ಸಮಂತಪಂಚಕೋಪಾಖ್ಯಾನ
ಇದು ಪುಣೆಯ ಪರಿಷ್ಕೃತ ಸಂಪುಟದ ಆದಿಪರ್ವದ ಅನುಕ್ರಮಣಿಕಾ ಪರ್ವದಲ್ಲಿ ಬರುತ್ತದೆ. ನೈಮಿಷಾರಣ್ಯದಲ್ಲಿ ಶೌನಕನ ದಿರ್ಘಸತ್ರದಲ್ಲಿ ಸೇರಿದ್ದ ಮುನಿಜನರೊಂದಿಗೆ ಲೋಮಹರ್ಷಣ ಸೂತ ಪುರಾಣಿಕ ಉಗ್ರಶ್ರವನ ಸಂವಾದದಲ್ಲಿ ಬರುತ್ತದೆ. ಜನಮೇಜಯನ ಸರ್ಪಸತ್ರದಲ್ಲಿ ವೈಶಂಪಾಯನನು ಹೇಳಿದ ವ್ಯಾಸಕೃತಿ ಮಹಾಭಾರತ ಕಥೆಯನ್ನು ಕೇಳಿ ಸಮಂತಪಂಚಕ ತೀರ್ಥಕ್ಕೆ ಹೋಗಿ ನೈಮಿಷಾರಣ್ಯಕ್ಕೆ ಆಗಮಿಸಿದ್ದ ಉಗ್ರಶ್ರವನಲ್ಲಿ ಮುನಿಗಳು ಸಮಂತಪಂಚಕದ ಕುರಿತು ಕೇಳಿದಾಗ ಅವನು ತ್ರೇತ-ದ್ವಾಪರಗಳ ಸಂಧಿಯಲ್ಲಿ ನಡೆದ ಕ್ಷತ್ರಿಯ ಸಂಹಾರವು ಎಲ್ಲಿ ಮುಕ್ತಾಯಗೊಂಡಿತೋ ಅದೇ ಸಮಂತಪಂಚಕ ಕ್ಷೇತ್ರದಲ್ಲಿ ಕುರು-ಪಾಂಡವರ ಹದಿನೆಂಟು ಅಕ್ಷೌಹಿಣೀ ಸೇನೆಯು ಸೇರೆ ನಾಶಹೊಂದಿದುದನ್ನು ತಿಳಿಸುತ್ತಾ "ವಿದ್ವಾಂಸರ ಪ್ರಕಾರ ಯಾವುದೇ ದೇಶದ ಹೆಸರು ಆ ದೇಶದ ಮುಖ್ಯ ಗುಣಲಕ್ಷಣಗಳಿಗೆ ಹೊಂದಿಕೊಂಡಿರಬೇಕು" ಎಂದು ಹೇಳುತ್ತಾನೆ.
01002001 ಋಷಯ ಊಚುಃ|
01002001a ಸಮಂತಪಂಚಕಮಿತಿ ಯದುಕ್ತಂ ಸೂತನಂದನ|
01002001c ಏತತ್ಸರ್ವಂ ಯಥಾನ್ಯಾಯಂ ಶ್ರೋತುಮಿಚ್ಛಾಮಹೇ ವಯಂ||
ಋಷಿಗಳು ಹೇಳಿದರು: “ಸೂತನಂದನ! ನೀನು ಹೇಳಿದ ಸಮಂತಪಂಚಕದ ಕುರಿತು ಸರ್ವವನ್ನೂ ಯಥಾವತ್ತಾಗಿ ಕೇಳಲು ಬಯಸುತ್ತೇವೆ.”
01002002 ಸೂತ ಉವಾಚ|
01002002a ಶುಶ್ರೂಷಾ ಯದಿ ವೋ ವಿಪ್ರಾ ಬ್ರುವತಶ್ಚ ಕಥಾಃ ಶುಭಾಃ|
01002002c ಸಮಂತಪಂಚಕಾಖ್ಯಂ ಚ ಶ್ರೋತುಮರ್ಹಥ ಸತ್ತಮಾಃ||
01002003a ತ್ರೇತಾದ್ವಾಪರಯೋಃ ಸಂದೌ ರಾಮಃ ಶಸ್ತ್ರಭೃತಾಂ ವರಃ|
01002003c ಅಸಕೃತ್ಪಾರ್ಥಿವಂ ಕ್ಷತ್ರಂ ಜಘಾನಾಮರ್ಷಚೋದಿತಃ||
01002004a ಸ ಸರ್ವಂ ಕ್ಷತ್ರಮುತ್ಸಾದ್ಯ ಸ್ವವೀರ್ಯೇಣಾನಲದ್ಯುತಿಃ|
01002004c ಸಮಂತಪಂಚಕೇ ಪಂಚ ಚಕಾರ ರುಧಿರಹ್ರದಾನ್||
01002005a ಸ ತೇಷು ರುಧಿರಾಂಭಸ್ಸು ಹೃದೇಷು ಕ್ರೋಧಮೂರ್ಚ್ಛಿತಃ|
01002005c ಪಿತೄನ್ಸಂತರ್ಪಯಾಮಾಸ ರುಧಿರೇಣೇತಿ ನಃ ಶ್ರುತಂ||
01002006a ಅಥರ್ಚೀಕಾದಯೋಽಭ್ಯೇತ್ಯ ಪಿತರೋ ಬ್ರಾಹ್ಮಣರ್ಷಭಂ|
[1]01002006c ತಂ ಕ್ಷಮಸ್ವೇತಿ ಸಿಷಿಧುಸ್ತತಃ ಸ ವಿರರಾಮ ಹ||
01002007a ತೇಷಾಂ ಸಮೀಪೇ ಯೋ ದೇಶೋ ಹ್ರದಾನಾಂ ರುಧಿರಾಂಭಸಾಂ|
01002007c ಸಮಂತಪಂಚಕಮಿತಿ ಪುಣ್ಯಂ ತತ್ಪರಿಕೀರ್ತಿತಂ||
01002008a ಯೇನ ಲಿಂಗೇನ ಯೋ ದೇಶೋ ಯುಕ್ತಃ ಸಮುಪಲಕ್ಷ್ಯತೇ|
01002008c ತೇನೈವ ನಾಮ್ನಾ ತಂ ದೇಶಂ ವಾಚ್ಯಮಾಹುರ್ಮನೀಷಿಣಃ||
01002009a ಅಂತರೇ ಚೈವ ಸಂಪ್ರಾಪ್ತೇ ಕಲಿದ್ವಾಪರಯೋರಭೂತ್|
01002009c ಸಮಂತಪಂಚಕೇ ಯುದ್ಧಂ ಕುರುಪಾಂಡವಸೇನಯೋಃ||
01002010a ತಸ್ಮಿನ್ಪರಮಧರ್ಮಿಷ್ಟೇ ದೇಶೇ ಭೂದೋಷವರ್ಜಿತೇ|
01002010c ಅಷ್ಟಾದಶ ಸಮಾಜಗ್ಮುರಕ್ಷೌಹಿಣ್ಯೋ ಯುಯುತ್ಸಯಾ||
[2]01002011a ಏವಂ ನಾಮಾಭಿನಿರ್ವೃತ್ತಂ ತಸ್ಯ ದೇಶಸ್ಯ ವೈ ದ್ವಿಜಾಃ|
01002011c ಪುಣ್ಯಶ್ಚ ರಮಣೀಯಶ್ಚ ಸ ದೇಶೋ ವಃ ಪ್ರಕೀರ್ತಿತಃ||
01002012a ತದೇತತ್ಕಥಿತಂ ಸರ್ವಂ ಮಯಾ ವೋ ಮುನಿಸತ್ತಮಾಃ|
01002012c ಯಥಾ ದೇಶಃ ಸ ವಿಖ್ಯಾತಸ್ತ್ರಿಷು ಲೋಕೇಷು ವಿಶ್ರುತಃ||
ಸೂತನು ಹೇಳಿದನು: “ವಿಪ್ರರೇ! ನನ್ನ ಮಾತುಗಳನ್ನು ಕೇಳಿ. ಸತ್ತಮರಾದ ನೀವು ನಾನು ಈಗ ಹೇಳುವ ಶುಭ ಸಮಂತಪಂಚಕಾಖ್ಯ[3]ವನ್ನು ಕೇಳಲು ಅರ್ಹರಿದ್ದೀರಿ. ತ್ರೇತ-ದ್ವಾಪರ ಯುಗಗಳ ಸಂಧಿಯಲ್ಲಿ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ರಾಮನು ಕ್ಷತ್ರಿಯರ ಮೇಲಿನ ಕೋಪದಿಂದ ಹಲವಾರು ಪಾರ್ಥಿವರನ್ನು ಸಂಹರಿಸಿದನು. ತನ್ನ ವೀರ್ಯದಿಂದ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಅವನು ಸರ್ವ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿ ಸಮಂತಪಂಚಕದಲ್ಲಿ ರಕ್ತದ ಐದು ಸರೋವರಗಳನ್ನು ರಚಿಸಿದನು. ಆ ಕ್ರೋಧಮೂರ್ಛಿತನು ರಕ್ತಸರೋವರಗಳಲ್ಲಿ ನಿಂತು ತನ್ನ ಪಿತೃಗಳಿಗೆ ರಕ್ತದಿಂದಲೇ ತರ್ಪಣಗಳನ್ನಿತ್ತನೆಂದು ಕೇಳಿದ್ದೇವೆ. ಆಗ ಋಚಿಕ ಮೊದಲಾದ ಪಿತೃಗಳು ಆಗಮಿಸಿ “ಅವರನ್ನು ಕ್ಷಮಿಸು!” ಎಂದು ಹೇಳಿ ಆ ಬ್ರಾಹ್ಮಣರ್ಷಭನ ವಿನಾಶಕೃತ್ಯಕ್ಕೆ ವಿರಾಮವನ್ನಿತ್ತರು. ರಕ್ತದ ಈ ಸರೋವರಗಳ ಸಮೀಪದ ಪ್ರದೇಶವು ಪುಣ್ಯ ಸಮಂತಪಂಚಕ ಎಂದು ಪ್ರಕೀರ್ತಿಯಲ್ಲಿದೆ. ವಿದ್ವಾಂಸರ ಪ್ರಕಾರ ಯಾವುದೇ ದೇಶದ ಹೆಸರು ಆ ದೇಶದ ಮುಖ್ಯ ಗುಣಲಕ್ಷಣಗಳಿಗೆ ಹೊಂದಿಕೊಂಡಿರಬೇಕು[4]. ಕಲಿ-ದ್ವಾಪರಯುಗಗಳ ಸಂಧಿಕಾಲದಲ್ಲಿ ಸಮಂತಪಂಚಕದಲ್ಲಿಯೇ ಕುರುಪಾಂಡವರ ಸೇನೆಗಳ ನಡುವೆ ಯುದ್ಧ ನಡೆಯಿತು. ಅದೇ ಭೂದೋಷವರ್ಜಿತ ಪರಮಧರ್ಮಿಷ್ಠ ಪ್ರದೇಶದಲ್ಲಿ ಹದಿನೆಂಟು ಅಕ್ಷೌಹಿಣೀ ಸೇನೆಗಳು ಯುದ್ಧ ಉತ್ಸುಕರಾಗಿ ಸೇರಿದ್ದರು. ದ್ವಿಜರೇ! ಇದೇ ಪುಣ್ಯ ಮತ್ತು ರಮಣೀಯವೆಂದು ಪ್ರಕೀರ್ತಿತ ಆ ದೇಶದ ಹೆಸರಿಗೆ ಸಂಬಂಧಿಸಿದ ವೃತ್ತಾಂತ. ಮುನಿಸತ್ತಮರೇ! ಮೂರು ಲೋಕಗಳಲ್ಲಿಯೂ ವಿಖ್ಯಾತ ಈ ಪ್ರದೇಶದ ಕುರಿತಾದ ಸರ್ವವನ್ನು ನಿಮಗೆ ಹೇಳಿದ್ದೇನೆ.”
***
[1] ನೀಲಕಂಠೀಯದಲ್ಲಿ ಇದರ ಮೊದಲು ಈ ಶ್ಲೋಕಗಳಿವೆ: ಅಥರ್ಚೀಕಾದಯೋಽಭ್ಯೇತ್ಯ ಪಿತರೋ ರಾಮಮಬ್ರುವನ್| ರಾಮ ರಾಮ ಮಹಾಭಾಗ ಪ್ರೀತಾಃ ಸ್ಮ ತವ ಭಾರ್ಗವ|| ಅನಯಾ ಪಿತೃಭಕ್ತ್ಯಾ ಚ ವಿಕ್ರಮೇಣ ತವ ಪ್ರಭೋ| ವರಂ ವೃಣೀಷ್ವ ಭದ್ರಂ ತೇ ಯಮಿಚ್ಛಸಿ ಮಹಾದ್ಯುತೇ|| ಅರ್ಥಾತ್: ಅನಂತರ ಅರ್ಚೀಕ ಮೊದಲಾದ ಪಿತೃಗಳು ರಾಮನಿಗೆ ಹೇಳಿದರು: “ರಾಮ! ರಾಮ! ಮಹಾಭಾಗ! ನಿನ್ನಿಂದ ನಾವು ಪ್ರೀತರಾಗಿದ್ದೇವೆ. ನಿನಗೆ ಮಂಗಳವಾಗಲಿ! ಮಹಾದ್ಯುತೇ! ನಿನಗಿಷ್ಟವಾದ ವರವನ್ನು ಕೇಳಿಕೋ!”
ರಾಮ ಉವಾಚ: ಯದಿ ಮೇ ಪಿತರಃ ಪ್ರೀತಾ ಯದ್ಯನುಗ್ರಾಹ್ಯತಾ ಮಯಿ| ಅತಶ್ಚ ಪಾಪನ್ಮುಚ್ಯೇಽಹಮೇಷ ಮೇ ಪ್ರಾರ್ಥಿತೋ ವರಃ| ಹೃದಾಶ್ಚ ತೀರ್ಥಭೂತಾ ಮೇ ಭವೇಯುರ್ಭುವಿ ವಿಶೃತಾಃ|| ಅರ್ಥಾತ್: ರಾಮನು ಉತ್ತರಿಸಿದನು: “ಪಿತೃಗಳು ನನ್ನ ಮೇಲೆ ಪ್ರೀತಿಯಿಂದ ಅನುಗ್ರಹಿಸುವುದಾದರೆ ನನ್ನನ್ನು ಈ ಪಾಪದಿಂದ ಮುಕ್ತಗೊಳಿಸಿ ಎನ್ನುವ ವರವನ್ನೇ ಪ್ರಾರ್ಥಿಸುತ್ತೇನೆ. ನನ್ನಿಂದ ರಚಿಸಲ್ಪಟ್ಟ ಈ ತೀರ್ಥಗಳು ಭುವಿಯಲ್ಲಿ ವಿಶ್ರುತವಾಗಲಿ!”
ಏವಂ ಭವಿಷ್ಯತೀತ್ಯೇವಂ ಪಿತರಸ್ತಮಥಾಬ್ರುವನ್| ಅರ್ಥಾತ್: ಹಾಗೆಯೇ ಆಗುತ್ತದೆಯೆಂದು ಪಿತೃಗಳು ಅವನಿಗೆ ಹೇಳಿದರು.
[2] ಇದರ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಸಮೇತ್ಯ ತಂ ದ್ವಿಜಾಸ್ತಾಶ್ಚ ತತ್ರೈವ ನಿಧನಂ ಗತಾಃ| ಅರ್ಥಾತ್: ಅಲ್ಲಿ ಕ್ಷತ್ರಿಯರು ಒಂದುಗೂಡಿ ಅಲ್ಲಿಯೇ ನಿಧನ ಹೊಂದಿದರು.
[3] ಸಮಂತಪಂಚಕ ತೀರ್ಥಮಹಾತ್ಮೆಯು ವನಪರ್ವದ ೮೧ನೇ ಅಧ್ಯಾಯದ (ತೀರ್ಥಯಾತ್ರಾಪರ್ವ) ಶ್ಲೋಕಸಂಖ್ಯೆ ೨೨-೩೩ ರಲ್ಲಿ ಬರುತ್ತದೆ.
[4] ತ್ರೇತ-ದ್ವಾಪರಗಳ ಸಂಧ್ಯದಲ್ಲಾದ ಕ್ಷತ್ರಿಯರ ವಿನಾಶವು ಯಾವ ಸ್ಥಳದಲ್ಲಿ ಕೊನೆಗೊಂಡಿತೋ ಅದೇ ಸ್ಥಳದಲ್ಲಿ ದ್ವಾಪರ-ಕಲಿಗಳ ಸಂಧ್ಯದಲ್ಲಿಯೂ ಕ್ಷತ್ರಿಯರ ವಿನಾಶವು ನಡೆಯಿತು ಎನ್ನುವುದನ್ನು ಇಲ್ಲಿ ಗಮನಿಸಬೇಕು.