ಶಾಂತಿ ಪರ್ವ: ರಾಜಧರ್ಮ ಪರ್ವ
೭೧
ರಾಜನಲ್ಲಿರಬೇಕಾದ ೩೬ ಗುಣಗಳ ವರ್ಣನೆ (೧-೧೪).
12071001 ಯುಧಿಷ್ಠಿರ ಉವಾಚ|
12071001a ಕೇನ ವೃತ್ತೇನ ವೃತ್ತಜ್ಞ ವರ್ತಮಾನೋ ಮಹೀಪತಿಃ|
12071001c ಸುಖೇನಾರ್ಥಾನ್ಸುಖೋದರ್ಕಾನಿಹ ಚ ಪ್ರೇತ್ಯ ಚಾಪ್ನುಯಾತ್||
ಯುಧಿಷ್ಠಿರನು ಹೇಳಿದನು: “ವೃತ್ತಜ್ಞ! ಯಾವ ವರ್ತನೆಗಳಿಂದ ನಡೆದುಕೊಂಡು ಮಹೀಪತಿಯು ಇಹದಲ್ಲಿ ಮತ್ತು ಪರದಲ್ಲಿ ಸುಖನೀಡುವಂತಹ ವಸ್ತುಗಳನ್ನು ಅನಾಯಾಸವಾಗಿ ಪಡೆದುಕೊಳ್ಳಬಹುದು?”
12071002 ಭೀಷ್ಮ ಉವಾಚ|
12071002a ಇಯಂ ಗುಣಾನಾಂ ಷಟ್ತ್ರಿಂಶತ್ಷಟ್ತ್ರಿಂಶದ್ಗುಣಸಂಯುತಾ|
12071002c ಯಾನ್ಗುಣಾಂಸ್ತು ಗುಣೋಪೇತಃ ಕುರ್ವನ್ಗುಣಮವಾಪ್ನುಯಾತ್||
ಭೀಷ್ಮನು ಹೇಳಿದನು: “ಯಾವ ಗುಣಗಳನ್ನು ಹೊಂದಿರುವುದರಿಂದ ಮತ್ತು ಕಾರ್ಯಗಳನ್ನು ಮಾಡುವುದರಿಂದ ರಾಜನು ಉತ್ಕರ್ಷವನ್ನು ಹೊಂದುತ್ತಾನೋ ಅವುಗಳ ಸಂಖ್ಯೆಯು ಮೂವತ್ತಾರು.
12071003a ಚರೇದ್ಧರ್ಮಾನಕಟುಕೋ ಮುಂಚೇತ್ಸ್ನೇಹಂ ನ ನಾಸ್ತಿಕಃ|
12071003c ಅನೃಶಂಸಶ್ಚರೇದರ್ಥಂ ಚರೇತ್ಕಾಮಮನುದ್ಧತಃ||
(೧) ಯಾರೊಡನೆಯು ಕಟುಮಾತುಗಳನ್ನಾಡದೇ ಧರ್ಮವನ್ನು ಆಚರಿಸುವುದು (೨) ನಾಸ್ತಿಕನಾಗಿರದೇ ಎಲ್ಲರೊಡನೆ ಸ್ನೇಹದಿಂದಿರುವುದು (೩) ದಯಾಪರನಾಗಿದ್ದುಕೊಂಡೇ ಅರ್ಥವನ್ನು ಸಂಪಾದಿಸವುದು (೪) ಲೋಕಮರ್ಯಾದೆಯನ್ನು ಅತಿಕ್ರಮಿಸದೇ ವಿಷಯಸುಖಗಳನ್ನು ಅನುಭವಿಸುವುದು
12071004a ಪ್ರಿಯಂ ಬ್ರೂಯಾದಕೃಪಣಃ ಶೂರಃ ಸ್ಯಾದವಿಕತ್ಥನಃ|
12071004c ದಾತಾ ನಾಪಾತ್ರವರ್ಷೀ ಸ್ಯಾತ್ಪ್ರಗಲ್ಭಃ ಸ್ಯಾದನಿಷ್ಠುರಃ||
(೫) ಕೃಪಣತೆಯಿಲ್ಲದೇ ಪ್ರಿಯಮಾತುಗಳನ್ನೇ ಆಡುವುದು (೬) ಶೂರನಾಗಿದ್ದರೂ ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದೇ ಇರುವುದು (೭) ದಾನಶೀಲನಾಗಿದ್ದುಕೊಂಡು ಅಪಾತ್ರರಿಗೆ ದಾನಮಾಡದ ಇರುವುದು (೮) ಸಾಹಸಿಯಾಗಿರವುದು, ದಯಾಪರನಾಗಿರವುದು ಮತ್ತ ನಿಷ್ಠುರಮಾತುಗಳನ್ನಾಡದಿರುವುದು
12071005a ಸಂದಧೀತ ನ ಚಾನಾರ್ಯೈರ್ವಿಗೃಹ್ಣೀಯಾನ್ನ ಬಂಧುಭಿಃ|
12071005c ನಾನಾಪ್ತೈಃ ಕಾರಯೇಚ್ಚಾರಂ ಕುರ್ಯಾತ್ಕಾರ್ಯಮಪೀಡಯಾ||
(೯) ಅನಾರ್ಯರೊಡನೆ ಸಂಬಂಧವನ್ನಿಟ್ಟುಕೊಳ್ಳದೇ ಇರುವುದು (೧೦) ಬಂಧುಗಳೊಡನೆ ಜಗಳವಾಡದೇ ಇರುವುದು (೧೧) ರಾಜನಲ್ಲಿ ಭಕ್ತಿಯಿಲ್ಲದಿರುವವನನ್ನು ಗೂಢಚರನನ್ನಾಗಿಟ್ಟುಕೊಳ್ಳದೇ ಇರುವುದು (೧೨) ಯಾರಿಗೂ ಪೀಡೆಯಾಗದ ರೀತಿಯಲ್ಲಿ ರಾಜಕಾರ್ಯಗಳನ್ನು ಸಾಧಿಸಿಕೊಳ್ಳುವುದು
12071006a ಅರ್ಥಾನ್ಬ್ರೂಯಾನ್ನ ಚಾಸತ್ಸು ಗುಣಾನ್ಬ್ರೂಯಾನ್ನ ಚಾತ್ಮನಃ|
12071006c ಆದದ್ಯಾನ್ನ ಚ ಸಾಧುಭ್ಯೋ ನಾಸತ್ಪುರುಷಮಾಶ್ರಯೇತ್||
(೧೩) ದುಷ್ಟರಿಗೆ ಅಭೀಷ್ಟ ರಾಜಕಾರ್ಯಗಳನ್ನು ಹೇಳದಿರುವುದು (೧೪) ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳದಿರುವುದು (೧೫) ಸಾಧು-ಸತ್ಪುರುಷರಿಂದ ರಾಜಕಾಣಿಕೆಯನ್ನು ತೆಗೆದುಕೊಳ್ಳದೇ ಇರುವುದು (೧೬) ನೀಚರನ್ನು ಆಶ್ರಯಿಸದೇ ಇರುವುದು
12071007a ನಾಪರೀಕ್ಷ್ಯ ನಯೇದ್ದಂಡಂ ನ ಚ ಮಂತ್ರಂ ಪ್ರಕಾಶಯೇತ್|
12071007c ವಿಸೃಜೇನ್ನ ಚ ಲುಬ್ಧೇಭ್ಯೋ ವಿಶ್ವಸೇನ್ನಾಪಕಾರಿಷು||
(೧೭) ಪರಕ್ಷಿಸದೆಯೇ ದಂಡನೆಯನ್ನು ನೀಡದಿರುವುದು (೧೮) ಮಂತ್ರಾಲೋಚನೆಗಳನ್ನು ಬಹಿರಂಗ ಪಡಿಸದೇ ಇರುವುದು (೧೯) ಲೋಭಿಗಳಿಗೆ ಹಣವನ್ನು ಕೊಡದೇ ಇರುವುದು (೨೦) ಒಮ್ಮೆ ಅಪಕಾರ ಮಾಡಿದವರ ಮೇಲೆ ಪುನಃ ವಿಶ್ವಾಸವನ್ನಿಡದಿರುವುದು
12071008a ಅನೀರ್ಷುರ್ಗುಪ್ತದಾರಃ ಸ್ಯಾಚ್ಚೋಕ್ಷಃ ಸ್ಯಾದಘೃಣೀ ನೃಪಃ|
12071008c ಸ್ತ್ರಿಯಂ ಸೇವೇತ ನಾತ್ಯರ್ಥಂ ಮೃಷ್ಟಂ ಭುಂಜೀತ ನಾಹಿತಮ್||
(೨೧) ಪರಸ್ಪರರು ಅಸೂಯೆಪಡದಂತೆ ಪತ್ನಿಯರನ್ನು ನೋಡಿಕೊಳ್ಳುವುದು (೨೨) ದಕ್ಷತೆ (೨೩) ಸ್ತ್ರೀಯರಲ್ಲಿ ಹೆಚ್ಚು ಅನುರಕ್ತನಾಗದೇ ಇರುವುದು (೨೪) ಶುದ್ಧವಾದ ಮತ್ತು ರುಚಿಕರ ಭೋಜನವನ್ನೇ ಮಾಡುವುದು
12071009a ಅಸ್ತಬ್ಧಃ ಪೂಜಯೇನ್ಮಾನ್ಯಾನ್ಗುರೂನ್ಸೇವೇದಮಾಯಯಾ|
12071009c ಅರ್ಚೇದ್ದೇವಾನ್ನ ದಂಭೇನ ಶ್ರಿಯಮಿಚ್ಚೇದಕುತ್ಸಿತಾಮ್||
(೨೫) ಆಡಂಬರ ತೋರಿಸದೇ ವಿನಯ ಭಾವದಿಂದ ಮಹನೀಯರನ್ನು ಪೂಜಿಸುವುದು (೨೬) ಕಪಟವಿಲ್ಲದೇ ಗುರುಜನರ ಸೇವೆಮಾಡುವುದು (೨೭) ದಂಭಾಹಂಕಾರ ರಹಿತನಾಗಿ ದೇವತೆಗಳನ್ನು ಪೂಜಿಸುವುದು (೨೮) ದೋಷರಹಿತ ಸಂಪತ್ತಿನ ಸಂಗ್ರಹದಲ್ಲಿಯೇ ಆಸಕ್ತನಾಗಿರುವುದು
12071010a ಸೇವೇತ ಪ್ರಣಯಂ ಹಿತ್ವಾ ದಕ್ಷಃ ಸ್ಯಾನ್ನ ತ್ವಕಾಲವಿತ್|
12071010c ಸಾಂತ್ವಯೇನ್ನ ಚ ಭೋಗಾರ್ಥಮನುಗೃಹ್ಣನ್ನ ಚಾಕ್ಷಿಪೇತ್||
(೨೯) ಪಕ್ಷಪಾತವಿಲ್ಲದೇ ಪ್ರಜೆಗಳನ್ನು ಪಾಲಿಸುವುದು (೩೦) ದಕ್ಷನಾಗಿರುವುದು, ಕಾಲ-ದೇಶಗಳಿಗನುಗುಣವಾಗಿ ಕಾರ್ಯಗಳನ್ನು ಕೈಗೊಳ್ಳುವುದು (೩೧) ಆಸೆಯಿಟ್ಟುಕೊಂಡು ಬಂದಿರುವವನಿಗೆ ಏನನ್ನೂ ಕೊಡದೇ ಕೇವಲ ಸಾಂತ್ವನಮಾತುಗಳನ್ನಾಡಿ ಕಳುಹಿಸದೇ ಇರುವುದು (೩೨) ಕೃಪೆದೋರುವಾಗ ನಿಂದಿಸದೇ ಇರುವುದು
12071011a ಪ್ರಹರೇನ್ನ ತ್ವವಿಜ್ಞಾಯ ಹತ್ವಾ ಶತ್ರೂನ್ನ ಶೇಷಯೇತ್|
12071011c ಕ್ರೋಧಂ ಕುರ್ಯಾನ್ನ ಚಾಕಸ್ಮಾನ್ಮೃದುಃ ಸ್ಯಾನ್ನಾಪಕಾರಿಷು||
(೩೩) ತಿಳಿಯದೇ ಶತ್ರುವೆಂದು ಯಾರನ್ನೂ ಪ್ರಹರಿಸದೇ ಇರುವುದು (೩೪) ಸಂಬಂಧಿಯಾಗಿದ್ದರೂ ಶತ್ರುವನ್ನು ಸಂಹರಿಸಿದ ನಂತರ ಶೋಕಿಸದೇ ಇರುವುದು (೩೫) ಕಾರಣವಿಲ್ಲದೇ ಯಾರಮೇಲೂ ಕೋಪಿಸಿಕೊಳ್ಳದೇ ಇರುವುದು ಮತ್ತು (೩೬) ಪಾಪಿಗಳ ವಿಷಯದಲ್ಲ ಮೃದುವಾಗಿರದೇ ಇರುವುದು.
12071012a ಏವಂ ಚರಸ್ವ ರಾಜ್ಯಸ್ಥೋ ಯದಿ ಶ್ರೇಯ ಇಹೇಚ್ಚಸಿ|
12071012c ಅತೋಽನ್ಯಥಾ ನರಪತಿರ್ಭಯಮೃಚ್ಚತ್ಯನುತ್ತಮಮ್||
ಇಲ್ಲಿ ಶ್ರೇಯಸ್ಸನ್ನು ಬಯಸುವೆಯಾದರೆ ರಾಜ್ಯಸ್ಥನಾಗಿ ಹೀಗೆಯೇ ನಡೆದುಕೋ. ಅನ್ಯಥಾ ನರಪತಿಯು ಭಯವನ್ನು ತಂದುಕೊಳ್ಳತ್ತಾನೆ ಮತ್ತು ಸುದಾರುಣ ಆಪತ್ತಿಗೆ ಗುರಿಯಾಗುತ್ತಾನೆ.
12071013a ಇತಿ ಸರ್ವಾನ್ಗುಣಾನೇತಾನ್ಯಥೋಕ್ತಾನ್ಯೋಽನುವರ್ತತೇ|
12071013c ಅನುಭೂಯೇಹ ಭದ್ರಾಣಿ ಪ್ರೇತ್ಯ ಸ್ವರ್ಗೇ ಮಹೀಯತೇ||
ಈ ಎಲ್ಲ ಗುಣಗಳನ್ನೂ ಕಾರ್ಯರೂಪಕ್ಕೆ ತರುವ ರಾಜನು ಇಲ್ಲ ಸಕಲವಿಧದ ಕಲ್ಯಾಣಗಳಿಗೂ ಪಾತ್ರನಾಗಿ ಅವಸಾನಾನಂತರ ಸ್ವರ್ಗಲೋಕದಲ್ಲಿ ವಿರಾಜಿಸುತ್ತಾನೆ.”
12071014 ವೈಶಂಪಾಯನ ಉವಾಚ
12071014a ಇದಂ ವಚಃ ಶಾಂತನವಸ್ಯ ಶುಶ್ರುವಾನ್
ಯುಧಿಷ್ಠಿರಃ ಪಾಂಡವಮುಖ್ಯಸಂವೃತಃ|
12071014c ತದಾ ವವಂದೇ ಚ ಪಿತಾಮಹಂ ನೃಪೋ
ಯಥೋಕ್ತಮೇತಚ್ಚ ಚಕಾರ ಬುದ್ಧಿಮಾನ್||
ವೈಶಂಪಾಯನನು ಹೇಳಿದನು: “ಪಾಂಡವಮುಖ್ಯರೊಂದಿಗೆ ಸುತ್ತುವರೆಯಲ್ಪಟ್ಟ ಯುಧಿಷ್ಠಿರನ ಶಾಂತನವನ ಈ ಮಾತುಗಳನ್ನು ಕೇಳಿದನು. ನೃಪನು ಪಿತಾಮಹನಿಗೆ ವಂದಿಸಿದನು ಮತ್ತು ಆ ಬುದ್ಧಿಮಾನನು ಅವನು ಹೇಳಿದಂತೆಯೇ ಮಾಡಿದನು.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಏಕಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಪ್ಪತ್ತೊಂದನೇ ಅಧ್ಯಾಯವು.