ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೪೮
12348001 ನಾಗ ಉವಾಚ|
12348001a ಅಥ ಬ್ರಾಹ್ಮಣರೂಪೇಣ ಕಂ ತಂ ಸಮನುಪಶ್ಯಸಿ|
12348001c ಮಾನುಷಂ ಕೇವಲಂ ವಿಪ್ರಂ ದೇವಂ ವಾಥ ಶುಚಿಸ್ಮಿತೇ||
ನಾಗನು ಹೇಳಿದನು: “ಶುಚಿಸ್ಮಿತೇ! ಬ್ರಾಹ್ಮಣರೂಪದಲ್ಲಿದ್ದ ಯಾರನ್ನು ನೀನು ನೋಡಿದೆ? ಆ ವಿಪ್ರನು ಕೇವಲ ಮನುಷ್ಯನೇ ಅಥವಾ ದೇವತೆಯೇ?
12348002a ಕೋ ಹಿ ಮಾಂ ಮಾನುಷಃ ಶಕ್ತೋ ದ್ರಷ್ಟುಕಾಮೋ ಯಶಸ್ವಿನಿ|
12348002c ಸಂದರ್ಶನರುಚಿರ್ವಾಕ್ಯಮಾಜ್ಞಾಪೂರ್ವಂ ವದಿಷ್ಯತಿ||
ಯಶಸ್ವಿನೀ! ಮನುಷ್ಯರಲ್ಲಿ ಯಾರು ತಾನೇ ನನ್ನನ್ನು ನೋಡಲು ಶಕ್ತನಾಗಿದ್ದಾನೆ? ಸಂದರ್ಶನವನ್ನು ಅಪೇಕ್ಷಿಸಿದ್ದರೂ ಯಾರು ತಾನೇ ತನ್ನಲ್ಲಿಗೇ ಬಂದು ದರ್ಶನವನ್ನೀಯಬೇಕೆಂದು ಆಜ್ಞಾಪೂರ್ವಕವಾಗಿ ಹೇಳಬಲ್ಲನು?
12348003a ಸುರಾಸುರಗಣಾನಾಂ ಚ ದೇವರ್ಷೀಣಾಂ ಚ ಭಾಮಿನಿ|
12348003c ನನು ನಾಗಾ ಮಹಾವೀರ್ಯಾಃ ಸೌರಸೇಯಾಸ್ತರಸ್ವಿನಃ||
12348004a ವಂದನೀಯಾಶ್ಚ ವರದಾ ವಯಮಪ್ಯನುಯಾಯಿನಃ|
12348004c ಮನುಷ್ಯಾಣಾಂ ವಿಶೇಷೇಣ ಧನಾಧ್ಯಕ್ಷಾ ಇತಿ ಶ್ರುತಿಃ[1]||
ಭಾಮಿನಿ! ಸುರಸೆಯ ವಂಶಜರಾದ ಮತ್ತು ಅತ್ಯಂತವೇಗಶಾಲಿಗಳಾದ ಮಹಾವೀರ್ಯ ನಾಗಗಳು ನಾವು ಸುರಾಸುರಗಣಗಳಿಗೂ ಮತ್ತು ದೇವರ್ಷಿಗಳಿಗೂ ಅಧಿಕರಲ್ಲವೇ? ನಾವು ವಂದನೀಯರು ಮತ್ತು ವರಗಳನ್ನೂ ನೀಡುವವರು. ವಿಶೇಷವಾಗಿ ನಮ್ಮನ್ನು ಅನುಸರಿಸುವ ಮನುಷ್ಯರಿಗೆ ನಾವು ಧನಾಧ್ಯಕ್ಷರೆಂದು ವಿಶ್ರುತರಾಗಿದ್ದೇವೆ.”
12348005 ನಾಗಭಾರ್ಯೋವಾಚ|
12348005a ಆರ್ಜವೇನಾಭಿಜಾನಾಮಿ ನಾಸೌ ದೇವೋಽನಿಲಾಶನ|
12348005c ಏಕಂ ತ್ವಸ್ಯ ವಿಜಾನಾಮಿ ಭಕ್ತಿಮಾನತಿರೋಷಣಃ||
ನಾಗಭಾರ್ಯೆಯು ಹೇಳಿದಳು: “ಅತಿರೋಷಣ! ಅನಿಲಾಶನ! ಅವನಲ್ಲಿರುವ ಸರಳತೆಯಿಂದ ಅವನು ದೇವನಲ್ಲವೆಂದು ತಿಳಿದಿದ್ದೇನೆ. ಅವನು ನಿನ್ನ ಅತ್ಯಂತ ಭಕ್ತನು ಎಂಬ ಒಂದು ವಿಷಯವನ್ನು ತಿಳಿದುಕೊಂಡಿದ್ದೇನೆ.
12348006a ಸ ಹಿ ಕಾರ್ಯಾಂತರಾಕಾಂಕ್ಷೀ ಜಲೇಪ್ಸುಃ ಸ್ತೋಕಕೋ ಯಥಾ|
12348006c ವರ್ಷಂ ವರ್ಷಪ್ರಿಯಃ ಪಕ್ಷೀ ದರ್ಶನಂ ತವ ಕಾಂಕ್ಷತಿ||
ಮಳೆಯನ್ನು ಪ್ರೀತಿಸುವ ಪಕ್ಷಿಯು ಮಳೆಗಾಗಿಯೇ ಕಾಯುವಂತೆ ಯಾವುದೋ ಕಾರ್ಯಸಿದ್ಧಿಗಾಗಿ ಅವನು ನಿನ್ನ ದರ್ಶನವನ್ನೇ ಪ್ರತೀಕ್ಷಿಸುತ್ತಿದ್ದಾನೆ.
12348007a ನ ಹಿ ತ್ವಾ ದೈವತಂ ಕಿಂ ಚಿದ್ವಿವಿಗ್ನಂ ಪ್ರತಿಪಾಲಯೇತ್|
12348007c ತುಲ್ಯೇ ಹ್ಯಭಿಜನೇ ಜಾತೋ ನ ಕಶ್ಚಿತ್ಪರ್ಯುಪಾಸತೇ[2]||
ನೀನು ನಿನ್ನ ದೈವತ್ವವನ್ನು ತೊರೆದು ಯಾವ ವಿವಿಗ್ನತೆಯೂ ಇಲ್ಲದೇ ಇದನ್ನು ಪರಿಪಾಲಿಸಬೇಕು. ಉತ್ತಮ ಕುಲದಲ್ಲಿ ಹುಟ್ಟಿದ ನಿನ್ನ ಸಮನಾದವನು ಬೇರೆ ಯಾರೂ ಅತಿಥಿಯನ್ನು ಉಪೇಕ್ಷಿಸುವುದಿಲ್ಲ.
12348008a ತದ್ರೋಷಂ ಸಹಜಂ ತ್ಯಕ್ತ್ವಾ ತ್ವಮೇನಂ ದ್ರಷ್ಟುಮರ್ಹಸಿ|
12348008c ಆಶಾಚೇದೇನ ತಸ್ಯಾದ್ಯ ನಾತ್ಮಾನಂ ದಗ್ಧುಮರ್ಹಸಿ||
ಸಹಜವಾಗಿರುವ ರೋಷವನ್ನು ತ್ಯಜಿಸಿ ನೀನು ಅವನನ್ನು ಕಾಣಬೇಕು. ಇಂದು ಅವನ ಆಸೆಯನ್ನು ಭಂಗಗೊಳಿಸಿ ನಿನ್ನನ್ನು ನೀನು ಸುಟ್ಟುಕೊಳ್ಳಬೇಡ.
12348009a ಆಶಯಾ ತ್ವಭಿಪನ್ನಾನಾಮಕೃತ್ವಾಶ್ರುಪ್ರಮಾರ್ಜನಮ್|
12348009c ರಾಜಾ ವಾ ರಾಜಪುತ್ರೋ ವಾ ಭ್ರೂಣಹತ್ಯೈವ ಯುಜ್ಯತೇ||
ಯಾವುದೋ ಆಸೆಯನ್ನಿಟ್ಟುಕೊಂಡು ಮೊರೆಹೊಕ್ಕವರ ಕಣ್ಣೀರನ್ನೊರೆಸಿ ಸಂತೈಸಿದದಿದ್ದರೆ ಅವನು ರಾಜನೇ ಆಗಿರಲಿ ಅಥವಾ ರಾಜಪುತ್ರನೇ ಆಗಿರಲಿ ಅವನಿಗೆ ಭ್ರೂಣಹತ್ಯಾದೋಷವು ತಗಲುತ್ತದೆ.
12348010a ಮೌನಾಜ್ಜ್ಞಾನಫಲಾವಾಪ್ತಿರ್ದಾನೇನ ಚ ಯಶೋ ಮಹತ್|
12348010c ವಾಗ್ಮಿತ್ವಂ ಸತ್ಯವಾಕ್ಯೇನ ಪರತ್ರ ಚ ಮಹೀಯತೇ||
ಮೌನದಿಂದ ಜ್ಞಾನಪ್ರಾಪ್ತಿಯಾಗುತ್ತದೆ. ದಾನದಿಂದ ಮಹಾ ಯಶಸ್ಸು ದೊರೆಯುತ್ತದೆ. ಸತ್ಯವಾಕ್ಯದಿಂದ ವಾಗ್ಮಿತ್ವವು ದೊರೆಯುತ್ತದೆ ಮತ್ತು ಅವನು ಪರಲೋಕದಲ್ಲಿಯೂ ಖ್ಯಾತನಾಗುತ್ತಾನೆ.
12348011a ಭೂಮಿಪ್ರದಾನೇನ ಗತಿಂ ಲಭತ್ಯಾಶ್ರಮಸಂಮಿತಾಮ್|
12348011c ನಷ್ಟಸ್ಯಾರ್ಥಸ್ಯ[3] ಸಂಪ್ರಾಪ್ತಿಂ ಕೃತ್ವಾ ಫಲಮುಪಾಶ್ನುತೇ||
ಭೂದಾನವನ್ನು ಮಾಡುವುದರಿಂದ ಆಶ್ರಮಸಂಮಿತರ ಗತಿಯು ದೊರೆಯುತ್ತದೆ. ಧನವನ್ನು ಕಳೆದುಕೊಂಡವನಿಗೆ ಧನವನ್ನು ಒದಗಿಸುವುದರಿಂದ ಮಹಾಫಲವನ್ನು ಹೊಂದುತ್ತಾನೆ.
12348012a ಅಭಿಪ್ರೇತಾಮಸಂಕ್ಲಿಷ್ಟಾಂ ಕೃತ್ವಾಕಾಮವತೀಂ ಕ್ರಿಯಾಮ್|
12348012c ನ ಯಾತಿ ನಿರಯಂ ಕಶ್ಚಿದಿತಿ ಧರ್ಮವಿದೋ ವಿದುಃ[4]||
ತನಗಿಷ್ಟವಾದ ಪಾಪದ ಸೋಂಕಿಲ್ಲದ ಅಕಾಮಕಾರ್ಯವನ್ನು ಮಾಡಿದವನು ಯಾರೇ ಆಗಿರಲಿ ನರಕಕ್ಕೆ ಹೋಗುವುದಿಲ್ಲವೆಂದು ಧರ್ಮವಿದುಗಳು ತಿಳಿದಿದ್ದಾರೆ.”
12348013 ನಾಗ ಉವಾಚ|
12348013a ಅಭಿಮಾನೇನ ಮಾನೋ ಮೇ ಜಾತಿದೋಷೇಣ ವೈ ಮಹಾನ್|
12348013c ರೋಷಃ ಸಂಕಲ್ಪಜಃ ಸಾಧ್ವಿ ದಗ್ಧೋ ವಾಚಾಗ್ನಿನಾ ತ್ವಯಾ||
ನಾಗನು ಹೇಳಿದನು: “ಸಾಧ್ವಿ! ನಾನು ಅಭಿಮಾನಿಯೆಂದು ತಿಳಿದುಕೊಳ್ಳಬೇಡ. ಜಾತಿದೋಷದಿಂದಾಗಿ ನನ್ನಲ್ಲಿ ಅತಿಯಾದ ಕೋಪವಿದೆ. ಸಂಕಲ್ಪದಿಂದ ಹುಟ್ಟಿದ ಅದೂ ಕೂಡ ನಿನ್ನ ಮಾತಿನ ಅಗ್ನಿಯಿಂದ ಸುಟ್ಟುಹೋಯಿತು.
12348014a ನ ಚ ರೋಷಾದಹಂ ಸಾಧ್ವಿ ಪಶ್ಯೇಯಮಧಿಕಂ ತಮಃ|
12348014c ಯಸ್ಯ ವಕ್ತವ್ಯತಾಂ ಯಾಂತಿ ವಿಶೇಷೇಣ ಭುಜಂಗಮಾಃ||
ಸಾಧ್ವಿ! ರೋಷಕ್ಕಿಂತಲೂ ಅಧಿಕ ತಮವನ್ನು ನಾನು ನೋಡಿಯೇ ಇಲ್ಲ. ಅದರಲ್ಲಿಯೂ ವಿಶೇಷವಾಗಿ ಭುಜಂಗಮರು ರೋಷಯುಕ್ತರು ಎಂಬ ಅಪವಾದವನ್ನು ಹೊಂದಿದ್ದಾರೆ.
12348015a ದೋಷಸ್ಯ[5] ಹಿ ವಶಂ ಗತ್ವಾ ದಶಗ್ರೀವಃ ಪ್ರತಾಪವಾನ್|
12348015c ತಥಾ ಶಕ್ರಪ್ರತಿಸ್ಪರ್ಧೀ ಹತೋ ರಾಮೇಣ ಸಂಯುಗೇ||
ಇದೇ ದೋಷಕ್ಕೆ ವಶನಾಗಿ ಶಕ್ರನೊಡನೆ ಸ್ಪರ್ಧಿಸುತ್ತಿದ್ದ ಪ್ರತಾಪವಾನ್ ದಶಗ್ರೀವನು ಯುದ್ಧದಲ್ಲಿ ರಾಮನಿಂದ ಹತನಾದನು.
12348016a ಅಂತಃಪುರಗತಂ ವತ್ಸಂ ಶ್ರುತ್ವಾ ರಾಮೇಣ ನಿರ್ಹೃತಮ್|
12348016c ಧರ್ಷಣಾದ್ರೋಷಸಂವಿಗ್ನಾಃ ಕಾರ್ತವೀರ್ಯಸುತಾ ಹತಾಃ||
ಅಂತಃಪುರದಲ್ಲಿರಿಸಿದ್ದ ಕರುವನ್ನು ರಾಮನು ಅಪಹರಿಸಿಕೊಂಡು ಹೋದನೆಂದು ಕೇಳಿ ರೋಷಸಂವಿಂಗ್ನರಾಗಿ ಆಕ್ರಮಣಿಸಿದ ಕಾರ್ತವೀರ್ಯಸುತರು ಹತರಾದರು.
12348017a ಜಾಮದಗ್ನ್ಯೇನ ರಾಮೇಣ ಸಹಸ್ರನಯನೋಪಮಃ|
12348017c ಸಂಯುಗೇ ನಿಹತೋ ರೋಷಾತ್ಕಾರ್ತವೀರ್ಯೋ ಮಹಾಬಲಃ||
ಸಹಸ್ರನಯನ ಇಂದ್ರನಿಗೆ ಸಮನಾಗಿದ್ದ ಜಾಮದಗ್ನಿ ರಾಮನ ರೋಷದಿಂದ ಮಹಾಬಲ ಮಹಾವೀರ್ಯನು ಯುದ್ಧದಲ್ಲಿ ಹತನಾದನು.
12348018a ತದೇಷ ತಪಸಾಂ ಶತ್ರುಃ ಶ್ರೇಯಸಶ್ಚ ನಿಪಾತನಃ|
12348018c ನಿಗೃಹೀತೋ ಮಯಾ ರೋಷಃ ಶ್ರುತ್ವೈವ ವಚನಂ ತವ||
ಅಂತಹ ರೋಷವು ತಪಸ್ಸಿನ ಶತ್ರುವು. ಶ್ರೇಯಸ್ಸಿನಿಂದ ಭ್ರಷ್ಟಗೊಳಿಸುತ್ತದೆ. ನಿನ್ನ ಮಾತನ್ನು ಕೇಳಿ ನಾನು ನನ್ನ ರೋಷವನ್ನು ನಿಯಂತ್ರಿಸಿಕೊಂಡಿದ್ದೇನೆ.
12348019a ಆತ್ಮಾನಂ ಚ ವಿಶೇಷೇಣ ಪ್ರಶಂಸಾಮ್ಯನಪಾಯಿನಿ|
12348019c ಯಸ್ಯ ಮೇ ತ್ವಂ ವಿಶಾಲಾಕ್ಷಿ ಭಾರ್ಯಾ ಸರ್ವಗುಣಾನ್ವಿತಾ||
ಸಹಭಾಗಿಣಿ! ವಿಶಾಲಾಕ್ಷಿ! ಸರ್ವಗುಣಾನ್ವಿತಳಾದ ನಿನ್ನನ್ನು ಭಾರ್ಯೆಯನ್ನಾಗಿ ಪಡೆದಿರುವ ನನ್ನನ್ನೇ ನಾನು ವಿಶೇಷವಾಗಿ ಪ್ರಶಂಸಿಸಿಕೊಳ್ಳುತ್ತೇನೆ.
12348020a ಏಷ ತತ್ರೈವ ಗಚ್ಚಾಮಿ ಯತ್ರ ತಿಷ್ಠತ್ಯಸೌ ದ್ವಿಜಃ|
12348020c ಸರ್ವಥಾ ಚೋಕ್ತವಾನ್ವಾಕ್ಯಂ ನಾಕೃತಾರ್ಥಃ ಪ್ರಯಾಸ್ಯತಿ||
ಇಗೋ! ಆ ದ್ವಿಜನು ಎಲ್ಲಿ ಇರುವನೋ ಅಲ್ಲಿಗೇ ಹೋಗುತ್ತೇನೆ. ಅವನು ಸರ್ವಥಾ ಕೃತಾರ್ಥನಾಗಿಯೇ ಇಲ್ಲಿಂದ ಹೋಗುತ್ತಾನೆಂದು ಹೇಳುತ್ತೇನೆ.””
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಅಷ್ಟಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೆಂಟನೇ ಅಧ್ಯಾಯವು.
[1] ನಾವೇಕ್ಷ್ಯಾ ಇತಿ ಮೇ ಮತಿಃ| ಎಂಬ ಪಾಠಾಂತರವಿದೆ (ಭಾರತದರ್ಶನ).
[2] ಹಿತ್ವಾ ತ್ವದ್ದರ್ಶನಂ ಕಂಚಿದ್ವಿಘ್ನಂ ನ ಪ್ರತಿಪಾಲಯೇತ್| ತುಲೋಽಪ್ಯಭಿಜನೇ ಜಾತೋ ನ ಕಶ್ಚಿತ್ಪರ್ಯುಪಾಸತೇ|| ಎಂಬ ಪಾಠಾಂತರವಿದೆ (ಭಾರತದರ್ಶನ).
[3] ನ್ಯಾಯ್ಯಸ್ಯಾರ್ಥಸ್ಯ ಎಂಬ ಪಾಠಾಂತರವಿದೆ (ಭಾರತದರ್ಶನ).
[4] ಅಭಿಪ್ರೇತಾಮಸಂಶ್ಲಿಷ್ಟಾಂ ಕೃತ್ವಾ ಚಾತ್ಮಹಿತಂ ಕ್ರಿಯಾಮ್| ನ ಯಾತಿ ನಿರಯಂ ಕಶ್ಚಿದಿತಿ ಧರ್ಮವಿದೋ ವಿದುಃ|| ಎಂಬ ಪಾಠಾಂತರವಿದೆ (ಭಾರತದರ್ಶನ).
[5] ರೋಷಸ್ಯ ಎಂಬ ಪಾಠಾಂತರವಿದೆ (ಭಾರತದರ್ಶನ).