ವಿರಾಟ ಪರ್ವ: ಗೋಹರಣ ಪರ್ವ
೩೯
ಬೃಹನ್ನಡೆಯು ತನ್ನ ನಿಜರೂಪವನ್ನು ಉತ್ತರನಿಗೆ ತಿಳಿಸಿದುದು
ಅರ್ಜುನನು ವೇಷಮರೆಸಿಕೊಂಡು ಅಜ್ಞಾತವಾಸ ಮಾಡುತ್ತಿದ್ದ ತನ್ನ, ಸಹೋದರರ ಮತ್ತು ದ್ರೌಪದಿಯ ಕುರುಹನ್ನು ಉತ್ತರನಿಗೆ ಹೇಳುವುದು (೧-೬). ಅದನ್ನು ನಂಬದೇ ಕೇಳಿದ ಉತ್ತರನಿಗೆ ಬೃಹನ್ನಡೆಯು ಅರ್ಜುನನಿಗಿರುವ ಹತ್ತು ಹೆಸರುಗಳನ್ನೂ ಅವುಗಳ ಅರ್ಥದೊಂದಿಗೆ ವಿವರಿಸುವುದು (೭-೨೦). ಇದನ್ನು ಕೇಳಿ ಉತ್ತರನು ಅರ್ಜುನನಲ್ಲಿ ಕ್ಷಮೆಯನ್ನು ಕೇಳುವುದು (೨೧-೨೩).
04039001 ಉತ್ತರ ಉವಾಚ|
04039001a ಸುವರ್ಣವಿಕೃತಾನೀಮಾನ್ಯಾಯುಧಾನಿ ಮಹಾತ್ಮನಾಂ|
04039001c ರುಚಿರಾಣಿ ಪ್ರಕಾಶಂತೇ ಪಾರ್ಥಾನಾಮಾಶುಕಾರಿಣಾಂ||
ಉತ್ತರನು ಹೇಳಿದನು: “ಮಹಾತ್ಮರೂ, ಶೀಘ್ರಕರ್ಮಿಗಳೂ ಆದ ಪಾಂಡವರ ಈ ಚಿನ್ನದಿಂದ ಮಾಡಿದ ಸುಂದರ ಆಯುಧಗಳು ಪ್ರಕಾಶಿಸುತ್ತಿವೆ.
04039002a ಕ್ವ ನು ಸ್ವಿದರ್ಜುನಃ ಪಾರ್ಥಃ ಕೌರವ್ಯೋ ವಾ ಯುಧಿಷ್ಠಿರಃ|
04039002c ನಕುಲಃ ಸಹದೇವಶ್ಚ ಭೀಮಸೇನಶ್ಚ ಪಾಂಡವಃ||
ಆದರೆ ಕುಂತೀಸುತ ಅರ್ಜುನನೆಲ್ಲಿ? ಕೌರವ್ಯ ಯುಧಿಷ್ಠಿರನೆಲ್ಲಿ? ನಕುಲ ಸಹದೇವರೆಲ್ಲಿ? ಪಾಂಡವ ಭೀಮಸೇನನೆಲ್ಲಿ?
04039003a ಸರ್ವ ಏವ ಮಹಾತ್ಮಾನಃ ಸರ್ವಾಮಿತ್ರವಿನಾಶನಾಃ|
04039003c ರಾಜ್ಯಮಕ್ಷೈಃ ಪರಾಕೀರ್ಯ ನ ಶ್ರೂಯಂತೇ ಕದಾ ಚನ||
ಪಗಡೆಯಾಟದಿಂದ ರಾಜ್ಯವನ್ನು ಕಳೆದುಕೊಂಡ ನಂತರ ಆ ಸರ್ವಶತ್ರುನಾಶಕ ಮಹಾತ್ಮರ ವಿಷಯವು ಎಂದೂ ಕೇಳಿಬಂದಿಲ್ಲ.
04039004a ದ್ರೌಪದೀ ಕ್ವ ಚ ಪಾಂಚಾಲೀ ಸ್ತ್ರೀರತ್ನಮಿತಿ ವಿಶ್ರುತಾ|
04039004c ಜಿತಾನಕ್ಷೈಸ್ತದಾ ಕೃಷ್ಣಾ ತಾನೇವಾನ್ವಗಮದ್ವನಂ||
ಸ್ತ್ರೀರತ್ನವೆಂದು ಹೆಸರಾದ ಪಾಂಚಾಲಿ ದ್ರೌಪದಿಯೆಲ್ಲಿ? ಆಗ ಕೃಷ್ಣೆಯು ಪಗಡೆಯಾಟದಲ್ಲಿ ಸೋತ ಆ ಪಾಂಡವರನ್ನೇ ಅನುಸರಿಸಿ ಕಾಡಿಗೆ ಹೋದಳಷ್ಟೆ?”
04039005 ಅರ್ಜುನ ಉವಾಚ|
04039005a ಅಹಮಸ್ಮ್ಯರ್ಜುನಃ ಪಾರ್ಥಃ ಸಭಾಸ್ತಾರೋ ಯುಧಿಷ್ಠಿರಃ|
04039005c ಬಲ್ಲವೋ ಭೀಮಸೇನಸ್ತು ಪಿತುಸ್ತೇ ರಸಪಾಚಕಃ||
04039006a ಅಶ್ವಬಂಧೋಽಥ ನಕುಲಃ ಸಹದೇವಸ್ತು ಗೋಕುಲೇ|
04039006c ಸೈರಂಧ್ರೀಂ ದ್ರೌಪದೀಂ ವಿದ್ಧಿ ಯತ್ಕೃತೇ ಕೀಚಕಾ ಹತಾಃ||
ಅರ್ಜುನನು ಹೇಳಿದನು: “ನಾನೇ ಕುಂತೀಪುತ್ರ ಅರ್ಜುನ. ಆಸ್ಥಾನಿಕನೇ ಯುಧಿಷ್ಠಿರ. ನಿನ್ನ ತಂದೆಗೆ ರುಚಿಕರ ಆಡುಗೆ ಮಾಡುವ ಬಲ್ಲವನೇ ಭೀಮಸೇನ. ಅಶ್ವಪಾಲಕನೇ ನಕುಲ. ಗೋಶಾಲೆಯಲ್ಲಿರುವವನೇ ಸಹದೇವ, ಯಾರಿಗಾಗಿ ಕೀಚಕರು ಹತರಾದರೋ ಆ ಸೈರಂಧ್ರಿಯೇ ದ್ರೌಪದಿಯೆಂದು ತಿಳಿ.”
04039007 ಉತ್ತರ ಉವಾಚ|
04039007a ದಶ ಪಾರ್ಥಸ್ಯ ನಾಮಾನಿ ಯಾನಿ ಪೂರ್ವಂ ಶ್ರುತಾನಿ ಮೇ|
04039007c ಪ್ರಬ್ರೂಯಾಸ್ತಾನಿ ಯದಿ ಮೇ ಶ್ರದ್ದಧ್ಯಾಂ ಸರ್ವಮೇವ ತೇ||
ಉತ್ತರನು ಹೇಳಿದನು: “ನಾನು ಹಿಂದೆ ಕೇಳಿದ್ದ ಪಾರ್ಥನ ಹತ್ತು ಹೆಸರುಗಳನ್ನು ನೀನು ಹೇಳುವುದಾದರೆ ನಿನ್ನ ಹೇಳಿಕೆಯೆಲ್ಲವನ್ನೂ ನಂಬುತ್ತೇನೆ.”
04039008 ಅರ್ಜುನ ಉವಾಚ|
04039008a ಹಂತ ತೇಽಹಂ ಸಮಾಚಕ್ಷೇ ದಶ ನಾಮಾನಿ ಯಾನಿ ಮೇ|
04039008c ಅರ್ಜುನಃ ಫಲ್ಗುನೋ ಜಿಷ್ಣುಃ ಕಿರೀಟೀ ಶ್ವೇತವಾಹನಃ|
04039008e ಬೀಭತ್ಸುರ್ವಿಜಯಃ ಕೃಷ್ಣಃ ಸವ್ಯಸಾಚೀ ಧನಂಜಯಃ||
ಅರ್ಜುನನು ಹೇಳಿದನು: “ನನ್ನ ಹತ್ತು ಹೆಸರುಗಳನ್ನೂ ನಿನಗೆ ಹೇಳುತ್ತೇನೆ: ಅರ್ಜುನ, ಫಲ್ಗುನ, ಜಿಷ್ಣು, ಕಿರೀಟಿ, ಶ್ವೇತವಾಹನ, ಬೀಭತ್ಸು, ವಿಜಯ, ಕೃಷ್ಣ, ಸವ್ಯಸಾಚಿ ಮತ್ತು ಧನಂಜಯ.”
04039009 ಉತ್ತರ ಉವಾಚ|
04039009a ಕೇನಾಸಿ ವಿಜಯೋ ನಾಮ ಕೇನಾಸಿ ಶ್ವೇತವಾಹನಃ|
04039009c ಕಿರೀಟೀ ನಾಮ ಕೇನಾಸಿ ಸವ್ಯಸಾಚೀ ಕಥಂ ಭವಾನ್||
04039010a ಅರ್ಜುನಃ ಫಲ್ಗುನೋ ಜಿಷ್ಣುಃ ಕೃಷ್ಣೋ ಬೀಭತ್ಸುರೇವ ಚ|
04039010c ಧನಂಜಯಶ್ಚ ಕೇನಾಸಿ ಪ್ರಬ್ರೂಹಿ ಮಮ ತತ್ತ್ವತಃ||
04039010e ಶ್ರುತಾ ಮೇ ತಸ್ಯ ವೀರಸ್ಯ ಕೇವಲಾ ನಾಮಹೇತವಃ||
ಉತ್ತರನು ಹೇಳಿದನು: “ಯಾವುದರಿಂದ ನೀನು ವಿಜಯನೆಂದಾದೆ? ಏತರಿಂದ ಶ್ವೇತವಾಹನನಾದೆ? ಏತರಿಂದ ಕಿರೀಟಿ ಎಂದಾದೆ? ಸವ್ಯಸಾಚಿ ಹೇಗಾದೆ? ಏತರಿಂದ ಅರ್ಜುನ, ಫಲ್ಗುನ, ಜಿಷ್ಣು, ಕೃಷ್ಣ, ಬೀಭತ್ಸು, ಧನಂಜಯ ಎಂದೆನಿಸಿಕೊಂಡೆ? ನನಗೆ ನಿಜವಾಗಿ ಹೇಳು. ಆ ವೀರನ ಹೆಸರುಗಳಿಗೆ ಕಾರಣಗಳನ್ನು ಚೆನ್ನಾಗಿ ಕೇಳಿ ಬಲ್ಲೆ.”
04039011 ಅರ್ಜುನ ಉವಾಚ|
04039011a ಸರ್ವಾಂ ಜನಪದಾಂ ಜಿತ್ವಾ ವಿತ್ತಮಾಚ್ಛಿದ್ಯ ಕೇವಲಂ|
04039011c ಮಧ್ಯೇ ಧನಸ್ಯ ತಿಷ್ಠಾಮಿ ತೇನಾಹುರ್ಮಾಂ ಧನಂಜಯಂ||
ಅರ್ಜುನನು ಹೇಳಿದನು: “ನಾನು ಎಲ್ಲ ದೇಶಗಳನ್ನೂ ಗೆದ್ದು ಐಶ್ವರ್ಯವನ್ನೆಲ್ಲ ಸುಲಿದುಕೊಂಡು ಸಂಪತ್ತಿನ ನಡುವೆ ಇರುತ್ತೇನೆ. ಆದುದರಿಂದ ನನ್ನನ್ನು ಧನಂಜಯನೆಂದು ಕರೆಯುತ್ತಾರೆ.
04039012a ಅಭಿಪ್ರಯಾಮಿ ಸಂಗ್ರಾಮೇ ಯದಹಂ ಯುದ್ಧದುರ್ಮದಾನ್|
04039012c ನಾಜಿತ್ವಾ ವಿನಿವರ್ತಾಮಿ ತೇನ ಮಾಂ ವಿಜಯಂ ವಿದುಃ||
ನಾನು ಯುದ್ಧದುರ್ಮದರನ್ನು ಯುದ್ಧದಲ್ಲಿ ಎದುರಿಸಿದಾಗ ಅವರನ್ನು ಗೆಲ್ಲದೇ ಹಿಂದಿರುಗುವುದಿಲ್ಲ. ಆದುದರಿಂದ ನನ್ನನ್ನು ವಿಜಯನೆಂದು ತಿಳಿಯುತ್ತಾರೆ.
04039013a ಶ್ವೇತಾಃ ಕಾಂಚನಸಂನಾಹಾ ರಥೇ ಯುಜ್ಯಂತಿ ಮೇ ಹಯಾಃ|
04039013c ಸಂಗ್ರಾಮೇ ಯುಧ್ಯಮಾನಸ್ಯ ತೇನಾಹಂ ಶ್ವೇತವಾಹನಃ||
ನಾನು ಯುದ್ಧದಲ್ಲಿ ಕಾದುವಾಗ ಚಿನ್ನದ ಕವಚವುಳ್ಳ ಬಿಳಿಯಕುದುರೆಗಳನ್ನು ನನ್ನ ರಥಕ್ಕೆ ಹೂಡಲಾಗುತ್ತದೆ. ಅದರಿಂದ ನಾನು ಶ್ವೇತವಾಹನ.
04039014a ಉತ್ತರಾಭ್ಯಾಂ ಚ ಪೂರ್ವಾಭ್ಯಾಂ ಫಲ್ಗುನೀಭ್ಯಾಮಹಂ ದಿವಾ|
04039014c ಜಾತೋ ಹಿಮವತಃ ಪೃಷ್ಠೇ ತೇನ ಮಾಂ ಫಲ್ಗುನಂ ವಿದುಃ||
ನಾನು ಉತ್ತರ ಮತ್ತು ಪೂರ್ವ ಫಲ್ಗುನೀ ನಕ್ಷತ್ರದಂದು ಹಿಮವತ್ಪರ್ವತದ ತಪ್ಪಲಿನಲ್ಲಿ ಹುಟ್ಟಿದೆ. ಆದುದರಿಂದ ನನ್ನನ್ನು ಫಲ್ಗುನನೆಂದು ತಿಳಿಯುತ್ತಾರೆ.
04039015a ಪುರಾ ಶಕ್ರೇಣ ಮೇ ದತ್ತಂ ಯುಧ್ಯತೋ ದಾನವರ್ಷಭೈಃ|
04039015c ಕಿರೀಟಂ ಮೂರ್ಧ್ನಿ ಸೂರ್ಯಾಭಂ ತೇನ ಮಾಹುಃ ಕಿರೀಟಿನಂ||
ಹಿಂದೆ ದಾನವಶ್ರೇಷ್ಠರೊಡನೆ ಯುದ್ಧಮಾಡುವಾಗ ಇಂದ್ರನು ಸೂರ್ಯಸಮಾನ ಕಿರೀಟವನ್ನು ನನ್ನ ತಲೆಗಿಟ್ಟನು. ಆದುದರಿಂದ ನನ್ನನ್ನು ಕಿರೀಟಿಯೆನ್ನುತ್ತಾರೆ.
04039016a ನ ಕುರ್ಯಾಂ ಕರ್ಮ ಬೀಭತ್ಸಂ ಯುಧ್ಯಮಾನಃ ಕಥಂ ಚನ|
04039016c ತೇನ ದೇವಮನುಷ್ಯೇಷು ಬೀಭತ್ಸುರಿತಿ ಮಾಂ ವಿದುಃ||
ನಾನು ಯುದ್ಧಮಾಡುವಾಗ ಎಂದೂ ಬೀಭತ್ಸವಾದ ಕರ್ಮವನ್ನೆಸಗುವುದಿಲ್ಲ. ಅದರಿಂದ ದೇವ-ಮಾನವರು ನನ್ನನ್ನು ಬೀಭತ್ಸುವೆಂದು ತಿಳಿಯುತ್ತಾರೆ.
04039017a ಉಭೌ ಮೇ ದಕ್ಷಿಣೌ ಪಾಣೀ ಗಾಂಡೀವಸ್ಯ ವಿಕರ್ಷಣೇ|
04039017c ತೇನ ದೇವಮನುಷ್ಯೇಷು ಸವ್ಯಸಾಚೀತಿ ಮಾಂ ವಿದುಃ||
ಗಾಂಡೀವವನ್ನು ಸೆಳೆಯುವಾಗ ನನ್ನ ಎರಡು ಕೈಗಳೂ ಬಲಗೈಗಳೇ. ಅದರಿಂದ ದೇವ-ಮಾನವರು ನನ್ನನ್ನು ಸವ್ಯಸಾಚಿಯೆಂದು ತಿಳಿಯುತ್ತಾರೆ.
04039018a ಪೃಥಿವ್ಯಾಂ ಚತುರಂತಾಯಾಂ ವರ್ಣೋ ಮೇ ದುರ್ಲಭಃ ಸಮಃ|
04039018c ಕರೋಮಿ ಕರ್ಮ ಶುಕ್ಲಂ ಚ ತೇನ ಮಾಮರ್ಜುನಂ ವಿದುಃ||
ಚತುಃಸಮುದ್ರಪರ್ಯಂತವಾದ ಈ ಭೂಮಿಯಲ್ಲಿ ನನ್ನ ಬಣ್ಣಕ್ಕೆ ಸಮಾನವಾದ ಬಣ್ಣ ದುರ್ಲಭ. ಅಲ್ಲದೆ ನಾನು ನಿರ್ಮಲವಾದ ಕಾರ್ಯವನ್ನು ಮಾಡುತ್ತೇನೆ. ಅದರಿಂದ ನನ್ನನ್ನು ಅರ್ಜುನನೆಂದು ತಿಳಿಯುತ್ತಾರೆ.
04039019a ಅಹಂ ದುರಾಪೋ ದುರ್ಧರ್ಷೋ ದಮನಃ ಪಾಕಶಾಸನಿಃ|
04039019c ತೇನ ದೇವಮನುಷ್ಯೇಷು ಜಿಷ್ಣುನಾಮಾಸ್ಮಿ ವಿಶ್ರುತಃ||
ಪಾಕಶಾಸನನ ಮಗನಾದ ನಾನು ಸಮೀಪಿಸಲಾಗದವನು; ಎದುರಿಸಲಾಗದವನು, ಶತ್ರುಗಳನ್ನು ದಮನಮಾಡತಕ್ಕವನು. ಅದರಿಂದ ದೇವ-ಮಾನವರಲ್ಲಿ ನಾನು ಜಿಷ್ಣುವೆಂದು ಪ್ರಸಿದ್ಧನಾಗಿದ್ದೇನೆ.
04039020a ಕೃಷ್ಣ ಇತ್ಯೇವ ದಶಮಂ ನಾಮ ಚಕ್ರೇ ಪಿತಾ ಮಮ|
04039020c ಕೃಷ್ಣಾವದಾತಸ್ಯ ಸತಃ ಪ್ರಿಯತ್ವಾದ್ಬಾಲಕಸ್ಯ ವೈ||
ಬಾಲ್ಯದಲ್ಲಿ ನಾನು ಕಪ್ಪುಬಣ್ಣದಿಂದ ಕೂಡಿ ಹೊಳೆಯುತ್ತಿದ್ದುದರಿಂದಲೂ, ತಂದೆಗೆ ಪ್ರಿಯನಾಗಿದ್ದುದರಿಂದಲೂ ನನ್ನ ತಂದೆಯು ನನಗೆ ಕೃಷ್ಣನೆಂಬ ಹತ್ತನೆಯ ಹೆಸರನ್ನಿಟ್ಟನು.””
04039021 ವೈಶಂಪಾಯನ ಉವಾಚ|
04039021a ತತಃ ಪಾರ್ಥಂ ಸ ವೈರಾಟಿರಭ್ಯವಾದಯದಂತಿಕಾತ್|
04039021c ಅಹಂ ಭೂಮಿಂಜಯೋ ನಾಮ ನಾಂನಾಹಮಪಿ ಚೋತ್ತರಃ||
ವೈಶಂಪಾಯನನು ಹೇಳಿದನು: “ಬಳಿಕ ಆ ವಿರಾಟಪುತ್ರನು ಪಾರ್ಥನನ್ನು ಸಮೀಪಿಸಿ ಅಭಿವಾದನ ಮಾಡಿ ಹೇಳಿದನು: “ನಾನು ಭೂಮಿಂಜಯ. ಉತ್ತರನೆಂಬ ಹೆಸರೂ ನನಗುಂಟು.
04039022a ದಿಷ್ಟ್ಯಾ ತ್ವಾಂ ಪಾರ್ಥ ಪಶ್ಯಾಮಿ ಸ್ವಾಗತಂ ತೇ ಧನಂಜಯ|
04039022c ಲೋಹಿತಾಕ್ಷ ಮಹಾಬಾಹೋ ನಾಗರಾಜಕರೋಪಮ|
04039022e ಯದಜ್ಞಾನಾದವೋಚಂ ತ್ವಾಂ ಕ್ಷಂತುಮರ್ಹಸಿ ತನ್ಮಮ||
ಪಾರ್ಥ! ಅದೃಷ್ಟವಶಾತ್ ನಾನು ನಿನ್ನನ್ನು ನೋಡುತ್ತಿದ್ದೇನೆ. ಧನಂಜಯ! ನಿನಗೆ ಸ್ವಾಗತ! ಕೆಂಪು ಕಣ್ಣುಳ್ಳವನೇ! ಗಜರಾಜನ ಸೊಂಡಿಲಿನಂಥ ಮಹಾಬಾಹುಗಳುಳ್ಳವನೇ! ಅಜ್ಞಾನದಿಂದ ನಾನು ನಿನ್ನ ಬಗ್ಗೆ ನುಡಿದುದನ್ನು ಕ್ಷಮಿಸು.
04039023a ಯತಸ್ತ್ವಯಾ ಕೃತಂ ಪೂರ್ವಂ ವಿಚಿತ್ರಂ ಕರ್ಮ ದುಷ್ಕರಂ|
04039023c ಅತೋ ಭಯಂ ವ್ಯತೀತಂ ಮೇ ಪ್ರೀತಿಶ್ಚ ಪರಮಾ ತ್ವಯಿ||
ನೀನು ಹಿಂದೆ ಅದ್ಭುತವೂ ದುಷ್ಕರವೂ ಆದ ಕಾರ್ಯಗಳನ್ನು ಮಾಡಿದ್ದವನಾದ್ದರಿಂದ ನನ್ನ ಹೆದರಿಕೆ ಕಳೆಯಿತು. ನಿನ್ನಲ್ಲಿ ನನಗೆ ಪರಮ ಪ್ರೀತಿಯುಂಟಾಗಿದೆ.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಪರಿಚಯೇ ಏಕೋನಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಪರಿಚಯದಲ್ಲಿ ಮೂವತ್ತೊಂಭತ್ತನೆಯ ಅಧ್ಯಾಯವು.