ಮಹಾಭಾರತದ ಘನತೆ

ಸೂತ ಪುರಾಣಿಕ ಉಗ್ರಶ್ರವನು ನೈಮಿಷಾರಣ್ಯ ವಾಸೀ ಮುನಿಗಳಿಗೆ ಮಹಾಭಾರತದ ಘನತೆಯನ್ನು ಈ ರೀತಿ ವರ್ಣಿಸುತ್ತಾನೆ [ಅದಿ ಪರ್ವ, ಅನುಕ್ರಮಣಿಕಾ ಪರ್ವ, ಅಧ್ಯಾಯ ೧, ಶ್ಲೋಕ (೨೪-೨೬]:

01001024a ಆಚಖ್ಯುಃ ಕವಯಃ ಕೇಚಿತ್ಸಂಪ್ರತ್ಯಾಚಕ್ಷತೇ ಪರೇ |

01001024c ಆಖ್ಯಾಸ್ಯಂತಿ ತಥೈವಾನ್ಯೇ ಇತಿಹಾಸಮಿಮಂ ಭುವಿ ||

01001025a ಇದಂ ತು ತ್ರಿಷು ಲೋಕೇಷು ಮಹಜ್ಞಾನಂ ಪ್ರತಿಷ್ಠಿತಂ |

01001025c ವಿಸ್ತರೈಶ್ಚ ಸಮಾಸೈಶ್ಚ ಧಾರ್ಯತೇ ಯದ್ದ್ವಿಜಾತಿಭಿಃ ||

01001026a ಅಲಂಕೃತಂ ಶುಭೈಃ ಶಬ್ದೈಃ ಸಮಯೈರ್ದಿವ್ಯಮಾನುಷೈಃ |

01001026c ಚಂದೋವೃತ್ತೈಶ್ಚ ವಿವಿಧೈರನ್ವಿತಂ ವಿದುಷಾಂ ಪ್ರಿಯಂ ||

ಈ ಹಿಂದೆ ಎಷ್ಟೋ ಕವಿಗಳು ಇದನ್ನು ಬಹಳಷ್ಟು ಬಾರಿ ಹೇಳಿದ್ದಾರೆ. ಅದರಂತೆಯೇ ಈ ಭುವಿಯಲ್ಲಿ ಇನ್ನು ಮುಂದೆಯೂ ಅನ್ಯರು ಈ ಇತಿಹಾಸವನ್ನು ಹೇಳುತ್ತಾರೆ. ಮೂರು ಲೋಕಗಳಲ್ಲಿಯೂ ಇದು ಮಹಾಜ್ಞಾನವೆಂದು ಪ್ರತಿಷ್ಠಿತವಾಗಿದೆ. ವಿಸ್ತಾರ ಮತ್ತು ಸಮಾಸಗಳಲ್ಲಿ ದ್ವಿಜರು ಇದನ್ನು ಉತ್ತಮವಾದುದೆಂದು ಪರಿಗ್ರಹಿಸುತ್ತಾರೆ. ಇದು ಶುಭ ಶಬ್ಧಗಳಿಂದ ಅಲಂಕೃತವಾಗಿದೆ. ಮನುಷ್ಯ ಮತ್ತು ದೇವ ವಿಷಯಗಳೆರಡನ್ನೂ ಒಳಗೊಂಡಿದೆ. ಛಂದ, ಆವೃತ್ತ ಮುಂತಾದ ವಿವಿಧತೆಗಳನ್ನು ಹೊಂದಿದ್ದು ವಿದುಷರಿಗೆ ಪ್ರಿಯವಾದದ್ದಾಗಿದೆ.

ಆದಿ ಪರ್ವ, ಅನುಕ್ರಮಣಿಕಾ ಪರ್ವ, ಶ್ಲೋಕ ೧೯೧-೨೧೦:

01001191 ಸೂತ ಉವಾಚ|

[1]01001191a ಅತ್ರೋಪನಿಷದಂ ಪುಣ್ಯಾಂ ಕೃಷ್ಣದ್ವೈಪಾಯನೋಽಬ್ರವೀತ್|

01001191c ಭಾರತಾಧ್ಯಯನಾತ್ಪುಣ್ಯಾದಪಿ ಪಾದಮಧೀಯತಃ |

01001191e ಶ್ರದ್ದಧಾನಸ್ಯ ಪೂಯಂತೇ ಸರ್ವಪಾಪಾನ್ಯಶೇಷತಃ ||

01001192a ದೇವರ್ಷಯೋ ಹ್ಯತ್ರ ಪುಣ್ಯಾ ಬ್ರಹ್ಮರಾಜರ್ಷಯಸ್ತಥಾ |

01001192c ಕೀರ್ತ್ಯಂತೇ ಶುಭಕರ್ಮಾಣಸ್ತಥಾ ಯಕ್ಷಮಹೋರಗಾಃ ||

01001193a ಭಗವಾನ್ವಾಸುದೇವಶ್ಚ ಕೀರ್ತ್ಯತೇಽತ್ರ ಸನಾತನಃ |

01001193c ಸ ಹಿ ಸತ್ಯಂ ಋತಂ ಚೈವ ಪವಿತ್ರಂ ಪುಣ್ಯಮೇವ ಚ ||

ಸೂತನು ಹೇಳಿದನು: “ಇದು ಕೃಷ್ಣದ್ವೈಪಾಯನನು ಹೇಳಿದ ಪುಣ್ಯ ಉಪನಿಷತ್ತು. ಭಾರತದ ಒಂದೇ ಒಂದು ಶ್ಲೋಕದ ಅಧ್ಯಯನ ಮಾಡುವುದರಿಂದಲೂ ಪುಣ್ಯವು ದೊರೆಯುತ್ತದೆ. ಶ್ರದ್ಧೆಯಿಂದ ಓದುವವನ ಸರ್ವ ಪಾಪಗಳೂ ಅಶೇಷವಾಗಿ ನಾಶವಾಗುತ್ತವೆ. ಈ ಪುಣ್ಯ ಕೃತಿಯಲ್ಲಿ ದೇವರ್ಷಿ, ಬ್ರಹ್ಮರ್ಷಿ, ಮತ್ತು ರಾಜರ್ಷಿಗಳ ಹಾಗೂ ಯಕ್ಷ, ಮಹಾ ಉರಗಗಳ ಶುಭಕರ್ಮಗಳ ಕೀರ್ತನೆಯಿದೆ. ಇದರಲ್ಲಿ ಸನಾತನನೂ ಸತ್ಯನೂ, ಋತನೂ, ಪವಿತ್ರನೂ, ಪುಣ್ಯನೂ ಆದ ಭಗವಾನ್ ವಾಸುದೇವನ ಕೀರ್ತನೆಯಿದೆ.

01001194a ಶಾಶ್ವತಂ ಬ್ರಹ್ಮ ಪರಮಂ ಧ್ರುವಂ ಜ್ಯೋತಿಃ ಸನಾತನಂ |

01001194c ಯಸ್ಯ ದಿವ್ಯಾನಿ ಕರ್ಮಾಣಿ ಕಥಯಂತಿ ಮನೀಷಿಣಃ ||

01001195a ಅಸತ್ಸತ್ಸದಸಚ್ಚೈವ ಯಸ್ಮಾದ್ದೇವಾತ್ಪ್ರವರ್ತತೇ |

01001195c ಸಂತತಿಶ್ಚ ಪ್ರವೃತ್ತಿಶ್ಚ ಜನ್ಮಮೃತ್ಯುಃ ಪುನರ್ಭವಃ ||

01001196a ಅಧ್ಯಾತ್ಮಂ ಶ್ರೂಯತೇ ಯಚ್ಚ ಪಂಚಭೂತಗುಣಾತ್ಮಕಂ |

01001196c ಅವ್ಯಕ್ತಾದಿ ಪರಂ ಯಚ್ಚ ಸ ಏವ ಪರಿಗೀಯತೇ ||

01001197a ಯತ್ತದ್ಯತಿವರಾ ಯುಕ್ತಾ ಧ್ಯಾನಯೋಗಬಲಾನ್ವಿತಾಃ |

01001197c ಪ್ರತಿಬಿಂಬಮಿವಾದರ್ಶೇ ಪಶ್ಯಂತ್ಯಾತ್ಮನ್ಯವಸ್ಥಿತಂ ||

ಅವನು ಶಾಶ್ವತ, ಬ್ರಹ್ಮ, ಪರಮ ಧೃವ ಜ್ಯೋತಿ, ಸನಾತನ. ಅವನ ದಿವ್ಯಕರ್ಮಗಳನ್ನು ಮನುಷ್ಯರು ಹೊಗಳುತ್ತಿರುತ್ತಾರೆ. ಇರುವವು ಮತ್ತು ಇಲ್ಲದಿರುವವೆಲ್ಲವೂ - ಸಂತತಿ, ಪ್ರವೃತ್ತಿ, ಜನ್ಮ, ಮೃತ್ಯು, ಪುನರ್ಜನ್ಮ - ಎಲ್ಲವೂ ಅವನಿಂದಲೇ ಹುಟ್ಟುತ್ತವೆ. ಅವನನ್ನು ಅಧ್ಯಾತ್ಮನೆಂದೂ, ಪಂಚಭೂತಗುಣಾತ್ಮಕನೆಂದೂ, ಅವ್ಯಕ್ತ, ಆದಿ, ಮತ್ತು ಪರ ಎಂದೂ ವರ್ಣಿಸಿದ್ದಾರೆ. ಧ್ಯಾನಯೋಗಬಲಾನ್ವಿತ ಯತಿವರರು ಆತ್ಮನಲ್ಲಿರುವ ಅವನನ್ನು ಪ್ರತಿಬಿಂಬದಲ್ಲಿ ಕಾಣುವಂತೆ ನೋಡುತ್ತಾರೆ.

01001202a ಹ್ರದಾನಾಮುದಧಿಃ ಶ್ರೇಷ್ಠೋ ಘೌರ್ವರಿಷ್ಠಾ ಚತುಷ್ಪದಾಂ |

01001202c ಯಥೈತಾನಿ ವರಿಷ್ಠಾನಿ ತಥಾ ಭಾರತಮುಚ್ಯತೇ ||

01001204a ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಹ್ಮಯೇತ್ |

01001204c ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರತರಿಷ್ಯತಿ ||

01001205a ಕಾರ್ಷ್ಣಂ ವೇದಮಿಮಂ ವಿದ್ವಾನ್ ಶ್ರಾವಯಿತ್ವಾರ್ಥಮಶ್ನುತೇ |

01001205c ಭ್ರೂಣಹತ್ಯಾಕೃತಂ ಚಾಪಿ ಪಾಪಂ ಜಹ್ಯಾನ್ನಸಂಶಯಃ ||

01001207a ಯಶ್ಚೇಮಂ ಶೃಣುಯಾನ್ನಿತ್ಯಮಾರ್ಷಂ ಶ್ರದ್ಧಾಸಮನ್ವಿತಃ |

01001207c ಸ ದೀರ್ಘಮಾಯುಃ ಕೀರ್ತಿಂ ಚ ಸ್ವರ್ಗತಿಂ ಚಾಪ್ನುಯಾನ್ನರಃ ||

01001208a ಚತ್ವಾರ ಏಕತೋ ವೇದಾ ಭಾರತಂ ಚೈಕಮೇಕತಃ |

01001208c ಸಮಾಗತೈಃ ಸುರರ್ಷಿಭಿಸ್ತುಲಾಂ ಆರೋಪಿತಂ ಪುರಾ |

01001208e ಮಹತ್ತ್ವೇ ಚ ಗುರುತ್ವೇ ಚ ಧ್ರಿಯಮಾಣಂ ತತೋಽಧಿಕಂ ||

01001209a ಮಹತ್ತ್ವಾದ್ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ |

01001209c ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ ||

ಎಲ್ಲ ಸರೋವರಗಳಲ್ಲಿ ಸಾಗರವು ಹೇಗೆ ಶ್ರೇಷ್ಠವೋ, ಎಲ್ಲ ಚತುಷ್ಪದಿಗಳಲ್ಲಿ ಗೋವು ಹೇಗೆ ಶ್ರೇಷ್ಠವೋ, ಹಾಗೆಯೇ ಎಲ್ಲ ಇತಿಹಾಸಗಳಲ್ಲಿ ಭಾರತವು ವರಿಷ್ಠವೆಂದು ಹೇಳಲ್ಪಟ್ಟಿದೆ. ಇತಿಹಾಸ-ಪುರಾಣಗಳು ವೇದವನ್ನು ವಿವರಿಸುತ್ತವೆ. ಇವುಗಳನ್ನು ಅರಿಯದಿದ್ದ ಅಲ್ಪವಿದರಿಗೆ ವೇದಗಳೂ ಹೆದರಿಕೊಳ್ಳುತ್ತದೆ. ಇದನ್ನು ಪಠಿಸುವ ವಿದ್ವಾಂಸನಿಗೆ ವೇದವನ್ನು ಅರ್ಥಮಾಡಿಕೊಳ್ಳಲು ಸಾದ್ಯವಾಗುತ್ತದೆ. ಭ್ರೂಣಹತ್ಯವನ್ನು ಮಾಡಿದ ಪಾಪವೂ ನಾಶವಾಗುವುದರಲ್ಲಿ ಸಂಶಯವಿಲ್ಲ. ಇದನ್ನು ನಿತ್ಯವೂ ಗೌರವ ಮತ್ತು ಶ್ರದ್ಧೆಗಳಿಂದ ಕೇಳುವ ನರನು ದೀರ್ಘಾಯುಷ್ಯ, ಕೀರ್ತಿ ಮತ್ತು ಸ್ವರ್ಗಗತಿಯನ್ನು ಹೊಂದುತ್ತಾನೆ. ಹಿಂದೆ ಸುರರ್ಷಿಗಳು ನಾಲ್ಕೂ ವೇದಗಳನ್ನು ಒಂದುಕಡೆ ಮತ್ತು ಭಾರತವನ್ನು ಇನ್ನೊಂದು ಕಡೆ ಇಟ್ಟು ತುಲನೆ ಮಾಡಿದಾಗ ಭಾರತವೇ ತೂಕದಲ್ಲಿ ಹೆಚ್ಚಾಗಿರುವುದನ್ನು ಕಂಡರಂತೆ. ಅಂದಿನಿಂದ ಮಹತ್ವ ಮತ್ತು ಗುರುತ್ವದಲ್ಲಿ ಭಾರತವೇ ಶ್ರೇಷ್ಠವೆಂದು ಮಾನ್ಯತೆಯಿದೆ. ಹೀಗೆ ಮಹತ್ತರ ಭಾರವಿರುವುದರಿಂದಲೇ ಇದನ್ನು ಮಹಾಭಾರತವೆಂದು ಕರೆಯುತ್ತಾರೆ. ಇದರ ನಿಜವಾದ ಅರ್ಥವನ್ನು ತಿಳಿದುಕೊಂಡವನು ಸರ್ವ ಪಾಪಗಳಿಂದ ಮುಕ್ತನಾಗುತ್ತಾನೆ.

01001198a ಶ್ರದ್ದಧಾನಃ ಸದೋದ್ಯುಕ್ತಃ ಸತ್ಯಧರ್ಮಪರಾಯಣಃ |

01001198c ಆಸೇವನ್ನಿಮಮಧ್ಯಾಯಂ ನರಃ ಪಾಪಾತ್ಪ್ರಮುಚ್ಯತೇ ||

01001199a ಅನುಕ್ರಮಣಿಮಧ್ಯಾಯಂ ಭಾರತಸ್ಯೇಮಮಾದಿತಃ |

01001199c ಆಸ್ತಿಕಃ ಸತತಂ ಶೃಣ್ವನ್ನ ಕೃಚ್ಛ್ರೇಷ್ವವಸೀದತಿ ||

01001200a ಉಭೇ ಸಂಧ್ಯೇ ಜಪನ್ಕಿಂಚಿತ್ಸದ್ಯೋ ಮುಚ್ಯೇತ ಕಿಲ್ಬಿಷಾತ್|

01001200c ಅನುಕ್ರಮಣ್ಯಾ ಯಾವತ್ಸ್ಯಾದಹ್ನಾರಾತ್ರ್ಯಾ ಚ ಸಂಚಿತಂ ||

01001201a ಭಾರತಸ್ಯ ವಪುರ್ಹ್ಯೇತತ್ಸತ್ಯಂ ಚಾಮೃತಮೇವ ಚ |

01001201c ನವನೀತಂ ಯಥಾ ದಧ್ನೋ ದ್ವಿಪದಾಂ ಬ್ರಾಹ್ಮಣೋ ಯಥಾ||

01001203a ಯಶ್ಚೈನಂ ಶ್ರಾವಯೇಚ್ಛ್ರಾದ್ಧೇ ಬ್ರಾಹ್ಮಣಾನ್ಪಾದಮಂತತಃ|

01001203c ಅಕ್ಷಯ್ಯಮನ್ನಪಾನಂ ತತ್ಪಿತೄಂಸ್ತಸ್ಯೋಪತಿಷ್ಠತಿ ||

01001206a ಯ ಇಮಂ ಶುಚಿರಧ್ಯಾಯಂ ಪಠೇತ್ಪರ್ವಣಿ ಪರ್ವಣಿ |

01001206c ಅಧೀತಂ ಭಾರತಂ ತೇನ ಕೃತ್ಸ್ನಂ ಸ್ಯಾದಿತಿ ಮೇ ಮತಿಃ ||

ಸತ್ಯಧರ್ಮಪರಾಯಣ, ಶ್ರದ್ಧಾವಂತ, ಒಳ್ಳೆಯದನ್ನೇ ಮಾತನಾಡುವ ನರನು ಈ ಅಧ್ಯಾಯವನ್ನು ಓದಿದರೆ ಪಾಪದಿಂದ ವಿಮುಕ್ತನಾಗುತ್ತಾನೆ. ಭಾರತದ ಈ ಅನುಕ್ರಮಣಿಕಾ ಅಧ್ಯಾಯವನ್ನು ಸತತವೂ ಕೇಳುವ ಆಸ್ತೀಕನು ಸರ್ವ ಕಷ್ಟಗಳಿಂದಲೂ ಮುಕ್ತನಾಗುತ್ತಾನೆ. ಹಗಲು ಮತ್ತು ರಾತ್ರಿಯ ಎರಡೂ ಸಂಧ್ಯಾಸಮಯಗಳಲ್ಲಿ ಅನುಕ್ರಮಣಿಕಾ ಪರ್ವದ ಯಾವುದೇ ಭಾಗವನ್ನು ಓದುವವರು ಹಗಲು ಅಥವಾ ರಾತ್ರಿಯಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುತ್ತಾರೆ. ದ್ವಿಜರಲ್ಲಿ ಬ್ರಾಹ್ಮಣರು ಹೇಗೋ ಮತ್ತು ಮೊಸರಿಗೆ ಬೆಣ್ಣೆಯು ಹೇಗೋ ಹಾಗೆ ಭಾರತಕ್ಕೆ ಈ ಅಧ್ಯಾಯವು ನಿಜವಾಗಿಯೂ ಅಮೃತವಿದ್ದಂತೆ. ಶ್ರಾದ್ಧದಲ್ಲಿ ಬ್ರಾಹ್ಮಣನು ಈ ಅಧ್ಯಾಯದ ಕಾಲುಭಾಗವನ್ನು ಪಠಿಸಿದರೂ, ಪಿತೃಗಳಿಗೆ ನೀಡಿದ ಅನ್ನ-ಪಾನೀಯಗಳು ಅಕ್ಷಯವಾಗುತ್ತವೆ. ನನ್ನ ಅಭಿಪ್ರಾಯದಲ್ಲಿ ಈ ಅಧ್ಯಾಯ ಶುಚಿಯನ್ನು ಪರ್ವ ಪರ್ವಗಳಲ್ಲಿ ಓದಿದರೆ ಇಡೀ ಭಾರತವನ್ನೇ ಓದಿದಹಾಗೆ.

01001210a ತಪೋ ನ ಕಲ್ಕೋಽಧ್ಯಯನಂ ನ ಕಲ್ಕಃ

         ಸ್ವಾಭಾವಿಕೋ ವೇದವಿಧಿರ್ನ ಕಲ್ಕಃ |

01001210c ಪ್ರಸಹ್ಯ ವಿತ್ತಾಹರಣಂ ನ ಕಲ್ಕಸ್

         ತಾನ್ಯೇವ ಭಾವೋಪಹತಾನಿ ಕಲ್ಕಃ ||

ತಪಸ್ಸು ಕೆಟ್ಟದ್ದಲ್ಲ; ಅಧ್ಯಯನವು ಕೆಟ್ಟದ್ದಲ್ಲ, ಸ್ವಾಭಾವಿಕ ವೇದವಿಧಿಗಳೂ ಕೆಟ್ಟವಲ್ಲ; ದುಡಿದು ಧನವನ್ನು ಸಂಪಾದಿಸುವುದೂ ಕೆಟ್ಟದಲ್ಲ. ಆದರೆ ಅವುಗಳಲ್ಲಿರುವ ಭಾವಗಳನ್ನು ಮೀರಿ ಮಾಡಿದರೆ ಅವೆಲ್ಲವೂ ಕೆಟ್ಟವಾಗುತ್ತವೆ[2].”

ಆದಿ ಪರ್ವ, ಪರ್ವಸಂಗ್ರಹ ಪರ್ವ, ಅಧ್ಯಾಯ ೨, ಶ್ಲೋಕ ೩೦-೩೩:

01002030a ವಿಚಿತ್ರಾರ್ಥಪದಾಖ್ಯಾನಮನೇಕಸಮಯಾನ್ವಿತಂ|

01002030c ಅಭಿಪನ್ನಂ ನರೈಃ ಪ್ರಾಜ್ಞೈರ್ವೈರಾಗ್ಯಮಿವ ಮೋಕ್ಷಿಭಿಃ||

01002031a ಆತ್ಮೇವ ವೇದಿತವ್ಯೇಷು ಪ್ರಿಯೇಷ್ವಿವ ಚ ಜೀವಿತಂ|

01002031c ಇತಿಹಾಸಃ ಪ್ರಧಾನಾರ್ಥಃ ಶ್ರೇಷ್ಠಃ ಸರ್ವಾಗಮೇಷ್ವಯಂ||

[3]01002032a ಇತಿಹಾಸೋತ್ತಮೇ ಹ್ಯಸ್ಮಿನ್ನರ್ಪಿತಾ ಬುದ್ಧಿರುತ್ತಮಾ|

01002032c ಸ್ವರವ್ಯಂಜನಯೋಃ ಕೃತ್ಸ್ನಾ ಲೋಕವೇದಾಶ್ರಯೇವ ವಾಕ್||

01002033a ಅಸ್ಯ ಪ್ರಜ್ಞಾಭಿಪನ್ನಸ್ಯ ವಿಚಿತ್ರಪದಪರ್ವಣಃ|

01002033c ಭಾರತಸ್ಯೇತಿಹಾಸಸ್ಯ ಶ್ರೂಯತಾಂ ಪರ್ವಸಂಗ್ರಹಃ||

ವಿಚಿತ್ರಾರ್ಥಪದಗಳನ್ನು ಕೂಡಿದ, ಅನೇಕ ಕಾಲಗಳನ್ನು ಆವರಿಸಿರುವ[4] ಈ ಆಖ್ಯಾನವನ್ನು ಮೋಕ್ಷಕ್ಕೆ ವೈರಾಗ್ಯವಿದ್ದಂತೆ ಎಂದು ಪ್ರಾಜ್ಞರು ಅಭಿಪ್ರಾಯಪಡುತ್ತಾರೆ. ತಿಳಿಯುವಂಥವುಗಳಲ್ಲಿ ಆತ್ಮ ಮತ್ತು ಪ್ರಿಯವಾದವುಗಳಲ್ಲಿ ಜೀವವು ಹೇಗೋ ಹಾಗೆ ಎಲ್ಲ ಆಗಮಗಳಲ್ಲಿ ಈ ಇತಿಹಾಸವು ಶ್ರೇಷ್ಠ ಪ್ರಧಾನವೆಂದು ಪರಿಗಣಿಸಲ್ಪಟ್ಟಿದೆ. ಈ ಉತ್ತಮ ಇತಿಹಾಸದಲ್ಲಿ ಬುದ್ಧಿವಂತರು ಉತ್ತಮವೆಂದು ಸ್ವೀಕರಿಸಿರುವ, ವೇದಶಾಸ್ತ್ರಗಳ ಭಾಷೆಯೆಂದು ಪರಿಗಣಿಸಿರುವ ಸ್ವರ-ವ್ಯಂಜನಗಳ ಅದ್ಭುತ ವಿನ್ಯಾಸವಿದೆ. ವಿಚಿತ್ರ ಪದಜೋಡಣೆಗಳನ್ನು ಹೊಂದಿ ಜ್ಞಾನವನ್ನು ನೀಡುವ ಈ ಭಾರತ ಇತಿಹಾಸದ ಪರ್ವಸಂಗ್ರಹವನ್ನು ಕೇಳಿರಿ.

ಆದಿ ಪರ್ವ, ಪರ್ವಸಂಗ್ರಹ ಪರ್ವ, ಅಧ್ಯಾಯ ೨, ಶ್ಲೋಕ ೨೩೫-೨೪೩:

01002235a ಯೋ ವಿದ್ಯಾಚ್ಚತುರೋ ವೇದಾನ್ಸಾಂಗೋಪನಿಷದಾನ್ ದ್ವಿಜಃ|

01002235c ನ ಚಾಖ್ಯಾನಮಿದಂ ವಿದ್ಯಾನ್ ನೈವ ಸಸ್ಯಾದ್ವಿಚಕ್ಷಣಃ||

[5]01002236a ಶ್ರುತ್ವಾ ತ್ವಿದಮುಪಾಖ್ಯಾನಂ ಶ್ರಾವ್ಯಮನ್ಯನ್ನ ರೋಚತೇ|

01002236c ಪುಂಸ್ಕೋಕಿಲರುತಂ ಶ್ರುತ್ವಾ ರೂಕ್ಷಾ ಧ್ವಾಂಕ್ಷಸ್ಯ ವಾಗಿವ||

01002237a ಇತಿಹಾಸೋತ್ತಮಾದಸ್ಮಾಜ್ಞಾಯಂತೇ ಕವಿಬುದ್ಧಯಃ|

01002237c ಪಂಚಭ್ಯ ಇವ ಭೂತೇಭ್ಯೋ ಲೋಕಸಂವಿಧಯಸ್ತ್ರಯಃ||

01002238a ಅಸ್ಯಾಖ್ಯಾನಸ್ಯ ವಿಷಯೇ ಪುರಾಣಂ ವರ್ತತೇ ದ್ವಿಜಾಃ|

01002238c ಅಂತರಿಕ್ಷಸ್ಯ ವಿಷಯೇ ಪ್ರಜಾ ಇವ ಚತುರ್ವಿಧಾಃ||

01002239a ಕ್ರಿಯಾಗುಣಾನಾಂ ಸರ್ವೇಷಾಮಿದಮಾಖ್ಯಾನಮಾಶ್ರಯಃ|

01002239c ಇಂದ್ರಿಯಾಣಾಂ ಸಮಸ್ತಾನಾಂ ಚಿತ್ರಾ ಇವ ಮನಃಕ್ರಿಯಾಃ||

01002240a ಅನಾಶ್ರಿತ್ಯೈತದಾಖ್ಯಾನಂ ಕಥಾ ಭುವಿ ನ ವಿದ್ಯತೇ|

01002240c ಆಹಾರಮನಪಾಶ್ರಿತ್ಯ ಶರೀರಸ್ಯೇವ ಧಾರಣಂ||

01002241a ಇದಂ ಸರ್ವೈಃ ಕವಿವರೈರಾಖ್ಯಾನಮುಪಜೀವ್ಯತೇ|

01002241c ಉದಯಪ್ರೇಪ್ಸುಭಿರ್ಭೃತ್ಯೈರಭಿಜಾತ ಇವೇಶ್ವರಃ||

[6]01002242a ದ್ವೈಪಾಯನೌಷ್ಟಪುಟನಿಃಸೃತಮಪ್ರಮೇಯಂ

         ಪುಣ್ಯಂ ಪವಿತ್ರಮಥ ಪಾಪಹರಂ ಶಿವಂ ಚ|

01002242c ಯೋ ಭಾರತಂ ಸಮಧಿಗಚ್ಛತಿ ವಾಚ್ಯಮಾನಂ

         ಕಿಂ ತಸ್ಯ ಪುಷ್ಕರಜಲೈರಭಿಷೇಚನೇನ||

[7]01002243a ಆಖ್ಯಾನಂ ತದಿದಮನುತ್ತಮಂ ಮಹಾರ್ಥಂ

         ವಿನ್ಯಸ್ತಂ ಮಹದಿಹ ಪರ್ವಸಂಗ್ರಹೇಣ|

01002243c ಶ್ರುತ್ವಾದೌ ಭವತಿ ನೃಣಾಂ ಸುಖಾವಗಾಹಂ

         ವಿಸ್ತೀರ್ಣಂ ಲವಣಜಲಂ ಯಥಾ ಪ್ಲವೇನ||

ವೇದ ಮತ್ತು ಅದರ ಅಂಗಗಳಾದ ಉಪನಿಷತ್ತುಗಳ ವಿದ್ಯೆಯಲ್ಲಿ ಚತುರ ದ್ವಿಜನು ಈ ಆಖ್ಯಾನವನ್ನು ತಿಳಿದಿಲ್ಲ ಎಂದರೆ ಎರಡೂ ಕಣ್ಣುಳ್ಳವನೆಂದು ಪರಿಗಣಿಸಲ್ಪಡುವುದಿಲ್ಲ. ಕೋಗಿಲೆಯ ಕೂಗನ್ನು ಕೇಳಿದವರು ಕಾಗೆಯ ಕೂಗನ್ನು ಕೇಳಲು ಹೇಗೆ ಬಯಸುವುದಿಲ್ಲವೋ ಹಾಗೆ ಈ ಉಪಾಖ್ಯಾನವನ್ನು ಕೇಳಿದವರಿಗೆ ಬೇರೆ ಯಾವುದನ್ನು ಕೇಳುವುದಕ್ಕೂ ಆಸಕ್ತಿಯಿರುವುದಿಲ್ಲ. ಮೂರೂ ಲೋಕಗಳು ಪಂಚಭೂತಗಳಿಂದ ಹೇಗೋ ಹಾಗೆ ಈ ಉತ್ತಮ ಇತಿಹಾಸದಿಂದ ಎಲ್ಲ ಕವಿಗಳ ಬುದ್ಧಿಯೂ ಪ್ರಚೋದಿತಗೊಂಡಿದೆ. ದ್ವಿಜರೇ! ಅಂತರಿಕ್ಷವು ಹೇಗೆ ನಾಲ್ಕುವಿಧದ ಜೀವಿಗಳನ್ನು ಪುರಾಣಗಳನ್ನು ಹೊಂದಿರುತ್ತದೆ. ಸಮಸ್ತ ಇಂದ್ರಿಯಗಳ ಚಿತ್ರಣಗಳನ್ನು ಮನಸ್ಸಿನ ಕ್ರಿಯೆಯ ಮೂಲಕ ಹೇಗೋ ಹಾಗೆ ಸರ್ವ ಕ್ರಿಯಾಗುಣಗಳನ್ನು ಈ ಆಖ್ಯಾನದ ಸಹಾಯದಿಂದ ತಿಳಿಯಬಹುದು. ಆಹಾರವನ್ನು ಅವಲಂಬಿಸಿ ಹೇಗೆ ಶರೀರ ಧಾರಣ ಮಾಡುತ್ತೇವೋ ಹಾಗೆ ಭೂಮಿಯಲ್ಲಿರುವ ಎಲ್ಲ ಕಥೆಗಳೂ ಈ ಆಖ್ಯಾನವನ್ನು ಅವಲಂಬಿಸಿವೆ. ಸೇವಕರೆಲ್ಲರೂ ಅವರ ಸ್ವಾಮಿಯನ್ನು ಹೇಗೆ ಅವಲಂಬಿಸಿರುತ್ತಾರೋ ಹಾಗೆ ಎಲ್ಲ ಕವಿಶ್ರೇಷ್ಠರೂ ಈ ಉಪಾಖ್ಯಾನವನ್ನು ಅವಲಂಬಿಸಿ ಜೀವಿಸುತ್ತಾರೆ. ದ್ವೈಪಾಯನನ ತುಟಿಗಳಿಂದ ಹೊರಬಂದ ಈ ಭಾರತವು ಅಪ್ರಮೇಯವಾದದ್ದು, ಪುಣ್ಯವಾದದ್ದು, ಪವಿತ್ರವಾದದ್ದು ಮತ್ತು ಮಂಗಳವಾದದ್ದು. ಇದನ್ನು ಓದಿದವನಿಗೆ ಪುಷ್ಕರ ತೀರ್ಥದಲ್ಲಿ ಸ್ನಾನಮಾಡುವುದರ ಅವಶ್ಯಕತೆಯಾದರೂ ಏನಿದೆ? ವಿಸ್ತೀರ್ಣ ಸಮುದ್ರವನ್ನು ಹಡಗಿನಿಂದ ಹೇಗೆ ತಿಳಿದುಕೊಳ್ಳಬಹುದೋ ಹಾಗೆ ಮಹಾರ್ಥಗಳನ್ನುಳ್ಳ ಅನುತ್ತಮ ಈ ಆಖ್ಯಾನವನ್ನು ಪರ್ವಸಂಗ್ರಹದ ಸಹಾಯದಿಂದ

[1] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವೊಂದಿದೆ: ಇತ್ಯೇವಂ ಪುತ್ರಶೋಕಾರ್ತಂ ಧೃತರಾಷ್ಟ್ರಂ ಜನೇಶ್ವರಂ| ಆಶ್ವಾಸ್ಯ ಸ್ವಸ್ಥಮಕರೋತ್ ಸೂತೋ ಗಾವಲ್ಗಣಿಸ್ತದಾ|| ಅರ್ಥಾತ್: ಹೀಗೆ ಪುತ್ರಶೋಕದಿಂದ ಆರ್ತನಾಗಿದ್ದ ಜನೇಶ್ವರ ಧೃತರಾಷ್ಟ್ರನನ್ನು ಸೂತ ಗಾವಲ್ಗಣಿಯು ಸಮಾಧಾನಗೊಳಿಸಿ ಸ್ವಸ್ಥನನ್ನಾಗಿಸಿದನು.

[2] ತಪಸ್ಸು, ಅಧ್ಯಯನ, ವೇದವಿಧಿಗಳು, ಧನಸಂಪಾದನೆ ಇವು ಯಾವುವು ಸ್ವಾಭಾವಿಕವಾಗಿ ಕೆಟ್ಟವಲ್ಲ. ಆದರೆ ಇವೇ ಕ್ರಿಯೆಗಳನ್ನು ಅವುಗಳಲ್ಲಿ ಸ್ವಾಭಾವಿಕವಾಗಿರುವ ಉದ್ದೇಶಗಳಿಗೂ ಬೇರೆಯೇ ಉದ್ದೇಶಗಳಿಗೆ ಮಾಡಿದರೆ ಅವು ಕೆಟ್ಟವೆನಿಸುತ್ತವೆ. ಉದಾಹರಣೆಗೆ, ದುಷ್ಟ ಸಂಕಲ್ಪದಿಂದ ತಪಸ್ಸನ್ನಾಚರಿಸುವುದು ದೋಷ ಮತ್ತು ಪ್ರತಿಷ್ಠೆಯ ಸಾಧನೆಗಾಗಿ ಅಧ್ಯಯನವನ್ನು ಮಾಡುವುದು ದೋಷ.

[3] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಅನಾಶ್ರಿತ್ಯೇದಮಾಖ್ಯಾನಂ ಕಥಾ ಭುವಿ ನ ವಿದ್ಯತೇ| ಆಹಾರಮನಪಾಶ್ರಿತ್ಯ ಶರೀರಸ್ಯೇವ ಧಾರಣಂ|| ತದೇತದ್ಭಾರತಂ ನಾಮ ಕವಿಭಿಸ್ತೂಪಜೀವ್ಯತೇ| ಉದಯಪ್ರೇಪ್ಸುಭಿರ್ಭೃತೈರಭಿಜಾತ ಇವೇಶ್ವರಃ|| ಅರ್ಥಾತ್: ಆಹಾರವನ್ನು ಸ್ವೀಕರಿಸದೇ ಶರೀರಧಾರಣೆಯು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮಹಾಭಾರತವನ್ನು ಆಶ್ರಯಿಸದಿರುವ ಯಾವುದೊಂದು ಆಖ್ಯಾನವೂ ಈ ಪ್ರಪ್ರಂಚದಲ್ಲಿಲ್ಲ. ಔನ್ನತ್ಯವನ್ನಪೇಕ್ಷಿಸುವ ಸೇವಕರು ತಮ್ಮ ಸ್ವಾಮಿಯನ್ನು ನಿರಂತರವಾಗಿ ಆಶ್ರಯಿಸುವಂತೆ ಕೀರ್ತಿಕಾಮ ಕವಿಗಳು ಭಾರತವನ್ನಾಶ್ರಯಿಸಿ ಕಾವ್ಯ-ನಾಟಕಗಳನ್ನು ರಚಿಸಿ ಕೀರ್ತಿವಂತರಾಗುತ್ತಾರೆ.

[4] ಮಹಾಭಾರತದಲ್ಲಿ ವಿವರಿಸಲಾದ ವೃತ್ತಾಂತಗಳು ಬೇರೆ ಬೇರೆ ಯುಗಗಳು, ಮನ್ವಂತರಗಳು ಮತ್ತು ಕಲ್ಪಗಗಳನ್ನು ಆವರಿಸಿವೆ.

[5] ನೀಲಕಂಠೀಯದಲ್ಲಿ ಇದರ ಮೊದಲು ಈ ಶ್ಲೋಕವಿದೆ: ಅರ್ಥಶಾಸ್ತ್ರಮಿದಂ ಪ್ರೋಕ್ತಂ ಧರ್ಮಶಾಸ್ತ್ರಮಿದಂ ಮಹತ್| ಕಾಮಶಾಸ್ತ್ರಮಿತಂ ಪ್ರೋಕ್ತಂ ವ್ಯಾಸೇನಾಮಿತಬುದ್ಧಿನಾ|| ಅರ್ಥಾತ್: ಅಮಿತಬುದ್ಧಿ ವ್ಯಾಸನ ಈ ಕೃತಿಯನ್ನು ಅರ್ಥಶಾಸ್ತ್ರವೆಂದೂ, ಮಹಾ ಧರ್ಮಶಾಸ್ತ್ರವೆಂದೂ ಮತ್ತು ಕಾಮಶಾಸ್ತ್ರವೆಂದೂ ಹೇಳಲ್ಪಟ್ಟಿದೆ.

[6] ನೀಲಕಂಠೀಯದಲ್ಲಿ ಇದರ ಮೊದಲು ಈ ಎರಡು ಶ್ಲೋಕಗಳಿವೆ: ಅಸ್ಯ ಕಾವ್ಯಸ್ಯ ಕವಯೋ ನ ಸಮರ್ಥಾ ವಿಶೇಷಣೇ| ಸಾಧೋರಿವ ಗೃಹಸ್ಥಸ್ಯ ಶೇಷಾಸ್ತ್ರಯ ಇವಾಶ್ರಮಾಃ|| ಧರ್ಮೇ ಮತಿರ್ಭವತು ವಃ ಸತತೋತ್ಥಿತಾನಾಂ ಸ ಹ್ಯೇಕ ಏವ ಪರಲೋಕಗತಸ್ಯ ಬಂಧುಃ| ಅರ್ಥಾಃ ಸ್ತ್ರಿಯಶ್ಚ ನಿಪುಣೈರಪಿ ಸೇವ್ಯಮಾನಾ| ನೈವಾಪ್ತಭಾವಮುಪಯಾಂತಿ ನ ಚ ಸ್ಥಿರತ್ವಂ|| ಅರ್ಥಾತ್: ಉಳಿದ ಮೂರು ಆಶ್ರಮ (ಬ್ರಹ್ಮಚರ್ಯ, ವಾನಪ್ರಸ್ಥ, ಸಂನ್ಯಾಸ) ಗಳಿಗಿಂತ ಗೃಹಸ್ಥಾಶ್ರಮವು ಶ್ರೇಷ್ಠವಾಗಿರುವಂತೆ ಈ ಕಾವ್ಯವನ್ನು ಕೂಡ ಕವಿಗಳು ಮೀರಿಸಲು ಅಶಕ್ಯರು.

[7] ನೀಲಕಂಠೀಯದಲ್ಲಿ ಇದರ ಮೊದಲು ಈ ಮೂರು ಶ್ಲೋಕಗಳಿವೆ: ಯದಹ್ನಾ ಕುರುತೇ ಪಾಪಂ ಬ್ರಾಹ್ಮಣಸ್ತ್ವಿಂದ್ರಿಯೈಶ್ಚರನ್| ಮಹಾಭಾರತಮಾಖ್ಯಾಯ ಸಂಧ್ಯಾಂ ಮುಚ್ಯತಿ ಪಶ್ಚಿಮಾಮ್|| ಯದ್ರಾತ್ರೌ ಕುರುತೇ ಪಾಪಂ ಕರ್ಮಣಾ ಮನಸಾ ಗಿರಾ| ಮಹಾಭಾರತಮಾಖ್ಯಾಯ ಪೂರ್ವಾಂ ಸಂಧ್ಯಾಂ ಪ್ರಮುಚ್ಯತೇ|| ಅರ್ಥಾತ್: ಬ್ರಾಹ್ಮಣನು ಇಂದ್ರಿಯವಶನಾಗಿ ಹಗಲಿನಲ್ಲಿ ಮಾಡಿರಬಹುದಾದ ಪಾಪವು ಸಾಯಂ ಸಂಧ್ಯಾ ಸಮಯದಲ್ಲಿ ಮಹಾಭಾರತಪ್ರವಚನಮಾಡುವುದರಿಂದ ಪರಿಹಾರವಾಗುತ್ತದೆ. ಶರೀರ, ಮನಸ್ಸು, ಮತ್ತು ಮಾತುಗಳಿಂದ ರಾತ್ರಿಯಲ್ಲಿ ಮಾಡಿದ ಮಾಪವು ಪ್ರಾತಃಸಂಧ್ಯಾಸಮಯದಲ್ಲಿ ಮಹಾಭಾರತ ಪ್ರವಚನ ಮಾಡುವುದರಿಂದ ಪರಿಹಾರವಾಗುತ್ತದೆ.

ಯೋ ಗೋಶತಂ ಕನಕಶೃಂಗಮಯಂ ದದಾತಿ ವಿಪ್ರಾಯ ವೇದವಿದುಷೇ ಚ ಬಹುಶೃತಾಯ| ಪುಣ್ಯಾಂ ಚ ಭಾರತಕಥಾಂ ಶೃಣುಯಾಚ್ಚ ನಿತ್ಯಂ ತುಲ್ಯಂ ಫಲಂ ಭವತಿ ತಸ್ಯ ಚ ತಸ್ಯ ಚೈವ|| ಅರ್ಥಾತ್: ಬಹುಶ್ರುತ, ವೇದವಿದ ಬ್ರಾಹ್ಮಣನಿಗೆ ಅಲಂಕೃತ ಸ್ವರ್ಣಮಯ ಕೊಂಬುಗಳಿಂದ ಕೂಡಿರುವ ನೂರು ಹಸುಗಳನ್ನು ದಾನಮಾಡುವುದರಿಂದ ದೊರಕುವ ಪುಣ್ಯ ಮತ್ತು ಭಾರತಕಥೆಯನ್ನು ನಿತ್ಯವೂ ಕೇಳುವುದರಿಂದ ಬರುವುದರ ಪುಣ್ಯ ಇವೆರಡರ ಫಲಗಳೂ ಸಮನಾಗಿರುತ್ತವೆ.

Leave a Reply

Your email address will not be published. Required fields are marked *