ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೨೦೮
ಮಾರ್ಕಂಡೇಯನು ಯುಧಿಷ್ಠಿರನಿಗೆ ನಾನಾ ವಿಧದ ಅಗ್ನಿಗಳನ್ನು ವರ್ಣಿಸುವುದು (೧-೮).
03208001 ಮಾರ್ಕಂಡೇಯ ಉವಾಚ|
03208001a ಬ್ರಹ್ಮಣೋ ಯಸ್ತೃತೀಯಸ್ತು ಪುತ್ರಃ ಕುರುಕುಲೋದ್ವಹ|
03208001c ತಸ್ಯಾಪವಸುತಾ ಭಾರ್ಯಾ ಪ್ರಜಾಸ್ತಸ್ಯಾಪಿ ಮೇ ಶೃಣು||
ಮಾರ್ಕಂಡೇಯನು ಹೇಳಿದನು: “ಕುರುಕುಲೋದ್ವಹ! ಬ್ರಹ್ಮನ ಈ ಮೂರನೆಯ ಮಗನು ಆಪವನ ಮಗಳನ್ನು ಮದುವೆಯಾದನು. ಅವನ ಮಕ್ಕಳ ಕುರಿತು ಕೇಳು:
03208002a ಬೃಹಜ್ಜ್ಯೋತಿರ್ಬೃಹತ್ಕೀರ್ತಿರ್ಬೃಹದ್ಬ್ರಹ್ಮಾ ಬೃಹನ್ಮನಾಃ|
03208002c ಬೃಹನ್ಮಂತ್ರೋ ಬೃಹದ್ಭಾಸಸ್ತಥಾ ರಾಜನ್ಬೃಹಸ್ಪತಿಃ||
ರಾಜನ್! ಬೃಹಜ್ಯೋತಿ, ಬೃಹತ್ಕೀರ್ತಿ, ಬೃಹದ್ಬ್ರಹ್ಮ, ಬೃಹನ್ಮನ, ಬೃಹನ್ಮಂತ್ರ, ಬೃಹದ್ಭಾಸ ಮತ್ತು ಬೃಹಸ್ಪತಿ.
03208003a ಪ್ರಜಾಸು ತಾಸು ಸರ್ವಾಸು ರೂಪೇಣಾಪ್ರತಿಮಾಭವತ್|
03208003c ದೇವೀ ಭಾನುಮತೀ ನಾಮ ಪ್ರಥಮಾಂಗಿರಸಃ ಸುತಾ||
ದೇವೀ ಭಾನುಮತಿ ಎಂಬ ಹೆಸರಿನ ಅಂಗಿರಸನ ಮೊದಲನೆಯ ಮಗಳು ಅವನ ಮಕ್ಕಳೆಲ್ಲರಲ್ಲಿ ಅಪ್ರತಿಮ ರೂಪವತಿಯಾಗಿದ್ದಳು.
03208004a ಭೂತಾನಾಮೇವ ಸರ್ವೇಷಾಂ ಯಸ್ಯಾಂ ರಾಗಸ್ತದಾಭವತ್|
03208004c ರಾಗಾದ್ರಾಗೇತಿ ಯಾಮಾಹುರ್ದ್ವಿತೀಯಾಂಗಿರಸಃ ಸುತಾ||
ಹುಟ್ಟಿದಾಗ ಇರುವ ಎಲ್ಲವುಗಳಲ್ಲಿಯೂ ಅವಳ ಮೇಲೆ ಅನುರಾಗವುಂಟಾಗಿದುದರಿಂದ, ಅಂಗಿರಸನ ಎರಡನೆಯ ಮಗಳಿಗೆ ರಾಗದಿಂದ ರಾಗವೆನ್ನುವುದೇ ಹೆಸರಾಯಿತು[1].
03208005a ಯಾಂ ಕಪರ್ದಿಸುತಾಮಾಹುರ್ದೃಶ್ಯಾದೃಶ್ಯೇತಿ ದೇಹಿನಃ|
03208005c ತನುತ್ವಾತ್ಸಾ ಸಿನೀವಾಲೀ ತೃತೀಯಾಂಗಿರಸಃ ಸುತಾ||
ಅಂಗಿರಸನ ಮೂರನೆಯ ಮಗಳು ಸಿನೀವಾಲಿಯ ದೇಹವು ಎಷ್ಟೊಂದು ಸಣ್ಣದಾಗಿತ್ತಂದರೆ ಅವಳು ಕಾಣಿಸಿಕೊಳ್ಳುತ್ತಿರಲಿಲ್ಲ. ಆದುದರಿಂದ ಅವಳನ್ನು ಕಪರ್ದಿಯ ಮಗಳೆಂದು ಹೇಳುತ್ತಾರೆ[2].
03208006a ಪಶ್ಯತ್ಯರ್ಚಿಷ್ಮತೀ ಭಾಭಿರ್ಹವಿರ್ಭಿಶ್ಚ ಹವಿಷ್ಮತೀ|
03208006c ಷಷ್ಠೀಮಂಗಿರಸಃ ಕನ್ಯಾಂ ಪುಣ್ಯಾಮಾಹುರ್ಹವಿಷ್ಮತೀಂ||
ಅರ್ಚಿಷ್ಮತಿಯು ಕಾಂತಿಯೊಂದಿಗೆ ಕಂಡುಬಂದಳು[3], ಹವಿಷ್ಮತಿಯು ಹವಿಸ್ಸಿನೊಂದಿಗೆ[4], ಮತ್ತು ಅಂಗಿರಸನ ಆರನೆಯ ಮಗಳು ಪುಣ್ಯೆಯನ್ನು ಮಹಿಷ್ಮತೀ ಎಂದು ಕರೆದರು.
03208007a ಮಹಾಮಖೇಷ್ವಾಂಗಿರಸೀ ದೀಪ್ತಿಮತ್ಸು ಮಹಾಮತೀ|
03208007c ಮಹಾಮತೀತಿ ವಿಖ್ಯಾತಾ ಸಪ್ತಮೀ ಕಥ್ಯತೇ ಸುತಾ||
ಅಂಗಿರಸನ ಏಳನೆಯವಳು ಮಹಾಮಖಗಳಲ್ಲಿ ಸತ್ಕೃತಳಾಗುವವಳು ಮಹಾಮತಿಯೆಂದು ವಿಖ್ಯಾತಳಾದವಳು.
03208008a ಯಾಂ ತು ದೃಷ್ಟ್ವಾ ಭಗವತೀಂ ಜನಃ ಕುಹುಕುಹಾಯತೇ|
03208008c ಏಕಾನಂಶೇತಿ ಯಾಮಾಹುಃ ಕುಹೂಮಂಗಿರಸಃ ಸುತಾಂ||
ಯಾರನ್ನು ನೋಡಿ ಜನರು ಆಶ್ಚರ್ಯಚತರಾಗುವರೋ ಅವಳು ಭಗವತಿ, ಅಂಗಿರಸನ ಎಂಟನೆಯ ಮಗಳು. ಕುಹೂ[5] ಎನ್ನುವವಳು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ಅಷ್ಟಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಎಂಟನೆಯ ಅಧ್ಯಾಯವು.
[1]ಅರ್ಥಾತ್ ಪ್ರೇಮದೇವತೆಯಿವಳು.
[2]ಚತುರ್ದಶೀಸಹಿತವಾದ ಅಮವಾಸ್ಯೆಗೆ ಸಿನೀವಾಲೀ ಎಂದು ಹೆಸರು. ಯಾ ಪೂರ್ವಾಮಾವಾಸ್ಯಾ ಸಾ ಸಿನೀವಾಲೀ| (ಶ್ರುತಿ) ಸಾ ದೃಷ್ಟೇಂದುಃ ಸಿನೀವಾಲೀ - ಆ ದಿವಸ ಚಂದ್ರನ ಕಲೆಯು ಕಂಡೂ ಕಾಣದಂತಿರುತ್ತದೆ(ಅಮರಕೋಶ). ಚತುರ್ದಶೀಯುಕ್ತವಾದ ಅಮವಾಸ್ಯೆಯ ದಿನ ಚಂದ್ರಕಲೆಯಂತೆ ಸಿನೀವಾಲಿಯು ಕಂಡೂ ಕಾಣದಂತೆ ಬಹಳ ಕೃಶಳಾಗಿದ್ದಳು. ಇವಳನ್ನೇ ರುದ್ರನು ತನ್ನ ಜಡೆಯಲ್ಲಿ ಧರಿಸಿರುವನಾದುದರಿಂದ ಇವಳನ್ನು ‘ಕಪರ್ದಿಸುತಾ’ ಎಂದೂ ಕರೆಯುತ್ತಾರೆ (ಭಾರತ ದರ್ಶನ ಪ್ರಕಾಶನ, ಸಂಪುಟ ೭, ಪುಟ ೩೪೧೭).
[3]ಪ್ರಕಾಶಮಾನ ಪ್ರಭೆಯಿಂದ ಕೂಡಿದವಳಾಗಿದ್ದುದರಿಂದ ಅವಳಿಗೆ ಅರ್ಚಿಷ್ಮತೀ ಎಂಬ ಹೆಸರು.
[4]ಸರ್ವಕಾಲದಲ್ಲಿಯೂ ಯಜ್ಞೇಶ್ವರನಲ್ಲಿ ಅರ್ಪಿಸಿದ ಹವಿಸ್ಸನ್ನು ಸ್ವೀಕರಿಸುತ್ತಿರುವುದರಿಂದ ಅವಳ ಹೆಸರು ಹವಿಷ್ಮತೀ.
[5]ಚಂದ್ರನು ಕಾಣದಿರುವ ಅಮವಾಸ್ಯೆಗೆ ಕುಹೂ ಎಂದು ಹೆಸರು. ಸಾ ನಷ್ಟೇಂದುಕಲಾ ಕುಹೂಃ (ಅಮರಕೋಶ).