ವಿರಾಟ ಪರ್ವ: ಗೋಹರಣ ಪರ್ವ
೨೫
ಸಭಾಸದರೊಡನೆ ದುರ್ಯೋಧನನ ಸಮಾಲೋಚನೆ
ಪಾಂಡವರನ್ನು ಬೇಗ ಹುಡುಕಬೇಕೆಂದು ದುರ್ಯೋಧನನು ಹೇಳಲು (೧-೭) ಕರ್ಣ (೮-೧೨) ಮತ್ತು ದುಃಶಾಸನರು (೧೩-೧೭) ಅದನ್ನು ಅನುಮೋದಿಸಿದುದು.
04025001 ವೈಶಂಪಾಯನ ಉವಾಚ|
04025001a ತತೋ ದುರ್ಯೋಧನೋ ರಾಜಾ ಶ್ರುತ್ವಾ ತೇಷಾಂ ವಚಸ್ತದಾ|
04025001c ಚಿರಮಂತರ್ಮನಾ ಭೂತ್ವಾ ಪ್ರತ್ಯುವಾಚ ಸಭಾಸದಃ||
ವೈಶಂಪಾಯನನು ಹೇಳಿದನು: “ಅನಂತರ ರಾಜ ದುರ್ಯೋಧನನು ಅವರ ಮಾತನ್ನು ಕೇಳಿ ಬಹಳ ಹೊತ್ತು ಮನಸ್ಸಿನಲ್ಲಿಯೇ ಆಲೋಚಿಸಿ ಸಭಾಸದರಿಗೆ ಹೀಗೆಂದನು:
04025002a ಸುದುಃಖಾ ಖಲು ಕಾರ್ಯಾಣಾಂ ಗತಿರ್ವಿಜ್ಞಾತುಮಂತತಃ|
04025002c ತಸ್ಮಾತ್ಸರ್ವೇ ಉದೀಕ್ಷಧ್ವಂ ಕ್ವ ನು ಸ್ಯುಃ ಪಾಂಡವಾ ಗತಾಃ||
“ಕಾರ್ಯಗತಿಗಳನ್ನು ನಿಶ್ಚಿತವಾಗಿ ತಿಳಿಯುವುದು ಕಷ್ಟವೇ ಸರಿ. ಆದ್ದರಿಂದ ಪಾಂಡವರು ಎಲ್ಲಿ ಇರಬಹುದು ಎಂಬುದನ್ನು ಎಲ್ಲರೂ ಕಂಡು ಹಿಡಿಯಿರಿ.
04025003a ಅಲ್ಪಾವಶಿಷ್ಟಂ ಕಾಲಸ್ಯ ಗತಭೂಯಿಷ್ಠಮಂತತಃ|
04025003c ತೇಷಾಮಜ್ಞಾತಚರ್ಯಾಯಾಮಸ್ಮಿನ್ ವರ್ಷೇ ತ್ರಯೋದಶೇ||
ಅವರು ಅಜ್ಞಾತವಾಸದಲ್ಲಿ ಇರಬೇಕಾದ ಈ ಹದಿಮೂರನೆಯ ವರ್ಷದಲ್ಲಿ ಕಡೆಗೂ ಬಹುಭಾಗ ಕಳೆದುಹೋಗಿದೆ. ಇನ್ನು ಸ್ವಲ್ಪ ಕಾಲವೇ ಉಳಿದಿದೆ.
04025004a ಅಸ್ಯ ವರ್ಷಸ್ಯ ಶೇಷಂ ಚೇದ್ವ್ಯತೀಯುರಿಹ ಪಾಂಡವಾಃ|
04025004c ನಿವೃತ್ತಸಮಯಾಸ್ತೇ ಹಿ ಸತ್ಯವ್ರತಪರಾಯಣಾಃ||
ಈ ವರ್ಷದ ಉಳಿದ ಅವಧಿಯನ್ನು ಪಾಂಡವರು ಕಳೆದುಬಿಟ್ಟರೆ ಆ ಸತ್ಯವ್ರತ ಪರಾಯಣರು ತಮ್ಮ ಪ್ರತಿಜ್ಞೆಯನ್ನು ಮುಗಿಸುತ್ತಾರೆ.
04025005a ಕ್ಷರಂತ ಇವ ನಾಗೇಂದ್ರಾಃ ಸರ್ವ ಆಶೀವಿಷೋಪಮಾಃ|
04025005c ದುಃಖಾ ಭವೇಯುಃ ಸಂರಬ್ಧಾಃ ಕೌರವಾನ್ಪ್ರತಿ ತೇ ಧ್ರುವಂ||
ಮದೋದಕವನ್ನು ಸುರಿಸುವ ಗಜೇಂದ್ರರಂತೆ ಅಥವಾ ವಿಷಪೂರಿತ ಸರ್ಪಗಳಂತೆ ಅವರು ಆವೇಶಗೊಂಡು ಕೌರವರಿಗೆ ದುಃಖವನ್ನುಂಟುಮಾಡುವುದು ಖಚಿತ.
04025006a ಅರ್ವಾಕ್ಕಾಲಸ್ಯ ವಿಜ್ಞಾತಾಃ ಕೃಚ್ಛ್ರರೂಪಧರಾಃ ಪುನಃ|
04025006c ಪ್ರವಿಶೇಯುರ್ಜಿತಕ್ರೋಧಾಸ್ತಾವದೇವ ಪುನರ್ವನಂ||
ಕಾಲಕ್ಕೆ ಮೊದಲೇ ಗುರುತಿಸಿಬಿಟ್ಟರೆ ಅವರು ದುಃಖಕರ ವೇಷವನ್ನು ಧರಿಸಿ ಕ್ರೋಧವನ್ನು ಹತ್ತಿಕ್ಕಿಕೊಂಡು ಪುನಃ ಕಾಡಿಗೆ ಹೋಗುವರು.
04025007a ತಸ್ಮಾತ್ಕ್ಷಿಪ್ರಂ ಬುಭುತ್ಸಧ್ವಂ ಯಥಾ ನೋಽತ್ಯಂತಮವ್ಯಯಂ|
04025007c ರಾಜ್ಯಂ ನಿರ್ದ್ವಂದ್ವಮವ್ಯಗ್ರಂ ನಿಃಸಪತ್ನಂ ಚಿರಂ ಭವೇತ್||
ಆದ್ದರಿಂದ ನಮ್ಮ ರಾಜ್ಯ ಸದಾ ಅಕ್ಷಯವೂ ಕಲಹ ರಹಿತವೂ ಶಾಂತವೂ ಶತ್ರುರಹಿತವೂ ಆಗಿರಬೇಕೆಂದಾದರೆ ಅವರನ್ನು ಬೇಗ ಹುಡುಕಿ.”
04025008a ಅಥಾಬ್ರವೀತ್ತತಃ ಕರ್ಣಃ ಕ್ಷಿಪ್ರಂ ಗಚ್ಛಂತು ಭಾರತ|
04025008c ಅನ್ಯೇ ಧೂರ್ತತರಾ ದಕ್ಷಾ ನಿಭೃತಾಃ ಸಾಧುಕಾರಿಣಃ||
ಆಗ ಕರ್ಣನು ನುಡಿದನು: “ಭಾರತ! ಧೂರ್ತತರರೂ ದಕ್ಷರೂ ಗುಪ್ತರೂ ಚೆನ್ನಾಗಿ ಕಾರ್ಯಸಾಧನೆ ಮಾಡುವವರೂ ಆದ ಬೇರೆಯವರು ಬೇಗ ಹೋಗಲಿ.
04025009a ಚರಂತು ದೇಶಾನ್ಸಂವೀತಾಃ ಸ್ಫೀತಾಂ ಜನಪದಾಕುಲಾನ್|
04025009c ತತ್ರ ಗೋಷ್ಠೀಷ್ವಥಾನ್ಯಾಸು ಸಿದ್ಧಪ್ರವ್ರಜಿತೇಷು ಚ||
04025010a ಪರಿಚಾರೇಷು ತೀರ್ಥೇಷು ವಿವಿಧೇಷ್ವಾಕರೇಷು ಚ|
04025010c ವಿಜ್ಞಾತವ್ಯಾ ಮನುಷ್ಯೈಸ್ತೈಸ್ತರ್ಕಯಾ ಸುವಿನೀತಯಾ||
ಅವರು ವೇಷ ಮರೆಸಿಕೊಂಡು ಜನಭರಿತವಾದ ಜನಪದಗಳನ್ನುಳ್ಳ ವಿಶಾಲ ದೇಶಗಳಲ್ಲಿಯೂ ಇತರ ಗೋಷ್ಠಿಗಳಲ್ಲಿಯೂ ಬಳಿಕ ಸಿದ್ಧಾಶ್ರಮಗಳಲ್ಲೂ, ಮಾರ್ಗಗಳಲ್ಲೂ, ತೀರ್ಥಕ್ಷೇತ್ರಗಳಲ್ಲೂ, ವಿವಿಧ ಗಣಿಗಳಲ್ಲೂ ಸಂಚರಿಸಲಿ. ಜನ ಅವರನ್ನು ಸುಶಿಕ್ಷಿತ ತರ್ಕದಿಂದ ಪತ್ತೆಮಾಡಬಹುದು.
04025011a ವಿವಿಧೈಸ್ತತ್ಪರೈಃ ಸಮ್ಯಕ್ತಜ್ಞೈರ್ನಿಪುಣಸಂವೃತೈಃ|
04025011c ಅನ್ವೇಷ್ಟವ್ಯಾಶ್ಚ ನಿಪುಣಂ ಪಾಂಡವಾಶ್ಚನ್ನವಾಸಿನಃ||
04025012a ನದೀಕುಂಜೇಷು ತೀರ್ಥೇಷು ಗ್ರಾಮೇಷು ನಗರೇಷು ಚ|
04025012c ಆಶ್ರಮೇಷು ಚ ರಮ್ಯೇಷು ಪರ್ವತೇಷು ಗುಹಾಸು ಚ||
ವೇಷಮರೆಸಿಕೊಂಡು ವಾಸಿಸುತ್ತಿರುವ ಪಾಂಡವರನ್ನು ತತ್ಪರರೂ, ಸಂಪೂರ್ಣತಜ್ಞರಾದವರೂ, ನಿಪುಣತೆಯಿಂದ ವೇಷ ಮರೆಸಿಕೊಂಡವರೂ ಆದ ವಿವಿಧ ಗೂಢಚರರು ನದೀ ಕುಂಜಗಳಲ್ಲಿಯೂ, ತೀರ್ಥಗಳೂ, ಗ್ರಾಮ ನಗರಗಳಲ್ಲಿಯೂ, ಆಶ್ರಮಗಳಲ್ಲಿಯೂ, ರಮ್ಯ ಪರ್ವತಗಳಲ್ಲಿಯೂ, ಗುಹೆಗಳಲ್ಲೂ ಎಚ್ಚರಿಕೆಯಿಂದ ಹುಡುಕಬೇಕು.”
04025013a ಅಥಾಗ್ರಜಾನಂತರಜಃ ಪಾಪಭಾವಾನುರಾಗಿಣಂ|
04025013c ಜ್ಯೇಷ್ಠಂ ದುಃಶಾಸನಸ್ತತ್ರ ಭ್ರಾತಾ ಭ್ರಾತರಮಬ್ರವೀತ್||
ಅನಂತರ ಆ ವಿಷಯದಲ್ಲಿ ತಮ್ಮನಾದ ದುಃಶಾಸನನು ಪಾಪಭಾವದಲ್ಲಿ ಆಸಕ್ತನಾದ ಹಿರಿಯ ಅಣ್ಣನಿಗೆ ಹೇಳಿದನು:
04025014a ಏತಚ್ಚ ಕರ್ಣೋ ಯತ್ಪ್ರಾಹ ಸರ್ವಮೀಕ್ಷಾಮಹೇ ತಥಾ|
04025014c ಯಥೋದ್ದಿಷ್ಟಂ ಚರಾಃ ಸರ್ವೇ ಮೃಗಯಂತು ತತಸ್ತತಃ|
04025014e ಏತೇ ಚಾನ್ಯೇ ಚ ಭೂಯಾಂಸೋ ದೇಶಾದ್ದೇಶಂ ಯಥಾವಿಧಿ||
“ಕರ್ಣನು ಹೇಳಿದುದೆಲ್ಲವೂ ನನಗೂ ಸರಿಕಾಣುತ್ತದೆ. ನಿರ್ದೇಶಿಸಿದ ರೀತಿಯಲ್ಲಿ ಚರರೆಲ್ಲರೂ ಅಲ್ಲಲ್ಲಿ ಹುಡುಕಲಿ. ಅವರೂ ಇನ್ನೂ ಇತರರೂ ಕ್ರಮವರಿತು ದೇಶದಿಂದ ದೇಶಕ್ಕೆ ಹೋಗಿ ಹುಡುಕಲಿ.
04025015a ನ ತು ತೇಷಾಂ ಗತಿರ್ವಾಸಃ ಪ್ರವೃತ್ತಿಶ್ಚೋಪಲಭ್ಯತೇ|
04025015c ಅತ್ಯಾಹಿತಂ ವಾ ಗೂಢಾಸ್ತೇ ಪಾರಂ ವೋರ್ಮಿಮತೋ ಗತಾಃ||
ಅವರ ಗತಿಯಾಗಲೀ ವಾಸಸ್ಥಾನವಾಗಲೀ ಉದ್ಯೋಗವಾಗಲೀ ತಿಳಿಯಬರುತ್ತಿಲ್ಲ. ಅವರು ಅತ್ಯಂತ ಗುಪ್ತವಾಗಿ ಅಡಗಿಕೊಂಡಿದ್ದಾರೆ. ಇಲ್ಲವೆ ಸಮುದ್ರದಾಚೆಗೆ ಹೋಗಿದ್ದಾರೆ.
04025016a ವ್ಯಾಲೈರ್ವಾಪಿ ಮಹಾರಣ್ಯೇ ಭಕ್ಷಿತಾಃ ಶೂರಮಾನಿನಃ|
04025016c ಅಥ ವಾ ವಿಷಮಂ ಪ್ರಾಪ್ಯ ವಿನಷ್ಟಾಃ ಶಾಶ್ವತೀಃ ಸಮಾಃ||
ಶೂರರೆಂದು ತಿಳಿದಿರುವ ಅವರು ಮಹಾರಣ್ಯದಲ್ಲಿ ದುಷ್ಟಮೃಗಗಳಿಂದ ಭಕ್ಷಿತರಾಗಿದ್ದಾರೆ ಇಲ್ಲವೇ ವಿಷಮ ಪರಿಸ್ಥಿತಿಗೆ ಸಿಕ್ಕಿ ಶಾಶ್ವತ ನಾಶಕ್ಕೀಡಾಗಿದ್ದಾರೆ.
04025017a ತಸ್ಮಾನ್ಮಾನಸಮವ್ಯಗ್ರಂ ಕೃತ್ವಾ ತ್ವಂ ಕುರುನಂದನ|
04025017c ಕುರು ಕಾರ್ಯಂ ಯಥೋತ್ಸಾಹಂ ಮನ್ಯಸೇ ಯನ್ನರಾಧಿಪ||
ಆದುದರಿಂದ ಕುರುನಂದನ! ರಾಜ! ಮನಸ್ಸನ್ನು ಸಮಾಧಾನಗೊಳಿಸಿಕೊಂಡು ಆಲೋಚಿಸಿದ ಕಾರ್ಯವನ್ನು ಯಥಾಶಕ್ತಿಯಾಗಿ ಮಾಡು.””
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಕರ್ಣದುಃಶಾಸನವಾಕ್ಯೇ ಪಂಚವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಕರ್ಣದುಃಶಾಸನವಾಕ್ಯದಲ್ಲಿ ಇಪ್ಪತ್ತೈದನೆಯ ಅಧ್ಯಾಯವು.