Anushasana Parva: Chapter 50

ಅನುಶಾಸನ ಪರ್ವ: ದಾನಧರ್ಮ ಪರ್ವ

೫೦

ಚ್ಯವನೋಪಾಖ್ಯಾನ

ನೋಡುವುದರಿಂದ ಮತ್ತು ಸಹವಾಸದಿಂದ ಸ್ನೇಹವು ಹೇಗೆ ಉಂಟಾಗುತ್ತದೆ? ಮತ್ತು ಗೋವುಗಳ ಮಹಾಭಾಗ್ಯವು ಏನು? ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ನಹುಷ ಮತ್ತು ಚ್ಯವನರ ಸಂವಾದವನ್ನು ಉದಾಹರಿಸಲು ಪ್ರಾರಂಭಿಸಿದುದು; ಚ್ಯವನನು ನೀರಿನಲ್ಲಿ ತಪಸ್ಸನ್ನಾಚರಿಸಿದುದು (೧-೧೧). ಮೀನನ್ನು ಹಿಡಿಯಲು ಬೆಸ್ತರು ಬಲೆಗಳನ್ನು ಬೀಸಲು, ಮೀನಿನೊಂದಿಗೆ ಚ್ಯವನನನ್ನೂ ಹಿಡಿದು ನೀರಿನಿಂದ ಮೇಲಕ್ಕೆತ್ತಿದುದು (೧೨--೨೨). ಮುನಿಯನ್ನು ನೋಡಿ ಬೆದರಿದ ಬೆಸ್ತರು ನಹುಷನಿಗೆ ವಿಷಯವನ್ನು ತಿಳಿಸಿದುದು (೨೩-೨೬).   

13050001 ಯುಧಿಷ್ಠಿರ ಉವಾಚ|

13050001a ದರ್ಶನೇ ಕೀದೃಶಃ ಸ್ನೇಹಃ ಸಂವಾಸೇ ಚ ಪಿತಾಮಹ|

13050001c ಮಹಾಭಾಗ್ಯಂ ಗವಾಂ ಚೈವ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ನೋಡುವುದರಿಂದ ಮತ್ತು ಸಹವಾಸದಿಂದ ಸ್ನೇಹವು ಹೇಗೆ ಉಂಟಾಗುತ್ತದೆ? ಹಾಗೆಯೇ ಗೋವುಗಳ ಮಹಾಭಾಗ್ಯವು ಏನು? ಪಿತಾಮಹ! ಅದನ್ನು ನನಗೆ ಹೇಳು.”

13050002 ಭೀಷ್ಮ ಉವಾಚ

13050002a ಹಂತ ತೇ ಕಥಯಿಷ್ಯಾಮಿ ಪುರಾವೃತ್ತಂ ಮಹಾದ್ಯುತೇ|

13050002c ನಹುಷಸ್ಯ ಚ ಸಂವಾದಂ ಮಹರ್ಷೇಶ್ಚ್ಯವನಸ್ಯ ಚ||

ಭೀಷ್ಮನು ಹೇಳಿದನು: “ಮಹಾದ್ಯುತೇ! ನಿಲ್ಲು! ಹಿಂದೆ ನಡೆದ ನಹುಷ ಮತ್ತು ಮಹರ್ಷಿ ಚ್ಯವನರ ಸಂವಾದವನ್ನು ಹೇಳುತ್ತೇನೆ.

13050003a ಪುರಾ ಮಹರ್ಷಿಶ್ಚ್ಯವನೋ ಭಾರ್ಗವೋ ಭರತರ್ಷಭ|

13050003c ಉದವಾಸಕೃತಾರಂಭೋ ಬಭೂವ ಸುಮಹಾವ್ರತಃ||

ಭರತರ್ಷಭ! ಹಿಂದೆ ಸುಮಹಾವ್ರತ ಮಹರ್ಷಿ ಭಾರ್ಗವ ಚ್ಯವನನು ನೀರಿನಲ್ಲಿ ವಾಸಿಸಲು ಪ್ರಾರಂಭಿಸಿದನು.

13050004a ನಿಹತ್ಯ ಮಾನಂ ಕ್ರೋಧಂ ಚ ಪ್ರಹರ್ಷಂ ಶೋಕಮೇವ ಚ|

13050004c ವರ್ಷಾಣಿ ದ್ವಾದಶ ಮುನಿರ್ಜಲವಾಸೇ ಧೃತವ್ರತಃ||

ಆ ಧೃತವ್ರತ ಮುನಿಯು ಹನ್ನೆರಡು ವರ್ಷಗಳು ಮಾನ, ಕ್ರೋಧ, ಹರ್ಷ ಮತ್ತು ಶೋಕಗಳನ್ನು ಪರಿತ್ಯಜಿಸಿ ನೀರಿನಲ್ಲಿ ವಾಸಿಸಿದನು.

13050005a ಆದಧತ್ಸರ್ವಭೂತೇಷು ವಿಸ್ರಂಭಂ ಪರಮಂ ಶುಭಮ್|

13050005c ಜಲೇಚರೇಷು ಸತ್ತ್ವೇಷು ಶೀತರಶ್ಮಿರಿವ ಪ್ರಭುಃ||

ಶೀತರಶ್ಮಿ ಚಂದ್ರನಂತೆ ಆ ಪ್ರಭುವು ಜಲದಲ್ಲಿ ಸಂಚರಿಸುತ್ತಿದ್ದ ಸರ್ವಭೂತಗಳೊಡನೆ ಮತ್ತು ಸತ್ತ್ವಗಳೊಡನೆ ತನ್ನ ಪರಮ ಶುಭ ಸಂಪೂರ್ಣ ವಿಶ್ವಾಸವನ್ನು ಪಡೆದುಕೊಂಡಿದ್ದನು.

13050006a ಸ್ಥಾಣುಭೂತಃ ಶುಚಿರ್ಭೂತ್ವಾ ದೈವತೇಭ್ಯಃ ಪ್ರಣಮ್ಯ ಚ|

13050006c ಗಂಗಾಯಮುನಯೋರ್ಮಧ್ಯೇ ಜಲಂ ಸಂಪ್ರವಿವೇಶ ಹ||

ಶುಚಿರ್ಭೂತನಾಗಿ ದೇವತೆಗಳಿಗೆ ವಂದಿಸಿ ಅವನು ಗಂಗಾ-ಯಮುನೆಯರ ಮಧ್ಯದ ನೀರನ್ನು ಪ್ರವೇಶಿಸಿ ಸ್ಥಾಣುವಿನಂತೆ ನಿಶ್ಚಲನಾಗಿ ನಿಂತುಕೊಂಡನು.

13050007a ಗಂಗಾಯಮುನಯೋರ್ವೇಗಂ ಸುಭೀಮಂ ಭೀಮನಿಃಸ್ವನಮ್|

13050007c ಪ್ರತಿಜಗ್ರಾಹ ಶಿರಸಾ ವಾತವೇಗಸಮಂ ಜವೇ||

ಭಯಂಕರವಾಗಿ ಭೋರ್ಗರೆಯುತ್ತಿದ್ದ ಅತ್ಯಂತ ಭಯಂಕರವಾದ ಮತ್ತು ವೇಗದಲ್ಲಿ ವಾಯುವಿನ ವೇಗಕ್ಕೆ ಸಮನಾಗಿದ್ದ ಗಂಗಾ-ಯಮುನೆಯರ ವೇಗವನ್ನು ಅವನು ತನ್ನ ಶಿರಸ್ಸಿನಿಂದ ತಡೆದುಕೊಂಡಿದ್ದನು.

13050008a ಗಂಗಾ ಚ ಯಮುನಾ ಚೈವ ಸರಿತಶ್ಚಾನುಗಾಸ್ತಯೋಃ|

13050008c ಪ್ರದಕ್ಷಿಣಮೃಷಿಂ ಚಕ್ರುರ್ನ ಚೈನಂ ಪರ್ಯಪೀಡಯನ್||

ಆದರೆ ಗಂಗೆ, ಯಮುನೆ ಮತ್ತು ಅವರನ್ನು ಸೇರಿದ ಇತರ ನದಿಗಳು ಆ ಋಷಿಯನ್ನು ಪ್ರದಕ್ಷಿಣೆ ಮಾಡಿ ಹೋಗುತ್ತಿದ್ದವೇ ಹೊರತು ಅವನನ್ನು ಪೀಡಿಸುತ್ತಿರಲಿಲ್ಲ.

13050009a ಅಂತರ್ಜಲೇ ಸ ಸುಷ್ವಾಪ ಕಾಷ್ಠಭೂತೋ ಮಹಾಮುನಿಃ|

13050009c ತತಶ್ಚೋರ್ಧ್ವಸ್ಥಿತೋ ಧೀಮಾನಭವದ್ಭರತರ್ಷಭ||

ಭರತರ್ಷಭ! ಆ ಧೀಮಂತ ಮಹಾಮುನಿಯು ಒಮ್ಮೆ ಕಾಷ್ಠದಂತೆ ನೀರಿನ ಒಳಗೆ ಮಲಗುತ್ತಿದ್ದನು ಮತ್ತು ಇನ್ನೊಮ್ಮೆ ನೀರಿನ ಮೇಲೆ ನಿಲ್ಲುತ್ತಿದ್ದನು.

13050010a ಜಲೌಕಸಾಂ ಸ ಸತ್ತ್ವಾನಾಂ ಬಭೂವ ಪ್ರಿಯದರ್ಶನಃ|

13050010c ಉಪಾಜಿಘ್ರಂತ ಚ ತದಾ ಮತ್ಸ್ಯಾಸ್ತಂ ಹೃಷ್ಟಮಾನಸಾಃ|

ಅವನು ಜಲವಾಸೀ ಸತ್ತ್ವಗಳ ಪ್ರಿಯದರ್ಶನನಾದನು. ಮೀನುಗಳು ಹೃಷ್ಟಮಾನಸರಾಗಿ ಅವನ ತುಟಿಗಳನ್ನು ಆಘ್ರಾಣಿಸುತ್ತಿದ್ದವು.

13050010e ತತ್ರ ತಸ್ಯಾಸತಃ ಕಾಲಃ ಸಮತೀತೋಽಭವನ್ಮಹಾನ್||

13050011a ತತಃ ಕದಾ ಚಿತ್ಸಮಯೇ ಕಸ್ಮಿಂಶ್ಚಿನ್ಮತ್ಸ್ಯಜೀವಿನಃ|

13050011c ತಂ ದೇಶಂ ಸಮುಪಾಜಗ್ಮುರ್ಜಾಲಹಸ್ತಾ ಮಹಾದ್ಯುತೇ||

ಹೀಗೆ ಅವನು ಇರುತ್ತಾ ಬಹಳ ಸಮಯವು ಕಳೆಯಿತು. ಮಹಾದ್ಯುತೇ! ಅನಂತರ ಒಮ್ಮೆ ಮತ್ಸ್ಯಗಳನ್ನು ಹಿಡಿದು ಜೀವನಮಾಡುವ ಕೆಲವು ಬೆಸ್ತರು ಬಲೆಗಳನ್ನು ಹಿಡಿದುಕೊಂಡು ಆ ಪ್ರದೇಶಕ್ಕೆ ಬಂದರು.

13050012a ನಿಷಾದಾ ಬಹವಸ್ತತ್ರ ಮತ್ಸ್ಯೋದ್ಧರಣನಿಶ್ಚಿತಾಃ|

13050012c ವ್ಯಾಯತಾ ಬಲಿನಃ ಶೂರಾಃ ಸಲಿಲೇಷ್ವನಿವರ್ತಿನಃ|

13050012e ಅಭ್ಯಾಯಯುಶ್ಚ ತಂ ದೇಶಂ ನಿಶ್ಚಿತಾ ಜಾಲಕರ್ಮಣಿ||

ಮೀನುಗಳನ್ನು ಹಿಡಿಯಲು ನಿಶ್ಚಯಿಸಿ ಅಲ್ಲಿಗೆ ಅನೇಕ ಬೆಸ್ತರು ಆಗಮಿಸಿದರು. ಅವರು ಬಲಿಷ್ಟರೂ, ಶೂರರೂ ಆಗಿದ್ದರು ಮತ್ತು ಮೀನುಗಳನ್ನು ಹಿಡಿಯದೇ ನದಿಯಿಂದ ಹಿಂದಿರುಗದವರಾಗಿದ್ದರು. ಬಲೆಗಳನ್ನು ಬೀಸಲು ಆ ಪ್ರದೇಶಕ್ಕೆ ಆಗಮಿಸಿದರು.

13050013a ಜಾಲಂ ಚ ಯೋಜಯಾಮಾಸುರ್ವಿಶೇಷೇಣ ಜನಾಧಿಪ|

13050013c ಮತ್ಸ್ಯೋದಕಂ ಸಮಾಸಾದ್ಯ ತದಾ ಭರತಸತ್ತಮ||

ಜನಾಧಿಪ! ಭರತಸತ್ತಮ! ಮೀನುಗಳಿದ್ದ ಆ ನದಿಯನ್ನು ಸಮೀಪಿಸಿ ಅವರು ವಿಶೇಷವಾದ ಬಲೆಯನ್ನು ಬೀಸತೊಡಗಿದರು.

13050014a ತತಸ್ತೇ ಬಹುಭಿರ್ಯೋಗೈಃ ಕೈವರ್ತಾ ಮತ್ಸ್ಯಕಾಂಕ್ಷಿಣಃ|

13050014c ಗಂಗಾಯಮುನಯೋರ್ವಾರಿ ಜಾಲೈರಭ್ಯಕಿರಂಸ್ತತಃ||

ಮೀನನ್ನು ಹಿಡಿಯಲು ಬಯಸಿದ್ದ ಅವರು ಅನೇಕ ರೀತಿಯ ಉಪಾಯಗಳಿಂದ ಗಂಗಾ-ಯಮುನೆಯರ ಆ ನೀರಿನಲ್ಲಿ ಬಲೆಯನ್ನು ಬೀಸಿ ಹರಡಿದರು.

13050015a ಜಾಲಂ ಸುವಿತತಂ ತೇಷಾಂ ನವಸೂತ್ರಕೃತಂ ತಥಾ|

13050015c ವಿಸ್ತಾರಾಯಾಮಸಂಪನ್ನಂ ಯತ್ತತ್ರ ಸಲಿಲೇ ಕ್ಷಮಮ್||

ಅವರು ಬೀಸಿದ ಬಲೆಗಳು ಹೊಸ ದಾರಗಳಿಂದ ಮಾಡಲ್ಪಟ್ಟಿದ್ದು, ವಿಸ್ತಾರವಾಗಿಯೂ ಅಗಲವಾಗಿಯೂ ನೀರನ್ನು ಹಿಡಿಯಲು ಗಟ್ಟಿಯಾಗಿಯೂ ಇದ್ದವು.

13050016a ತತಸ್ತೇ ಸುಮಹಚ್ಚೈವ ಬಲವಚ್ಚ ಸುವರ್ತಿತಮ್|

13050016c ಪ್ರಕೀರ್ಯ ಸರ್ವತಃ ಸರ್ವೇ ಜಾಲಂ ಚಕೃಷಿರೇ ತದಾ||

ಅನಂತರ ಎಲ್ಲರೂ ಸೇರಿ ಆ ಉತ್ತಮವಾಗಿ ನೇಯಲ್ಪಟ್ಟಿದ್ದ ಗಟ್ಟಿಯಾದ ಮತ್ತು ವಿಸ್ತಾರವಾಗಿದ್ದ ಆ ಬಲೆಯನ್ನು ಎಲ್ಲಕಡೆಗಳಿಂದ ಹಿಡಿದು ಎಳೆದು ಮೇಲಕ್ಕೆತ್ತಿದರು.

13050017a ಅಭೀತರೂಪಾಃ ಸಂಹೃಷ್ಟಾಸ್ತೇಽನ್ಯೋನ್ಯವಶವರ್ತಿನಃ|

13050017c ಬಬಂಧುಸ್ತತ್ರ ಮತ್ಸ್ಯಾಂಶ್ಚ ತಥಾನ್ಯಾನ್ಜಲಚಾರಿಣಃ||

ಹಾಗೆ ಸಂಹೃಷ್ಟರಾಗಿದ್ದ ಅ ಅನ್ಯೋನ್ಯರ ವಶವರ್ತಿಗಳು ನಿರ್ಭೀತರಾಗಿ ಅದರೊಳಗೆ ಮೀನುಗಳು ಮತ್ತು ಅನ್ಯ ಜಲಚಾರಿಣಿಗಳನ್ನು ಬಂಧಿಸಿದ್ದರು.

13050018a ತಥಾ ಮತ್ಸ್ಯೈಃ ಪರಿವೃತಂ ಚ್ಯವನಂ ಭೃಗುನಂದನಮ್|

13050018c ಆಕರ್ಷಂತ ಮಹಾರಾಜ ಜಾಲೇನಾಥ ಯದೃಚ್ಚಯಾ||

ಮಹಾರಾಜ! ಹಾಗೆಯೇ ಮೀನುಗಳಿಂದ ಪರಿವೃತನಾಗಿದ್ದ ಭೃಗುನಂದನ ಚ್ಯವನನನ್ನೂ ನೀರಿನಿಂದ ಮೇಲಕ್ಕೆತ್ತಿದರು.

13050019a ನದೀಶೈವಲದಿಗ್ಧಾಂಗಂ ಹರಿಶ್ಮಶ್ರುಜಟಾಧರಮ್|

13050019c ಲಗ್ನೈಃ ಶಂಖಗಣೈರ್ಗಾತ್ರೈಃ ಕೋಷ್ಠೈಶ್ಚಿತ್ರೈರಿವಾವೃತಮ್||

13050020a ತಂ ಜಾಲೇನೋದ್ಧೃತಂ ದೃಷ್ಟ್ವಾ ತೇ ತದಾ ವೇದಪಾರಗಮ್|

13050020c ಸರ್ವೇ ಪ್ರಾಂಜಲಯೋ ದಾಶಾಃ ಶಿರೋಭಿಃ ಪ್ರಾಪತನ್ಭುವಿ||

ನದಿಯ ಪಾಚಿಗಳಿಂದ ಅಂಗಾಂಗಳು ಲೇಪಿತವಾಗಿದ್ದ, ಗಡ್ಡ-ಜಟೆಗಳೂ ಹಸಿರು ಬಣ್ಣಕ್ಕೆ ತಿರುಗಿದ್ದ, ಶಂಖಗಳು ಶರೀರದ ತುಂಬಾ ಚುಚ್ಚಿಕೊಂಡು ಮುಳ್ಳುಹಂದಿಯಂತೆ ವಿಚಿತ್ರನಾಗಿ ಕಾಣುತ್ತಿದ್ದ ಆ ವೇದಪಾರಂಗತನು ನೀರಿನಿಂದ ಹೊರಬಂದುದನ್ನು ನೋಡಿ ಬೆಸ್ತರೆಲ್ಲರೂ ಕೈಗಳನ್ನು ಮುಗಿದು ತಲೆಬಾಗಿ ಭುವಿಯ ಮೇಲೆ ಬಿದ್ದರು.

13050021a ಪರಿಖೇದಪರಿತ್ರಾಸಾಜ್ಜಾಲಸ್ಯಾಕರ್ಷಣೇನ ಚ|

13050021c ಮತ್ಸ್ಯಾ ಬಭೂವುರ್ವ್ಯಾಪನ್ನಾಃ ಸ್ಥಲಸಂಕರ್ಷಣೇನ ಚ||

ನೀರಿನಿಂದ ಸೆಳೆಯಲ್ಪಟ್ಟು ಪರಿಖೇದ ಪರಿತ್ರಾಸಗೊಂಡ ಮೀನುಗಳು ಭೂಮಿಯಮೇಲೆ ಬೀಳುತ್ತಲೇ ವಿಲವಿಲನೆ ಒದ್ದಾಡಿದವು.

13050022a ಸ ಮುನಿಸ್ತತ್ತದಾ ದೃಷ್ಟ್ವಾ ಮತ್ಸ್ಯಾನಾಂ ಕದನಂ ಕೃತಮ್|

13050022c ಬಭೂವ ಕೃಪಯಾವಿಷ್ಟೋ ನಿಃಶ್ವಸಂಶ್ಚ ಪುನಃ ಪುನಃ||

ಮೀನುಗಳು ಆ ರೀತಿ ಒದ್ದಾಡುವುದನ್ನು ನೋಡಿದ ಮುನಿಯು ಕೃಪಯಾವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡತೊಡಗಿದನು.

13050023 ನಿಷಾದಾ ಊಚುಃ|

13050023a ಅಜ್ಞಾನಾದ್ಯತ್ಕೃತಂ ಪಾಪಂ ಪ್ರಸಾದಂ ತತ್ರ ನಃ ಕುರು|

13050023c ಕರವಾಮ ಪ್ರಿಯಂ ಕಿಂ ತೇ ತನ್ನೋ ಬ್ರೂಹಿ ಮಹಾಮುನೇ||

ನಿಷಾದರು ಹೇಳಿದರು: “ಮಹಾಮುನೇ! ಅಜ್ಞಾನದಲ್ಲಿ ಈ ಪಾಪಕಾರ್ಯವನ್ನು ಮಾಡಿಬಿಟ್ಟೆವು. ನಮ್ಮಮೇಲೆ ಪ್ರಸನ್ನನಾಗು. ನಿನಗೆ ಪ್ರಿಯವಾದುದನ್ನು ಏನು ಮಾಡಬೇಕು ಹೇಳು.””

13050024 ಭೀಷ್ಮ ಉವಾಚ|

13050024a ಇತ್ಯುಕ್ತೋ ಮತ್ಸ್ಯಮಧ್ಯಸ್ಥಶ್ಚ್ಯವನೋ ವಾಕ್ಯಮಬ್ರವೀತ್|

13050024c ಯೋ ಮೇಽದ್ಯ ಪರಮಃ ಕಾಮಸ್ತಂ ಶೃಣುಧ್ವಂ ಸಮಾಹಿತಾಃ||

ಭೀಷ್ಮನು ಹೇಳಿದನು: “ಇದನ್ನು ಕೇಳಿ ಮೀನುಗಳ ಮಧ್ಯೆ ಇದ್ದ ಚ್ಯವನನು ಹೇಳಿದನು: “ಇಂದು ನನ್ನ ಪರಮ ಅಪೇಕ್ಷೆ ಏನು ಎನ್ನುವುದನ್ನು ಏಕಾಗ್ರಚಿತ್ತರಾಗಿ ಕೇಳಿ.

13050025a ಪ್ರಾಣೋತ್ಸರ್ಗಂ ವಿಕ್ರಯಂ ವಾ ಮತ್ಸ್ಯೈರ್ಯಾಸ್ಯಾಮ್ಯಹಂ ಸಹ|

13050025c ಸಂವಾಸಾನ್ನೋತ್ಸಹೇ ತ್ಯಕ್ತುಂ ಸಲಿಲಾಧ್ಯುಷಿತಾನಿಮಾನ್||

ಮೀನುಗಳ ಜೊತೆಯಲ್ಲಿಯೇ ಬದುಕುತ್ತೇನೆ ಅಥವಾ ಸಾಯುತ್ತೇನೆ. ಬಹಳ ಕಾಲದಿಂದ ನೀರಿನಲ್ಲಿ ಇವುಗಳ ಜೊತೆಯೇ ವಾಸಿಸುತ್ತಿದ್ದೆನಾದುದರಿಂದ ಇವುಗಳನ್ನು ತ್ಯಜಿಸಲು ಬಯಸುವುದಿಲ್ಲ.”

13050026a ಇತ್ಯುಕ್ತಾಸ್ತೇ ನಿಷಾದಾಸ್ತು ಸುಭೃಶಂ ಭಯಕಂಪಿತಾಃ|

13050026c ಸರ್ವೇ ವಿಷಣ್ಣವದನಾ ನಹುಷಾಯ ನ್ಯವೇದಯನ್||

ಇದನ್ನು ಕೇಳಿದ ಬೆಸ್ತರು ಅತ್ಯಂತ ಭಯಕಂಪಿತರಾದರು. ಎಲ್ಲರ ಮುಖಗಳೂ ಕುಂದಿದವು. ಅವರು ನಹುಷನಿಗೆ ಎಲ್ಲವನ್ನೂ ನಿವೇದಿಸಿದರು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನೋಪಾಖ್ಯಾನೇ ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನೋಪಾಖ್ಯಾನ ಎನ್ನುವ ಐವತ್ತನೇ ಅಧ್ಯಾಯವು.

Image result for india motifs fish

 

Comments are closed.