Virata Parva: Chapter 51

ವಿರಾಟ ಪರ್ವ: ಗೋಹರಣ ಪರ್ವ

೫೧

ಯುದ್ಧವನ್ನು ವೀಕ್ಷಿಸಲು ದೇವಗಣಗಳು ಆಗಸದಲ್ಲಿ ನೆರೆದುದು

ಕೌರವಸೇನೆಯೊಡನೆ ಅರ್ಜುನನ ಯುದ್ಧವನ್ನು ವೀಕ್ಷಿಸಲು ಇಂದ್ರನು ದೇವಗಣಗಳೊಡನೆ ಮತ್ತು ವಿಶ್ವೇದೇವತೆಗಳು, ಅಶ್ವಿನಿಗಳ ಹಾಗೂ ಮರುತರ ಸಮೂಹಗಳೊಡನೆ ಬಂದು ಆಗಸದಲ್ಲಿ ನೆರೆದುದು (೧-೧೭).

04051001 ವೈಶಂಪಾಯನ ಉವಾಚ|

04051001a ತಾನ್ಯನೀಕಾನ್ಯದೃಶ್ಯಂತ ಕುರೂಣಾಮುಗ್ರಧನ್ವಿನಾಂ|

04051001c ಸಂಸರ್ಪಂತೋ ಯಥಾ ಮೇಘಾ ಘರ್ಮಾಂತೇ ಮಂದಮಾರುತಾಃ||

ವೈಶಂಪಾಯನನು ಹೇಳಿದನು: “ಆ ಉಗ್ರಧನುರ್ಧರ ಕೌರವರ ಸೇನೆಗಳು ಬೇಸಗೆಯ ಕಡೆಯಲ್ಲಿ ಮಂದಮಾರುತದಿಂದ ಚಲಿಸುವ ಮೋಡಗಳಂತೆ ತೋರಿದವು.

04051002a ಅಭ್ಯಾಶೇ ವಾಜಿನಸ್ತಸ್ಥುಃ ಸಮಾರೂಢಾಃ ಪ್ರಹಾರಿಭಿಃ|

04051002c ಭೀಮರೂಪಾಶ್ಚ ಮಾತಂಗಾಸ್ತೋಮರಾಮ್ಕುಶಚೋದಿತಾಃ||

ಹತ್ತಿರದಲ್ಲಿ ಯೋಧರು ಏರಿದ್ದ ಕುದುರೆಗಳೂ ತೋಮರ ಮತ್ತು ಅಂಕುಶಗಳಿಂದ ಪ್ರಚೋದಿತವಾದ ಭಯಂಕರ ರೂಪದ ಆನೆಗಳೂ ಇದ್ದವು.

04051003a ತತಃ ಶಕ್ರಃ ಸುರಗಣೈಃ ಸಮಾರುಹ್ಯ ಸುದರ್ಶನಂ|

04051003c ಸಹೋಪಾಯಾತ್ತದಾ ರಾಜನ್ವಿಶ್ವಾಶ್ವಿಮರುತಾಂ ಗಣೈಃ||

ರಾಜ! ಅನಂತರ ಇಂದ್ರನು ಸುದರ್ಶನ ರಥವನ್ನೇರಿ ದೇವಗಣಗಳೊಡನೆ ಮತ್ತು ವಿಶ್ವೇದೇವತೆಗಳು, ಅಶ್ವಿನಿಗಳ ಹಾಗೂ ಮರುತರ ಸಮೂಹಗಳೊಡನೆ ಆಗ ಅಲ್ಲಿಗೆ ಬಂದನು.

04051004a ತದ್ದೇವಯಕ್ಷಗಂಧರ್ವಮಹೋರಗಸಮಾಕುಲಂ|

04051004c ಶುಶುಭೇಽಭ್ರವಿನಿರ್ಮುಕ್ತಂ ಗ್ರಹೈರಿವ ನಭಸ್ತಲಂ||

ಮೋಡಗಳಿಲ್ಲದ ಆಕಾಶವು ಗ್ರಹಗಳಿಂದ ಶೋಭಿಸುವಂತೆ ಆ ದೇವ- ಯಕ್ಷ-ಗಂಧರ್ವ-ಮಹೋರಗರಿಂದ ತುಂಬಿ ಶೋಭಿಸುತ್ತಿತ್ತು.

04051005a ಅಸ್ತ್ರಾಣಾಂ ಚ ಬಲಂ ತೇಷಾಂ ಮಾನುಷೇಷು ಪ್ರಯುಜ್ಯತಾಂ|

04051005c ತಚ್ಚ ಘೋರಂ ಮಹದ್ಯುದ್ಧಂ ಭೀಷ್ಮಾರ್ಜುನಸಮಾಗಮೇ||

ಮನುಷ್ಯರು ಪ್ರಯೋಗಿಸುವ ತಮ್ಮ ಅಸ್ತ್ರಗಳ ಬಲವನ್ನೂ, ಭೀಷ್ಮಾರ್ಜುನರು ಸೇರಿದಾಗ ನಡೆಯುವ ಮಹಾಯುದ್ಧವನ್ನೂ ನೋಡಲು ಅವರು ಬಂದರು.

04051006a ಶತಂ ಶತಸಹಸ್ರಾಣಾಂ ಯತ್ರ ಸ್ಥೂಣಾ ಹಿರಣ್ಮಯಾಃ|

04051006c ಮಣಿರತ್ನಮಯಾಶ್ಚಾನ್ಯಾಃ ಪ್ರಾಸಾದಮುಪಧಾರಯನ್||

04051007a ತತ್ರ ಕಾಮಗಮಂ ದಿವ್ಯಂ ಸರ್ವರತ್ನವಿಭೂಷಿತಂ|

04051007c ವಿಮಾನಂ ದೇವರಾಜಸ್ಯ ಶುಶುಭೇ ಖೇಚರಂ ತದಾ||

ಆಗ ಸುವರ್ಣಮಯ ಮತ್ತು ಮಣಿರತ್ನಮಯ ಒಂದು ಕೋಟಿ ಕಂಬಗಳಿಂದ ಕೂಡಿದ ಪ್ರಾಸಾದವುಳ್ಳ, ಇಚ್ಛೆಯಂತೆ ಎಲ್ಲಿಗೆ ಬೇಕಾದರೂ ಹೋಗಬಲ್ಲ, ದಿವ್ಯ, ಸರ್ವರತ್ನ ವಿಭೂಷಿತ, ಗಗನ ಸಂಚಾರಿ, ದೇವೇಂದ್ರನ ವಿಮಾನವು ಶೋಭಿಸಿತು.

04051008a ತತ್ರ ದೇವಾಸ್ತ್ರಯಸ್ತ್ರಿಂಶತ್ತಿಷ್ಠಂತಿ ಸಹವಾಸವಾಃ|

04051008c ಗಂಧರ್ವಾ ರಾಕ್ಷಸಾಃ ಸರ್ಪಾಃ ಪಿತರಶ್ಚ ಮಹರ್ಷಿಭಿಃ||

ಇಂದ್ರನೊಡನೆ ಮೂವತ್ತಮೂರು ದೇವತೆಗಳೂ, ಮಹರ್ಷಿಗಳೊಂದಿಗೆ ಗಂಧರ್ವ-ರಾಕ್ಷಸ-ಸರ್ಪರೂ, ಪಿತೃಗಳೂ ಅಲ್ಲಿದ್ದರು.

04051009a ತಥಾ ರಾಜಾ ವಸುಮನಾ ಬಲಾಕ್ಷಃ ಸುಪ್ರತರ್ದನಃ|

04051009c ಅಷ್ಟಕಶ್ಚ ಶಿಬಿಶ್ಚೈವ ಯಯಾತಿರ್ನಹುಷೋ ಗಯಃ||

04051010a ಮನುಃ ಕ್ಷುಪೋ ರಘುರ್ಭಾನುಃ ಕೃಶಾಶ್ವಃ ಸಗರಃ ಶಲಃ|

04051010c ವಿಮಾನೇ ದೇವರಾಜಸ್ಯ ಸಮದೃಶ್ಯಂತ ಸುಪ್ರಭಾಃ||

ಹಾಗೆಯೇ ರಾಜ ವಸುಮನ, ಬಲಾಕ್ಷ, ಸುಪ್ರತರ್ದನ, ಅಷ್ಟಕ, ಶಿಬಿ, ಯಯಾತಿ, ನಹುಷ, ಗಯ, ಮನು, ಕ್ಷುಪ, ರಘು, ಭಾನು, ಕೃಶಾಶ್ವ, ಸಗರ, ಶಲ ಇವರು ಪ್ರಕಾಶಮಾನರಾಗಿ ದೇವೇಂದ್ರನ ವಿಮಾನದಲ್ಲಿ ಕಾಣಿಸಿಕೊಂಡರು.

04051011a ಅಗ್ನೇರೀಶಸ್ಯ ಸೋಮಸ್ಯ ವರುಣಸ್ಯ ಪ್ರಜಾಪತೇಃ|

04051011c ತಥಾ ಧಾತುರ್ವಿಧಾತುಶ್ಚ ಕುಬೇರಸ್ಯ ಯಮಸ್ಯ ಚ||

04051012a ಅಲಂಬುಸೋಗ್ರಸೇನಸ್ಯ ಗಂಧರ್ವಸ್ಯ ಚ ತುಂಬುರೋಃ|

04051012c ಯಥಾಭಾಗಂ ಯಥೋದ್ದೇಶಂ ವಿಮಾನಾನಿ ಚಕಾಶಿರೇ||

ಅಗ್ನಿ, ಈಶ, ಸೋಮ, ವರುಣ, ಪ್ರಜಾಪತಿ, ಧಾತೃ, ವಿಧಾತೃ, ಕುಬೇರ, ಯಮ, ಅಲಂಬುಸ, ಉಗ್ರಸೇನ, ಗಂಧರ್ವ ತುಂಬುರ ಇವರ ವಿಮಾನಗಳು ತಕ್ಕ ತಕ್ಕ ವಿಭಾಗಸ್ಥಾನಗಳಲ್ಲಿ ಕಂಗೊಳಿಸಿದವು.

04051013a ಸರ್ವದೇವನಿಕಾಯಾಶ್ಚ ಸಿದ್ಧಾಶ್ಚ ಪರಮರ್ಷಯಃ|

04051013c ಅರ್ಜುನಸ್ಯ ಕುರೂಣಾಂ ಚ ದ್ರಷ್ಟುಂ ಯುದ್ಧಮುಪಾಗತಾಃ||

ಎಲ್ಲ ದೇವ ಸಮೂಹಗಳೂ, ಸಿದ್ಧರೂ, ಪರಮ ಋಷಿಗಳೂ ಅರ್ಜುನನ ಮತ್ತು ಕೌರವರ ಯುದ್ಧವನ್ನು ನೋಡಲು ಬಂದರು.

04051014a ದಿವ್ಯಾನಾಂ ತತ್ರ ಮಾಲ್ಯಾನಾಂ ಗಂಧಃ ಪುಣ್ಯೋಽಥ ಸರ್ವಶಃ|

04051014c ಪ್ರಸಸಾರ ವಸಂತಾಗ್ರೇ ವನಾನಾಮಿವ ಪುಷ್ಪಿತಾಂ||

ಅಲ್ಲಿ ದಿವ್ಯಮಾಲೆಗಳ ಪುಣ್ಯಗಂಧವು ವಸಂತಾಗಮನವಾದಾಗ ಕುಸುಮಿಸುವ ವನಗಳ ಗಂಧದಂತೆ ಎಲ್ಲೆಡೆ ಹರಡಿತು.

04051015a ರಕ್ತಾರಕ್ತಾನಿ ದೇವಾನಾಂ ಸಮದೃಶ್ಯಂತ ತಿಷ್ಠತಾಂ|

04051015c ಆತಪತ್ರಾಣಿ ವಾಸಾಂಸಿ ಸ್ರಜಶ್ಚ ವ್ಯಜನಾನಿ ಚ||

ಅಲ್ಲಿದ್ದ ದೇವತೆಗಳ ಕಡುಗೆಂಪಾದ ಕೊಡೆಗಳೂ, ವಸ್ತ್ರಗಳೂ, ಮಾಲೆಗಳೂ, ಚಾಮರಗಳೂ, ಚೆನ್ನಾಗಿ ಕಂಡುಬಂದವು.

04051016a ಉಪಶಾಮ್ಯದ್ರಜೋ ಭೌಮಂ ಸರ್ವಂ ವ್ಯಾಪ್ತಂ ಮರೀಚಿಭಿಃ|

04051016c ದಿವ್ಯಾನ್ಗಂಧಾನುಪಾದಾಯ ವಾಯುರ್ಯೋಧಾನಸೇವತ||

ನೆಲದ ಧೂಳೆಲ್ಲ ಅಡಗಿಹೋಯಿತು. ಎಲ್ಲೆಡೆಯೂ ಕಾಂತಿ ವ್ಯಾಪಿಸಿ, ದಿವ್ಯಗಂಧವನ್ನು ಹೊತ್ತ ಗಾಳಿ ಯೋಧರನ್ನು ತಣಿಸಿತು.

04051017a ಪ್ರಭಾಸಿತಮಿವಾಕಾಶಂ ಚಿತ್ರರೂಪಮಲಂಕೃತಂ|

04051017c ಸಂಪತದ್ಭಿಃ ಸ್ಥಿತೈಶ್ಚೈವ ನಾನಾರತ್ನಾವಭಾಸಿತೈಃ|

04051017e ವಿಮಾನೈರ್ವಿವಿಧೈಶ್ಚಿತ್ರೈರುಪಾನೀತೈಃ ಸುರೋತ್ತಮೈಃ||

ಬರುತ್ತಿದ್ದ ಮತ್ತು ಆಗಲೇ ಬಂದಿದ್ದ, ನಾನಾ ರತ್ನಗಳಿಂದ ಹೊಳೆಯುತ್ತಿದ್ದ ದೇವಶ್ರೇಷ್ಠರು ತಂದಿದ್ದ ವಿವಿಧ ವಿಚಿತ್ರ ವಿಮಾನಗಳಿಂದ ಅಲಂಕೃತ ಆಕಾಶವು ಚಿತ್ರರೂಪವಾಗಿ ಶೋಭಿಸುತ್ತಿತ್ತು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದೇವಾಗಮನೇ ಏಕಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದೇವಾಗಮನದಲ್ಲಿ ಐವತ್ತೊಂದನೆಯ ಅಧ್ಯಾಯವು.

Related image

Comments are closed.