Virata Parva: Chapter 48

ವಿರಾಟ ಪರ್ವ: ಗೋಹರಣ ಪರ್ವ

೪೮

ಅರ್ಜುನನು ಗೋವುಗಳನ್ನು ಹಿಂದಿರುಗಿಸಿದುದು

ಅರ್ಜುನನು ಕುರುಸೇನೆಯಲ್ಲಿ ದುರ್ಯೋಧನನನ್ನು ಕಾಣದೇ, ಅವನು ಗೋವುಗಳನ್ನು ಕರೆದುಕೊಂಡು ಹಸ್ತಿನಾವತಿಗೆ ಹಿಂದಿರುಗಿ ಹೋಗುತ್ತಿರುವುದನ್ನು ನೋಡಿ ಅವನ ಮೇಲೆ ಧಾಳಿಮಾಡಿ ಗೋವುಗಳನ್ನು ವಿರಾಟನಗರಿಯ ಕಡೆ ಹಿಂದಿರುಗುವಂತೆ ಮಾಡಿದುದು (೧-೨೩).

04048001 ವೈಶಂಪಾಯನ ಉವಾಚ|

04048001a ತಥಾ ವ್ಯೂಢೇಷ್ವನೀಕೇಷು ಕೌರವೇಯೈರ್ಮಹಾರಥೈಃ|

04048001c ಉಪಾಯಾದರ್ಜುನಸ್ತೂರ್ಣಂ ರಥಘೋಷೇಣ ನಾದಯನ್||

ವೈಶಂಪಾಯನನು ಹೇಳಿದನು: “ಹಾಗೆ ಮಹಾರಥಿ ಕೌರವರು ಸೈನ್ಯವ್ಯೂಹವನ್ನು ರಚಿಸಲು ಅರ್ಜುನನು ರಥಘೋಷದಿಂದ ದಿಕ್ಕುಗಳನ್ನು ಮೊಳಗಿಸುತ್ತಾ ಶೀಘ್ರವಾಗಿ ಹತ್ತಿರಕ್ಕೆ ಬಂದೇಬಿಟ್ಟನು.

04048002a ದದೃಶುಸ್ತೇ ಧ್ವಜಾಗ್ರಂ ವೈ ಶುಶ್ರುವುಶ್ಚ ರಥಸ್ವನಂ|

04048002c ದೋಧೂಯಮಾನಸ್ಯ ಭೃಶಂ ಗಾಂಡೀವಸ್ಯ ಚ ನಿಸ್ವನಂ||

ಅವರು ಅವನ ಬಾವುಟದ ತುದಿಯನ್ನು ನೋಡಿದರು ಮತ್ತು ರಥದ ಶಬ್ಧವನ್ನೂ. ವಿಶೇಷವಾಗಿ ಮಿಡಿಯುತ್ತಿದ್ದ ಗಾಂಡೀವದ ಶಬ್ಧವನ್ನೂ ಕೇಳಿದರು.

04048003a ತತಸ್ತತ್ಸರ್ವಮಾಲೋಕ್ಯ ದ್ರೋಣೋ ವಚನಮಬ್ರವೀತ್|

04048003c ಮಹಾರಥಮನುಪ್ರಾಪ್ತಂ ದೃಷ್ಟ್ವಾ ಗಾಂಡೀವಧನ್ವಿನಂ||

ಆಗ ದ್ರೋಣನು ಅದನ್ನೆಲ್ಲ ನೋಡಿ ಗಾಂಡೀವಧನುರ್ಧರ ಮಹಾರಥನು ಬಂದಿದ್ದುದನ್ನು ಕಂಡು ಈ ಮಾತನ್ನಾಡಿದನು:

04048004a ಏತದ್ಧ್ವಜಾಗ್ರಂ ಪಾರ್ಥಸ್ಯ ದೂರತಃ ಸಂಪ್ರಕಾಶತೇ|

04048004c ಏಷ ಘೋಷಃ ಸಜಲದೋ ರೋರವೀತಿ ಚ ವಾನರ||

“ಪಾರ್ಥನ ಬಾವುಟದ ತುದಿ ಅದೋ ಅಲ್ಲಿ ಹೊಳೆಯುತ್ತಿದೆ. ಈ ರಥದ ಶಬ್ಧ ಮೋಡದ ಗುಡುಗಿನಂತಿದೆ. ವಾನರನು ಗರ್ಜಿಸುತ್ತಿದ್ದಾನೆ.

04048005a ಏಷ ತಿಷ್ಠನ್ರಥಶ್ರೇಷ್ಠೋ ರಥೇ ರಥವರಪ್ರಣುತ್|

04048005c ಉತ್ಕರ್ಷತಿ ಧನುಃಶ್ರೇಷ್ಠಂ ಗಾಂಡೀವಮಶನಿಸ್ವನಂ||

ರಥಿಕರಲ್ಲಿ ಶ್ರೇಷ್ಠ, ರಥನಡೆಸುವವರಲ್ಲಿ ಶ್ರೇಷ್ಠ ಅರ್ಜುನನು ರಥದಲ್ಲಿ ಶ್ರೇಷ್ಠವೂ ಸಿಡಿಲಿನಂತೆ ಧ್ವನಿಯುಳ್ಳದ್ದೂ ಆದ ಗಾಂಡೀವವನ್ನು ಸೆಳೆಯುತ್ತಿದ್ದಾನೆ.

04048006a ಇಮೌ ಹಿ ಬಾಣೌ ಸಹಿತೌ ಪಾದಯೋರ್ಮೇ ವ್ಯವಸ್ಥಿತೌ|

04048006c ಅಪರೌ ಚಾಪ್ಯತಿಕ್ರಾಂತೌ ಕರ್ಣೌ ಸಂಸ್ಪೃಶ್ಯ ಮೇ ಶರೌ||

ಈ ಎರಡು ಬಾಣಗಳು ಒಟ್ಟಿಗೇ ಬಂದು ನನ್ನ ಪಾದಗಳಲ್ಲಿ ಬೀಳುತ್ತಿವೆ. ಉಳಿದ ಬಾಣಗಳು ನನ್ನ ಕಿವಿಗಳನ್ನು ಸೋಕಿ ಮುಂದೆ ಹೋಗುತ್ತಿವೆ.

04048007a ನಿರುಷ್ಯ ಹಿ ವನೇ ವಾಸಂ ಕೃತ್ವಾ ಕರ್ಮಾತಿಮಾನುಷಂ|

04048007c ಅಭಿವಾದಯತೇ ಪಾರ್ಥಃ ಶ್ರೋತ್ರೇ ಚ ಪರಿಪೃಚ್ಛತಿ||

ಪಾರ್ಥನು ವನವಾಸವನ್ನು ಮಾಡಿ, ಅತಿಮಾನುಷ ಕಾರ್ಯವನ್ನು ಎಸಗಿ, ನನಗೆ ಅಭಿನಂದಿಸುತ್ತಿದ್ದಾನೆ ಮತ್ತು ಕಿವಿಯಲ್ಲಿ ಕುಶಲವನ್ನು ಕೇಳುತ್ತಿದ್ದಾನೆ.”

04048008 ಅರ್ಜುನ ಉವಾಚ|

04048008a ಇಷುಪಾತೇ ಚ ಸೇನಾಯಾ ಹಯಾನ್ಸಮ್ಯಚ್ಛ ಸಾರಥೇ|

04048008c ಯಾವತ್ಸಮೀಕ್ಷೇ ಸೈನ್ಯೇಽಸ್ಮಿನ್ಕ್ವಾಸೌ ಕುರುಕುಲಾಧಮಃ||

ಅರ್ಜುನನು ಹೇಳಿದನು: “ಸಾರಥಿ! ನನ್ನ ಬಾಣಗಳು ಸೇನೆಯ ಮೇಲೆ ಬೀಳುವಷ್ಟು ದೂರದಲ್ಲಿ ಕುದುರೆಗಳನ್ನು ಬಿಗಿಹಿಡಿ. ಅಷ್ಟರಲ್ಲಿ ಆ ಕುರುಕುಲಾಧಮನು ಈ ಸೈನ್ಯದಲ್ಲಿ ಎಲ್ಲಿದ್ದಾನೆಂಬುದನ್ನು ನೋಡುತ್ತೇನೆ.

04048009a ಸರ್ವಾನನ್ಯಾನನಾದೃತ್ಯ ದೃಷ್ಟ್ವಾ ತಮತಿಮಾನಿನಂ|

04048009c ತಸ್ಯ ಮೂರ್ಧ್ನಿ ಪತಿಷ್ಯಾಮಿ ತತ ಏತೇ ಪರಾಜಿತಾಃ||

ಇತರ ಎಲ್ಲರನ್ನೂ ಅಲಕ್ಷಿಸಿ, ಆ ಅತಿ ಅಹಂಕಾರಿಯನ್ನು ಕಂಡು ಅವನ ತಲೆಯ ಮೇಲೆರಗುತ್ತೇನೆ. ಬಳಿಕ ಇವರೆಲ್ಲರೂ ಸೋತಂತೆಯೇ.

04048010a ಏಷ ವ್ಯವಸ್ಥಿತೋ ದ್ರೋಣೋ ದ್ರೌಣಿಶ್ಚ ತದನಂತರಂ|

04048010c ಭೀಷ್ಮಃ ಕೃಪಶ್ಚ ಕರ್ಣಶ್ಚ ಮಹೇಷ್ವಾಸಾ ವ್ಯವಸ್ಥಿತಾಃ||

ಇಗೋ! ದ್ರೋಣನೂ, ಅನಂತರ ಅಶ್ವತ್ಥಾಮನೂ, ದೊಡ್ಡ ಬಿಲ್ಗಾರರಾದ ಭಿಷ್ಮ, ಕೃಪ, ಕರ್ಣರೂ ಅಣಿಯಾಗಿದ್ದಾರೆ.

04048011a ರಾಜಾನಂ ನಾತ್ರ ಪಶ್ಯಾಮಿ ಗಾಃ ಸಮಾದಾಯ ಗಚ್ಛತಿ|

04048011c ದಕ್ಷಿಣಂ ಮಾರ್ಗಮಾಸ್ಥಾಯ ಶಂಕೇ ಜೀವಪರಾಯಣಃ||

ಆದರೆ ದೊರೆಯು ಅಲ್ಲಿ ಕಾಣುತ್ತಿಲ್ಲ. ಅವನು ಜೀವದ ಮೇಲಿನ ಆಸೆಯಿಂದ ಹಸುಗಳನ್ನಟ್ಟಿಕೊಂಡು ಬಲಮಾರ್ಗದಲ್ಲಿ ಹೋಗುತ್ತಿದ್ದಾನೆಂದು ನನ್ನ ಸಂದೇಹ.

04048012a ಉತ್ಸೃಜ್ಯೈತದ್ರಥಾನೀಕಂ ಗಚ್ಛ ಯತ್ರ ಸುಯೋಧನಃ|

04048012c ತತ್ರೈವ ಯೋತ್ಸ್ಯೇ ವೈರಾಟೇ ನಾಸ್ತಿ ಯುದ್ಧಂ ನಿರಾಮಿಷಂ|

04048012e ತಂ ಜಿತ್ವಾ ವಿನಿವರ್ತಿಷ್ಯೇ ಗಾಃ ಸಮಾದಾಯ ವೈ ಪುನಃ||

ಈ ರಥಸೈನ್ಯವನ್ನು ಬಿಟ್ಟು ಸುಯೋಧನನಿರುವಲ್ಲಿಗೆ ನಡೆ. ಉತ್ತರ! ಅಲ್ಲಿಯೇ ನಾನು ಯುದ್ಧ ಮಾಡುತ್ತೇನೆ. ಆಮಿಷವಿಲ್ಲದ ಯುದ್ಧವಿಲ್ಲ. ಅವನನ್ನು ಗೆದ್ದು ಗೋವುಗಳನ್ನು ಹೊಡೆದುಕೊಂಡು ಹಿಂದಿರುಗುತ್ತೇನೆ.””

04048013 ವೈಶಂಪಾಯನ ಉವಾಚ|

04048013a ಏವಮುಕ್ತಃ ಸ ವೈರಾಟಿರ್ಹಯಾನ್ಸಂಯಮ್ಯ ಯತ್ನತಃ|

04048013c ನಿಯಮ್ಯ ಚ ತತೋ ರಶ್ಮೀನ್ಯತ್ರ ತೇ ಕುರುಪುಂಗವಾಃ|

04048013e ಅಚೋದಯತ್ತತೋ ವಾಹಾನ್ಯತೋ ದುರ್ಯೋಧನಸ್ತತಃ||

ವೈಶಂಪಾಯನನು ಹೇಳಿದನು: “ಅರ್ಜುನನು ಹೀಗೆ ಹೇಳಲು ಉತ್ತರನು ಕಡಿವಾಣಗಳನ್ನು ಬಿಗಿಡಿದು ಕುದುರೆಗಳನ್ನು ಯತ್ನಪೂರ್ವಕವಾಗಿ ನಿಯಂತ್ರಿಸಿದನು. ಅನಂತರ ಆ ಕುರುಶ್ರೇಷ್ಠ ದುರ್ಯೋಧನನಿದ್ದೆಡಗೆ ಕುದುರೆಗಳನ್ನು ಪ್ರಚೋದಿಸಿದನು.

04048014a ಉತ್ಸೃಜ್ಯ ರಥವಂಶಂ ತು ಪ್ರಯಾತೇ ಶ್ವೇತವಾಹನೇ|

04048014c ಅಭಿಪ್ರಾಯಂ ವಿದಿತ್ವಾಸ್ಯ ದ್ರೋಣೋ ವಚನಮಬ್ರವೀತ್||

ಅರ್ಜುನನು ಆ ರಥಸಮೂಹವನ್ನು ಬಿಟ್ಟು ಹೊರಟುಹೋಗಲು ದ್ರೋಣನು ಅವನ ಅಭಿಪ್ರಾಯವನ್ನು ತಿಳಿದು ಈ ಮಾತನ್ನಾಡಿದನು:

04048015a ನೈಷೋಽಂತರೇಣ ರಾಜಾನಂ ಬೀಭತ್ಸುಃ ಸ್ಥಾತುಮಿಚ್ಛತಿ|

04048015c ತಸ್ಯ ಪಾರ್ಷ್ಣಿಂ ಗ್ರಹೀಷ್ಯಾಮೋ ಜವೇನಾಭಿಪ್ರಯಾಸ್ಯತಃ||

“ಈ ಅರ್ಜುನನು ರಾಜ ದುರ್ಯೋಧನನನ್ನು ಕಾಣದೇ ನಿಲ್ಲುವುದಿಲ್ಲ. ವೇಗವಾಗಿ ಹೋಗುತ್ತಿರುವ ಅವನ ಬೆನ್ನುಹತ್ತೋಣ.

04048016a ನ ಹ್ಯೇನಮಭಿಸಂಕ್ರುದ್ಧಮೇಕೋ ಯುಧ್ಯೇತ ಸಂಯುಗೇ|

04048016c ಅನ್ಯೋ ದೇವಾತ್ಸಹಸ್ರಾಕ್ಷಾತ್ಕೃಷ್ಣಾದ್ವಾ ದೇವಕೀಸುತಾತ್||

ಕೋಪಗೊಂಡ ಈ ಅರ್ಜುನನನ್ನು ಯುದ್ಧದಲ್ಲಿ ದೇವೇಂದ್ರ ಅಥವಾ ದೇವಕೀಪುತ್ರ ಕೃಷ್ಣನ ಹೊರತು ಬೇರೆ ಯಾರೂ ಏಕಾಕಿಯಾಗಿ ಎದುರಿಸಲಾರರು.

04048017a ಕಿಂ ನೋ ಗಾವಃ ಕರಿಷ್ಯಂತಿ ಧನಂ ವಾ ವಿಪುಲಂ ತಥಾ|

04048017c ದುರ್ಯೋಧನಃ ಪಾರ್ಥಜಲೇ ಪುರಾ ನೌರಿವ ಮಜ್ಜತಿ||

ನೌಕೆಯಂತೆ ಮೊದಲು ದುರ್ಯೋಧನನೇ ಪಾರ್ಥನೆಂಬ ಜಲದಲ್ಲಿ ಮುಳುಗಿಹೋದರೆ, ಗೋವುಗಳಿಂದಾಗಲೀ ವಿಪುಲ ಧನದಿಂದಾಗಲೀ ನಮಗೆ ಏನು ಪ್ರಯೋಜನ?”

04048018a ತಥೈವ ಗತ್ವಾ ಬೀಭತ್ಸುರ್ನಾಮ ವಿಶ್ರಾವ್ಯ ಚಾತ್ಮನಃ|

04048018c ಶಲಭೈರಿವ ತಾಂ ಸೇನಾಂ ಶರೈಃ ಶೀಘ್ರಮವಾಕಿರತ್||

ಅಂತೆಯೇ ಅರ್ಜುನನು ಆ ಎಡೆಗೆ ಹೋಗಿ ತನ್ನ ಹೆಸರನ್ನು ಘೋಷಿಸಿ ಮಿಡತೆಗಳಂತಹ ತನ್ನ ಬಾಣಗಳಿಂದ ಆ ಸೇನೆಯನ್ನು ಬೇಗ ಮುಸುಕಿದನು.

04048019a ಕೀರ್ಯಮಾಣಾಃ ಶರೌಘೈಸ್ತು ಯೋಧಾಸ್ತೇ ಪಾರ್ಥಚೋದಿತೈಃ|

04048019c ನಾಪಶ್ಯನ್ನಾವೃತಾಂ ಭೂಮಿಮಂತರಿಕ್ಷಂ ಚ ಪತ್ರಿಭಿಃ||

ಪಾರ್ಥನು ಬಿಟ್ಟ ಬಾಣಸಮೂಹದಿಂದ ಮುಚ್ಚಿಹೋದ ಆ ಯೋಧರಿಗೆ ಬಾಣಗಳಿಂದ ಆವೃತವಾದ ಭೂಮಿಯೂ ಆಕಾಶವೂ ಕಾಣದಂತಾದವು.

04048020a ತೇಷಾಂ ನಾತ್ಮನಿನೋ ಯುದ್ಧೇ ನಾಪಯಾನೇಽಭವನ್ಮತಿಃ|

04048020c ಶೀಘ್ರತ್ವಮೇವ ಪಾರ್ಥಸ್ಯ ಪೂಜಯಂತಿ ಸ್ಮ ಚೇತಸಾ||

ಅವರಿಗೆ ಯುದ್ಧಮಾಡಬೇಕೆಂಬ ಅಥವಾ ಪಲಾಯನ ಮಾಡಬೇಕೆಂಬ ಬುದ್ಧಿಯೇ ಹುಟ್ಟಲಿಲ್ಲ. ಅವರು ಪಾರ್ಥನ ಬಾಣಪ್ರಯೋಗದ ವೇಗವನ್ನು ಮನಃಪೂರ್ವಕವಾಗಿ ಮೆಚ್ಚಿಕೊಂಡರು.

04048021a ತತಃ ಶಂಖಂ ಪ್ರದಧ್ಮೌ ಸ ದ್ವಿಷತಾಂ ಲೋಮಹರ್ಷಣ|

04048021c ವಿಸ್ಫಾರ್ಯ ಚ ಧನುಃಶ್ರೇಷ್ಠಂ ಧ್ವಜೇ ಭೂತಾನ್ಯಚೋದಯತ್||

ಅನಂತರ ಆ ಅರ್ಜುನನು ವೈರಿಗಳಿಗೆ ಪುಳಕವನ್ನುಂಟುಮಾಡುವ ಶಂಖವನ್ನು ಊದಿದನು. ಶ್ರೇಷ್ಠ ಬಿಲ್ಲನ್ನು ಮಿಡಿದು ಧ್ವಜದಲ್ಲಿದ್ದ ಭೂತಗಳನ್ನು ಪ್ರೇರಿಸಿದನು.

04048022a ತಸ್ಯ ಶಂಖಸ್ಯ ಶಬ್ದೇನ ರಥನೇಮಿಸ್ವನೇನ ಚ|

04048022c ಅಮಾನುಷಾಣಾಂ ತೇಷಾಂ ಚ ಭೂತಾನಾಂ ಧ್ವಜವಾಸಿನಾಂ||

04048023a ಊರ್ಧ್ವಂ ಪುಚ್ಛಾನ್ವಿಧುನ್ವಾನಾ ರೇಭಮಾಣಾಃ ಸಮಂತತಃ|

04048023c ಗಾವಃ ಪ್ರತಿನ್ಯವರ್ತಂತ ದಿಶಮಾಸ್ಥಾಯ ದಕ್ಷಿಣಾಂ||

ಅವನ ಶಂಖದ ಶಬ್ದದಿಂದಲೂ, ರಥಚಕ್ರದ ಶಬ್ದದಿಂದಲೂ, ಆ ಧ್ವಜವಾಸಿ ಅಮಾನುಷ ಭೂತಗಳ ಗರ್ಜನೆಯಿಂದಲೂ ಎಲ್ಲ ಕಡೆಗಳಲ್ಲಿಯೂ ಬೆದರಿದ ಗೋವುಗಳು ಬಾಲಗಳನ್ನು ಮೇಲೆತ್ತಿ ಆಡಿಸುತ್ತಾ ಅರಚುತ್ತಾ ದಕ್ಷಿಣದಿಕ್ಕನ್ನು ಹಿಡಿದು ಮರಳಿದವು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಗೋನಿವರ್ತನೇ ಅಷ್ಟಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಗೋನಿವರ್ತನದಲ್ಲಿ ನಲ್ವತ್ತೆಂಟನೆಯ ಅಧ್ಯಾಯವು.

Related image

Comments are closed.