ಉದ್ಯೋಗ ಪರ್ವ: ಭಗವದ್ಯಾನ ಪರ್ವ
೧೦೨
ನಾರದನು ಸುಮುಖನ ಅಜ್ಜ ಆರ್ಯಕನಿಗೆ ಮಾತಲಿಯ ಪರಿಚಯ ಮಾಡಿಕೊಟ್ಟು, ಗುಣಕೇಶಿಯನ್ನು ಸುಮುಖನ ಪತ್ನಿಯನ್ನಾಗಿ ಸ್ವೀಕರಿಸಬೇಕೆಂದು ಕೇಳಿದುದು (೧-೧೧). ಆಗ ಆರ್ಯಕನು ಇನ್ನೊಂದು ತಿಂಗಳಿನಲ್ಲಿ ಗರುಡನು ಸುಮುಖನನ್ನು ಭಕ್ಷಿಸುವವನಿದ್ದಾನೆಂದು ತಿಳಿಸಿದುದು (೧೨-೧೬). ಅನಂತರ ಮಾತಲಿ-ನಾರದರು ಸುಮುಖನನ್ನು ಕರೆದುಕೊಂಡು ಇಂದ್ರನಲ್ಲಿಗೆ ಬಂದು ವಿಷಯವೆಲ್ಲವನ್ನೂ ತಿಳಿಸಲು ಅಲ್ಲಿದ್ದ ವಿಷ್ಣುವು ಸುಮುಖನಿಗೆ ಅಮೃತವನ್ನು ಕೊಡೆಂದು ಸೂಚಿಸಿದುದು ಮತ್ತು ಇಂದ್ರನು ಅವನಿಗೆ ದೀರ್ಘ ಆಯುಸ್ಸನ್ನು ನೀಡಿದುದು (೧೭-೨೯).
05102001 ನಾರದ ಉವಾಚ|
05102001a ಸೂತೋಽಯಂ ಮಾತಲಿರ್ನಾಮ ಶಕ್ರಸ್ಯ ದಯಿತಃ ಸುಹೃತ್|
05102001c ಶುಚಿಃ ಶೀಲಗುಣೋಪೇತಸ್ತೇಜಸ್ವೀ ವೀರ್ಯವಾನ್ಬಲೀ||
ನಾರದನು ಹೇಳಿದನು: “ಇವನು ಮಾತಲಿಯೆಂಬ ಹೆಸರಿನ ಶಕ್ರನ ಸೂತ ಮತ್ತು ಅವನ ಪ್ರೀತಿಯ ಸ್ನೇಹಿತ. ಇವನು ಶುಚಿ, ಶೀಲಗುಣೋಪೇತ, ತೇಜಸ್ವೀ, ವೀರ್ಯವಂತ ಮತ್ತು ಬಲಶಾಲಿಯೂ ಕೂಡ.
05102002a ಶಕ್ರಸ್ಯಾಯಂ ಸಖಾ ಚೈವ ಮಂತ್ರೀ ಸಾರಥಿರೇವ ಚ|
05102002c ಅಲ್ಪಾಂತರಪ್ರಭಾವಶ್ಚ ವಾಸವೇನ ರಣೇ ರಣೇ||
ಇವನು ಶಕ್ರನ ಸಖ, ಮಂತ್ರಿ ಮತ್ತು ಸಾರಥಿಯೂ ಕೂಡ. ರಣ ರಣಗಳಲ್ಲಿಯೂ ಪ್ರಭಾವದಲ್ಲಿ ಇವನ ಮತ್ತು ವಾಸವನ ನಡುವೆ ಸ್ವಲ್ಪವೇ ವ್ಯತ್ಯಾಸವಿರುವುದು ಕಾಣಿಸುತ್ತದೆ.
05102003a ಅಯಂ ಹರಿಸಹಸ್ರೇಣ ಯುಕ್ತಂ ಜೈತ್ರಂ ರಥೋತ್ತಮಂ|
05102003c ದೇವಾಸುರೇಷು ಯುದ್ಧೇಷು ಮನಸೈವ ನಿಯಚ್ಚತಿ||
ದೇವಾಸುರರ ಯುದ್ಧಗಳಲ್ಲಿ ಇವನೇ ಸಹಸ್ರ ಕುದುರೆಗಳನ್ನು ಕಟ್ಟಿದ ಉತ್ತಮ ಚೈತ್ರ ರಥವನ್ನು ಮನಸ್ಸಿನಲ್ಲಿಯೇ ನಡೆಸಿದ್ದಾನೆ.
05102004a ಅನೇನ ವಿಜಿತಾನಶ್ವೈರ್ದೋರ್ಭ್ಯಾಂ ಜಯತಿ ವಾಸವಃ|
05102004c ಅನೇನ ಪ್ರಹೃತೇ ಪೂರ್ವಂ ಬಲಭಿತ್ಪ್ರಹರತ್ಯುತ||
ಇವನು ಅಶ್ವಗಳ ಮೇಲೆ ವಿಜಯವನ್ನು ಸಾಧಿಸಿದುದರಿಂದ ವಾಸವನು ಅರಿಗಳನ್ನು ಜಯಿಸಿದನು. ಮೊದಲೇ ಇವನು ಹೊಡೆದವರ ಮೇಲೆ ಬಲಭಿತನು ಹೊಡೆದನು.
05102005a ಅಸ್ಯ ಕನ್ಯಾ ವರಾರೋಹಾ ರೂಪೇಣಾಸದೃಶೀ ಭುವಿ|
05102005c ಸತ್ತ್ವಶೀಲಗುಣೋಪೇತಾ ಗುಣಕೇಶೀತಿ ವಿಶ್ರುತಾ||
ಇವನ ಕನ್ಯೆ, ವರಾರೋಹೆಯು ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳಾಗಿದ್ದಾಳೆ. ಸತ್ವಶೀಲಗುಣೋಪೇತಳಾದ ಅವಳು ಗುಣಕೇಶೀ ಎಂದು ವಿಶ್ರುತಳಾಗಿದ್ದಾಳೆ.
05102006a ತಸ್ಯಾಸ್ಯ ಯತ್ನಾಚ್ಚರತಸ್ತ್ರೈಲೋಕ್ಯಮಮರದ್ಯುತೇ|
05102006c ಸುಮುಖೋ ಭವತಃ ಪೌತ್ರೋ ರೋಚತೇ ದುಹಿತುಃ ಪತಿಃ||
ಈ ಅಮರದ್ಯುತಿಯು ಅವಳಿಗೆ ವರನನ್ನು ಹುಡುಕಿಕೊಂಡು ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿದ್ದಾನೆ. ನಿನ್ನ ಮೊಮ್ಮಗ ಸುಮುಖನು ತನ್ನ ಮಗಳಿಗೆ ಪತಿಯಾಗಬೇಕೆಂದು ಬಯಸಿದ್ದಾನೆ.
05102007a ಯದಿ ತೇ ರೋಚತೇ ಸೌಮ್ಯ ಭುಜಗೋತ್ತಮ ಮಾಚಿರಂ|
05102007c ಕ್ರಿಯತಾಮಾರ್ಯಕ ಕ್ಷಿಪ್ರಂ ಬುದ್ಧಿಃ ಕನ್ಯಾಪ್ರತಿಗ್ರಹೇ||
ಆರ್ಯಕ! ಭುಜಗೋತ್ತಮ! ಸೌಮ್ಯ! ಒಂದುವೇಳೆ ನಿನಗೂ ಇದು ಇಷ್ಟವಾದರೆ, ಬೇಗನೇ ಕನ್ಯೆಯನ್ನು ಸ್ವೀಕರಿಸುವ ಮನಸ್ಸು ಮಾಡಬೇಕು.
05102008a ಯಥಾ ವಿಷ್ಣುಕುಲೇ ಲಕ್ಷ್ಮೀರ್ಯಥಾ ಸ್ವಾಹಾ ವಿಭಾವಸೋಃ|
05102008c ಕುಲೇ ತವ ತಥೈವಾಸ್ತು ಗುಣಕೇಶೀ ಸುಮಧ್ಯಮಾ||
ವಿಷ್ಣುವಿನ ಕುಲದಲ್ಲಿ ಲಕ್ಷ್ಮಿಯು ಹೇಗೋ, ವಿಭಾವಸುವಿನಲ್ಲಿ ಸ್ವಾಹಾಳು ಹೇಗೋ ಹಾಗೆ ಸುಮಧ್ಯಮೆ ಗುಣಕೇಶಿಯು ನಿನ್ನ ಕುಲದಲ್ಲಿ ಇರುವಂತಾಗಲಿ.
05102009a ಪೌತ್ರಸ್ಯಾರ್ಥೇ ಭವಾಂಸ್ತಸ್ಮಾದ್ಗುಣಕೇಶೀಂ ಪ್ರತೀಚ್ಚತು|
05102009c ಸದೃಶೀಂ ಪ್ರತಿರೂಪಸ್ಯ ವಾಸವಸ್ಯ ಶಚೀಮಿವ||
ಆದುದರಿಂದ ನೀನು ಮೊಮ್ಮಗನಿಗಾಗಿ ವಾಸವನಿಗೆ ಶಚಿಯಂತೆ ಸದೃಶಳೂ, ಪ್ರತಿರೂಪಳೂ ಆಗಿರುವ ಗುಣಕೇಶಿಯನ್ನು ಸ್ವೀಕರಿಸಬೇಕು.
05102010a ಪಿತೃಹೀನಮಪಿ ಹ್ಯೇನಂ ಗುಣತೋ ವರಯಾಮಹೇ|
05102010c ಬಹುಮಾನಾಚ್ಚ ಭವತಸ್ತಥೈವೈರಾವತಸ್ಯ ಚ|
05102010e ಸುಮುಖಸ್ಯ ಗುಣೈಶ್ಚೈವ ಶೀಲಶೌಚದಮಾದಿಭಿಃ||
ನಿನ್ನ ಮತ್ತು ಐರಾವತನ ಬಹಳ ಮಾನವನ್ನು ಅರಿತು, ತಂದೆಯನ್ನು ಕಳೆದುಕೊಂಡಿದ್ದರೂ, ಸುಮುಖನ ಗುಣ, ಶೀಲ, ಶೌಚಗಳನ್ನು ತಿಳಿದು ಗುಣವಂತನಾದ ಇವನನ್ನು ವರನನ್ನಾಗಿ ಆರಿಸಿಕೊಂಡಿದ್ದೇವೆ.
05102011a ಅಭಿಗಮ್ಯ ಸ್ವಯಂ ಕನ್ಯಾಮಯಂ ದಾತುಂ ಸಮುದ್ಯತಃ|
05102011c ಮಾತಲೇಸ್ತಸ್ಯ ಸಮ್ಮಾನಂ ಕರ್ತುಮರ್ಹೋ ಭವಾನಪಿ||
ಇವನು ಸ್ವಯಂ ಬಂದು ಕನ್ಯೆಯನ್ನು ಕೊಡಲು ಸಿದ್ಧನಿದ್ದಾನೆ. ನೀನೂ ಕೂಡ ಈ ಮಾತಲಿಯ ಸಮ್ಮಾನವನ್ನು ಮಾಡಬೇಕು.””
05102012 ಕಣ್ವ ಉವಾಚ|
05102012a ಸ ತು ದೀನಃ ಪ್ರಹೃಷ್ಟಶ್ಚ ಪ್ರಾಹ ನಾರದಮಾರ್ಯಕಃ|
05102012c ವ್ರಿಯಮಾಣೇ ತಥಾ ಪೌತ್ರೇ ಪುತ್ರೇ ಚ ನಿಧನಂ ಗತೇ||
ಕಣ್ವನು ಹೇಳಿದನು: “ನಾರದನು ಹೀಗೆ ಹೇಳಲು ಆರ್ಯಕನು ಮಗನ ಮರಣವನ್ನು ನೆನೆದು ದುಃಖಿತನೂ ಮತ್ತು ಮೊಮ್ಮಗನನ್ನು ಕೇಳುತ್ತಿದ್ದಾರೆಂದು ಹರ್ಷಿತನೂ ಆಗಿ ಹೇಳಿದನು.
05102013a ನ ಮೇ ನೈತದ್ಬಹುಮತಂ ದೇವರ್ಷೇ ವಚನಂ ತವ|
05102013c ಸಖಾ ಶಕ್ರಸ್ಯ ಸಂಯುಕ್ತಃ ಕಸ್ಯಾಯಂ ನೇಪ್ಸಿತೋ ಭವೇತ್||
“ದೇವರ್ಷೇ! ನಿನ್ನ ಮಾತಿಗೆ ಬಹುಮತವಿಲ್ಲದೇ ಇಲ್ಲ. ಯಾರು ತಾನೇ ಶಕ್ರನ ಈ ಸಖನೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುವುದಿಲ್ಲ?
05102014a ಕಾರಣಸ್ಯ ತು ದೌರ್ಬಲ್ಯಾಚ್ಚಿಂತಯಾಮಿ ಮಹಾಮುನೇ|
05102014c ಅಸ್ಯ ದೇಹಕರಸ್ತಾತ ಮಮ ಪುತ್ರೋ ಮಹಾದ್ಯುತೇ|
05102014e ಭಕ್ಷಿತೋ ವೈನತೇಯೇನ ದುಃಖಾರ್ತಾಸ್ತೇನ ವೈ ವಯಂ||
ಮಹಾಮುನೇ! ಆದರೆ ನಮ್ಮ ದೌರ್ಬಲ್ಯದ ಕಾರಣದ ಕುರಿತು ಚಿಂತಿಸುತ್ತಿದ್ದೇನೆ. ಅಯ್ಯಾ! ಇವನ ತಂದೆ, ನನ್ನ ಮಗ ಮಹಾದ್ಯುತಿಯನ್ನು ವೈನತೇಯನು ಭಕ್ಷಿಸಿದನು. ಅದರಿಂದಲೇ ನಾವು ದುಃಖಾರ್ತರಾಗಿದ್ದೇವೆ.
05102015a ಪುನರೇವ ಚ ತೇನೋಕ್ತಂ ವೈನತೇಯೇನ ಗಚ್ಚತಾ|
05102015c ಮಾಸೇನಾನ್ಯೇನ ಸುಮುಖಂ ಭಕ್ಷಯಿಷ್ಯ ಇತಿ ಪ್ರಭೋ||
ಪ್ರಭೋ! ಹೋಗುವಾಗ ವೈನತೇಯನು ಪುನಃ ಹೇಳಿದ್ದಾನೆ - ಇನ್ನೊಂದು ತಿಂಗಳಲ್ಲಿ ಸುಮುಖನನ್ನು ಭಕ್ಷಿಸುತ್ತೇನೆ - ಎಂದು.
05102016a ಧ್ರುವಂ ತಥಾ ತದ್ಭವಿತಾ ಜಾನೀಮಸ್ತಸ್ಯ ನಿಶ್ಚಯಂ|
05102016c ತೇನ ಹರ್ಷಃ ಪ್ರನಷ್ಟೋ ಮೇ ಸುಪರ್ಣವಚನೇನ ವೈ||
ಅದರಂತೆಯೇ ನಿಶ್ಚಯವಾಗಿಯೂ ಆಗುತ್ತದೆ ಎಂದು ನಮಗೆ ತಿಳಿದಿದೆ. ಸುಪರ್ಣನ ಈ ಮಾತಿನಿಂದ ನಮ್ಮ ಸಂತೋಷವೆಲ್ಲವೂ ನಷ್ಟವಾಗಿದೆ.”
05102017a ಮಾತಲಿಸ್ತ್ವಬ್ರವೀದೇನಂ ಬುದ್ಧಿರತ್ರ ಕೃತಾ ಮಯಾ|
05102017c ಜಾಮಾತೃಭಾವೇನ ವೃತಃ ಸುಮುಖಸ್ತವ ಪುತ್ರಜಃ||
ಆಗ ಮಾತಲಿಯು ಇದನ್ನು ಹೇಳಿದನು: “ನಾನೊಂದು ಯೋಚನೆಯನ್ನು ಮಾಡಿದ್ದೇನೆ. ನಿನ್ನ ಮೊಮ್ಮಗ ಸುಮುಖನನ್ನು ನನ್ನ ಅಳಿಯನೆಂದು ಆರಿಸಿಕೊಂಡಿದ್ದೇನೆ.
05102018a ಸೋಽಯಂ ಮಯಾ ಚ ಸಹಿತೋ ನಾರದೇನ ಚ ಪನ್ನಗಃ|
05102018c ತ್ರಿಲೋಕೇಶಂ ಸುರಪತಿಂ ಗತ್ವಾ ಪಶ್ಯತು ವಾಸವಂ||
ಈ ಪನ್ನಗನು ನನ್ನ ಮತ್ತು ನಾರದನೊಡನೆ ಬರಲಿ. ಹೋಗಿ ತ್ರಿಲೋಕೇಶ ಸುರಪತಿ ವಾಸವನನ್ನು ಕಾಣೋಣ.
05102019a ಶೇಷೇಣೈವಾಸ್ಯ ಕಾರ್ಯೇಣ ಪ್ರಜ್ಞಾಸ್ಯಾಮ್ಯಹಮಾಯುಷಃ|
05102019c ಸುಪರ್ಣಸ್ಯ ವಿಘಾತೇ ಚ ಪ್ರಯತಿಷ್ಯಾಮಿ ಸತ್ತಮ||
ಸತ್ತಮ! ಸುಪರ್ಣನ ಕಾರ್ಯದಲ್ಲಿ ವಿಘ್ನವನ್ನು ತರಲು ಪ್ರಯತ್ನಿಸುತ್ತೇನೆ. ಇವನಿಗೆ ಸಾಕಷ್ಟು ಆಯುಷ್ಯವು ಉಳಿಯುವಂತೆಯೂ ಮಾಡೋಣ.
05102020a ಸುಮುಖಶ್ಚ ಮಯಾ ಸಾರ್ಧಂ ದೇವೇಶಮಭಿಗಚ್ಚತು|
05102020c ಕಾರ್ಯಸಂಸಾಧನಾರ್ಥಾಯ ಸ್ವಸ್ತಿ ತೇಽಸ್ತು ಭುಜಂಗಮ||
ಕಾರ್ಯ ಸಿದ್ಧಿಗಾಗಿ ನನ್ನೊಡನೆ ಸುಮುಖನೂ ಕೂಡ ದೇವೇಶನಲ್ಲಿಗೆ ಬರಬೇಕು. ಭುಜಂಗಮ! ನಿನಗೆ ಮಂಗಳವಾಗಲಿ!”
05102021a ತತಸ್ತೇ ಸುಮುಖಂ ಗೃಹ್ಯ ಸರ್ವ ಏವ ಮಹೌಜಸಃ|
05102021c ದದೃಶುಃ ಶಕ್ರಮಾಸೀನಂ ದೇವರಾಜಂ ಮಹಾದ್ಯುತಿಂ||
ಆಗ ಆ ಮಹೌಜಸ ಸುಮುಖನನ್ನು ಕರೆದುಕೊಂಡು ಎಲ್ಲರೂ ಆಸೀನನಾಗಿದ್ದ ದೇವರಾಜ, ಮಹಾದ್ಯುತಿ ಶಕ್ರನನ್ನು ಕಂಡರು.
05102022a ಸಂಗತ್ಯಾ ತತ್ರ ಭಗವಾನ್ವಿಷ್ಣುರಾಸೀಚ್ಚತುರ್ಭುಜಃ|
05102022c ತತಸ್ತತ್ಸರ್ವಮಾಚಖ್ಯೌ ನಾರದೋ ಮಾತಲಿಂ ಪ್ರತಿ||
ಅಲ್ಲಿ ಅವನೊಡನೆ ಚತುರ್ಭುಜ ಭಗವಾನ್ ವಿಷ್ಣುವೂ ಇದ್ದನು. ಅವರಿಗೆ ಮಾತಲಿ ನಾರದರಿಬ್ಬರೂ ಎಲ್ಲವನ್ನೂ ಹೇಳಿದರು.
05102023a ತತಃ ಪುರಂದರಂ ವಿಷ್ಣುರುವಾಚ ಭುವನೇಶ್ವರಂ|
05102023c ಅಮೃತಂ ದೀಯತಾಮಸ್ಮೈ ಕ್ರಿಯತಾಮಮರೈಃ ಸಮಃ||
ಆಗ ವಿಷ್ಣುವು ಭುವನೇಶ್ವರ ಪುರಂದರನಿಗೆ ಹೇಳಿದನು: “ಇವನಿಗೆ ಅಮೃತವನ್ನಿತ್ತು ಅಮರರ ಸಮನನ್ನಾಗಿ ಮಾಡು.
05102024a ಮಾತಲಿರ್ನಾರದಶ್ಚೈವ ಸುಮುಖಶ್ಚೈವ ವಾಸವ|
05102024c ಲಭಂತಾಂ ಭವತಃ ಕಾಮಾತ್ಕಾಮಮೇತಂ ಯಥೇಪ್ಸಿತಂ||
ವಾಸವ! ಇದರಿಂದ ಮಾತಲಿ, ನಾರದ, ಸುಮುಖರಿಗೆ ಬೇಕಾದುದನ್ನು ನಿನ್ನ ಕೃಪೆಯಿಂದ ಪಡೆಯುವಂತಾಗುತ್ತದೆ.’
05102025a ಪುರಂದರೋಽಥ ಸಂಚಿಂತ್ಯ ವೈನತೇಯಪರಾಕ್ರಮಂ|
05102025c ವಿಷ್ಣುಮೇವಾಬ್ರವೀದೇನಂ ಭವಾನೇವ ದದಾತ್ವಿತಿ||
ವೈನತೇಯನ ಪರಾಕ್ರಮದ ಕುರಿತು ಯೋಚಿಸಿ ಪುರಂದರನು ವಿಷ್ಣುವಿಗೆ “ಅದನ್ನು ನೀನೇ ಕೊಡು!” ಎಂದನು.
05102026 ವಿಷ್ಣುರುವಾಚ|
05102026a ಈಶಸ್ತ್ವಮಸಿ ಲೋಕಾನಾಂ ಚರಾಣಾಮಚರಾಶ್ಚ ಯೇ|
05102026c ತ್ವಯಾ ದತ್ತಮದತ್ತಂ ಕಃ ಕರ್ತುಮುತ್ಸಹತೇ ವಿಭೋ||
ವಿಷ್ಣುವು ಹೇಳಿದನು: “ವಿಭೋ! ಚರಾಚರ ಲೋಕಗಳ ಈಶನು ನೀನು! ನೀನು ಕೊಡುವುದನ್ನು ಕೊಡಬಾರದಂತೆ ಮಾಡಲು ಯಾರು ತಾನೇ ಮುಂದೆಬಂದಾರು?””
05102027 ಕಣ್ವ ಉವಾಚ|
05102027a ಪ್ರಾದಾಚ್ಚಕ್ರಸ್ತತಸ್ತಸ್ಮೈ ಪನ್ನಗಾಯಾಯುರುತ್ತಮಂ|
05102027c ನ ತ್ವೇನಮಮೃತಪ್ರಾಶಂ ಚಕಾರ ಬಲವೃತ್ರಹಾ||
ಕಣ್ವನು ಹೇಳಿದನು: “ಬಲವೃತ್ರಹನು ಆ ಪನ್ನಗನಿಗೆ ಉತ್ತಮ ಆಯುಸ್ಸನ್ನು ಅನುಗ್ರಹಿಸಿದನು. ಅವನಿಗೆ ಅಮೃತಪ್ರಾಶನವನ್ನು ಮಾಡಿಸಲಿಲ್ಲ.
05102028a ಲಬ್ಧ್ವಾ ವರಂ ತು ಸುಮುಖಃ ಸುಮುಖಃ ಸಂಬಭೂವ ಹ|
05102028c ಕೃತದಾರೋ ಯಥಾಕಾಮಂ ಜಗಾಮ ಚ ಗೃಹಾನ್ಪ್ರತಿ||
ಸುಮುಖನಾದರೋ ಆ ವರವನ್ನು ಪಡೆದು ಸುಮುಖನಾದನು. ಮದುವೆಮಾಡಿಕೊಂಡು, ಸಂತೋಷದಿಂದ ಮನೆಗೆ ತೆರಳಿದನು.
05102029a ನಾರದಸ್ತ್ವಾರ್ಯಕಶ್ಚೈವ ಕೃತಕಾರ್ಯೌ ಮುದಾ ಯುತೌ|
05102029c ಪ್ರತಿಜಗ್ಮತುರಭ್ಯರ್ಚ್ಯ ದೇವರಾಜಂ ಮಹಾದ್ಯುತಿಂ||
ನಾರದ-ಆರ್ಯಕರೂ ಕೂಡ ಕಾರ್ಯಗಳನ್ನು ಪೂರೈಸಿ ಸಂತೋಷಗೊಂಡು ಮಹಾದ್ಯುತಿ ದೇವರಾಜನನ್ನು ಅರ್ಚಿಸಿ ಹಿಂದಿರುಗಿದರು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ದ್ವ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರಾಎರಡನೆಯ ಅಧ್ಯಾಯವು.