ಮಹಾಭಾರತ ಸಾರಾಂಶ

ನೈಮಿಷಾರಣ್ಯವಾಸೀ ಮುನಿಗಳಿಗೆ ಸೂತ ಪುರಾಣಿಕ ಉಗ್ರಶ್ರವನು ಮಹಾಭಾರತದ ಸಾರಾಂಶವನ್ನು ಹೇಳಿದನು [ಆದಿಪರ್ವ, ಅನುಕ್ರಮಣಿಕಾ ಪರ್ವ, ಅಧ್ಯಾಯ ೧, ಶ್ಲೋಕ ೬೫-೯೫].

[1]01001065a ದುರ್ಯೋಧನೋ ಮನ್ಯುಮಯೋ ಮಹಾದ್ರುಮಃ

         ಸ್ಕಂಧಃ ಕರ್ಣಃ ಶಕುನಿಸ್ತಸ್ಯ ಶಾಖಾಃ |

01001065c ದುಃಶಾಸನಃ ಪುಷ್ಪಫಲೇ ಸಮೃದ್ಧೇ

         ಮೂಲಂ ರಾಜಾ ಧೃತರಾಷ್ಟ್ರೋಽಮನೀಷೀ ||

ದುರ್ಯೋಧನನು ಕ್ರೋಧದ ಮಹಾವೃಕ್ಷ. ಕರ್ಣನು ಅದರ ಕಾಂಡ. ಶಕುನಿಯು ಅದರ ರೆಂಬೆ. ದುಃಶಾಸನನು ಸಮೃದ್ಧ ಪುಷ್ಪ-ಫಲ ಮತ್ತು ಅಜ್ಞಾನಿ ರಾಜ ಧೃತರಾಷ್ಟ್ರನು ಅದರ ಬೇರು.

01001066a ಯುಧಿಷ್ಠಿರೋ ಧರ್ಮಮಯೋ ಮಹಾದ್ರುಮಃ

         ಸ್ಕಂಧೋಽರ್ಜುನೋ ಭೀಮಸೇನೋಽಸ್ಯ ಶಾಖಾಃ |

01001066c ಮಾದ್ರೀಸುತೌ ಪುಷ್ಪಫಲೇ ಸಮೃದ್ಧೇ

         ಮೂಲಂ ಕೃಷ್ಣೋ ಬ್ರಹ್ಮ ಚ ಬ್ರಾಹ್ಮಣಾಶ್ಚ ||

ಯುಧಿಷ್ಠಿರನು ಧರ್ಮದ ಮಹಾವೃಕ್ಷ. ಅರ್ಜುನನು ಅದರ ಕಾಂಡ. ಭೀಮಸೇನನು ಅದರ ರೆಂಬೆ. ಮಾದ್ರಿಯ ಮಕ್ಕಳೀರ್ವರು ಸಮೃದ್ಧ ಪುಷ್ಪ-ಫಲಗಳು ಮತ್ತು ಕೃಷ್ಣ, ಬ್ರಹ್ಮ ಮತ್ತು ಬ್ರಾಹ್ಮಣರು ಅದರ ಬೇರುಗಳು.

01001067a ಪಾಂಡುರ್ಜಿತ್ವಾ ಬಹೂನ್ದೇಶಾನ್ಯುಧಾ ವಿಕ್ರಮಣೇನ ಚ|

01001067c ಅರಣ್ಯೇ ಮೃಗಯಾಶೀಲೋ ನ್ಯವಸತ್ಸಜನಸ್ತದಾ ||

01001068a ಮೃಗವ್ಯವಾಯನಿಧನೇ ಕೃಚ್ಛ್ರಾಂ ಪ್ರಾಪ ಸ ಆಪದಂ |

01001068c ಜನ್ಮಪ್ರಭೃತಿ ಪಾರ್ಥಾನಾಂ ತತ್ರಾಚಾರವಿಧಿಕ್ರಮಃ ||

01001069a ಮಾತ್ರೋರಭ್ಯುಪಪತ್ತಿಶ್ಚ ಧರ್ಮೋಪನಿಷದಂ ಪ್ರತಿ |

01001069c ಧರ್ಮಸ್ಯ ವಾಯೋಃ ಶಕ್ರಸ್ಯ ದೇವಯೋಶ್ಚ ತಥಾಶ್ವಿನೋಃ ||

[2]01001070a ತಾಪಸೈಃ ಸಹ ಸಂವೃದ್ಧಾ ಮಾತೃಭ್ಯಾಂ ಪರಿರಕ್ಷಿತಾಃ |

01001070c ಮೇಧ್ಯಾರಣ್ಯೇಷು ಪುಣ್ಯೇಷು ಮಹತಾಮಾಶ್ರಮೇಷು ಚ ||

01001071a ಋಷಿಭಿಶ್ಚ ತದಾನೀತಾ ಧಾರ್ತರಾಷ್ಟ್ರಾನ್ಪ್ರತಿ ಸ್ವಯಂ |

01001071c ಶಿಶವಶ್ಚಾಭಿರೂಪಾಶ್ಚ ಜಟಿಲಾ ಬ್ರಹ್ಮಚಾರಿಣಃ ||

01001072a ಪುತ್ರಾಶ್ಚ ಭ್ರಾತರಶ್ಚೇಮೇ ಶಿಷ್ಯಾಶ್ಚ ಸುಹೃದಶ್ಚ ವಃ |

01001072c ಪಾಂಡವಾ ಏತ ಇತ್ಯುಕ್ತ್ವಾ ಮುನಯೋಽಂತರ್ಹಿತಾಸ್ತತಃ ||

ಬೇಟೆಯಲ್ಲಿ ಆಸಕ್ತಿ ಹೊಂದಿದ್ದ ಪಾಂಡುವು ತನ್ನ ಪರಾಕ್ರಮದಿಂದ ಬಹು ದೇಶಗಳನ್ನು ಯುದ್ಧದಲ್ಲಿ ಗೆದ್ದು ತನ್ನವರೊಂದಿಗೆ ಅರಣ್ಯದಲ್ಲಿ ವಾಸಿಸುತ್ತಿದ್ದನು. ಅವನು ಬೇಟೆಯಾಡುತ್ತಿರುವಾಗ ಒಂದು ಆಪತ್ತನ್ನು ತಂದುಕೊಂಡ ನಂತರ ಪಾರ್ಥರ ಜನ್ಮಪ್ರಭೃತಿ ವಿಧಿಕ್ರಮಾಚಾರಗಳನ್ನು ಅಲ್ಲಿಯೇ ನೆರವೇರಿಸಲಾಯಿತು. ತಾಯಂದಿರೀರ್ವರು ಧರ್ಮೋಪನಿಷದದ ಪ್ರಕಾರ ಧರ್ಮ, ವಾಯು, ಶಕ್ರ ಮತ್ತು ಅಶ್ವಿನಿ ದೇವತೆಗಳಿಂದ ಪುತ್ರರನ್ನು ಪಡೆದರು. ಅವರು ದಟ್ಟವಾದ ಅರಣ್ಯದಲ್ಲಿಯ ಪುಣ್ಯಕರ ಮಹಾ ಆಶ್ರಮಗಳಲ್ಲಿ ಇಬ್ಬರೂ ತಾಯಿಂದಿರಿಂದ ಪರಿರಕ್ಷಿತರಾಗಿ ತಾಪಸಿಗಳ ಮಧ್ಯೆ ಬೆಳೆದರು. ಸ್ವಯಂ ಋಷಿಗಳು ಬ್ರಹ್ಮಚಾರಿಗಳಂತೆ ಜಟಿಲ ರೂಪಧರಿಸಿದ್ದ ಮಕ್ಕಳನ್ನು ಧಾರ್ತರಾಷ್ಟ್ರರಲ್ಲಿಗೆ ಕರೆತಂದರು. “ಈ ನಮ್ಮ ಸುಹೃದಯ ಶಿಷ್ಯರು ನಿನ್ನ ತಮ್ಮ ಪಾಂಡುವಿನ ಮಕ್ಕಳು” ಎಂದು ಹೇಳಿ ಆ ಮುನಿಗಳು ಅಲ್ಲಿಯೇ ಅಂತರ್ಹಿತರಾದರು.

01001073a ತಾಂಸ್ತೈರ್ನಿವೇದಿತಾನ್ದೃಷ್ಠ್ವಾ ಪಾಂಡವಾನ್ಕೌರವಾಸ್ತದಾ|

01001073c ಶಿಷ್ಠಾಶ್ಚ ವರ್ಣಾಃ ಪೌರಾ ಯೇ ತೇ ಹರ್ಷಾಚ್ಚುಕ್ರುಶುರ್ಭೃಶಂ||

01001074a ಆಹುಃ ಕೇಚಿನ್ನ ತಸ್ಯೈತೇ ತಸ್ಯೈತ ಇತಿ ಚಾಪರೇ |

01001074c ಯದಾ ಚಿರಮೃತಃ ಪಾಂಡುಃ ಕಥಂ ತಸ್ಯೇತಿ ಚಾಪರೇ ||

01001075a ಸ್ವಾಗತಂ ಸರ್ವಥಾ ದಿಷ್ಟ್ಯಾ ಪಾಂಡೋಃ ಪಶ್ಯಾಮ ಸಂತತಿಂ|

01001075c ಉಚ್ಯತಾಂ ಸ್ವಾಗತಮಿತಿ ವಾಚೋಽಶ್ರೂಯಂತ ಸರ್ವಶಃ ||

01001076a ತಸ್ಮಿನ್ನುಪರತೇ ಶಬ್ದೇ ದಿಶಃ ಸರ್ವಾ ವಿನಾದಯನ್ |

01001076c ಅಂತರ್ಹಿತಾನಾಂ ಭೂತಾನಾಂ ನಿಸ್ವನಸ್ತುಮುಲೋಽಭವತ್||

01001077a ಪುಷ್ಪವೃಷ್ಟಿಃ ಶುಭಾ ಗಂಧಾಃ ಶಂಖದುಂದುಭಿನಿಸ್ವನಾಃ |

01001077c ಆಸನ್ಪ್ರವೇಶೇ ಪಾರ್ಥಾನಾಂ ತದದ್ಭುತಮಿವಾಭವತ್ ||

01001078a ತತ್ಪ್ರೀತ್ಯಾ ಚೈವ ಸರ್ವೇಷಾಂ ಪೌರಾಣಾಂ ಹರ್ಷಸಂಭವಃ |

01001078c ಶಬ್ದ ಆಸೀನ್ಮಹಾಂಸ್ತತ್ರ ದಿವಸ್ಪೃತ್ಕೀರ್ತಿವರ್ಧನಃ ||

01001079a ತೇಽಪ್ಯಧೀತ್ಯಾಖಿಲಾನ್ವೇದಾನ್ ಶಾಸ್ತ್ರಾಣಿ ವಿವಿಧಾನಿ ಚ|

01001079c ನ್ಯವಸನ್ಪಾಂಡವಾಸ್ತತ್ರ ಪೂಜಿತಾ ಅಕುತೋಭಯಾಃ ||

ಅವರು ಕರೆದುತಂದು ಬಿಟ್ಟುಹೋದ ಪಾಂಡವರನ್ನು ಕಂಡು ಕೌರವರು, ಶಿಷ್ಟರು, ಮತ್ತು ಎಲ್ಲಾ ವರ್ಣದ ಪೌರರೂ ಹರ್ಷಭರಿತರಾದರು. ಕೆಲವರು “ಚಿರಮೃತ ಪಾಂಡುವಿಗೆ ಮಕ್ಕಳು ಹೇಗೆ? ಇವರು ಅವನ ಮಕ್ಕಳಲ್ಲ!” ಎಂದು ಹೇಳಿದರೆ ಕೆಲವರು ಇವರು ಅವನದ್ದೇ ಮಕ್ಕಳು ಎಂದು ಒಪ್ಪಿಕೊಂಡರು. “ಪಾಂಡುವಿನ ಸಂತತಿಯನ್ನು ನೋಡಲು ದೊರೆತ ನಾವೇ ಧನ್ಯರು ಅವರಿಗೆ ಸರ್ವಥಾ ಸ್ವಾಗತ. ನಾವೆಲ್ಲರೂ ಸ್ವಾಗತವೆನ್ನುತ್ತೇವೆ” ಎನ್ನುವುದು ಸರ್ವದಿಶೆಯಲ್ಲಿಯೂ ಕೇಳಿಬರುತ್ತಿತ್ತು. ಸರ್ವ ದಿಶೆಯಲ್ಲಿಯೂ ಈ ಶಬ್ಧನಿನಾದಗಳು ಹೆಚ್ಚಾಗುತ್ತಿರುವಾಗ ಅಂತರ್ಹಿತ ಭೂತಗಳ ಧ್ವನಿಯು ತುಮುಲಗಳನ್ನು ಶಾಂತಗೊಳಿಸಿತು. ಪಾರ್ಥರು ಪ್ರವೇಶಿಸುತ್ತಿದ್ದಂತೆ ಹಲವಾರು ಅದ್ಭುತಗಳು ನಡೆದವು: ಪುಷ್ಪವೃಷ್ಟಿಯಾಯಿತು, ಮಂಗಳಕರ ಸುಗಂಧವು ತುಂಬಿಕೊಂಡಿತು, ಮತ್ತು ಶಂಖ-ದುಂದುಭಿಗಳ ಸುಸ್ವರವು ಕೇಳಿಸತೊಡಗಿತು. ತತ್ಪ್ರೀತ ಸರ್ವ ಪೌರರ ಹರ್ಷಸಂಭವವಾದ ಮಹತ್ತರ ಶಬ್ಧವು ಸ್ವರ್ಗದಲ್ಲಿಯೂ ಕೇಳಿಬರುವಷ್ಟು ಜೋರಾಗಿತ್ತು. ಪಾಂಡವರು ಅಲ್ಲಿ ಯಾರಿಂದಲೂ ಕಡೆಗಣಿಸಲ್ಪಡದೇ, ಎಲ್ಲರಿಂದ ಪೂಜಿತರಾಗಿ ವಾಸಿಸುತ್ತಿದ್ದು ಅಖಿಲ ವೇದ ಮತ್ತು ವಿವಿಧ ಶಾಸ್ತ್ರಗಳ ಅಧ್ಯಯನ ಮಾಡಿದರು.

01001080a ಯುಧಿಷ್ಠಿರಸ್ಯ ಶೌಚೇನ ಪ್ರೀತಾಃ ಪ್ರಕೃತಯೋಽಭವನ್ |

01001080c ಧೃತ್ಯಾ ಚ ಭೀಮಸೇನಸ್ಯ ವಿಕ್ರಮೇಣಾರ್ಜುನಸ್ಯ ಚ||

01001081a ಗುರುಶುಶ್ರೂಷಯಾ ಕುಂತ್ಯಾ ಯಮಯೋರ್ವಿನಯೇನ ಚ |

01001081c ತುತೋಷ ಲೋಕಃ ಸಕಲಸ್ತೇಷಾಂ ಶೌರ್ಯಗುಣೇನ ಚ ||

ಯುಧಿಷ್ಠಿರನ ಪವಿತ್ರತೆ[3], ಭೀಮಸೇನನ ಧೈರ್ಯ[4], ಅರ್ಜುನನ ವಿಕ್ರಮ[5], ಕುಂತಿಯ ಶುಶ್ರೂಷೆ[6], ಅವಳಿ ಮಕ್ಕಳ ವಿನಯ[7] ಮತ್ತು ಇವೆಲ್ಲವುಗಳನ್ನೂ ಮೀರಿದ ಅವರ ಶೌರ್ಯ[8]ಗುಣಗಳಿಂದ ಎಲ್ಲ ಜನರೂ ಸಂತುಷ್ಟರಾದರು.

01001082a ಸಮವಾಯೇ ತತೋ ರಾಜ್ಞಾಂ ಕನ್ಯಾಂ ಭರ್ತೃಸ್ವಯಂವರಾಂ|

01001082c ಪ್ರಾಪ್ತವಾನರ್ಜುನಃ ಕೃಷ್ಣಾಂ ಕೃತ್ವಾ ಕರ್ಮ ಸುದುಷ್ಕರಂ ||

01001083a ತತಃ ಪ್ರಭೃತಿ ಲೋಕೇಽಸ್ಮಿನ್ಪೂಜ್ಯಃ ಸರ್ವಧನುಷ್ಮತಾಂ |

01001083c ಆದಿತ್ಯೈವ ದುಷ್ಪ್ರೇಕ್ಷ್ಯಃ ಸಮರೇಷ್ವಪಿ ಚಾಭವತ್ ||

01001084a ಸ ಸರ್ವಾನ್ಪಾರ್ಥಿವಾನ್ಜಿತ್ವಾ ಸರ್ವಾಂಶ್ಚ ಮಹತೋ ಗಣಾನ್|

01001084c ಆಜಹಾರಾರ್ಜುನೋ ರಾಜ್ಞೇ ರಾಜಸೂಯಂ ಮಹಾಕ್ರತುಂ||

01001085a ಅನ್ನವಾನ್ದಕ್ಷಿಣಾವಾಂಶ್ಚ ಸರ್ವೈಃ ಸಮುದಿತೋ ಗುಣೈಃ |

01001085c ಯುಧಿಷ್ಠಿರೇಣ ಸಂಪ್ರಾಪ್ತೋ ರಾಜಸೂಯೋ ಮಹಾಕ್ರತುಃ||

01001086a ಸುನಯಾದ್ವಾಸುದೇವಸ್ಯ ಭೀಮಾರ್ಜುನಬಲೇನ ಚ |

01001086c ಘಾತಯಿತ್ವಾ ಜರಾಸಂಧಂ ಚೈದ್ಯಂ ಚ ಬಲಗರ್ವಿತಂ ||

ಸಮಯಾನಂತರದಲ್ಲಿ ಅರ್ಜುನನು ಸ್ವಯಂವರದಲ್ಲಿ ದುಷ್ಕರ ಕಾರ್ಯವೊಂದನ್ನು ಎಸಗಿ ರಾಜಕನ್ಯೆ ದ್ರೌಪದಿ ಕೃಷ್ಣೆಯನ್ನು ಪತ್ನಿಯನ್ನಾಗಿ ಪಡೆದನು. ಅಂದಿನಿಂದ ಅವನು ಲೋಕದ ಸರ್ವಧನುಷ್ಮಂತರಲ್ಲಿ ಪೂಜನೀಯ ಮತ್ತು ಸಮರದಲ್ಲಿ ಆದಿತ್ಯನಂತೆ ದುಷ್ಪ್ರೇಕ್ಷ ಎನ್ನಿಸಿಕೊಂಡನು. ಅರ್ಜುನನು ಸರ್ವ ಪಾರ್ಥಿವರನ್ನೂ ಎಲ್ಲರ ಮಹತ್ತರ ಸೈನ್ಯಗಳನ್ನೂ ಗೆದ್ದು ರಾಜ ಯುಧಿಷ್ಠಿರನ ರಾಜಸೂಯ ಮಹಾಕ್ರತುವಿಗೆ ಸಹಾಯಮಾಡಿದನು. ವಾಸುದೇವನ ಸುನೀತಿ ಮತ್ತು ಭೀಮಾರ್ಜುನರ ಬಲದಿಂದ ಬಲಗರ್ವಿತ ಜರಾಸಂಧ ಮತ್ತು ಚೈದ್ಯರನ್ನು ಸಂಹರಿಸಿ, ಯುಧಿಷ್ಠಿರನು ಅನ್ನ-ದಕ್ಷಿಣೆ ಮತ್ತು ಸರ್ವಗುಣಯುಕ್ತ[9] ರಾಜಸೂಯ ಮಹಾಕ್ರತುವನ್ನು ನೆರವೇರಿಸಿದನು.

01001087a ದುರ್ಯೋಧನಮುಪಾಗಚ್ಛನ್ನರ್ಹಣಾನಿ ತತಸ್ತತಃ |

01001087c ಮಣಿಕಾಂಚನರತ್ನಾನಿ ಗೋಹಸ್ತ್ಯಶ್ವಧನಾನಿ ಚ ||

[10]01001088a ಸಮೃದ್ಧಾಂ ತಾಂ ತಥಾ ದೃಷ್ಟ್ವಾ ಪಾಂಡವಾನಾಂ ತದಾ ಶ್ರಿಯಂ|

01001088c ಈರ್ಷ್ಯಾಸಮುತ್ಥಃ ಸುಮಹಾಂಸ್ತಸ್ಯ ಮನ್ಯುರಜಾಯತ ||

01001089a ವಿಮಾನಪ್ರತಿಮಾಂ ಚಾಪಿ ಮಯೇನ ಸುಕೃತಾಂ ಸಭಾಂ |

01001089c ಪಾಂಡವಾನಾಮುಪಹೃತಾಂ ಸ ದೃಷ್ಟ್ವಾ ಪರ್ಯತಪ್ಯತ ||

01001090a ಯತ್ರಾವಹಸಿತಶ್ಚಾಸೀತ್ಪ್ರಸ್ಕಂದನ್ನಿವ ಸಂಭ್ರಮಾತ್ |

01001090c ಪ್ರತ್ಯಕ್ಷಂ ವಾಸುದೇವಸ್ಯ ಭೀಮೇನಾನಭಿಜಾತವತ್ ||

01001091a ಸ ಭೋಗಾನ್ವಿವಿಧಾನ್ಭುಂಜನ್ರತ್ನಾನಿ ವಿವಿಧಾನಿ ಚ|

01001091c ಕಥಿತೋ ಧೃತರಾಷ್ಟ್ರಸ್ಯ ವಿವರ್ಣೋ ಹರಿಣಃ ಕೃಶಃ ||

ಆ ಸಮಯದಲ್ಲಿ ಮಣಿ, ಕಾಂಚನ, ರತ್ನ, ಗೋವು, ಆನೆ ಮತ್ತು ಅಶ್ವಧನಗಳನ್ನೊಡಗೂಡಿದ ಪಾಂಡವರ ಸಮೃದ್ಧ ಸಂಪತ್ತನ್ನು ನೋಡಿದ ದುರ್ಯೋಧನನಲ್ಲಿ ಅಸೂಯೆ-ಕೋಪಗಳುಂಟಾದವು. ಪಾಂಡವರಿಗೆ ಉಡುಗೊರೆಯಾಗಿ ದೊರೆತಿದ್ದ ಮಯ ಸುನಿರ್ಮಿತ ವಿಮಾನಸದೃಶ ಸಭೆಯನ್ನು ನೋಡಿ ಅವನು ಇನ್ನೂ ಹೆಚ್ಚು ಬೆಂದನು. ಅಲ್ಲಿಯೇ, ವಾಸುದೇವನ ಪ್ರತ್ಯಕ್ಷದಲ್ಲಿ, ಭ್ರಮೆಗೊಂಡು ಜಾರಿ ಬಿದ್ದಾಗ ಅವನು ಭೀಮಸೇನನಿಂದ ಅವಹೇಳನೆಗೊಳಪಟ್ಟನು. ವಿವಿಧ ಭುಂಜನ-ರತ್ನಗಳನ್ನು ಭೋಗಿಸುತ್ತಿದ್ದರೂ ಅವನು ವಿವರ್ಣನಾಗಿ ಕೃಶನಾಗುತ್ತಿದ್ದಾನೆ ಎಂದು ಧೃತರಾಷ್ಟ್ರನಿಗೆ ತಿಳಿಯಿತು.

01001092a ಅನ್ವಜಾನಾತ್ತತೋ ದ್ಯೂತಂ ಧೃತರಾಷ್ಟ್ರಃ ಸುತಪ್ರಿಯಃ |

01001092c ತಚ್ಛ್ರುತ್ವಾ ವಾಸುದೇವಸ್ಯ ಕೋಪಃ ಸಮಭವನ್ಮಹಾನ್ ||

01001093a ನಾತಿಪ್ರೀತಮನಾಶ್ಚಾಸೀದ್ವಿವಾದಾಂಶ್ಚಾನ್ವಮೋದತ |

01001093c ದ್ಯೂತಾದೀನನಯಾನ್ ಘೋರಾನ್ಪ್ರವೃದ್ಧಾಂಶ್ಚಾಪ್ಯುಪೈಕ್ಷತ ||

01001094a ನಿರಸ್ಯ ವಿದುರಂ ದ್ರೋಣಂ ಭೀಷ್ಮಂ ಶಾರದ್ವತಂ ಕೃಪಂ |

01001094c ವಿಗ್ರಹೇ ತುಮುಲೇ ತಸ್ಮಿನ್ನಹನ್ ಕ್ಷತ್ರಂ ಪರಸ್ಪರಂ ||

01001095a ಜಯತ್ಸು ಪಾಂಡುಪುತ್ರೇಷು ಶ್ರುತ್ವಾ ಸುಮಹದಪ್ರಿಯಂ |

01001095c ದುರ್ಯೋಧನಮತಂ ಜ್ಞಾತ್ವಾ ಕರ್ಣಸ್ಯ ಶಕುನೇಸ್ತಥಾ |

01001095e ಧೃತರಾಷ್ಟ್ರಶ್ಚಿರಂ ಧ್ಯಾತ್ವಾ ಸಂಜಯಂ ವಾಕ್ಯಮಬ್ರವೀತ್ ||

ಮಗನ ಮೇಲಿನ ಪ್ರೀತಿಯಿಂದ ಧೃತರಾಷ್ಟ್ರನು ದ್ಯೂತವನ್ನು ಆಜ್ಞಾಪಿಸಿದನು. ಇದನ್ನು ಕೇಳಿದ ವಾಸುದೇವನು ಅತ್ಯಂತ ಕುಪಿತನಾದನು. ವಿವಾದಗಳನ್ನು ಬಯಸದಿದ್ದ ಅವನು ದ್ಯೂತ ಮತ್ತು ಇತರ ಘೋರ ಪ್ರವೃತ್ತಿಗಳನ್ನು ಮೌನವಾಗಿ ಒಪ್ಪಿಕೊಂಡನು. ವಿದುರ, ದ್ರೋಣ, ಭೀಷ್ಮ, ಶಾರದ್ವತ ಕೃಪ ಇವರನ್ನು ನಿರಾಕರಿಸಿ ಘೋರ ಯುದ್ಧದಲ್ಲಿ ಕ್ಷತ್ರಿಯರು ಪರಸ್ಪರರನ್ನು ಸಂಹರಿಸುವಂತೆ ಮಾಡಿದನು.

ಆದಿ ಪರ್ವ, ಪರ್ವಸಂಗ್ರಹ ಪರ್ವ, ಅಧ್ಯಾಯ ೨, ಶ್ಲೋಕ ೨೪-೨೮:

01002024a ಏತಯಾ ಸಂಖ್ಯಯಾ ಹ್ಯಾಸನ್ಕುರುಪಾಂಡವಸೇನಯೋಃ|

01002024c ಅಕ್ಷೌಹಿಣ್ಯೋ ದ್ವಿಜಶ್ರೇಷ್ಠಾಃ ಪಿಂಡೇನಾಷ್ಟಾದಶೈವ ತಾಃ||

01002025a ಸಮೇತಾಸ್ತತ್ರ ವೈ ದೇಶೇ ತತ್ರೈವ ನಿಧನಂ ಗತಾಃ|

01002025c ಕೌರವಾನ್ಕಾರಣಂ ಕೃತ್ವಾ ಕಾಲೇನಾದ್ಭುತಕರ್ಮಣಾ||

ದ್ವಿಜಶ್ರೇಷ್ಠರೇ! ಕುರುಪಾಂಡವರ ಸೇನೆಗಳ ಸಂಖ್ಯೆ ಇಂತಹ ಹದಿನೆಂಟು ಅಕ್ಷೌಹಿಣಿಗಳಾಗಿತ್ತು[11]. ಅದ್ಭುತ ಕರ್ಮಿ ಕಾಲವು ಕೌರವರನ್ನೇ ಕಾರಣವನ್ನಾಗಿ ಮಾಡಿಕೊಂಡು ಅದೇ ಪ್ರದೇಶದಲ್ಲಿ[12] ಅವರೆಲ್ಲರನ್ನೂ ಒಟ್ಟುಮಾಡಿ ಅಲ್ಲಿಯೇ ಎಲ್ಲರನ್ನೂ ನಾಶಮಾಡಿತು.

01002026a ಅಹಾನಿ ಯುಯುಧೇ ಭೀಷ್ಮೋ ದಶೈವ ಪರಮಾಸ್ತ್ರವಿತ್|

01002026c ಅಹಾನಿ ಪಂಚ ದ್ರೋಣಸ್ತು ರರಕ್ಷ ಕುರುವಾಹಿನೀಂ||

01002027a ಅಹನೀ ಯುಯುಧೇ ದ್ವೇ ತು ಕರ್ಣಃ ಪರಬಲಾರ್ದನಃ|

01002027c ಶಲ್ಯೋಽರ್ಧದಿವಸಂ ತ್ವಾಸೀದ್ಗದಾಯುದ್ಧಮತಃ ಪರಂ||

01002028a ತಸ್ಯೈವ ತು ದಿನಸ್ಯಾಂತೇ ಹಾರ್ದಿಕ್ಯದ್ರೌಣಿಗೌತಮಾಃ|

01002028c ಪ್ರಸುಪ್ತಂ ನಿಶಿ ವಿಶ್ವಸ್ತಂ ಜಘ್ನುರ್ಯೌಧಿಷ್ಠಿರಂ ಬಲಂ||

ಪರಮಾಸ್ತ್ರಧಾರಿ ಭೀಷ್ಮನು ಹತ್ತು ದಿವಸ ಯುದ್ಧಮಾಡಿದನು. ದ್ರೋಣನು ಕುರುವಾಹಿನಿಯನ್ನು ಐದು ದಿವಸ ರಕ್ಷಿಸಿದನು. ಪರಬಲರ್ದನ ಕರ್ಣನು ಎರಡು ದಿವಸ ಯುದ್ಧ ಮಾಡಿದನು. ಶಲ್ಯನು ಅರ್ಧ ದಿವಸ ಮತ್ತು ಗದಾಯುದ್ಧವು ನಂತರದ ಅರ್ಧ ದಿವಸದಲ್ಲಿ ನಡೆಯಿತು. ಅದೇ ದಿವಸದ ರಾತ್ರಿ ಹಾರ್ದಿಕ್ಯ, ದ್ರೌಣಿ ಮತ್ತು ಗೌತಮರು ಮಲಗಿದ್ದ ಯುಧಿಷ್ಠಿರನ ಸರ್ವ ಸೇನೆಯನ್ನೂ ಸಂಹರಿಸಿದರು.

***

[1] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಅಸ್ಮಿಂಸ್ತು ಮಾನುಷೇ ಲೋಕೇ ವೈಶಂಪಾಯನ ಉಕ್ತವಾನ್| ಶಿಷ್ಯೋ ವ್ಯಾಸಸ್ಯ ಧರ್ಮಾತ್ಮಾ ಸರ್ವವೇದವಿದಾಂ ವರಃ|| ಏಕಂ ಶತಸಹಸ್ರಂ ತು ಮಯೋಕ್ತಂ ವೈ ನಿಬೋಧತ|| ಅರ್ಥಾತ್: ವ್ಯಾಸಶಿಷ್ಯ ಧರ್ಮಾತ್ಮ ವೈಶಂಪಾಯನನು ಮನುಷ್ಯಲೋಕದಲ್ಲಿ ಇದರ ಪ್ರಚಾರಕನಾದನು. ನಾನೂ ಕೂಡ ಒಂದು ಲಕ್ಷ ಶ್ಲೋಕಗಳ ಪಾಠವನ್ನು ಹೇಳುತ್ತೇನೆ, ಕೇಳಿ!

[2] ಕುಂಭಕೋಣ ಪ್ರತಿಯಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ತತೋ ಧರ್ಮೋಪನಿಷದಃ ಶೃತ್ವಾ ಭರ್ತುಃ ಪ್ರಿಯಾ ಪೃಥಾ| ಧರ್ಮಾನಿಲೇಂದ್ರಾನ್ ಸ್ತುತಿಭಿರ್ಜುಹಾವ ಸುತವಾಂಛಯಾ|| ತದ್ದತ್ತೋಪನಿಷನ್ಮಾದ್ರೀ ಚಾಶ್ವಿನಾವಾಜುಹಾವ ಚ|| ಅರ್ಥಾತ್: ಅನಂತರ ಧರ್ಮೋಪನಿಷತ್ತುಗಳನ್ನು ತಿಳಿದಿದ್ದ ಪತಿಯ ಮಾತನ್ನು ಕೇಳಿ ಪೃಥೆಯು ಮಕ್ಕಳಿಗಾಗಿ ಧರ್ಮ-ಅನಿಲ-ಇಂದ್ರರನ್ನು ಸ್ತುತಿಗಳಿಂದ ಆಹ್ವಾನಿಸಿದಳು. ಅದರ ನಂತರ ಮಾದ್ರಿಯು ಅಶ್ವಿನೀಕುಮಾರರನ್ನು ಆಹ್ವಾನಿಸಿದಳು.

[3] ಆಚಾರಾಪರಿಹಾರಶ್ಚ ಸಂಸರ್ಗಶ್ಚಾಪ್ಯನಿಂದಿತೈಃ| ಆಚಾರೇ ಚ ವ್ಯವಸ್ಥಾನಂ ಶೌಚಮಿತ್ಯಭಿಧೀಯತೇ|| ಅರ್ಥಾತ್ ಶಾಸ್ತ್ರೋಕ್ತವಾದ ಆಚಾರಗಳನ್ನು ಪರಿತ್ಯಾಗಮಾಡದಿರುವುದು, ಸತ್ಪುರುಷರೊಡನೆ ಸಹವಾಸ, ಸದಾಚರದಲ್ಲಿ ದೃಢವಿಶಾಸ – ಇವಕ್ಕೆ ಶೌಚವೆಂದು ಹೆಸರು.

[4] ಇಷ್ಟಾರ್ಥಸಂಪತ್ತೌ ಚಿತ್ತಸ್ಯಾವ್ಕೃತಿರ್ಧೃತಿಃ ಅರ್ಥಾತ್ ಇಷ್ಟವಾದುದೇ ನಡೆಯಲಿ ಅನಿಷ್ಟವಾದುದೇ ನಡೆಯಲಿ – ಮನಸ್ಸನ್ನು ವಿಕಾರಗೊಳಿಸದಿರುವುದೇ ಧೃತಿ ಅಥವಾ ಧೈರ್ಯ.

[5] ಸರ್ವಾತಿಶಯಸಾಮರ್ಥ್ಯಂ ವಿಕ್ರಮಂ ಪರಿಚಕ್ಷತೇ| ಅರ್ಥಾತ್: ಸರ್ವರನ್ನೂ ಮೀರಿಸುವ ಸಾಮರ್ಥ್ಯವಿರುವಿಕೆಯು ವಿಕ್ರಮವೆನಿಸಿಕೊಳ್ಳುತ್ತದೆ.

[6] ವೃತ್ತಾನುವೃತ್ತಿಃ ಶುಶ್ರೂಷಾ| ಅರ್ಥಾತ್: ಸದಾಚಾರಪರಾಯಣರಾದ ಗುರುಜನರನ್ನು ಅನುಸರಣೆಮಾಡಿಕೊಂಡಿರುವುದೇ ಶುಶ್ರೂಷೆ.

[7] ಜಿತೇಂದ್ರಿಯತ್ವಂ ವಿನಯೋಽಥವಾನುದ್ಧತಶೀಲತಾ| ಅರ್ಥಾತ್: ಜಿತೇಂದ್ರಿಯತೆ ಅಥವಾ ಉದ್ಧತನಾಗದಿರುವುದಕ್ಕೆ ವಿನಯವೆಂದು ಕರೆಯುತ್ತಾರೆ.

[8] ಶೌರ್ಯಮಧ್ಯವಸಾಯಸ್ಸ್ಯಾದ್ಬಲಿನೋಽಪಿ ಪರಾಭವೇ| ಅರ್ಥಾತ್: ಶತ್ರುವು ಮಹಾಬಲಿಷ್ಠನಾಗಿದ್ದರೂ ಅವನನ್ನು ಪರಾಜಯಗೊಳಿಸಲು ಮಾಡುವ ಪ್ರಯತ್ನಕ್ಕೆ ಶೌರ್ಯವೆಂದು ಹೆಸರು.

[9] ಆಚಾರ್ಯ, ಬ್ರಹ್ಮಾ, ಋತ್ವಿಕ್, ಸದಸ್ಯರು, ಯಜಮಾನ, ಯಜಮಾನ ಪತ್ನೀ, ಧನಸಂಪತ್ತಿ, ಶ್ರದ್ಧೆ, ಉತ್ಸಾಹ, ವಿಧಿ-ವಿಧಾನಗಳನ್ನು ಯಥಾವತ್ತಾಗಿ ಪರಿಪಾಲಿಸುವುದು ಮತ್ತು ಸದ್ಬುದ್ಧಿ – ಇವೇ ಯಜ್ಞದ ಮಹಾಗುಣಗಳು.

[10] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ವಿಚಿತ್ರಾಣಿ ಚ ವಾಸಾಂಸಿ ಪ್ರಾವಾರಾಭರಣಾನಿ ಚ| ಕಂಬಲಜಿನರತ್ನಾನಿ ರಾಂಕವಾಸ್ತರಣಾನಿ ಚ||

[11] ಇದರ ಪ್ರಕಾರ ಮಹಾಭಾರತ ಯುದ್ಧದಲ್ಲಿ ಒಟ್ಟು ಮೂರುಲಕ್ಷ ತೊಂಭತ್ತಮೂರು ಸಾವಿರದ ಆರುನೂರಾ ಎಪ್ಪತ್ತೆಂಟು (೩,೯೩,೬೭೮) ರಥಗಳು, ಇಷ್ಟೇ ಸಂಖ್ಯೆಯ ಆನೆಗಳು, ಹತ್ತೊಂಭತ್ತು ಲಕ್ಷ ಅರವತ್ತೆಂಟು ಸಾವಿರದ ಮುನ್ನೂರು (೧೯,೬೮,೩೦೦) ಕಾಲ್ದಾಳುಗಳು ಮತ್ತು ಹನ್ನೊಂದುಲಕ್ಷ ಎಂಭತ್ತು ಸಾವಿರದ ಒಂಬೈನೂರಾ ಎಂಭತ್ತು (೧೧,೮೦,೯೮೦) ಕುದುರೆಗಳು ಭಾಗವಹಿಸಿದ್ದವು.

[12] ಸಮಂತಪಂಚಕದಲ್ಲಿ

Leave a Reply

Your email address will not be published. Required fields are marked *