ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ
೩
ಸಾತ್ಯಕಿಯ ಮಾತು
ಬಲದೇವನ ಮಾತಿಗೆ ಒಪ್ಪಿಕೊಳ್ಳದೇ ಸಿಟ್ಟಿನಿಂದ ಸಾತ್ಯಕಿಯು “ಅವರು ಸದಾ ಕ್ಷತ್ರಧರ್ಮರತನಾದ ರಾಜನನ್ನು ಕರೆದು ಮೋಸದಿಂದ ಅವನನ್ನು ಗೆದ್ದರು. ಹೀಗಿರುವಾಗ ಅವರಲ್ಲಿ ಅಂಥಹ ಪರಮ ಶುಭವಾದದ್ದು ಏನಿದೆ? ಪಣದಂತೆ ಸಂಪೂರ್ಣವಾಗಿ ವನವಾಸವನ್ನು ಪೂರೈಸಿ ಪಿತ್ರಾರ್ಜಿತ ರಾಜ್ಯವನ್ನು ಕೇಳುವಾಗ ಏಕೆ ಕೈಮುಗಿಯಬೇಕು?” ಎಂದೂ, ರಾಜ್ಯವನ್ನು ಹಿಂದಿರುಗಿಸಲು ಬಯಸದೇ ಇದ್ದ ಕೌರವರನ್ನು ಯುದ್ಧದಲ್ಲಿ ನಿರ್ಮೂಲನ ಮಾಡಬೇಕೆಂದೂ ಹೇಳುವುದು (೧-೨೩).
05003001 ಸಾತ್ಯಕಿರುವಾಚ|
05003001a ಯಾದೃಶಃ ಪುರುಷಸ್ಯಾತ್ಮಾ ತಾದೃಶಂ ಸಂಪ್ರಭಾಷತೇ|
05003001c ಯಥಾರೂಪೋಽಂತರಾತ್ಮಾ ತೇ ತಥಾರೂಪಂ ಪ್ರಭಾಷಸೇ||
ಸಾತ್ಯಕಿಯು ಹೇಳಿದನು: “ಪುರುಷನು ತಾನು ಹೇಗಿದ್ದಾನೋ ಹಾಗೆಯೇ ಮಾತನ್ನಾಡುತ್ತಾನೆ. ನಿನ್ನ ಅಂತರಾತ್ಮವು ಹೇಗಿದೆಯೋ ಹಾಗೆಯೇ ನೀನು ಮಾತನಾಡುತ್ತಿರುವೆ.
05003002a ಸಂತಿ ವೈ ಪುರುಷಾಃ ಶೂರಾಃ ಸಂತಿ ಕಾಪುರುಷಾಸ್ತಥಾ|
05003002c ಉಭಾವೇತೌ ದೃಢೌ ಪಕ್ಷೌ ದೃಶ್ಯೇತೇ ಪುರುಷಾನ್ಪ್ರತಿ||
ಶೂರ ಪುರುಷರಿದ್ದಂತೆ ಕಾಪುರುಷರೂ ಇರುತ್ತಾರೆ. ಸರಿಯಾಗಿ ತೋರಿಸಿಕೊಳ್ಳುವ ಈ ಎರಡು ದೃಢ ಪಂಗಡಗಳಲ್ಲಿ ಪುರುಷರನ್ನು ವಿಂಗಡಿಸಬಹುದು.
05003003a ಏಕಸ್ಮಿನ್ನೇವ ಜಾಯೇತೇ ಕುಲೇ ಕ್ಲೀಬಮಹಾರಥೌ|
05003003c ಫಲಾಫಲವತೀ ಶಾಖೇ ಯಥೈಕಸ್ಮಿನ್ವನಸ್ಪತೌ||
ಒಂದೇ ಮರದಲ್ಲಿ ಫಲಬರದೇ ಇರುವ ಮತ್ತು ಫಲಬಂದಿರುವ ಶಾಖೆಗಳಿರುವಂತೆ ಒಂದೇ ಕುಲದಲ್ಲಿ ದುರ್ಬಲ ಮತ್ತು ಮಹಾರಥರಿಬ್ಬರೂ ಹುಟ್ಟಬಹುದು.
05003004a ನಾಭ್ಯಸೂಯಾಮಿ ತೇ ವಾಕ್ಯಂ ಬ್ರುವತೋ ಲಾಂಗಲಧ್ವಜ|
05003004c ಯೇ ತು ಶೃಣ್ವಂತಿ ತೇ ವಾಕ್ಯಂ ತಾನಸೂಯಾಮಿ ಮಾಧವ||
ಲಾಂಗಲಧ್ವಜ! ಮಾಧವ! ನೀನು ಹೇಳಿದ ಮಾತನ್ನು ನಾನು ಟೀಕಿಸುತ್ತಿಲ್ಲ. ಆದರೆ ನಿನ್ನ ಮಾತನ್ನು ಕೇಳುತ್ತಿರುವವರನ್ನು ಟೀಕಿಸುತ್ತಿದ್ದೇನೆ.
05003005a ಕಥಂ ಹಿ ಧರ್ಮರಾಜಸ್ಯ ದೋಷಮಲ್ಪಮಪಿ ಬ್ರುವನ್|
05003005c ಲಭತೇ ಪರಿಷನ್ಮಧ್ಯೇ ವ್ಯಾಹರ್ತುಮಕುತೋಭಯಃ||
ಈ ಪರಿಷತ್ತಿನ ಮಧ್ಯದಲ್ಲಿ ಧರ್ಮರಾಜನಲ್ಲಿ ಸ್ವಲ್ಪವಾದರೂ ದೋಷವಿದೆಯೆಂದು ಸ್ವಲ್ಪವೂ ಅನುಮಾನಪಡದೇ ಹೇಳುವುದಕ್ಕೆ ಹೇಗೆ ಅನುಮತಿಯನ್ನು ನೀಡುತ್ತಿದ್ದೇವೆ?
05003006a ಸಮಾಹೂಯ ಮಹಾತ್ಮಾನಂ ಜಿತವಂತೋಽಕ್ಷಕೋವಿದಾಃ|
05003006c ಅನಕ್ಷಜ್ಞಾಂ ಯಥಾಶ್ರದ್ಧಂ ತೇಷು ಧರ್ಮಜಯಃ ಕುತಃ||
ಅಕ್ಷಕೋವಿದರು ಅಕ್ಷವನ್ನು ಅರಿಯದ ಈ ಮಹಾತ್ಮನನ್ನು ಕರೆದು ನಂಬಿಸಿ ಸೋಲಿಸಿದರು. ಹಾಗಿರುವಾಗ ಅದು ಎಲ್ಲಿಯ ಧರ್ಮಜಯವೆನಿಸಿಕೊಳ್ಳುತ್ತದೆ?
05003007a ಯದಿ ಕುಂತೀಸುತಂ ಗೇಹೇ ಕ್ರೀಡಂತಂ ಭ್ರಾತೃಭಿಃ ಸಹ|
05003007c ಅಭಿಗಮ್ಯ ಜಯೇಯುಸ್ತೇ ತತ್ತೇಷಾಂ ಧರ್ಮತೋ ಭವೇತ್||
ಒಂದುವೇಳೆ ಕುಂತೀಸುತನು ಮನೆಯಲ್ಲಿ ಸಹೋದರರೊಡನೆ ಆಡುತ್ತಿರುವಾಗ ಅವರು ಬಂದು ಅವನನ್ನು ಗೆದ್ದಿದ್ದೇ ಆಗಿದ್ದರೆ ಅದು ಧರ್ಮಜಯವಾಗುತ್ತಿತ್ತು.
05003008a ಸಮಾಹೂಯ ತು ರಾಜಾನಂ ಕ್ಷತ್ರಧರ್ಮರತಂ ಸದಾ|
05003008c ನಿಕೃತ್ಯಾ ಜಿತವಂತಸ್ತೇ ಕಿಂ ನು ತೇಷಾಂ ಪರಂ ಶುಭಂ||
ಆದರೆ ಅವರು ಸದಾ ಕ್ಷತ್ರಧರ್ಮರತನಾದ ರಾಜನನ್ನು ಕರೆದು ಮೋಸದಿಂದ ಅವನನ್ನು ಗೆದ್ದರು. ಹೀಗಿರುವಾಗ ಅವರಲ್ಲಿ ಅಂಥಹ ಪರಮ ಶುಭವಾದದ್ದು ಏನಿದೆ?
05003009a ಕಥಂ ಪ್ರಣಿಪತೇಚ್ಚಾಯಮಿಹ ಕೃತ್ವಾ ಪಣಂ ಪರಂ|
05003009c ವನವಾಸಾದ್ವಿಮುಕ್ತಸ್ತು ಪ್ರಾಪ್ತಃ ಪೈತಾಮಹಂ ಪದಂ||
ಪಣದಂತೆ ಸಂಪೂರ್ಣವಾಗಿ ವನವಾಸವನ್ನು ಪೂರೈಸಿ ಪಿತ್ರಾರ್ಜಿತ ರಾಜ್ಯವನ್ನು ಕೇಳುವಾಗ ಏಕೆ ಕೈಮುಗಿಯಬೇಕು?
05003010a ಯದ್ಯಯಂ ಪರವಿತ್ತಾನಿ ಕಾಮಯೇತ ಯುಧಿಷ್ಠಿರಃ|
05003010c ಏವಮಪ್ಯಯಮತ್ಯಂತಂ ಪರಾನ್ನಾರ್ಹತಿ ಯಾಚಿತುಂ||
ಒಂದುವೇಳೆ ಯುಧಿಷ್ಠಿರನು ಪರರ ಸಂಪತ್ತನ್ನು ಬಯಸಿದರೆ ಅವನು ಬೇಡುವುದು ಸರಿಯಲ್ಲ.
05003011a ಕಥಂ ಚ ಧರ್ಮಯುಕ್ತಾಸ್ತೇ ನ ಚ ರಾಜ್ಯಂ ಜಿಹೀರ್ಷವಃ|
05003011c ನಿವೃತ್ತವಾಸಾನ್ಕೌಂತೇಯಾನ್ಯಾಹುರ್ವಿದಿತಾ ಇತಿ||
ಕೌಂತೇಯರು ವನವಾಸವನ್ನು ಮುಗಿಸಿದರೂ ಅವರನ್ನು ಕಂಡುಹಿಡಿದಿದ್ದೇವೆ ಎಂದು ಹೇಳುವ ಅವರು ರಾಜ್ಯವನ್ನು ತಮ್ಮದಾಗಿಟ್ಟುಕೊಳ್ಳುವ ಆಸೆಯಲ್ಲಿಲ್ಲ ಮತ್ತು ಧರ್ಮಯುಕ್ತರಾಗಿದ್ದಾರೆ ಎಂದು ಹೇಗೆ ಹೇಳಬಹುದು?
05003012a ಅನುನೀತಾ ಹಿ ಭೀಷ್ಮೇಣ ದ್ರೋಣೇನ ಚ ಮಹಾತ್ಮನಾ|
05003012c ನ ವ್ಯವಸ್ಯಂತಿ ಪಾಂಡೂನಾಂ ಪ್ರದಾತುಂ ಪೈತೃಕಂ ವಸು||
ಭೀಷ್ಮ ಮತ್ತು ಮಹಾತ್ಮ ದ್ರೋಣರು ಅವರನ್ನು ಕರೆತಂದಿದ್ದರು. ಆದರೆ ಪಿತ್ರಾರ್ಜಿತ ಸಂಪತ್ತನ್ನು ಪಾಂಡವರಿಗೆ ಕೊಡಲು ಅವರು ಸಿದ್ಧರಿಲ್ಲ.
05003013a ಅಹಂ ತು ತಾಂ ಶಿತೈರ್ಬಾಣೈರನುನೀಯ ರಣೇ ಬಲಾತ್|
05003013c ಪಾದಯೋಃ ಪಾತಯಿಷ್ಯಾಮಿ ಕೌಂತೇಯಸ್ಯ ಮಹಾತ್ಮನಃ||
ನಾನಾದರೋ ಅವರನ್ನು ರಣದಿಂದ ಬಲಾತ್ಕಾರವಾಗಿ ಹರಿತ ಬಾಣಗಳಿಂದ ಕರೆತಂದು ಮಹಾತ್ಮ ಕೌಂತೇಯನ ಪಾದಗಳಲ್ಲಿ ಕೆಡವಿಸುತ್ತೇನೆ.
05003014a ಅಥ ತೇ ನ ವ್ಯವಸ್ಯಂತಿ ಪ್ರಣಿಪಾತಾಯ ಧೀಮತಃ|
05003014c ಗಮಿಷ್ಯಂತಿ ಸಹಾಮಾತ್ಯಾ ಯಮಸ್ಯ ಸದನಂ ಪ್ರತಿ||
ಒಂದುವೇಳೆ ಅವರು ಧೀಮತನ ಕಾಲುಗಳಿಗೆ ಬೀಳದಿದ್ದರೆ ಅಮಾತ್ಯರೊಂದಿಗೆ ಯಮನ ಸದನಕ್ಕೆ ಹೋಗುತ್ತಾರೆ.
05003015a ನ ಹಿ ತೇ ಯುಯುಧಾನಸ್ಯ ಸಂರಬ್ಧಸ್ಯ ಯುಯುತ್ಸತಃ|
05003015c ವೇಗಂ ಸಮರ್ಥಾಃ ಸಂಸೋಢುಂ ವಜ್ರಸ್ಯೇವ ಮಹೀಧರಾಃ||
ಪರ್ವತಗಳು ವಜ್ರವನ್ನು ಹೇಗೆ ಸಹಿಸಲಾರವೋ ಹಾಗೆ ಅವರು ಈ ಕುಪಿತ ಯುದ್ಧೋತ್ಸಾಹಿ ಯುಯುಧಾನನ ವೇಗವನ್ನು ಎದುರಿಸಲು ಸಾಧ್ಯವಿಲ್ಲ.
05003016a ಕೋ ಹಿ ಗಾಂಡೀವಧನ್ವಾನಂ ಕಶ್ಚ ಚಕ್ರಾಯುಧಂ ಯುಧಿ|
05003016c ಮಾಂ ಚಾಪಿ ವಿಷಹೇತ್ಕೋ ನು ಕಶ್ಚ ಭೀಮಂ ದುರಾಸದಂ||
ಯುದ್ಧದಲ್ಲಿ ಯಾರುತಾನೇ ಗಾಂಡೀವವನ್ನು ಹಿಡಿದವನನ್ನು, ಯಾರು ತಾನೇ ಚಕ್ರಾಯುಧವನ್ನು ಹಿಡಿದವನನ್ನು, ಹೋರಾಡುತ್ತಿರುವ ನನ್ನನ್ನು ಮತ್ತು ದುರಾಸದ ಭೀಮನನ್ನು ತಡೆದುಕೊಳ್ಳಬಲ್ಲರು?
05003017a ಯಮೌ ಚ ದೃಢಧನ್ವಾನೌ ಯಮಕಲ್ಪೌ ಮಹಾದ್ಯುತೀ|
05003017c ಕೋ ಜಿಜೀವಿಷುರಾಸೀದೇದ್ಧೃಷ್ಟದ್ಯುಮ್ನಂ ಚ ಪಾರ್ಷತಂ||
05003018a ಪಂಚೇಮಾನ್ಪಾಂಡವೇಯಾಂಶ್ಚ ದ್ರೌಪದ್ಯಾಃ ಕೀರ್ತಿವರ್ಧನಾನ್|
05003018c ಸಮಪ್ರಮಾಣಾನ್ಪಾಂಡೂನಾಂ ಸಮವೀರ್ಯಾನ್ಮದೋತ್ಕಟಾನ್||
05003019a ಸೌಭದ್ರಂ ಚ ಮಹೇಷ್ವಾಸಮಮರೈರಪಿ ದುಃಸಹಂ|
05003019c ಗದಪ್ರದ್ಯುಮ್ನಸಾಂಬಾಂಶ್ಚ ಕಾಲವಜ್ರಾನಲೋಪಮಾನ್||
ಜೀವವನ್ನು ಬಯಸುವ ಯಾರುತಾನೇ ಯಮಕಲ್ಪ ಮಹಾದ್ಯುತೀ ಅವಳಿಗರನ್ನು, ಪಾರ್ಷತ ಧೃಷ್ಟದ್ಯುಮ್ನನನ್ನು, ಪಾಂಡವರ ಸಮಪ್ರಮಾಣ-ಸಮವೀರರಾದ, ದ್ರೌಪದಿಯ ಕೀರ್ತಿವರ್ಧಕ, ಮದೋತ್ಕಟ ಪಂಚ ಪಾಂಡವೇಯರನ್ನು, ಅಮರರಿಗೂ ದುಃಸಹನಾಗಿರುವ ಮಹೇಷ್ವಾಸ ಸೌಭದ್ರಿಯನ್ನು, ಕಾಲ ಮತ್ತು ವಜ್ರರ ಸಮನಾಗಿರುವ ಗದ, ಪ್ರದ್ಯುಮ್ನ ಮತ್ತು ಸಾಂಬರನ್ನು ಎದುರಿಸಿಯಾರು?
05003020a ತೇ ವಯಂ ಧೃತರಾಷ್ಟ್ರಸ್ಯ ಪುತ್ರಂ ಶಕುನಿನಾ ಸಹ|
05003020c ಕರ್ಣೇನ ಚ ನಿಹತ್ಯಾಜಾವಭಿಷೇಕ್ಷ್ಯಾಮ ಪಾಂಡವಂ||
ಶಕುನಿ ಕರ್ಣರೊಂದಿಗೆ ಆ ಧೃತರಾಷ್ಟ್ರನ ಮಗನನ್ನು ಕೊಂದು ನಾವು ಪಾಂಡವನನ್ನು ಅಭಿಷೇಕಿಸೋಣ!
05003021a ನಾಧರ್ಮೋ ವಿದ್ಯತೇ ಕಶ್ಚಿಚ್ಚತ್ರೂನ್ ಹತ್ವಾತತಾಯಿನಃ|
05003021c ಅಧರ್ಮ್ಯಮಯಶಸ್ಯಂ ಚ ಶಾತ್ರವಾಣಾಂ ಪ್ರಯಾಚನಂ||
ನಮ್ಮನ್ನು ತುಳಿಯುವ ಶತ್ರುಗಳನ್ನು ಹನನ ಮಾಡುವುದು ಎಂದೂ ಅಧರ್ಮವೆನಿಸಿಕೊಳ್ಳುವುದಿಲ್ಲ. ಆದರೆ ಶತ್ರುಗಳ ಎದುರಿಗೆ ಭಿಕ್ಷುಕರಾಗುವುದು ಅಧರ್ಮವೂ ಅಯಶಸ್ಕರವೂ ಎನಿಸಿಕೊಳ್ಳುತ್ತದೆ.
05003022a ಹೃದ್ಗತಸ್ತಸ್ಯ ಯಃ ಕಾಮಸ್ತಂ ಕುರುಧ್ವಮತಂದ್ರಿತಾಃ|
05003022c ನಿಸೃಷ್ಟಂ ಧೃತರಾಷ್ಟ್ರೇಣ ರಾಜ್ಯಂ ಪ್ರಾಪ್ನೋತು ಪಾಂಡವಃ||
ಪಾಂಡವನು ಹೃದಯದಲ್ಲಿ ಏನನ್ನು ಬಯಸುತ್ತಾನೋ ಅದನ್ನು ಮಾಡೋಣ. ಅವನು ಧೃತರಾಷ್ಟ್ರನು ಕೊಟ್ಟ ರಾಜ್ಯವನ್ನು ಪಡೆಯಲಿ.
05003023a ಅದ್ಯ ಪಾಂಡುಸುತೋ ರಾಜ್ಯಂ ಲಭತಾಂ ವಾ ಯುಧಿಷ್ಠಿರಃ|
05003023c ನಿಹತಾ ವಾ ರಣೇ ಸರ್ವೇ ಸ್ವಪ್ಸ್ಯಂತಿ ವಸುಧಾತಲೇ||
ಇಂದು ಪಾಂಡುಸುತ ಯುಧಿಷ್ಠಿರನು ರಾಜ್ಯವನ್ನು ಪಡೆಯಬೇಕು ಅಥವಾ ಎಲ್ಲರೂ ರಣದಲ್ಲಿ ನಿಹತರಾಗಿ ನೆಲಕ್ಕುರುಳಬೇಕು!”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಸಾತ್ಯಕಿಕ್ರೋಧವಾಕ್ಯೇ ತೃತೀಯೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಸಾತ್ಯಕಿಕ್ರೋಧವಾಕ್ಯ ಎನ್ನುವ ಮೂರನೆಯ ಅಧ್ಯಾಯವು|