Shanti Parva: Chapter 81

ಶಾಂತಿ ಪರ್ವ: ರಾಜಧರ್ಮ ಪರ್ವ

೮೧

ರಾಜನು ಮಿತ್ರ-ಶತ್ರುಗಳನ್ನು ಗುರುತಿಸುವ ರೀತಿ; ಮಂತ್ರಿಗಳ ಲಕ್ಷಣ (೧-೪೦).

12081001 ಯುಧಿಷ್ಠಿರ ಉವಾಚ|

12081001a ಯದಪ್ಯಲ್ಪತರಂ ಕರ್ಮ ತದಪ್ಯೇಕೇನ ದುಷ್ಕರಮ್|

12081001c ಪುರುಷೇಣಾಸಹಾಯೇನ ಕಿಮು ರಾಜ್ಯಂ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಕಾರ್ಯವು ಎಷ್ಟೇ ಸಣ್ಣದಾಗಿದ್ದರೂ ಇತರರ ಸಹಾಯವಿಲ್ಲದೇ ಒಬ್ಬನೇ ಮಾಡಿ ಮುಗಿಸುವುದು ಕಷ್ಟ. ಪಿತಾಮಹ! ಇನ್ನು ರಾಜನ ವಿಷಯದಲ್ಲಿ ಹೇಳುವುದೇನಿದೆ?

12081002a ಕಿಂಶೀಲಃ ಕಿಂಸಮಾಚಾರೋ ರಾಜ್ಞೋಽರ್ಥಸಚಿವೋ ಭವೇತ್|

12081002c ಕೀದೃಶೇ ವಿಶ್ವಸೇದ್ರಾಜಾ ಕೀದೃಶೇ ನಾಪಿ ವಿಶ್ವಸೇತ್||

ರಾಜನಿಗೆ ಸಚಿವನಾಗಿರುವವನ ಶೀಲವು ಹೇಗಿರಬೇಕು? ಆಚಾರ-ವ್ಯವಹಾರಗಳು ಹೇಗಿರಬೇಕು? ಎಂಥವರಲ್ಲಿ ರಾಜನು ವಿಶ್ವಾಸವನ್ನಿಡಬೇಕು? ಮತ್ತು ಎಂಥವರಲ್ಲಿ ಅವನು ವಿಶ್ವಾಸವನ್ನಿಡಬಾರದು?”

12081003 ಭೀಷ್ಮ ಉವಾಚ|

12081003a ಚತುರ್ವಿಧಾನಿ ಮಿತ್ರಾಣಿ ರಾಜ್ಞಾಂ ರಾಜನ್ಭವಂತ್ಯುತ|

12081003c ಸಹಾರ್ಥೋ ಭಜಮಾನಶ್ಚ ಸಹಜಃ ಕೃತ್ರಿಮಸ್ತಥಾ||

ಭೀಷ್ಮನು ಹೇಳಿದನು: “ರಾಜನ್! ರಾಜನಿಗೆ ನಾಲ್ಕುವಿಧದ ಮಿತ್ರರು ಇರುತ್ತಾರೆ ಎಂದು ಹೇಳುತ್ತಾರೆ: ಸಹಾರ್ಥ[1], ಭಜಮಾನ[2], ಸಹಜ[3] ಮತ್ತು ಕೃತ್ರಿಮ[4].

12081004a ಧರ್ಮಾತ್ಮಾ ಪಂಚಮಂ ಮಿತ್ರಂ ಸ ತು ನೈಕಸ್ಯ ನ ದ್ವಯೋಃ|

12081004c ಯತೋ ಧರ್ಮಸ್ತತೋ ವಾ ಸ್ಯಾನ್ಮಧ್ಯಸ್ಥೋ ವಾ ತತೋ ಭವೇತ್||

12081005a ಯಸ್ತಸ್ಯಾರ್ಥೋ ನ ರೋಚೇತ ನ ತಂ ತಸ್ಯ ಪ್ರಕಾಶಯೇತ್|

12081005c ಧರ್ಮಾಧರ್ಮೇಣ ರಾಜಾನಶ್ಚರಂತಿ ವಿಜಿಗೀಷವಃ||

ಐದನೆಯ ಧರ್ಮಾತ್ಮ ಎನ್ನುವ ಮಿತ್ರನೂ ಇರುತ್ತಾನೆ. ಧರ್ಮಾತ್ಮ ಮಿತ್ರನು ಒಬ್ಬನ ಅಥವಾ ಇಬ್ಬರ ಮಿತ್ರನು ಮಾತ್ರ ಅಲ್ಲ. ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಅವನ ಬೆಂಬಲವಿರುತ್ತದೆ. ಅಥವಾ ಯಾವ ರಾಜನಲ್ಲಿ ಧರ್ಮವಿದೆಯೋ ಅವನ ಆಶ್ರಯವನ್ನು ಪಡೆಯುತ್ತಾನೆ. ಧರ್ಮವಲ್ಲದವುಗಳು ಅವನಿಗೆ ಇಷ್ಟವಾಗುವುದಿಲ್ಲವಾದುದರಿಂದ ಅಂಥಹ ಕಾರ್ಯಗಳನ್ನು ಅವನಿಗೆ ತೋರಿಸಬಾರದು. ಆದರೆ ಜಯವನ್ನು ಬಯಸುವ ರಾಜರು ಧರ್ಮ-ಅಧರ್ಮ ಯುಕ್ತ ಕಾರ್ಯಗಳೆರಡನ್ನೂ ಮಾಡಬೇಕಾಗುತ್ತದೆ.

12081006a ಚತುರ್ಣಾಂ ಮಧ್ಯಮೌ ಶ್ರೇಷ್ಠೌ ನಿತ್ಯಂ ಶಂಕ್ಯೌ ತಥಾಪರೌ|

12081006c ಸರ್ವೇ ನಿತ್ಯಂ ಶಂಕಿತವ್ಯಾಃ ಪ್ರತ್ಯಕ್ಷಂ ಕಾರ್ಯಮಾತ್ಮನಃ||

ನಾಲ್ಕು ವಿಧದ ಮಿತ್ರರಲ್ಲಿ ಮಧ್ಯದ ಇಬ್ಬರು – ಭಜಮಾನ ಮತ್ತು ಸಹಜ ಮಿತ್ರರು – ಶ್ರೇಷ್ಠರು. ಉಳಿದ ಇಬ್ಬರು – ಸಹಾರ್ಥ ಮತ್ತು ಕೃತ್ರಿಮ ಮಿತ್ರರು – ಸಂದೇಹನೀಯರು. ಆದರೆ ರಾಜನಾದವನು ನಿತ್ಯವೂ ತನ್ನ ಪ್ರತ್ಯಕ್ಷ ಕಾರ್ಯಸಿದ್ಧಿಗಾಗಿ ಎಲ್ಲ ಮಿತ್ರರ ವಿಷಯದಲ್ಲಿಯೂ ಸಂದೇಹಗ್ರಸ್ಥರಾಗಿಯೇ ಇರಬೇಕು. 

12081007a ನ ಹಿ ರಾಜ್ಞಾ ಪ್ರಮಾದೋ ವೈ ಕರ್ತವ್ಯೋ ಮಿತ್ರರಕ್ಷಣೇ|

12081007c ಪ್ರಮಾದಿನಂ ಹಿ ರಾಜಾನಂ ಲೋಕಾಃ ಪರಿಭವಂತ್ಯುತ||

ತನ್ನ ಮಿತ್ರರನ್ನು ರಕ್ಷಿಸುವ ವಿಷಯದಲ್ಲಿ ರಾಜನು ಸದಾ ಅಪ್ರಮತ್ತನಾಗಿರಬೇಕು. ಜಾಗರೂಕತೆಯಿಂದಿರಬೇಕು. ಮಿತ್ರರ ರಕ್ಷಣೆಯ ವಿಷಯದಲ್ಲಿ ಜಾಗರೂಕನಲ್ಲದ ರಾಜನನ್ನು ಪ್ರಜೆಗಳು ತಿರಸ್ಕರಿಸುತ್ತಾರೆ.

12081008a ಅಸಾಧುಃ ಸಾಧುತಾಮೇತಿ ಸಾಧುರ್ಭವತಿ ದಾರುಣಃ|

12081008c ಅರಿಶ್ಚ ಮಿತ್ರಂ ಭವತಿ ಮಿತ್ರಂ ಚಾಪಿ ಪ್ರದುಷ್ಯತಿ||

ದುಷ್ಟನಾದವನು ಒಳ್ಳೆಯವನಾಗುತ್ತಾನೆ. ಸಾಧುವಾಗಿದ್ದವನು ದಾರುಣನಾಗುತ್ತಾನೆ. ಶತ್ರುವಾಗಿದ್ದವನು ಮಿತ್ರನಾಗುತ್ತಾನೆ. ಮಿತ್ರನಾಗಿದ್ದವನು ದ್ರೋಹಿಯಾಗುತ್ತಾನೆ.

12081009a ಅನಿತ್ಯಚಿತ್ತಃ ಪುರುಷಸ್ತಸ್ಮಿನ್ಕೋ ಜಾತು ವಿಶ್ವಸೇತ್|

12081009c ತಸ್ಮಾತ್ಪ್ರಧಾನಂ ಯತ್ಕಾರ್ಯಂ ಪ್ರತ್ಯಕ್ಷಂ ತತ್ಸಮಾಚರೇತ್||

ಮನುಷ್ಯನು ಸ್ಥಿರಚಿತ್ತನಾಗಿರುವುದಿಲ್ಲ. ಹೀಗಿರುವಾಗ ಯಾರಲ್ಲಿಯಾದರೂ ಹೇಗೆ ವಿಶ್ವಾಸವನ್ನಿಡಬಹುದು? ಆದುದರಿಂದ ಪ್ರಧಾನ ಕಾರ್ಯಗಳನ್ನು ರಾಜನಾದವನು ಪ್ರತ್ಯಕ್ಷವಾಗಿಯೇ ನಡೆಸಬೇಕು. ಮಿತ್ರರಿಗೆ ವಹಿಸಿಕೊಟ್ಟು ಸುಮ್ಮನಿರಬಾರದು.

12081010a ಏಕಾಂತೇನ ಹಿ ವಿಶ್ವಾಸಃ ಕೃತ್ಸ್ನೋ ಧರ್ಮಾರ್ಥನಾಶಕಃ|

12081010c ಅವಿಶ್ವಾಸಶ್ಚ ಸರ್ವತ್ರ ಮೃತ್ಯುನಾ ನ ವಿಶಿಷ್ಯತೇ||

ಒಬ್ಬನ ಮೇಲೆಯೇ ಸಂಪೂರ್ಣ ವಿಶ್ವಾಸವನ್ನಿಡುವುದು ಧರ್ಮಾರ್ಥನಾಶಕವು. ಯಾರ ಮೇಲೂ ವಿಶ್ವಾಸವನ್ನಿಡದೇ ಇರುವುದೂ ಕೂಡ ಮೃತ್ಯುವಿಗಿಂತಲೂ ಹೆಚ್ಚಾಗುತ್ತದೆ. ಆದುದರಿಂದ ಇವೆರಡರಿಂದಲೂ ಅಪಾಯವಿದೆ.

12081011a ಅಕಾಲಮೃತ್ಯುರ್ವಿಶ್ವಾಸೋ ವಿಶ್ವಸನ್ ಹಿ ವಿಪದ್ಯತೇ|

12081011c ಯಸ್ಮಿನ್ಕರೋತಿ ವಿಶ್ವಾಸಮಿಚ್ಚತಸ್ತಸ್ಯ ಜೀವತಿ||

ಒಬ್ಬನ ಮೇಲೆಯೇ ಸಂಪೂರ್ಣವಿಶ್ವಾಸವನ್ನಿಡುವುದು ಅಕಾಲಮೃತ್ಯುವಿನ ಸಮನಾಗಿರುತ್ತದೆ. ಏಕೆಂದರೆ ಒಬ್ಬನ ಮೇಲೆಯೇ ಸಂಪೂರ್ಣ ವಿಶ್ವಾಸವನ್ನಿಟ್ಟು ಜೀವನ ನಡೆಸುವವನು ಯಾರಲ್ಲಿ ವಿಶ್ವಾಸವನ್ನಿಟ್ಟಿರುವೆವೋ ಅವನ ಇಚ್ಛಾನುಸಾರವಾಗಿಯೇ ಬದುಕುತ್ತೇವೆ. ಅವನು ವಿಶ್ವಾಸದ್ರೋಹಮಾಡಿದರೆ ಅವನನ್ನು ನಂಬಿದವನು ಸಂಪೂರ್ಣ ನಾಶವಾಗುತ್ತಾನೆ.

12081012a ತಸ್ಮಾದ್ವಿಶ್ವಸಿತವ್ಯಂ ಚ ಶಂಕಿತವ್ಯಂ ಚ ಕೇಷು ಚಿತ್|

12081012c ಏಷಾ ನೀತಿಗತಿಸ್ತಾತ ಲಕ್ಷ್ಮೀಶ್ಚೈವ[5] ಸನಾತನೀ||

ಆದುದರಿಂದ ಕೆಲವರಲ್ಲಿ ವಿಶ್ವಾಸವನ್ನಿಡಬೇಕು. ಕೆಲವರನ್ನು ಶಂಕಿಸುತ್ತಿರಬೇಕು. ಮಗೂ! ಇದೇ ಸಂಪತ್ತನ್ನು ಪಡೆಯುವ ಸನಾತನ ನೀತಿ.

12081013a ಯಂ ಮನ್ಯೇತ ಮಮಾಭಾವಾದಿಮಮರ್ಥಾಗಮಃ ಸ್ಪೃಶೇತ್|

12081013c ನಿತ್ಯಂ ತಸ್ಮಾಚ್ಚಂಕಿತವ್ಯಮಮಿತ್ರಂ ತಂ ವಿದುರ್ಬುಧಾಃ||

“ನನ್ನ ಮರಣಾನಂತರ ಇವನು ನನ್ನ ಸಂಪತ್ತನ್ನು ಮುಟ್ಟುತ್ತಾನೆ” ಎಂದು ಯಾರ ಮೇಲೆ ರಾಜನ ಅಭಿಪ್ರಾಯವಿದೆಯೋ ಅಂಥವನ ವಿಷಯದಲ್ಲಿ ಅವನು ಸದಾ ಸಂದೇಹಗ್ರಸ್ತನಾಗಿಯೇ ಇರಬೇಕು. ಏಕೆಂದರೆ ಅಂಥವರು ಅಮಿತ್ರರೇ ಎಂದು ಬುದ್ಧಿವಂತರು ತಿಳಿಯುತ್ತಾರೆ.

12081014a ಯಸ್ಯ ಕ್ಷೇತ್ರಾದಪ್ಯುದಕಂ ಕ್ಷೇತ್ರಮನ್ಯಸ್ಯ ಗಚ್ಚತಿ|

12081014c ನ ತತ್ರಾನಿಚ್ಚತಸ್ತಸ್ಯ ಭಿದ್ಯೇರನ್ಸರ್ವಸೇತವಃ||

ಯಾರ ಗದ್ದೆಯಿಂದ ಹೆಚ್ಚಾದ ನೀರು ಇನ್ನೊಬ್ಬನ ಗದ್ದೆಗೆ ಹೋಗುತ್ತದೆಯೋ ಆಗ ಕೆಳಗೆ ಗದ್ದೆಯಿರುವವನ ಅನುಮತಿಯಿಲ್ಲದೇ ಮೇಲಿನ ಗದ್ದೆಯವನು ತನ್ನ ಒಡ್ಡನ್ನು ಒಡೆಯಬಾರದು.

12081015a ತಥೈವಾತ್ಯುದಕಾದ್ಭೀತಸ್ತಸ್ಯ ಭೇದನಮಿಚ್ಚತಿ|

12081015c ಯಮೇವಂಲಕ್ಷಣಂ ವಿದ್ಯಾತ್ತಮಮಿತ್ರಂ ವಿನಿರ್ದಿಶೇತ್||

ಆದರೆ ಮೇಲಿನ ಗದ್ದೆಯಿದ್ದವನು ತನ್ನ ಗದ್ದೆಯು ಮುಳುಗಿಹೋಗಬಾರದೆಂದು ಒಡ್ಡನ್ನು ಒಡೆಯಲು ಬಯಸುತ್ತಾನೆ. ಈ ಉಪಮಾನದ ಲಕ್ಷಣವೇನೆಂದು ತಿಳಿದು ಇದರಲ್ಲಿ ಶತ್ರುವು ಯಾರೆಂಬುದನ್ನು ನಿರ್ಧರಿಸಬೇಕು.

12081016a ಯಃ ಸಮೃದ್ಧ್ಯಾ ನ ತುಷ್ಯೇತ[6] ಕ್ಷಯೇ ದೀನತರೋ ಭವೇತ್|

12081016c ಏತದುತ್ತಮಮಿತ್ರಸ್ಯ ನಿಮಿತ್ತಮಭಿಚಕ್ಷತೇ||

ರಾಜನ ಸಮೃದ್ಧಿಯಿಂದ ಇನ್ನೂ ಬೇಕೆಂದು ತೃಪ್ತನಾಗುವುದಿಲ್ಲದಿರುವುದು ಮತ್ತು ರಾಜನ ಕ್ಷಯದಿಂದ ದೀನನಾಗುವುದು ಇವು ಉತ್ತಮ ಮಿತ್ರನ ಲಕ್ಷಣಗಳೆಂದು ಪರಿಗಣಿಸಬೇಕು.

12081017a ಯಂ ಮನ್ಯೇತ ಮಮಾಭಾವಾದಸ್ಯಾಭಾವೋ ಭವೇದಿತಿ|

12081017c ತಸ್ಮಿನ್ಕುರ್ವೀತ ವಿಶ್ವಾಸಂ ಯಥಾ ಪಿತರಿ ವೈ ತಥಾ||

12081018a ತಂ ಶಕ್ತ್ಯಾ ವರ್ಧಮಾನಶ್ಚ ಸರ್ವತಃ ಪರಿಬೃಂಹಯೇತ್|

 “ನಾನಿಲ್ಲದಿದ್ದರೆ ಇವನೂ ಇರುವುದಿಲ್ಲ” ಎಂಬ ಭಾವನೆಯಾರಲ್ಲಿದೆಯೋ ಅವನಲ್ಲಿ ತಂದೆಯ ಮೇಲೆ ಇಡುವ ವಿಶ್ವಾಸವನ್ನು ಇಡಬೇಕು. ಅಂಥವನನ್ನು ಶಕ್ತಿಯಿದ್ದಷ್ಟೂ ಎಲ್ಲ ರೀತಿಯಿಂದ ಸಂಮೃದ್ಧನನ್ನಾಗಿ ಮಾಡಲು ಪ್ರಯತ್ನಿಸಬೇಕು.

12081018c ನಿತ್ಯಂ ಕ್ಷತಾದ್ವಾರಯತಿ ಯೋ ಧರ್ಮೇಷ್ವಪಿ ಕರ್ಮಸು||

12081019a ಕ್ಷತಾದ್ಭೀತಂ ವಿಜಾನೀಯಾದುತ್ತಮಂ ಮಿತ್ರಲಕ್ಷಣಮ್|

12081019c ಯೇ ತಸ್ಯ ಕ್ಷತಮಿಚ್ಚಂತಿ ತೇ ತಸ್ಯ ರಿಪವಃ ಸ್ಮೃತಾಃ||

ರಾಜನ ಧರ್ಮಕರ್ಮಗಳಲ್ಲಿನ ನ್ಯೂನತೆಗಳನ್ನು ಹೋಗಲಾಡಿಸುವುದು ಮತ್ತು ರಾಜನಿಗೆ ಹಾನಿಯನ್ನುಂಟು ಮಾಡಿಯೇನು ಎಂಬ ಭಯದಿಂದಿರುವುದು ಇವೂ ಕೂಡ ಉತ್ತಮ ಮಿತ್ರನ ಲಕ್ಷಣಗಳೇ ಆಗಿವೆ. ರಾಜನ ಕ್ಷತಿಯನ್ನು ಬಯಸುವವನು ಶತ್ರುವೆಂದು ಹೇಳುತ್ತಾರೆ.

12081020a ವ್ಯಸನಾನ್ನಿತ್ಯಭೀತೋಽಸೌ ಸಮೃದ್ಧ್ಯಾಮೇವ ತೃಪ್ಯತೇ|

12081020c ಯತ್ಸ್ಯಾದೇವಂವಿಧಂ ಮಿತ್ರಂ ತದಾತ್ಮಸಮಮುಚ್ಯತೇ||

ರಾಜನಿಗೆ ಕಷ್ಟವೊದಗಿಬಿಡಬಹುದೆಂದು ಯಾವಾಗಲೂ ಭಯಭೀತನಾಗಿರುವವನು ಮತ್ತು ರಾಜನ ಸಮೃದ್ಧಿಯಿಂದಲೇ ತೃಪ್ತಿಹೊಂದುವವನು ಇಂಥಹ ಮಿತ್ರನು ರಾಜನ ಆತ್ಮಸಮನೆಂದೇ ಭಾವಿಸಬೇಕು.

12081021a ರೂಪವರ್ಣಸ್ವರೋಪೇತಸ್ತಿತಿಕ್ಷುರನಸೂಯಕಃ|

12081021c ಕುಲೀನಃ ಶೀಲಸಂಪನ್ನಃ ಸ ತೇ ಸ್ಯಾತ್ಪ್ರತ್ಯನಂತರಃ||

ರೂಪದಲ್ಲಿ ಸುಂದರನೂ, ವರ್ಣದಲ್ಲಿ ಮನೋಹರನೂ, ಸ್ವರದಲ್ಲಿ ಮೃದುವೂ ಆಗಿರುವ ಕ್ಷಮಾಶೀಲ, ಅಸೂಯಾರಹಿತ, ಕುಲೀನ, ಮತ್ತು ಶೀಲಸಂಪನ್ನನು ನಿನ್ನ ನಿನ್ನ ಪ್ರಧಾನ ಸಚಿವನಾಗಲಿ.

12081022a ಮೇಧಾವೀ ಸ್ಮೃತಿಮಾನ್ದಕ್ಷಃ ಪ್ರಕೃತ್ಯಾ ಚಾನೃಶಂಸವಾನ್|

12081022c ಯೋ ಮಾನಿತೋಽಮಾನಿತೋ ವಾ ನ ಸಂದೂಷ್ಯೇತ್ಕದಾ ಚನ||

12081023a ಋತ್ವಿಗ್ವಾ ಯದಿ ವಾಚಾರ್ಯಃ ಸಖಾ ವಾತ್ಯಂತಸಂಸ್ತುತಃ|

12081023c ಗೃಹೇ ವಸೇದಮಾತ್ಯಸ್ತೇ ಯಃ ಸ್ಯಾತ್ಪರಮಪೂಜಿತಃ||

ಮೇಧಾವೀ, ಜ್ಞಾಪಕಶಕ್ತಿಯು ಚೆನ್ನಾಗಿರುವ, ದಕ್ಷ, ಸ್ವಭಾವತಃ ಮೃದುವಾಗಿರುವ, ಮಾನ-ಅಪಮಾನಗಳೆರಡರಲ್ಲಿಯೂ ನಿನ್ನನ್ನು ಎಂದೂ ದೂಷಿಸದವನು – ಅವನು ನಿನ್ನ ಋತ್ವಿಜನೇ ಆಗಿರಬಹುದು, ಆಚಾರ್ಯನಾಗಿರಬಹುದು, ಅಥವಾ ನಿನ್ನ ಪ್ರಶಂಸೆಗೆ ಪಾತ್ರನಾದ ಸಖನಾಗಿರಬಹುದು – ಅವನನ್ನು ಮಂತ್ರಿಯನ್ನಾಗಿ ನಿಯೋಜಿಸಿ ಅವನು ಯಾವಾಗಲೂ ನಿನ್ನ ಮನೆಯಲ್ಲಿಯೇ ಮಾಸಿಮಾಡಿಕೊಂಡಿರುವಂತೆ ಏರ್ಪಡಿಸು. ಅವನನ್ನು ಪರಮ ಗೌರವದಿಂದ ನೋಡಿಕೊಳ್ಳಬೇಕು.

12081024a ಸ ತೇ ವಿದ್ಯಾತ್ಪರಂ ಮಂತ್ರಂ ಪ್ರಕೃತಿಂ ಚಾರ್ಥಧರ್ಮಯೋಃ|

12081024c ವಿಶ್ವಾಸಸ್ತೇ ಭವೇತ್ತತ್ರ ಯಥಾ ಪಿತರಿ ವೈ ತಥಾ||

ಅವನು ನಿನ್ನ ಪರಮ ಗುಹ್ಯವಿಷಯಗಳ ಕುರಿತು ಮತ್ತು ಅರ್ಥ-ಧರ್ಮಗಳ ಪ್ರಕೃತಿ[7]ಯನ್ನು ತಿಳಿದವರಾಗಿರಬೇಕು. ನಿನ್ನ ತಂದೆಯ ಮೇಲೆ ಇಡುವಷ್ಟು ವಿಶ್ವಾಸವನ್ನು ನಿನ್ನ ಆ ಆಮಾತ್ಯನ ಮೇಲೆ ಇಟ್ಟಿರಬೇಕು.

12081025a ನೈವ ದ್ವೌ ನ ತ್ರಯಃ ಕಾರ್ಯಾ ನ ಮೃಷ್ಯೇರನ್ಪರಸ್ಪರಮ್|

12081025c ಏಕಾರ್ಥಾದೇವ ಭೂತಾನಾಂ ಭೇದೋ ಭವತಿ ಸರ್ವದಾ||

ಪರಸ್ಪರರಲ್ಲಿ ಭಿನ್ನಾಭಿಪ್ರಾಯವುಂಟಾಗಬಾರದೆಂದು ಕಾರ್ಯವನ್ನು ಒಬ್ಬನಿಗೇ ವಹಿಸಬೇಕು. ಎರಡು ಮೂರು ಜನರಿಗೆ ವಹಿಸಬಾರದು. ಒಂದೇ ವಿಷಯದಲ್ಲಿ ಅನೇಕ ಅಭಿಪ್ರಾಯಗಳಿರುವುದು ಮನುಷ್ಯರಲ್ಲಿ ಯಾವಾಗಲೂ ಒಂದೇ ವಿಷಯದಲ್ಲಿ ಅನೇಕ ಅಭಿಪ್ರಾಯಗಳಿರುತ್ತವೆ.

12081026a ಕೀರ್ತಿಪ್ರಧಾನೋ ಯಶ್ಚ ಸ್ಯಾದ್ಯಶ್ಚ ಸ್ಯಾತ್ಸಮಯೇ ಸ್ಥಿತಃ|

12081026c ಸಮರ್ಥಾನ್ಯಶ್ಚ ನ ದ್ವೇಷ್ಟಿ ಸಮರ್ಥಾನ್ಕುರುತೇ ಚ ಯಃ||

12081027a ಯೋ ನ ಕಾಮಾದ್ಭಯಾಲ್ಲೋಭಾತ್ಕ್ರೋಧಾದ್ವಾ ಧರ್ಮಮುತ್ಸೃಜೇತ್|

12081027c ದಕ್ಷಃ ಪರ್ಯಾಪ್ತವಚನಃ ಸ ತೇ ಸ್ಯಾತ್ಪ್ರತ್ಯನಂತರಃ||

ಯಾರಿಗೆ ಕೀರ್ತಿಯೇ ಪ್ರಧಾನವಾಗಿರುವ ಮತ್ತು ನೀತಿ-ಮರ್ಯಾದೆಗಳ ಚೌಕಟ್ಟಿನಲ್ಲಿಯೇ ನಡೆದುಕೊಳ್ಳುವ, ಸಮರ್ಥ, ಅನ್ಯರನ್ನು ದ್ವೇಷಿಸದ, ಕಾಮದಿಂದಾಗಲೀ, ಲೋಭದಿಂದಾಗಲೀ, ಭಯದಿಂದಾಗಲೀ ಧರ್ಮವನ್ನು ಕೈಬಿಡದ ದಕ್ಷ ಮಿತಭಾಷಿಯು ನಿನ್ನ ಪ್ರಧಾನ ಮಂತ್ರಿಯಾಗಲಿ.

12081028a ಶೂರಶ್ಚಾರ್ಯಶ್ಚ ವಿದ್ವಾಂಶ್ಚ ಪ್ರತಿಪತ್ತಿವಿಶಾರದಃ|

12081028c ಕುಲೀನಃ ಶೀಲಸಂಪನ್ನಸ್ತಿತಿಕ್ಷುರನಸೂಯಕಃ||

ಅವನು ಶೂರನೂ, ಆರ್ಯನೂ, ವಿದ್ವಾಂಸನೂ, ಯಾವಾಗ ಏನು ಮಾಡಬೇಕೆಂದು ತಿಳಿದವನಾಗಿರಬೇಕು. ಕುಲೀನನೂ, ಶೀಲಸಂಪನ್ನನೂ, ಕ್ಷಮಾವಂತನೂ, ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದವನೂ ಆಗಿರಬೇಕು.

12081029a ಏತೇ ಹ್ಯಮಾತ್ಯಾಃ ಕರ್ತವ್ಯಾಃ ಸರ್ವಕರ್ಮಸ್ವವಸ್ಥಿತಾಃ|

12081029c ಪೂಜಿತಾಃ ಸಂವಿಭಕ್ತಾಶ್ಚ ಸುಸಹಾಯಾಃ ಸ್ವನುಷ್ಠಿತಾಃ||

ಹೀಗೆ ತಮ್ಮ ತಮ್ಮ ಕರ್ಮಗಳಲ್ಲಿ ತೊಡಗಿಕೊಂಡು ಗೌರವಿಸಲ್ಪಟ್ಟು ಒಗ್ಗಟ್ಟಿನಲ್ಲಿರುವ ಅಮಾತ್ಯರು ನಿನಗೆ ಒಳ್ಳೆಯ ಸಹಾಯಕ್ಕೆ ಬರುತ್ತಾರೆ.

12081030a ಕೃತ್ಸ್ನಮೇತೇ ವಿನಿಕ್ಷಿಪ್ತಾಃ ಪ್ರತಿರೂಪೇಷು ಕರ್ಮಸು|

12081030c ಯುಕ್ತಾ ಮಹತ್ಸು ಕಾರ್ಯೇಷು ಶ್ರೇಯಾಂಸ್ಯುತ್ಪಾದಯಂತಿ ಚ||

ಅವರಿಗೆ ಅನುರೂಪ ಕರ್ಮಗಳಲ್ಲಿ ಅವರನ್ನು ತೊಡಗಿಸಿಕೊಂಡರೆ ಅವರು ಆ ಕಾರ್ಯವನ್ನು ಮಾಡಿಮುಗಿಸುವುದಲ್ಲದೇ ಮುಂದೆ ಅದಕ್ಕಿಂತಲೂ ಹೆಚ್ಚಿನ ಕಾರ್ಯಗಳಲ್ಲಿ ತೊಡಗಿ ರಾಜನ ಶ್ರೇಯಸ್ಸನ್ನು ವೃದ್ಧಿಗೊಳಿಸುವುದರಲ್ಲಿ ತೊಡಗುತ್ತಾರೆ.

12081031a ಏತೇ ಕರ್ಮಾಣಿ ಕುರ್ವಂತಿ ಸ್ಪರ್ಧಮಾನಾ ಮಿಥಃ ಸದಾ|

12081031c ಅನುತಿಷ್ಠಂತಿ ಚೈವಾರ್ಥಾನಾಚಕ್ಷಾಣಾಃ ಪರಸ್ಪರಮ್||

ಇವರು ಸದಾ ಸ್ಪರ್ಧಿಸುತ್ತಾ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಪರಸ್ಪರರಿಂದ ಕೇಳಿಕೊಂಡು ರಾಜನ ಅರ್ಥಸಿದ್ಧಿಗಾಗಿ ಪ್ರಯತ್ನಿಸುತ್ತಿರುತ್ತಾರೆ.

12081032a ಜ್ಞಾತಿಭ್ಯಶ್ಚೈವ ಬಿಭ್ಯೇಥಾ ಮೃತ್ಯೋರಿವ ಯತಃ ಸದಾ|

12081032c ಉಪರಾಜೇವ ರಾಜರ್ಧಿಂ ಜ್ಞಾತಿರ್ನ ಸಹತೇ ಸದಾ||

ಕುಲದವರ[8] ವಿಷಯದಲ್ಲಿ ಮೃತ್ಯುವಿನ ಕುರಿತು ಹೇಗೋ ಹಾಗೆ ಭಯದಿಂದಿರಬೇಕು. ಉಪರಾಜರಾಗಿರುವವನು ತನ್ನದೇ ಕುಲದ ರಾಜನ ಅಭಿವೃದ್ಧಿಯನ್ನು ಯಾವಾಗಲೂ ಸಹಿಸಿಕೊಳ್ಳುವುದಿಲ್ಲ.

12081033a ಋಜೋರ್ಮೃದೋರ್ವದಾನ್ಯಸ್ಯ ಹ್ರೀಮತಃ ಸತ್ಯವಾದಿನಃ|

12081033c ನಾನ್ಯೋ ಜ್ಞಾತೇರ್ಮಹಾಬಾಹೋ ವಿನಾಶಮಭಿನಂದತಿ||

ಸರಳನೂ, ಕೋಮಲಸ್ವಭಾವದವನೂ, ಉದಾರಿಯೂ, ಲಜ್ಜಾಶೀಲನೂ ಮತ್ತು ಸತ್ಯವಾದಿಯೂ ಆದ ರಾಜನ ವಿನಾಶವನ್ನು ಅವನ ಕುಲದವರಲ್ಲದೇ ಬೇರೆ ಯಾರು ತಾನೇ ಅಭಿನಂದಿಸುತ್ತಾರೆ?

12081034a ಅಜ್ಞಾತಿತಾ ನಾತಿಸುಖಾ ನಾವಜ್ಞೇಯಾಸ್ತ್ವತಃ ಪರಮ್|

12081034c ಅಜ್ಞಾತಿಮಂತಂ ಪುರುಷಂ ಪರೇ ಪರಿಭವಂತ್ಯುತ||

ಆದರೆ ದಾಯಾದಿಗಳಲ್ಲಿ ಈ ದೋಷವಿದ್ದರೂ ದಾಯಾದಿಗಳಿಂದ ಸಂಪೂರ್ಣ ವಿಹೀನನಾಗಿದ್ದರೂ ರಾಜನು ಸುಖಿಯಾಗಿರುವುದಿಲ್ಲ. ಆದುದರಿಂದ ದಾಯಾದಿಗಳನ್ನು ಯಾವಕಾರಣಕ್ಕೂ ಅನಾದರಿಸಬಾರದು. ದಾಯಾದಿಗಳೇ ಇಲ್ಲದ ರಾಜನನ್ನು ಕುಲದ ಹೊರಗಿನವರು ಅಥವಾ ಶತ್ರುಗಳು ಬಹಳವಾಗಿ ಪೀಡಿಸುತ್ತಿರುತ್ತಾರೆ.

12081035a ನಿಕೃತಸ್ಯ ನರೈರನ್ಯೈರ್ಜ್ಞಾತಿರೇವ ಪರಾಯಣಮ್|

12081035c ನಾನ್ಯೈರ್ನಿಕಾರಂ ಸಹತೇ ಜ್ಞಾತೇರ್ಜ್ಞಾತಿಃ ಕದಾ ಚನ||

12081036a ಆತ್ಮಾನಮೇವ ಜಾನಾತಿ ನಿಕೃತಂ ಬಾಂಧವೈರಪಿ|

12081036c ತೇಷು ಸಂತಿ ಗುಣಾಶ್ಚೈವ ನೈರ್ಗುಣ್ಯಂ ತೇಷು ಲಕ್ಷ್ಯತೇ||

ಇನ್ನೊಬ್ಬನಿಂದ ವಂಚಿತನಾದವನೆ ತನ್ನ ಕುಲದವರೇ ಆಶ್ರಯರಾಗುತ್ತಾರೆ. ಒಂದೇ ಕುಲದವರಲ್ಲಿ ಯಾರಿಗೂ ಕುಲದ ಹೊರಗಿನವರಿಂದ ಯಾವುದೇ ತೊಂದರೆಯಾದರೂ ಅದನ್ನು ಸಹಿಸುವುದಿಲ್ಲ. ಅವರೆಲ್ಲರೂ ಒಂದಾಗಿ ಹೊರಗಿನವನನ್ನು ಸದೆಬಡಿಯುತ್ತಾರೆ. ಹೀಗೆ ಕುಲದವರಲ್ಲಿ/ದಾಯಾದರಲ್ಲಿ ಗುಣಗಳೂ ಇರುತ್ತವೆ. ಆದುದರಿಂದ ಜ್ಞಾತಿ/ಕುಲ/ದಾಯಾದಿಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಅವರೊಡನೇ ದ್ವೇಷವನ್ನೇ ಕಟ್ಟಿಕೊಳ್ಳಬಾರದು.

12081037a ನಾಜ್ಞಾತಿರನುಗೃಹ್ಣಾತಿ ನಾಜ್ಞಾತಿರ್ದಿಗ್ಧಮಸ್ಯತಿ|

12081037c ಉಭಯಂ ಜ್ಞಾತಿಲೋಕೇಷು ದೃಶ್ಯತೇ ಸಾಧ್ವಸಾಧು ಚ||

ಜ್ಞಾತಿಗಳಿಲ್ಲದವನು ಅನುಗ್ರಹಿಸುವುದಿಲ್ಲ ಮತ್ತು ನಮಸ್ಕರಿಸುವುದಿಲ್ಲ. ಜ್ಞಾತಿಗಳಿದ್ದವನು ಇವೆರಡನ್ನೂ ಮಾಡುತ್ತಾನೆ. ಅಂತೆಯೇ ತೊಂದರೆಯನ್ನೂ ಮಾಡುತ್ತಾನೆ. ಆದುದರಿಂದ ಜ್ಞಾತಿಗಳ ವಿಷಯದಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ.

12081038a ತಾನ್ಮಾನಯೇತ್ಪೂಜಯೇಚ್ಚ ನಿತ್ಯಂ ವಾಚಾ ಚ ಕರ್ಮಣಾ|

12081038c ಕುರ್ಯಾಚ್ಚ ಪ್ರಿಯಮೇತೇಭ್ಯೋ ನಾಪ್ರಿಯಂ ಕಿಂ ಚಿದಾಚರೇತ್||

ರಾಜನಾದವನು ನಿತ್ಯವೂ ಜ್ಞಾತಿಗಳನ್ನು ಮಾತು ಮತ್ತು ಕರ್ಮಗಳಿಂದ ಪೂಜಿಸಬೇಕು. ಇವರಿಗೆ ಪ್ರಿಯವಾದವುಗಳನ್ನೇ ಮಾಡಬೇಕಾದುದಲ್ಲದೆ ಎಂದೂ ಅಪ್ರಿಯವಾದುದನ್ನು ಮಾಡಬಾರದು.

12081039a ವಿಶ್ವಸ್ತವದವಿಶ್ವಸ್ತಸ್ತೇಷು ವರ್ತೇತ ಸರ್ವದಾ|

12081039c ನ ಹಿ ದೋಷೋ ಗುಣೋ ವೇತಿ ನಿಸ್ಪೃಕ್ತಸ್ತೇಷು ದೃಶ್ಯತೇ||

ಜ್ಞಾತಿಯವರಲ್ಲಿ ಸ್ವಲ್ಪವೂ ವಿಶ್ವಾಸವೇ ಇಲ್ಲದಿದ್ದರೂ ಅವರ ಎದಿರು ಅತ್ಯಂತ ವಿಶ್ವಾಸಿಯಾಗಿರುವಂತೆಯೇ ವರ್ತಿಸಬೇಕು. ಜ್ಞಾತಿಗಳಲ್ಲಿ ಗುಣವಿರುವುದೇ ಅಥವಾ ದೋಷವಿದೆಯೇ ಎನ್ನುವುದನ್ನು ನಿರ್ಣಯಿಸುವ ಅವಶ್ಯಕತೆಯೂ ಇರುವುದಿಲ್ಲ.

12081040a ತಸ್ಯೈವಂ ವರ್ತಮಾನಸ್ಯ ಪುರುಷಸ್ಯಾಪ್ರಮಾದಿನಃ|

12081040c ಅಮಿತ್ರಾಃ ಸಂಪ್ರಸೀದಂತಿ ತಥಾ ಮಿತ್ರೀಭವಂತ್ಯಪಿ||

ಹೀಗೆ ಜಾಗರೂಕನಾಗಿ ನಡೆದುಕೊಳ್ಳುವ ಪುರುಷನ ಶತ್ರುಗಳೂ ಪ್ರಸನ್ನರಾಗಿರುತ್ತಾರೆ ಮತ್ತು ಶತ್ರುಗಳೂ ಮಿತ್ರರೇ ಆಗುತ್ತಾರೆ.

12081041a ಯ ಏವಂ ವರ್ತತೇ ನಿತ್ಯಂ ಜ್ಞಾತಿಸಂಬಂಧಿಮಂಡಲೇ|

12081041c ಮಿತ್ರೇಷ್ವಮಿತ್ರೇಷ್ವೈಶ್ವರ್ಯೇ ಚಿರಂ ಯಶಸಿ ತಿಷ್ಠತಿ||

ಜ್ಞಾತಿ-ಸಂಬಂಧಿ ಮಂಡಲದಲ್ಲಿ ನಿತ್ಯವೂ ಹೀಗೆಯೇ ನಡೆದುಕೊಳ್ಳಬೇಕು. ಮಿತ್ರ-ಅಮಿತ್ರರ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುವವರು ಬಹುಕಾಲದ ವರೆಗೆ ಐಶ್ವರ್ಯ ಮತ್ತು ಯಶಸ್ಸುಗಳಲ್ಲಿ ಸ್ಥಿರರಾಗಿರುತ್ತಾರೆ.”

 ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಏಕಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಂಭತ್ತೊಂದನೇ ಅಧ್ಯಾಯವು.

Beautiful pink tropical flowers on ... | Stock image | Colourbox

[1] ನಿಬಂಧನೆಗಳೊಂದಿಗೆ ಪರಸ್ಪರರ ಪ್ರಯೋಜನವನ್ನು ಉದ್ದೇಶಿಸಿ ಮಾಡಿಕೊಂಡ ಮೈತ್ರಿ.

[2] ವಂಶಸಂಬಂಧದ ಪರಂಪರೆಯಾಗಿ ಬಂದ ಮೈತ್ರಿ

[3] ಹುಟ್ಟಿದಾಗಿನಿಂದ ಜೊತೆಯಿರುವುದು, ಒಟ್ಟಿಗೇ ಕೆಲಸ ಮಾಡುವುದು, ಈ ಕಾರಣಗಳಿಂದ ಸ್ವಭಾವೈಕ್ಯದಿಂದ ಉಂಟಾಗುವ ಮೈತ್ರಿ

[4] ಮನಃಪೂರ್ವಕ ಮೈತ್ರಿಯಿಲ್ಲದಿದ್ದರೂ ಸಂದರ್ಭಾನುಸಾರವಾಗಿ ಮಿತ್ರನಂತೆ ವರ್ತಿಸುವುದು

[5] ಲಕ್ಷ್ಯಾಚೈವ ಸನಾತನೀ| ಎಂಬ ಪಾಠಾಂತರವಿದೆ.

[6] ಯಸ್ತು ವೃದ್ಧ್ಯಾ ನ ತೃಪ್ಯೇತ| ಎಂಬ ಪಾಠಾಂತರವಿದೆ.

[7] ಪ್ರಕೃತಿಗಳು ಮೂರು ವಿಧ: ಅರ್ಥಪ್ರಕೃತಿ, ಧರ್ಮಪ್ರಕೃತಿ ಮತ್ತು ಧರ್ಮ-ಅರ್ಥಪ್ರಕೃತಿ. ಕೃಷಿರ್ವಣಿಕ್ಪಥೋ ದುರ್ಗಂ ಸೇತುಃ ಕುಂಜರಬಂಧನಂ| ಖನ್ಯಾಕರರಾದಾನಂ ಶೂನ್ಯಾನಾಂ ಚ ನಿವೇಶನಮ್| ಅಷ್ಟೌ ಸಂಧಾನಕರ್ಮಾಣಿ ಪ್ರತ್ಯುಕ್ತಾನಿ ಮನೀಷಿಭಿಃ|| ಕೃಷಿ, ವಾಣಿಜ್ಯ, ದುರ್ಗ, ಆಣೆಕಟ್ಟು, ಕಾಡಿನಲ್ಲಿ ಆನೆಗಳನ್ನು ಹಿಡಿಯುವ ಜಾಗ, ಲೋಹಗಳ ಗಣಿಗಳು, ತೆರಿಗೆ, ಶೂನ್ಯಸ್ಥಾನಗಳು – ಇವು ಅರ್ಥಪ್ರಾಪ್ತಿ ಸಾಧಕ ಸ್ಥಾನಗಳು.

ದುರ್ಗಾಧ್ಯಕ್ಷೋ ಬಲಾಧ್ಯಕ್ಷೋ ಧರ್ಮಾಧ್ಯಕ್ಷಶ್ಚಮೂಪತಿಃ| ಪುರೋಧಾವೈದ್ಯದೈವಜ್ಞಾ ಸಪ್ತ ಪ್ರಕೃತಯಸ್ತ್ಚಿಮಾಃ|| ದುರ್ಗಾಧ್ಯಕ್ಷ, ಬಲಾಧ್ಯಕ್ಷ, ಧರ್ಮಾಧ್ಯಕ್ಷ, ಸೇನಾಪತಿ, ಪುರೋಹಿತ, ವೈದ್ಯ, ಜ್ಯೋತಿಷಿ – ಈ ಏಳು ಪ್ರಕೃತಿಗಳಲ್ಲಿ ಧರ್ಮಾಧ್ಯಕ್ಷನು ಧರ್ಮಪ್ರಕೃತಿ. ಉಳಿದವರು ಅರ್ಥ-ಧರ್ಮಪ್ರಕೃತಿಗಳು. ಇವರೆಲ್ಲರ ಮೇಲ್ವಿಚಾರಕನು ಮಂತ್ರಿ.

[8] ದಾಯಾದಿಗಳ ವಿಷಯದಲ್ಲಿ?

Comments are closed.