ಅನುಶಾಸನ ಪರ್ವ: ದಾನಧರ್ಮ ಪರ್ವ
೪೨
ಗುರುವಿನ ಆಜ್ಞೆಯಂತೆ ವಿಪುಲನು ದಿವ್ಯ ಪುಷ್ಪಗಳನ್ನು ತರಲು ಹೋದುದು (೧-೧೬). ಪುಷ್ಪಗಳನ್ನು ತೆಗೆದುಕೊಂಡು ಹಿಂದಿರುಗುವಾಗ ಮಾರ್ಗದಲ್ಲಿ ತನ್ನ ದುಷ್ಕೃತದ ಸ್ಮರಣೆಮಾಡಿಕೊಂಡಿದುದು (೧೭-೩೩).
13042001 ಭೀಷ್ಮ ಉವಾಚ|
13042001a ವಿಪುಲಸ್ತ್ವಕರೋತ್ತೀವ್ರಂ ತಪಃ ಕೃತ್ವಾ ಗುರೋರ್ವಚಃ|
13042001c ತಪೋಯುಕ್ತಮಥಾತ್ಮಾನಮಮನ್ಯತ ಚ ವೀರ್ಯವಾನ್||
ಭೀಷ್ಮನು ಹೇಳಿದನು: “ಗುರುವಿನ ವಚನದಂತೆ ಮಾಡಿ ವಿಪುಲನು ತೀವ್ರ ತಪಸ್ಸನ್ನು ಮಾಡಿದನು. ತಪೋಯುಕ್ತನಾಗಿ ತನ್ನನ್ನು ತಾನೇ ವೀರ್ಯವಾನನೆಂದು ಅಂದುಕೊಂಡನು.
13042002a ಸ ತೇನ ಕರ್ಮಣಾ ಸ್ಪರ್ಧನ್ಪೃಥಿವೀಂ ಪೃಥಿವೀಪತೇ|
13042002c ಚಚಾರ ಗತಭೀಃ ಪ್ರೀತೋ ಲಬ್ಧಕೀರ್ತಿರ್ವರೋ ನೃಷು||
ಪೃಥಿವೀಪತೇ! ಕೀರ್ತಿ ಮತ್ತು ವರಗಳನ್ನು ಪಡೆದು ಪ್ರೀತನಾದ ಅವನು ಭೀತಿಯನ್ನು ತೊರೆದು ತನ್ನ ಕರ್ಮಗಳಿಂದ ಇತರ ನರರೊಡನೆ ಸ್ಪರ್ಧಿಸುತ್ತಾ ಭೂಮಿಯಲ್ಲಿ ಸಂಚರಿಸತೊಡಗಿದನು.
13042003a ಉಭೌ ಲೋಕೌ ಜಿತೌ ಚಾಪಿ ತಥೈವಾಮನ್ಯತ ಪ್ರಭುಃ|
13042003c ಕರ್ಮಣಾ ತೇನ ಕೌರವ್ಯ ತಪಸಾ ವಿಪುಲೇನ ಚ||
ಕೌರವ್ಯ! ವಿಪುಲ ತಪಸ್ಸಿನಿಂದ ಮತ್ತು ತನ್ನ ಕರ್ಮಗಳಿಂದ ಎರಡೂ ಲೋಕಗಳನ್ನೂ ಜಯಿಸಿದ್ದೇನೆಂದು ಆ ಪ್ರಭುವು ಅಂದುಕೊಂಡನು.
13042004a ಅಥ ಕಾಲೇ ವ್ಯತಿಕ್ರಾಂತೇ ಕಸ್ಮಿಂಶ್ಚಿತ್ಕುರುನಂದನ|
13042004c ರುಚ್ಯಾ ಭಗಿನ್ಯಾ ದಾನಂ ವೈ ಬಭೂವ ಧನಧಾನ್ಯವತ್||
ಕುರುನಂದನ! ಸ್ವಲ್ಪ ಕಾಲವು ಕಳೆಯಲು ಧನ-ಧಾನ್ಯವತ್ತಾದ ರುಚಿಯ ಅಕ್ಕನ ಕನ್ಯಾದಾನವು ನಡೆಯಿತು.
13042005a ಏತಸ್ಮಿನ್ನೇವ ಕಾಲೇ ತು ದಿವ್ಯಾ ಕಾ ಚಿದ್ವರಾಂಗನಾ|
13042005c ಬಿಭ್ರತೀ ಪರಮಂ ರೂಪಂ ಜಗಾಮಾಥ ವಿಹಾಯಸಾ||
ಅದೇ ಸಮಯದಲ್ಲಿ ಓರ್ವ ದಿವ್ಯ ವರಾಂಗನೆಯು ಪರಮರೂಪದಿಂದ ಬೆಳಗುತ್ತಾ ಆಕಾಶಮಾರ್ಗದಲ್ಲಿ ಹೋಗುತ್ತಿದ್ದಳು.
13042006a ತಸ್ಯಾಃ ಶರೀರಾತ್ಪುಷ್ಪಾಣಿ ಪತಿತಾನಿ ಮಹೀತಲೇ|
13042006c ತಸ್ಯಾಶ್ರಮಸ್ಯಾವಿದೂರೇ ದಿವ್ಯಗಂಧಾನಿ ಭಾರತ||
ಭಾರತ! ಅವಳ ಶರೀರದಿಂದ ದಿವ್ಯಗಂಧಯುಕ್ತ ಪುಷ್ಪಗಳು ಭೂಮಿಯ ಮೇಲೆ ದೇವಶರ್ಮನ ಆಶ್ರಮದ ಬಳಿಯಲ್ಲಿಯೇ ಬಿದ್ದವು.
13042007a ತಾನ್ಯಗೃಹ್ಣಾತ್ತತೋ ರಾಜನ್ರುಚಿರ್ನಲಿನಲೋಚನಾ|
13042007c ತದಾ ನಿಮಂತ್ರಕಸ್ತಸ್ಯಾ ಅಂಗೇಭ್ಯಃ ಕ್ಷಿಪ್ರಮಾಗಮತ್||
ರಾಜನ್! ನಲಿನಲೋಚನೆ ರುಚಿಯು ಆ ಪುಷ್ಪಗಳನ್ನು ತೆಗೆದುಕೊಳ್ಳುತ್ತಿರುವಾಗಲೇ ಅವಳಿಗೆ ಅಂಗದೇಶದಿಂದ ಕ್ಷಿಪ್ರವಾದ ನಿಮಂತ್ರಣವು ಆಗಮಿಸಿತು.
13042008a ತಸ್ಯಾ ಹಿ ಭಗಿನೀ ತಾತ ಜ್ಯೇಷ್ಠಾ ನಾಮ್ನಾ ಪ್ರಭಾವತೀ|
13042008c ಭಾರ್ಯಾ ಚಿತ್ರರಥಸ್ಯಾಥ ಬಭೂವಾಂಗೇಶ್ವರಸ್ಯ ವೈ||
ಅಯ್ಯಾ! ಪ್ರಭಾವತೀ ಎಂಬ ಹೆಸರಿನ ಅವಳ ಹಿರಿಯ ಅಕ್ಕನು ಅಂಗೇಶ್ವರ ಚಿತ್ರರಥನ ಭಾರ್ಯೆಯಾಗಿದ್ದಾಳೆಂಬ ವಾರ್ತೆಯು ಬಂದಿತು.
13042009a ಪಿನಹ್ಯ ತಾನಿ ಪುಷ್ಪಾಣಿ ಕೇಶೇಷು ವರವರ್ಣಿನೀ|
13042009c ಆಮಂತ್ರಿತಾ ತತೋಽಗಚ್ಚದ್ರುಚಿರಂಗಪತೇರ್ಗೃಹಾನ್||
ಆಮಂತ್ರಿತಳಾಗಿದ್ದ ವರವರ್ಣಿನೀ ರುಚಿಯು ಆ ಪುಷ್ಪಗಳನ್ನು ತಲೆಯಲ್ಲಿ ಮುಡಿದು ಅಂಗಪತಿಯ ಅರಮನೆಗೆ ಹೋದಳು.
13042010a ಪುಷ್ಪಾಣಿ ತಾನಿ ದೃಷ್ಟ್ವಾಥ ತದಾಂಗೇಂದ್ರವರಾಂಗನಾ|
13042010c ಭಗಿನೀಂ ಚೋದಯಾಮಾಸ ಪುಷ್ಪಾರ್ಥೇ ಚಾರುಲೋಚನಾ||
ಆ ಪುಷ್ಪಗಳನ್ನು ನೋಡಿದ ಅಂಗೇಂದ್ರನ ಚಾರುಲೋಚನೆ ವರಾಂಗನೆಯು ಆ ಪುಷ್ಪಗಳನ್ನು ತಂದುಕೊಡೆಂದು ತಂಗಿಯನ್ನು ಪ್ರಚೋದಿಸಿದಳು.
13042011a ಸಾ ಭರ್ತ್ರೇ ಸರ್ವಮಾಚಷ್ಟ ರುಚಿಃ ಸುರುಚಿರಾನನಾ|
13042011c ಭಗಿನ್ಯಾ ಭಾಷಿತಂ ಸರ್ವಮೃಷಿಸ್ತಚ್ಚಾಭ್ಯನಂದತ||
ಸುರುಚಿರಾನನೆ ರುಚಿಯು ಅಕ್ಕನು ಹೇಳಿದ ಎಲ್ಲವನ್ನೂ ತನ್ನ ಪತಿಗೆ ತಿಳಿಸಿದಳು. ಋಷಿಯು ಅದಕ್ಕೆ ಒಪ್ಪಿಕೊಂಡನು.
13042012a ತತೋ ವಿಪುಲಮಾನಾಯ್ಯ ದೇವಶರ್ಮಾ ಮಹಾತಪಾಃ|
13042012c ಪುಷ್ಪಾರ್ಥೇ ಚೋದಯಾಮಾಸ ಗಚ್ಚ ಗಚ್ಚೇತಿ ಭಾರತ||
ಭಾರತ! ಆಗ ಮಹಾತಪಸ್ವೀ ದೇವಶರ್ಮನು ವಿಪುಲನನ್ನು ಕರೆಯಿಸಿ ಪುಷ್ಪಗಳನ್ನು ತರಲು “ಹೋಗು! ಹೋಗು!” ಎಂದು ಪ್ರಚೋದಿಸಿದನು.
13042013a ವಿಪುಲಸ್ತು ಗುರೋರ್ವಾಕ್ಯಮವಿಚಾರ್ಯ ಮಹಾತಪಾಃ|
13042013c ಸ ತಥೇತ್ಯಬ್ರವೀದ್ರಾಜಂಸ್ತಂ ಚ ದೇಶಂ ಜಗಾಮ ಹ||
13042014a ಯಸ್ಮಿನ್ದೇಶೇ ತು ತಾನ್ಯಾಸನ್ಪತಿತಾನಿ ನಭಸ್ತಲಾತ್|
13042014c ಅಮ್ಲಾನಾನ್ಯಪಿ ತತ್ರಾಸನ್ಕುಸುಮಾನ್ಯಪರಾಣ್ಯಪಿ||
ರಾಜನ್! ವಿಪುಲನಾದರೋ ವಿಚಾರಿಸದೇ ಗುರುವಿನ ವಾಕ್ಯವನ್ನು ಸ್ವೀಕರಿಸಿ ಹಾಗೆಯೇ ಆಗಲೆಂದು ಯಾವ ಪ್ರದೇಶದಲ್ಲಿ ಆ ಪುಷ್ಪಗಳು ಆಕಾಶದಿಂದ ಬಿದ್ದಿದ್ದವೋ ಆ ಪ್ರದೇಶಕ್ಕೆ ಹೋದನು. ಅಲ್ಲಿ ಇನ್ನೂ ಇತರ ಕುಸುಮಗಳು ಬಿದ್ದಿದ್ದರೂ ಅವು ಮಾಸಿಹೋಗಿದ್ದವು.
13042015a ತತಃ ಸ ತಾನಿ ಜಗ್ರಾಹ ದಿವ್ಯಾನಿ ರುಚಿರಾಣಿ ಚ|
13042015c ಪ್ರಾಪ್ತಾನಿ ಸ್ವೇನ ತಪಸಾ ದಿವ್ಯಗಂಧಾನಿ ಭಾರತ||
ಭಾರತ! ತನ್ನ ತಪಸ್ಸಿನಿಂದ ಅವುಗಳಿಗೆ ದಿವ್ಯಗಂಧಗಳನ್ನಿತ್ತು ವಿಪುಲನು ಆ ದಿವ್ಯ ಸುಂದರ ಪುಷ್ಪಗಳನ್ನು ತೆಗೆದುಕೊಂಡನು.
13042016a ಸಂಪ್ರಾಪ್ಯ ತಾನಿ ಪ್ರೀತಾತ್ಮಾ ಗುರೋರ್ವಚನಕಾರಕಃ|
13042016c ತತೋ ಜಗಾಮ ತೂರ್ಣಂ ಚ ಚಂಪಾಂ ಚಂಪಕಮಾಲಿನೀಮ್||
ಅವುಗಳನ್ನು ಸಂಗ್ರಹಿಸಿ ಸಂತೋಷಗೊಂಡ ಆ ಗುರುವಿನ ವಚನಕಾರಕನು ಬೇಗನೇ ಚಂಪಕಮಾಲಿನೀ ಚಂಪಾಪುರಿಗೆ ಹೋದನು.
13042017a ಸ ವನೇ ವಿಜನೇ ತಾತ ದದರ್ಶ ಮಿಥುನಂ ನೃಣಾಮ್|
13042017c ಚಕ್ರವತ್ಪರಿವರ್ತಂತಂ ಗೃಹೀತ್ವಾ ಪಾಣಿನಾ ಕರಮ್||
ಅಯ್ಯಾ! ಮಾರ್ಗದಲ್ಲಿ ವಿಜನ ವದದಲ್ಲಿ ಅವನು ಇಬ್ಬರು ನರ ದಂಪತಿಗಳು ಕೈಗಳಿಂದ ಕೈಗಳನ್ನು ಹಿಡಿದು ಚಕ್ರದಂತೆ ಸುತ್ತುವರೆಯುತ್ತಿರುವುದನ್ನು ನೋಡಿದನು.
13042018a ತತ್ರೈಕಸ್ತೂರ್ಣಮಗಮತ್ತತ್ಪದೇ ಪರಿವರ್ತಯನ್|
13042018c ಏಕಸ್ತು ನ ತಥಾ ರಾಜಂಶ್ಚಕ್ರತುಃ ಕಲಹಂ ತತಃ||
ರಾಜನ್! ಅವರಲ್ಲಿ ಒಬ್ಬನು ಜೋರಾಗಿ ತಿರುಗತೊಡಗಿದನು. ಅದರಿಂದಾಗಿ ಅವರಲ್ಲಿ ಆಗ ಕಲಹವುಂಟಾಯಿತು.
13042019a ತ್ವಂ ಶೀಘ್ರಂ ಗಚ್ಚಸೀತ್ಯೇಕೋಽಬ್ರವೀನ್ನೇತಿ ತಥಾಪರಃ|
13042019c ನೇತಿ ನೇತಿ ಚ ತೌ ತಾತ ಪರಸ್ಪರಮಥೋಚತುಃ||
ಅಯ್ಯಾ! “ನೀನು ಶೀಘ್ರವಾಗಿ ಚಲಿಸುತ್ತಿರುವೆ!” ಎಂದು ಒಬ್ಬನು ಹೇಳಿದರೆ “ಇಲ್ಲ ಇಲ್ಲ!” ಎಂದು ಇನ್ನೊಬ್ಬನು ಹೇಳಿದನು. ಹೀಗೆ ಪರಸ್ಪರ ಮಾತನಾಡತೊಡಗಿದರು.
13042020a ತಯೋರ್ವಿಸ್ಪರ್ಧತೋರೇವಂ ಶಪಥೋಽಯಮಭೂತ್ತದಾ|
13042020c ಮನಸೋದ್ದಿಶ್ಯ ವಿಪುಲಂ ತತೋ ವಾಕ್ಯಮಥೋಚತುಃ||
ಸ್ಪರ್ಧಿಸುತ್ತಿದ್ದ ಅವರಿಬ್ಬರ ನಡುವೆ ಶಪಥಮಾಡುವ ಸಂದರ್ಭವುಂಟಾಯಿತು. ಆಗ ಅವರು ಮನಸಾರೆ ವಿಪುಲನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು:
13042021a ಆವಯೋರನೃತಂ ಪ್ರಾಹ ಯಸ್ತಸ್ಯಾಥ ದ್ವಿಜಸ್ಯ ವೈ|
13042021c ವಿಪುಲಸ್ಯ ಪರೇ ಲೋಕೇ ಯಾ ಗತಿಃ ಸಾ ಭವೇದಿತಿ||
“ನಮ್ಮಿಬ್ಬರಲ್ಲಿ ಯಾರು ಸುಳ್ಳನ್ನು ಹೇಳುತ್ತಿದ್ದೇವೋ ಅವರಿಗೆ ಪರಲೋಕದಲ್ಲಿ ವಿಪುಲನಿಗೆ ಯಾವ ಗತಿಯು ದೊರೆಯುತ್ತದೆಯೋ ಆ ಗತಿಯು ದೊರೆಯಲಿ” ಎಂದು.
13042022a ಏತಚ್ಚ್ರುತ್ವಾ ತು ವಿಪುಲೋ ವಿಷಣ್ಣವದನೋಽಭವತ್|
13042022c ಏವಂ ತೀವ್ರತಪಾಶ್ಚಾಹಂ ಕಷ್ಟಶ್ಚಾಯಂ ಪರಿಗ್ರಹಃ||
ಇದನ್ನು ಕೇಳಿ ವಿಪುಲನು ವಿಷಣ್ಣವದನನಾದನು. “ಈ ರೀತಿ ತೀವ್ರತಪಸ್ಸನ್ನಾಚರಿಸುತ್ತಿರುವ ನನಗೆ ಈ ಕಷ್ಟವು ಬರಬಹುದೇ?
13042023a ಮಿಥುನಸ್ಯಾಸ್ಯ ಕಿಂ ಮೇ ಸ್ಯಾತ್ಕೃತಂ ಪಾಪಂ ಯತೋ ಗತಿಃ|
13042023c ಅನಿಷ್ಟಾ ಸರ್ವಭೂತಾನಾಂ ಕೀರ್ತಿತಾನೇನ ಮೇಽದ್ಯ ವೈ||
ಈ ದಂಪತಿಗಳು ಹೇಳುತ್ತಿರುವ ಯಾವ ಪಾಪವನ್ನು ತಾನೇ ನಾನು ಮಾಡಿದ್ದೇನೆಂದು ನನಗೆ ಸರ್ವಭೂತಗಳಿಗೂ ಅನಿಷ್ಟವಾದ ಆ ಗತಿಯು ದೊರೆಯಲಿಕ್ಕಿದೆ?”
13042024a ಏವಂ ಸಂಚಿಂತಯನ್ನೇವ ವಿಪುಲೋ ರಾಜಸತ್ತಮ|
13042024c ಅವಾಙ್ಮುಖೋ ನ್ಯಸ್ತಶಿರಾ ದಧ್ಯೌ ದುಷ್ಕೃತಮಾತ್ಮನಃ||
ರಾಜಸತ್ತಮ! ಹೀಗೆ ಚಿಂತಿಸುತ್ತಾ ವಿಪುಲನು ಮುಖಕೆಳಮಾಡಿಕೊಂಡು ಶಿರಬಾಗಿ ತನ್ನ ದುಷ್ಕೃತವನ್ನು ಸ್ಮರಿಸಿಕೊಳ್ಳತೊಡಗಿದನು.
13042025a ತತಃ ಷಡನ್ಯಾನ್ಪುರುಷಾನಕ್ಷೈಃ ಕಾಂಚನರಾಜತೈಃ|
13042025c ಅಪಶ್ಯದ್ದೀವ್ಯಮಾನಾನ್ವೈ ಲೋಭಹರ್ಷಾನ್ವಿತಾಂಸ್ತಥಾ||
ಅನಂತರ ಅವನು ಚಿನ್ನ-ಬೆಳ್ಳಿಗಳನ್ನು ದೇವನೆಯನ್ನಾಗಿಟ್ಟು ಜೂಜಾಡುತ್ತಿದ್ದ ಲೋಭಹರ್ಷಸಮನ್ವಿತ ಆರು ಪುರುಷರನ್ನು ನೋಡಿದನು.
13042026a ಕುರ್ವತಃ ಶಪಥಂ ತಂ ವೈ ಯಃ ಕೃತೋ ಮಿಥುನೇನ ವೈ|
13042026c ವಿಪುಲಂ ವೈ ಸಮುದ್ದಿಶ್ಯ ತೇಽಪಿ ವಾಕ್ಯಮಥಾಬ್ರುವನ್||
ಆ ದಂಪತಿಗಳಂತೆಯೇ ಶಪಥಮಾಡುತ್ತಿದ್ದ ಅವರೂ ಕೂಡ ವಿಪುಲನನ್ನೇ ಉದ್ದೇಶಿಸಿ ಈ ಮಾತನ್ನಾಡಿದರು:
13042027a ಯೋ ಲೋಭಮಾಸ್ಥಾಯಾಸ್ಮಾಕಂ ವಿಷಮಂ ಕರ್ತುಮುತ್ಸಹೇತ್|
13042027c ವಿಪುಲಸ್ಯ ಪರೇ ಲೋಕೇ ಯಾ ಗತಿಸ್ತಾಮವಾಪ್ನುಯಾತ್||
“ನಮ್ಮಲ್ಲಿ ಯಾರು ಲೋಭವನ್ನಾಶ್ರಯಿಸಿ ಮೋಸಮಾಡಲು ಬಯಸುತ್ತಾನೋ ಅವನಿಗೆ ಪರಲೋಕದಲ್ಲಿ ವಿಪುಲನಿಗೆ ದೊರೆಯುವ ಗತಿಯೇ ದೊರೆಯಲಿ!”
13042028a ಏತಚ್ಚ್ರುತ್ವಾ ತು ವಿಪುಲೋ ನಾಪಶ್ಯದ್ಧರ್ಮಸಂಕರಮ್|
13042028c ಜನ್ಮಪ್ರಭೃತಿ ಕೌರವ್ಯ ಕೃತಪೂರ್ವಮಥಾತ್ಮನಃ||
ಕೌರವ್ಯ! ಇದನ್ನು ಕೇಳಿ ವಿಪುಲನು ಜನ್ಮಪ್ರಭೃತಿ ತಾನು ಹಿಂದೆ ಮಾಡಿದ ಕರ್ಮಗಳನ್ನು ಸ್ಮರಿಸಿಕೊಂಡನು ಮತ್ತು ಅವುಗಳಲ್ಲಿ ಯಾವುದೇ ಧರ್ಮಸಂಕರವನ್ನೂ ಕಾಣಲಿಲ್ಲ.
13042029a ಸ ಪ್ರದಧ್ಯೌ ತದಾ ರಾಜನ್ನಗ್ನಾವಗ್ನಿರಿವಾಹಿತಃ|
13042029c ದಹ್ಯಮಾನೇನ ಮನಸಾ ಶಾಪಂ ಶ್ರುತ್ವಾ ತಥಾವಿಧಮ್||
ರಾಜನ್! ಆ ವಿಧದ ಶಾಪವನ್ನು ಕೇಳಿ ಮನಸ್ಸಿನಲ್ಲಿಯೇ ಸುಡುತ್ತಿದ್ದ ಅವನು ಅಗ್ನಿಯೊಳಗಿನ ಅಗ್ನಿಯಂತೆ ಉರಿಯತೊಡಗಿದನು.
13042030a ತಸ್ಯ ಚಿಂತಯತಸ್ತಾತ ಬಹ್ವ್ಯೋ ದಿನನಿಶಾ ಯಯುಃ|
13042030c ಇದಮಾಸೀನ್ಮನಸಿ ಚ ರುಚ್ಯಾ ರಕ್ಷಣಕಾರಿತಮ್||
ಅಯ್ಯಾ! ಈ ರೀತಿ ಚಿಂತಿಸುತ್ತಾ ಅನೇಕ ದಿನ-ರಾತ್ರಿಗಳು ಕಳೆದುಹೋದವು. ಆಗ ಅವನ ಮನಸ್ಸಿನಲ್ಲಿ ರುಚಿಯ ರಕ್ಷಣೆಯನ್ನು ಮಾಡಿದುದರ ಕುರಿತಾದ ಯೋಚನೆಯು ಬಂದಿತು.
13042031a ಲಕ್ಷಣಂ ಲಕ್ಷಣೇನೈವ ವದನಂ ವದನೇನ ಚ|
13042031c ವಿಧಾಯ ನ ಮಯಾ ಚೋಕ್ತಂ ಸತ್ಯಮೇತದ್ಗುರೋಸ್ತದಾ||
“ನನ್ನ ಲಕ್ಷಣವನ್ನು ಅವಳ ಲಕ್ಷಣದ ಮೇಲೂ ಮತ್ತು ನನ್ನ ವದನವನ್ನು ಅವಳ ವದನದ ಮೇಲೆ ಇಟ್ಟಿದ್ದರೂ ನಾನು ಆ ಸತ್ಯವನ್ನು ಗುರುವಿಗೆ ಹೇಳಲಿಲ್ಲ!”
13042032a ಏತದಾತ್ಮನಿ ಕೌರವ್ಯ ದುಷ್ಕೃತಂ ವಿಪುಲಸ್ತದಾ|
13042032c ಅಮನ್ಯತ ಮಹಾಭಾಗ ತಥಾ ತಚ್ಚ ನ ಸಂಶಯಃ||
ಕೌರವ್ಯ! ಮಹಾಭಾಗ! ಅದನ್ನೇ ವಿಪುಲನು ತನ್ನ ದುಷ್ಕೃತವೆಂದು ಅಂದುಕೊಂಡನು. ಅದೇ ಅವನ ದುಷ್ಕೃತವೆನ್ನುವುದರಲ್ಲಿ ಸಂಶಯವಿರಲಿಲ್ಲ.
13042033a ಸ ಚಂಪಾಂ ನಗರೀಮೇತ್ಯ ಪುಷ್ಪಾಣಿ ಗುರವೇ ದದೌ|
13042033c ಪೂಜಯಾಮಾಸ ಚ ಗುರುಂ ವಿಧಿವತ್ಸ ಗುರುಪ್ರಿಯಃ||
ಅವನು ಚಂಪಾನಗರಿಯನ್ನು ತಲುಪಿ ಪುಷ್ಪಗಳನ್ನು ಗುರುವಿಗೆ ನೀಡಿದನು. ಮತ್ತು ಆ ಗುರುಪ್ರಿಯನು ವಿಧಿವತ್ತಾಗಿ ಗುರುವನ್ನು ಪೂಜಿಸತೊಡಗಿದನು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಪುಲೋಪಾಖ್ಯಾನೇ ದ್ವಿಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಪುಲೋಪಾಖ್ಯಾನ ಎನ್ನುವ ನಲ್ವತ್ತೆರಡನೇ ಅಧ್ಯಾಯವು.