ವಿರಾಟ ಪರ್ವ: ಗೋಹರಣ ಪರ್ವ
೪೨
ದುರ್ಯೋಧನನ ಮಾತು
ದುರ್ಯೋಧನನು ಭೀಷ್ಮ-ದ್ರೋಣ-ಕೃಪರನ್ನುದ್ದೇಶಿಸಿ ಹದಿಮೂರನೆಯ ವರ್ಷವು ಮುಗಿಯುವುದರ ಒಳಗೇ ಪಾಂಡವರು ಕಾಣಿಸಿಕೊಂಡಿರುವುದರಿಂದ ಒಪ್ಪಂದದ ಪ್ರಕಾರ ಅವರು ಇನ್ನೂ ಹನ್ನೆರಡು ವರ್ಷ ವನಕ್ಕೆ ಹೋಗಬೇಕೆಂದೂ (೧-೬), ಅರ್ಜುನನು ಬಂದಿದ್ದಾನೆಂದು ಯಾರೂ ಹಿಂದೆ ತಿರುಗಬೇಕಾಗಿಲ್ಲವೆಂದೂ (೭-೧೫), ಅರ್ಜುನನ ಮೇಲೆ ಅತಿ ಪ್ರೀತಿಯಿರುವ ದ್ರೋಣರನ್ನು ಬಿಟ್ಟು ಯುದ್ಧನೀತಿಯನ್ನು ಮಾಡಬೇಕೆಂದು (೧೬-೩೧) ಹೇಳುವುದು.
04042001 ವೈಶಂಪಾಯನ ಉವಾಚ|
04042001a ಅಥ ದುರ್ಯೋಧನೋ ರಾಜಾ ಸಮರೇ ಭೀಷ್ಮಮಬ್ರವೀತ್|
04042001c ದ್ರೋಣಂ ಚ ರಥಶಾರ್ದೂಲಂ ಕೃಪಂ ಚ ಸುಮಹಾರಥಂ||
ವೈಶಂಪಾಯನನು ಹೇಳಿದನು: “ಬಳಿಕ ರಾಜ ದುರ್ಯೋಧನನು ಯುದ್ಧರಂಗದಲ್ಲಿ ಭೀಷ್ಮನಿಗೂ ರಥಿಕಶ್ರೇಷ್ಠ ದ್ರೋಣನಿಗೂ ಸುಮಹಾರಥ ಕೃಪನಿಗೂ ಹೇಳಿದನು:
04042002a ಉಕ್ತೋಽಯಮರ್ಥ ಆಚಾರ್ಯೋ ಮಯಾ ಕರ್ಣೇನ ಚಾಸಕೃತ್|
04042002c ಪುನರೇವ ಚ ವಕ್ಷ್ಯಾಮಿ ನ ಹಿ ತೃಪ್ಯಾಮಿ ತಂ ಬ್ರುವನ್||
“ಈ ವಿಷಯವನ್ನು ಅಚಾರ್ಯನಿಗೆ ನಾನೂ ಕರ್ಣನೂ ಅನೇಕಸಲ ಹೇಳಿದ್ದೇವೆ. ಅದನ್ನು ಹೇಳಿ ತೃಪ್ತನಾಗದೇ ಮತ್ತೆ ಹೇಳುತ್ತಿದ್ದೇನೆ.
04042003a ಪರಾಜಿತೈರ್ಹಿ ವಸ್ತವ್ಯಂ ತೈಶ್ಚ ದ್ವಾದಶ ವತ್ಸರಾನ್|
04042003c ವನೇ ಜನಪದೇಽಜ್ಞಾತೈರೇಷ ಏವ ಪಣೋ ಹಿ ನಃ||
ಅವರು ಜೂಜಿನಲ್ಲಿ ಸೋತರೆ ಹನ್ನೆರಡು ವರ್ಷ ಕಾಡಿನಲ್ಲಿಯೂ ಒಂದು ವರ್ಷ ಅಜ್ಞಾತರಾಗಿ ಯಾವುದಾದರೂ ದೇಶದಲ್ಲಿಯೂ ವಾಸಮಾಡತಕ್ಕದ್ದು – ಇದೇ ಅಲ್ಲವೇ ನಮ್ಮ ಪಣ.
04042004a ತೇಷಾಂ ನ ತಾವನ್ನಿರ್ವೃತ್ತಂ ವರ್ತತೇ ತು ತ್ರಯೋದಶಂ|
04042004c ಅಜ್ಞಾತವಾಸಂ ಬೀಭತ್ಸುರಥಾಸ್ಮಾಭಿಃ ಸಮಾಗತಃ||
ಅವರ ಅಜ್ಞಾತವಾಸದ ಹದಿಮೂರನೆಯ ವರ್ಷ ಮುಗಿದಿಲ್ಲ; ಇನ್ನೂ ನಡೆಯುತ್ತಿದೆ. ಆದರೆ ಅರ್ಜುನನು ನಮ್ಮೆದುರು ಬಂದಿದ್ದಾನೆ.
04042005a ಅನಿವೃತ್ತೇ ತು ನಿರ್ವಾಸೇ ಯದಿ ಬೀಭತ್ಸುರಾಗತಃ|
04042005c ಪುನರ್ದ್ವಾದಶ ವರ್ಷಾಣಿ ವನೇ ವತ್ಸ್ಯಂತಿ ಪಾಂಡವಾಃ||
ಅಜ್ಞಾತವಾಸ ಮುಗಿಯದಿರುವಾಗ ಅರ್ಜುನನು ಬಂದಿದ್ದ ಪಕ್ಷದಲ್ಲಿ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ವಾಸಮಾಡಬೇಕಾಗುತ್ತದೆ.
04042006a ಲೋಭಾದ್ವಾ ತೇ ನ ಜಾನೀಯುರಸ್ಮಾನ್ವಾ ಮೋಹ ಆವಿಶತ್|
04042006c ಹೀನಾತಿರಿಕ್ತಮೇತೇಷಾಂ ಭೀಷ್ಮೋ ವೇದಿತುಮರ್ಹತಿ||
ಅವರು ರಾಜ್ಯ ಲೋಭದಿಂದ ಅವಧಿಯನ್ನು ಮರೆತಿದ್ದಾರೆಯೋ ಅಥವಾ ನಮಗೇ ಭ್ರಾಂತಿಯುಂಟಾಗಿದೆಯೋ ಅವರ ಅವಧಿಯ ಹೆಚ್ಚು ಕಡಿಮೆಗಳನ್ನು ಲೆಕ್ಕಹಾಕಿ ತಿಳಿಸಲು ಭೀಷ್ಮರು ಸಮರ್ಥರು.
04042007a ಅರ್ಥಾನಾಂ ತು ಪುನರ್ದ್ವೈಧೇ ನಿತ್ಯಂ ಭವತಿ ಸಂಶಯಃ|
04042007c ಅನ್ಯಥಾ ಚಿಂತಿತೋ ಹ್ಯರ್ಥಃ ಪುನರ್ಭವತಿ ಚಾನ್ಯಥಾ||
ವಿಷಯಕ್ಕೆ ಎರಡು ಮುಖಗಳಿರುವಲ್ಲಿ ಯಾವುದು ಸರಿಯೆಂಬುದರ ಬಗ್ಗೆ ಯಾವಾಗಲೂ ಸಂಶಯವುಂಟಾಗುತ್ತದೆ. ಒಂದು ರೀತಿಯಲ್ಲಿ ಚಿಂತಿತವಾದ ವಿಷಯವು ಕೆಲವೊಮ್ಮೆ ಮತ್ತೊಂದು ರೀತಿಯಲ್ಲಿ ಪರಿಣಮಿಸುತ್ತದೆ.
04042008a ಉತ್ತರಂ ಮಾರ್ಗಮಾಣಾನಾಂ ಮತ್ಸ್ಯಸೇನಾಂ ಯುಯುತ್ಸತಾಂ|
04042008c ಯದಿ ಬೀಭತ್ಸುರಾಯಾತಸ್ತೇಷಾಂ ಕಃ ಸ್ಯಾತ್ಪರಾಙ್ಮುಖಃ||
ಮತ್ಸ್ಯಸೇನೆಯೊಡನೆ ಹೋರಾಡುತ್ತಾ ಉತ್ತರನನ್ನು ನಿರೀಕ್ಷಿಸುತ್ತಿದ್ದ ನಮ್ಮಲ್ಲಿ ಯಾರುತಾನೆ ಅರ್ಜುನನು ಬಂದನೆಂದು ಬೆನ್ನುತಿರುಗಿಸಿಯಾರು?
04042009a ತ್ರಿಗರ್ತಾನಾಂ ವಯಂ ಹೇತೋರ್ಮತ್ಸ್ಯಾನ್ಯೋದ್ಧುಮಿಹಾಗತಾಃ|
04042009c ಮತ್ಸ್ಯಾನಾಂ ವಿಪ್ರಕಾರಾಂಸ್ತೇ ಬಹೂನಸ್ಮಾನಕೀರ್ತಯನ್||
ತ್ರಿಗರ್ತರಿಗಾಗಿ ಮತ್ಸ್ಯರೊಂದಿಗೆ ಯುದ್ಧಮಾಡಲು ನಾವು ಇಲ್ಲಿಗೆ ಬಂದೆವು. ಮತ್ಸ್ಯರು ಮಾಡಿದ ಕೆಡಕುಗಳನ್ನು ತ್ರಿಗರ್ತರು ನಮಗೆ ಬಹುವಾಗಿ ಹೇಳುತ್ತಿದ್ದರು.
04042010a ತೇಷಾಂ ಭಯಾಭಿಪನ್ನಾನಾಂ ತದಸ್ಮಾಭಿಃ ಪ್ರತಿಶ್ರುತಂ|
04042010c ಪ್ರಥಮಂ ತೈರ್ಗ್ರಹೀತವ್ಯಂ ಮತ್ಸ್ಯಾನಾಂ ಗೋಧನಂ ಮಹತ್||
04042011a ಸಪ್ತಮೀಮಪರಾಹ್ಣೇ ವೈ ತಥಾ ನಸ್ತೈಃ ಸಮಾಹಿತಂ|
04042011c ಅಷ್ಟಮ್ಯಾಂ ಪುನರಸ್ಮಾಭಿರಾದಿತ್ಯಸ್ಯೋದಯಂ ಪ್ರತಿ||
ಭಯಗ್ರಸ್ತರಾದ ಅವರಿಗೆ ನಾವು ನೆರವಿನ ಭರವಸೆ ಕೊಟ್ಟೆವು. ಮೊದಲು ಅವರು ಮತ್ಸ್ಯರ ದೊಡ್ಡ ಗೋಧನವನ್ನು ಸಪ್ತಮಿಯಂದು ಅಪರಾಹ್ಣದಲ್ಲಿ ಹಿಡಿಯತಕ್ಕದ್ದೆಂದೂ ನಾವು ಅಷ್ಟಮಿಯಂದು ಸೂರ್ಯೋದಯದ ಹೊತ್ತಿಗೆ ಇನ್ನಷ್ಟು ಗೋಧನವನ್ನು ಹಿಡಿಯತಕ್ಕದ್ದೆಂದೂ ಅವರಿಗೂ ನಮಗೂ ಒಪ್ಪಂದವಾಗಿತ್ತು.
04042012a ತೇ ವಾ ಗಾವೋ ನ ಪಶ್ಯಂತಿ ಯದಿ ವ ಸ್ಯುಃ ಪರಾಜಿತಾಃ|
04042012c ಅಸ್ಮಾನ್ವಾಪ್ಯತಿಸಂಧಾಯ ಕುರ್ಯುರ್ಮತ್ಸ್ಯೇನ ಸಂಗತಂ||
ಅವರಿಗೆ ಗೋವುಗಳು ಸಿಕ್ಕದಿರಬಹುದು ಅಥವಾ ಅವರು ಸೋತಿದ್ದರೆ ನಮ್ಮನ್ನು ವಂಚಿಸಿ ಮತ್ಸ್ಯರಾಜನೊಡನೆ ಸಂಧಿ ಮಾಡಿಕೊಂಡಿರಬಹುದು.
04042013a ಅಥ ವಾ ತಾನುಪಾಯಾತೋ ಮತ್ಸ್ಯೋ ಜಾನಪದೈಃ ಸಹ|
04042013c ಸರ್ವಯಾ ಸೇನಯಾ ಸಾರ್ಧಮಸ್ಮಾನ್ಯೋದ್ಧುಮುಪಾಗತಃ||
ಅಥವಾ ಮತ್ಸ್ಯನು ಜಾನಪದರೊಡನೆ ಸೇರಿ ಅವರನ್ನೋಡಿಸಿ ಎಲ್ಲ ಸೇನೆಯ ಸಹಿತ ನಮ್ಮೊಡನೆ ಯುದ್ಧ ಮಾಡಲು ಬಂದಿರಬಹುದು.
04042014a ತೇಷಾಮೇವ ಮಹಾವೀರ್ಯಃ ಕಶ್ಚಿದೇವ ಪುರಃಸರಃ|
04042014c ಅಸ್ಮಾಂ ಜೇತುಮಿಹಾಯಾತೋ ಮತ್ಸ್ಯೋ ವಾಪಿ ಸ್ವಯಂ ಭವೇತ್||
ಅವರಲ್ಲಿ ಯಾರೋ ಒಬ್ಬ ಮಹಾಪರಾಕ್ರಮಶಾಲಿ ಮೊದಲು ನಮ್ಮನ್ನು ಜಯಿಸಲು ಇಲ್ಲಿಗೆ ಬಂದಿದ್ದಾನೆ. ಅಥವಾ ಸ್ವಯಂ ಮತ್ಸ್ಯರಾಜನೇ ಇರಬಹುದು.
04042015a ಯದ್ಯೇಷ ರಾಜಾ ಮತ್ಸ್ಯಾನಾಂ ಯದಿ ಬೀಭತ್ಸುರಾಗತಃ|
04042015c ಸರ್ವೈರ್ಯೋದ್ಧವ್ಯಮಸ್ಮಾಭಿರಿತಿ ನಃ ಸಮಯಃ ಕೃತಃ||
ಬಂದಿರುವವನು ಮತ್ಸ್ಯರಾಜನೇ ಆಗಿರಲಿ ಅಥವಾ ಅರ್ಜುನನೇ ಆಗಿರಲಿ, ನಾವೆಲ್ಲರೂ ಅವನೊಡನೆ ಹೋರಾಡಬೇಕೆಂಬುದು ನಾವು ಮಾಡಿಕೊಂಡಿರುವ ಒಪ್ಪಂದ.
04042016a ಅಥ ಕಸ್ಮಾತ್ಸ್ಥಿತಾ ಹ್ಯೇತೇ ರಥೇಷು ರಥಸತ್ತಮಾಃ|
04042016c ಭೀಷ್ಮೋ ದ್ರೋಣಃ ಕೃಪಶ್ಚೈವ ವಿಕರ್ಣೋ ದ್ರೌಣಿರೇವ ಚ||
ಭೀಷ್ಮ, ದ್ರೋಣ, ಕೃಪ, ವಿಕರ್ಣ, ಅಶ್ವತ್ಥಾಮ - ಈ ರಥಿಕ ಶ್ರೇಷ್ಠರು ಏತಕ್ಕೆ ರಥಗಳಲ್ಲಿ ಸುಮ್ಮನೆ ನಿಂತುಬಿಟ್ಟಿದ್ದಾರೆ?
04042017a ಸಂಭ್ರಾಂತಮನಸಃ ಸರ್ವೇ ಕಾಲೇ ಹ್ಯಸ್ಮಿನ್ಮಹಾರಥಾಃ|
04042017c ನಾನ್ಯತ್ರ ಯುದ್ಧಾಚ್ಚ್ರೇಯೋಽಸ್ತಿ ತಥಾತ್ಮಾ ಪ್ರಣಿಧೀಯತಾಂ||
ಎಲ್ಲ ಮಹಾರಥರೂ ಈಗ ಸಂಭ್ರಾಂತಚಿತ್ತರಾಗಿದ್ದಾರೆ. ಯುದ್ಧಕ್ಕಿಂತ ಶ್ರೇಯಸ್ಕರವಾದುದು ಬೇರೆಯಿಲ್ಲ. ಆದ್ದರಿಂದ ನಾವೆಲ್ಲರೂ ಮನಸ್ಸನ್ನು ಗಟ್ಟಿ ಮಾಡಿಕೊಳ್ಳೋಣ.
04042018a ಆಚ್ಛಿನ್ನೇ ಗೋಧನೇಽಸ್ಮಾಕಮಪಿ ದೇವೇನ ವಜ್ರಿಣಾ|
04042018c ಯಮೇನ ವಾಪಿ ಸಂಗ್ರಾಮೇ ಕೋ ಹಾಸ್ತಿನಪುರಂ ವ್ರಜೇತ್||
ಯುದ್ಧದಲ್ಲಿ ದೇವೇಂದ್ರನಾಗಲೀ ಯಮನಾಗಲೀ ಗೋಧನವನ್ನು ನಮ್ಮಿಂದ ಕಿತ್ತುಕೊಂಡರೆ ಯಾರುತಾನೆ ಹಸ್ತಿನಾಪುರಕ್ಕೆ ಓಡಿಹೋಗುತ್ತಾರೆ?
04042019a ಶರೈರಭಿಪ್ರಣುನ್ನಾನಾಂ ಭಗ್ನಾನಾಂ ಗಹನೇ ವನೇ|
04042019c ಕೋ ಹಿ ಜೀವೇತ್ಪದಾತೀನಾಂ ಭವೇದಶ್ವೇಷು ಸಂಶಯಃ|
04042019e ಆಚಾರ್ಯಂ ಪೃಷ್ಠತಃ ಕೃತ್ವಾ ತಥಾ ನೀತಿರ್ವಿಧೀಯತಾಂ||
ಅಶ್ವಸೇನೆಯು ತಪ್ಪಿಸಿಕೊಳ್ಳುವುದು ಸಂಶಯಾಸ್ಪದವಾಗಿರುವಾಗ ಬಾಣಗಳು ಹಿಂದಿನಿಂದ ಇರಿಯುತ್ತಿರಲು ಭಗ್ನವಾದ ಪದಾತಿಗೆ ಯಾರುತಾನೆ ದಟ್ಟವಾದ ಕಾಡಿನಲ್ಲಿ ಹೋಗಿ ಬದುಕಿಯಾರು? ಆಚಾರ್ಯನನ್ನು ಹಿಂದಿಕ್ಕಿ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042020a ಜಾನಾತಿ ಹಿ ಮತಂ ತೇಷಾಮತಸ್ತ್ರಾಸಯತೀವ ನಃ|
04042020c ಅರ್ಜುನೇನಾಸ್ಯ ಸಂಪ್ರೀತಿಮಧಿಕಾಮುಪಲಕ್ಷಯೇ||
ಅವನು ಆ ಪಾಂಡವರ ಅಭಿಪ್ರಾಯವನ್ನು ಬಲ್ಲವನಾಗಿದ್ದು ನಮಗೆ ಹೆದರಿಕೆಯುಂಟುಮಾಡುತ್ತಿದ್ದಾನೆ. ಅರ್ಜುನನ ಮೇಲೆ ಅವನಿಗೆ ಮಿಗಿಲಾದ ಪ್ರೀತಿಯಿರುವುದು ನನಗೆ ಗೊತ್ತು.
04042021a ತಥಾ ಹಿ ದೃಷ್ಟ್ವಾ ಬೀಭತ್ಸುಮುಪಾಯಾಂತಂ ಪ್ರಶಂಸತಿ|
04042021c ಯಥಾ ಸೇನಾ ನ ಭಜ್ಯೇತ ತಥಾ ನೀತಿರ್ವಿಧೀಯತಾಂ||
ಏಕೆಂದರೆ ಅರ್ಜುನನು ಬರುತ್ತಿರುವುದನ್ನು ನೋಡಿಯೇ ಅವನು ಹೊಗಳತೊಡಗುತ್ತಾನೆ. ಸೈನ್ಯ ಭಗ್ನವಾಗದಂತೆ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042022a ಅದೇಶಿಕಾ ಮಹಾರಣ್ಯೇ ಗ್ರೀಷ್ಮೇ ಶತ್ರುವಶಂ ಗತಾ|
04042022c ಯಥಾ ನ ವಿಭ್ರಮೇತ್ಸೇನಾ ತಥಾ ನೀತಿರ್ವಿಧೀಯತಾಂ||
ಈ ಬೇಸಗೆಯ ಮಹಾರಣ್ಯದಲ್ಲಿ ಸ್ವದೇಶದಲ್ಲಿನ ಸೇನೆ ಶತ್ರುವಶವಾಗಿ ಗಾಬರಿಗೊಳ್ಳದಂತೆ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042023a ಅಶ್ವಾನಾಂ ಹೇಷಿತಂ ಶ್ರುತ್ವಾ ಕಾ ಪ್ರಶಂಸಾ ಭವೇತ್ಪರೇ|
04042023c ಸ್ಥಾನೇ ವಾಪಿ ವ್ರಜಂತೋ ವಾ ಸದಾ ಹೇಷಂತಿ ವಾಜಿನಃ||
ಕುದುರೆಗಳ ಕೆನೆತವನ್ನು ಕೇಳಿಯೇ ವೈರಿಯ ವಿಷದಲ್ಲಿ ಎಂಥ ಹೊಗಳಿಕೆ! ನಿಂತಿರಲಿ ಅಥವಾ ಓಡುತ್ತಿರಲಿ, ಕುದುರೆಗಳು ಯಾವಾಗಲೂ ಕೆನೆಯುತ್ತವೆ.
04042024a ಸದಾ ಚ ವಾಯವೋ ವಾಂತಿ ನಿತ್ಯಂ ವರ್ಷತಿ ವಾಸವಃ|
04042024c ಸ್ತನಯಿತ್ನೋಶ್ಚ ನಿರ್ಘೋಷಃ ಶ್ರೂಯತೇ ಬಹುಶಸ್ತಥಾ||
ಗಾಳಿ ಯಾವಾಗಲೂ ಬೀಸುತ್ತದೆ. ಇಂದ್ರ ಯಾವಾಗಲೂ ಮಳೆಗರೆಯುತ್ತಾನೆ. ಅಂತೆಯೇ ಮೋಡಗಳ ಮೊಳಗು ಮೇಲಿಂದ ಮೇಲೆ ಕೇಳಿ ಬರುತ್ತದೆ.
04042025a ಕಿಮತ್ರ ಕಾರ್ಯಂ ಪಾರ್ಥಸ್ಯ ಕಥಂ ವಾ ಸ ಪ್ರಶಸ್ಯತೇ|
04042025c ಅನ್ಯತ್ರ ಕಾಮಾದ್ದ್ವೇಷಾದ್ವಾ ರೋಷಾದ್ವಾಸ್ಮಾಸು ಕೇವಲಾತ್||
ಇವುಗಳಲ್ಲಿ ಪಾರ್ಥನದೇನು ಕೆಲಸ? ಏತಕ್ಕಾಗಿ ಅವನನ್ನು ಹೊಗಳಬೇಕು? ಇದೆಲ್ಲ ಕೇವಲ ಅರ್ಜುನನ ಮೇಲಿನ ಪ್ರೀತಿಯಿಂದಾಗಿ ಅಥವಾ ನಮ್ಮ ಮೇಲಿನ ದ್ವೇಷ ಇಲ್ಲವೆ ಕೋಪದಿಂದ ಅಷ್ಟೆ.
04042026a ಆಚಾರ್ಯಾ ವೈ ಕಾರುಣಿಕಾಃ ಪ್ರಾಜ್ಞಾಶ್ಚಾಪಾಯದರ್ಶಿನಃ|
04042026c ನೈತೇ ಮಹಾಭಯೇ ಪ್ರಾಪ್ತೇ ಸಂಪ್ರಷ್ಟವ್ಯಾಃ ಕಥಂ ಚನ||
ಆಚಾರ್ಯರು ಕರುಣಾಳುಗಳು, ಜ್ಞಾನಿಗಳು. ಮುಂಬರುವ ಅಪಾಯಗಳನ್ನು ಕಾಣುವವರು. ಮಹಾಭಯ ಒದಗಿರುವಾಗ ಅವರನ್ನೆಂದೂ ಕೇಳಬಾರದು.
04042027a ಪ್ರಾಸಾದೇಷು ವಿಚಿತ್ರೇಷು ಗೋಷ್ಠೀಷ್ವಾವಸಥೇಷು ಚ|
04042027c ಕಥಾ ವಿಚಿತ್ರಾಃ ಕುರ್ವಾಣಾಃ ಪಂಡಿತಾಸ್ತತ್ರ ಶೋಭನಾಃ||
ಪಂಡಿತರು ಸುಂದರವಾದ ಅರಮನೆಗಳಲ್ಲಿ ಗೋಷ್ಠಿಗಳಲ್ಲಿ ಮತ್ತು ಶಾಲೆಗಳಲ್ಲಿ ವಿಚಿತ್ರವಾದ ಕಥೆಗಳನ್ನು ಹೇಳುತ್ತಾ ಇದ್ದರೆ ಶೋಭಿಸುತ್ತಾರೆ.
04042028a ಬಹೂನ್ಯಾಶ್ಚರ್ಯರೂಪಾಣಿ ಕುರ್ವಂತೋ ಜನಸಂಸದಿ|
04042028c ಇಷ್ವಸ್ತ್ರೇ ಚಾರುಸಂಧಾನೇ ಪಂಡಿತಾಸ್ತತ್ರ ಶೋಭನಾಃ||
ಪಂಡಿತರು ಬಹಳ ಆಶ್ಚರ್ಯಕರವಾದ ವಿಷಯಗಳನ್ನು ಹೇಳುತ್ತಾ ಜನರ ಸಭೆಯಲ್ಲಿ ಬಿಲ್ಲಿಗೆ ಬಾಣವನ್ನು ಸರಿಯಾಗಿ ಸೇರಿಸುವಲ್ಲಿ ಶೋಭಿಸುತ್ತಾರೆ.
04042029a ಪರೇಷಾಂ ವಿವರಜ್ಞಾನೇ ಮನುಷ್ಯಾಚರಿತೇಷು ಚ|
04042029c ಅನ್ನಸಂಸ್ಕಾರದೋಷೇಷು ಪಂಡಿತಾಸ್ತತ್ರ ಶೋಭನಾಃ||
ಪಂಡಿತರು ಇತರರ ದೋಷಗಳನ್ನು ಪತ್ತೆ ಹಚ್ಚುವಲ್ಲಿ, ಮನುಷ್ಯ ಸ್ವಭಾವವನ್ನು ಅರಿಯುವಲ್ಲಿ, ಅನ್ನಸಂಸ್ಕಾರ ದೋಷಗಳನ್ನು ಕಂಡುಹಿಡಿಯುವಲ್ಲಿ ಶೋಭಿಸುತ್ತಾರೆ.
04042030a ಪಂಡಿತಾನ್ಪೃಷ್ಠತಃ ಕೃತ್ವಾ ಪರೇಷಾಂ ಗುಣವಾದಿನಃ|
04042030c ವಿಧೀಯತಾಂ ತಥಾ ನೀತಿರ್ಯಥಾ ವಧ್ಯೇತ ವೈ ಪರಃ||
ಅನ್ಯರ ಗುಣಗಳನ್ನು ಹೊಗಳುವ ಪಂಡಿತರನ್ನು ಅಲಕ್ಷಿಸಿ, ವೈರಿಯನ್ನು ವಧಿಸುವಂತಹ ಯುದ್ಧನೀತಿಯನ್ನು ರೂಪಿಸತಕ್ಕದ್ದು.
04042031a ಗಾವಶ್ಚೈವ ಪ್ರತಿಷ್ಠಂತಾಂ ಸೇನಾಂ ವ್ಯೂಹಂತು ಮಾಚಿರಂ|
04042031c ಆರಕ್ಷಾಶ್ಚ ವಿಧೀಯಂತಾಂ ಯತ್ರ ಯೋತ್ಸ್ಯಾಮಹೇ ಪರಾನ್||
ಗೋವುಗಳನ್ನು ಸುರಕ್ಷಿತವಾಗಿ ಇರಿಸತಕ್ಕದ್ದು. ಸೇನೆ ಬೇಗ ವ್ಯೂಹಗೊಳ್ಳಲಿ. ಶತ್ರುಗಳೊಡನೆ ನಾವು ಹೋರಾಡುವ ಎಡೆಗಳಲ್ಲಿ ಕಾವಲುದಳದ ವ್ಯವಸ್ಥೆ ಮಾಡತಕ್ಕದ್ದು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದುರ್ಯೋಧನವಾಕ್ಯೇ ದ್ವಿಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದುರ್ಯೋಧನವಾಕ್ಯದಲ್ಲಿ ನಲ್ವತ್ತೆರಡನೆಯ ಅಧ್ಯಾಯವು.