ವಿರಾಟ ಪರ್ವ: ವೈವಾಹಿಕ ಪರ್ವ
೬೫
ಪಾಂಡವರು ತಮ್ಮ ನಿಜರೂಪವನ್ನು ವಿರಾಟನಿಗೆ ತೋರಿಸಿಕೊಂಡಿದುದು
ನಿಗದಿತ ಕಾಲದಲ್ಲಿ ಪ್ರತಿಜ್ಞೆ ಪೂರೈಸಿದ ಐವರು ಪಾಂಡವರು ಮೂರನೆಯ ದಿವಸ ವಿರಾಟನ ಆಸ್ಥಾನದಲ್ಲಿ ರಾಜಾಸನಗಳಲ್ಲಿ ಕುಳಿತುಕೊಂಡಿರಲು ಆಸ್ಥಾನವನ್ನು ಪ್ರವೇಶಿಸಿದ ವಿರಾಟನು ಕಾರಣವನ್ನು ಕೇಳಿದುದು (೧-೬). ಆಗ ಅರ್ಜುನನು ವಿರಾಟನಿಗೆ ಯುಧಿಷ್ಠಿರನ ಪರಿಚಯ ಮಾಡಿಸಿಕೊಡುವುದು (೭-೨೧).
04065001 ವೈಶಂಪಾಯನ ಉವಾಚ|
04065001a ತತಸ್ತೃತೀಯೇ ದಿವಸೇ ಭ್ರಾತರಃ ಪಂಚ ಪಾಂಡವಾಃ|
04065001c ಸ್ನಾತಾಃ ಶುಕ್ಲಾಂಬರಧರಾಃ ಸಮಯೇ ಚರಿತವ್ರತಾಃ||
04065002a ಯುಧಿಷ್ಠಿರಂ ಪುರಸ್ಕೃತ್ಯ ಸರ್ವಾಭರಣಭೂಷಿತಾಃ|
04065002c ಅಭಿಪದ್ಮಾ ಯಥಾ ನಾಗಾ ಭ್ರಾಜಮಾನಾ ಮಹಾರಥಾಃ||
ವೈಶಂಪಾಯನನು ಹೇಳಿದನು: “ಅನಂತರ ನಿಗದಿತ ಕಾಲದಲ್ಲಿ ಪ್ರತಿಜ್ಞೆ ಪೂರೈಸಿದ ಐವರು ಮಹಾರಥ ಪಾಂಡವ ಸಹೋದರರು ಮೂರನೆಯ ದಿವಸ ಮಿಂದು ಬಿಳಿಯ ಬಟ್ಟೆಗಳನ್ನುಟ್ಟು ಸರ್ವಾಭರಣಗಳಿಂದ ಅಲಂಕೃತರಾಗಿ ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಪದ್ಮಚಿಹ್ನೆಗಳನ್ನುಳ್ಳ ಆನೆಗಳಂತೆ ಪ್ರಕಾಶಿಸಿದರು.
04065003a ವಿರಾಟಸ್ಯ ಸಭಾಂ ಗತ್ವಾ ಭೂಮಿಪಾಲಾಸನೇಷ್ವಥ|
04065003c ನಿಷೇದುಃ ಪಾವಕಪ್ರಖ್ಯಾಃ ಸರ್ವೇ ಧಿಷ್ಣ್ಯೇಷ್ವಿವಾಗ್ನಯಃ||
ಬಳಿಕ ಆ ಅಗ್ನಿಸಮಾನರೆಲ್ಲರೂ ವಿರಾಟನ ಸಭಾಭವನಕ್ಕೆ ಹೋಗಿ ಯಜ್ಞವೇದಿಗಳಲ್ಲಿ ಅಗ್ನಿಗಳು ನೆಲೆಗೊಳ್ಳುವಂತೆ ರಾಜಾಸನಗಳಲ್ಲಿ ಕುಳಿತರು.
04065004a ತೇಷು ತತ್ರೋಪವಿಷ್ಟೇಷು ವಿರಾಟಃ ಪೃಥಿವೀಪತಿಃ|
04065004c ಆಜಗಾಮ ಸಭಾಂ ಕರ್ತುಂ ರಾಜಕಾರ್ಯಾಣಿ ಸರ್ವಶಃ||
ಅವರು ಅಲ್ಲಿ ಕುಳಿತಿರಲು ದೊರೆ ವಿರಾಟನು ರಾಜಕಾರ್ಯಗಳನ್ನೆಲ್ಲ ನಿರ್ವಹಿಸುವುದಕ್ಕಾಗಿ ಸಭೆಗೆ ಬಂದನು.
04065005a ಶ್ರೀಮತಃ ಪಾಂಡವಾನ್ದೃಷ್ಟ್ವಾ ಜ್ವಲತಃ ಪಾವಕಾನಿವ|
04065005c ಅಥ ಮತ್ಸ್ಯೋಽಬ್ರವೀತ್ಕಂಕಂ ದೇವರೂಪಮವಸ್ಥಿತಂ|
04065005e ಮರುದ್ಗಣೈರುಪಾಸೀನಂ ತ್ರಿದಶಾನಾಮಿವೇಶ್ವರಂ||
ಆಗ ಅಗ್ನಿಗಳಂತೆ ಜ್ವಲಿಸುತ್ತಿದ್ದ ಶ್ರೀಯುತ ಪಾಂಡವರನ್ನು ನೋಡಿ ಮರುತ್ತುಗಳಿಂದ ಕೂಡಿದ ದೇವೇಂದ್ರನಂತೆ ಕುಳಿತಿದ್ದ ದೇವರೂಪಿ ಕಂಕನಿಗೆ ಮತ್ಸ್ಯರಾಜನು ಹೀಗೆಂದನು:
04065006a ಸ ಕಿಲಾಕ್ಷಾತಿವಾಪಸ್ತ್ವಂ ಸಭಾಸ್ತಾರೋ ಮಯಾ ಕೃತಃ|
04065006c ಅಥ ರಾಜಾಸನೇ ಕಸ್ಮಾದುಪವಿಷ್ಟೋಽಸ್ಯಲಂಕೃತಃ||
“ನಿನ್ನನ್ನು ನಾನು ಪಗಡೆಯಾಟದವನನ್ನಾಗಿ, ಸಭಾಸದಸ್ಯನನ್ನಾಗಿ ಮಾತ್ರ ಮಾಡಿದ್ದೆನು. ನೀನು ಅಲಂಕಾರ ಮಾಡಿಕೊಂಡು ರಾಜಾಸನದಲ್ಲಿ ಕುಳಿತಿದ್ದೇತಕ್ಕೆ?”
04065007a ಪರಿಹಾಸೇಪ್ಸಯಾ ವಾಕ್ಯಂ ವಿರಾಟಸ್ಯ ನಿಶಮ್ಯ ತತ್|
04065007c ಸ್ಮಯಮಾನೋಽರ್ಜುನೋ ರಾಜನ್ನಿದಂ ವಚನಮಬ್ರವೀತ್||
ರಾಜನ್! ವಿರಾಟನ ಆ ಮಾತನ್ನು ಕೇಳಿದ ಅರ್ಜುನನು ಪರಿಹಾಸಮಾಡುವ ಬಯಕೆಯಿಂದ ಮುಗುಳ್ನಗುತ್ತ ಈ ಮಾತನ್ನಾಡಿದನು.
04065008a ಇಂದ್ರಸ್ಯಾಪ್ಯಾಸನಂ ರಾಜನ್ನಯಮಾರೋಢುಮರ್ಹತಿ|
04065008c ಬ್ರಹ್ಮಣ್ಯಃ ಶ್ರುತವಾಂಸ್ತ್ಯಾಗೀ ಯಜ್ಞಶೀಲೋ ದೃಢವ್ರತಃ||
“ರಾಜನ್! ಬ್ರಾಹ್ಮಣರನ್ನು ಸೇವಿಸುವ, ಈ ವಿಧ್ವಾಂಸ, ತ್ಯಾಗಿ, ಯಜ್ಞನಿರತ, ಧೃಢವ್ರತನು ಇಂದ್ರನ ಆಸನವನ್ನಾದರೂ ಏರಲು ಯೋಗ್ಯ.
04065009a ಅಯಂ ಕುರೂಣಾಂ ವೃಷಭಃ ಕುಂತೀಪುತ್ರೋ ಯುಧಿಷ್ಠಿರಃ|
04065009c ಅಸ್ಯ ಕೀರ್ತಿಃ ಸ್ಥಿತಾ ಲೋಕೇ ಸೂರ್ಯಸ್ಯೇವೋದ್ಯತಃ ಪ್ರಭಾ||
ಇವನು ಕುರುವಂಶದಲ್ಲಿ ಶ್ರೇಷ್ಠ, ಕುಂತೀಪುತ್ರ ಯುಧಿಷ್ಠಿರನು. ಇವನ ಕೀರ್ತಿಯು ಮೇಲೇರುತ್ತಿರುವ ಸೂರ್ಯನ ಪ್ರಭೆಯಂತೆ ಲೋಕದಲ್ಲಿ ನೆಲೆಗೊಂಡಿದೆ.
04065010a ಸಂಸರಂತಿ ದಿಶಃ ಸರ್ವಾ ಯಶಸೋಽಸ್ಯ ಗಭಸ್ತಯಃ|
04065010c ಉದಿತಸ್ಯೇವ ಸೂರ್ಯಸ್ಯ ತೇಜಸೋಽನು ಗಭಸ್ತಯಃ||
ಉದಯಸೂರ್ಯನ ತೇಜಸ್ಸಿನ ಕಿರಣಗಳಂತೆ ಇವನ ಕೀರ್ತಿಯ ಕಿರಣಗಳು ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿವೆ.
04065011a ಏನಂ ದಶ ಸಹಸ್ರಾಣಿ ಕುಂಜರಾಣಾಂ ತರಸ್ವಿನಾಂ|
04065011c ಅನ್ವಯುಃ ಪೃಷ್ಠತೋ ರಾಜನ್ಯಾವದಧ್ಯಾವಸತ್ಕುರೂನ್||
ರಾಜನ್! ಇವನು ಕುರುವಂಶದವರ ನಡುವೆ ವಾಸಮಾಡುತ್ತಿದ್ದಾಗ ಹತ್ತು ಸಾವಿರ ವೇಗಶಾಲಿ ಆನೆಗಳು ಇವನನ್ನು ಹಿಂಬಾಲಿಸುತ್ತಿದ್ದವು.
04065012a ತ್ರಿಂಶದೇನಂ ಸಹಸ್ರಾಣಿ ರಥಾಃ ಕಾಂಚನಮಾಲಿನಃ|
04065012c ಸದಶ್ವೈರುಪಸಂಪನ್ನಾಃ ಪೃಷ್ಠತೋಽನುಯಯುಃ ಸದಾ||
ಮೂವತ್ತು ಸಾವಿರ ಸುವರ್ಣಮಾಲೆಗಳನ್ನು ಧರಿಸಿದ ಉತ್ತಮ ಕುದುರೆಗಳಿಂದ ಕೂಡಿದ ರಥಗಳು ಇವನನ್ನು ಯಾವಾಗಲೂ ಅನುಸರಿಸುತ್ತಿದ್ದವು.
04065013a ಏನಮಷ್ಟಶತಾಃ ಸೂತಾಃ ಸುಮೃಷ್ಟಮಣಿಕುಂಡಲಾಃ|
04065013c ಅಸ್ತುವನ್ಮಾಗಧೈಃ ಸಾರ್ಧಂ ಪುರಾ ಶಕ್ರಮಿವರ್ಷಯಃ||
ಹಿಂದೆ ಋಷಿಗಳು ಇಂದ್ರನನ್ನು ಹೊಗಳುತ್ತಿದ್ದಂತೆ ಹೊಳೆಯುವ ಮಣಿಕುಂಡಲಗಳನ್ನು ಧರಿಸಿದ ಎಂಟುನೂರು ಸೂತರು ಮಾಗಧರ ಸಹಿತ ಇವನನ್ನು ಹೊಗಳುತ್ತಿದ್ದರು.
04065014a ಏನಂ ನಿತ್ಯಮುಪಾಸಂತ ಕುರವಃ ಕಿಂಕರಾ ಯಥಾ|
04065014c ಸರ್ವೇ ಚ ರಾಜನ್ರಾಜಾನೋ ಧನೇಶ್ವರಮಿವಾಮರಾಃ||
ರಾಜನ್! ದೇವತೆಗಳು ಕುಬೇರನನ್ನು ಸೇವಿಸುವಂತೆ ಇವನನ್ನು ಕುರುವಂಶದವರೆಲ್ಲರೂ, ಇತರ ಎಲ್ಲ ದೊರೆಗಳೂ ಕಿಂಕರರ ಹಾಗೆ ಯಾವಾಗಲೂ ಸೇವಿಸುತ್ತಿದ್ದರು.
04065015a ಏಷ ಸರ್ವಾನ್ಮಹೀಪಾಲಾನ್ಕರಮಾಹಾರಯತ್ತದಾ|
04065015c ವೈಶ್ಯಾನಿವ ಮಹಾರಾಜ ವಿವಶಾನ್ಸ್ವವಶಾನಪಿ||
ಮಹಾರಾಜ! ಆಗ ಇವನು ವೈಶ್ಯರಿಂದ ಪಡೆಯುವಂತೆ ಎಲ್ಲ ರಾಜರಿಂದಲೂ - ಅವರು ಸಮರ್ಥರಾಗಿರಲಿ ಅಥವಾ ದುರ್ಬಲರಾಗಿರಲಿ – ಕಪ್ಪವನ್ನು ಪಡೆಯುತ್ತಿದ್ದನು.
04065016a ಅಷ್ಟಾಶೀತಿಸಹಸ್ರಾಣಿ ಸ್ನಾತಕಾನಾಂ ಮಹಾತ್ಮನಾಂ|
04065016c ಉಪಜೀವಂತಿ ರಾಜಾನಮೇನಂ ಸುಚರಿತವ್ರತಂ||
ವ್ರತಗಳನ್ನು ಚೆನ್ನಾಗಿ ಆಚರಿಸುತ್ತಿದ್ದ ಈ ರಾಜನನ್ನು ಎಂಬತ್ತೆರಡು ಸಾವಿರ ಮಹಾತ್ಮ ಸ್ನಾತಕರು ಆಶ್ರಯಿಸಿದ್ದರು.
04065017a ಏಷ ವೃದ್ಧಾನನಾಥಾಂಶ್ಚ ವ್ಯಂಗಾನ್ಪಂಗೂಂಶ್ಚ ಮಾನವಾನ್|
04065017c ಪುತ್ರವತ್ಪಾಲಯಾಮಾಸ ಪ್ರಜಾ ಧರ್ಮೇಣ ಚಾಭಿಭೋ||
ಪ್ರಭು! ಇವನು ವೃದ್ದರೂ ಅನಾಥರೂ ಅಂಗಹೀನರೂ ಹೆಳವ ಪ್ರಜೆಗಳನ್ನು ಪುತ್ರರೆಂಬಂತೆ ಧರ್ಮದಿಂದ ಪಾಲಿಸುತ್ತಿದ್ದನು.
04065018a ಏಷ ಧರ್ಮೇ ದಮೇ ಚೈವ ಕ್ರೋಧೇ ಚಾಪಿ ಯತವ್ರತಃ|
04065018c ಮಹಾಪ್ರಸಾದೋ ಬ್ರಹ್ಮಣ್ಯಃ ಸತ್ಯವಾದೀ ಚ ಪಾರ್ಥಿವಃ||
ಈ ರಾಜನು ಧರ್ಮಪರ, ಇಂದ್ರಿಯನಿಗ್ರಹಿ, ಕೋಪದಲ್ಲಿ ಸಂಯಮಿ, ಉದಾರಿ, ಬ್ರಾಹ್ಮಣರನ್ನು ಸೇವಿಸುವವನು ಮತ್ತು ಸತ್ಯವನ್ನಾಡುವವನು.
04065019a ಶ್ರೀಪ್ರತಾಪೇನ ಚೈತಸ್ಯ ತಪ್ಯತೇ ಸ ಸುಯೋಧನಃ|
04065019c ಸಗಣಃ ಸಹ ಕರ್ಣೇನ ಸೌಬಲೇನಾಪಿ ವಾ ವಿಭುಃ||
ಆ ರಾಜ ಸುಯೋಧನನು ತನ್ನ ಗುಂಪಿನೊಡನೆ ಮತ್ತು ಕರ್ಣ-ಶಕುನಿಯರ ಸಮೇತ ಇವನ ಶ್ರೀ ಪ್ರತಾಪದಿಂದ ಪರಿತಪಿಸುತ್ತಾನೆ.
04065020a ನ ಶಕ್ಯಂತೇ ಹ್ಯಸ್ಯ ಗುಣಾಃ ಪ್ರಸಂಖ್ಯಾತುಂ ನರೇಶ್ವರ|
04065020c ಏಷ ಧರ್ಮಪರೋ ನಿತ್ಯಮಾನೃಶಂಸ್ಯಶ್ಚ ಪಾಂಡವಃ||
ರಾಜನ್! ಇವನ ಗುಣಗಳನ್ನು ಎಣಿಸುವುದು ಅಸಾಧ್ಯ. ಇವನು ಯಾವಾಗಲೂ ಧರ್ಮಪರ, ದಯಾಶೀಲ ಪಾಂಡುಪುತ್ರ.
04065021a ಏವಮ್ಯುಕ್ತೋ ಮಹಾರಾಜಃ ಪಾಂಡವಃ ಪಾರ್ಥಿವರ್ಷಭಃ|
04065021c ಕಥಂ ನಾರ್ಹತಿ ರಾಜಾರ್ಹಮಾಸನಂ ಪೃಥಿವೀಪತಿಃ||
ಹೀಗಿರುವ ಈ ಗುಣಯುಕ್ತ, ಮಹಾರಾಜ, ಕ್ಷತ್ರಿಯಶ್ರೇಷ್ಠ, ಪಾಂಡವ ಭೂಪತಿಯು ರಾಜಯೋಗ್ಯ ಆಸನದಲ್ಲಿ ಕುಳಿತಿರಲು ಹೇಗೆ ತಾನೇ ಅರ್ಹನಾಗುವುದಿಲ್ಲ?”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ಪಾಂಡವಪ್ರಕಾಶೇ ಪಂಚಷಷ್ಟಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ಪಾಂಡವಪ್ರಕಾಶದಲ್ಲಿ ಅರವತ್ತೈದನೆಯ ಅಧ್ಯಾಯವು.