ಶಾಂತಿ ಪರ್ವ: ರಾಜಧರ್ಮ ಪರ್ವ
೭೫
ಬ್ರಹ್ಮ-ಕ್ಷತ್ರರ ಸಂಬಂಧದ ಕುರಿತಾದ ಮುಚುಕುಂದೋಽಪಾಖ್ಯಾನ (೧-೨೨).
12075001 ಭೀಷ್ಮ ಉವಾಚ|
12075001a ಯೋಗಕ್ಷೇಮೋ ಹಿ ರಾಷ್ಟ್ರಸ್ಯ ರಾಜನ್ಯಾಯತ್ತ ಉಚ್ಯತೇ|
12075001c ಯೋಗಕ್ಷೇಮಶ್ಚ ರಾಜ್ಞೋಽಪಿ ಸಮಾಯತ್ತಃ ಪುರೋಹಿತೇ||
ಭೀಷ್ಮನು ಹೇಳಿದನು: “ರಾಷ್ಟ್ರದ ಯೋಗ-ಕ್ಷೇಮಗಳು ರಾಜನನ್ನು ಅವಲಂಬಿಸಿದೆ ಎಂದು ಹೇಳುತ್ತಾರೆ. ರಾಜನ ಯೋಗ-ಕ್ಷೇಮಗಳು ಪುರೋಹಿತನ ಮೇಲೆ ಅವಲಂಬಿಸಿದೆ.
12075002a ಯತಾದೃಷ್ಟಂ ಭಯಂ ಬ್ರಹ್ಮ ಪ್ರಜಾನಾಂ ಶಮಯತ್ಯುತ|
12075002c ದೃಷ್ಟಂ ಚ ರಾಜಾ ಬಾಹುಭ್ಯಾಂ ತದ್ರಾಷ್ಟ್ರಂ ಸುಖಮೇಧತೇ||
ಪ್ರಜೆಗಳ ಕಾಣದ ಭಯವನ್ನು ಬ್ರಾಹ್ಮಣನು ಶಾಂತಗೊಳಿಸಿದರೆ ಮತ್ತು ಕಾಣುವ ಭಯವನ್ನು ತನ್ನ ಬಾಹುಗಳಿಂದ ಶಾಂತಗೊಳಿಸಿದರೆ ಆ ರಾಷ್ಟ್ರವು ಸುಖವನ್ನು ಪಡೆಯುತ್ತದೆ.
12075003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12075003c ಮುಚುಕುಂದಸ್ಯ ಸಂವಾದಂ ರಾಜ್ಞೋ ವೈಶ್ರವಣಸ್ಯ ಚ||
ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ರಾಜಾ ಮುಚುಕುಂದ ಮತ್ತು ವೈಶ್ರವಣರ ಸಂವಾದವನ್ನು ಉದಾಹರಿಸುತ್ತಾರೆ.
12075004a ಮುಚುಕುಂದೋ ವಿಜಿತ್ಯೇಮಾಂ ಪೃಥಿವೀಂ ಪೃಥಿವೀಪತಿಃ|
12075004c ಜಿಜ್ಞಾಸಮಾನಃ ಸ್ವಬಲಮಭ್ಯಯಾದಲಕಾಧಿಪಮ್||
ಪೃಥಿವೀಪತಿ ಮುಚುಕುಂದನು ಈ ಪೃಥ್ವಿಯನ್ನು ಗೆದ್ದು ತನ್ನ ಸೇನಾಬಲದ ಕುರಿತು ಜಿಜ್ಞಾಸೆ ಮಾಡುತ್ತಾ ಅಲಕಾಧಿಪ ಕುಬೇರನ ಬಳಿ ಹೋದನು.
12075005a ತತೋ ವೈಶ್ರವಣೋ ರಾಜಾ ರಕ್ಷಾಂಸಿ ಸಮವಾಸೃಜತ್|
12075005c ತೇ ಬಲಾನ್ಯವಮೃದ್ನಂತಃ ಪ್ರಾಚರಂಸ್ತಸ್ಯ ನೈರೃತಾಃ||
ಆಗ ರಾಜಾ ವೈಶ್ರವಣನು ರಾಕ್ಷಸರನ್ನು ಸೃಷ್ಟಿಸಿದನು. ಆ ನೈರೃತರು ಮುಚುಕುಂದನ ಸೇನೆಯನ್ನು ಕ್ಷಣಮಾತ್ರದಲ್ಲಿ ಸದೆಬಡಿದರು.
12075006a ಸ ಹನ್ಯಮಾನೇ ಸೈನ್ಯೇ ಸ್ವೇ ಮುಚುಕುಂದೋ ನರಾಧಿಪಃ|
12075006c ಗರ್ಹಯಾಮಾಸ ವಿದ್ವಾಂಸಂ ಪುರೋಹಿತಮರಿಂದಮಃ||
ತನ್ನ ಸೇನೆಯು ನಾಶವಾಗುತ್ತಿರಲು ನರಾಧಿಪ ಅರಿಂದಮ ಮುಚುಕುಂದನು ತನ್ನ ಪುರೋಹಿತ ವಿದ್ವಾಂಸನನ್ನು ನಿಂದಿಸತೊಡಗಿದನು.
12075007a ತತ ಉಗ್ರಂ ತಪಸ್ತಪ್ತ್ವಾ ವಸಿಷ್ಠೋ ಬ್ರಹ್ಮವಿತ್ತಮಃ|
12075007c ರಕ್ಷಾಂಸ್ಯಪಾವಧೀತ್ತತ್ರ ಪಂಥಾನಂ ಚಾಪ್ಯವಿಂದತ||
ಆಗ ಬ್ರಹ್ಮವಿತ್ತಮ ವಸಿಷ್ಠನು ಉಗ್ರ ತಪಸ್ಸನ್ನು ತಪಿಸಿ ರಾಕ್ಷಸಸೇನೆಯನ್ನು ಧ್ವಂಸಮಾಡಿ ಮುಚುಕುಂದನ ವಿಜಯಕ್ಕೆ ಅವಕಾಶಮಾಡಿಕೊಟ್ಟರು.
12075008a ತತೋ ವೈಶ್ರವಣೋ ರಾಜಾ ಮುಚುಕುಂದಮದರ್ಶಯತ್|
12075008c ವಧ್ಯಮಾನೇಷು ಸೈನ್ಯೇಷು ವಚನಂ ಚೇದಮಬ್ರವೀತ್||
ಆಗ ರಾಜಾ ವೈಶ್ರವಣನು ಮುಚುಕುಂದನನ್ನು ಕಂಡನು. ತನ್ನ ಸೇನೆಗಳು ವಧಿಸಲ್ಪಡುತ್ತಿರಲು ಈ ಮಾತನ್ನಾಡಿದನು:
12075009a ತ್ವತ್ತೋ ಹಿ ಬಲಿನಃ ಪೂರ್ವೇ ರಾಜಾನಃ ಸಪುರೋಹಿತಾಃ|
12075009c ನ ಚೈವಂ ಸಮವರ್ತಂಸ್ತೇ ಯಥಾ ತ್ವಮಿಹ ವರ್ತಸೇ||
“ಈ ಹಿಂದೆಯೂ ಅನೇಕ ಬಲಶಾಲೀ ರಾಜರು ತಮ್ಮ ಪುರೋಹಿತರೊಂದಿಗೆ ಇಲ್ಲಿಗೆ ಬಂದಿದ್ದರು. ಆದರೆ ನೀನು ಈಗ ವರ್ತಿಸಿದ ರೀತಿಯಲ್ಲಿ ವರ್ತಿಸಲಿಲ್ಲ.
12075010a ತೇ ಖಲ್ವಪಿ ಕೃತಾಸ್ತ್ರಾಶ್ಚ ಬಲವಂತಶ್ಚ ಭೂಮಿಪಾಃ|
12075010c ಆಗಮ್ಯ ಪರ್ಯುಪಾಸಂತೇ ಮಾಮೀಶಂ ಸುಖದುಃಖಯೋಃ||
ಆ ಭೂಮಿಪರು ಕೃತಾಸ್ತ್ರರೂ ಬಲವಂತರಾಗಿದ್ದರೂ ಇಲ್ಲಿಗೆ ಬಂದು ನನ್ನನ್ನು ಸುಖದುಃಖಗಳ ಈಶನೆಂದು ಆರಾಧಿಸುತ್ತಿದ್ದರು.
12075011a ಯದ್ಯಸ್ತಿ ಬಾಹುವೀರ್ಯಂ ತೇ ತದ್ದರ್ಶಯಿತುಮರ್ಹಸಿ|
12075011c ಕಿಂ ಬ್ರಾಹ್ಮಣಬಲೇನ ತ್ವಮತಿಮಾತ್ರಂ ಪ್ರವರ್ತಸೇ||
ಒಂದು ವೇಳೆ ನೀನು ನಿನ್ನ ಬಾಹುಬಲವನ್ನು ನನಗೆ ಪ್ರದರ್ಶಿಸಲು ಬಯಸುವೆಯಾದರೆ ಬ್ರಾಹ್ಮಣಬಲದಲ್ಲಿ ನೀನು ನನಗಿಂತ ಹೆಚ್ಚಿನವನೆಂದು ಎಂದು ಏಕೆ ನಡೆದುಕೊಳ್ಳುತ್ತಿರುವೆ?”
12075012a ಮುಚುಕುಂದಸ್ತತಃ ಕ್ರುದ್ಧಃ ಪ್ರತ್ಯುವಾಚ ಧನೇಶ್ವರಮ್|
12075012c ನ್ಯಾಯಪೂರ್ವಮಸಂರಬ್ಧಮಸಂಭ್ರಾಂತಮಿದಂ ವಚಃ||
ಆಗ ಕ್ರುದ್ಧ ಮುಚುಕುಂದನು ಧನೇಶ್ವರನಿಗೆ ನ್ಯಾಯಪೂರ್ವಕವೂ, ಕ್ರೋಧರಹಿತವೂ, ಮತ್ತು ಗಾಭರಿಗೊಳ್ಳದೇ ಈ ಮಾತನ್ನಾಡಿದನು:
12075013a ಬ್ರಹ್ಮಕ್ಷತ್ರಮಿದಂ ಸೃಷ್ಟಮೇಕಯೋನಿ ಸ್ವಯಂಭುವಾ|
12075013c ಪೃಥಗ್ಬಲವಿಧಾನಂ ಚ[1] ತಲ್ಲೋಕಂ ಪರಿರಕ್ಷತಿ||
“ಬ್ರಾಹ್ಮಣ-ಕ್ಷತ್ರಿಯರ ಜನ್ಮಸ್ಥಾನವು ಸ್ವಯಂಭು ಬ್ರಹ್ಮನೊಬ್ಬನೇ. ಈ ಎರಡೂ ಬಲಗಳು ಬೇರೆಬೇರೆಯಾದರೆ ಲೋಕಗಳನ್ನು ರಕ್ಷಿಸಲಾರವು.
12075014a ತಪೋಮಂತ್ರಬಲಂ ನಿತ್ಯಂ ಬ್ರಾಹ್ಮಣೇಷು ಪ್ರತಿಷ್ಠಿತಮ್|
12075014c ಅಸ್ತ್ರಬಾಹುಬಲಂ ನಿತ್ಯಂ ಕ್ಷತ್ರಿಯೇಷು ಪ್ರತಿಷ್ಠಿತಮ್||
ತಪೋಮಂತ್ರಬಲವು ನಿತ್ಯವೂ ಬ್ರಾಹ್ಮಣರಲ್ಲಿ ಇರುತ್ತದೆ. ಅಸ್ತ್ರಬಾಹುಬಲವು ನಿತ್ಯವೂ ಕ್ಷತ್ರಿಯರಲ್ಲಿ ಇರುತ್ತದೆ.
12075015a ತಾಭ್ಯಾಂ ಸಂಭೂಯ ಕರ್ತವ್ಯಂ ಪ್ರಜಾನಾಂ ಪರಿಪಾಲನಮ್|
12075015c ತಥಾ ಚ ಮಾಂ ಪ್ರವರ್ತಂತಂ ಗರ್ಹಯಸ್ಯಲಕಾಧಿಪ||
ಅಲಕಾಧಿಪ! ಅವರಿಬ್ಬರೂ ಕೂಡಿಕೊಂಡೇ ಪ್ರಜೆಗಳ ಪರಿಪಾಲನೆಯನ್ನು ಮಾಡಬೇಕು. ಅದರಂತೆಯೇ ನಡೆದುಕೊಳ್ಳುತ್ತಿರುವ ನನ್ನನ್ನು ಏಕೆ ನಿಂದಿಸುತ್ತಿದ್ದೀಯೆ?”
12075016a ತತೋಽಬ್ರವೀದ್ವೈಶ್ರವಣೋ ರಾಜಾನಂ ಸಪುರೋಹಿತಮ್|
12075016c ನಾಹಂ ರಾಜ್ಯಮನಿರ್ದಿಷ್ಟಂ ಕಸ್ಮೈ ಚಿದ್ವಿದಧಾಮ್ಯುತ||
ಬಳಿಕ ವೈಶ್ರವಣನು ಪುರೋಹಿತನೊಂದಿಗಿದ್ದ ರಾಜನಿಗೆ ಹೇಳಿದನು: “ನಾನು ಈ ರಾಜ್ಯವನ್ನು ಅನಿರ್ದಿಷ್ಟ ಯಾರಿಗಾದರೂ ಎಂದೂ ಕೊಡುವುದಿಲ್ಲ.
12075017a ನಾಚ್ಚಿಂದೇ ಚಾಪಿ ನಿರ್ದಿಷ್ಟಮಿತಿ ಜಾನೀಹಿ ಪಾರ್ಥಿವ|
12075017c ಪ್ರಶಾಧಿ ಪೃಥಿವೀಂ ವೀರ ಮದ್ದತ್ತಾಮಖಿಲಾಮಿಮಾಮ್||
ಪಾರ್ಥಿವ! ಆದರೂ ನಿನಗೆ ನಿರ್ದಿಷ್ಟವಾದ ಈ ಅಖಿಲ ಭೂಮಿಯನ್ನು ನಿನಗೆ ನೀಡುತ್ತಿದ್ದೇನೆ. ವೀರ! ಈ ಭೂಮಿಯನ್ನು ಆಳು.”
12075018 ಮುಚುಕುಂದ ಉವಾಚ|
12075018a ನಾಹಂ ರಾಜ್ಯಂ ಭವದ್ದತ್ತಂ ಭೋಕ್ತುಮಿಚ್ಚಾಮಿ ಪಾರ್ಥಿವ|
12075018c ಬಾಹುವೀರ್ಯಾರ್ಜಿತಂ ರಾಜ್ಯಮಶ್ನೀಯಾಮಿತಿ ಕಾಮಯೇ||
ಮುಚುಕುಂದನು ಹೇಳಿದನು: “ಪಾರ್ಥಿವ! ನೀನು ದಾನ ಮಾಡಿದ ಭೂಮಿಯನ್ನು ಭೋಗಿಸಲು ಬಯಸುವುದಿಲ್ಲ. ಬಾಹುವೀರ್ಯದಿಂದಲೇ ಜಯಿಸಲ್ಪಟ್ಟ ರಾಜ್ಯವನ್ನು ಭೋಗಿಸಲು ಬಯಸುತ್ತೇನೆ.””
12075019 ಭೀಷ್ಮ ಉವಾಚ|
12075019a ತತೋ ವೈಶ್ರವಣೋ ರಾಜಾ ವಿಸ್ಮಯಂ ಪರಮಂ ಯಯೌ|
12075019c ಕ್ಷತ್ರಧರ್ಮೇ ಸ್ಥಿತಂ ದೃಷ್ಟ್ವಾ ಮುಚುಕುಂದಮಸಂಭ್ರಮಮ್||
ಭೀಷ್ಮನು ಹೇಳಿದನು: “ಆಗ ರಾಜಾ ವೈಶ್ರವಣನು ವ್ಯಾಕುಲವಿಲ್ಲದೇ ಕ್ಷತ್ರಧರ್ಮದಲ್ಲಿ ಸ್ಥಿತನಾಗಿದ್ದ ಮುಚುಕುಂದನನ್ನು ನೋಡಿ ಪರಮ ವಿಸ್ಮಿತನಾದನು.
12075020a ತತೋ ರಾಜಾ ಮುಚುಕುಂದಃ ಸೋಽನ್ವಶಾಸದ್ವಸುಂಧರಾಮ್|
12075020c ಬಾಹುವೀರ್ಯಾರ್ಜಿತಾಂ ಸಮ್ಯಕ್ಕ್ಷತ್ರಧರ್ಮಮನುವ್ರತಃ||
ಬಳಿಕ ಉತ್ತಮ ಕ್ಷತ್ರಧರ್ಮದಲ್ಲಿ ನಿರತನಾಗಿದ್ದ ರಾಜಾ ಮುಚುಕುಂದನು ತನ್ನ ಬಾಹುವೀರ್ಯಗಳಿಂದ ಗೆದ್ದ ವಸುಂಧರೆಯನ್ನು ಆಳಿದನು.
12075021a ಏವಂ ಯೋ ಬ್ರಹ್ಮವಿದ್ರಾಜಾ ಬ್ರಹ್ಮಪೂರ್ವಂ ಪ್ರವರ್ತತೇ|
12075021c ಜಯತ್ಯವಿಜಿತಾಮುರ್ವೀಂ ಯಶಶ್ಚ ಮಹದಶ್ನುತೇ||
ಹೀಗೆ ಮೊದಲು ಬ್ರಾಹ್ಮಣನ ಆಶ್ರಯವನ್ನು ಪಡೆದು ಅವನ ಸಹಾಯದಿಂದ ರಾಜಕಾರ್ಯದಲ್ಲಿ ಪ್ರವೃತ್ತನಾಗುವ ರಾಜನು ಹಿಂದೆ ಜಯಿಸಲಸಾಧ್ಯವಾಗಿದ್ದ ರಾಜ್ಯವನ್ನೂ ಜಯಿಸುತ್ತಾನೆ ಮತ್ತು ಮಹಾ ಯಶಸ್ಸನ್ನು ಪಡೆಯುತ್ತಾನೆ.
12075022a ನಿತ್ಯೋದಕೋ ಬ್ರಾಹ್ಮಣಃ ಸ್ಯಾನ್ನಿತ್ಯಶಸ್ತ್ರಶ್ಚ ಕ್ಷತ್ರಿಯಃ|
12075022c ತಯೋರ್ಹಿ ಸರ್ವಮಾಯತ್ತಂ ಯತ್ಕಿಂ ಚಿಜ್ಜಗತೀಗತಮ್||
ಬ್ರಾಹ್ಮಣನು ನಿತ್ಯವೂ ಉದಕಪಾತ್ರೆಯನ್ನು ಧರಿಸಿರಬೇಕು. ಕ್ಷತ್ರಿಯನು ನಿತ್ಯವೂ ಶಸ್ತ್ರಧಾರಿಯಾಗಿರಬೇಕು. ಈ ಜಗತ್ತಿನಲ್ಲಿ ಏನೆಲ್ಲ ಇವೆಯೋ ಅವೆಲ್ಲವೂ ಅವರಿಬ್ಬರ ಅಧೀನದಲ್ಲಿಯೇ ಇರುತ್ತದೆ.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಮುಚುಕುಂದೋಪಾಖ್ಯಾನೇ ಪಂಚಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಮುಚುಕುಂದೋಪಾಖ್ಯಾನ ಎನ್ನುವ ಎಪ್ಪತ್ತೈದನೇ ಅಧ್ಯಾಯವು.
[1] ಪೃಥಗ್ಬಲವಿಧಾನಂ ತನ್ನ ಎಂಬ ಪಾಠಾಂತರವಿದೆ.