Udyoga Parva: Chapter 103

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೩

ಇಂದ್ರನು ನಾಗನಿಗೆ ಆಯುಸ್ಸನ್ನು ಕೊಟ್ಟಿದ್ದುದನ್ನು ಕೇಳಿ ಕುಪಿತನಾದ ಗರುಡನು ರಭಸದಿಂದ ಇಂದ್ರನಲ್ಲಿಗೆ ಬಂದು ಅವನನ್ನು ಹೀಯಾಳಿಸಿ ತನ್ನ ಪರಾಕ್ರಮವನ್ನು ಹೇಳಿಕೊಳ್ಳುತ್ತಾ ಬಲಶಾಲಿಯು ಯಾರು ಎಂದು ನಿಶ್ಚಿತವಾಗಲಿ ಎಂದು ಪಂಥಕ್ಕೆ ಆಹ್ವಾನಿಸಿದುದು (೧-೧೭). ಆಗ ವಿಷ್ಣುವು ತನ್ನ ಬಲತೋಳನ್ನು ಗರುಡನ ಮೇಲೆ ಇಡಲು, ಅದನ್ನೂ ಹೊರಲಾರದೇ ಗರುಡನು ಕುಸಿದು ಬಿದ್ದುದು ಮತ್ತು ವಿಷ್ಣುವಿನಲ್ಲಿ ಕ್ಷಮೆ ಕೇಳಿದುದು (೧೮-೩೦). “ನೀನೂ ಕೂಡ ಎಲ್ಲಿಯವರೆಗೆ ಆ ವೀರ ಪಾಂಡುಸುತರನ್ನು ರಣದಲ್ಲಿ ಎದುರಿಸುವುದಿಲ್ಲವೋ ಅಲ್ಲಿಯವರೆಗೆ ಜೀವಿಸಿರುತ್ತೀಯೆ.” ಎಂದು ಕಣ್ವನು ದುರ್ಯೋಧನನಿಗೆ ಉಪದೇಶಿಸಲು ದುರ್ಯೋಧನನು ತನ್ನ ತೊಡೆಯನ್ನು ಚಪ್ಪರಿಸಿ “ಈಶ್ವರನಿಂದ ಹೇಗೆ ಸೃಷ್ಟಿಸಲ್ಪಟ್ಟಿದ್ದೇನೋ, ನನ್ನ ಭವಿಷ್ಯ ಮತ್ತು ದಾರಿಯು ಹೇಗೆ ನಡೆಸುತ್ತದೆಯೋ ಹಾಗೆಯೇ ನಾನು ಮಾಡುತ್ತೇನೆ” ಎಂದು ಉತ್ತರಿಸುವುದು (೩೧-೩೮).

05103001 ಕಣ್ವ ಉವಾಚ|

05103001a ಗರುಡಸ್ತತ್ತು ಶುಶ್ರಾವ ಯಥಾವೃತ್ತಂ ಮಹಾಬಲಃ|

05103001c ಆಯುಃಪ್ರದಾನಂ ಶಕ್ರೇಣ ಕೃತಂ ನಾಗಸ್ಯ ಭಾರತ||

ಕಣ್ವನು ಹೇಳಿದನು: “ಭಾರತ! ನಡೆದುದನ್ನು – ಶಕ್ರನು ನಾಗನಿಗೆ ಆಯುಸ್ಸನ್ನು ಕೊಟ್ಟಿದ್ದುದನ್ನು - ಮಹಾಬಲ ಗರುಡನು ಕೇಳಿದನು.

05103002a ಪಕ್ಷವಾತೇನ ಮಹತಾ ರುದ್ಧ್ವಾ ತ್ರಿಭುವನಂ ಖಗಃ|

05103002c ಸುಪರ್ಣಃ ಪರಮಕ್ರುದ್ಧೋ ವಾಸವಂ ಸಮುಪಾದ್ರವತ್||

ಪರಮಕೃದ್ಧನಾಗಿ ಖಗ ಸುಪರ್ಣನು ತನ್ನ ರೆಕ್ಕೆಗಳಿಂದ ಮಹಾ ಧೂಳನ್ನೆಬ್ಬಿಸಿ ತ್ರಿಭುವನದ ವಾಸವನ ಬಳಿ ಧಾವಿಸಿದನು.

05103003 ಗರುಡ ಉವಾಚ|

05103003a ಭಗವನ್ಕಿಮವಜ್ಞಾನಾತ್ಕ್ಷುಧಾಂ ಪ್ರತಿ ಭಯೇ ಮಮ|

05103003c ಕಾಮಕಾರವರಂ ದತ್ತ್ವಾ ಪುನಶ್ಚಲಿತವಾನಸಿ||

ಗರುಡನು ಹೇಳಿದನು: “ಭಗವನ್! ನನ್ನನ್ನು ಅಲ್ಲಗಳೆದು ನೀನು ಏಕೆ ನನ್ನ ಹಸಿವೆಗೆ ಭಂಗ ತರುತ್ತಿದ್ದೀಯೆ. ನೀನೇ ಬಯಸಿ ಕೊಟ್ಟ ವರವನ್ನು ಪುನಃ ಹಿಂದೆ ತೆಗೆದುಕೊಳ್ಳುತ್ತಿದ್ದಿಯೆ!

05103004a ನಿಸರ್ಗಾತ್ಸರ್ವಭೂತಾನಾಂ ಸರ್ವಭೂತೇಶ್ವರೇಣ ಮೇ|

05103004c ಆಹಾರೋ ವಿಹಿತೋ ಧಾತ್ರಾ ಕಿಮರ್ಥಂ ವಾರ್ಯತೇ ತ್ವಯಾ||

ನಿಸರ್ಗದ ಸರ್ವಭೂತಗಳ ಸರ್ವಭೂತೇಶ್ವರ ಧಾತ್ರನು ನನ್ನ ಆಹಾರವನ್ನು ನಿಶ್ಚಯಿಸಿದ್ದಾನೆ. ನೀನು ಏಕೆ ಅದನ್ನು ತಡೆಯುತ್ತಿದ್ದೀಯೆ?

05103005a ವೃತಶ್ಚೈಷ ಮಹಾನಾಗಃ ಸ್ಥಾಪಿತಃ ಸಮಯಶ್ಚ ಮೇ|

05103005c ಅನೇನ ಚ ಮಯಾ ದೇವ ಭರ್ತವ್ಯಃ ಪ್ರಸವೋ ಮಹಾನ್||

ನಾನು ಈ ಮಹಾನಾಗನನ್ನು ಮತ್ತು ಸಮಯವನ್ನು ನಿರ್ದಿಷ್ಟಗೊಳಿಸಿದ್ದೆ. ದೇವ! ಇದರಿಂದ ನಾನು ನನ್ನ ಮಹಾ ಸಂಖ್ಯೆಯ ಸಂತತಿಗೆ ಉಣಿಸುವವನಿದ್ದೆ.

05103006a ಏತಸ್ಮಿಂಸ್ತ್ವನ್ಯಥಾಭೂತೇ ನಾನ್ಯಂ ಹಿಂಸಿತುಮುತ್ಸಹೇ|

05103006c ಕ್ರೀಡಸೇ ಕಾಮಕಾರೇಣ ದೇವರಾಜ ಯಥೇಚ್ಚಕಂ||

05103007a ಸೋಽಹಂ ಪ್ರಾಣಾನ್ವಿಮೋಕ್ಷ್ಯಾಮಿ ತಥಾ ಪರಿಜನೋ ಮಮ|

05103007c ಯೇ ಚ ಭೃತ್ಯಾ ಮಮ ಗೃಹೇ ಪ್ರೀತಿಮಾನ್ಭವ ವಾಸವ||

ಇದರಿಂದ ನಾನು ಬೇರೆ ಯಾರನ್ನೂ ಅನ್ಯಥಾ ಹಿಂಸಿಸಲು ಬಯಸುವುದಿಲ್ಲ. ದೇವರಾಜ! ನಿನಗಿಷ್ಟಬಂದಂತೆ ಬೇಕಂತೆಲೇ ನಾನು ಮತ್ತು ಹಾಗೆಯೇ ನನ್ನ ಪರಿವಾರದವರು, ನನ್ನ ಮನೆಯಲ್ಲಿ ನೇಮಿಸಿರುವ ಸೇವಕರು ಪ್ರಾಣವನ್ನು ತೊರೆಯಬೇಕು ಎಂದು ನೀನು ಈ ಆಟವನ್ನು ಆಡುತ್ತಿದ್ದೀಯೆ! ವಾಸವ! ಅದರಿಂದ ನೀನು ಸಂತೋಷಗೊಳ್ಳುತ್ತೀಯೆ!

05103008a ಏತಚ್ಚೈವಾಹಮರ್ಹಾಮಿ ಭೂಯಶ್ಚ ಬಲವೃತ್ರಹನ್|

05103008c ತ್ರೈಲೋಕ್ಯಸ್ಯೇಶ್ವರೋ ಯೋಽಹಂ ಪರಭೃತ್ಯತ್ವಮಾಗತಃ||

ಬಲವೃತ್ರಹನ್! ಇದಕ್ಕೆ ಮತ್ತು ಇದಕ್ಕಿಂತಲೂ ಹೆಚ್ಚಿನದಕ್ಕೆ ನಾನು ಅರ್ಹ. ತ್ರೈಲೋಕ್ಯೇಶ್ವರನಾದರೂ ನಾನು ಇತರರ ಸೇವಕಮಾತ್ರ ಆಗಿಬಿಟ್ಟಿದ್ದೇನೆ.

05103009a ತ್ವಯಿ ತಿಷ್ಠತಿ ದೇವೇಶ ನ ವಿಷ್ಣುಃ ಕಾರಣಂ ಮಮ|

05103009c ತ್ರೈಲೋಕ್ಯರಾಜ ರಾಜ್ಯಂ ಹಿ ತ್ವಯಿ ವಾಸವ ಶಾಶ್ವತಂ||

ದೇವೇಶ! ತ್ರೈಲೋಕ್ಯರಾಜ! ವಾಸವ! ನಾನು ನಿನ್ನ ಸಮನಾಗಿದ್ದರೂ ವಿಷ್ಣುವಿನ ಕಾರಣದಿಂದ ರಾಜ್ಯವು ನಿನ್ನಲ್ಲಿದೆ.

05103010a ಮಮಾಪಿ ದಕ್ಷಸ್ಯ ಸುತಾ ಜನನೀ ಕಶ್ಯಪಃ ಪಿತಾ|

05103010c ಅಹಮಪ್ಯುತ್ಸಹೇ ಲೋಕಾನ್ಸಮಸ್ತಾನ್ವೋಢುಮಂಜಸಾ||

ನನಗೆ ಕೂಡ ದಕ್ಷನ ಮಗಳು ಜನನಿ ಮತ್ತು ಕಶ್ಯಪನು ತಂದೆ. ನಿನ್ನಂತೆಯೇ ನಾನೂ ಕೂಡ ಸಮಸ್ತ ಲೋಕಗಳನ್ನು ಆಯಾಸಗೊಳ್ಳದೇ ಎತ್ತಿ ಹಿಡಿಯಬಲ್ಲೆ.

05103011a ಅಸಹ್ಯಂ ಸರ್ವಭೂತಾನಾಂ ಮಮಾಪಿ ವಿಪುಲಂ ಬಲಂ|

05103011c ಮಯಾಪಿ ಸುಮಹತ್ಕರ್ಮ ಕೃತಂ ದೈತೇಯವಿಗ್ರಹೇ||

ನನಗೆ ಕೂಡ ಸರ್ವಭೂತಗಳು ಸಹಿಸಲಾಗದ ವಿಪುಲ ಬಲವಿದೆ. ದೈತ್ಯರೊಂದಿಗೆ ಯುದ್ಧದಲ್ಲಿ ನಾನೂ ಕೂಡ ಮಹಾ ಕರ್ಮಗಳನ್ನು ಮಾಡಿದ್ದೇನೆ.

05103012a ಶ್ರುತಶ್ರೀಃ ಶ್ರುತಸೇನಶ್ಚ ವಿವಸ್ವಾನ್ರೋಚನಾಮುಖಃ|

05103012c ಪ್ರಸಭಃ ಕಾಲಕಾಕ್ಷಶ್ಚ ಮಯಾಪಿ ದಿತಿಜಾ ಹತಾಃ||

ನಾನೂ ಕೂಡ ದಿತಿಯ ಮಕ್ಕಳಾದ ಶ್ರುತಶ್ರೀ, ಶ್ರುತಸೇನ, ವಿವಸ್ವಾನ್, ರೋಚನಾಮುಖ, ಪ್ರಸಭ, ಕಾಲಕಾಕ್ಷರನ್ನು ಸಂಹರಿಸಿದ್ದೇನೆ.

05103013a ಯತ್ತು ಧ್ವಜಸ್ಥಾನಗತೋ ಯತ್ನಾತ್ಪರಿಚರಾಮ್ಯಹಂ|

05103013c ವಹಾಮಿ ಚೈವಾನುಜಂ ತೇ ತೇನ ಮಾಮವಮನ್ಯಸೇ||

ಒಮ್ಮೊಮ್ಮೆ ನಿನ್ನ ತಮ್ಮನ ಧ್ವಜಸ್ಥಾನಕ್ಕೆ ಹೋಗಿ ನಾನು ಅವನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಮತ್ತು ಅವನನ್ನು ನಾನು ನನ್ನ ಬೆನ್ನ ಮೇಲೆ ಏರಿಸಿಕೊಂಡು ಕೊಂಡೊಯ್ಯುತ್ತೇನೆ. ಬಹುಷಃ ಈ ಕಾರಣದಿಂದಲೇ ನೀನು ನನ್ನನ್ನು ಕೀಳಾಗಿ ಕಾಣತ್ತಿದ್ದೀಯೆ.

05103014a ಕೋಽನ್ಯೋ ಭಾರಸಹೋ ಹ್ಯಸ್ತಿ ಕೋಽನ್ಯೋಽಸ್ತಿ ಬಲವತ್ತರಃ|

05103014c ಮಯಾ ಯೋಽಹಂ ವಿಶಿಷ್ಟಃ ಸನ್ವಹಾಮೀಮಂ ಸಬಾಂಧವಂ||

ಇಂಥಹ ಭಾರವನ್ನು ಹೊರಬಲ್ಲವರು ಬೇರೆ ಯಾರಿದ್ದಾರೆ? ನನಗಿಂತಲೂ ಬಲಶಾಲಿಗಳು ಬೇರೆ ಯಾರಿದ್ದಾರೆ? ನಾನು ಇಷ್ಟು ವಿಶಿಷ್ಟನಾಗಿದ್ದರೂ ಕೂಡ ಅವನನ್ನು ಬಾಂಧವರೊಂದಿಗೆ ಹೊರುತ್ತೇನೆ.

05103015a ಅವಜ್ಞಾಯ ತು ಯತ್ತೇಽಹಂ ಭೋಜನಾದ್ವ್ಯಪರೋಪಿತಃ|

05103015c ತೇನ ಮೇ ಗೌರವಂ ನಷ್ಟಂ ತ್ವತ್ತಶ್ಚಾಸ್ಮಾಚ್ಚ ವಾಸವ||

ವಾಸವ! ನನ್ನನ್ನ್ನು ಕಡೆಗಣಿಸಿ ನನ್ನ ಭೋಜನಕ್ಕೆ ಅಡ್ಡಿಯಾಗಿ ನೀನೂ ಕೂಡ ನಿನ್ನ ತಮ್ಮನಂತೆ ನನ್ನ ಗೌರವವನ್ನು ಕಳೆಯುತ್ತಿದ್ದೀಯೆ.

05103016a ಅದಿತ್ಯಾಂ ಯ ಇಮೇ ಜಾತಾ ಬಲವಿಕ್ರಮಶಾಲಿನಃ|

05103016c ತ್ವಮೇಷಾಂ ಕಿಲ ಸರ್ವೇಷಾಂ ವಿಶೇಷಾದ್ಬಲವತ್ತರಃ||

ಅದಿತಿಯಲ್ಲಿ ಹುಟ್ಟಿದವರೆಲ್ಲ ಬಲವಿಕ್ರಮಶಾಲಿಗಳು. ಆದರೆ ಅವರಲ್ಲೆಲ್ಲಾ ನೀನೇ ವಿಶೇಷವಾಗಿರುವ ಬಲಶಾಲಿ.

05103017a ಸೋಽಹಂ ಪಕ್ಷೈಕದೇಶೇನ ವಹಾಮಿ ತ್ವಾಂ ಗತಕ್ಲಮಃ|

05103017c ವಿಮೃಶ ತ್ವಂ ಶನೈಸ್ತಾತ ಕೋ ನ್ವತ್ರ ಬಲವಾನಿತಿ||

ಆದರೂ ನಾನು ನಿನ್ನನ್ನು ನನ್ನ ಒಂದೇ ಒಂದು ರೆಕ್ಕೆಯ ಮೇಲೆ ಏನೂ ಆಯಾಸವಿಲ್ಲದೇ ಹೊರುತ್ತೇನೆ. ಅಯ್ಯಾ! ಹೀಗಿರುವಾಗ ಇಲ್ಲಿ ಯಾರು ಬಲಶಾಲಿ ಎನ್ನುವುದನ್ನು ನೀನೇ ವಿಮರ್ಶಿಸಿ ಹೇಳು.””

05103018 ಕಣ್ವ ಉವಾಚ|

05103018a ತಸ್ಯ ತದ್ವಚನಂ ಶ್ರುತ್ವಾ ಖಗಸ್ಯೋದರ್ಕದಾರುಣಂ|

05103018c ಅಕ್ಷೋಭ್ಯಂ ಕ್ಷೋಭಯಂಸ್ತಾರ್ಕ್ಷ್ಯಮುವಾಚ ರಥಚಕ್ರಭೃತ್||

ಕಣ್ವನು ಹೇಳಿದನು: “ಆ ಖಗದ ಜಂಬದ ಮಾತುಗಳನ್ನು ಕೇಳಿ ತೊಂದರೆಗಳನ್ನು ಕೊಡಬಹುದೆಂದು ತಿಳಿದು ರಥಚಕ್ರಭೃತು ವಿಷ್ಣುವು ತಾರ್ಕ್ಷನಿಗೆ ಹೇಳಿದನು.

05103019a ಗರುತ್ಮನ್ಮನ್ಯಸೇಽಆತ್ಮಾನಂ ಬಲವಂತಂ ಸುದುರ್ಬಲಂ|

05103019c ಅಲಮಸ್ಮತ್ಸಮಕ್ಷಂ ತೇ ಸ್ತೋತುಮಾತ್ಮಾನಮಂಡಜ||

“ಗುರುತ್ಮನ್! ತುಂಬಾ ದುರ್ಬಲನಾಗಿದ್ದರೂ ನಿನ್ನನ್ನು ನೀನೇ ಬಲವಂತನೆಂದು ಏಕೆ ಪರಿಗಣಿಸುತ್ತಿರುವೆ? ಅಂಡಜ! ನಮ್ಮ ಎದಿರು ಈ ರೀತಿ ಆತ್ಮ ಸ್ತುತಿ ಮಾಡಿಕೊಳ್ಳುವುದು ನಿನಗೆ ಸರಿಯಲ್ಲ.

05103020a ತ್ರೈಲೋಕ್ಯಮಪಿ ಮೇ ಕೃತ್ಸ್ನಮಶಕ್ತಂ ದೇಹಧಾರಣೇ|

05103020c ಅಹಮೇವಾತ್ಮನಾತ್ಮಾನಂ ವಹಾಮಿ ತ್ವಾಂ ಚ ಧಾರಯೇ||

ನನ್ನ ದೇಹವನ್ನು ಈ ಮೂರುಲೋಕಗಳು ಒಂದಾದರೂ ಹೊರಲು ಅಶಕ್ತ. ನಾನು ನನ್ನ ಮತ್ತು ನಿನ್ನ ಭಾರವನ್ನೂ ಸೇರಿ ಹೊತ್ತಿದ್ದೇನೆ.

05103021a ಇಮಂ ತಾವನ್ಮಮೈಕಂ ತ್ವಂ ಬಾಹುಂ ಸವ್ಯೇತರಂ ವಹ|

05103021c ಯದ್ಯೇನಂ ಧಾರಯಸ್ಯೇಕಂ ಸಫಲಂ ತೇ ವಿಕತ್ಥಿತಂ||

ಬಾ! ನನ್ನ ಈ ಒಂದು ಬಲ ತೋಳನ್ನು ನೀನು ಹೊರು. ನೀನು ಈ ಒಂದನ್ನು ಹೊತ್ತೆಯೆಂದಾದರೆ ನೀನು ಹೇಳಿದ್ದುದು ಸಫಲವಾದಂತೆ.”

05103022a ತತಃ ಸ ಭಗವಾಂಸ್ತಸ್ಯ ಸ್ಕಂಧೇ ಬಾಹುಂ ಸಮಾಸಜತ್|

05103022c ನಿಪಪಾತ ಸ ಭಾರಾರ್ತೋ ವಿಹ್ವಲೋ ನಷ್ಟಚೇತನಃ||

ಆಗ ಆ ಭಗವಾನನು ತನ್ನ್ನ ತೋಳನ್ನು ಅವನ ಭುಜದ ಮೇಲಿರಿಸಿದನು. ಅವನು ಭಾರದಿಂದ ಬಳಲಿ ವಿಹ್ವಲನಾಗಿ ಮೂರ್ಛಿತನಾಗಿ ಬಿದ್ದನು.

05103023a ಯಾವಾನ್ ಹಿ ಭಾರಃ ಕೃತ್ಸ್ನಾಯಾಃ ಪೃಥಿವ್ಯಾಃ ಪರ್ವತೈಃ ಸಹ|

05103023c ಏಕಸ್ಯಾ ದೇಹಶಾಖಾಯಾಸ್ತಾವದ್ಭಾರಮಮನ್ಯತ||

ಪರ್ವತಗಳಿಂದ ಕೂಡಿದ ಇಡೀ ಭೂಮಿಯ ಭಾರವು ಅವನ ದೇಹದ ಒಂದು ಶಾಖೆಯಲ್ಲಿದೆ ಎಂದು ಗರುಡನು ಅರಿತನು.

05103024a ನ ತ್ವೇನಂ ಪೀಡಯಾಮಾಸ ಬಲೇನ ಬಲವತ್ತರಃ|

05103024c ತತೋ ಹಿ ಜೀವಿತಂ ತಸ್ಯ ನ ವ್ಯನೀನಶದಚ್ಯುತಃ||

ಅಚ್ಯುತನು ಅವನನ್ನು ತನ್ನ ಬಲದಿಂದ ಇನ್ನೂ ಹೆಚ್ಚಾಗಿ ಪೀಡಿಸಲಿಲ್ಲ. ಅವನ ಜೀವವನ್ನೂ ತೆಗೆದುಕೊಳ್ಳಲಿಲ್ಲ.

05103025a ವಿಪಕ್ಷಃ ಸ್ರಸ್ತಕಾಯಶ್ಚ ವಿಚೇತಾ ವಿಹ್ವಲಃ ಖಗಃ|

05103025c ಮುಮೋಚ ಪತ್ರಾಣಿ ತದಾ ಗುರುಭಾರಪ್ರಪೀಡಿತಃ||

ಆ ಖಗನು ಅತಿಭಾರದಿಂದ ಪೀಡಿತನಾಗಿ ವಿಹ್ವಲನಾಗಿ ದೇಹವು ಆಯಾಸಗೊಂಡು, ವಿಚೇತನನಾಗಿ ತನ್ನ ರೆಕ್ಕೆಗಳನ್ನು ಉದುರಿಸತೊಡಗಿದನು.

05103026a ಸ ವಿಷ್ಣುಂ ಶಿರಸಾ ಪಕ್ಷೀ ಪ್ರಣಮ್ಯ ವಿನತಾಸುತಃ|

05103026c ವಿಚೇತಾ ವಿಹ್ವಲೋ ದೀನಃ ಕಿಂ ಚಿದ್ವಚನಮಬ್ರವೀತ್||

ಆ ಪಕ್ಷಿ ವಿನತಾಸುತನು ಚೇತನವನ್ನು ಕಳೆದುಕೊಂಡು ವಿಹ್ವಲನಾಗಿ ದೀನನಾಗಿ ವಿಷ್ಣುವನ್ನು ಶಿರಸಾ ನಮಸ್ಕರಿಸಿ ಇದೇನನ್ನೋ ಹೇಳಿದನು:

05103027a ಭಗವಽಲ್ಲೋಕಸಾರಸ್ಯ ಸದೃಶೇನ ವಪುಷ್ಮತಾ|

05103027c ಭುಜೇನ ಸ್ವೈರಮುಕ್ತೇನ ನಿಷ್ಪಿಷ್ಟೋಽಸ್ಮಿ ಮಹೀತಲೇ||

“ಭಗವನ್! ಲೋಕಸಾರದ ಸದೃಶವಾಗಿರುವ, ಸುಂದರವಾದ ಈ ಭುಜದಿಂದ ಮುಕ್ತವಾಗಿ ಹೊರಚಾಚಿ ನೀನು ನನ್ನನ್ನು ಮಹೀತಲಕ್ಕೆ ಅಮುಕಿದ್ದೀಯೆ.

05103028a ಕ್ಷಂತುಮರ್ಹಸಿ ಮೇ ದೇವ ವಿಹ್ವಲಸ್ಯಾಲ್ಪಚೇತಸಃ|

05103028c ಬಲದಾಹವಿದಗ್ಧಸ್ಯ ಪಕ್ಷಿಣೋ ಧ್ವಜವಾಸಿನಃ||

ದೇವ! ವಿಹ್ವಲನಾಗಿರುವ, ಬಲದ ಅಗ್ನಿಯಲ್ಲಿ ಸುಟ್ಟುಹೋಗಿರುವ, ನಿನ್ನ ಧ್ವಜವಾಸಿಯಾದ ಈ ಅಲ್ಪಚೇತಸ ಪಕ್ಷಿ ನನ್ನನ್ನು ಕ್ಷಮಿಸಬೇಕು.

05103029a ನ ವಿಜ್ಞಾತಂ ಬಲಂ ದೇವ ಮಯಾ ತೇ ಪರಮಂ ವಿಭೋ|

05103029c ತೇನ ಮನ್ಯಾಮ್ಯಹಂ ವೀರ್ಯಮಾತ್ಮನೋಽಸದೃಶಂ ಪರೈಃ||

ದೇವ! ಪರಮವಿಭೋ! ನಿನ್ನ ಬಲವನ್ನು ನಾನು ತಿಳಿಯಲಿಲ್ಲ. ಆದುದರಿಂದ ನನ್ನಷ್ಟು ಮತ್ತು ನನಗಿಂತಲೂ ಹೆಚ್ಚಿನ ವೀರನು ಬೇರೆ ಯಾರೂ ಇಲ್ಲ ಎಂದು ತಿಳಿದುಕೊಂಡಿದ್ದೆ.”

05103030a ತತಶ್ಚಕ್ರೇ ಸ ಭಗವಾನ್ಪ್ರಸಾದಂ ವೈ ಗರುತ್ಮತಃ|

05103030c ಮೈವಂ ಭೂಯ ಇತಿ ಸ್ನೇಹಾತ್ತದಾ ಚೈನಮುವಾಚ ಹ||

ಆಗ ಆ ಭಗವಾನನು ಗುರುತ್ಮತನ ಮೇಲೆ ಕರುಣೆತೋರಿದನು. ಮತ್ತು ಸ್ನೇಹದಿಂದ “ಮತ್ತೆ ಈ ರೀತಿ ಮಾಡಬೇಡ!” ಎಂದನು.

05103031a ತಥಾ ತ್ವಮಪಿ ಗಾಂಧಾರೇ ಯಾವತ್ಪಾಂಡುಸುತಾನ್ರಣೇ|

05103031c ನಾಸಾದಯಸಿ ತಾನ್ವೀರಾಂಸ್ತಾವಜ್ಜೀವಸಿ ಪುತ್ರಕ||

ಗಾಂಧಾರೇ! ಪುತ್ರಕ! ನೀನೂ ಕೂಡ ಎಲ್ಲಿಯವರೆಗೆ ಆ ವೀರ ಪಾಂಡುಸುತರನ್ನು ರಣದಲ್ಲಿ ಎದುರಿಸುವುದಿಲ್ಲವೋ ಅಲ್ಲಿಯವರೆಗೆ ಜೀವಿಸಿರುತ್ತೀಯೆ.

05103032a ಭೀಮಃ ಪ್ರಹರತಾಂ ಶ್ರೇಷ್ಠೋ ವಾಯುಪುತ್ರೋ ಮಹಾಬಲಃ|

05103032c ಧನಂಜಯಶ್ಚೇಂದ್ರಸುತೋ ನ ಹನ್ಯಾತಾಂ ತು ಕಂ ರಣೇ||

ಪ್ರಹರಿಗಳಲ್ಲಿ ಶ್ರೇಷ್ಠ ವಾಯುಪುತ್ರ ಮಹಾಬಲಿ ಭೀಮ ಮತ್ತು ಇಂದ್ರಸುತ ಧನಂಜಯರು ರಣದಲ್ಲಿ ಯಾರನ್ನು ತಾನೇ ಸಂಹರಿಸಲಾರರು?

05103033a ವಿಷ್ಣುರ್ವಾಯುಶ್ಚ ಶಕ್ರಶ್ಚ ಧರ್ಮಸ್ತೌ ಚಾಶ್ವಿನಾವುಭೌ|

05103033c ಏತೇ ದೇವಾಸ್ತ್ವಯಾ ಕೇನ ಹೇತುನಾ ಶಕ್ಯಮೀಕ್ಷಿತುಂ||

ದೇವತೆಗಳಾದ ವಿಷ್ಣು, ವಾಯು, ಶಕ್ರ, ಧರ್ಮ, ಅಶ್ವಿಯರನ್ನು ನೀನು ಯಾವ ಕಾರಣದಿಂದ ಗೆಲ್ಲಲು ಬಯಸುತ್ತೀಯೆ?

05103034a ತದಲಂ ತೇ ವಿರೋಧೇನ ಶಮಂ ಗಚ್ಚ ನೃಪಾತ್ಮಜ|

05103034c ವಾಸುದೇವೇನ ತೀರ್ಥೇನ ಕುಲಂ ರಕ್ಷಿತುಮರ್ಹಸಿ||

ನೃಪಾತ್ಮಜ! ಆದುದರಿಂದ ವಿರೋಧಿಸುವುದನ್ನು ಬಿಟ್ಟು ಶಾಂತಿಯತ್ತ ನಡೆ. ವಾಸುದೇವನ ತೀರ್ಥದಿಂದ ಕುಲವನ್ನು ರಕ್ಷಿಸಿಕೋ!

05103035a ಪ್ರತ್ಯಕ್ಷೋ ಹ್ಯಸ್ಯ ಸರ್ವಸ್ಯ ನಾರದೋಽಯಂ ಮಹಾತಪಾಃ|

05103035c ಮಾಹಾತ್ಮ್ಯಂ ಯತ್ತದಾ ವಿಷ್ಣೋರ್ಯೋಽಯಂ ಚಕ್ರಗದಾಧರಃ||

ಈ ಮಹಾತಪಸ್ವಿ ನಾರದನು ಚಕ್ರಗದಾಧರ ಈ ವಿಷ್ಣುವಿನ ಮಹಾತ್ಮೆಗಳೆಲ್ಲವನ್ನೂ ಪ್ರತ್ಯಕ್ಷವಾಗಿ ನೋಡಿದ್ದಾನೆ.””

05103036 ವೈಶಂಪಾಯನ ಉವಾಚ|

05103036a ದುರ್ಯೋಧನಸ್ತು ತಚ್ಚ್ರುತ್ವಾ ನಿಃಶ್ವಸನ್ಭೃಕುಟೀಮುಖಃ|

05103036c ರಾಧೇಯಮಭಿಸಂಪ್ರೇಕ್ಷ್ಯ ಜಹಾಸ ಸ್ವನವತ್ತದಾ||

ವೈಶಂಪಾಯನನು ಹೇಳಿದನು: “ಅದನ್ನು ಕೇಳಿ ದುರ್ಯೋಧನನು ನಿಟ್ಟುಸಿರು ಬಿಡುತ್ತ, ಮುಖ ಗಂಟುಮಾಡಿಕೊಂಡು, ರಾಧೇಯನನ್ನು ನೋಡಿ ಜೋರಾಗಿ ನಕ್ಕನು.

05103037a ಕದರ್ಥೀಕೃತ್ಯ ತದ್ವಾಕ್ಯಮೃಷೇಃ ಕಣ್ವಸ್ಯ ದುರ್ಮತಿಃ|

05103037c ಊರುಂ ಗಜಕರಾಕಾರಂ ತಾಡಯನ್ನಿದಮಬ್ರವೀತ್||

ಋಷಿ ಕಣ್ವನ ಆ ಮಾತುಗಳನ್ನು ಅಲ್ಲಗಳೆದು ದುರ್ಮತಿಯು ಆನೆಯ ಸೊಂಡಿಲಿನಂತಿದ್ದ ತನ್ನ ತೊಡೆಯನ್ನು ಚಪ್ಪರಿಸಿ ಹೇಳಿದನು:

05103038a ಯಥೈವೇಶ್ವರಸೃಷ್ಟೋಽಸ್ಮಿ ಯದ್ಭಾವಿ ಯಾ ಚ ಮೇ ಗತಿಃ|

05103038c ತಥಾ ಮಹರ್ಷೇ ವರ್ತಾಮಿ ಕಿಂ ಪ್ರಲಾಪಃ ಕರಿಷ್ಯತಿ||

“ಮಹರ್ಷೇ! ಈಶ್ವರನಿಂದ ಹೇಗೆ ಸೃಷ್ಟಿಸಲ್ಪಟ್ಟಿದ್ದೇನೋ, ನನ್ನ ಭವಿಷ್ಯ ಮತ್ತು ದಾರಿಯು ಹೇಗೆ ನಡೆಸುತ್ತದೆಯೋ ಹಾಗೆಯೇ ನಾನು ಮಾಡುತ್ತೇನೆ. ಈ ಪ್ರಲಾಪವು ಏಕೆ?””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ತ್ರ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರಾಮೂರನೆಯ ಅಧ್ಯಾಯವು.

Related image

Comments are closed.