ವಿರಾಟ ಪರ್ವ: ಗೋಹರಣ ಪರ್ವ
೪೦
ಉತ್ತರನು ಅರ್ಜುನನ ಸಾರಥಿಯಾದುದು
ಅರ್ಜುನನಿಗೆ ನಪುಂಸಕತ್ವವು ಹೇಗುಂಟಾಯಿತೆಂದು ಉತ್ತರನು ಕೇಳಲು ತಾನು ಅಣ್ಣನ ಆಜ್ಞೆಯಂತೆ ಧರ್ಮಯುಕ್ತನಾಗಿ ಒಂದು ವರ್ಷದ ಬ್ರಹ್ಮಚರ್ಯವ್ರತವನ್ನು ಕೈಗೊಂಡಿರುವವನೆಂದು ಅರ್ಜುನನು ಹೇಳುವುದು (೧-೧೩). ಅರ್ಜುನನು ಯುದ್ಧ ಸನ್ನದ್ಧನಾಗಿ ಗಾಂಡೀವವನ್ನು ಟೇಂಕರಿಸುವುದು (೧೪-೨೭).
04040001 ಉತ್ತರ ಉವಾಚ|
04040001a ಆಸ್ಥಾಯ ವಿಪುಲಂ ವೀರ ರಥಂ ಸಾರಥಿನಾ ಮಯಾ|
04040001c ಕತಮಂ ಯಾಸ್ಯಸೇಽನೀಕಮುಕ್ತೋ ಯಾಸ್ಯಾಮ್ಯಹಂ ತ್ವಯಾ||
ಉತ್ತರನು ಹೇಳಿದನು: “ವೀರ! ನಾನು ಸಾರಥಿಯಾಗಿರುವ ಈ ದೊಡ್ಡ ರಥದಲ್ಲಿ ಕುಳಿತು ನೀನು ಯಾವ ಸೈನ್ಯದತ್ತ ಹೋಗಬಯಸಿ ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಒಯ್ಯುತ್ತೇನೆ.”
04040002 ಅರ್ಜುನ ಉವಾಚ|
04040002aಪ್ರೀತೋಽಸ್ಮಿ ಪುರುಷವ್ಯಾಘ್ರ ನ ಭಯಂ ವಿದ್ಯತೇ ತವ|
04040002c ಸರ್ವಾನ್ನುದಾಮಿ ತೇ ಶತ್ರೂನ್ರಣೇ ರಣವಿಶಾರದ||
ಅರ್ಜುನನು ಹೇಳಿದನು: “ಪುರುಷಶ್ರೇಷ್ಠ! ನಿನ್ನ ವಿಷಯದಲ್ಲಿ ಸಂತುಷ್ಟನಾಗಿದ್ದೇನೆ. ನಿನಗಿನ್ನು ಭಯವಿಲ್ಲ. ಯುದ್ಧವಿಶಾರದನೇ! ರಣದಲ್ಲಿ ನಿನ್ನ ವೈರಿಗಳನ್ನು ಓಡಿಸಿಬಿಡುತ್ತೇನೆ.
04040003a ಸ್ವಸ್ಥೋ ಭವ ಮಹಾಬುದ್ಧೇ ಪಶ್ಯ ಮಾಂ ಶತ್ರುಭಿಃ ಸಹ|
04040003c ಯುಧ್ಯಮಾನಂ ವಿಮರ್ದೇಽಸ್ಮಿನ್ಕುರ್ವಾಣಂ ಭೈರವಂ ಮಹತ್||
ಮಹಾಬುದ್ಧಿಶಾಲಿ! ಸ್ವಸ್ಥನಾಗಿರು. ನಾನು ಈ ಯುದ್ಧದಲ್ಲಿ ಬಯಂಕರವೂ ಮಹತ್ತೂ ಆದುದನ್ನು ಸಾಧಿಸುತ್ತಾ ಶತ್ರುಗಳೊಡನೆ ಹೋರಾಡುವುದನ್ನು ನೋಡು.
04040004a ಏತಾನ್ಸರ್ವಾನುಪಾಸಂಗಾನ್ ಕ್ಷಿಪ್ರಂ ಬಧ್ನೀಹಿ ಮೇ ರಥೇ|
04040004c ಏತಂ ಚಾಹರ ನಿಸ್ತ್ರಿಂಶಂ ಜಾತರೂಪಪರಿಷ್ಕೃತಂ|
04040004e ಅಹಂ ವೈ ಕುರುಭಿರ್ಯೋತ್ಸ್ಯಾಮ್ಯವಜೇಷ್ಯಾಮಿ ತೇ ಪಶೂನ್||
ಈ ಎಲ್ಲ ಬತ್ತಳಿಕೆಗಳನ್ನೂ ನನ್ನ ರಥಕ್ಕೆ ಬೇಗ ಬಿಗಿ. ಈ ಸುವರ್ಣಖಚಿತ ಕತ್ತಿಯನ್ನು ತೆಗೆದುಕೋ. ನಾನು ಕುರುಗಳೊಡನೆ ಹೋರಾಡುತ್ತೇನೆ. ನಿನ್ನ ಗೋವುಗಳನ್ನು ಗೆದ್ದು ಕೊಡುತ್ತೇನೆ.
04040005a ಸಂಕಲ್ಪಪಕ್ಷವಿಕ್ಷೇಪಂ ಬಾಹುಪ್ರಾಕಾರತೋರಣಂ|
04040005c ತ್ರಿದಂಡತೂಣಸಂಬಾಧಮನೇಕಧ್ವಜಸಂಕುಲಂ||
04040006a ಜ್ಯಾಕ್ಷೇಪಣಂ ಕ್ರೋಧಕೃತಂ ನೇಮೀನಿನದದುಂದುಭಿ|
04040006c ನಗರಂ ತೇ ಮಯಾ ಗುಪ್ತಂ ರಥೋಪಸ್ಥಂ ಭವಿಷ್ಯತಿ||
ನಿನ್ನ ನಗರವು ಈ ರಥದ ಮಧ್ಯಭಾಗದಲ್ಲಿ ಇದೆಯೋ ಎಂಬಂತೆ ನನ್ನಿಂದ ರಕ್ಷಿತವಾಗಿದೆ. ನನ್ನ ಸಂಕಲ್ಪವೇ ನಗರದ ದಾರಿಗಳು ಮತ್ತು ಓಣಿಗಳು. ಬಾಹುಗಳೇ ಕೋಟೆ ಮತ್ತು ಹೆಬ್ಬಾಗಿಲುಗಳು. ರಥದ ಮೂರು ದಂಡಗಳೇ ಮೂರುಬಗೆಯ ಸೇನೆಗಳು. ಬತ್ತಳಿಕೆಯೇ ರಕ್ಷಣಸಾಮಗ್ರಿ. ನನ್ನ ಈ ಧ್ವಜವೇ ನಗರದ ಧ್ವಜಸಮೂಹ. ಈ ನನ್ನ ಬಿಲ್ಲಿನ ಹೆದೆಯೇ ನಗರ ರಕ್ಷಣೆಯ ಫಿರಂಗಿ. ಶತ್ರುನಾಶಕ ಕೋಪವೇ ದೃಢಚಿತ್ತ ಕಾರ್ಯ. ರಥಚಕ್ರದ ಶಬ್ಧವೇ ನಗರದ ದುಂದುಭಿಗಳು.
04040007a ಅಧಿಷ್ಠಿತೋ ಮಯಾ ಸಂಖ್ಯೇ ರಥೋ ಗಾಂಡೀವಧನ್ವನಾ|
04040007c ಅಜೇಯಃ ಶತ್ರುಸೈನ್ಯಾನಾಂ ವೈರಾಟೇ ವ್ಯೇತು ತೇ ಭಯಂ||
ವಿರಾಟಪುತ್ರ! ಗಾಂಡೀವ ಧನುವನ್ನುಳ್ಳ ನಾನು ಕುಳಿತಿರುವ ಈ ರಥವು ಯುದ್ಧದಲ್ಲಿ ಶತ್ರುಸೇನೆಗೆ ಅಜೇಯವಾದುದು. ನಿನ್ನ ಹೆದರಿಕೆಯು ತೊಲಗಲಿ.”
04040008 ಉತ್ತರ ಉವಾಚ|
04040008a ಬಿಭೇಮಿ ನಾಹಮೇತೇಷಾಂ ಜಾನಾಮಿ ತ್ವಾಂ ಸ್ಥಿರಂ ಯುಧಿ|
04040008c ಕೇಶವೇನಾಪಿ ಸಂಗ್ರಾಮೇ ಸಾಕ್ಷಾದಿಂದ್ರೇಣ ವಾ ಸಮಂ||
ಉತ್ತರನು ಹೇಳಿದನು: “ಇವರಿಗೆ ನಾನು ಇನ್ನು ಹೆದರುವುದಿಲ್ಲ. ಯುದ್ಧದಲ್ಲಿ ನೀನು ಸ್ಥಿರನೆಂಬುವುದನ್ನು ನಾನು ಬಲ್ಲೆ. ಸಂಗ್ರಾಮದಲ್ಲಿ ನೀನು ಸಾಕ್ಷಾತ್ ಕೇಶವನಿಗೆ ಅಥವಾ ಇಂದ್ರನಿಗೆ ಸಮಾನನೆಂದೂ ಬಲ್ಲೆ.
04040009a ಇದಂ ತು ಚಿಂತಯನ್ನೇವ ಪರಿಮುಹ್ಯಾಮಿ ಕೇವಲಂ|
04040009c ನಿಶ್ಚಯಂ ಚಾಪಿ ದುರ್ಮೇಧಾ ನ ಗಚ್ಛಾಮಿ ಕಥಂ ಚನ||
ಆದರೆ ಇದನ್ನು ಆಲೋಚಿಸುತ್ತ ನಾನು ಸಂಪೂರ್ಣ ದಿಗ್ಭ್ರಾಂತನಾಗುತ್ತಿದ್ದೇನೆ. ಮಂದ ಬುದ್ಧಿಯವನಾದ ನಾನು ಯಾವುದೇ ನಿರ್ಧಾರಕ್ಕೆ ಬರಲಾರದವನಾಗಿದ್ದೇನೆ.
04040010a ಏವಂ ವೀರಾಂಗರೂಪಸ್ಯ ಲಕ್ಷಣೈರುಚಿತಸ್ಯ ಚ|
04040010c ಕೇನ ಕರ್ಮವಿಪಾಕೇನ ಕ್ಲೀಬತ್ವಮಿದಮಾಗತಂ||
ಇಂಥಹ ವೀರಾಂಗಗಳಿಂದ ಕೂಡಿದ ರೂಪವುಳ್ಳ ಮತ್ತು ಸುಲಕ್ಷಣಗಳಿಂದ ಶ್ಲಾಘ್ಯನಾದ ನಿನಗೆ ಯಾವ ಕರ್ಮವಿಪಾಕದಿಂದ ಈ ನಪುಂಸಕತ್ವವು ಉಂಟಾಯಿತು?
04040011a ಮನ್ಯೇ ತ್ವಾಂ ಕ್ಲೀಬವೇಷೇಣ ಚರಂತಂ ಶೂಲಪಾಣಿನಂ|
04040011c ಗಂಧರ್ವರಾಜಪ್ರತಿಮಂ ದೇವಂ ವಾಪಿ ಶತಕ್ರತುಂ||
ನಪುಂಸಕ ವೇಶದಲ್ಲಿ ಸಂಚರಿಸುವ ಶೂಲಪಾಣಿಯೆಂದು, ಗಂಧರ್ವರಾಜಸಮಾನನೆಂದು ಅಥವಾ ದೇವೇಂದ್ರನೆಂದು ನಿನ್ನನ್ನು ತಿಳಿಯುತ್ತೇನೆ.”
04040012 ಅರ್ಜುನ ಉವಾಚ|
04040012a ಭ್ರಾತುರ್ನಿಯೋಗಾಜ್ಜ್ಯೇಷ್ಠಸ್ಯ ಸಂವತ್ಸರಮಿದಂ ವ್ರತಂ|
04040012c ಚರಾಮಿ ಬ್ರಹ್ಮಚರ್ಯಂ ವೈ ಸತ್ಯಮೇತದ್ಬ್ರವೀಮಿ ತೇ||
ಅರ್ಜುನನು ಹೇಳಿದನು: “ಇದೋ ನಾನು ನಿನಗೆ ಹೇಳುತ್ತಿರುವುದು ಸತ್ಯ. ಅಣ್ಣನ ಆಜ್ಞೆಯಂತೆ ಈ ಬ್ರಹ್ಮಚರ್ಯವ್ರತವನ್ನು ಒಂದು ವರ್ಷಕಾಲ ಆಚರಿಸುತ್ತಿದ್ದೇನೆ.
04040013a ನಾಸ್ಮಿ ಕ್ಲೀಬೋ ಮಹಾಬಾಹೋ ಪರವಾನ್ಧರ್ಮಸಮ್ಯುತಃ|
04040013c ಸಮಾಪ್ತವ್ರತಮುತ್ತೀರ್ಣಂ ವಿದ್ಧಿ ಮಾಂ ತ್ವಂ ನೃಪಾತ್ಮಜ||
ಮಹಾಬಾಹೋ! ನಾನು ನಪುಂಸಕನಲ್ಲ. ಪರಾಧೀನನಾಗಿ, ಧರ್ಮಯುಕ್ತನಾಗಿ ವ್ರತವನ್ನು ಮುಗಿಸಿ ದಡಮುಟ್ಟಿದ ರಾಜಪುತ್ರನೆಂದು ನೀನು ನನ್ನನ್ನು ತಿಳಿ.”
04040014 ಉತ್ತರ ಉವಾಚ|
04040014a ಪರಮೋಽನುಗ್ರಹೋ ಮೇಽದ್ಯ ಯತ್ಪ್ರತರ್ಕೋ ನ ಮೇ ವೃಥಾ|
04040014c ನ ಹೀದೃಶಾಃ ಕ್ಲೀಬರೂಪಾ ಭವಂತೀಹ ನರೋತ್ತಮಾಃ||
ಉತ್ತರನು ಹೇಳಿದನು: “ನನಗೆ ನೀನಿಂದು ಪರಮಾನುಗ್ರವನ್ನುಂಟುಮಾಡಿರುವೆ. ನನ್ನ ತರ್ಕ ವ್ಯರ್ಥವಾಗಲಿಲ್ಲ. ಇಂತಹ ನರೋತ್ತಮರು ಲೋಕದಲ್ಲಿ ನಪುಂಸಕರೂಪದಲ್ಲಿರುವುದಿಲ್ಲ.
04040015a ಸಹಾಯವಾನಸ್ಮಿ ರಣೇ ಯುಧ್ಯೇಯಮಮರೈರಪಿ|
04040015c ಸಾಧ್ವಸಂ ತತ್ಪ್ರನಷ್ಟಂ ಮೇ ಕಿಂ ಕರೋಮಿ ಬ್ರವೀಹಿ ಮೇ||
ಯುದ್ಧದಲ್ಲಿ ನನಗೆ ನೀನು ಸಹಾಯಮಾಡುತ್ತೀಯೆ. ಈಗ ನಾನು ದೇವತೆಗಳೊಡನೆ ಕೂಡ ಹೋರಾಡಬಲ್ಲೆ. ಆ ನನ್ನ ಹೆದರಿಕೆಯು ಅಳಿದುಹೋಯಿತು. ಮುಂದೆ ಏನು ಮಾಡಲಿ? ನನಗೆ ಹೇಳು.
04040016a ಅಹಂ ತೇ ಸಂಗ್ರಹೀಷ್ಯಾಮಿ ಹಯಾಂ ಶತ್ರುರಥಾರುಜಃ|
04040016c ಶಿಕ್ಷಿತೋ ಹ್ಯಸ್ಮಿ ಸಾರಥ್ಯೇ ತೀರ್ಥತಃ ಪುರುಷರ್ಷಭ||
ಶತ್ರುರಥಗಳನ್ನು ಮುರಿಯಬಲ್ಲ ನಿನ್ನ ಕುದುರೆಗಳನ್ನು ನಾನು ಹಿಡಿದುಕೊಳ್ಳುತ್ತೇನೆ. ಪುರುಷಶ್ರೇಷ್ಠ! ಸಾರಥ್ಯದಲ್ಲಿ ನಾನು ಆಚಾರ್ಯನಿಂದ ಶಿಕ್ಷಣ ಪಡೆದಿದ್ದೇನೆ.
04040017a ದಾರುಕೋ ವಾಸುದೇವಸ್ಯ ಯಥಾ ಶಕ್ರಸ್ಯ ಮಾತಲಿಃ|
04040017c ತಥಾ ಮಾಂ ವಿದ್ಧಿ ಸಾರಥ್ಯೇ ಶಿಕ್ಷಿತಂ ನರಪುಂಗವ||
ನರಶ್ರೇಷ್ಠ! ಸಾರಥ್ಯದಲ್ಲಿ ವಾಸುದೇವನಿಗೆ ದಾರುಕನು ಹೇಗೋ ಇಂದ್ರನಿಗೆ ಮಾತಲಿಯು ಹೇಗೋ ಹಾಗೆ ನಾನು ನಿನಗೆ ಸುಶಿಕ್ಷಿತ ಸಾರಥಿ ಎಂದು ತಿಳಿದುಕೋ.
04040018a ಯಸ್ಯ ಯಾತೇ ನ ಪಶ್ಯಂತಿ ಭೂಮೌ ಪ್ರಾಪ್ತಂ ಪದಂ ಪದಂ|
04040018c ದಕ್ಷಿಣಂ ಯೋ ಧುರಂ ಯುಕ್ತಃ ಸುಗ್ರೀವಸದೃಶೋ ಹಯಃ||
ಬಲಗಡೆಯಲ್ಲಿ ನೊಗಕ್ಕೆ ಕಟ್ಟಿದ ಕುದುರೆ ಸುಗ್ರೀವದಂತಿದೆ. ಅದು ಚಲಿಸುವಾಗ ಹೆಜ್ಜೆಗಳು ಭೂಮಿಯನ್ನು ಸೋಕಿದ್ದು ಕಾಣುವುದಿಲ್ಲ.
04040019a ಯೋಽಯಂ ಧುರಂ ಧುರ್ಯವರೋ ವಾಮಂ ವಹತಿ ಶೋಭನಃ|
04040019c ತಂ ಮನ್ಯೇ ಮೇಘಪುಷ್ಪಸ್ಯ ಜವೇನ ಸದೃಶಂ ಹಯಂ||
ರಥದ ಎಡಗಡೆಯ ನೊಗಕ್ಕೆ ಕಟ್ಟಿದ ಸುಂದರವೂ ಕುದುರೆಗಳಲ್ಲಿ ಶ್ರೇಷ್ಠವೂ ಆದ ಇನ್ನೊಂದು ಕುದುರೆ ವೇಗದಲ್ಲಿ ಮೇಘಪುಷ್ಪಕ್ಕೆ ಸಮಾನವಾಗಿದೆಯೆಂದು ಭಾವಿಸುತ್ತೇನೆ.
04040020a ಯೋಽಯಂ ಕಾಂಚನಸನ್ನಾಹಃ ಪಾರ್ಷ್ಣಿಂ ವಹತಿ ಶೋಭನಃ|
04040020c ವಾಮಂ ಸೈನ್ಯಸ್ಯ ಮನ್ಯೇ ತಂ ಜವೇನ ಬಲವತ್ತರಂ||
ಸುಂದರ ಚಿನ್ನದ ಕವಚವನ್ನುಳ್ಳ, ಹಿಂಬಾಗದಲ್ಲಿ ಎಡಗಡೆಯಿರುವ ವೇಗದಲ್ಲಿ ಬಲವತ್ತರವಾದ ಈ ಮತ್ತೊಂದು ಕುದುರೆಯನ್ನು ಸೈನ್ಯ ಎಂದು ತಿಳಿಯುತ್ತೇನೆ.
04040021a ಯೋಽಯಂ ವಹತಿ ತೇ ಪಾರ್ಷ್ಣಿಂ ದಕ್ಷಿಣಾಮಂಚಿತೋದ್ಯತಃ|
04040021c ಬಲಾಹಕಾದಪಿ ಮತಃ ಸ ಜವೇ ವೀರ್ಯವತ್ತರಃ||
ಹಿಂಬಾಗದಲ್ಲಿ ಬಲಗಡೆಯಿರುವ ಈ ಕುದುರೆ ವೇಗದಲ್ಲಿ ಬಲಾಹಕಕ್ಕಿಂತ ಬಲವತ್ತರವಾದುದೆಂದು ನನ್ನ ಅಭಿಪ್ರಾಯ.
04040022a ತ್ವಾಮೇವಾಯಂ ರಥೋ ವೋಢುಂ ಸಂಗ್ರಾಮೇಽರ್ಹತಿ ಧನ್ವಿನಂ|
04040022c ತ್ವಂ ಚೇಮಂ ರಥಮಾಸ್ಥಾಯ ಯೋದ್ಧುಮರ್ಹೋ ಮತೋ ಮಮ||
ಯುದ್ಧದಲ್ಲಿ ಧನುರ್ಧರನಾದ ನಿನ್ನನ್ನೇ ಹೊರಲು ಈ ರಥ ತಕ್ಕುದಾಗಿದೆ. ನೀನು ಕೂಡ ಈ ರಥದಲ್ಲಿ ಕುಳಿತು ಯುದ್ಧಮಾಡಲು ತಕ್ಕವನೆಂದು ನನ್ನ ಅಭಿಪ್ರಾಯ.””
04040023 ವೈಶಂಪಾಯನ ಉವಾಚ|
04040023a ತತೋ ನಿರ್ಮುಚ್ಯ ಬಾಹುಭ್ಯಾಂ ವಲಯಾನಿ ಸ ವೀರ್ಯವಾನ್|
04040023c ಚಿತ್ರೇ ದುಂದುಭಿಸಂನಾದೇ ಪ್ರತ್ಯಮುಂಚತ್ತಲೇ ಶುಭೇ||
ವೈಶಂಪಾಯನನು ಹೇಳಿದನು: “ಬಳಿಕ ಆ ಸತ್ವಶಾಲಿ ಅರ್ಜುನನು ತೋಳುಗಳಿಂದ ಬಳೆಗಳನ್ನು ಕಳಚಿ, ಸುಂದರವಾಗಿ ಹೊಳೆಯುವ ದುಂದುಭಿಯಂತೆ ಧ್ವನಿಮಾಡುವ ಕೈಗಾಪುಗಳನ್ನು ತೊಟ್ಟುಕೊಂಡನು.
04040024a ಕೃಷ್ಣಾನ್ಭಂಗೀಮತಃ ಕೇಶಾಂ ಶ್ವೇತೇನೋದ್ಗ್ರಥ್ಯ ವಾಸಸಾ|
04040024c ಅಧಿಜ್ಯಂ ತರಸಾ ಕೃತ್ವಾ ಗಾಂಡೀವಂ ವ್ಯಾಕ್ಷಿಪದ್ಧನುಃ||
ಅನಂತರ ಅವನು ಸುರುಳಿ ಸುರುಳಿಯಾಗಿರುವ ಕಪ್ಪುಗೂದಲನ್ನು ಬಿಳಿಯ ಬಟ್ಟೆಯಿಂದ ಮೇಲೆತ್ತಿ ಕಟ್ಟಿ, ಗಾಂಡೀವ ಧನುಸ್ಸಿಗೆ ಬೇಗ ಹೆದೆಯೇರಿಸಿ ಅದನ್ನು ಮಿಡಿದನು.
04040025a ತಸ್ಯ ವಿಕ್ಷಿಪ್ಯಮಾಣಸ್ಯ ಧನುಷೋಽಭೂನ್ಮಹಾಸ್ವನಃ|
04040025c ಯಥಾ ಶೈಲಸ್ಯ ಮಹತಃ ಶೈಲೇನೈವಾಭಿಜಘ್ನುಷಃ||
ಮಹಾಪರ್ವತವು ಮಹಾಪರ್ವತಕ್ಕೆ ತಾಗಿದಂತೆ ಅವನಿಂದ ಠೇಂಕಾರಗೊಂಡ ಆ ಬಿಲ್ಲು ಮಹಾಧ್ವನಿಯನ್ನುಂಟುಮಾಡಿತು.
04040026a ಸನಿರ್ಘಾತಾಭವದ್ಭೂಮಿರ್ದಿಕ್ಷು ವಾಯುರ್ವವೌ ಭೃಶಂ|
04040026c ಭ್ರಾಂತದ್ವಿಜಂ ಖಂ ತದಾಸೀತ್ಪ್ರಕಂಪಿತಮಹಾದ್ರುಮಂ||
ಆಗ ಭೂಮಿಯು ನಡುಗಿತು. ದಿಕ್ಕುದಿಕ್ಕುಗಳಲ್ಲಿ ಗಾಳಿ ಬಲವಾಗಿ ಬೀಸಿತು. ಆಗಸದಲ್ಲಿ ಹಕ್ಕಿಗಳು ದಿಕ್ಕುಗೆಟ್ಟವು. ಮಹಾವೃಕ್ಷಗಳು ನಡುಗಿದವು.
04040027a ತಂ ಶಬ್ದಂ ಕುರವೋಽಜಾನನ್ವಿಸ್ಫೋಟಮಶನೇರಿವ|
04040027c ಯದರ್ಜುನೋ ಧನುಃಶ್ರೇಷ್ಠಂ ಬಾಹುಭ್ಯಾಮಾಕ್ಷಿಪದ್ರಥೇ||
ಅರ್ಜುನನು ರಥದಲ್ಲಿ ಕುಳಿತು ಶ್ರೇಷ್ಠವಾದ ಧನುವನ್ನು ತೋಳುಗಳಿಂದ ಮಿಡಿದುದರಿಂದ ಉಂಟಾದ ಆ ಶಬ್ಧವನ್ನು ಸಿಡಿಲಿನ ಆಸ್ಪೋಟವೆಂದು ಕೌರವರು ಭಾವಿಸಿದರು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಉತ್ತರಾರ್ಜುನವಾಕ್ಯೇ ಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಉತ್ತರಾರ್ಜುನವಾಕ್ಯದಲ್ಲಿ ನಲ್ವತ್ತನೆಯ ಅಧ್ಯಾಯವು.