ಶಾಂತಿ ಪರ್ವ: ರಾಜಧರ್ಮ ಪರ್ವ
೭೦
ದಂಡನೀತಿ (೧-೩೨).
12070001 ಯುಧಿಷ್ಠಿರ ಉವಾಚ|
12070001a ದಂಡನೀತಿಶ್ಚ ರಾಜಾ ಚ ಸಮಸ್ತೌ ತಾವುಭಾವಪಿ|
12070001c ಕಸ್ಯ ಕಿಂ ಕುರ್ವತಃ ಸಿದ್ಧ್ಯೈ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ದಂಡನೀತಿ ಮತ್ತು ರಾಜ – ಇವೆರಡೂ ಸೇರಿದರೆ ರಾಜನೀತಿಯಾಗುತ್ತದೆ. ಯಾರಿಗೆ ಏನನ್ನು ಮಾಡಿದರೆ ರಾಜನೀತಿಯು ಸಿದ್ಧಿಸುವುದು ಎನ್ನುವುದನ್ನು ಹೇಳು.”
12070002 ಭೀಷ್ಮ ಉವಾಚ|
12070002a ಮಹಾಭಾಗ್ಯಂ ದಂಡನೀತ್ಯಾಃ ಸಿದ್ಧೈಃ ಶಬ್ದೈಃ ಸಹೇತುಕೈಃ|
12070002c ಶೃಣು ಮೇ ಶಂಸತೋ ರಾಜನ್ಯಥಾವದಿಹ ಭಾರತ||
ಭೀಷ್ಮನು ಹೇಳಿದನು: “ರಾಜನ್! ಭಾರತ! ದಂಡನೀತಿಯ ಮಹಾಭಾಗ್ಯದಕುರಿತು ಸಿದ್ಧ ಶಬ್ಧಗಳಿಂದ ಕಾರಣಗಳೊಂದಿಗೆ ಹೇಳುವ ನನ್ನನ್ನು ಕೇಳು.
12070003a ದಂಡನೀತಿಃ ಸ್ವಧರ್ಮೇಭ್ಯಶ್ಚಾತುರ್ವರ್ಣ್ಯಂ ನಿಯಚ್ಚತಿ|
12070003c ಪ್ರಯುಕ್ತಾ ಸ್ವಾಮಿನಾ ಸಮ್ಯಗಧರ್ಮೇಭ್ಯಶ್ಚ ಯಚ್ಚತಿ||
ದಂಡನೀತಿಯು ನಾಲ್ಕು ವರ್ಣದವರೂ ಸ್ವರ್ಧರ್ಮಗಳಲ್ಲಿ ನಿರತರಾಗಿರುವುದನ್ನು ನಿಯಂತ್ರಿಸುತ್ತದೆ. ಒಡೆಯನಿಂದ ಚೆನ್ನಾಗಿ ಬಳಸಲ್ಪಟ್ಟ ಇದು ಎಲ್ಲ ರೀತಿಯ ಅಧರ್ಮಗಳನ್ನೂ ನಾಶಗೊಳಿಸುತ್ತದೆ.
12070004a ಚಾತುರ್ವರ್ಣ್ಯೇ ಸ್ವಧರ್ಮಸ್ಥೇ ಮರ್ಯಾದಾನಾಮಸಂಕರೇ|
12070004c ದಂಡನೀತಿಕೃತೇ ಕ್ಷೇಮೇ ಪ್ರಜಾನಾಮಕುತೋಭಯೇ||
ನಾಲ್ಕುವರ್ಣದವರನ್ನೂ ಸ್ವಧರ್ಮದಲ್ಲಿ ನಿರತರಾಗಿರುವಂತೆ ಮತ್ತು ಮರ್ಯಾದೆಗಳ ಸಂಕರವಾಗದಂತೆ ದಂಡನೀತಿಯನ್ನು ಬಳಸಿ ಪ್ರಜೆಗಳ ಕ್ಷೇಮವನ್ನು ನೋಡಿಕೊಂಡಾಗ ಅವರಿಗೆ ಭಯವೆನ್ನುವುದೇ ಇರುವುದಿಲ್ಲ.
12070005a ಸೋಮೇ ಪ್ರಯತ್ನಂ ಕುರ್ವಂತಿ ತ್ರಯೋ ವರ್ಣಾ ಯಥಾವಿಧಿ|
12070005c ತಸ್ಮಾದ್ದೇವಮನುಷ್ಯಾಣಾಂ[1] ಸುಖಂ ವಿದ್ಧಿ ಸಮಾಹಿತಮ್||
ಮೂರು ವರ್ಣದವರೂ ಯಥಾವಿಧಿಯಾಗಿ ಯಜ್ಞಾದಿಗಳಿಗೆ ಪ್ರಯತ್ನಿಸುತ್ತಿರಲು ದೇವ-ಮನುಷ್ಯರ ಸುಖವು ಸಮಾಹಿತವಾಗಿದೆ ಎಂದು ತಿಳಿದುಕೋ.
12070006a ಕಾಲೋ ವಾ ಕಾರಣಂ ರಾಜ್ಞೋ ರಾಜಾ ವಾ ಕಾಲಕಾರಣಮ್|
12070006c ಇತಿ ತೇ ಸಂಶಯೋ ಮಾ ಭೂದ್ರಾಜಾ ಕಾಲಸ್ಯ ಕಾರಣಮ್||
ರಾಜನಿಗೆ ಕಾಲವು ಕಾರಣವೋ ಅಥವಾ ರಾಜನು ಬಂದಿರುವ ಕಾಲಕ್ಕೆ ಕಾರಣವೋ? ಎನ್ನುವುದರಲ್ಲಿ ಸಂಶಯತಾಳಬೇಡ. ರಾಜನೇ ಬಂದಿರುವ ಕಾಲಕ್ಕೆ ಕಾರಣನು.
12070007a ದಂಡನೀತ್ಯಾ ಯದಾ ರಾಜಾ ಸಮ್ಯಕ್ಕಾರ್ತ್ಸ್ನ್ಯೇನ ವರ್ತತೇ|
12070007c ತದಾ ಕೃತಯುಗಂ ನಾಮ ಕಾಲಃ ಶ್ರೇಷ್ಠಃ ಪ್ರವರ್ತತೇ||
ದಂಡನೀತಿಯನ್ನು ಅಳವಡಿಸಿಕೊಂಡು ರಾಜನು ಯಾವಾಗ ಎಲ್ಲರೊಡನೆಯೂ ಸಮನಾಗಿ ವರ್ತಿಸುತ್ತಾನೋ ಆಗ ಶ್ರೇಷ್ಠವಾದ ಕೃತಯುಗ ಎಂಬ ಕಾಲವು ನಡೆಯುತ್ತದೆ.
12070008a ಭವೇತ್ಕೃತಯುಗೇ ಧರ್ಮೋ ನಾಧರ್ಮೋ ವಿದ್ಯತೇ ಕ್ವ ಚಿತ್|
12070008c ಸರ್ವೇಷಾಮೇವ ವರ್ಣಾನಾಂ ನಾಧರ್ಮೇ ರಮತೇ ಮನಃ||
ಕೃತಯುಗದಲ್ಲಿ ಧರ್ಮವೇ ನಡೆಯುತ್ತದೆ. ಅಧರ್ಮವೆನ್ನುವುದೇ ಯಾರಿಗೂ ತಿಳಿದಿರುವುದಿಲ್ಲ. ಎಲ್ಲ ವರ್ಣದವರ ಮನಸ್ಸೂ ಅಧರ್ಮದಲ್ಲಿ ರಮಿಸುವುದಿಲ್ಲ.
12070009a ಯೋಗಕ್ಷೇಮಾಃ ಪ್ರವರ್ತಂತೇ ಪ್ರಜಾನಾಂ ನಾತ್ರ ಸಂಶಯಃ|
12070009c ವೈದಿಕಾನಿ ಚ ಕರ್ಮಾಣಿ ಭವಂತ್ಯವಿಗುಣಾನ್ಯುತ||
ಪ್ರಜೆಗಳ ಯೋಗ-ಕ್ಷೇಮಗಳು ನಡೆಯುತ್ತಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಉತ್ತಮ ಗುಣಯುಕ್ತ ವೈದಿಕ ಕರ್ಮಗಳು ನಡೆಯುತ್ತಿರುತ್ತವೆ.
12070010a ಋತವಶ್ಚ ಸುಖಾಃ ಸರ್ವೇ ಭವಂತ್ಯುತ ನಿರಾಮಯಾಃ|
12070010c ಪ್ರಸೀದಂತಿ ನರಾಣಾಂ ಚ ಸ್ವರವರ್ಣಮನಾಂಸಿ ಚ||
ಎಲ್ಲ ಋತುಗಳೂ ಎಲ್ಲರಿಗೂ ಸುಖವಾಗಿಯೇ ಇರುತ್ತವೆ. ಎಲ್ಲರೂ ನಿರಾಮಯರಾಗಿರುತ್ತಾರೆ. ಸ್ವರ-ವರ್ಣ-ಮನಸ್ಸುಗಳು ಮನುಷ್ಯರಿಗೆ ಪ್ರಸನ್ನವಾಗಿರುತ್ತವೆ.
12070011a ವ್ಯಾಧಯೋ ನ ಭವಂತ್ಯತ್ರ ನಾಲ್ಪಾಯುರ್ದೃಶ್ಯತೇ ನರಃ|
12070011c ವಿಧವಾ ನ ಭವಂತ್ಯತ್ರ ನೃಶಂಸೋ ನಾಭಿಜಾಯತೇ||
ವ್ಯಾಧಿಗಳು ಇರುವುದಿಲ್ಲ. ಅಲ್ಪಾಯು ನರನು ಅಲ್ಲಿ ಕಾಣಬರುವುದಿಲ್ಲ. ಅಲ್ಲಿ ವಿಧವೆಯರಿರುವುದಿಲ್ಲ. ಕ್ರೂರಿಯು ಹುಟ್ಟುವುದೇ ಇಲ್ಲ.
12070012a ಅಕೃಷ್ಟಪಚ್ಯಾ ಪೃಥಿವೀ ಭವಂತ್ಯೋಷಧಯಸ್ತಥಾ|
12070012c ತ್ವಕ್ಪತ್ರಫಲಮೂಲಾನಿ ವೀರ್ಯವಂತಿ ಭವಂತಿ ಚ||
ಕೃಷಿಮಾಡದೇ ಬೆಳೆಗಳು ಬೆಳೆಯುತ್ತವೆ. ಔಷಧಿಗಳು ತಾವಾಗಿಯೇ ಬೆಳೆಯುತ್ತವೆ. ತೊಗಟೆಗಳೂ, ಎಲೆಗಳೂ, ಫಲಗಳೂ ಮತ್ತು ಬೇರುಗಳೂ ವೀರ್ಯವತ್ತಾಗಿರುತ್ತವೆ.
12070013a ನಾಧರ್ಮೋ ವಿದ್ಯತೇ ತತ್ರ ಧರ್ಮ ಏವ ತು ಕೇವಲಃ|
12070013c ಇತಿ ಕಾರ್ತಯುಗಾನೇತಾನ್ಗುಣಾನ್ವಿದ್ಧಿ ಯುಧಿಷ್ಠಿರ||
ಯುಧಿಷ್ಠಿರ! ಆಗ ಅಧರ್ವವೆನ್ನುವುದೇ ಇರುವುದಿಲ್ಲ. ಕೇವಲ ಧರ್ಮ ಮಾತ್ರ ಇರುತ್ತದೆ. ಇದು ಕೃತಯುಗದ ಗುಣಗಳೆಂದು ತಿಳಿ.
12070014a ದಂಡನೀತ್ಯಾ ಯದಾ ರಾಜಾ ತ್ರೀನಂಶಾನನುವರ್ತತೇ|
12070014c ಚತುರ್ಥಮಂಶಮುತ್ಸೃಜ್ಯ ತದಾ ತ್ರೇತಾ ಪ್ರವರ್ತತೇ||
ಯಾವಾಗ ರಾಜನು ದಂಡನೀತಿಯ ನಾಲ್ಕನೆಯ ಅಂಶವನ್ನು ಬಿಟ್ಟು ಮೂರು ಅಂಶಗಳನ್ನು ಮಾತ್ರ ಅನುಸರಿಸುತ್ತಾನೆಯೋ ಆಗ ತ್ರೇತಾಯುಗವು ಪ್ರಾರಂಭವಾಗುತ್ತದೆ.
12070015a ಅಶುಭಸ್ಯ ಚತುರ್ಥಾಂಶಸ್ತ್ರೀನಂಶನನುವರ್ತತೇ|
12070015c ಕೃಷ್ಟಪಚ್ಯೈವ ಪೃಥಿವೀ ಭವಂತ್ಯೋಷಧಯಸ್ತಥಾ||
ಸಂಪೂರ್ಣ ನಾಲ್ಕೂ ಅಂಶಗಳನ್ನು ಬಳಸದೇ ದಂಡನೀತಿಯ ಮೂರೇ ಅಂಶಗಳನ್ನು ಬಳಸಿದ ಆ ಕಾಲದಲ್ಲಿ ಬೆಳೆ ಮತ್ತು ಔಷಧಿಗಳನ್ನು ಬೆಳೆಯಲು ಕೃಷಿಮಾಡಬೇಕಾಗುತ್ತದೆ.
12070016a ಅರ್ಧಂ ತ್ಯಕ್ತ್ವಾ ಯದಾ ರಾಜಾ ನೀತ್ಯರ್ಧಮನುವರ್ತತೇ|
12070016c ತತಸ್ತು ದ್ವಾಪರಂ ನಾಮ ಸ ಕಾಲಃ ಸಂಪ್ರವರ್ತತೇ||
ಯಾವಾಗ ರಾಜನು ದಂಡನೀತಿಯ ಅರ್ಧವನ್ನು ತ್ಯಜಿಸಿ ಇನ್ನೊಂದು ಅರ್ಧವನ್ನು ಮಾತ್ರ ಅನುಸರಿಸುತ್ತಾನೋ ಆಗ ದ್ವಾಪರ ಎಂಬ ಹೆಸರಿನ ಕಾಲವಾಗಿ ಪರಿವರ್ತನೆಯಾಗುತ್ತದೆ.
12070017a ಅಶುಭಸ್ಯ ತದಾ ಅರ್ಧಂ ದ್ವಾವಂಶಾವನುವರ್ತತೇ|
12070017c ಕೃಷ್ಟಪಚ್ಯೈವ ಪೃಥಿವೀ ಭವತ್ಯಲ್ಪಫಲಾ ತಥಾ||
ಸಂಪೂರ್ಣ ದಂಡನೀತಿಯಲ್ಲದೇ ಅರ್ಧವನ್ನೇ ಅನುಸರಿಸುವ ಕಾಲದಲ್ಲಿ ಭೂಮಿಯಲ್ಲಿ ಕೃಷಿಮಾಡಬೇಕಲ್ಲದೇ ಅದು ಅಲ್ಪ ಫಲವನ್ನೇ ನೀಡುತ್ತದೆ.
12070018a ದಂಡನೀತಿಂ ಪರಿತ್ಯಜ್ಯ ಯದಾ ಕಾರ್ತ್ಸ್ನ್ಯೇನ ಭೂಮಿಪಃ|
12070018c ಪ್ರಜಾಃ ಕ್ಲಿಶ್ನಾತ್ಯಯೋಗೇನ ಪ್ರವಿಶ್ಯತಿ ತದಾ ಕಲಿಃ||
ಯಾವಾಗ ಭೂಮಿಪನು ದಂಡನೀತಿಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ ಅನ್ಯಾಯಮಾರ್ಗಗಳಿಂದ ಪ್ರಜೆಗಳಿಗೆ ಕಷ್ಟಗಳನ್ನು ಕೊಡುತ್ತಾನೋ ಆಗ ಕಲಿಯ ಪ್ರವೇಶವಾಗುತ್ತದೆ.
12070019a ಕಲಾವಧರ್ಮೋ ಭೂಯಿಷ್ಠಂ ಧರ್ಮೋ ಭವತಿ ತು ಕ್ವ ಚಿತ್|
12070019c ಸರ್ವೇಷಾಮೇವ ವರ್ಣಾನಾಂ ಸ್ವಧರ್ಮಾಚ್ಚ್ಯವತೇ ಮನಃ||
ಕಲಿಕಾಲದಲ್ಲಿ ಅಧರ್ಮವೇ ಹೆಚ್ಚಾಗಿರುತ್ತದೆ. ಧರ್ಮವೆನ್ನುವುದು ಎಲ್ಲಿಯೂ ಇರುವುದಿಲ್ಲ. ಸರ್ವ ವರ್ಣದವರಿಗೂ ತಮ್ಮ ಧರ್ಮದಲ್ಲಿ ಮನಸ್ಸಿರುವುದಿಲ್ಲ.
12070020a ಶೂದ್ರಾ ಭೈಕ್ಷೇಣ ಜೀವಂತಿ ಬ್ರಾಹ್ಮಣಾಃ ಪರಿಚರ್ಯಯಾ|
12070020c ಯೋಗಕ್ಷೇಮಸ್ಯ ನಾಶಶ್ಚ ವರ್ತತೇ ವರ್ಣಸಂಕರಃ||
ಶೂದ್ರರು ಭಿಕ್ಷೆಬೇಡಿ ಜೀವಿಸುತ್ತಾರೆ. ಬ್ರಾಹ್ಮಣರು ಸೇವಕರಾಗಿ ಜೀವಿಸುತ್ತಾರೆ. ಯೋಗಕ್ಷೇಮಗಳು ನಾಶವಾಗಿ ವರ್ಣಸಂಕರವಾಗುತ್ತದೆ.
12070021a ವೈದಿಕಾನಿ ಚ ಕರ್ಮಾಣಿ ಭವಂತಿ ವಿಗುಣಾನ್ಯುತ|
12070021c ಋತವೋ ನಸುಖಾಃ ಸರ್ವೇ ಭವಂತ್ಯಾಮಯಿನಸ್ತಥಾ||
ವೈದಿಕ ಕರ್ಮಗಳಲ್ಲಿ ಗುಣವಿರುವಿದಿಲ್ಲ. ಎಲ್ಲ ಋತುಗಳೂ ಎಲ್ಲರಿಗೂ ಸುಖವನ್ನು ನೀಡುವುದಿಲ್ಲ. ಮನುಷ್ಯರು ರೋಗಿಗಳೂ ಆಗುತ್ತಾರೆ.
12070022a ಹ್ರಸಂತಿ ಚ ಮನುಷ್ಯಾಣಾಂ ಸ್ವರವರ್ಣಮನಾಂಸ್ಯುತ|
12070022c ವ್ಯಾಧಯಶ್ಚ ಭವಂತ್ಯತ್ರ ಮ್ರಿಯಂತೇ ಚಾಗತಾಯುಷಃ||
ಮನುಷ್ಯರ ಸ್ವರ-ವರ್ಣ-ಮನಸ್ಸುಗಳು ಸಂಕುಚಿತಗೊಳ್ಳುತ್ತವೆ. ವ್ಯಾಧಿಗಳು ನಡೆಯುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಸಾಯುತ್ತಾರೆ.
12070023a ವಿಧವಾಶ್ಚ ಭವಂತ್ಯತ್ರ ನೃಶಂಸಾ ಜಾಯತೇ ಪ್ರಜಾ|
12070023c ಕ್ವ ಚಿದ್ವರ್ಷತಿ ಪರ್ಜನ್ಯಃ ಕ್ವ ಚಿತ್ಸಸ್ಯಂ ಪ್ರರೋಹತಿ||
ವಿಧವೆಯರಾಗುತ್ತಾರೆ. ಪ್ರಜೆಗಳು ಕ್ರೂರಿಗಳಾಗಿ ಹುಟ್ಟುತ್ತಾರೆ. ಕೆಲವು ಕಡೆ ಮಾತ್ರ ಮಳೆಸುರಿಯುತ್ತದೆ ಮತ್ತು ಕೆಲ ಕಡೆಗಳಲ್ಲಿ ಮಾತ್ರ ಕೃಷಿಗಳನ್ನು ಮಾಡಬಹುದು.
12070024a ರಸಾಃ ಸರ್ವೇ ಕ್ಷಯಂ ಯಾಂತಿ ಯದಾ ನೇಚ್ಚತಿ ಭೂಮಿಪಃ|
12070024c ಪ್ರಜಾಃ ಸಂರಕ್ಷಿತುಂ ಸಮ್ಯಗ್ದಂಡನೀತಿಸಮಾಹಿತಃ||
ಉತ್ತಮ ದಂಡನೀತಿಯನ್ನು ಸಂಪೂರ್ಣವಾಗಿ ಬಳಸಿ ಪ್ರಜೆಗಳನ್ನು ರಕ್ಷಿಸಲು ರಾಜನು ಬಯಸದೇ ಇದ್ದಾಗ ರಸಗಳೆಲ್ಲವೂ ನಾಶಹೊಂದುತ್ತವೆ.
12070025a ರಾಜಾ ಕೃತಯುಗಸ್ರಷ್ಟಾ ತ್ರೇತಾಯಾ ದ್ವಾಪರಸ್ಯ ಚ|
12070025c ಯುಗಸ್ಯ ಚ ಚತುರ್ಥಸ್ಯ ರಾಜಾ ಭವತಿ ಕಾರಣಮ್||
ರಾಜನಾದವನು ಕೃತಯುಗ, ತ್ರೇತಾಯುಗ ಮತ್ತು ದ್ವಾಪರ ಯುಗಗಳನ್ನು ಸೃಷ್ಟಿಸುತ್ತಾನೆ. ಈ ನಾಲ್ಕು ಯುಗಗಳಿಗೆ ರಾಜನೇ ಕಾರಣನಾಗುತ್ತಾನೆ.
12070026a ಕೃತಸ್ಯ ಕರಣಾದ್ರಾಜಾ ಸ್ವರ್ಗಮತ್ಯಂತಮಶ್ನುತೇ|
12070026c ತ್ರೇತಾಯಾಃ ಕರಣಾದ್ರಾಜಾ ಸ್ವರ್ಗಂ ನಾತ್ಯಂತಮಶ್ನುತೇ||
ಕೃತಯುಗವನ್ನು ಮಾಡಿದ ರಾಜನು ಅಕ್ಷಯ ಸ್ವರ್ಗವನ್ನು ಪಡೆದುಕೊಳ್ಳುತ್ತಾನೆ. ತ್ರೇತಾಯುಗವನ್ನು ನಿರ್ಮಿಸಿದ ರಾಜನಿಗೆ ಅಕ್ಷಯ ಸ್ವರ್ಗವು ದೊರಕುವುದಿಲ್ಲ.
12070027a ಪ್ರವರ್ತನಾದ್ದ್ವಾಪರಸ್ಯ ಯಥಾಭಾಗಮುಪಾಶ್ನುತೇ|
12070027c ಕಲೇಃ ಪ್ರವರ್ತನಾದ್ರಾಜಾ ಪಾಪಮತ್ಯಂತಮಶ್ನುತೇ||
ಕಾಲವನ್ನು ದ್ವಾಪರಯುಗವನ್ನಾಗಿ ಪರಿವರ್ತಿಸಿದ ರಾಜನಿಗೆ ಸ್ವಲ್ಪವೇ ಪುಣ್ಯವು ದೊರೆಯುತ್ತದೆ. ಕಲಿಯುಗವನ್ನಾಗಿ ಪರಿವರ್ತಿಸಿದ ರಾಜನು ಅತ್ಯಂತ ಪಾಪವನ್ನು ಪಡೆದುಕೊಳ್ಳುತ್ತಾನೆ.
12070028a ತತೋ ವಸತಿ ದುಷ್ಕರ್ಮಾ ನರಕೇ ಶಾಶ್ವತೀಃ ಸಮಾಃ|
12070028c ಪ್ರಜಾನಾಂ ಕಲ್ಮಷೇ ಮಗ್ನೋಽಕೀರ್ತಿಂ ಪಾಪಂ ಚ ವಿಂದತಿ||
ಅಂತಹ ದುಷ್ಕರ್ಮಿಯು ಪ್ರಜೆಗಳ ಪಾಪಗಳಲ್ಲಿ ಮುಳುಗಿಹೋಗಿ ಅಕೀರ್ತಿಯನ್ನೂ ಪಾಪವನ್ನೂ ಪಡೆದುಕೊಂಡು ಶಾಶ್ವತಕಾಲ ನರಕದಲ್ಲಿ ವಾಸಿಸುತ್ತಾನೆ.
12070029a ದಂಡನೀತಿಂ ಪುರಸ್ಕೃತ್ಯ ವಿಜಾನನ್ ಕ್ಷತ್ರಿಯಃ ಸದಾ|
12070029c ಅನವಾಪ್ತಂ ಚ ಲಿಪ್ಸೇತ ಲಬ್ಧಂ ಚ ಪರಿಪಾಲಯೇತ್||
ಕ್ಷತ್ರಿಯನಾದವನು ಸದಾ ತಿಳಿದುಕೊಂಡು ದಂಡನೀತಿಯನ್ನು ಮುಂಡಿಟ್ಟುಕೊಂಡು ಇಲ್ಲದಿದ್ದುದನ್ನು ಪಡೆದುಕೊಳ್ಳಬೇಕು ಮತ್ತು ಇದ್ದುದನ್ನು ರಕ್ಷಿಸಿಕೊಳ್ಳಬೇಕು.
12070030a ಲೋಕಸ್ಯ ಸೀಮಂತಕರೀ ಮರ್ಯಾದಾ ಲೋಕಭಾವನೀ|
12070030c ಸಮ್ಯಙ್ನೀತಾ ದಂಡನೀತಿರ್ಯಥಾ ಮಾತಾ ಯಥಾ ಪಿತಾ||
ಲೋಕಳನ್ನು ಅವುಗಳ ಗಡಿಯೊಳಗೆ ಇರುವಂತೆ ಮಾಡುವ, ಧರ್ಮಮರ್ಯಾದೆಗಳನ್ನು ಮೀರದಂತೆ ನೋಡಿಕೊಳ್ಳುವ, ಮತ್ತು ಚೆನ್ನಾಗಿ ನಡೆಸಿದ ದಂಡನೀತಿಯೇ ತಂದೆ-ತಾಯಿಯರಂತೆ ಪ್ರಜೆಗಳನ್ನು ಪಾಲಿಸುತ್ತದೆ.
12070031a ಯಸ್ಯಾಂ ಭವಂತಿ ಭೂತಾನಿ ತದ್ವಿದ್ಧಿ ಭರತರ್ಷಭ|
12070031c ಏಷ ಏವ ಪರೋ ಧರ್ಮೋ ಯದ್ರಾಜಾ ದಂಡನೀತಿಮಾನ್||
ಭರತರ್ಷಭ! ದಂಡನೀತಿಯಿಂದಲೇ ಪ್ರಾಣಿಗಳು ಆಗುತ್ತವೆ ಎನ್ನುವುದನ್ನು ತಿಳಿದುಕೋ. ಇದೇ ರಾಜನಾದವನ ಪರಮ ಧರ್ಮ.
12070032a ತಸ್ಮಾತ್ಕೌರವ್ಯ ಧರ್ಮೇಣ ಪ್ರಜಾಃ ಪಾಲಯ ನೀತಿಮಾನ್|
12070032c ಏವಂವೃತ್ತಃ ಪ್ರಜಾ ರಕ್ಷನ್ಸ್ವರ್ಗಂ ಜೇತಾಸಿ ದುರ್ಜಯಮ್||
ಕೌರವ್ಯ! ಆದುದರಿಂದ ಧರ್ಮದಿಂದ ನೀತಿಮಂತನಾಗಿದ್ದುಕೊಂಡು ಪ್ರಜೆಗಳನ್ನು ಪಾಲಿಸು. ಹೀಗೆ ನಡೆದುಕೊಂಡು ಪ್ರಜೆಗಳನ್ನು ರಕ್ಷಿಸಿ ದುರ್ಜಯ ಸ್ವರ್ಗವನ್ನೂ ಗೆಲ್ಲುತ್ತೀಯೆ.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಎಪ್ಪತ್ತನೇ ಅಧ್ಯಾಯವು.
[1] ತಸ್ಮಾದೇವಮನುಷ್ಯಾಣಾಂ ಎಂಬ ಪಾಠಾಂತರವಿದೆ.