ರಣದಲ್ಲಿ ಭೀಷ್ಮನು ಹತನಾದುದನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು
ಯುದ್ಧಪ್ರಾರಂಭವಾದ ಹತ್ತನೆಯ ದಿನದ ರಾತ್ರಿ ಭೂತ-ಭವ್ಯ-ಭವಿಷ್ಯಗಳೆಲ್ಲವನ್ನೂ ತಿಳಿದಿದ್ದ ಪ್ರತ್ಯಕ್ಷದರ್ಶೀ ಗಾವಲ್ಗಣೀ ಸಂಜಯನು ರಣಭೂಮಿಯಿಂದ ಬಂದನು. ದುಃಖಿತನಾಗಿ ಯೋಚನೆಯಲ್ಲಿ ಮುಳುಗಿದ್ದ ಧೃತರಾಷ್ಟ್ರನಿಗೆ ಭಾರತ ಪಿತಾಮಹ ಭೀಷ್ಮನು ಹತನಾದನೆಂದು ಹೇಳಿದನು. “ಮಹಾರಾಜ! ನಿನಗೆ ನಮಸ್ಕಾರ. ನಾನು ಸಂಜಯ. ಭರತರ ಪಿತಾಮಹ ಶಾಂತನವ ಭೀಷ್ಮನು ಹತನಾದನು. ಸರ್ವಯೋಧರಲ್ಲಿ ಶ್ರೇಷ್ಠನಾದ, ಸರ್ವ ಧನುಷ್ಮತರ ಧಾಮ ಕುರುಪಿತಾಮಹನು ಇಂದು ಶರತಲ್ಪಗತನಾಗಿದ್ದಾನೆ. ಯಾರ ವೀರ್ಯವನ್ನು ಆಶ್ರಯಿಸಿ ನಿನ್ನ ಪುತ್ರರು ದ್ಯೂತವನ್ನಾಡಿದ್ದರೋ ಆ ಭೀಷ್ಮನು ಯುದ್ಧದಲ್ಲಿ ಶಿಖಂಡಿಯಿಂದ ಹತನಾಗಿ ಮಲಗಿದ್ದಾನೆ. ಕಾಶಿಪುರಿಯಲ್ಲಿ ಮಹಾಮೃಧದಲ್ಲಿ ಸೇರಿದ್ದ ಎಲ್ಲ ಪೃಥಿವೀಪಾಲರನ್ನೂ ಒಬ್ಬನೇ ರಥದಲ್ಲಿದ್ದು ಗೆದ್ದ ಮಹಾರಥಿ, ಜಾಮದಗ್ನಿ ರಾಮನಿಗೂ ರಣದಲ್ಲಿ ಅಯೋಧ್ಯನಾದ ವಸುಸಂಭವ, ಜಾಮದಗ್ನಿಯಿಂದ ಹತನಾಗದೇ ಇದ್ದ ಭೀಷ್ಮನು ಇಂದು ಶಿಖಂಡಿಯಿಂದ ಹತನಾಗಿದ್ದಾನೆ. ಶೌರ್ಯದಲ್ಲಿ ಮಹೇಂದ್ರಸದೃಶನಾದ, ಸ್ಥೈರ್ಯದಲ್ಲಿ ಹಿಮಾಚಲದಂತಿರುವ, ಗಾಂಭೀರ್ಯದಲ್ಲಿ ಸಮುದ್ರದಂತಿರುವ, ಸಹಿಷ್ಣುತ್ವದಲ್ಲಿ ಧರೆಯ ಸಮನಾಗಿರುವ, ಆ ಶರದಂಷ್ಟ್ರ, ಧನುರ್ವಕ್ತ್ರ, ಖಡ್ಗಜಿಹ್ವ, ದುರಾಸದ, ನರಸಿಂಹ ನಿನ್ನ ಪಿತ ಭೀಷ್ಮನು ಇಂದು ಪಾಂಚಾಲ್ಯನಿಂದ ಹೊಡೆದುರಿಳಿಸಲ್ಪಟ್ಟಿದ್ದಾನೆ. ರಣದಲ್ಲಿ ಮುನ್ನುಗ್ಗುತ್ತಿರುವ ಯಾರನ್ನು ನೋಡಿ ಪಾಂಡವರ ಮಹಾಸೇನೆಯು ಸಿಂಹವನ್ನು ನೋಡಿದ ಗೋವುಗಳ ಹಿಂಡಿನಂತೆ ಭಯೋದ್ವಿಗ್ನವಾಗಿ ನಡುಗುತ್ತಿತ್ತೋ ಆ ಭೀಷ್ಮನು ನಿನ್ನ ಸೇನೆಗಳನ್ನು ಹತ್ತು ಹಗಲು-ರಾತ್ರಿ ಪರಿರಕ್ಷಿಸಿ, ಸುದುಷ್ಕರ ಕೃತ್ಯಗಳನ್ನೆಸಗಿ ಅಸ್ತನಾದ ಆದಿತ್ಯನಂತೆ ಹೊರಟುಹೋದನು. ಶಕ್ರನಂತೆ ಸಹಸ್ರಾರು ಬಾಣಗಳನ್ನು ಸುರಿಸಿ, ಯುದ್ಧದ ಹತ್ತು ದಿನಗಳ ಪ್ರತಿದಿನವೂ ಹತ್ತು ಸಾವಿರ ಯೋಧರನ್ನು ಸಂಹರಿಸಿ ಭೀಷ್ಮನು ಅನರ್ಹನಾಗಿದ್ದರೂ, ನಿನ್ನ ದುರ್ಮಂತ್ರದಿಂದ ಭಿರುಗಾಳಿಗೆ ಸಿಲುಕಿದ ಮರದಂತೆ ಕೆಳಗುರಿಳಿಸಲ್ಪಟ್ಟು ಭೂಮಿಯ ಮೇಲೆ ಮಲಗಿದ್ದಾನೆ.”
ಧೃತರಾಷ್ಟ್ರನು ಹೇಳಿದನು: “ಕುರುಗಳ ಋಷಭ ಭೀಷ್ಮನು ಶಿಖಂಡಿಯಿಂದ ಹೇಗೆ ಹತನಾದನು? ವಾಸವೋಪಮನಾದ ನನ್ನ ಪಿತನು ರಥದಿಂದ ಹೇಗೆ ಬಿದ್ದನು? ಸಂಜಯ! ತಂದೆಗಾಗಿ ಬ್ರಹ್ಮಚರ್ಯವನ್ನು ಪಾಲಿಸಿದ, ದೇವತೆಗಳಂತೆ ಬಲಶಾಲಿಯಾಗಿದ್ದ ಭೀಷ್ಮನಿಲ್ಲದೇ ನನ್ನ ಪುತ್ರರು ಹೇಗಿದ್ದಾರೆ? ಆ ಮಹಾಸತ್ವ, ಮಹೇಷ್ವಾಸ, ಮಹಾಬಲಿ, ಮಹಾರಥಿ, ನರವ್ಯಾಘ್ರನು ಹತನಾಗಲು ಅವರ ಮನಸ್ಸು ಹೇಗಿದೆ? ಕುರುಗಳ ಋಷಭ, ವೀರ, ಯುದ್ಧದಲ್ಲಿ ಕಂಪಿಸದ, ಪುರುಷರ್ಷಭನು ಹತನಾಗಿದ್ದಾನೆಂದು ನನಗೆ ಏನು ಹೇಳಿದೆಯೋ ಅದರಿಂದ ನನ್ನನ್ನು ಪರಮ ದುಃಖವು ಆವರಿಸಿದೆ. ಅವನನ್ನು ಯಾರು ಅನುಸರಿಸಿ ಹೋಗುತ್ತಿದ್ದರು? ಯಾರು ಮುಂದಿದ್ದರು? ಯಾರು ಅವನ ಪಕ್ಕದಲ್ಲಿದ್ದರು? ಮತ್ತು ಯಾರು ಅವನೊಂದಿಗೆ ಹೋಗುತ್ತಿದ್ದರು? ಶತ್ರುಗಳ ಸೇನೆಯನ್ನು ಹೊಗುವಾಗ ಆ ರಥಶಾರ್ದೂಲ, ಅಚ್ಯುತ, ಕ್ಷತ್ರಿಯರ್ಷಭನನ್ನು ಯಾವ ಶೂರರು ಹಿಂದಿನಿಂದ ರಕ್ಷಣೆಗೆಂದು ಅನುಸರಿಸುತ್ತಿದ್ದರು? ಸೂರ್ಯನು ಕತ್ತಲೆಯನ್ನು ಕಳೆಯುವಂತೆ ಶತ್ರುಸೈನ್ಯವನ್ನು ಕಳೆಯುತ್ತಿರುವ ಆ ಅಮಿತ್ರಹ, ಸಹಸ್ರರಶ್ಮಿಪ್ರತಿಮನು ಶತ್ರುಗಳಲ್ಲಿ ಭಯವನ್ನು ತಂದು ರಣದಲ್ಲಿ ಕೌರವಶಾಸನದಂತೆ ದುಷ್ಕರ ಕರ್ಮಗಳನ್ನು ಮಾಡಿದನು. ಯುದ್ಧದಲ್ಲಿ ಸೇನೆಗಳನ್ನು ಮುತ್ತಿಗೆ ಹಾಕುವಾಗ ದುರಾಧರ್ಷ ಕೃತ್ಯವನ್ನು ಮಾಡುವ ಅವನನ್ನು ಯಾರು ತಡೆಗಟ್ಟಿ ಕೊನೆಗೊಳಿಸಿದರು? ಪಾಂಡವರು ಯುದ್ಧದಲ್ಲಿ ಶಾಂತನವನನ್ನು ಹೇಗೆ ತಡೆದರು? ಸೇನೆಗಳನ್ನು ಕಡಿಯುತ್ತಿರುವ ಆ ಶರದಂಷ್ಟ್ರ, ತರಸ್ವಿ, ಚಾಪದಂತೆ ಬಾಯಿತೆರೆದುಕೊಂಡಿದ್ದ, ಘೋರ ಖಡ್ಗದಂಥಹ ನಾಲಗೆಯುಳ್ಳ, ದುರಾಸದ, ಅನ್ಯರನ್ನು ಮೀರಿಸಿದ್ದ, ಪುರುಷವ್ಯಾಘ್ರ, ಹ್ರೀಮಂತ, ಅಪರಾಜಿತ ಆ ಅಜಿತನನ್ನು ಯುದ್ಧದಲ್ಲಿ ಕೌಂತೇಯರು ಹೇಗೆ ಉರುಳಿಸಿದರು?”
ಧೃತರಾಷ್ಟ್ರನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಸಂಜಯನು ಮಹಾಭಾರತ ಯುದ್ಧದ ಮೊದಲ ಹತ್ತು ದಿನಗಳ ಆಗುಹೋಗುಗಳನ್ನು ವರ್ಣಿಸತೊಡಗಿದನು.
ಸಂಜಯನು ಹೇಳಿದನು: “ಮಹಾರಾಜ! ಅರ್ಹನಾಗಿರುವ ನೀನು ಕೇಳುತ್ತಿರುವ ಈ ಪ್ರಶ್ನೆಗಳು ನಿನಗೆ ತಕ್ಕುದಾಗಿಯೇ ಇವೆ. ಆದರೆ ಈ ದೋಷವನ್ನು ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ. ತನ್ನ ದುಶ್ಚರಿತಗಳಿಂದಾಗಿ ಅಶುಭವನ್ನು ಪಡೆದ ನರನು ಅದು ಅನ್ಯನು ಮಾಡಿದ್ದು ಎಂದು ಹೊರಿಸಬಾರದು. ಇತರರಿಗೆ ಯಾರು ಎಲ್ಲ ರೀತಿಯಲ್ಲಿ ನಿಂದನೀಯವಾಗಿ ನಡೆದುಕೊಳ್ಳುತ್ತಾನೋ ಅದನ್ನು ಮಾಡಿದವನು ಸರ್ವಲೋಕಗಳ ನಿಂದನೆಗೆ ಮತ್ತು ವಧೆಗೆ ಅರ್ಹ. ಮೋಸಗಳನ್ನು ಅರಿಯದೇ ಇದ್ದ ಪಾಂಡವರು ನಿನ್ನನ್ನು ನೋಡಿಕೊಂಡು ಅಮಾತ್ಯರೊಂದಿಗೆ ಕ್ಷಾಂತರಾಗಿ ಬಹುಕಾಲ ವನದಲ್ಲಿ ಅನುಭವಿಸಿದರು. ಯೋಗಬಲದಿಂದ ನಾನು ಪ್ರತ್ಯಕ್ಷವಾಗಿ ಕಂಡ ಕುದುರೆಗಳ, ಆನೆಗಳ, ಅಮಿತೌಜಸ ಶೂರರ ದೃಶ್ಯಗಳನ್ನು ನೋಡಿರುವುದನ್ನು ಕೇಳು. ಮನಸ್ಸನ್ನು ಶೋಕಕ್ಕೊಳಪಡಿಸಬೇಡ. ನರಾಧಿಪ! ಇದು ಹೀಗೆಯೇ ಆಗುತ್ತದೆಯೆಂದು ಹಿಂದೆಯೇ ದೈವ ನಿರ್ಧಿತವಾಗಿತ್ತು. ಯಾರ ಪ್ರಸಾದದಿಂದ ನನಗೆ ಈ ದಿವ್ಯವಾದ ಅನುತ್ತಮ ಜ್ಞಾನವು ಪ್ರಾಪ್ತವಾಯಿತೋ ಆ ನಿನ್ನ ತಂದೆ ಧೀಮತ ಪಾರಶರ್ಯನಿಗೆ ನಮಸ್ಕರಿಸುತ್ತೇನೆ. ಅತೀಂದ್ರಿಯ ದೃಷ್ಟಿ, ದೂರದ್ದನ್ನೂ ಕೇಳುವ, ಇನ್ನೊಬ್ಬರ ಚಿತ್ತವನ್ನು – ಅತೀತವನ್ನೂ ಅನಾಗತವನ್ನೂ – ತಿಳಿಯುವ ವಿಶೇಷ ಜ್ಞಾನ, ಸದಾ ಆಕಾಶದಲ್ಲಿಯೂ ಸಂಚರಿಸಬಲ್ಲ, ಯುದ್ಧದಲ್ಲಿ ಶಸ್ತ್ರಗಳು ತಾಗದ ವರದಾನವನ್ನು ನಾನು ಆ ಮಹಾತ್ಮನಿಂದ ಪಡೆದೆ. ವಿಚಿತ್ರವಾದ, ಪರಮಾದ್ಭುತವಾದ, ಲೋಮಹರ್ಷಣವಾದ ಈ ಭಾರತರ ಮಹಾಯುದ್ಧವನ್ನು ನಡೆದ ಹಾಗೆ ನನ್ನಿಂದ ಕೇಳು.”