ವಿರಾಟ ಪರ್ವ: ಗೋಹರಣ ಪರ್ವ
೨೯
ತ್ರಿಗರ್ತರಿಂದ ವಿರಾಟನ ಗೋಗ್ರಹಣ
ಹಿಂದೆ ಅನೇಕಸಲ ಕೀಚಕನಿಂದ ಪರಾಜಿತಗೊಂಡಿದ್ದ ತ್ರಿಗರ್ತರ ರಾಜ ಸುಶರ್ಮನು ಮತ್ಸ್ಯರ ಗೋವುಗಳನ್ನು ಅಪಹರಿಸಿ ಯುದ್ಧದಲ್ಲಿ ಅವರನ್ನು ಸೋಲಿಸಬೇಕೆಂದು ಸೂಚಿಸುವುದು (೧-೧೩). ಕರ್ಣನು ಆ ಸೂಚನೆಯನ್ನು ಅನುಮೋದಿಸಿದುದು (೧೪-೧೯). ಕೌರವ ಸೇನೆಯ ಸಿದ್ಧತೆ, ಸುಶರ್ಮನು ಆಗ್ನೇಯದಿಕ್ಕಿನಿಂದ ವಿರಾಟನ ಗೋವುಗಳನ್ನು ಹಿಡಿದುದು (೨೦-೨೮).
04029001 ವೈಶಂಪಾಯನ ಉವಾಚ|
04029001a ಅಥ ರಾಜಾ ತ್ರಿಗರ್ತಾನಾಂ ಸುಶರ್ಮಾ ರಥಯೂಥಪಃ|
04029001c ಪ್ರಾಪ್ತಕಾಲಮಿದಂ ವಾಕ್ಯಮುವಾಚ ತ್ವರಿತೋ ಭೃಶಂ||
04029002a ಅಸಕೃನ್ನಿಕೃತಃ ಪೂರ್ವಂ ಮತ್ಸ್ಯೈಃ ಸಾಲ್ವೇಯಕೈಃ ಸಹ|
04029002c ಸೂತೇನ ಚೈವ ಮತ್ಸ್ಯಸ್ಯ ಕೀಚಕೇನ ಪುನಃ ಪುನಃ||
04029003a ಬಾಧಿತೋ ಬಂಧುಭಿಃ ಸಾರ್ಧಂ ಬಲಾದ್ಬವತಾ ವಿಭೋ|
04029003c ಸ ಕರ್ಣಮಭ್ಯುದೀಕ್ಷ್ಯಾಥ ದುರ್ಯೋಧನಮಭಾಷತ||
ವೈಶಂಪಾಯನನು ಹೇಳಿದನು: “ಪ್ರಭೋ! ಹಿಂದೆ ಮತ್ಸ್ಯರಿಂದಲೂ ಸಾಲ್ವೀಯಕರಿಂದಲೂ ಕೂಡಿದ ಮತ್ಸ್ಯರಾಜನ ಸೂತ ಕೀಚಕನಿಂದ ಮತ್ತೆ ಮತ್ತೆ ಅನೇಕ ಸಲ ಪರಾಜಿತನಾಗಿದ್ದ ತ್ರಿಗರ್ತರ ರಾಜನೂ ರಥಸಮೂಹದ ಒಡೆಯನೂ ತನ್ನ ಬಂಧುಗಳೊಡನೆ ಆ ಬಲಶಾಲಿಯಿಂದ ಉಗ್ರವಾಗಿ ಬಾಧಿತನಾಗಿದ್ದವನೂ ಆದ ಸುಶರ್ಮನು ಕರ್ಣನನ್ನು ಕಣ್ಣೆತ್ತಿ ನೋಡಿ, ಆಗ ಈ ಅನೇಕ ಕಾಲೋಚಿತ ಮಾತುಗಳನ್ನು ಅವಸರವಾಗಿ ದುರ್ಯೊಧನನಿಗೆ ಹೇಳಿದನು:
04029004a ಅಸಕೃನ್ಮತ್ಸ್ಯರಾಜ್ಞಾ ಮೇ ರಾಷ್ಟ್ರಂ ಬಾಧಿತಂ ಓಜಸಾ|
04029004c ಪ್ರಣೇತಾ ಕೀಚಕಶ್ಚಾಸ್ಯ ಬಲವಾನಭವತ್ಪುರಾ||
“ನನ್ನ ರಾಷ್ಟ್ರವು ಮತ್ಸ್ಯರಾಜನ ಶಕ್ತಿಯಿಂದ ಎಷ್ಟೋ ಸಲ ಬಾಧಿತವಾಗಿದೆ. ಬಲಶಾಲಿಯಾದ ಕೀಚಕನು ಹಿಂದೆ ಅವನ ಸೇನಾಪತಿಯಾಗಿದ್ದನು.
04029005a ಕ್ರೂರೋಽಮರ್ಷೀ ಸ ದುಷ್ಟಾತ್ಮಾ ಭುವಿ ಪ್ರಖ್ಯಾತವಿಕ್ರಮಃ|
04029005c ನಿಹತಸ್ತತ್ರ ಗಂಧರ್ವೈಃ ಪಾಪಕರ್ಮಾ ನೃಶಂಸವಾನ್||
ಕ್ರೂರಿಯೂ ಕೋಪಿಯೂ ದುಷ್ಟಾತ್ಮನೂ ಲೋಕದಲ್ಲಿ ಪ್ರಖ್ಯಾತ ಪರಾಕ್ರಮವುಳ್ಳವನೂ ಪಾಪಕರ್ಮನೂ ನಿರ್ದಯನೂ ಆದ ಆ ಕೀಚಕನು ಅಲ್ಲಿ ಗಂಧರ್ವರಿಂದ ಹತನಾಗಿದ್ದಾನೆ.
04029006a ತಸ್ಮಿಂಶ್ಚ ನಿಹತೇ ರಾಜನ್ ಹೀನದರ್ಪೋ ನಿರಾಶ್ರಯಃ|
04029006c ಭವಿಷ್ಯತಿ ನಿರುತ್ಸಾಹೋ ವಿರಾಟ ಇತಿ ಮೇ ಮತಿಃ||
ರಾಜ! ಅವನು ಹತನಾಗಲು ದರ್ಪಹೀನನೂ ನಿರಾಶ್ರಯನೂ ಆದ ವಿರಾಟನು ನಿರುತ್ಸಾಹಗೊಂಡಿದ್ದಾನೆ ಎಂದು ನನ್ನ ಅನಿಸಿಕೆ.
04029007a ತತ್ರ ಯಾತ್ರಾ ಮಮ ಮತಾ ಯದಿ ತೇ ರೋಚತೇಽನಘ|
04029007c ಕೌರವಾಣಾಂ ಚ ಸರ್ವೇಷಾಂ ಕರ್ಣಸ್ಯ ಚ ಮಹಾತ್ಮನಃ||
ಪಾಪರಹಿತನೇ! ನಿನಗೆ, ಎಲ್ಲ ಕೌರವರಿಗೂ, ಮಹಾತ್ಮನಾದ ಕರ್ಣನಿಗೂ ಇಷ್ಟವಾಗುವುದಾದರೆ ಅಲ್ಲಿಗೆ ದಾಳಿ ಮಾಡಬೇಕೆಂದು ನನ್ನ ಅಭಿಪ್ರಾಯ.
04029008a ಏತತ್ಪ್ರಾಪ್ತಮಹಂ ಮನ್ಯೇ ಕಾರ್ಯಮಾತ್ಯಯಿಕಂ ಹಿತಂ|
04029008c ರಾಷ್ಟ್ರಂ ತಸ್ಯಾಭಿಯಾತ್ವಾಶು ಬಹುಧಾನ್ಯಸಮಾಕುಲಂ||
ತುರ್ತಾದ ನಮಗೆ ಹಿತಕರವಾದ ಕಾರ್ಯವೀಗ ಒದಗಿದೆಯೆಂದು ಭಾವಿಸುತ್ತೇನೆ. ಬಹುಧಾನ್ಯಭರಿತವಾದ ಅವನ ದೇಶಕ್ಕೆ ಕೂಡಲೇ ಹೋಗೋಣ.
04029009a ಆದದಾಮೋಽಸ್ಯ ರತ್ನಾನಿ ವಿವಿಧಾನಿ ವಸೂನಿ ಚ|
04029009c ಗ್ರಾಮಾನ್ರಾಷ್ಟ್ರಾಣಿ ವಾ ತಸ್ಯ ಹರಿಷ್ಯಾಮೋ ವಿಭಾಗಶಃ||
ಅವನ ರತ್ನಗಳನ್ನೂ, ವಿವಿಧ ಸಂಪತ್ತನ್ನೂ ವಶಪಡಿಸಿಕೊಳ್ಳೋಣ. ಅವನ ಗ್ರಾಮಗಳನ್ನೂ ರಾಷ್ಟ್ರಗಳನ್ನೂ ಒಂದೊಂದಾಗಿ ತೆಗೆದುಕೊಳ್ಳೋಣ.
04029010a ಅಥ ವಾ ಗೋಸಹಸ್ರಾಣಿ ಬಹೂನಿ ಚ ಶುಭಾನಿ ಚ|
04029010c ವಿವಿಧಾನಿ ಹರಿಷ್ಯಾಮಃ ಪ್ರತಿಪೀಡ್ಯ ಪುರಂ ಬಲಾತ್||
ಅಥವಾ ಅವನ ಪುರವನ್ನು ಬಲಾತ್ಕಾರದಿಂದ ಹಾಳುಗೆಡವಿ ವಿವಿಧ ಜಾತಿಯ ಅನೇಕ ಸಾವಿರ ಶ್ರೇಷ್ಠ ಗೋವುಗಳನ್ನು ಅಪಹರಿಸೋಣ.
04029011a ಕೌರವೈಃ ಸಹ ಸಂಗಮ್ಯ ತ್ರಿಗರ್ತೈಶ್ಚ ವಿಶಾಂ ಪತೇ|
04029011c ಗಾಸ್ತಸ್ಯಾಪಹರಾಮಾಶು ಸಹ ಸರ್ವೈಃ ಸುಸಂಹತಾಃ||
ರಾಜ! ಕೌರವರೂ ತ್ರಿಗರ್ತರೂ ಎಲ್ಲರೂ ಒಟ್ಟಾಗಿ ಸೇರಿ ಅವನ ಗೋವುಗಳನ್ನು ಬೇಗ ಅಪಹರಿಸೋಣ.
04029012a ಸಂಧಿಂ ವಾ ತೇನ ಕೃತ್ವಾ ತು ನಿಬಧ್ನೀಮೋಽಸ್ಯ ಪೌರುಷಂ|
04029012c ಹತ್ವಾ ಚಾಸ್ಯ ಚಮೂಂ ಕೃತ್ಸ್ನಾಂ ವಶಮನ್ವಾನಯಾಮಹೇ||
ಅವನೊಂದಿಗೆ ಸಂಧಿ ಮಾಡಿಕೊಂಡು ಅವನ ಪೌರುಷವನ್ನು ತಡೆಯೋಣ ಅಥವಾ ಅವನ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿ ಅವನನ್ನು ವಶಪಡಿಸಿಕೊಳ್ಳೋಣ.
04029013a ತಂ ವಶೇ ನ್ಯಾಯತಃ ಕೃತ್ವಾ ಸುಖಂ ವತ್ಸ್ಯಾಮಹೇ ವಯಂ|
04029013c ಭವತೋ ಬಲವೃದ್ಧಿಶ್ಚ ಭವಿಷ್ಯತಿ ನ ಸಂಶಯಃ||
ನ್ಯಾಯಮರ್ಗದಿಂದ ಅವನನ್ನು ವಶಮಾಡಿಕೊಂಡು ನಾವು ಸುಖವಾಗಿ ಇರೋಣ; ನಿಸ್ಸಂಶಯವಾಗಿ ನಿನ್ನ ಬಲವೂ ಹೆಚ್ಚುತ್ತದೆ.”
04029014a ತಚ್ಚ್ರುತ್ವಾ ವಚನಂ ತಸ್ಯ ಕರ್ಣೋ ರಾಜಾನಮಬ್ರವೀತ್|
04029014c ಸೂಕ್ತಂ ಸುಶರ್ಮಣಾ ವಾಕ್ಯಂ ಪ್ರಾಪ್ತಕಾಲಂ ಹಿತಂ ಚ ನಃ||
ಅವನ ಮಾತನ್ನು ಕೇಳಿ ಕರ್ಣನು ದೊರೆಗೆ ಹೇಳಿದನು: “ಸುಶರ್ಮನು ಕಾಲೋಚಿತವೂ ನಮಗೆ ಹಿತಕರವೂ ಆದ ಮಾತನ್ನು ಚೆನ್ನಾಗಿ ಆಡಿದ್ದಾನೆ.
04029015a ತಸ್ಮಾತ್ಕ್ಷಿಪ್ರಂ ವಿನಿರ್ಯಾಮೋ ಯೋಜಯಿತ್ವಾ ವರೂಥಿನೀಂ|
04029015c ವಿಭಜ್ಯ ಚಾಪ್ಯನೀಕಾನಿ ಯಥಾ ವಾ ಮನ್ಯಸೇಽನಘ||
ಆದ್ದರಿಂದ ಪಾಪರಹಿತನೇ! ಸೈನ್ಯವನ್ನು ಯೋಜಿಸಿ, ವಿಭಾಗಿಸಿ, ಶೀಘ್ರವಾಗಿ ಹೊರಡೋಣ. ಅಥವಾ ನಿನ್ನ ಅಭಿಪ್ರಾಯದಂತೆ ಆಗಲಿ.
04029016a ಪ್ರಜ್ಞಾವಾನ್ಕುರುವೃದ್ಧೋಽಯಂ ಸರ್ವೇಷಾಂ ನಃ ಪಿತಾಮಹಃ|
04029016c ಆಚಾರ್ಯಶ್ಚ ತಥಾ ದ್ರೋಣಃ ಕೃಪಃ ಶಾರದ್ವತಸ್ತಥಾ||
04029017a ಮನ್ಯಂತೇ ತೇ ಯಥಾ ಸರ್ವೇ ತಥಾ ಯಾತ್ರಾ ವಿಧೀಯತಾಂ|
04029017c ಸಮ್ಮಂತ್ರ್ಯ ಚಾಶು ಗಚ್ಛಾಮಃ ಸಾಧನಾರ್ಥಂ ಮಹೀಪತೇಃ||
ನಮ್ಮೆಲ್ಲರ ಪಿತಾಮಹ ಈ ಪ್ರಜ್ಞಾವಂತ ಕುರುವೃದ್ಧ, ಅಂತೆಯೇ ಆಚಾರ್ಯ ದ್ರೊಣ, ಶಾರದ್ವತ ಕೃಪ - ಇವರೆಲ್ಲ ಆಲೋಚಿಸುವ ಹಾಗೆ ದಾಳಿ ನಡೆಯಲಿ. ಇವರೊಡನೆ ಮಂತ್ರಾಲೋಚನೆ ಮಾಡಿ ದೊರೆಯ ಗುರಿ ಸಾಧಿಸುವುದಕ್ಕೆ ಬೇಗ ಹೋಗೋಣ.
04029018a ಕಿಂ ಚ ನಃ ಪಾಂಡವೈಃ ಕಾರ್ಯಂ ಹೀನಾರ್ಥಬಲಪೌರುಷೈಃ|
04029018c ಅತ್ಯರ್ಥಂ ವಾ ಪ್ರನಷ್ಟಾಸ್ತೇ ಪ್ರಾಪ್ತಾ ವಾಪಿ ಯಮಕ್ಷಯಂ||
ಅರ್ಥ, ಬಲ, ಪೌರುಷಗಳಿಲ್ಲದ ಪಾಂಡವರೊಡನೆ ನಮಗೇನು ಕೆಲಸ? ಅವರು ಸಂಪೂರ್ಣವಾಗಿ ಹಾಳಾಗಿದ್ದಾರೆ ಅಥವಾ ಯಮಸದನವನ್ನು ಸೇರಿದ್ದಾರೆ.
04029019a ಯಾಮೋ ರಾಜನ್ನನುದ್ವಿಗ್ನಾ ವಿರಾಟವಿಷಯಂ ವಯಂ|
04029019c ಆದಾಸ್ಯಾಮೋ ಹಿ ಗಾಸ್ತಸ್ಯ ವಿವಿಧಾನಿ ವಸೂನಿ ಚ||
ರಾಜ! ನಾವು ನಿರ್ಭಯನಾಗಿ ವಿರಾಟನ ದೇಶಕ್ಕೆ ಹೋಗೋಣ. ಅವನ ಗೋವುಗಳನ್ನೂ ವಿವಿಧ ಸಂಪತ್ತನ್ನೂ ತೆಗೆದುಕೊಳ್ಳೋಣ.”
04029020a ತತೋ ದುರ್ಯೋಧನೋ ರಾಜಾ ವಾಕ್ಯಮಾದಾಯ ತಸ್ಯ ತತ್|
04029020c ವೈಕರ್ತನಸ್ಯ ಕರ್ಣಸ್ಯ ಕ್ಷಿಪ್ರಮಾಜ್ಞಾಪಯತ್ಸ್ವಯಂ||
04029021a ಶಾಸನೇ ನಿತ್ಯಸಮ್ಯುಕ್ತಂ ದುಃಶಾಸನಮನಂತರಂ|
04029021c ಸಹ ವೃದ್ಧೈಸ್ತು ಸಮ್ಮಂತ್ರ್ಯ ಕ್ಷಿಪ್ರಂ ಯೋಜಯ ವಾಹಿನೀಂ||
ಬಳಿಕ ರಾಜ ದುರ್ಯೊಧನನು ಸೂರ್ಯಪುತ್ರ ಕರ್ಣನ ಮಾತನ್ನು ಒಪ್ಪಿ ತನ್ನ ಆಜ್ಞೆಯನ್ನು ಯಾವಾಗಲೂ ಪಾಲಿಸುವ ತಮ್ಮ ದುಃಶಾಸನನಿಗೆ “ಹಿರಿಯರೊಡನೆ ಸಮಾಲೋಚಿಸಿ ಸೈನ್ಯವನ್ನು ಬೇಗ ಯೋಜಿಸು!” ಎಂದು ಸ್ವತಃ ಅಪ್ಪಣೆ ಮಾಡಿದನು.
04029022a ಯಥೋದ್ದೇಶಂ ಚ ಗಚ್ಛಾಮಃ ಸಹಿತಾಃ ಸರ್ವಕೌರವೈಃ|
04029022c ಸುಶರ್ಮಾ ತು ಯಥೋದ್ದಿಷ್ಟಂ ದೇಶಂ ಯಾತು ಮಹಾರಥಃ||
04029023a ತ್ರಿಗರ್ತೈಃ ಸಹಿತೋ ರಾಜಾ ಸಮಗ್ರಬಲವಾಹನಃ|
04029023c ಪ್ರಾಗೇವ ಹಿ ಸುಸಂವೀತೋ ಮತ್ಸ್ಯಸ್ಯ ವಿಷಯಂ ಪ್ರತಿ||
“ಎಲ್ಲ ಕೌರವರೊಡನೆ ಗೊತ್ತುಪಡಿಸಿದ ಸ್ಥಳಕ್ಕೆ ಹೋಗೋಣ. ಮಹಾರಥ ರಾಜ ಸುಶರ್ಮನು ಸಮಗ್ರ ಸೈನ್ಯ ಮತ್ತು ವಾಹನಸಮೇತನಾಗಿ ತ್ರಿಗರ್ತರೊಡನೆ ಕೂಡಿ ಮತ್ಸ್ಯನ ದೇಶಕ್ಕೆ ಮೊದಲೇ ಹೋಗಲಿ.
04029024a ಜಘನ್ಯತೋ ವಯಂ ತತ್ರ ಯಾಸ್ಯಾಮೋ ದಿವಸಾಂತರಂ|
04029024c ವಿಷಯಂ ಮತ್ಸ್ಯರಾಜಸ್ಯ ಸುಸಮೃದ್ಧಂ ಸುಸಂಹತಾಃ||
ಅವನ ಹಿಂದೆ, ಮರುದಿವಸ ನಾವು ಒಗ್ಗಟ್ಟಾಗಿ ಮತ್ಸ್ಯರಾಜನ ಸುಸಮೃದ್ಧ ದೇಶಕ್ಕೆ ಹೋಗೋಣ.
04029025a ತೇ ಯಾತ್ವಾ ಸಹಸಾ ತತ್ರ ವಿರಾಟನಗರಂ ಪ್ರತಿ|
04029025c ಕ್ಷಿಪ್ರಂ ಗೋಪಾನ್ಸಮಾಸಾದ್ಯ ಗೃಹ್ಣಂತು ವಿಪುಲಂ ಧನಂ||
ಅವರು ವಿರಾಟನಗರಕ್ಕೆ ಥಟ್ಟನೇ ಹೋಗಿ, ಬೇಗ ಗೋಪಾಲಕರನ್ನು ಆಕ್ರಮಿಸಿ ವಿಪುಲ ಗೋಧನವನ್ನು ಹಿಡಿಯಲಿ.
04029026a ಗವಾಂ ಶತಸಹಸ್ರಾಣಿ ಶ್ರೀಮಂತಿ ಗುಣವಂತಿ ಚ|
04029026c ವಯಮಪಿ ನಿಗೃಹ್ಣೀಮೋ ದ್ವಿಧಾ ಕೃತ್ವಾ ವರೂಥಿನೀಂ||
ನಾವು ಕೂಡ ಸೈನ್ಯವನ್ನು ಎರಡು ಭಾಗ ಮಾಡಿಕೊಂಡು ಶುಭಲಕ್ಷಣ ಸಂಪನ್ನವೂ ಉತ್ತಮವೂ ಆದ ಶತ ಸಹಸ್ರ ಗೋವುಗಳನ್ನು ಹಿಡಿಯೋಣ.”
04029027a ಸ ಸ್ಮ ಗತ್ವಾ ಯಥೋದ್ದಿಷ್ಟಾಂ ದಿಶಂ ವಹ್ನೇರ್ಮಹೀಪತಿಃ|
04029027c ಆದತ್ತ ಗಾಃ ಸುಶರ್ಮಾಥ ಘರ್ಮಪಕ್ಷಸ್ಯ ಸಪ್ತಮೀಂ||
ಅನಂತರ ದೊರೆ ಸುಶರ್ಮನು ಗೊತ್ತೊಪಡಿಸಿದಂತೆ ಕೃಷ್ಣಪಕ್ಷದ ಸಪ್ತಮಿಯಂದು ಆಗ್ನೇಯ ದಿಕ್ಕಿಗೆ ಹೋಗಿ ಗೋವುಗಳನ್ನು ಹಿಡಿದನು.
04029028a ಅಪರಂ ದಿವಸಂ ಸರ್ವೇ ರಾಜನ್ಸಂಭೂಯ ಕೌರವಾಃ|
04029028c ಅಷ್ಟಮ್ಯಾಂ ತಾನ್ಯಗೃಹ್ಣಂತ ಗೋಕುಲಾನಿ ಸಹಸ್ರಶಃ||
ರಾಜ! ಮರುದಿವಸ ಅಷ್ಟಮಿಯಂದು ಕೌರವರೆಲ್ಲರೂ ಸೇರಿ ಆ ಸಾವಿರ ಸಾವಿರ ಗೋವುಗಳ ಹಿಂಡನ್ನು ಹಿಡಿದರು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ಏಕೋನತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ಇಪ್ಪತ್ತೊಂಭತ್ತನೆಯ ಅಧ್ಯಾಯವು.