Shanti Parva: Chapter 78

ಶಾಂತಿ ಪರ್ವ: ರಾಜಧರ್ಮ ಪರ್ವ

೭೮

ಕೇಕಯರಾಜ-ರಾಕ್ಷಸ ಸಂವಾದ (೧-೩೪).

12078001 ಯುಧಿಷ್ಠಿರ ಉವಾಚ|

12078001a ಕೇಷಾಂ ರಾಜಾ ಪ್ರಭವತಿ ವಿತ್ತಸ್ಯ ಭರತರ್ಷಭ|

12078001c ಕಯಾ ಚ ವೃತ್ತ್ಯಾ ವರ್ತೇತ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ಯಾರ ವಿತ್ತದ ಮೇಲೆ ರಾಜನ ಅಧಿಕಾರವಿರುತ್ತದೆ? ರಾಜನು ಯಾವ ವೃತ್ತಿಯನ್ನು ಅವಲಂಬಿಸಿರಬೇಕು? ಅದನ್ನು ನನಗೆ ಹೇಳು.”

12078002 ಭೀಷ್ಮ ಉವಾಚ|

12078002a ಅಬ್ರಾಹ್ಮಣಾನಾಂ ವಿತ್ತಸ್ಯ ಸ್ವಾಮೀ ರಾಜೇತಿ ವೈದಿಕಮ್|

12078002c ಬ್ರಾಹ್ಮಣಾನಾಂ ಚ ಯೇ ಕೇ ಚಿದ್ವಿಕರ್ಮಸ್ಥಾ ಭವಂತ್ಯುತ||

ಭೀಷ್ಮನು ಹೇಳಿದನು: “ಬ್ರಾಹ್ಮಣನಲ್ಲದವರೆಲ್ಲರ ವಿತ್ತದ ಸ್ವಾಮಿಯು ರಾಜನೆಂದು ವೇದಸಿದ್ಧಾಂತ. ತಮ್ಮ ಕರ್ಮಗಳಲ್ಲಿ ತೊಡಗಿರದೇ ಇದ್ದ ಬ್ರಾಹ್ಮಣರ ಸ್ವತ್ತೂ ರಾಜನದ್ದೇ ಎಂದು ಹೇಳುತ್ತಾರೆ.

12078003a ವಿಕರ್ಮಸ್ಥಾಶ್ಚ ನೋಪೇಕ್ಷ್ಯಾ ವಿಪ್ರಾ ರಾಜ್ಞಾ ಕಥಂ ಚನ|

12078003c ಇತಿ ರಾಜ್ಞಾಂ ಪುರಾವೃತ್ತಮಭಿಜಲ್ಪಂತಿ ಸಾಧವಃ||

ತಮ್ಮ ಕರ್ಮಗಳಲ್ಲಿ ತೊಡಗಿರದೇ ಇರುವ ಬ್ರಾಹ್ಮಣರನ್ನು ಎಂದೂ ರಾಜನು ಉಪೇಕ್ಷಿಸಬಾರದು. ಇದು ಹಿಂದಿನ ರಾಜರುಗಳ ನಡತೆ ಎಂದು ಸಾಧುಗಳು ಹೇಳುತ್ತಿರುತ್ತಾರೆ.

12078004a ಯಸ್ಯ ಸ್ಮ ವಿಷಯೇ ರಾಜ್ಞಃ ಸ್ತೇನೋ ಭವತಿ ವೈ ದ್ವಿಜಃ|

12078004c ರಾಜ್ಞ ಏವಾಪರಾಧಂ ತಂ ಮನ್ಯಂತೇ ಕಿಲ್ಬಿಷಂ ನೃಪ||

ರಾಜ್ಯದಲ್ಲಿ ಬ್ರಾಹ್ಮಣನು ಕಳ್ಳನಾಗುವುದಕ್ಕೆ ರಾಜನೇ ಅಪರಾಧಿ ಎಂದೂ ಅವನಿಗೇ ಆ ಪಾಪವು ತಗಲುತ್ತದೆಯೆಂದೂ ಅಭಿಪ್ರಾಯವಿದೆ.

12078005a ಅಭಿಶಸ್ತಮಿವಾತ್ಮಾನಂ ಮನ್ಯಂತೇ ತೇನ ಕರ್ಮಣಾ|

12078005c ತಸ್ಮಾದ್ರಾಜರ್ಷಯಃ ಸರ್ವೇ ಬ್ರಾಹ್ಮಣಾನನ್ವಪಾಲಯನ್||

ಆಗಿನ ಕಾಲದ ರಾಜರೂ ಕೂಡ ಬ್ರಾಹ್ಮಣರು ಧರ್ಮಭ್ರಷ್ಟರಾಗಲು ತಾವೇ ಕಾರಣರೆಂದು ತಿಳಿದುಕೊಳ್ಳುತ್ತಿದ್ದರು. ಆದುದರಿಂದ ರಾಜರ್ಷಿಗಳು ಎಲ್ಲ ಬ್ರಾಹ್ಮಣರನ್ನೂ, ಧರ್ಮಭ್ರಷ್ಟರಾಗದ ರೀತಿಯಲ್ಲಿ ಪರಿಪಾಲಿಸುತ್ತಿದ್ದರು.

12078006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12078006c ಗೀತಂ ಕೇಕಯರಾಜೇನ ಹ್ರಿಯಮಾಣೇನ ರಕ್ಷಸಾ||

ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ರಾಕ್ಷಸನಿಂದ ಅಪಹರಿಸಲ್ಪಟ್ಟ ಕೇಕಯರಾಜನ ಗೀತೆಯನ್ನು ಉದಾಹರಿಸುತ್ತಾರೆ.

12078007a ಕೇಕಯಾನಾಮಧಿಪತಿಂ ರಕ್ಷೋ ಜಗ್ರಾಹ ದಾರುಣಮ್|

12078007c ಸ್ವಾಧ್ಯಾಯೇನಾನ್ವಿತಂ ರಾಜನ್ನರಣ್ಯೇ ಸಂಶಿತವ್ರತಮ್||

ರಾಜನ್! ಅರಣ್ಯದಲ್ಲಿ ಸಂಶಿತವ್ರತನಾಗಿ ಸ್ವಾಧ್ಯಾಯ ನಿರತನಾಗಿದ್ದ ಕೇಕಯರ ಅಧಿಪತಿಯನ್ನು ಓರ್ವ ದಾರುಣ ರಾಕ್ಷಸನು ಹಿಡಿದುಕೊಂಡನು.

12078008 ರಾಜೋವಾಚ|

12078008a ನ ಮೇ ಸ್ತೇನೋ ಜನಪದೇ ನ ಕದರ್ಯೋ ನ ಮದ್ಯಪಃ|

12078008c ನಾನಾಹಿತಾಗ್ನಿರ್ನಾಯಜ್ವಾ ಮಾಮಕಾಂತರಮಾವಿಶಃ||

ರಾಜನು ಹೇಳಿದನು: “ನನ್ನ ಜನಪದದಲ್ಲಿ ಕಳ್ಳನಿಲ್ಲ, ನೀಚನಿಲ್ಲ. ಮದ್ಯಪಾನ ಮಾಡುವವನೂ ಇಲ್ಲ. ಅಗ್ನಿಹೋತ್ರವನ್ನು ಮಾಡದವನು, ಯಜ್ಞವನ್ನು ಮಾಡದವನು ಯಾರೂ ಇಲ್ಲ. ಹೀಗಿದ್ದರೂ ನೀನು ನನ್ನ ದೇಹವನ್ನು ಪ್ರವೇಶಿಸಿರುವೆ!

12078009a ನ ಚ ಮೇ ಬ್ರಾಹ್ಮಣೋಽವಿದ್ವಾನ್ನಾವ್ರತೀ ನಾಪ್ಯಸೋಮಪಃ|

12078009c ನಾನಾಹಿತಾಗ್ನಿರ್ವಿಷಯೇ ಮಾಮಕಾಂತರಮಾವಿಶಃ||

ನನ್ನ ರಾಜ್ಯದಲ್ಲಿ ವಿದ್ವಾಂಸನಲ್ಲದ ಬ್ರಾಹ್ಮಣನಿಲ್ಲ. ಉತ್ತಮ ವ್ರತಾನುಷ್ಠಾನಗಳನ್ನು ಮಾಡದವನು ಇಲ್ಲ. ಯಜ್ಞದಲ್ಲಿ ಸೋಮಪಾನವನ್ನು ಮಾಡದವನಿಲ್ಲ. ಅಗ್ನಿಯಿಲ್ಲದೇ ಇರುವವನಿಲ್ಲ. ಯಜ್ಞಮಾಡದವನಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಪ್ರವೇಶಿಸಿರುವೆ!

12078010a ನಾನಾಪ್ತದಕ್ಷಿಣೈರ್ಯಜ್ಞೈರ್ಯಜಂತೇ ವಿಷಯೇ ಮಮ|

12078010c ಅಧೀತೇ ನಾವ್ರತೀ ಕಶ್ಚಿನ್ಮಾಮಕಾಂತರಮಾವಿಶಃ||

ನನ್ನ ರಾಜ್ಯದಲ್ಲಿ ನಾನಾ ಆಪ್ತದಕ್ಷಿಣೆಗಳಿಂದ ಯಜ್ಞಗಳನ್ನು ಯಜಿಸುತ್ತಾರೆ. ಬ್ರಹ್ಮಚರ್ಯವ್ರತಧಾರಿಯಾಗದೇ ಯಾರೂ ವೇದಗಳನ್ನು ಕಲಿಯುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078011a ಅಧೀಯತೇಽಧ್ಯಾಪಯಂತಿ ಯಜಂತೇ ಯಾಜಯಂತಿ ಚ|

12078011c ದದತಿ ಪ್ರತಿಗೃಹ್ಣಂತಿ ಷಟ್ಸು ಕರ್ಮಸ್ವವಸ್ಥಿತಾಃ||

12078012a ಪೂಜಿತಾಃ ಸಂವಿಭಕ್ತಾಶ್ಚ ಮೃದವಃ ಸತ್ಯವಾದಿನಃ|

12078012c ಬ್ರಾಹ್ಮಣಾ ಮೇ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ||

ನನ್ನ ಬ್ರಾಹ್ಮಣರು ಸ್ವಕರ್ಮಸ್ಥರಾಗಿ ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ ಮತ್ತು ಪ್ರತಿಗ್ರಹಣ ಈ ಆರು ಕರ್ಮಗಳಲ್ಲಿ ನಿರತರಾಗಿದ್ದಾರೆ. ಅವರು ಸತ್ಕರಿಸಲ್ಪಟ್ಟಿದ್ದಾರೆ. ಅವರು ಮೃದುಸ್ವಭಾವದವರು ಮತ್ತು ಸತ್ಯವಾದಿಗಳು. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078013a ನ ಯಾಚಂತೇ ಪ್ರಯಚ್ಚಂತಿ ಸತ್ಯಧರ್ಮವಿಶಾರದಾಃ|

12078013c ನಾಧ್ಯಾಪಯಂತ್ಯಧೀಯಂತೇ ಯಜಂತೇ ನ ಚ ಯಾಜಕಾಃ||

12078014a ಬ್ರಾಹ್ಮಣಾನ್ಪರಿರಕ್ಷಂತಿ ಸಂಗ್ರಾಮೇಷ್ವಪಲಾಯಿನಃ|

12078014c ಕ್ಷತ್ರಿಯಾ ಮೇ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ||

ನನ್ನ ರಾಜ್ಯದ ಸತ್ಯಧರ್ಮವಿಶಾರದ ಕ್ಷತ್ರಿಯರು ಸ್ವಕರ್ಮದಲ್ಲಿ ನಿರತರಾಗಿದ್ದು ದಾನವನ್ನು ಕೇಳುವುದಿಲ್ಲ, ದಾನವನ್ನು ಕೊಡುತ್ತಾರೆ. ಅಧ್ಯಯನ ಮಾಡುತ್ತಾರೆ, ಅಧ್ಯಾಪನ ಮಾಡಿಸುವುದಿಲ್ಲ. ಯಜಿಸುತ್ತಾರೆ. ಯಾಜಕರಲ್ಲ. ಬ್ರಾಹ್ಮಣರನ್ನು ಪರಿರಕ್ಷಿಸುತ್ತಾರೆ ಮತ್ತು ಸಂಗ್ರಾಮದಿಂದ ಹಿಮ್ಮೆಟ್ಟುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078015a ಕೃಷಿಗೋರಕ್ಷವಾಣಿಜ್ಯಮುಪಜೀವಂತ್ಯಮಾಯಯಾ|

12078015c ಅಪ್ರಮತ್ತಾಃ ಕ್ರಿಯಾವಂತಃ ಸುವ್ರತಾಃ ಸತ್ಯವಾದಿನಃ||

12078016a ಸಂವಿಭಾಗಂ ದಮಂ ಶೌಚಂ ಸೌಹೃದಂ ಚ ವ್ಯಪಾಶ್ರಿತಾಃ|

12078016c ಮಮ ವೈಶ್ಯಾಃ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ||

ನನ್ನ ದೇಶದ ವೈಶ್ಯರು ಸ್ವಕರ್ಮಗಳಲ್ಲಿ ನಿರತರಾಗಿದ್ದು ಮೋಸಮಾಡದೇ ಕೃಷಿ-ಗೋರಕ್ಷಣೆ-ವಾಣಿಜ್ಯಗಳಿಂದ ಉಪಜೀವನವನ್ನು ನಡೆಸುತ್ತಾರೆ. ಅವರು ಅಪ್ರಮತ್ತರೂ, ಕ್ರಿಯಾವಂತರೂ, ಸುವ್ರತರೂ ಸತ್ಯವಾದಿಗಳೂ ಆಗಿದ್ದಾರೆ. ಹಂಚಿಕೊಳ್ಳುವುದನ್ನೂ, ದಮ-ಶೌಚಗಳನ್ನೂ, ಸೌಹಾರ್ದತೆಯನ್ನೂ ಆಶ್ರಯಿಸಿದ್ದಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078017a ತ್ರೀನ್ವರ್ಣಾನನುತಿಷ್ಠಂತಿ ಯಥಾವದನಸೂಯಕಾಃ|

12078017c ಮಮ ಶೂದ್ರಾಃ ಸ್ವಕರ್ಮಸ್ಥಾ ಮಾಮಕಾಂತರಮಾವಿಶಃ||

ನನ್ನ ರಾಜ್ಯದ ಶೂದ್ರರು ಸ್ವಕರ್ಮಗಳಲ್ಲಿ ನಿರತರಾಗಿ ಅಸೂಯೆಯಿಲ್ಲದೇ ಮೂರು ವರ್ಣದವರನ್ನೂ ಸೇವೆಗೈಯುತ್ತಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078018a ಕೃಪಣಾನಾಥವೃದ್ಧಾನಾಂ ದುರ್ಬಲಾತುರಯೋಷಿತಾಮ್|

12078018c ಸಂವಿಭಕ್ತಾಸ್ಮಿ ಸರ್ವೇಷಾಂ ಮಾಮಕಾಂತರಮಾವಿಶಃ||

ನಾನು ಕೃಪಣರು, ಅನಾಥರು, ವೃದ್ಧರು, ದುರ್ಬಲರು, ರೋಗಿಗಳು ಮತ್ತು ಸ್ತ್ರೀಯರಿಗೆ ಅನ್ನ-ವಸ್ತ್ರಾದಿಗಳನ್ನಿತ್ತು ರಕ್ಷಿಸುತ್ತೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078019a ಕುಲದೇಶಾದಿಧರ್ಮಾಣಾಂ ಪ್ರಥಿತಾನಾಂ ಯಥಾವಿಧಿ|

12078019c ಅವ್ಯುಚ್ಚೇತ್ತಾಸ್ಮಿ ಸರ್ವೇಷಾಂ ಮಾಮಕಾಂತರಮಾವಿಶಃ||

ಕುಲ, ದೇಶ ಮತ್ತು ಜಾತಿ ಧರ್ಮಗಳನ್ನು ಯಥಾವಿಧಿಯಾಗಿ ಪಾಲಿಸಿಕೊಂಡು ಮತ್ತು ಯಾರೂ ಅದರಿಂದ ಚ್ಯುತಿಯಾಗದಂತೆ ನೋಡಿಕೊಳ್ಳುತ್ತಾ ಬಂದಿದ್ದೇನೆ. ಹೀಗಿದ್ದರೂ ನನ್ನ ಶರೀರವನ್ನು ನೀನು ಪ್ರವೇಶಿಸಿರುವೆ.

12078020a ತಪಸ್ವಿನೋ ಮೇ ವಿಷಯೇ ಪೂಜಿತಾಃ ಪರಿಪಾಲಿತಾಃ|

12078020c ಸಂವಿಭಕ್ತಾಶ್ಚ ಸತ್ಕೃತ್ಯ ಮಾಮಕಾಂತರಮಾವಿಶಃ||

ನನ್ನ ದೇಶದಲ್ಲಿರುವ ತಪಸ್ವಿಗಳನ್ನು ನಾನು ಪೂಜಿಸುತ್ತೇನೆ ಮತ್ತು ಪರಿಪಾಲಿಸುತ್ತೇನೆ. ಎಲ್ಲರಿಗೂ ಬೇಕಾದುದನ್ನು ಕೊಟ್ಟು ಸತ್ಕರಿಸಿದ್ದೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078021a ನಾಸಂವಿಭಜ್ಯ ಭೋಕ್ತಾಸ್ಮಿ ನ ವಿಶಾಮಿ ಪರಸ್ತ್ರಿಯಮ್|

12078021c ಸ್ವತಂತ್ರೋ ಜಾತು ನ ಕ್ರೀಡೇ ಮಾಮಕಾಂತರಮಾವಿಶಃ||

ದೇವತೆ-ಪಿತೃ-ಅತಿಥಿಗಳಿಗೆ ನೀಡದೇ ನಾನು ಊಟಮಾಡುವುದಿಲ್ಲ. ಪರಸ್ತ್ರೀಯರನ್ನು ಸೇರುವುದಿಲ್ಲ. ಸ್ವಚ್ಛಂದನಾಗಿ ಕ್ರೀಡಿಸುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078022a ನಾಬ್ರಹ್ಮಚಾರೀ ಭಿಕ್ಷಾವಾನ್ಭಿಕ್ಷುರ್ವಾಬ್ರಹ್ಮಚಾರಿಕಃ|

12078022c ಅನೃತ್ವಿಜಂ ಹುತಂ ನಾಸ್ತಿ ಮಾಮಕಾಂತರಮಾವಿಶಃ||

ಬ್ರಹ್ಮಚಾರಿಯಾಗಿರದವನು ಭಿಕ್ಷೆ ಬೇಡುವುದಿಲ್ಲ. ಭಿಕ್ಷುವು ಬ್ರಹ್ಮಚರ್ಯವನ್ನು ಪಾಲಿಸದೇ ಇರುವುದಿಲ್ಲ. ಋತ್ವಿಜನಲ್ಲದವನು ಹೋಮಕಾರ್ಯಗಳನ್ನು ನಡೆಸುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078023a ನಾವಜಾನಾಮ್ಯಹಂ ವೃದ್ಧಾನ್ನ ವೈದ್ಯಾನ್ನ ತಪಸ್ವಿನಃ|

12078023c ರಾಷ್ಟ್ರೇ ಸ್ವಪತಿ ಜಾಗರ್ಮಿ ಮಾಮಕಾಂತರಮಾವಿಶಃ||

ವೃದ್ಧರು, ವಿದ್ವಾಂಸರು ಮತ್ತು ತಪಸ್ವಿಗಳನ್ನು ನಾನು ಅವಹೇಳನ ಮಾಡುವುದಿಲ್ಲ. ರಾಷ್ಟ್ರವು ನಿದ್ದೆಮಾಡುತ್ತಿರುವಾಗ ನಾನು ಜಾಗೃತನಾಗಿರುತ್ತೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078024a ವೇದಾಧ್ಯಯನಸಂಪನ್ನಸ್ತಪಸ್ವೀ ಸರ್ವಧರ್ಮವಿತ್|

12078024c ಸ್ವಾಮೀ ಸರ್ವಸ್ಯ ರಾಜ್ಯಸ್ಯ ಶ್ರೀಮಾನ್ಮಮ ಪುರೋಹಿತಃ||

ನನ್ನ ಪುರೋಹಿತನು ವೇದಾಧ್ಯಯಸಂಪನ್ನನು. ತಪಸ್ವಿಯು. ಸರ್ವಧರ್ಮವಿದುವು. ರಾಜ್ಯದ ಎಲ್ಲವುಗಳ ಸ್ವಾಮಿ ಶ್ರೀಮಾನನು.

12078025a ದಾನೇನ ದಿವ್ಯಾನಭಿವಾಂಚಾಮಿ ಲೋಕಾನ್

ಸತ್ಯೇನಾಥೋ ಬ್ರಾಹ್ಮಣಾನಾಂ ಚ ಗುಪ್ತ್ಯಾ|

12078025c ಶುಶ್ರೂಷಯಾ ಚಾಪಿ ಗುರೂನುಪೈಮಿ

ನ ಮೇ ಭಯಂ ವಿದ್ಯತೇ ರಾಕ್ಷಸೇಭ್ಯಃ||

ದಾನದಿಂದ ದಿವ್ಯ ಲೋಕಗಳನ್ನು ಬಯಸುತ್ತೇನೆ. ಅನಾಥ ಬ್ರಾಹ್ಮಣರನ್ನು ರಕ್ಷಿಸಿ ಸತ್ಯನಾಗಿದ್ದೇನೆ. ಶುಶ್ರೂಷೆಗಳಿಂದ ಗುರುಗಳನ್ನು ಪ್ರೀತಗೊಳಿಸಿದ್ದೇನೆ. ರಾಕ್ಷಸರಿಂದ ನನಗೆ ಭಯವೆನ್ನುವುದು ಇಲ್ಲ.

12078026a ನ ಮೇ ರಾಷ್ಟ್ರೇ ವಿಧವಾ ಬ್ರಹ್ಮಬಂಧುರ್

ನ ಬ್ರಾಹ್ಮಣಃ ಕೃಪಣೋ ನೋತ ಚೋರಃ|

12078026c ನ ಪಾರಜಾಯೀ ನ ಚ ಪಾಪಕರ್ಮಾ

ನ ಮೇ ಭಯಂ ವಿದ್ಯತೇ ರಾಕ್ಷಸೇಭ್ಯಃ||

ನನ್ನ ರಾಷ್ಟ್ರದಲ್ಲಿ ವಿಧವೆಯಿಲ್ಲ. ಅಧಮ ಬ್ರಾಹ್ಮಣನಿಲ್ಲ. ಬ್ರಾಹ್ಮಣರಲ್ಲಿ ಯಾರೂ ಕೃಪಣರೂ, ಕಳ್ಳರೂ, ಜೂಜುಗಾರನಾಗಲೀ, ಅನಧಿಕಾರಿಗಳಿಗೆ ಯಜ್ಞಮಾಡಿಸುವುದನ್ನಾಗಲೀ, ಪಾಪಕರ್ಮಗಳನ್ನು ಮಾಡುವವನಾಗಲೀ ಇಲ್ಲ. ಆದುದರಿಂದ ರಾಕ್ಷಸರಿಂದ ನನಗೆ ಭಯವೆನ್ನುವುದೇ ಇಲ್ಲ.

12078027a ನ ಮೇ ಶಸ್ತ್ರೈರನಿರ್ಭಿನ್ನಮಂಗೇ ದ್ವ್ಯಂಗುಲಮಂತರಮ್|

12078027c ಧರ್ಮಾರ್ಥಂ ಯುಧ್ಯಮಾನಸ್ಯ ಮಾಮಕಾಂತರಮಾವಿಶಃ||

ಧರ್ಮಕ್ಕಾಗಿ ಯುದ್ಧಮಾಡುತ್ತಿರುವಾಗ ನನ್ನ ಶರೀರದಿಂದ ಶಸ್ತ್ರಗಳಿಂದ ಗಾಯಗೊಳ್ಳದಿರುವ ಎರಡು ಅಂಗುಲ ಪ್ರದೇಶವೂ ಇಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?

12078028a ಗೋಬ್ರಾಹ್ಮಣೇ ಚ ಯಜ್ಞೇ ಚ ನಿತ್ಯಂ ಸ್ವಸ್ತ್ಯಯನಂ ಮಮ|

12078028c ಆಶಾಸತೇ ಜನಾ ರಾಷ್ಟ್ರೇ ಮಾಮಕಾಂತರಮಾವಿಶಃ||

ನನ್ನ ರಾಷ್ಟ್ರದಲ್ಲಿ ಎಲ್ಲರೂ ಗೋಬ್ರಾಹ್ಮಣರಿಗೆ ಮತ್ತು ಯಜ್ಞಗಳಿಗೆ ನಿತ್ಯವೂ ಮಂಗಳಾಶಾಸನೆಗಳನ್ನು ಹೇಳುತ್ತಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?”

12078029 ರಾಕ್ಷಸ ಉವಾಚ|

12078029a ಯಸ್ಮಾತ್ಸರ್ವಾಸ್ವವಸ್ಥಾಸು ಧರ್ಮಮೇವಾನ್ವವೇಕ್ಷಸೇ|

12078029c ತಸ್ಮಾತ್ಪ್ರಾಪ್ನುಹಿ ಕೈಕೇಯ ಗೃಹಾನ್ಸ್ವಸ್ತಿ ವ್ರಜಾಮ್ಯಹಮ್||

ರಾಕ್ಷಸನು ಹೇಳಿದನು: “ಕೈಕೇಯ! ಸರ್ವ ಅವಸ್ಥೆಗಳಲ್ಲಿ ನೀನು ಧರ್ಮವನ್ನೇ ಕಾಣುತ್ತಿರುವೆ. ಆದುದರಿಂದ ನೀನು ಕುಶಲನಾಗಿ ನಿನ್ನ ಮನೆಗೆ ಹೋಗಬಹುದು. ನಾನು ಹೋಗುತ್ತೇನೆ.

12078030a ಯೇಷಾಂ ಗೋಬ್ರಾಹ್ಮಣಾ ರಕ್ಷ್ಯಾಃ ಪ್ರಜಾ ರಕ್ಷ್ಯಾಶ್ಚ ಕೇಕಯ|

12078030c ನ ರಕ್ಷೋಭ್ಯೋ ಭಯಂ ತೇಷಾಂ ಕುತ ಏವ ತು ಮಾನುಷಾತ್[1]||

ಕೇಕಯ! ಯಾವ ರಾಜನು ಗೋಬ್ರಾಹ್ಮಣರನ್ನು ರಕ್ಷಿಸಿ ಪ್ರಜೆಗಳನ್ನೂ ರಕ್ಷಿಸುತ್ತಾನೋ ಅಂಥವನಿಗೆ ರಾಕ್ಷಸರಿಂದ ಭಯವಿಲ್ಲದಿರುವಾಗ ಮನುಷ್ಯರಿಂದ ಭಯವು ಹೇಗೆತಾನೇ ಉಂಟಾದೀತು?

12078031a ಯೇಷಾಂ ಪುರೋಗಮಾ ವಿಪ್ರಾ ಯೇಷಾಂ ಬ್ರಹ್ಮಬಲಂ ಬಲಮ್|

12078031c ಪ್ರಿಯಾತಿಥ್ಯಾಸ್ತಥಾ ದಾರಾಸ್ತೇ ವೈ ಸ್ವರ್ಗಜಿತೋ ನರಾಃ||

ಯಾರ ಮುಂದೆ ಬ್ರಾಹ್ಮಣರಿದ್ದಾರೋ, ಯಾರಿಗೆ ಎಲ್ಲಕ್ಕಿಂತ ಹೆಚ್ಚಿನ ಬಲವು ಬ್ರಾಹ್ಮಣನೇ ಆಗಿರುವನೋ, ಯಾರ ರಾಜ್ಯದಲ್ಲಿ ನಾಗರೀಕರು ಅತಿಥಿಪ್ರಿಯರಾಗಿರುವರೋ ಅಂತಹ ರಾಜನು ನಿಶ್ಚಯವಾಗಿಯೂ ಸ್ವರ್ಗವನ್ನು ಜಯಿಸುತ್ತಾನೆ.””

12078032 ಭೀಷ್ಮ ಉವಾಚ|

12078032a ತಸ್ಮಾದ್ದ್ವಿಜಾತೀನ್ರಕ್ಷೇತ ತೇ ಹಿ ರಕ್ಷಂತಿ ರಕ್ಷಿತಾಃ|

12078032c ಆಶೀರೇಷಾಂ ಭವೇದ್ರಾಜ್ಞಾಂ ರಾಷ್ಟ್ರಂ ಸಮ್ಯಕ್ಪ್ರವರ್ಧತೇ||

ಭೀಷ್ಮನು ಹೇಳಿದನು: “ಆದುದರಿಂದ ಬ್ರಾಹ್ಮಣರನ್ನು ರಕ್ಷಿಸಬೇಕೆಂದು ತಿಳಿದುಕೋ. ಬ್ರಾಹ್ಮಣರನ್ನು ರಕ್ಷಿಸಿದವರನ್ನು ಅವರು ರಕ್ಷಿಸುತ್ತಾರೆ. ರಾಜನಿಗೆ ಅವರ ಆಶೀರ್ವಾದಗಳು ದೊರೆಯುತ್ತವೆ ಮತ್ತು ರಾಷ್ಟ್ರವು ಚೆನ್ನಾಗಿ ಅಭಿವೃದ್ಧಿಗೊಳ್ಳುತ್ತದೆ.

12078033a ತಸ್ಮಾದ್ರಾಜ್ಞಾ ವಿಶೇಷೇಣ ವಿಕರ್ಮಸ್ಥಾ ದ್ವಿಜಾತಯಃ|

12078033c ನಿಯಮ್ಯಾಃ ಸಂವಿಭಜ್ಯಾಶ್ಚ ಪ್ರಜಾನುಗ್ರಹಕಾರಣಾತ್||

ಆದುದರಿಂದ ರಾಜನಾದವನು ಪ್ರಜಾನುಗ್ರಹ ಕಾರಣದಿಂದ ವಿಶೇಷವಾಗಿ ಸ್ವಕರ್ಮದಲ್ಲಿ ತೊಡಗಿರದ ಬ್ರಾಹ್ಮಣರನ್ನು ನಿಯಂತ್ರಿಸಿ ಅವರನ್ನು ಬೇರ್ಪಡಿಸಬೇಕು.

12078034a ಯ ಏವಂ ವರ್ತತೇ ರಾಜಾ ಪೌರಜಾನಪದೇಷ್ವಿಹ|

12078034c ಅನುಭೂಯೇಹ ಭದ್ರಾಣಿ ಪ್ರಾಪ್ನೋತೀಂದ್ರಸಲೋಕತಾಮ್||

ಪೌರಜನಪದರೊಂದಿಗೆ ಹೀಗೆ ವರ್ತಿಸುವ ರಾಜನು ಇಲ್ಲಿ ಮಂಗಳರೂಪ ಸುಖವನ್ನೂ ಅವಸಾನಾನಂತರದಲ್ಲಿ ಇಂದ್ರಲೋಕವನ್ನೂ ಪಡೆಯುತ್ತಾನೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕೈಕೇಯೋಪಾಖ್ಯಾನೇ ಅಷ್ಟಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಕೈಕೇಯೋಪಾಖ್ಯಾನ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.

Image result for flowers against white background

[1] ಪಾವಕಾತ್ ಎಂಬ ಪಾಠಾಂತರವಿದೆ.

Comments are closed.