Aranyaka Parva: Chapter 217

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೧೭

ವಜ್ರಪ್ರಹಾರದಿಂದ ಜನಿಸಿದ ಕುಮಾರ ಕುಮಾರಿಯರ ವರ್ಣನೆ (೧-೧೪).

03217001 ಮಾರ್ಕಂಡೇಯ ಉವಾಚ|

03217001a ಸ್ಕಂದಸ್ಯ ಪಾರ್ಷದಾನ್ಘೋರಾಂ ಶೃಣುಷ್ವಾದ್ಭುತದರ್ಶನಾನ್|

03217001c ವಜ್ರಪ್ರಹಾರಾತ್ಸ್ಕಂದಸ್ಯ ಜಜ್ಞುಸ್ತತ್ರ ಕುಮಾರಕಾಃ||

03217001e ಯೇ ಹರಂತಿ ಶಿಶೂಂ ಜಾತಾನ್ಗರ್ಭಸ್ಥಾಂಶ್ಚೈವ ದಾರುಣಾಃ||

ಮಾರ್ಕಂಡೇಯನು ಹೇಳಿದನು: “ಈಗ ಘೋರರೂ ಅದ್ಭುತದರ್ಶನರೂ ಆದ ಸ್ಕಂದನ ಅನುಯಾಯಿಗಳ ಕುರಿತು ಕೇಳು. ಸ್ಕಂದನ ವಜ್ರಪ್ರಹಾರದಿಂದಾಗಿ ಹುಟ್ಟಿದ ಮತ್ತು ಗರ್ಭದಲ್ಲಿಯೂ ಇರುವ ಶಿಶುಗಳನ್ನು ಅಪಹರಿಸುವ ದಾರುಣ ಕುಮಾರಕರು ಹುಟ್ಟಿದರು.

03217002a ವಜ್ರಪ್ರಹಾರಾತ್ಕನ್ಯಾಶ್ಚ ಜಜ್ಞಿರೇಽಸ್ಯ ಮಹಾಬಲಾಃ|

03217002c ಕುಮಾರಾಶ್ಚ ವಿಶಾಖಂ ತಂ ಪಿತೃತ್ವೇ ಸಮಕಲ್ಪಯನ್||

ವಜ್ರಪ್ರಹಾರದಿಂದ ಮಹಾಬಲಶಾಲಿಗಳಾದ ಕನ್ಯೆಯರೂ ಹುಟ್ಟಿದರು. ಕುಮಾರರು ವಿಶಾಖನನ್ನು ತಮ್ಮ ತಂದೆಯೆಂದು ತಿಳಿದರು.

03217003a ಸ ಭೂತ್ವಾ ಭಗವಾನ್ಸಂಖ್ಯೇ ರಕ್ಷಂಶ್ಚಾಗಮುಖಸ್ತದಾ|

03217003c ವೃತಃ ಕನ್ಯಾಗಣೈಃ ಸರ್ವೈರಾತ್ಮನೀನೈಶ್ಚ ಪುತ್ರಕೈಃ||

03217004a ಮಾತೄಣಾಂ ಪ್ರೇಕ್ಷತೀನಾಂ ಚ ಭದ್ರಶಾಖಶ್ಚ ಕೌಶಲಃ|

03217004c ತತಃ ಕುಮಾರಪಿತರಂ ಸ್ಕಂದಮಾಹುರ್ಜನಾ ಭುವಿ||

ಆ ಭಗವಾನನು ರಣದಲ್ಲಿ ಆಡಿನ ಮುಖವನ್ನು ಧರಿಸಿ, ತಾನೇ ಹೊರತಂದ ಪುತ್ರರು ಮತ್ತು ಕನ್ಯಾಗಣಗಳೆಲ್ಲರಿಂದ ಆವೃತನಾಗಿ ಮಾತೃಗಳ ಸಮಕ್ಷಮದಲ್ಲಿ ಕೌಶಲದಿಂದ ಭದ್ರಶಾಖನಾಗಿ ನಿಂತನು. ಆದುದರಿಂದ ಸ್ಕಂದನನ್ನು ಭುವಿಯಲ್ಲಿ ಕುಮಾರಪಿತನೆಂದು ಜನರು ಕರೆಯುತ್ತಾರೆ.

03217005a ರುದ್ರಮಗ್ನಿಮುಮಾಂ ಸ್ವಾಹಾಂ ಪ್ರದೇಶೇಷು ಮಹಾಬಲಾಂ|

03217005c ಯಜಂತಿ ಪುತ್ರಕಾಮಾಶ್ಚ ಪುತ್ರಿಣಶ್ಚ ಸದಾ ಜನಾಃ||

ಪುತ್ರರನ್ನು ಮತ್ತು ಪುತ್ರಿಯರನ್ನು ಬಯಸುವ ಜನರು ಸದಾ ಅವರ ಪ್ರದೇಶದಲ್ಲಿ ರುದ್ರನನ್ನು ಮಹಾಬಲ ಅಗ್ನಿಯನ್ನಾಗಿಯೂ ಉಮೆಯನ್ನು ಸ್ವಾಹಾ ಎಂದೂ ಯಾಜಿಸುತ್ತಾರೆ.

03217006a ಯಾಸ್ತಾಸ್ತ್ವಜನಯತ್ಕನ್ಯಾಸ್ತಪೋ ನಾಮ ಹುತಾಶನಃ|

03217006c ಕಿಂ ಕರೋಮೀತಿ ತಾಃ ಸ್ಕಂದಂ ಸಂಪ್ರಾಪ್ತಾಃ ಸಮಭಾಷತ||

ತಪ ಎಂಬ ಹೆಸರಿನ ಅಗ್ನಿಯಿಂದ ಜನಿಸಿದ ಕನ್ಯೆಯರು ಸ್ಕಂದನ ಬಳಿಸಾರಲು ಅವರಿಗೆ “ಏನು ಮಾಡಲಿ?” ಎಂದು ಸ್ಕಂದನು ಕೇಳಿದನು.

03217007 ಮಾತರ ಊಚುಃ|

03217007a ಭವೇಮ ಸರ್ವಲೋಕಸ್ಯ ವಯಂ ಮಾತರ ಉತ್ತಮಾಃ|

03217007c ಪ್ರಸಾದಾತ್ತವ ಪೂಜ್ಯಾಶ್ಚ ಪ್ರಿಯಮೇತತ್ಕುರುಷ್ವ ನಃ||

ಮಾತರರು ಹೇಳಿದರು: “ನಿನ್ನ ಪ್ರಸಾದದಂತೆ ನಾವು ಸರ್ವಲೋಕದ ಪೂಜ್ಯ ಉತ್ತಮ ಮಾತರರೆಂದಾಗಲಿ. ನಮಗೆ ಈ ಪ್ರಿಯವಾದುದನ್ನು ಮಾಡು!””

03217008 ಮಾರ್ಕಂಡೇಯ ಉವಾಚ|

03217008a ಸೋಽಬ್ರವೀದ್ಬಾಢಮಿತ್ಯೇವಂ ಭವಿಷ್ಯಧ್ವಂ ಪೃಥಗ್ವಿಧಾಃ|

03217008c ಅಶಿವಾಶ್ಚ ಶಿವಾಶ್ಚೈವ ಪುನಃ ಪುನರುದಾರಧೀಃ||

ಮಾರ್ಕಂಡೇಯನು ಹೇಳಿದನು: ““ಹಾಗೆಯೇ ಆಗಲಿ! ನೀವು ಅಶಿವ ಶಿವರೆಂದು ಎರಡು ಭಾಗಗಳಾಗುತ್ತೀರಿ!” ಎಂದು ಆ ಉದಾರಧಿಯು ಪುನಃ ಪುನಃ ಹೇಳಿದನು.

03217009a ತತಃ ಸಂಕಲ್ಪ್ಯ ಪುತ್ರತ್ವೇ ಸ್ಕಂದಂ ಮಾತೃಗಣೋಽಗಮತ್|

03217009c ಕಾಕೀ ಚ ಹಲಿಮಾ ಚೈವ ರುದ್ರಾಥ ಬೃಹಲೀ ತಥಾ|

03217009e ಆರ್ಯಾ ಪಲಾಲಾ ವೈ ಮಿತ್ರಾ ಸಪ್ತೈತಾಃ ಶಿಶುಮಾತರಃ||

ಆಗ ಸ್ಕಂದನ ಪುತ್ರತ್ವವನ್ನು ಪಡೆದು ಮಾತೃಗಣವು ಹೊರಟಿತು. ಕಾಕೀ, ಹಲಿಮಾ, ರುದ್ರಾ, ಬೃಹಲೀ, ಆರ್ಯಾ, ಪಲಾಲಾ, ಮತ್ತು ಮಿತ್ರಾ ಇವರು ಆ ಏಳು ಶಿಶುಮಾತರರು.

03217010a ಏತಾಸಾಂ ವೀರ್ಯಸಂಪನ್ನಃ ಶಿಶುರ್ನಾಮಾತಿದಾರುಣಃ|

03217010c ಸ್ಕಂದಪ್ರಸಾದಜಃ ಪುತ್ರೋ ಲೋಹಿತಾಕ್ಷೋ ಭಯಂಕರಃ||

ಅವರು ವೀರ್ಯಸಂಪನ್ನನಾದ ಅತಿದಾರುಣನಾದ ಲೋಹಿತಾಕ್ಷ ಭಯಂಕರನಾದ ಸ್ಕಂದನ ಪ್ರಸಾದದಿಂದ ಹುಟ್ಟಿದ ಶಿಶು ಎಂಬ ಹೆಸರಿನ ಮಗನನ್ನು ಪಡೆದರು.

03217011a ಏಷ ವೀರಾಷ್ಟಕಃ ಪ್ರೋಕ್ತಃ ಸ್ಕಂದಮಾತೃಗಣೋದ್ಭವಃ|

03217011c ಚಾಗವಕ್ತ್ರೇಣ ಸಹಿತೋ ನವಕಃ ಪರಿಕೀರ್ತ್ಯತೇ||

ಈ ವೀರನು ಸ್ಕಂದ-ಮಾತೃಗಣಕ್ಕೆ ಜನಿಸಿದ ಎಂಟನೆಯ ಪುತ್ರನೆಂದು ಹೇಳುತ್ತಾರೆ. ಆದರೆ ಆ ಆಡಿನ ಮುಖದವನನ್ನು ಸೇರಿಸಿ, ಇವನನ್ನು ಒಂಭತ್ತನೆಯವನೆಂದು ಹೇಳುತ್ತಾರೆ.

03217012a ಷಷ್ಠಂ ಚಾಗಮಯಂ ವಕ್ತ್ರಂ ಸ್ಕಂದಸ್ಯೈವೇತಿ ವಿದ್ಧಿ ತತ್|

03217012c ಷಟ್ಶಿರೋಽಭ್ಯಂತರಂ ರಾಜನ್ನಿತ್ಯಂ ಮಾತೃಗಣಾರ್ಚಿತಂ||

ರಾಜನ್! ಸ್ಕಂದನ ಆರನೆಯ ಮುಖವು ಆಡಿನದೆಂದು ತಿಳಿ. ಮಧ್ಯದಲ್ಲಿರುವ ಈ ಆರನೆಯ ಮುಖವನ್ನು ಮಾತೃಗಣವು ಸದಾ ಪೂಜಿಸುತ್ತದೆ.

03217013a ಷಣ್ಣಾಂ ತು ಪ್ರವರಂ ತಸ್ಯ ಶೀರ್ಷಾಣಾಮಿಹ ಶಬ್ದ್ಯತೇ|

03217013c ಶಕ್ತಿಂ ಯೇನಾಸೃಜದ್ದಿವ್ಯಾಂ ಭದ್ರಶಾಖ ಇತಿ ಸ್ಮ ಹ||

ಆರನೆಯ ಆ ಶೀರ್ಷವು ಅತ್ಯಂತ ಪ್ರಮುಖವಾದುದೆಂದು ಕೇಳಿಬರುತ್ತದೆ. ಏಕೆಂದರೆ ಇದರಿಂದಲೇ ಭದ್ರಶಾಖನು ಶಕ್ತಿಯನ್ನು ಸೃಷ್ಟಿಸಿದನೆಂದು ಹೇಳುತ್ತಾರೆ.

03217014a ಇತ್ಯೇತದ್ವಿವಿಧಾಕಾರಂ ವೃತ್ತಂ ಶುಕ್ಲಸ್ಯ ಪಂಚಮೀಂ|

03217014c ತತ್ರ ಯುದ್ಧಂ ಮಹಾಘೋರಂ ವೃತ್ತಂ ಷಷ್ಠ್ಯಾಂ ಜನಾಧಿಪ||

ಜನಾಧಿಪ! ಈ ವಿವಿಧ ಘಟನೆಗಳು ಶುಕ್ಲಪಕ್ಷದ ಪಂಚಮಿಯೆಂದು ನಡೆದವು. ಷಷ್ಠಿಯಂದು ಅಲ್ಲಿ ಮಹಾಘೋರ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ಸಪ್ತದಶಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿನೇಳನೆಯ ಅಧ್ಯಾಯವು.

Related image

Comments are closed.