Shanti Parva: Chapter 350

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೫೦

12350001 ಬ್ರಾಹ್ಮಣ ಉವಾಚ|

12350001a ವಿವಸ್ವತೋ ಗಚ್ಚತಿ ಪರ್ಯಯೇಣ

ವೋಢುಂ ಭವಾಂಸ್ತಂ ರಥಮೇಕಚಕ್ರಮ್|

12350001c ಆಶ್ಚರ್ಯಭೂತಂ ಯದಿ ತತ್ರ ಕಿಂ ಚಿದ್

ದೃಷ್ಟಂ ತ್ವಯಾ ಶಂಸಿತುಮರ್ಹಸಿ ತ್ವಮ್||

ಬ್ರಾಹ್ಮಣನು ಹೇಳಿದನು: “ನೀನು ವಿವಸ್ವತನ ಏಕಚಕ್ರರಥವನ್ನು ಹೊರಲು ಸರದಿಯ ಪ್ರಕಾರ ಹೋಗುತ್ತೀಯೆ. ಅಲ್ಲೇನಾದರೂ ನೀನು ಯಾವುದಾದರೂ ಆಶ್ಚಯಕರ ಸಂಗತಿಯನ್ನು ನೋಡಿದ್ದಾದರೆ ಅದನ್ನು ನನಗೆ ಹೇಳಬೇಕು.”

12350002 ನಾಗ ಉವಾಚ|

[1]12350002a ಯಸ್ಯ ರಶ್ಮಿಸಹಸ್ರೇಷು ಶಾಖಾಸ್ವಿವ ವಿಹಂಗಮಾಃ|

12350002c ವಸಂತ್ಯಾಶ್ರಿತ್ಯ ಮುನಯಃ ಸಂಸಿದ್ಧಾ ದೈವತೈಃ ಸಹ||

ನಾಗನು ಹೇಳಿದನು: “ಪಕ್ಷಿಗಳು ವೃಕ್ಷಶಾಖೆಗಳಲ್ಲಿ ಹೇಗೋ ಹಾಗೆ ಸೂರ್ಯನ ಸಹಸ್ರಾರು ರಶ್ಮಿಗಳಲ್ಲಿ ದೇವತೆಗಳೊಂದಿಗೆ ಸಂಸಿದ್ಧ ಮುನಿಗಳು ಆಶ್ರಯಪಡೆದು ವಾಸಿಸಿದ್ದಾರೆ.

12350003a ಯತೋ ವಾಯುರ್ವಿನಿಃಸೃತ್ಯ ಸೂರ್ಯರಶ್ಮ್ಯಾಶ್ರಿತೋ ಮಹಾನ್|

12350003c ವಿಜೃಂಭತ್ಯಂಬರೇ ವಿಪ್ರ ಕಿಮಾಶ್ಚರ್ಯತರಂ ತತಃ||

ವಿಪ್ರ! ಸೂರ್ಯನನ್ನು ಆಶ್ರಯಿಸಿರುವ ಮಹಾವಾಯುವು ಅವನ ರಶ್ಮಿಗಳಿಂದ ಹೊರಬಂದು ಅಂಬರದಲ್ಲಿ ವಿಜೃಂಭಿಸುತ್ತಾನೆ ಎಂದರೆ ಅದಕ್ಕಿಂತಲೂ ಹೆಚ್ಚಿನ ಆಶ್ಚರ್ಯವಾದುದಾದರೂ ಏನಿದೆ?

[2]12350004a ಶುಕ್ರೋ ನಾಮಾಸಿತಃ ಪಾದೋ ಯಸ್ಯ ವಾರಿಧರೋಽಂಬರೇ|

12350004c ತೋಯಂ ಸೃಜತಿ ವರ್ಷಾಸು ಕಿಮಾಶ್ಚರ್ಯಮತಃ ಪರಮ್||

ವರ್ಷಋತುವಿನಲ್ಲಿ ನೀರನ್ನು ಸೃಷ್ಟಿಸುವ ಶುಕ್ರ ಎಂಬ ಹೆಸರಿನ ನೀರನ್ನು ಹೊತ್ತ ಮೋಡವು ಅವನ ಪಾದವೇ ಆಗಿದೆ. ಅದಕ್ಕಿಂದಲೂ ಹೆಚ್ಚಿನ ಆಶ್ಚರ್ಯವು ಏನಿದೆ?

12350005a ಯೋಽಷ್ಟಮಾಸಾಂಸ್ತು ಶುಚಿನಾ ಕಿರಣೇನೋಜ್ಝಿತಂ ಪಯಃ|

12350005c ಪರ್ಯಾದತ್ತೇ ಪುನಃ ಕಾಲೇ ಕಿಮಾಶ್ಚರ್ಯಮತಃ ಪರಮ್||

ಪುನಃ ಎಂಟು ತಿಂಗಳು ವಾರ್ಷಾಕಾಲದ ನೀರನ್ನು ಶುದ್ಧ ಕಿರಣಗಳಿಂದ ಸೂರ್ಯನು ಸಂಗ್ರಹಿಸುತ್ತಾನೆ. ಇದಕ್ಕಿಂತಲೂ ಆಶ್ಚರ್ಯವಾದುದು ಬೇರೆ ಏನಿದೆ?

12350006a ಯಸ್ಯ ತೇಜೋವಿಶೇಷೇಷು ನಿತ್ಯಮಾತ್ಮಾ ಪ್ರತಿಷ್ಠಿತಃ|

12350006c ಯತೋ ಬೀಜಂ ಮಹೀ ಚೇಯಂ ಧಾರ್ಯತೇ ಸಚರಾಚರಮ್||

12350007a ಯತ್ರ ದೇವೋ ಮಹಾಬಾಹುಃ ಶಾಶ್ವತಃ ಪರಮೋಽಕ್ಷರಃ|

12350007c ಅನಾದಿನಿಧನೋ ವಿಪ್ರ ಕಿಮಾಶ್ಚರ್ಯಮತಃ ಪರಮ್||

ಸೂರ್ಯನ ವಿಶೇಷ ತೇಜಸ್ಸಿನಲ್ಲಿ ನಿತ್ಯವೂ ಆತ್ಮನು ಪ್ರತಿಷ್ಠಿತನಾಗಿರುವನು. ಅವನಿಂದಲೇ ಬೀಜಗಳಾಗುತ್ತವೆ. ಅವನೇ ಸಚರಾಚರ ಮಹಿಯನ್ನು ಧರಿಸಿದ್ದಾನೆ. ವಿಪ್ರ! ಅವನೇ ದೇವ. ಮಹಾಬಾಹು. ಶಾಶ್ವತ, ಪರಮ ಅಕ್ಷರ ಮತ್ತು ಅನಾದಿನಿಧನ. ಇದಕ್ಕಿಂತಲೂ ಆಶ್ಚರ್ಯಕರವಾದುದು ಬೇರೆ ಏನಿದೆ?

12350008a ಆಶ್ಚರ್ಯಾಣಾಮಿವಾಶ್ಚರ್ಯಮಿದಮೇಕಂ ತು ಮೇ ಶೃಣು|

12350008c ವಿಮಲೇ ಯನ್ಮಯಾ ದೃಷ್ಟಮಂಬರೇ ಸೂರ್ಯಸಂಶ್ರಯಾತ್||

ಸೂರ್ಯನ ಆಶ್ರಯವನ್ನು ಪಡೆದಿರುವಾಗ ನಿರ್ಮಲ ಅಂಬರದಲ್ಲಿ ಈ ಎಲ್ಲ ಆಶ್ಚರ್ಯಗಳಲ್ಲಿಯೇ ಅತ್ಯಂತ ಆಶ್ಚರ್ಯಕರ ವಿಷಯವೊಂದನ್ನು ನಾನು ನೋಡಿದೆ. ಅದರ ಕುರಿತು ಕೇಳು.

12350009a ಪುರಾ ಮಧ್ಯಾಹ್ನಸಮಯೇ ಲೋಕಾಂಸ್ತಪತಿ ಭಾಸ್ಕರೇ|

12350009c ಪ್ರತ್ಯಾದಿತ್ಯಪ್ರತೀಕಾಶಃ ಸರ್ವತಃ ಪ್ರತ್ಯದೃಶ್ಯತ||

ಹಿಂದೊಮ್ಮೆ ಮಧ್ಯಾಹ್ನದ ಸಮಯದಲ್ಲಿ ಭಾಸ್ಕರನು ಲೋಕಗಳನ್ನು ಸುಡುತ್ತಿದ್ದಾಗ ಅವನಂತೆಯೇ ಪ್ರಕಾಶಿಸುತ್ತಿದ್ದ ಪುರುಷನು ಎಲ್ಲ ಕಡೆಗಳಿಂದಲೂ ಕಾಣಿಸತೊಡಗಿದನು.

12350010a ಸ ಲೋಕಾಂಸ್ತೇಜಸಾ ಸರ್ವಾನ್ಸ್ವಭಾಸಾ ನಿರ್ವಿಭಾಸಯನ್|

12350010c ಆದಿತ್ಯಾಭಿಮುಖೋಽಭ್ಯೇತಿ ಗಗನಂ ಪಾಟಯನ್ನಿವ||

ತನ್ನ ತೇಜಸ್ಸಿನಿಂದ ಎಲ್ಲ ಲೋಕಗಳನ್ನೂ ಪ್ರಕಾಶಗೊಳಿಸುತ್ತಾ ಅವನು ಆಕಾಶವನ್ನೇ ಸೀಳಿ ಬಿಡುವನೋ ಎನ್ನುವಂತೆ ವೇಗವಾಗಿ ಸೂರ್ಯನಿಗೆ ಅಭಿಮುಖನಾಗಿಯೇ ಬಂದನು.

12350011a ಹುತಾಹುತಿರಿವ ಜ್ಯೋತಿರ್ವ್ಯಾಪ್ಯ ತೇಜೋಮರೀಚಿಭಿಃ|

12350011c ಅನಿರ್ದೇಶ್ಯೇನ ರೂಪೇಣ ದ್ವಿತೀಯ ಇವ ಭಾಸ್ಕರಃ||

ಆಹುತಿಯಿಂದ ಪ್ರಜ್ವಲಿಸುವ ಅಗ್ನಿಯಂತೆ ತೇಜೋಮಯ ಕಿರಣಗಳಿಂದ ಜ್ಯೋತಿರ್ಮಂಡಲವನ್ನೇ ವ್ಯಾಪಿಸಿ ಅನಿರ್ವಚನೀಯ ರೂಪದಿಂದ ಎರಡನೇ ಭಾಸ್ಕರನಂತೆ ಅವನು ಹೊಳೆಯುತ್ತಿದ್ದನು.

12350012a ತಸ್ಯಾಭಿಗಮನಪ್ರಾಪ್ತೌ ಹಸ್ತೋ ದತ್ತೋ ವಿವಸ್ವತಾ|

12350012c ತೇನಾಪಿ ದಕ್ಷಿಣೋ ಹಸ್ತೋ ದತ್ತಃ ಪ್ರತ್ಯರ್ಚನಾರ್ಥಿನಾ||

ಅವನು ತನ್ನ ಸಮೀಪಕ್ಕೆ ಬರಲು ವಿವಸ್ವತನು ತನ್ನ ಎರಡು ಕೈಗಳನ್ನು ಮುಂದಕ್ಕೆ ಚಾಚಿ ಅವನನ್ನು ಸ್ವಾಗತಿಸಿದನು. ಅವನೂ ಕೂಡ ಸೂರ್ಯನನ್ನು ಪ್ರತಿಸಮ್ಮಾನಿಸುವ ಸಲುವಾಗಿ ತನ್ನ ಬಲಗೈಯನ್ನು ಮುಂದಕ್ಕೆ ಚಾಚಿದನು.

12350013a ತತೋ ಭಿತ್ತ್ವೈವ ಗಗನಂ ಪ್ರವಿಷ್ಟೋ ರವಿಮಂಡಲಮ್|

12350013c ಏಕೀಭೂತಂ ಚ ತತ್ತೇಜಃ ಕ್ಷಣೇನಾದಿತ್ಯತಾಂ ಗತಮ್||

ಆಗ ಗಗನವನ್ನೇ ಭೇದಿಸಿ ಅವನು ರವಿಮಂಡಲವನ್ನು ಪ್ರವೇಶಿಸಿದನು. ಕ್ಷಣದಲ್ಲಿಯೇ ಆ ತೇಜಸ್ಸು ಆದಿತ್ಯನನ್ನು ಸೇರಿ ಏಕೀಭೂತವಾಯಿತು.

12350014a ತತ್ರ ನಃ ಸಂಶಯೋ ಜಾತಸ್ತಯೋಸ್ತೇಜಃಸಮಾಗಮೇ|

12350014c ಅನಯೋಃ ಕೋ ಭವೇತ್ಸೂರ್ಯೋ ರಥಸ್ಥೋ ಯೋಽಯಮಾಗತಃ||

ಅವರ ತೇಜಸ್ಸುಗಳು ಹಾಗೆ ಒಂದಾಗಲು ನಮಗೆ ಸಂಶಯವುಂಟಾಯಿತು. ನಿಜವಾದ ಸೂರ್ಯನು ಯಾರು? ರಥದಲ್ಲಿ ಕುಳಿತಿರುವವನೇ ಅಥವಾ ಅವನಿಗೆ ಅಭಿಮುಖನಾಗಿ ಬಂದವನೇ?

12350015a ತೇ ವಯಂ ಜಾತಸಂದೇಹಾಃ ಪರ್ಯಪೃಚ್ಚಾಮಹೇ ರವಿಮ್|

12350015c ಕ ಏಷ ದಿವಮಾಕ್ರಮ್ಯ ಗತಃ ಸೂರ್ಯ ಇವಾಪರಃ||

ಹಾಗೆ ಸಂದೇಹಗ್ರಸ್ತರಾದ ನಾವು ರವಿಯನ್ನು ಕೇಳಿದೆವು: “ಇನ್ನೊಬ್ಬ ಸೂರ್ಯನಂತೆಯೇ ದಿವವನ್ನು ಆಕ್ರಮಿಸಿ ಬಂದಿದ್ದವನು ಯಾರು?”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಪಂಚಾಶದಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾಐವತ್ತನೇ ಅಧ್ಯಾಯವು.

A Colourful Bird on White Background - Download Free Vectors, Clipart  Graphics & Vector Art

[1] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕಶ್ಲೋಕವಿದೆ: ಆಶ್ಚರ್ಯಾಣಾಮನೇಕಾನಾಂ ಪ್ರತಿಷ್ಠಾ ಭಗವಾನ್ರವಿಃ| ಯತೋ ಭೂತಾಃ ಪ್ರವರ್ತಂತೇ ಸರ್ವೇ ತ್ರೈಲೋಕ್ಯಸಮ್ಮತಾಃ||

[2] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಎರಡು ಅಧಿಕಶ್ಲೋಕಗಳಿವೆ: ವಿಭಜ್ಯ ತಂ ತು ವಿಪ್ರರ್ಷೇ ಪ್ರಜಾನಾಂ ಹಿತಕಾಮ್ಯಯಾ| ತೋಯಂ ಸೃಜತಿ ವರ್ಷಾಸು ಕಿಮಾಶ್ಚರ್ಯಮತಃ ಪರಮ್|| ಯಸ್ಯ ಮಂಡಲಮಧ್ಯಸ್ಥೋ ಮಹಾತ್ಮಾ ಪರಮತ್ವಿಷಾ| ದೀಪ್ತಃ ಸಮೀಕ್ಷತೇ ಲೋಕಾನ್ಕಿಮಾಶ್ಚರ್ಯಮತಃ ಪರಮ್||

Comments are closed.