ಯುಧಿಷ್ಠಿರ-ಭೀಷ್ಮ ಸಂವಾದ
ರಾತ್ರಿಯು ಕಳೆಯಲು ಇನ್ನೂ ಅರ್ಧ ಯಾಮವಿರುವಾಗಲೇ ಅವನು ಎದ್ದನು. ಮಾಧವನು ಧ್ಯಾನಮಾರ್ಗವನ್ನಾಶ್ರಯಿಸಿ ಸರ್ವಜ್ಞಾನಗಳನ್ನೂ ಕಂಡು ಅನಂತರ ಸನಾತನಬ್ರಹ್ಮನನ್ನು ಧ್ಯಾನಿಸಿದನು. ಆಗ ಶ್ರುತಿಪುರಾಣಗಳನ್ನು ತಿಳಿದಿದ್ದ, ವಿದ್ಯಾವಂತರಾದ, ಸುಂದರ ಕಂಠವುಳ್ಳವರು ಆ ವಿಶ್ವಕರ್ಮಿ ಪ್ರಜಾಪತಿ ವಾಸುದೇವನನ್ನು ಸ್ತುತಿಸಿದರು. ಕೈಗಳಿಂದ ತಾಳಹಾಕುತ್ತಾ ಭಜನೆ ಮಾಡುತ್ತಿದ್ದರು. ಮಧುರ ಕಂಠದಲ್ಲಿ ಗಾಯನ ಹಾಡುತ್ತಿದ್ದರು. ಸಹಸ್ರಾರು ಶಂಖ-ಆನಕ-ಮೃದಂತಗಳನ್ನು ಮೊಳಗಿಸಿದರು. ಅತಿಮನೋರಮವಾದ ವೀಣೆ-ಪವಣ-ವೇಣುಗಳ ಧ್ವನಿಗಳು, ಅವನ ಭವನವೇ ಸಂತೋಷದಿಂದ ನಗುತ್ತಿದೆಯೋ ಎನ್ನುವಂತೆ ಬಹು ವಿಸ್ತೀರ್ಣದವರೆಗೆ ಕೇಳಿಬರುತ್ತಿತ್ತು. ಹಾಗೆಯೇ ರಾಜಾ ಯುಧಿಷ್ಠಿರನಲ್ಲಿಯೂ ಮಂಗಲಕರ ಮಧುರ ವಾಚನ-ಗೀತ-ವಾದ್ಯಗಳ ಮೇಳಗಳು ಕೇಳಿಬಂದವು. ಬಳಿಕ ಮಹಾಬಾಹು ಅಚ್ಯುತ ದಾಶಾರ್ಹನು ಎದ್ದು, ಸ್ನಾನಮಾಡಿ, ಕೈಮುಗಿದು ರಹಸ್ಯವಾಗಿ ಜಪಿಸಿ, ಅಗ್ನಿಯನ್ನು ಪೂಜಿಸಿದನು. ಅನಂತರ ಮಾಧವನು ನಾಲ್ಕುವೇದಗಳ ವಿದ್ವಾಂಸರಾದ ಸಹಸ್ರ ವಿಪ್ರರಿಗೆ ಒಬ್ಬೊಬ್ಬರಿಗೂ ಒಂದೊಂದು ಸಾವಿರ ಗೋವುಗಳನ್ನು ದಾನಮಾಡಿದ, ಸ್ವಸ್ತಿವಾಚನ ಮಾಡಿಸಿಕೊಂಡನು. ಅನಂತರ ಕೃಷ್ಣನು ಮಂಗಲದ್ರವ್ಯಗಳನ್ನು ಸ್ಪರ್ಷಿಸಿ, ಶುಭ್ರ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು, ಸಾತ್ಯಕಿಗೆ ಹೇಳಿದನು: “ಶೈನೇಯ! ಹೋಗು! ರಾಜನಿವೇಶನಕ್ಕೆ ಹೋಗಿ ಮಹಾತೇಜಸ್ವಿ ಭೀಷ್ಮನನ್ನು ಕಾಣಲು ಯುಧಿಷ್ಠಿರನು ಸಿದ್ಧನಾಗಿದ್ದನೆಯೋ ಎಂದು ತಿಳಿ!”
ಕೃಷ್ಣನ ಆ ಮಾತಿನಂತೆ ಸಾತ್ಯಕಿಯು ಬೇಗನೇ ರಾಜ ಯುಧಿಷ್ಠಿರನಲ್ಲಿಗೆ ಹೋಗಿ ಹೇಳಿದನು: “ರಾಜನ್! ಧೀಮತ ವಾಸುದೇವನ ಶ್ರೇಷ್ಠ ರಥವು ಸಿದ್ಧವಾಗಿದೆ. ಜನಾರ್ದನನು ಆಪಗೇಯನ ಸಮೀಪಕ್ಕೆ ಹೋಗುತ್ತಿದ್ದಾನೆ. ಕೃಷ್ಣನು ನಿನ್ನ ಪ್ರತೀಕ್ಷೆಯಲ್ಲಿಯೇ ಇದ್ದಾನೆ. ಇದರ ನಂತರ ಏನನ್ನು ಮಾಡಬೇಕಾಗಿದೆಯೋ ಅದನ್ನು ನೀನು ಮಾಡಬೇಕು!”
ಯುಧಿಷ್ಠಿರನು ಹೇಳಿದನು: “ಫಲ್ಗುನ! ನನ್ನ ಶ್ರೇಷ್ಠ ರಥವನ್ನು ಸಿದ್ಧಪಡಿಸು! ಸೈನಿಕರು ಯಾರೂ ಹೋಗುವುದಿಲ್ಲ. ನಾವು ಮಾತ್ರ ಅಲ್ಲಿಗೆ ಹೋಗೋಣ! ಧರ್ಮಭೃತರಲ್ಲಿ ಶ್ರೇಷ್ಠನಾದ ಭೀಷ್ಮನಿಗೆ ನಾವು ಪೀಡಿಸಬಾರದು. ಆದುದರಿಂದ ನಮ್ಮ ಹಿಂದೆ ಮತ್ತು ಮುಂದೆ ಸಾಗುವ ಸೇನೆಗಳು ಇಲ್ಲಿಯೇ ನಿಲ್ಲಲಿ! ಇಂದಿನಿಂದ ಗಾಂಗೇಯನು ಪರಮ ಗುಹ್ಯವಾದ ಮಾತುಗಳನ್ನು ಹೇಳುತ್ತಾನೆ. ಆದುದರಿಂದ ಅಲ್ಲಿಗೆ ಸಾಮಾನ್ಯ ಜನರು ಬಂದು ಸೇರುವುದನ್ನು ನಾನು ಇಚ್ಛಿಸುವುದಿಲ್ಲ!”
ಅವನ ಆ ಮಾತನ್ನು ಕೇಳಿ ಕುಂತೀಪುತ್ರ ಧನಂಜಯನು ಶ್ರೇಷ್ಠರಥವು ಸಿದ್ಧವಾಗಿದೆಯೆಂದು ತಿಳಿಸಿದನು. ಅನಂತರ ರಾಜಾ ಯುಧಿಷ್ಠಿರ, ಯಮಳರೀರ್ವರು ಮತ್ತು ಭೀಮಾರ್ಜುನರು ಐವರು ಪಂಚಭೂತಗಳೋಪಾದಿಯಲ್ಲಿ, ಒಂದಾಗಿ ಕೃಷ್ಣನ ಭವನಕ್ಕೆ ಆಗಮಿಸಿದರು. ಮಹಾತ್ಮ ಪಾಂಡವರು ಬಂದಕೂಡಲೇ ಧೀಮಾನ್ ಕೃಷ್ಣನೂ ಕೂಡ ಶೈನೇಯನೊಡನೆ ರಥವನ್ನೇರಿದನು. ರಥದಲ್ಲಿ ಕುಳಿತು, ರಾತ್ರಿಯು ಸುಖಕರವಾಗಿತ್ತೇ ಎಂದು ಮುಂತಾದ ಸಂವಾದಗಳನ್ನು ಗೈಯುತ್ತಾ, ಗುಡುಗಿನಂತೆ ಮೊಳಗುತ್ತಿದ್ದ ಶ್ರೇಷ್ಠರಥಗಳಲ್ಲಿ ಆ ಮಹಾರಥರು ಪ್ರಯಾಣಿಸಿದರು. ಮೇಘಪುಷ್ಪ, ಬಲಾಹಕ, ಸೈನ್ಯ ಮತ್ತು ಸುಗ್ರೀವರೆಂಬ ವಾಸುದೇವನ ಕುದುರೆಗಳನ್ನು ದಾರುಕನು ನಡೆಸಿದನು. ದಾರುಕನಿಂದ ಪ್ರಚೋದಿತಗೊಂಡ ವಾಸುದೇವನ ಕುದುರೆಗಳು ಗೊರಸುಗಳ ಅಗ್ರಭಾಗದಿಂದ ಭೂಮಿಯನ್ನು ಗೀರುತ್ತಾ ಬಹಳ ಬೇಗ ಧಾವಿಸಿದವು. ಆ ವೇಗವುಳ್ಳ ಮಹಾಬಲಶಾಲೀ ಕುದುರೆಗಳು ಆಕಾಶವನ್ನೇ ನುಂಗಿಹಾಕುವವೋ ಎನ್ನುವಂತೆ ಸಾಗಿ ಸಮಸ್ತ ಧರ್ಮಕ್ಕೂ ಕ್ಷೇತ್ರವಾದ ಕುರುಕ್ಷೇತ್ರಕ್ಕೆ ಬಂದು ತಲುಪಿದವು. ಅನಂತರ ಅವರು ದೇವಗಣಗಳೊಂದಿಗೆ ಇದ್ದ ಬ್ರಹ್ಮನಂತೆ ಬ್ರಹ್ಮರ್ಷಿಗಳೊಂದಿಗೆ ಶರತಲ್ಪದಲ್ಲಿ ಮಲಗಿದ್ದ ಪ್ರಭು ಭೀಷ್ಮನಿದ್ದಲ್ಲಿಗೆ ಬಂದರು. ಆಗ ಗೋವಿಂದ, ಯುಧಿಷ್ಠಿರ, ಭೀಮ, ಗಾಂಡೀವಧನ್ವಿ, ಯಮಳರು ಮತ್ತು ಸಾತ್ಯಕಿಯರು ರಥದಿಂದಿಳಿದು ಬಲಗೈಗಳನ್ನೆತ್ತಿ ಅಲ್ಲಿದ್ದ ಋಷಿಗಳನ್ನು ಗೌರವಿಸಿದರು. ನಕ್ಷತ್ರಗಳಿಂದ ಪರಿವೃತನಾದ ಚಂದ್ರನಂತೆ ಅವರಿಂದ ಪರಿವೃತನಾದ ರಾಜ ಯುಧಿಷ್ಠಿರನು ವಾಸವನು ಬ್ರಹ್ಮನ ಬಳಿಸಾರುವಂತೆ ಗಾಂಗೇಯನ ಬಳಿಸಾರಿದನು. ಕೆಳಗೆ ಬಿದ್ದಿದ್ದ ಆದಿತ್ಯನಂತೆ ಶರತಲ್ಪದಲ್ಲಿ ಮಲಗಿದ್ದ ಅವನನ್ನು ನೋಡಿ ಮಹಾಬಾಹು ಯುಧಿಷ್ಠಿರನು ಭಯದಿಂದ ಕೂಡಲೇ ಅವನನ್ನು ಎದುರಿಸಲಿಲ್ಲ.
ಶರತಲ್ಪಗತನಾಗಿರುವ ಕೌರವರ ಧುರಂಧರ ಭೀಷ್ಮನ ಬಳಿ ನಾರದಪ್ರಮುಖ ಋಷಿಗಳು ಮತ್ತು ಸಿದ್ಧರು ಆಗಮಿಸಿದರು. ಮಹಾತ್ಮ ಯುಧಿಷ್ಠಿರನೇ ಮೊದಲಾದ ಅಳಿದುಳಿದ ರಾಜರು, ಧೃತರಾಷ್ಟ್ರ, ಕೃಷ್ಣ, ಭೀಮಾರ್ಜುನರು, ಯಮಳರು ಕೆಳಗೆ ಬಿದ್ದ ಸೂರ್ಯನಂತಿದ್ದ ಭಾರತರ ಪಿತಾಮಹ ಗಾಂಗೇಯನ ಬಳಿಸಾರಿ ಶೋಕಿಸಿದರು. ದೇವದರ್ಶನ ನಾರದನು ಮುಹೂರ್ತಕಾಲ ಧ್ಯಾನಿಸಿ ಪಾಂಡವರೆಲ್ಲರನ್ನೂ ಮತ್ತು ಅಳಿದುಳಿದ ಪಾರ್ಥಿವರನ್ನೂ ಉದ್ದೇಶಿಸಿ ಹೇಳಿದನು. “ಭಾರತ! ಅಸ್ತಮಿಸುವ ಸೂರ್ಯನಂತಿರುವ ಗಾಂಗೇಯನೊಡನೆ ಸಂಭಾಷಣೆಗೆ ತೊಡಗುವ ಸಮಯವು ಪ್ರಾಪ್ತವಾಗಿದೆ. ಇವನು ಪ್ರಾಣಗಳನ್ನು ತೊರೆಯುವ ಮೊದಲು ಎಲ್ಲವನ್ನೂ ಕೇಳಬೇಕು. ಏಕೆಂದರೆ ಇವನು ಚಾರುರ್ವಣಗಳ ವಿವಿಧ ಧರ್ಮಗಳನ್ನೂ ಸಂಪೂರ್ಣವಾಗಿ ತಿಳಿದಿರುತ್ತಾನೆ. ಈ ವೃದ್ಧನು ತನುವನ್ನು ತ್ಯಜಿಸಿ ಲೋಕಗಳಿಗೆ ತೆರಳುವ ಮೊದಲೇ ಶೀಘ್ರವಾಗಿ ಮನಸ್ಸಿನಲ್ಲಿರುವ ಸಂಶಯಗಳನ್ನು ಕೇಳಬೇಕು!”
ಭೀಷ್ಮನ ಕುರಿತು ನಾರದನು ಹೀಗೆ ಹೇಳಲು ಅಲ್ಲಿದ್ದ ನರಾಧಿಪರು ಏನನ್ನೂ ಕೇಳಲು ಶಕ್ತರಾಗದೇ ಪರಸ್ಪರರನ್ನು ನೋಡತೊಡಗಿದರು. ಆಗ ಪಾಂಡುಪುತ್ರ ಯುಧಿಷ್ಠಿರನು ಹೃಷೀಕೇಶನಿಗೆ ಹೇಳಿದನು: “ದೇವಕೀಪುತ್ರ! ನಿನ್ನನ್ನು ಬಿಟ್ಟು ಬೇರೆ ಯಾರೂ ಪಿತಾಮಹನನ್ನು ಪ್ರಶ್ನಿಸಲು ಶಕ್ತರಿಲ್ಲ! ನೀನೇ ಮುಂದೆನಿಂತು ವ್ಯವಹರಿಸು! ಏಕೆಂದರೆ ನೀನೇ ಎಲ್ಲರ ಎಲ್ಲ ಧರ್ಮಗಳನ್ನೂ ತಿಳಿದಿರುವೆ!”
ಪಾಂಡವನು ಹೀಗೆ ಹೇಳಲು ಭಗವಾನ್ ಅಚ್ಯುತ ಕೇಶವನು ದುರಾಧರ್ಷ ಭೀಷ್ಮನ ಬಳಿಸಾರಿ ಮಾತನಾಡಿದನು: “ರಾಜಸತ್ತಮ! ನೀನು ರಾತ್ರಿಯನ್ನು ಸುಖವಾಗಿ ಕಳೆದೆಯಲ್ಲವೇ? ನಿನ್ನ ಬುದ್ಧಿಯು ಸ್ಥಿರವಾಗಿ, ಸ್ಪಷ್ಟವಾಗಿ ಕಾಣುತ್ತಿದೆ ತಾನೇ? ಸರ್ವ ಜ್ಞಾನಗಳೂ ನಿನಗೆ ಹೊಳೆಯುತ್ತಿವೆ ತಾನೇ? ಹೃದಯದಲ್ಲಿ ದುಃಖವಿಲ್ಲ ತಾನೇ? ಮನಸ್ಸು ವ್ಯಾಕುಲಗೊಂಡಿಲ್ಲ ತಾನೇ?”
ಭೀಷ್ಮನು ಹೇಳಿದನು: “ಗೋವಿಂದ! ನಿನ್ನ ಪ್ರಸಾದದಿಂದ ಬಾಯಾರಿಕೆ, ಮೋಹ, ಸುಸ್ತು, ನೋವು, ದುಃಖ ಮತ್ತು ರುಜಿನಗಳು ಸದ್ಯ ಹೊರಟುಹೋಗಿವೆ! ಕೈಯಲ್ಲಿರುವ ಫಲದಂತೆ ಭೂತ-ಭವ್ಯ-ವರ್ತಮಾನಗಳನ್ನು ಸ್ವಚ್ಛವಾಗಿ ಕಾಣುತ್ತಿದ್ದೇನೆ. ನಿನ್ನ ವರದಾನದಿಂದ ವೇದಗಳು ಹೇಳಿರುವ ಧರ್ಮಗಳೂ, ವೇದಾಂತಗಳ ನಿಶ್ಚಯಗಳೂ ಎಲ್ಲವನ್ನೂ ನಾನು ಕಾಣುತ್ತಿದ್ದೇನೆ. ಶಿಷ್ಟರು ಯಾವುದನ್ನು ಧರ್ಮವೆಂದು ಕರೆಯುತ್ತಾರೆಯೋ ಅದೂ ಕೂಡ ನನ್ನ ಹೃದಯದಲ್ಲಿ ಪ್ರತಿಷ್ಠಿತವಾಗಿದೆ. ದೇಶ-ಜಾತಿ-ಕುಲಗಳ ಧರ್ಮಗಳನ್ನೂ ತಿಳಿದಿರುತ್ತೇನೆ. ನಾಲ್ಕು ಆಶ್ರಮಧರ್ಮಗಳೂ ಅವುಗಳ ಅರ್ಥಗಳೂ ನನ್ನ ಹೃದಯದಲ್ಲಿ ನೆಲೆಸಿವೆ. ಸಕಲ ರಾಜಧರ್ಮಗಳನ್ನೂ ತಿಳಿದುಕೊಂಡಿದ್ದೇನೆ. ಯಾವ ಯಾವ ವಿಷಯದ ಕುರಿತು ಹೇಳಬೇಕೋ ಅದನ್ನು ನಾನು ಹೇಳುತ್ತೇನೆ. ನಿನ್ನ ಪ್ರಸಾದದಿಂದ ನನ್ನ ನಿರ್ಮಲ ಮನಸ್ಸನ್ನು ಶುಭ ಬುದ್ಧಿಯು ಪ್ರವೇಶಿಸಿದೆ. ಸದಾ ನಿನ್ನನ್ನೇ ಧ್ಯಾನಿಸುತ್ತಿರುವ ನಾನು ವೃದ್ಧನಾದರೂ ಯುವಕನಂತಾಗಿಬಿಟ್ಟಿದ್ದೇನೆ. ನಿನ್ನ ಪ್ರಸಾದದಿಂದ ಶ್ರೇಯವಾದುದನ್ನು ಹೇಳಲು ಸಮರ್ಥನಾಗಿದ್ದೇನೆ. ಆದರೆ ಸ್ವಯಂ ನೀನೇ ಪಾಂಡವರಿಗೆ ಶ್ರೇಯವಾದುದನ್ನು ಏಕೆ ಹೇಳುತ್ತಿಲ್ಲ? ನಾನೇ ಅವುಗಳನ್ನು ಹೇಳಬೇಕೆನ್ನುವುದರಲ್ಲಿ ನಿನ್ನ ಉದ್ದೇಶವಾದರೂ ಏನು ಅದನ್ನು ಬೇಗನೇ ಹೇಳು!”
ವಾಸುದೇವನು ಹೇಳಿದನು: “ಕೌರವ! ಎಲ್ಲರ ಶ್ರೇಯಸ್ಸು ಮತ್ತು ಯಶಸ್ಸುಗಳಿಗೆ ನಾನೇ ಮೂಲನೆಂದು ತಿಳಿ. ಪ್ರಪಂಚದಲ್ಲಿರುವ ಸತ್ ಮತ್ತು ಅಸತ್ ಎಲ್ಲ ಭಾವಗಳೂ ನನ್ನಿಂದಲೇ ಪ್ರಾದುರ್ಭವಿಸಿವೆ. ಚಂದ್ರನು ಶೀತಲಕಿರಣಗಳನ್ನು ಹೊಂದಿದ್ದಾನೆ ಎಂದು ಹೇಳಿದರೆ ಲೋಕದಲ್ಲಿ ಯಾರುತಾನೇ ವಿಸ್ಮಯಗೊಳ್ಳುತ್ತಾರೆ? ಹಾಗೆಯೇ ಯಶಸ್ಸಿನಿಂದ ಪೂರ್ಣನಾಗಿರುವ ನಾನು ಉಪದೇಶನೀಡಿದರೆ ಯಾರುತಾನೇ ವಿಸ್ಮಯಗೊಳ್ಳುತ್ತಾರೆ? ಭೀಷ್ಮ! ಈ ಜಗತ್ತಿನಲ್ಲಿ ನಿನ್ನ ಯಶಸ್ಸನ್ನು ಇನ್ನೂ ಹೆಚ್ಚಿಸಬೇಕೆಂಬುದೇ ನನ್ನ ಆಶಯವಾಗಿದೆ. ಆದುದರಿಂದ ನನ್ನ ವಿಪುಲ ಬುದ್ಧಿಯನ್ನು ನಿನ್ನಲ್ಲಿಯೇ ಒಂದುಗೂಡಿಸಿದ್ದೇನೆ. ಎಲ್ಲಿಯವರೆಗೆ ಈ ಪೃಥ್ವಿಯು ಸ್ಥಿರವಾಗಿ ನಿಂತಿರುವುದೋ ಅಲ್ಲಿಯವರೆಗೆ ನಿನ್ನ ಅಕ್ಷಯ ಕೀರ್ತಿಯು ಲೋಕಗಳಲ್ಲಿ ವ್ಯಾಪ್ತವಾಗಿರುತ್ತದೆ. ಪಾಂಡವನು ಕೇಳಿದುದಕ್ಕೆ ನೀನು ಏನನ್ನು ಹೇಳುತ್ತೀಯೋ ಅದು ವಸುಧಾತಲದಲ್ಲಿ ವೇದವಾಖ್ಯವಾಗಿ ನಿಲ್ಲುತ್ತದೆ. ನಿನ್ನ ಮಾತುಗಳನ್ನು ಪ್ರಮಾಣಭೂತವನ್ನಾಗಿಟ್ಟುಕೊಂಡು ಯಾರು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆಯೋ ಅವನು ಆ ಸರ್ವಪುಣ್ಯಗಳ ಫಲಗಳನ್ನೂ ಮರಣಾನಂತರದಲ್ಲಿ ಪಡೆದುಕೊಳ್ಳುತ್ತಾನೆ. ಈ ಕಾರಣದಿಂದಲೇ ನಿನ್ನ ಯಶಸ್ಸನ್ನು ಹೇಗೆ ಹೆಚ್ಚಿಸಬೇಕು ಎಂದು ಆಲೋಚಿಸಿ, ನನ್ನ ದಿವ್ಯ ಮತಿಯನ್ನು ನಿನಗೆ ಇತ್ತಿದ್ದೇನೆ. ಎಲ್ಲಿಯವರೆಗೆ ಪುರುಷನ ಯಶಸ್ಸು ಭುವಿಯ ಜನರಲ್ಲಿ ಹರಡಿರುತ್ತದೆಯೋ ಅಲ್ಲಿಯವರೆಗೆ ಅವನ ಸ್ಥಾನವು ಅಕ್ಷಯವಾಗಿರುತ್ತದೆ ಎನ್ನುವುದು ನಿಶ್ಚಿತವಾಗಿದೆ. ಅಳಿದುಳಿದ ರಾಜರು ನಿನ್ನಿಂದ ಧರ್ಮವನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆಯಿಂದ ನಿನ್ನ ಸುತ್ತಲೂ ಕುಳಿತಿದ್ದಾರೆ. ಅವರೆಲ್ಲರಿಗೂ ಉಪದೇಶಿಸು! ನೀನು ವಯಸ್ಸಿನಲ್ಲಿ ವೃದ್ಧನಾಗಿರುವೆ. ಶಾಸ್ತ್ರಜ್ಞಾನ ಮತ್ತು ಸದಾಚಾರಗಳಿಂದ ಕೂಡಿರುವೆ. ಹಿಂದಿದ್ದ ಮತ್ತು ಮುಂದೆ ಬೇಕಾಗುವ ರಾಜಧರ್ಮಗಳಲ್ಲಿ ಕುಶಲನಾಗಿರುವೆ. ಜನ್ಮಪ್ರಭೃತಿ ನಿನ್ನಲ್ಲಿ ಯಾವುದೇ ದೋಷವನ್ನೂ ಕಂಡಿಲ್ಲ. ನೀನು ಸರ್ವಧರ್ಮಗಳನ್ನು ತಿಳಿದಿರುವೆ ಎಂದು ಸರ್ವಪಾರ್ಥಿವರೂ ಅರಿತಿದ್ದಾರೆ. ತಂದೆಯು ಮಕ್ಕಳಿಗೆ ಉಪದೇಶಿಸುವಂತೆ ಇವರಿಗೆ ಪರಮ ನೀತಿಯನ್ನು ಉಪದೇಶಿಸು. ಋಷಿಗಳನ್ನೂ ದೇವತೆಗಳನ್ನೂ ನೀನು ನಿತ್ಯವೂ ಉಪಾಸಿಸಿರುವೆ. ಆದುದರಿಂದ ಇವರಿಗೆ ನೀನು ಸಂಪೂರ್ಣವಾಗಿ ಉಪದೇಶಿಸಬೇಕೆಂದು ನನಗನ್ನಿಸುತ್ತದೆ. ಧರ್ಮವನ್ನು ತಿಳಿಯಲು ಇಚ್ಛೆಯುಳ್ಳವರು ವಿದುಷನನ್ನು ಕೇಳಿದರೆ ಆ ಧರ್ಮವನ್ನು ತಿಳಿಸಬೇಕೆಂದು ಮನೀಷಿಣರು ಹೇಳುತ್ತಾರೆ. ಹಾಗೆ ಹೇಳದೇ ಇದ್ದವನಿಗೆ ಕಷ್ಟವೂ ದೋಷವೂ ಆಗುತ್ತದೆ. ಆದುದರಿಂದ ಸನಾತನ ಧರ್ಮದ ಕುರಿತು ಕೇಳುತ್ತಿರುವ ನಿನ್ನ ಪುತ್ರ-ಪೌತ್ರರಿಗೆ ವಿದ್ವಾನನೂ ಜಿಜ್ಞಾಸೆಮಾಡಬಲ್ಲನೂ ಆದ ನೀನು ಉಪದೇಶಿಸು!”
ಆಗ ಮಹಾತೇಜಸ್ವಿ ಕೌರವನಂದನನು ಹೇಳಿದನು: “ಗೋವಿಂದ! ಈಗ ನಾನು ಧರ್ಮಗಳ ಪ್ರವಚನವನ್ನು ಮಾಡುತ್ತೇನೆ. ನೀನು ಶಾಶ್ವತನಾದ ಸರ್ವಭೂತಗಳ ಆತ್ಮನಾಗಿರುವೆ. ನಿನ್ನ ಪ್ರಸಾದದಿಂದ ನನ್ನ ಮನಸ್ಸು ಮಾತುಗಳೂ ದೃಢವಾಗಿವೆ. ರಾಜಾ ಯುಧಿಷ್ಠಿರನು ನನ್ನಲ್ಲಿ ಧರ್ಮಗಳ ಕುರಿತು ಪ್ರಶ್ನಿಸಲಿ. ಅದರಿಂದ ನಾನು ಪ್ರೀತನಾಗುತ್ತೇನೆ. ಧರ್ಮಗಳನ್ನು ಹೇಳುತ್ತೇನೆ. ಯಾರು ಹುಟ್ಟಿದಾಗ ಸರ್ವ ಋಷಿಗಳೂ ಹರ್ಷಿತರಾದರೋ ಆ ಧರ್ಮಾತ್ಮ ಮಹಾತ್ಮ ಪಾಂಡವ ರಾಜರ್ಷಭನು ನನ್ನಲ್ಲಿ ಪ್ರಶ್ನಿಸಲಿ! ಯಾರು ಎಲ್ಲ ಧರ್ಮಚಾರೀ ಕುರುಗಳ ಯಶಸ್ಸನ್ನು ಬೆಳಗಿಸಿದನೋ ಮತ್ತು ಯಾರಿಗೆ ಸಮನಾದವರು ಬೇರೆ ಯಾರೂ ಇಲ್ಲವೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ! ಯಾರಲ್ಲಿ ನಿತ್ಯವೂ ಧೃತಿ, ದಮ, ಬ್ರಹ್ಮಚರ್ಯ, ಕ್ಷಮೆ, ಧರ್ಮ, ಓಜಸ್ಸು ಮತ್ತು ತೇಜಸ್ಸುಗಳು ನೆಲಸಿವೆಯೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ! ಯಾರಲ್ಲಿ ಸತ್ಯ, ದಾನ, ತಪಸ್ಸು, ಶೌಚ, ಶಾಂತಿ, ದಕ್ಷತೆ ಅತ್ತು ಅಸಂಭ್ರಮ ಈ ಸರ್ವ ಗುಣಗಳೂ ಇವೆಯೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ! ಯಾರು ಕಾಮ, ಕ್ರೋಧ, ಭಯ ಮತ್ತು ಅರ್ಥಕ್ಕಾಗಿ ಅಧರ್ಮವನ್ನು ಎಸಗಲಿಲ್ಲವೋ ಆ ಧರ್ಮಾತ್ಮ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ! ಸಂಬಂಧಿಗಳನ್ನೂ, ಅತಿಥಿಗಳನ್ನೂ, ಸೇವಕರನ್ನೂ, ಮತ್ತು ಆಶ್ರಿತರನ್ನು ಸತ್ಕರಿಸಿ ಸನ್ಮಾನಿಸುವ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ! ಸತ್ಯನಿತ್ಯನೂ, ಕ್ಷಮಾನಿತ್ಯನೂ, ಜ್ಞಾನನಿತ್ಯನೂ, ಅತಿಥಿಪ್ರಿಯನೂ, ಸದಾ ಸತ್ಪುರುಷರಿಗೆ ದಾನನೀಡುವವನೂ ಆದ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ! ನಿತ್ಯವೂ ಅಧ್ಯಯನ-ಯಾಗಗಳಲ್ಲಿ ಮತ್ತು ಸದಾ ಧರ್ಮದಲ್ಲಿ ನಿರತನಾಗಿರುವ, ಶ್ರುತಿಗಳ ರಹಸ್ಯಗಳನ್ನು ತಿಳಿದಿರುವ ಶಾಂತ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!”
ವಾಸುದೇವನು ಹೇಳಿದನು: “ಧರ್ಮಾತ್ಮ ಯುಧಿಷ್ಠಿರನು ಅತ್ಯಂತ ಲಜ್ಜಿತನಾಗಿದ್ದಾನೆ. ಅಭಿಶಾಪದ ಭಯದಿಂದ ಭೀತನಾಗಿ ಅವನು ನಿನ್ನ ಸಮೀಪಕ್ಕೆ ಬರುತ್ತಿಲ್ಲ. ಜನಸಂಹಾರದ ಕದನವನ್ನು ಮಾಡಿದ ಲೋಕನಾಥ ವಿಶಾಂಪತಿಯು ಅಭಿಶಾಪದ ಭಯದಿಂದ ಭೀತನಾಗಿ ನಿನ್ನ ಸಮೀಪಕ್ಕೆ ಬರುತ್ತಿಲ್ಲ. ಅರ್ಘ್ಯಾದಿಗಳನ್ನಿತ್ತು ಸತ್ಕರಿಸಲು ಅರ್ಹರಾದ ಪೂಜ್ಯರನ್ನೂ, ಮಾನ್ಯರನ್ನೂ, ಭಕ್ತರನ್ನೂ, ಗುರುಗಳನ್ನೂ, ಸಂಬಂಧಿ-ಬಾಂಧವರನ್ನೂ ಬಾಣಗಳಿಂದ ಸಂಹರಿಸಿದ ಕಾರಣದಿಂದ ಅವನು ನಿನ್ನ ಸಮೀಪಕ್ಕೆ ಬರುತ್ತಿಲ್ಲ.”
ಭೀಷ್ಮನು ಹೇಳಿದನು: “ಕೃಷ್ಣ! ಬ್ರಾಹ್ಮಣರಿಗೆ ದಾನ-ಅಧ್ಯಯನ-ತಪಸ್ಸುಗಳು ಹೇಗೆ ಧರ್ಮವೋ ಹಾಗೆ ಸಮರದಲ್ಲಿ ಶಸ್ತ್ರಗಳ ಮೂಲಕ ಸಂಹರಿಸುವುದು ಕ್ಷತ್ರಿಯರ ಧರ್ಮ! ಮಿಥ್ಯರಾಗಿ ನಡೆದುಕೊಳ್ಳುವ ಪಿತೃಗಳನ್ನು, ಪಿತಾಮಹರನ್ನು, ಪುತ್ರರನ್ನು, ಗುರುಗಳನ್ನು ಮತ್ತು ಸಂಬಂಧಿ-ಬಾಂಧವರನ್ನು ಯುದ್ಧದಲ್ಲಿ ಸಂಹರಿಸುವುದು ಅವನಿಗೆ ಧರ್ಮವೇ ಆಗಿದೆ. ಲುಬ್ಧರಾಗಿ ಒಪ್ಪಂದಗಳನ್ನು ತ್ಯಜಿಸುವ ಪಾಪಿ ಗುರುಗಳನ್ನೂ ಕೂಡ ಸಮರದಲ್ಲಿ ಸಂಹರಿಸುವ ಕ್ಷತ್ರಿಯನು ಧರ್ಮವಿದುವೇ ಆಗಿರುತ್ತಾನೆ. ಕ್ಷತ್ರಬಂಧುವು ರಣಕ್ಕೆ ಆಹ್ವಾನಿಸಿದಾಗ ನಿತ್ಯವೂ ಯುದ್ಧಮಾಡಬೇಕು. ಕ್ಷತ್ರಿಯನಿಗೆ ಯುದ್ಧವೇ ಧರ್ಮ, ಸ್ವರ್ಗ ಮತ್ತು ಯಶಸ್ಸನ್ನು ಉಂಟುಮಾಡುವು ಎಂದು ಮನುವೇ ಹೇಳಿದ್ದಾನೆ.”
ಭೀಷ್ಮನು ಹೀಗೆ ಹೇಳಲು ಧರ್ಮರಾಜ ಯುಧಿಷ್ಠಿರನು ವಿನೀತನಾಗಿ ಭೀಷ್ಮನ ಸಮೀಪಕ್ಕೆ ಹೋಗಿ ಅವನ ದೃಷ್ಟಿಗೆ ಅಭಿಮುಖನಾಗಿ ನಿಂತುಕೊಂಡನು. ಅವನು ಭೀಷ್ಮನ ಎರಡು ಪಾದಗಳನ್ನೂ ಹಿಡಿದು ನಮಸ್ಕರಿಸಿದನು. ಭೀಷ್ಮನು ಯುಧಿಷ್ಠಿರನ ನೆತ್ತಿಯನ್ನು ಆಘ್ರಾಣಿಸಿ, ಆಶ್ವಾಸನೆಯನ್ನಿತ್ತು, ಕುಳಿತುಕೊಳ್ಳಲು ಹೇಳಿದನು. ಆಗ ಸರ್ವಧನ್ವಿಗಳ ಋಷಭ ಗಾಂಗೇಯನು “ಮಗೂ! ನಿರ್ಭಯನಾಗಿ ಶ್ರದ್ಧೆಯಿಂದ ನನ್ನನ್ನು ಪ್ರಶ್ನಿಸು! ಭಯಪಡಬೇಡ!” ಎಂದನು.
ಹೃಷೀಕೇಶನಿಗೆ ನಮಸ್ಕರಿಸಿ, ಪಿತಾಮಹನಿಗೂ ಅಭಿವಾದನ ಮಾಡಿ, ಸರ್ವ ಗುರುಗಳ ಅನುಮತಿಯನ್ನೂ ಪಡೆದು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸಿದನು: “ಪಾರ್ಥಿವ! ರಾಜನಿಗೆ ರಾಜ್ಯವೇ ಪರಮ ಧರ್ಮವೆಂದು ಧರ್ಮವನ್ನು ತಿಳಿದವರು ಹೇಳುತ್ತಾರೆ. ಆದರೆ ಈ ರಾಜಧರ್ಮವು ಅತ್ಯಂತ ದೊಡ್ಡ ಹೊಣೆಯೆಂದು ನನಗನ್ನಿಸುತ್ತದೆ. ಅದರ ಕುರಿತು ಹೇಳು! ಪಿತಾಮಹ! ವಿಶೇಷವಾಗಿ ರಾಜಧರ್ಮಗಳ ಕುರಿತೇ ಹೇಳು! ಲೋಕದ ಸರ್ವ ಜೀವಿಗಳಿಗೆ ರಾಜಧರ್ಮಗಳೇ ಆಶ್ರಯಸ್ಥಾನವಾಗಿವೆ. ಕೌರವ! ರಾಜಧರ್ಮಗಳಲ್ಲಿ ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳೂ ಸೇರಿಕೊಂಡಿವೆ. ಸಕಲ ಮೋಕ್ಷಧರ್ಮವೂ ಇದರಲ್ಲಿಯೇ ಸೇರಿಕೊಂಡಿದೆ. ಕುದುರೆಗಳಿಗೆ ಕಡಿವಾಣಗಳು ಹೇಗೋ ಮತ್ತು ಆನೆಗೆ ಅಂಕುಶವು ಹೇಗೋ ಹಾಗೆ ರಾಜಧರ್ಮವು ಲೋಕವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ರಾಜರ್ಷಿಗಳು ನಡೆದುಕೊಂಡು ಬಂದಿರುವ ಈ ಧರ್ಮದ ವಿಷಯದಲ್ಲಿ ವಿಮೋಹಗೊಂಡರೆ ಲೋಕದ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ. ಎಲ್ಲವೂ ವ್ಯಾಕುಲಗೊಳ್ಳುತ್ತವೆ. ಸೂರ್ಯನು ಉದಯಿಸುತ್ತಿದ್ದಂತೆಯೇ ಅಮಂಗಳಕರ ಕತ್ತಲೆಯು ನಾಶವಾಗುವಂತೆ ರಾಜಧರ್ಮದಿಂದ ಲೋಕದ ಅಮಂಗಳಕರ ಅಪ್ರಕಾಶವಾದ ಮಾರ್ಗವು ದೂರವಾಗುತ್ತದೆ. ಪಿತಾಮಹ! ಭರತಶ್ರೇಷ್ಠ! ನೀನು ಬುದ್ಧಿವಂತರಲ್ಲಿಯೇ ಶ್ರೇಷ್ಠನಾಗಿರುವೆ! ಆದುದರಿಂದ ಮೊದಲು ನನಗೆ ರಾಜಧರ್ಮಗಳನ್ನು ತತ್ತ್ವಾರ್ಥಗಳೊಂದಿಗೆ ಹೇಳಿ ತಿಳಿಸು! ಪರಂತಪ! ಅನಂತರ ಆಗಮಗಳ ತತ್ತ್ವಗಳೆಲ್ಲವನ್ನೂ ಹೇಳು. ನೀನು ಪರಮ ಬುದ್ಧಿಯುಳ್ಳವನು ಎಂದು ವಾಸುದೇವನ ಅಭಿಪ್ರಾಯವಾಗಿದೆ!”
ಭೀಷ್ಮನು ಹೇಳಿದನು: “ಮಹತ್ತರ ಧರ್ಮಕ್ಕೆ ನಮಸ್ಕಾರ! ವಿಶ್ವದ ಸೃಷ್ಟಿಗೆ ಕಾರಣನಾದ ಕೃಷ್ಣನಿಗೆ ನಮಸ್ಕಾರ! ಬ್ರಾಹ್ಮಣರಿಗೆ ನಮಸ್ಕರಿಸಿ ಶಾಶ್ವತ ಧರ್ಮಗಳ ಕುರಿತು ಹೇಳುತ್ತೇನೆ. ಯುಧಿಷ್ಠಿರ! ನನ್ನಿಂದ ರಾಜಧರ್ಮಗಳ ಕುರಿತು ಸಂಪೂರ್ಣವಾಗಿ ಕೇಳು. ನಾನು ಹೇಳುವಾಗ ಕೂಡ ಮಧ್ಯದಲ್ಲಿ ನೀನು ಬೇಕಾದ ಪ್ರಶ್ನೆಗಳನ್ನು ಕೇಳಬಹುದು! ಕುರುಶ್ರೇಷ್ಠ! ಮೊಟ್ಟಮೊದಲನೆಯದಾಗಿ ರಾಜನು ಯಥಾವಿಧಿಯಾಗಿ ದೇವತೆಗಳನ್ನು ಮತ್ತು ದ್ವಿಜರನ್ನು ತೃಪ್ತಿಗೊಳಿಸುವಂತೆ ನಡೆದುಕೊಳ್ಳಬೇಕು.”
ಬಳಿಕ ಭೀಷ್ಮನು ಯುಧಿಷ್ಠಿರನಿಗೆ ರಾಜಧರ್ಮವನ್ನು ಸಂಪೂರ್ಣವಾಗಿ ತಿಳಿಸಿದನು. ಹಾಗೆಯೇ ನಂತರದ ಐದು ದಿನಗಳಲ್ಲಿ ಅವನು ಧರ್ಮರಾಜನಿಗೆ ಆಪದ್ಧರ್ಮ, ಮೋಕ್ಷಧರ್ಮ ಮತ್ತು ದಾನ-ಧರ್ಮಗಳ ಕುರಿತು ಉಪದೇಶಿಸಿದನು.