ಭೀಷ್ಮ ಪರ್ವ:ಭಗವದ್ಗೀತಾ ಪರ್ವ
೩೮
ದೈವಾಸುರಸಂಪದ್ವಿಭಾಗ ಯೋಗ
06038001 ಶ್ರೀಭಗವಾನುವಾಚ|
06038001a ಅಭಯಂ ಸತ್ತ್ವಸಂಶುದ್ಧಿರ್ಜ್ಞಾನಯೋಗವ್ಯವಸ್ಥಿತಿಃ|
06038001c ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಂ||
06038002a ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಂ|
06038002c ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಂ||
06038003a ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋ ನಾತಿಮಾನಿತಾ|
06038003c ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ||
ಶ್ರೀಭಗವಾನನು ಹೇಳಿದನು: “ಭಾರತ! ಅಭಯ, ಸತ್ತ್ವಸಂಶುದ್ಧಿ (ಅಂತಃಕರಣದ ಶುದ್ಧಿ), ಜ್ಞಾನಯೋಗದಲ್ಲಿ ನಿಷ್ಠನಾಗಿರುವುದು, ದಾನ, ದಮ, ಯಜ್ಞ, ಸ್ವಾಧ್ಯಾಯ, ತಪ, ಆರ್ಜವ, ಅಹಿಂಸೆ, ಸತ್ಯ, ಅಕ್ರೋಧ, ತ್ಯಾಗ, ಶಾಂತಿ, ಅಪೈಶುನ (ಚಾಡಿಕೋರತನವಿಲ್ಲದಿರುವುದು), ಭೂತದಯೆ, ಅಲೋಲುಪ್ಯತೆ (ವಿಷಯಗಳು ಹತ್ತಿರವಿರುವಾಗಲೂ ಇಂದ್ರಿಯಗಳ ವಿಕಾರವಿಲ್ಲದೇ ಇರುವುದು), ಮಾರ್ದವ (ಮೃದುವಾಗಿರುವುದು, ಕ್ರೂರಿಯಾಗಿಲ್ಲದಿರುವುದು), ಹ್ರೀ (ನಾಚಿಕೆ), ಅಚಾಪಲ (ಪ್ರಯೋಜನವಿಲ್ಲದ ಮಾತು-ಕೆಲಸಗಳನ್ನು ಮಾಡದಿರುವುದು), ತೇಜಸ್ಸು, ಕ್ಷಮೆ, ಧೃತಿ, ಶೌಚ, ಅದ್ರೋಹ, ಅತಿಮಾನಿತನಾಗಿಲ್ಲದಿರುವುದು ಇವು ದೈವೀ ಸಂಪದದಿಂದ ಹುಟ್ಟುತ್ತವೆ.
06038004a ದಂಭೋ ದರ್ಪೋಽತಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ|
06038004c ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಂ||
ಪಾರ್ಥ! ದಂಭ (ಧಾರ್ಮಿಕನೆಂದು ತೋರಿಸಿಕೊಳ್ಳುವುದು), ದರ್ಪ, ಅತಿಮಾನ, ಕ್ರೋಧ, ಬಿರುಸಾದ ಮಾತು, ಅಜ್ಞಾನ ಇವು ಅಸುರೀ ಸಂಪದದಿಂದ ಹುಟ್ಟಿವೆ.
06038005a ದೈವೀ ಸಂಪದ್ವಿಮೋಕ್ಷಾಯ ನಿಬಂಧಾಯಾಸುರೀ ಮತಾ|
06038005c ಮಾ ಶುಚಃ ಸಂಪದಂ ದೈವೀಮಭಿಜಾತೋಽಸಿ ಪಾಂಡವ||
ಪಾಂಡವ! ದೈವೀ ಸಂಪತ್ತು ವಿಮೋಕ್ಷಕ್ಕೂ ಅಸುರೀ ಸಂಪದವು ನಿಬಂಧಕ್ಕೂ ಕಾರಣವೆಂದು ಅಭಿಪ್ರಾಯವಿದೆ. ಶೋಕಿಸದಿರು. ನೀನು ದೈವೀ ಸಂಪದದಿಂದ ಜನಿಸಿರುವೆ.
06038006a ದ್ವೌ ಭೂತಸರ್ಗೌ ಲೋಕೇಽಸ್ಮಿನ್ದೈವ ಆಸುರ ಏವ ಚ|
06038006c ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು||
ಪಾರ್ಥ! ಈ ಲೋಕದಲ್ಲಿ ದೈವ ಮತ್ತು ಅಸುರಗಳೆಂಬ ಎರಡು ಭೂತಸರ್ಗಗಳಿವೆ. ದೈವದ ಕುರಿತು ವಿಸ್ತಾರವಾಗಿ ಹೇಳಿಯಾಯಿತು. ಅಸುರದ ಕುರಿತು ನನ್ನಿಂದ ಕೇಳು.
06038007a ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ|
06038007c ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ||
ಅಸುರ ಜನರು ಪ್ರವೃತ್ತಿ-ನಿವೃತ್ತಿಗಳನ್ನು ಅರಿತಿರುವುದಿಲ್ಲ. ಅವರಲ್ಲಿ ಶೌಚವೂ, ಆಚಾರಗಳೂ, ಸತ್ಯವೂ ಇರುವುದಿಲ್ಲ.
06038008a ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಂ|
06038008c ಅಪರಸ್ಪರಸಂಭೂತಂ ಕಿಮನ್ಯತ್ಕಾಮಹೈತುಕಂ||
ಜಗತ್ತು ಅಸತ್ಯವಾದುದು, ಆಧಾರವಿಲ್ಲದಿರುವುದು, ಆಳುವ ಈಶ್ವರನಿಲ್ಲದಿರುವುದು, ಕಾಮಪ್ರೇರಿತ ಸ್ತ್ರೀ-ಪುರುಷರ ಅನ್ಯೋನ್ಯಸಂಯೋಗದಿಂದಲೇ ಹುಟ್ಟಿರುವುದು, ಮತ್ತೇನು, ಕಾಮಹೇತುವಿನಿಂದಲೇ ಆದದ್ದು ಎಂದು ಅವರು ಹೇಳುವರು.
06038009a ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಽಲ್ಪಬುದ್ಧಯಃ|
06038009c ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋಽಹಿತಾಃ||
ಈ ದೃಷ್ಟಿಯನ್ನು ಅವಲಂಬಿಸಿ, ನಷ್ಟಾತ್ಮರಾಗಿ ಈ ಅಲ್ಪಬುದ್ಧಿಗಳು ಉಗ್ರಕರ್ಮಿಗಳಾಗಿ ಅಹಿತರಾಗಿ ಜಗತ್ತಿನ ಕ್ಷಯಕ್ಕೆ ಕಾರಣರಾಗುತ್ತಾರೆ.
06038010a ಕಾಮಮಾಶ್ರಿತ್ಯ ದುಷ್ಪೂರಂ ದಂಭಮಾನಮದಾನ್ವಿತಾಃ|
06038010c ಮೋಹಾದ್ಗೃಹೀತ್ವಾಸದ್ಗ್ರಾಹಾನ್ಪ್ರವರ್ತಂತೇಽಶುಚಿವ್ರತಾಃ||
ಪೂರೈಸಲಾಗದೇ ಇರುವ ಕಾಮಗಳನ್ನು ಆಶ್ರಯಿಸಿ, ದಂಭ-ಮಾನ-ಮದಗಳಿಂದೊಡಗೂಡಿ ಮೋಹದಿಂದ ಕೆಟ್ಟ ಮನೋನಿಶ್ಚಯಗಳನ್ನು ತಾಳಿ ಲೋಕದಲ್ಲಿ ಅಶುಚಿವ್ರತರಾಗಿ ನಡೆದುಕೊಳ್ಳುವರು.
06038011a ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾಃ|
06038011c ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ||
06038012a ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ|
06038012c ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್||
ಅಪರಿಮೇಯವಾದ, ಪ್ರಲಯಾಂತಕವಾದ ಚಿಂತೆಯನ್ನು ಆಶ್ರಯಿಸಿ, ಕಾಮೋಪಭೋಗಪರರಾಗಿ, ಇಷ್ಟೇ ಎಂದು ನಿಶ್ಚಯಿಸಿದವರಾಗಿ, ನೂರಾರು ಆಶಾಪಾಶಗಳಿಂದ ಬಂಧಿಸಲ್ಪಟ್ಟು, ಕಾಮಕ್ರೋಧಪರಾಯಣರಾಗಿ, ಅನ್ಯಾಯದಿಂದ ಧನವನ್ನು ಕೂಡಿಟ್ಟುಕೊಂಡು ಕಾಮಭೋಗಗಳನ್ನು ಪಡೆಯುತ್ತಾರೆ.
06038013a ಇದಮದ್ಯ ಮಯಾ ಲಬ್ಧಮಿದಂ ಪ್ರಾಪ್ಸ್ಯೇ ಮನೋರಥಂ|
06038013c ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಂ||
06038014a ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ|
06038014c ಈಶ್ವರೋಽಹಮಹಂ ಭೋಗೀ ಸಿದ್ಧೋಽಹಂ ಬಲವಾನ್ಸುಖೀ||
06038015a ಆಢ್ಯೋಽಭಿಜನವಾನಸ್ಮಿ ಕೋಽನ್ಯೋಽಸ್ತಿ ಸದೃಶೋ ಮಯಾ|
06038015c ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ||
06038016a ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ|
06038016c ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಽಶುಚೌ||
ಇದು ನನಗೆ ಇಂದು ಸಿಕ್ಕಿತು, ನನಗಿಷ್ಟವಾದ ಇದನ್ನು ಪಡೆದುಕೊಳ್ಳುವೆನು, ಇದು ಇದ್ದರೂ ಮತ್ತೆ ಈ ಧನವೂ ನನಗಾಗಬೇಕು, ಆ ಶತ್ರುವು ನನ್ನಿಂದ ಹತನಾದನು ಇನ್ನು ಮಿಕ್ಕವರನ್ನೂ ಕೊಲ್ಲುತ್ತೇನೆ, ನಾನೇ ಈಶ್ವರ, ನಾನೇ ಭೋಗಿ, ನಾನೇ ಸಿದ್ಧ, ಬಲವಂತ, ಸುಖಿ, ಹಣವಂತ, ಉತ್ತಮ ಕುಲದವನು, ನನಗೆ ಸದೃಶನಾದ ಬೇರೆ ಯಾರಿದ್ದಾರೆ? ಯಾಗಮಾಡುತ್ತೇನೆ, ದಾನ ಕೊಡುತ್ತೇನೆ, ಸಂತೋಷ ಪಡುತ್ತೇನೆ - ಎಂದು ಅಜ್ಞಾನಮೋಹಿತರಾಗಿ, ಅನೇಕ ಚಿತ್ತವಿಭ್ರಾಂತರಾಗಿ, ಮೋಹಜಾಲದಲ್ಲಿ ಸಿಲುಕಿಕೊಂಡು, ಕಾಮಭೋಗಗಳಲ್ಲಿ ಪ್ರಸಕ್ತರಾಗಿ ಅಶುಚಿ ನರಕದಲ್ಲಿ ಬೀಳುವರು.
06038017a ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ|
06038017c ಯಜಂತೇ ನಾಮಯಜ್ಞೈಸ್ತೇ ದಂಭೇನಾವಿಧಿಪೂರ್ವಕಂ||
ತಮ್ಮನ್ನು ತಾವೇ ಒಳ್ಳೆಯರೆಂದು ತಿಳಿದುಕೊಂಡು, ತಗ್ಗಿ ನಡೆಯುವ ಸ್ವಾಭವವಿಲ್ಲದವರಾಗಿ, ಮಾನಮದಾನ್ವಿತರಾಗಿ ಅವರು ದಂಭದಿಂದ ಅವಿಧಿಪೂರ್ವಕವಾಗಿ ನಾಮ ಯಜ್ಞಗಳನ್ನು ಮಾಡುತ್ತಿರುತ್ತಾರೆ.
06038018a ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ|
06038018c ಮಾಮಾತ್ಮಪರದೇಹೇಷು ಪ್ರದ್ವಿಷಂತೋಽಭ್ಯಸೂಯಕಾಃ||
ಅಹಂಕಾರ, ಬಲ, ದರ್ಪ, ಕಾಮ ಮತ್ತು ಕ್ರೋಧಗಳನ್ನು ಆಶ್ರಯಿಸಿ ತಮ್ಮ ಮತ್ತು ಮಿಕ್ಕವರ ದೇಹಗಳಲ್ಲಿರುವ ನನ್ನನ್ನು ದ್ವೇಷಿಸುತ್ತಾ ಅಸೂಯೆಪಡುತ್ತಾರೆ.
06038019a ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್|
06038019c ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು||
ಆ ದ್ವೇಷಿಗಳನ್ನು, ಕ್ರೂರ, ಅಶುಭ ನರಾಧಮರನ್ನು ನಾನು ಸಂಸಾರದಲ್ಲಿ ಸತತವೂ ಅಶುಭವಾದ ಅಸುರ ಯೋನಿಗಳಲ್ಲಿಯೇ ಕೆಡಹುತ್ತೇನೆ.
06038020a ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ|
06038020c ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಂ||
ಕೌಂತೇಯ! ಜನ್ಮ ಜನ್ಮಗಳಲ್ಲಿಯೂ ಅಸುರೀ ಯೋನಿಯನ್ನು ಪಡೆದ ಆ ಮೂಢರು ನನ್ನನ್ನು ಪಡೆಯದೆಯೇ ಇನ್ನೂ ಅಧಮ ಗತಿಯನ್ನು ಹೊಂದುತ್ತಾರೆ.
06038021a ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ|
06038021c ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ತ್ರಯಂ ತ್ಯಜೇತ್||
ಕಾಮ, ಕ್ರೋಧ ಮತ್ತು ಲೋಭ - ಇವು ಮೂರು ನರಕಕ್ಕೆ ಹೋಗಲು ದ್ವಾರಗಳು. ಆತ್ಮನ ನಾಶಕ್ಕೆ ಕಾರಣಗಳು. ಆದ್ದರಿಂದ ಈ ಮೂರನ್ನು ಬಿಡಬೇಕು.
06038022a ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ|
06038022c ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಂ||
ಕೌಂತೇಯ! ಈ ಮೂರು ತಮೋದ್ವಾರಗಳಿಂದ ವಿಮುಕ್ತನಾದ ನರನು ತನಗೆ ಶ್ರೇಯಸ್ಸನ್ನು ತಂದುಕೊಳ್ಳುತ್ತಾನೆ. ಅದರಿಂದ ಪರಮ ಗತಿಯನ್ನು ಪಡೆಯುತ್ತಾನೆ.
06038023a ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ|
06038023c ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಂ||
ಯಾರು ಶಾಸ್ತ್ರವಿಧಿಯನ್ನು ಬಿಟ್ಟು ಕಾಮದ ಪ್ರೇರಣೆಗೆ ಒಳಗಾಗಿ ವರ್ತಿಸುವರೋ ಅವರು ಸಿದ್ಧಿಯನ್ನೂ ಪಡೆಯುವುದಿಲ್ಲ, ಸುಖ ಮತ್ತು ಪರಮ ಗತಿಯನ್ನೂ ಪಡೆಯುವುದಿಲ್ಲ.
06038024a ತಸ್ಮಾಚ್ಚಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ|
06038024c ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ||
ಆದುದರಿಂದ ಕಾರ್ಯ-ಅಕಾರ್ಯಗಳಲ್ಲಿ ನಿನಗೆ ಶಾಸ್ತ್ರವೇ ಪ್ರಮಾಣವು. ಶಾಸ್ತ್ರವಿಧಾನಗಳಲ್ಲಿ ಹೇಳಿರುವುದನ್ನು ತಿಳಿದು ಕರ್ಮವನ್ನು ಮಾಡಬೇಕು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ದೈವಾಸುರಸಂಪದ್ವಿಭಾಗಯೋಗೋ ನಾಮ ಷೋಡಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ದೈವಾಸುರಸಂಪದ್ವಿಭಾಗಯೋಗವೆಂಬ ಹದಿನಾರನೇ ಅಧ್ಯಾಯವು.
ಭೀಷ್ಮ ಪರ್ವಣಿ ಅಷ್ಠಾತ್ರಿಂಶೋಽಧ್ಯಾಯಃ||
ಭೀಷ್ಮ ಪರ್ವದಲ್ಲಿ ಮೂವತ್ತೆಂಟನೇ ಅಧ್ಯಾಯವು.