ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೪೭
12347001 ಭೀಷ್ಮ ಉವಾಚ|
12347001a ಅಥ ಕಾಲೇ ಬಹುತಿಥೇ ಪೂರ್ಣೇ ಪ್ರಾಪ್ತೋ ಭುಜಂಗಮಃ|
12347001c ದತ್ತಾಭ್ಯನುಜ್ಞಃ ಸ್ವಂ ವೇಶ್ಮ ಕೃತಕರ್ಮಾ ವಿವಸ್ವತಃ||
ಭೀಷ್ಮನು ಹೇಳಿದನು: “ಬಹುದಿನಗಳ ಕಾಲವು ಪೂರ್ಣವಾಗಲು ಭುಜಂಗಮನು ತನ್ನ ಕೆಲಸವನ್ನು ಮುಗಿಸಿ ವಿವಸ್ವತನ ಅನುಜ್ಞೆಯನ್ನು ಪಡೆದು ತನ್ನ ಮನೆಗೆ ಹಿಂದಿರುಗಿದನು.
12347002a ತಂ ಭಾರ್ಯಾ ಸಮಭಿಕ್ರಾಮತ್ ಪಾದಶೌಚಾದಿಭಿರ್ಗುಣೈಃ|
12347002c ಉಪಪನ್ನಾಂ ಚ ತಾಂ ಸಾಧ್ವೀಂ ಪನ್ನಗಃ ಪರ್ಯಪೃಚ್ಚತ||
ಪತ್ನಿಯು ಅವನನ್ನು ಎದುರುಗೊಂಡು ಪಾದಶೌಚಾದಿ ಸೇವೆಗಳಿಂದ ಅವನನ್ನು ಸ್ವಾಗತಿಸಲು ಪನ್ನಗನು ಆ ಸಾಧ್ವಿಯನ್ನು ಕೇಳಿದನು:
12347003a ಅಪಿ ತ್ವಮಸಿ ಕಲ್ಯಾಣಿ ದೇವತಾತಿಥಿಪೂಜನೇ|
12347003c ಪೂರ್ವಮುಕ್ತೇನ ವಿಧಿನಾ ಯುಕ್ತಾ ಯುಕ್ತೇನ ಮತ್ಸಮಮ್||
“ಕಲ್ಯಾಣಿ! ನಾನು ಹಿಂದೆ ಹೇಳಿದಂತೆಯೇ ನೀನು ದೇವತಾತಿಥಿಪೂಜನದಲ್ಲಿ ವಿಧಿವತ್ತಾಗಿ ನಿರತಳಾಗಿರುವೆಯಲ್ಲವೇ?
12347004a ನ ಖಲ್ವಸ್ಯಕೃತಾರ್ಥೇನ ಸ್ತ್ರೀಬುದ್ಧ್ಯಾ ಮಾರ್ದವೀಕೃತಾ|
12347004c ಮದ್ವಿಯೋಗೇನ ಸುಶ್ರೋಣಿ ವಿಯುಕ್ತಾ ಧರ್ಮಸೇತುನಾ||
ಸುಶ್ರೋಣಿ! ನಾನು ಇಲ್ಲವೆಂದು ನೀನು ಸ್ತ್ರೀಬುದ್ಧಿಯ ಕಾರಣದಿಂದ ಧರ್ಮಸೇತುವೆಯನ್ನು ಮುರಿದುಹಾಕಿಲ್ಲ ತಾನೇ?”
12347005 ನಾಗಭಾರ್ಯೋವಾಚ|
12347005a ಶಿಷ್ಯಾಣಾಂ ಗುರುಶುಶ್ರೂಷಾ ವಿಪ್ರಾಣಾಂ ವೇದಪಾರಣಮ್|
12347005c ಭೃತ್ಯಾನಾಂ ಸ್ವಾಮಿವಚನಂ ರಾಜ್ಞಾಂ ಲೋಕಾನುಪಾಲನಮ್||
ನಾಗಭಾರ್ಯೆಯು ಹೇಳಿದಳು: “ಶಿಷ್ಯರಿಗೆ ಗುರುಶುಶ್ರೂಷೆ, ವಿಪ್ರರಿಗೆ ವೇದಪಾರಾಯಣ, ಸೇವಕರಿಗೆ ಸ್ವಾಮಿವಚನವನ್ನು ಪಾಲಿಸುವುದು ಮತ್ತು ರಾಜರಿಗೆ ಲೋಕಪಾಲನೆಯು ಕರ್ತವ್ಯಗಳು.
12347006a ಸರ್ವಭೂತಪರಿತ್ರಾಣಂ ಕ್ಷತ್ರಧರ್ಮ ಇಹೋಚ್ಯತೇ|
12347006c ವೈಶ್ಯಾನಾಂ ಯಜ್ಞಸಂವೃತ್ತಿರಾತಿಥೇಯಸಮನ್ವಿತಾ||
ಸರ್ವಭೂತಗಳನ್ನೂ ರಕ್ಷಿಸುವುದು ಕ್ಷತ್ರಧರ್ಮವೆಂದು ಹೇಳುತ್ತಾರೆ. ಅತಿಥಿಸತ್ಕಾರಗಳೊಂದಿಗೆ ಯಜ್ಞವನ್ನು ನಡೆಸುವುದು ವೈಶ್ಯರ ಧರ್ಮವಾಗಿದೆ.
12347007a ವಿಪ್ರಕ್ಷತ್ರಿಯವೈಶ್ಯಾನಾಂ ಶುಶ್ರೂಷಾ ಶೂದ್ರಕರ್ಮ ತತ್|
12347007c ಗೃಹಸ್ಥಧರ್ಮೋ ನಾಗೇಂದ್ರ ಸರ್ವಭೂತಹಿತೈಷಿತಾ||
ವಿಪ್ರ-ಕ್ಷತ್ರಿಯ-ವೈಶ್ಯರ ಶುಶ್ರೂಷೆಯು ಶೂದ್ರಕರ್ಮವು. ನಾಗೇಂದ್ರ! ಸರ್ವಪ್ರಾಣಿಗಳಿಗೂ ಹಿತವನ್ನು ಬಯಸುವುದೇ ಗೃಹಸ್ಥಧರ್ಮವು.
12347008a ನಿಯತಾಹಾರತಾ ನಿತ್ಯಂ ವ್ರತಚರ್ಯಾ ಯಥಾಕ್ರಮಮ್|
12347008c ಧರ್ಮೋ ಹಿ ಧರ್ಮಸಂಬಂಧಾದಿಂದ್ರಿಯಾಣಾಂ ವಿಶೇಷಣಮ್||
ನಿತ್ಯವೂ ನಿಯತಾಹಾರವನ್ನು ಸೇವಿಸಿ ಯಥಾಕ್ರಮವಾಗಿ ವ್ರತಚರ್ಯನಾಗಿರುವುದು ಎಲ್ಲರ ಧರ್ಮವೂ ಆಗಿದೆ. ಏಕೆಂದರೆ ವಿಶೇಷವಾಗಿ ಇಂದ್ರಿಯಗಳನ್ನು ಧರ್ಮಸಂಬಂಧದಲ್ಲಿರಿಸಿಕೊಳ್ಳಲು ಇದು ಸಾಧಕವಾಗಿದೆ.
12347009a ಅಹಂ ಕಸ್ಯ ಕುತೋ ವಾಹಂ ಕಃ ಕೋ ಮೇ ಹ ಭವೇದಿತಿ|
12347009c ಪ್ರಯೋಜನಮತಿರ್ನಿತ್ಯಮೇವಂ ಮೋಕ್ಷಾಶ್ರಮೀ ಭವೇತ್||
“ನಾನು ಯಾರವನು? ಎಲ್ಲಿಂದ ಬಂದಿದ್ದೇನೆ? ನನ್ನವರು ಯಾರಿದ್ದಾರೆ? ಈ ಜೀವನದ ಪ್ರಯೋಜನವೇನು?” ಇತ್ಯಾದಿ ವಿಷಯಗಳನ್ನು ಮೋಕ್ಷಾಶ್ರಮಿಯು ವಿಚಾರಮಾಡುತ್ತಾನೆ.
12347010a ಪತಿವ್ರತಾತ್ವಂ ಭಾರ್ಯಾಯಾಃ ಪರಮೋ ಧರ್ಮ ಉಚ್ಯತೇ|
12347010c ತವೋಪದೇಶಾನ್ನಾಗೇಂದ್ರ ತಚ್ಚ ತತ್ತ್ವೇನ ವೇದ್ಮಿ ವೈ||
ನಾಗೇಂದ್ರ! ಪಾತಿವ್ರತ್ಯವೇ ಭಾರ್ಯೆಯರ ಪರಮ ಧರ್ಮವೆಂದು ಹೇಳಲಾಗಿದೆ. ನಿನ್ನ ಉಪದೇಶದಿಂದ ಅದನ್ನು ನಾನು ಯಥಾವತ್ತಾಗಿ ತಿಳಿದಿರುತ್ತೇನೆ.
12347011a ಸಾಹಂ ಧರ್ಮಂ ವಿಜಾನಂತೀ ಧರ್ಮನಿತ್ಯೇ ತ್ವಯಿ ಸ್ಥಿತೇ|
12347011c ಸತ್ಪಥಂ ಕಥಮುತ್ಸೃಜ್ಯ ಯಾಸ್ಯಾಮಿ ವಿಷಮೇ ಪಥಿ||
ನಿತ್ಯವೂ ನೀನು ಧರ್ಮದಲ್ಲಿಯೇ ಇರುವಾಗ ಆ ಧರ್ಮವನ್ನು ತಿಳಿದುಕೊಂಡಿರುವ ನಾನು ಸನ್ಮಾರ್ಗವನ್ನು ಪರಿತ್ಯಜಿಸಿ ಹೇಗೆ ತಾನೇ ದುರ್ಮಾರ್ಗವನ್ನು ಅವಲಂಬಿಸುವೆನು?
12347012a ದೇವತಾನಾಂ ಮಹಾಭಾಗ ಧರ್ಮಚರ್ಯಾ ನ ಹೀಯತೇ|
12347012c ಅತಿಥೀನಾಂ ಚ ಸತ್ಕಾರೇ ನಿತ್ಯಯುಕ್ತಾಸ್ಮ್ಯತಂದ್ರಿತಾ||
ಮಹಾಭಾಗ! ದೇವತೆಗಳ ಕುರಿತಾದ ಧರ್ಮಚರ್ಯೆಯಲ್ಲಿ ಯಾವ ಲೋಪವೂ ಉಂಟಾಗಿಲ್ಲ. ಅತಿಥಿಗಳ ಸತ್ಕಾರದಲ್ಲಿಯೂ ನಾನು ಆಲಸ್ಯವಿಲ್ಲದೇ ನಿತ್ಯವೂ ಯುಕ್ತಳಾಗಿದ್ದೇನೆ.
12347013a ಸಪ್ತಾಷ್ಟದಿವಸಾಸ್ತ್ವದ್ಯ ವಿಪ್ರಸ್ಯೇಹಾಗತಸ್ಯ ವೈ|
12347013c ಸ ಚ ಕಾರ್ಯಂ ನ ಮೇ ಖ್ಯಾತಿ ದರ್ಶನಂ ತವ ಕಾಂಕ್ಷತಿ||
ಆದರೆ ಇಂದಿಗೆ ಹದಿನೈದು ದಿನಗಳ ಹಿಂದೆ ವಿಪ್ರನೋರ್ವನು ಇಲ್ಲಿಗೆ ಆಗಮಿಸಿದ್ದನು. ಅವನು ನನ್ನಲ್ಲಿ ಕಾರ್ಯವೇನೆಂದು ಹೇಳಲಿಲ್ಲ. ನಿನ್ನ ದರ್ಶನವನ್ನು ಅಪೇಕ್ಷಿಸಿದ್ದಾನೆ.
12347014a ಗೋಮತ್ಯಾಸ್ತ್ವೇಷ ಪುಲಿನೇ ತ್ವದ್ದರ್ಶನಸಮುತ್ಸುಕಃ|
12347014c ಆಸೀನೋಽ’ವರ್ತಯನ್ ಬ್ರಹ್ಮ ಬ್ರಾಹ್ಮಣಃ ಸಂಶಿತವ್ರತಃ||
ಆ ಸಂಶಿತವ್ರತ ಬ್ರಾಹ್ಮಣನು ವೇದಪಾರಾಯಣನಾಗಿ ನಿನ್ನ ದರ್ಶನವನ್ನೇ ಕಾಯುತ್ತಾ ಗೋಮತೀ ತೀರದ ಮರಳುದಿಣ್ಣೆಯ ಮೇಲೆ ಕುಳಿತಿದ್ದಾನೆ.
12347015a ಅಹಂ ತ್ವನೇನ ನಾಗೇಂದ್ರ ಸಾಮಪೂರ್ವಂ ಸಮಾಹಿತಾ|
12347015c ಪ್ರಸ್ಥಾಪ್ಯೋ ಮತ್ಸಕಾಶಂ ಸ ಸಂಪ್ರಾಪ್ತೋ ಭುಜಗೋತ್ತಮಃ||
ನಾಗೇಂದ್ರ! ಭುಜಗೋತ್ತಮನು ಬಂದೊಡನೆಯೇ ತನ್ನ ಬಳಿಗೆ ಕಳುಹಿಸಬೇಕೆಂಬ ಸತ್ಯಪ್ರತಿಜ್ಞೆಯನ್ನು ನನ್ನಿಂದ ಅವನು ಮಾಡಿಸಿಕೊಂಡಿದ್ದಾನೆ.
12347016a ಏತಚ್ಚ್ರುತ್ವಾ ಮಹಾಪ್ರಾಜ್ಞ ತತ್ರ ಗಂತುಂ ತ್ವಮರ್ಹಸಿ|
12347016c ದಾತುಮರ್ಹಸಿ ವಾ ತಸ್ಯ ದರ್ಶನಂ ದರ್ಶನಶ್ರವಃ||
ಮಹಾಪ್ರಾಜ್ಞ! ಇದನ್ನು ಕೇಳಿ ನೀನು ಅಲ್ಲಿಗೆ ಹೋಗಬೇಕು. ಕಣ್ಣುಗಳನ್ನೇ ಕಿವಿಯಾಗುಳ್ಳವನೇ! ಅವನಿಗೆ ದರ್ಶನವನ್ನು ನೀಡಬೇಕು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಸಪ್ತಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೇಳನೇ ಅಧ್ಯಾಯವು.