ಶಾಂತಿ ಪರ್ವ: ರಾಜಧರ್ಮ ಪರ್ವ
೭೭
ಉತ್ತಮ ಮತ್ತು ಅಧಮ ಬ್ರಾಹ್ಮಣರೊಡನೆ ರಾಜನ ವ್ಯವಹಾರ ನಿರ್ವಹಣೆ (೧-೧೪).
12077001 ಯುಧಿಷ್ಠಿರ ಉವಾಚ|
12077001a ಸ್ವಕರ್ಮಣ್ಯಪರೇ ಯುಕ್ತಾಸ್ತಥೈವಾನ್ಯೇ ವಿಕರ್ಮಣಿ|
12077001c ತೇಷಾಂ ವಿಶೇಷಮಾಚಕ್ಷ್ವ ಬ್ರಾಹ್ಮಣಾನಾಂ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಬ್ರಾಹ್ಮಣರಲ್ಲಿ ಕೆಲವರು ಸ್ವಕರ್ಮಗಳಲ್ಲಿ ನಿರತರಾಗಿದ್ದರೆ ಇನ್ನು ಕೆಲವರು ತಮ್ಮದಲ್ಲದ ಕರ್ಮಗಳಲ್ಲಿ ನಿರತರಾಗಿದ್ದಾರೆ. ಅವರಲ್ಲಿರುವ ವ್ಯತ್ಯಾಸವನ್ನು ಹೇಳು.”
12077002 ಭೀಷ್ಮ ಉವಾಚ|
12077002a ವಿದ್ಯಾಲಕ್ಷಣಸಂಪನ್ನಾಃ ಸರ್ವತ್ರಾಮ್ನಾಯದರ್ಶಿನಃ|
12077002c ಏತೇ ಬ್ರಹ್ಮಸಮಾ ರಾಜನ್ಬ್ರಾಹ್ಮಣಾಃ ಪರಿಕೀರ್ತಿತಾಃ||
ಭೀಷ್ಮನು ಹೇಳಿದನು: “ವಿದ್ಯಾಲಕ್ಷಣ ಸಂಪನ್ನರು ಮತ್ತು ಸರ್ವವನ್ನೂ ಸಮಾನ ದೃಷ್ಟಿಯಿಂದ ಕಾಣುವ ಬ್ರಾಹ್ಮಣರು ಬ್ರಹ್ಮನ ಸಮಾನರು ಎಂದು ಹೇಳಿದ್ದಾರೆ.
12077003a ಋತ್ವಿಗಾಚಾರ್ಯಸಂಪನ್ನಾಃ[1] ಸ್ವೇಷು ಕರ್ಮಸ್ವವಸ್ಥಿತಾಃ|
12077003c ಏತೇ ದೇವಸಮಾ ರಾಜನ್ಬ್ರಾಹ್ಮಣಾನಾಂ ಭವಂತ್ಯುತ||
ರಾಜನ್! ಋತ್ವಿಜರು, ಆಚಾರ್ಯಸಂಪನ್ನರು ಮತ್ತು ತಮ್ಮ ಕರ್ಮಗಳಲ್ಲಿ ನಿರತರಾಗಿರುವ ಬ್ರಾಹ್ಮಣರು ದೇವತೆಗಳಿಗೆ ಸಮನಾಗುತ್ತಾರೆ.
12077004a ಋತ್ವಿಕ್ಪುರೋಹಿತೋ ಮಂತ್ರೀ ದೂತೋಽಥಾರ್ಥಾನುಶಾಸಕಃ|
12077004c ಏತೇ ಕ್ಷತ್ರಸಮಾ ರಾಜನ್ಬ್ರಾಹ್ಮಣಾನಾಂ ಭವಂತ್ಯುತ||
ರಾಜರಿಗೆ ಯಾಗ ಮಾಡಿಸುವ ಪುರೋಹಿತರು, ಮಂತ್ರಿಗಳು, ರಾಜದುತರು ಮತ್ತು ಸಂದೇಶವಾಹಕ ಬ್ರಾಹ್ಮಣರು ಕ್ಷತ್ರಿಯರಿಗೆ ಸಮಾನರೆಂದು ಹೇಳುತ್ತಾರೆ.
12077005a ಅಶ್ವಾರೋಹಾ ಗಜಾರೋಹಾ ರಥಿನೋಽಥ ಪದಾತಯಃ|
12077005c ಏತೇ ವೈಶ್ಯಸಮಾ ರಾಜನ್ಬ್ರಾಹ್ಮಣಾನಾಂ ಭವಂತ್ಯುತ||
ರಾಜನ್! ಅಶ್ವಾರೋಹೀ, ಗಜಾರೋಹೀ, ರಥಿಗಳು, ಪದಾತಿಗಳು ಆಗಿರುವ ಬ್ರಾಹ್ಮಣರು ವೈಶ್ಯರಿಗೆ ಸಮನಾದವರೆಂದು ಪರಿಗಣಿಸಲ್ಪಟ್ಟಿದ್ದಾರೆ.
12077006a ಜನ್ಮಕರ್ಮವಿಹೀನಾ ಯೇ ಕದರ್ಯಾ ಬ್ರಹ್ಮಬಂಧವಃ|
12077006c ಏತೇ ಶೂದ್ರಸಮಾ ರಾಜನ್ಬ್ರಾಹ್ಮಣಾನಾಂ ಭವಂತ್ಯುತ||
ರಾಜನ್! ತಮ್ಮ ಜನ್ಮಕರ್ಮಗಳಿಂದ ವಿಹೀನರಾಗಿ, ಕುತ್ಸಿತ ಕರ್ಮಗಳನ್ನು ಮಾಡಿಕೊಂಡು ಹೆಸರಿಗೆ ಮಾತ್ರ ಬ್ರಹ್ಮಬಂಧುವೆಂದು ಎನಿಸಿಕೊಂಡಿರುವ ಬ್ರಾಹ್ಮಣನು ಶೂದ್ರನ ಸಮವೆಂದು ಹೇಳುತ್ತಾರೆ.
12077007a ಅಶ್ರೋತ್ರಿಯಾಃ ಸರ್ವ ಏವ ಸರ್ವೇ ಚಾನಾಹಿತಾಗ್ನಯಃ|
12077007c ತಾನ್ಸರ್ವಾನ್ಧಾರ್ಮಿಕೋ ರಾಜಾ ಬಲಿಂ ವಿಷ್ಟಿಂ[2] ಚ ಕಾರಯೇತ್||
ವೇದ-ಶಾಸ್ತ್ರಗಳನ್ನು ಕಲಿತಿರದ ಮತ್ತು ಅಗ್ನಿಹೋತ್ರಗಳನ್ನು ಮಾಡದೇ ಇರುವ ಬ್ರಾಹ್ಮಣರೆಲ್ಲರೂ ಶೂದ್ರಸಮಾನರೇ. ಧಾರ್ಮಿಕ ರಾಜನು ಅಂಥವರಿಂದ ತೆರಿಗೆಯನ್ನು ತೆಗೆದುಕೊಳ್ಳುವುದಲ್ಲದೇ ವೇತನವನ್ನು ಕೊಡದೇ ಅವರಿಂದ ಸೇವೆ ಮಾಡಿಸಿಕೊಳ್ಳಬೇಕು.
12077008a ಆಹ್ವಾಯಕಾ ದೇವಲಕಾ ನಕ್ಷತ್ರಗ್ರಾಮಯಾಜಕಾಃ|
12077008c ಏತೇ ಬ್ರಾಹ್ಮಣಚಂಡಾಲಾ ಮಹಾಪಥಿಕಪಂಚಮಾಃ||
ಹೆಸರು ಕೂಗಿ ಕರೆಯುವವರು, ವೇತನವನ್ನು ತೆಗೆದುಕೊಂಡು ದೇವಾಲಯಗಳಲ್ಲಿ ಅರ್ಚಕರಾಗಿರುವವರು, ನಕ್ಷತ್ರವಿದ್ಯೆಯಿಂದ ಜ್ಯೋತಿಷ್ಯವನ್ನು ಹೇಳಿ ಜೀವನ ನಡೆಸುವವರು, ಗ್ರಾಮದ ಪೌರೋಹಿತ್ಯವನ್ನು ನಡೆಸುವವರು ಮತ್ತು ಸಮುದ್ರಯಾನ ಮಾಡುವವರು – ಈ ಐವರೂ ಬ್ರಾಹ್ಮಣರಲ್ಲಿ ಚಾಂಡಾಲರೆನಿಸಿಕೊಳ್ಳುತ್ತಾರೆ.
12077009a ಏತೇಭ್ಯೋ ಬಲಿಮಾದದ್ಯಾದ್ಧೀನಕೋಶೋ ಮಹೀಪತಿಃ|
12077009c ಋತೇ ಬ್ರಹ್ಮಸಮೇಭ್ಯಶ್ಚ ದೇವಕಲ್ಪೇಭ್ಯ ಏವ ಚ||
ಬೊಕ್ಕಸದಲ್ಲಿ ಹಣದ ಕೊರತೆಯುಂಟಾದಾಗ ಬ್ರಹ್ಮಸದೃಶ[3] ಮತ್ತು ದೇವಸದೃಶಬ್ರಾಹ್ಮಣರನ್ನು[4] ಬಿಟ್ಟು ಉಳಿದ ಬ್ರಾಹ್ಮಣರಿಂದ ತೆರಿಗೆಯನ್ನು ಪಡೆದುಕೊಳ್ಳಬಹುದು.
12077010a ಅಬ್ರಾಹ್ಮಣಾನಾಂ ವಿತ್ತಸ್ಯ ಸ್ವಾಮೀ ರಾಜೇತಿ ವೈದಿಕಮ್|
12077010c ಬ್ರಾಹ್ಮಣಾನಾಂ ಚ ಯೇ ಕೇ ಚಿದ್ವಿಕರ್ಮಸ್ಥಾ ಭವಂತ್ಯುತ||
ಬ್ರಾಹ್ಮಣರನ್ನು ಬಿಟ್ಟು ಉಳಿದ ವರ್ಣದವರ ವಿತ್ತಕ್ಕೆ ರಾಜನು ಸ್ವಾಮಿಯೆಂದು ವೈದಿಕಸಿದ್ಧಾಂತವಾಗಿದೆ. ಬ್ರಾಹ್ಮಣರಲ್ಲಿ ಯಾರು ತಮ್ಮ ವರ್ಣಾಶ್ರಮಧರ್ಮಗಳಿಗೆ ವಿಪರೀತ ಕರ್ಮಗಳನ್ನು ಮಾಡುವರೋ ಅಂಥವರ ಧನವೂ ರಾಜನಿಗೆ ಸೇರುತ್ತದೆ.
12077011a ವಿಕರ್ಮಸ್ಥಾಸ್ತು ನೋಪೇಕ್ಷ್ಯಾ ಜಾತು ರಾಜ್ಞಾ ಕಥಂ ಚನ|
12077011c ನಿಯಮ್ಯಾಃ ಸಂವಿಭಜ್ಯಾಶ್ಚ ಧರ್ಮಾನುಗ್ರಹಕಾಮ್ಯಯಾ||
ರಾಜನು ಯಾವುದೇ ಕಾರಣದಿಂದಲೂ ಧರ್ಮಭ್ರಷ್ಟ ಬ್ರಾಹ್ಮಣರ ವಿಷಯದಲ್ಲಿ ಉಪೇಕ್ಷೆಮಾಡಬಾರದು. ಧರ್ಮಕ್ಕೆ ಅನುಗ್ರಹವಾಗಲೆಂಬ ಕಾರಣದಿಂದ ಅವರನ್ನು ದಂಡಿಸಬೇಕು ಮತ್ತು ಅವರನ್ನು ಬ್ರಹ್ಮ-ದೇವ ಕಲ್ಪ ಬ್ರಾಹ್ಮಣರ ಸಮೂಹದಿಂದ ಪ್ರತ್ಯೇಕಿಸಬೇಕು.
12077012a ಯಸ್ಯ ಸ್ಮ ವಿಷಯೇ ರಾಜ್ಞಃ ಸ್ತೇನೋ ಭವತಿ ವೈ ದ್ವಿಜಃ|
12077012c ರಾಜ್ಞ ಏವಾಪರಾಧಂ ತಂ ಮನ್ಯಂತೇ ತದ್ವಿದೋ ಜನಾಃ||
ಯಾವ ರಾಜನ ರಾಜ್ಯದಲ್ಲಿ ಬ್ರಾಹ್ಮಣನು ಕಳ್ಳನಾಗುವನೋ ಆ ರಾಜ್ಯದ ಪರಿಸ್ಥಿತಿಯನ್ನು ತಿಳಿದಿರುವವರು, ರಾಜನ ಅಪರಾಧವೇ ಬ್ರಾಹ್ಮಣನು ಕಳ್ಳನಾಗಿದ್ದುದಕ್ಕೆ ಕಾರಣವೆಂದು ಭಾವಿಸುತ್ತಾರೆ.
12077013a ಅವೃತ್ತ್ಯಾ ಯೋ ಭವೇತ್ಸ್ತೇನೋ ವೇದವಿತ್ಸ್ನಾತಕಸ್ತಥಾ|
12077013c ರಾಜನ್ಸ ರಾಜ್ಞಾ ಭರ್ತವ್ಯ ಇತಿ ಧರ್ಮವಿದೋ ವಿದುಃ||
ಒಂದು ವೇಳೆ ವೇದಾಧ್ಯಯನ ಮಾಡಿ ಸ್ನಾತಕನಾದ ಬ್ರಾಹ್ಮಣನು ಜೀವಿಕೆಗೆ ಅವಕಾಶವಿಲ್ಲದೇ ಕಳ್ಳನಾದರೆ ಅಂಥವನ ಭರಣ-ಪೋಷಣೆಗಳ ವ್ಯವಸ್ಥೆಯನ್ನು ರಾಜನೇ ಮಾಡಬೇಕೆಮ್ದು ಹೇಳುತ್ತಾರೆ.
12077014a ಸ ಚೇನ್ನೋ ಪರಿವರ್ತೇತ ಕೃತವೃತ್ತಿಃ ಪರಂತಪ|
12077014c ತತೋ ನಿರ್ವಾಸನೀಯಃ ಸ್ಯಾತ್ತಸ್ಮಾದ್ದೇಶಾತ್ಸಬಾಂಧವಃ||
ಭರಣ-ಪೋಷಣದ ವ್ಯವಸ್ಥೆಯನ್ನು ಮಾಡಿಕೊಟ್ಟರೂ ಅವನು ಪರಿವರ್ತನೆಯನ್ನು ಹೊಂದದೇ ಹಿಂದಿನಂತೆಯೇ ಚೌರ್ಯವೃತ್ತಿಯನ್ನು ಅವಲಂಬಿಸಿದರೆ, ಅವನನ್ನು ಬಂಧುಗಳ ಸಮೇತ ದೇಶದಿಂದಲೇ ಹೊರಗಟ್ಟಬೇಕು!”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸಪ್ತಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಪ್ಪತ್ತೇಳನೇ ಅಧ್ಯಾಯವು.
[1] ಋಗ್ಯಜುಃಸಾಮಸಂಪನ್ನಾಃ ಎಂಬ ಪಾಠಾಂತರವಿದೆ.
[2] ವಿಷ್ಟಿಂ ಎನ್ನುವುದಕ್ಕೆ ವ್ಯಾಖ್ಯಾನಕಾರರು ವಿನಾ ವೇತನಂ ರಾಜಸೇವಾಂ ಎಂದು ಅರ್ಥೈಸಿದ್ದಾರೆ.
[3] ವಿದ್ಯಾಲಕ್ಷಣ ಸಂಪನ್ನರು ಮತ್ತು ಸರ್ವವನ್ನೂ ಸಮಾನ ದೃಷ್ಟಿಯಿಂದ ಕಾಣುವ ಬ್ರಾಹ್ಮಣರು
[4] ಋತ್ವಿಜರು, ಆಚಾರ್ಯಸಂಪನ್ನರು ಮತ್ತು ತಮ್ಮ ಕರ್ಮಗಳಲ್ಲಿ ನಿರತರಾಗಿರುವ ಬ್ರಾಹ್ಮಣರು