್ಷಿಪ್ರವಾಗಿ ನಾಶಹೊಂದುತ್ತಾನೆ.

12093016a ಅಥ ಪಾಪಂ ಕೃತಂ ಬುದ್ಧ್ಯಾ ನ ಚ ಪಶ್ಯತ್ಯಬುದ್ಧಿಮಾನ್|

12093016c ಅಕೀರ್ತ್ಯಾಪಿ ಸಮಾಯುಕ್ತೋ ಮೃತೋ ನರಕಮಶ್ನುತೇ||

ತಾನು ಪಾಪ ಮಾಡಿದ್ದೇನೆಂದು ತಿಳಿದೂ ಪಶ್ಚಾತ್ತಾಪ ಪಡದಿರುವ ಮೂಢನು ಈ ಲೋಕದಲ್ಲಿ ಅಕೀರ್ತಿಯನ್ನು ಪಡೆಯುವುದಲ್ಲದೇ ಮೃತನಾದ ನಂತರ ನರಕಕ್ಕೆ ಹೋಗುತ್ತಾನೆ.

12093017a ಅಥ ಮಾನಯಿತುರ್ದಾತುಃ ಶುಕ್ಲಸ್ಯ ರಸವೇದಿನಃ[1]|

12093017c ವ್ಯಸನಂ ಸ್ವಮಿವೋತ್ಪನ್ನಂ ವಿಜಿಘಾಂಸಂತಿ ಮಾನವಾಃ||

ಎಲ್ಲರನ್ನು ಗೌರವಿಸುವ, ದಾನಶೀಲನಾದ ಮತ್ತು ಸತ್ತ್ವಗುಣಾನ್ವಿತ ರಾಜನಿಗೆ ವ್ಯಸನವು ಬಂದೊದಗಿದಾಗ ಅವನ ಪ್ರಜೆಗಳು ತಮಗೇ ಆ ವ್ಯಸನವು ಬಂದೊದಗಿದೆಯೋ ಎಂಬಂತೆ ಒಟ್ಟಾಗಿ ನಿವಾರಿಸುತ್ತಾರೆ.

12093018a ಯಸ್ಯ ನಾಸ್ತಿ ಗುರುರ್ಧರ್ಮೇ ನ ಚಾನ್ಯಾನನುಪೃಚ್ಚತಿ|

12093018c ಸುಖತಂತ್ರೋಽರ್ಥಲಾಭೇಷು ನ ಚಿರಂ ಮಹದಶ್ನುತೇ||

ಯಾರಿಗೆ ಧರ್ಮವನ್ನು ತಿಳಿಸುವ ಗುರುವಿಲ್ಲವೋ, ಯಾರು ಧರ್ಮದ ವಿಷಯದಲ್ಲಿ ಇತರರನ್ನು ಕೇಳಿ ತಿಳಿದುಕೊಳ್ಳುವುದಿಲ್ಲವೋ ಮತ್ತು ಯಾರು ಅರ್ಥಲಾಭವಾದಾಗ ಸುಖಪಡುವುದರಲ್ಲಿಯೇ ತೊಡಗಿರುವನೋ ಅವನು ಬಹುಕಾಲ ಸುಖಿಯಾಗಿರಲಾರನು.

12093019a ಗುರುಪ್ರಧಾನೋ ಧರ್ಮೇಷು ಸ್ವಯಮರ್ಥಾನ್ವವೇಕ್ಷಿತಾ|

12093019c ಧರ್ಮಪ್ರಧಾನೋ ಲೋಕೇಷು ಸುಚಿರಂ ಮಹದಶ್ನುತೇ||

ಧರ್ಮದ ವಿಷಯದಲ್ಲಿ ಗುರುವನ್ನೇ ಪ್ರಧಾನನನ್ನಾಗಿರಿಸಿಕೊಂಡಿರುವ, ಅರ್ಥದ ವಿಷಯದಲ್ಲಿ ತಾನೇ ಧರ್ಮವನ್ನು ಪ್ರಧಾನವಾಗಿರಿಸಿಕೊಳ್ಳುವ ರಾಜನು ಲೋಕದಲ್ಲಿ ಬಹುಕಾಲ ಸುಖದಿಂದಿರುತ್ತಾನೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಾಮದೇವಗೀತಾಸು ತ್ರಿನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಾಮದೇವಗೀತ ಎನ್ನುವ ತೊಂಭತ್ಮೂರನೇ ಅಧ್ಯಾಯವು.

Orange Flowers Against White Background Photograph by Panoramic Images

[1] ಅಥ ಮಾನಯಿತುರ್ದಾಮ್ನಃ ಶ್ಲಕ್ಷ್ಣಸ್ಯ ವಶವರ್ತಿನಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.