ಆರಣ್ಯಕ ಪರ್ವ: ಕುಂಡಲಾಹರಣ ಪರ್ವ
೨೮೭
ಕರ್ಣನ ಜನನ ರಹಸ್ಯ
ಸೂರ್ಯನು ಕರ್ಣನಿಗೆ ಹೇಳದೇ ಇದ್ದ ಗುಟ್ಟು ಯಾವುದು ಎಂದು ಕೇಳಲು ವೈಶಂಪಾಯನನು ಪುನಃ ಕರ್ಣನ ಜನನದ ಕುರಿತು ಹೇಳಿದುದು (೧-೩). ಕುಂತೀಭೋಜನಲ್ಲಿಗೆ ಓರ್ವ ಋಷಿಯು ಬಂದುದು (೪-೮); ತನ್ನ ಸಾಕುಮಗಳು ಕುಂತಿಗೆ ಅವನ ಸೇವೆಯನ್ನು ಮಾಡಬೇಕೆಂದು ಕೇಳಿಕೊಂಡುದು (೯-೨೯).
03287001 ಜನಮೇಜಯ ಉವಾಚ|
03287001a ಕಿಂ ತದ್ಗುಹ್ಯಂ ನ ಚಾಖ್ಯಾತಂ ಕರ್ಣಾಯೇಹೋಷ್ಣರಶ್ಮಿನಾ|
03287001c ಕೀದೃಶೇ ಕುಂಡಲೇ ತೇ ಚ ಕವಚಂ ಚೈವ ಕೀದೃಶಂ||
ಜನಮೇಜಯನು ಹೇಳಿದನು: “ಆ ಉಷ್ಣರಶ್ಮಿಯು ಕರ್ಣನಿಗೆ ಹೇಳದೇ ಇದ್ದ ಗುಟ್ಟು ಯಾವುದಾಗಿತ್ತು? ಅವನ ಕುಂಡಲಗಳು ಹೇಗಿದ್ದವು? ಮತ್ತು ಕವಚವು ಹೇಗಿತ್ತು?
03287002a ಕುತಶ್ಚ ಕವಚಂ ತಸ್ಯ ಕುಂಡಲೇ ಚೈವ ಸತ್ತಮ|
03287002c ಏತದಿಚ್ಚಾಮ್ಯಹಂ ಶ್ರೋತುಂ ತನ್ಮೇ ಬ್ರೂಹಿ ತಪೋಧನ||
ಸತ್ತಮ! ಅವನಿಗೆ ಎಲ್ಲಿಂದ ಕುಂಡಲ-ಕವಚಗಳು ಬಂದವು? ತಪೋಧನ! ಇದನ್ನು ಕೇಳಲು ಬಯಸುತ್ತೇನೆ. ನನಗೆ ಹೇಳು.”
03287003 ವೈಶಂಪಾಯನ ಉವಾಚ|
03287003a ಅಯಂ ರಾಜನ್ಬ್ರವೀಮ್ಯೇತದ್ಯತ್ತದ್ಗುಹ್ಯಂ ವಿಭಾವಸೋಃ|
03287003c ಯಾದೃಶೇ ಕುಂಡಲೇ ಚೈವ ಕವಚಂ ಚೈವ ಯಾದೃಶಂ||
ವೈಶಂಪಾಯನನು ಹೇಳಿದನು: “ರಾಜನ್! ವಿಭಾವಸುವಿನ ಗುಟ್ಟನ್ನು ಮತ್ತು ಕವಚ-ಕುಂಡಲಗಳು ಹೇಗಿದ್ದವು ಎನ್ನುವುದನ್ನು ನಾನು ನಿನಗೆ ಹೇಳುತ್ತೇನೆ.
03287004a ಕುಂತಿಭೋಜಂ ಪುರಾ ರಾಜನ್ಬ್ರಾಹ್ಮಣಃ ಸಮುಪಸ್ಥಿತಃ|
03287004c ತಿಗ್ಮತೇಜಾ ಮಹಾಪ್ರಾಂಶುಃ ಶ್ಮಶ್ರುದಂಡಜಟಾಧರಃ||
03287005a ದರ್ಶನೀಯೋಽನವದ್ಯಾಂಗಸ್ತೇಜಸಾ ಪ್ರಜ್ವಲನ್ನಿವ|
03287005c ಮಧುಪಿಂಗೋ ಮಧುರವಾಕ್ತಪಃಸ್ವಾಧ್ಯಾಯಭೂಷಣಃ||
ರಾಜನ್! ಹಿಂದೆ ಕುಂತೀಭೋಜನಲ್ಲಿಗೆ ಓರ್ವ ತಿಗ್ಮತೇಜಸ್ವಿ, ಮಹಾಪ್ರಾಂಶು, ಗಡ್ಡ, ದಂಡ ಮತ್ತು ಜಟೆಗಳನ್ನು ಧರಿಸಿದ, ಸುಂದರ. ಅನವದ್ಯಾಂಗ, ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವಂತಿರುವ, ಜೇನಿನ ಬಣ್ಣದ ಮೈಯ, ಮಧುರವಾಗ್ಮಿ, ತಪಸ್ವಿ, ಅಧ್ಯಾಯಭೂಷಣ ಬ್ರಾಹ್ಮಣನು[1] ಬಂದನು.
03287006a ಸ ರಾಜಾನಂ ಕುಂತಿಭೋಜಮಬ್ರವೀತ್ಸುಮಹಾತಪಾಃ|
03287006c ಭಿಕ್ಷಾಮಿಚ್ಚಾಮ್ಯಹಂ ಭೋಕ್ತುಂ ತವ ಗೇಹೇ ವಿಮತ್ಸರ||
ಆ ತಪಸ್ವಿಯು ರಾಜ ಕುಂತೀಭೋಜನಿಗೆ ಹೇಳಿದನು: “ನಿನ್ನ ಮನೆಯಲ್ಲಿ ಭಿಕ್ಷೆಯನ್ನು ಉಣ್ಣಲು ಬಯಸಿದ್ದೇನೆ. ಮತ್ಸರಿಸಬೇಡ.
03287007a ನ ಮೇ ವ್ಯಲೀಕಂ ಕರ್ತವ್ಯಂ ತ್ವಯಾ ವಾ ತವ ಚಾನುಗೈಃ|
03287007c ಏವಂ ವತ್ಸ್ಯಾಮಿ ತೇ ಗೇಹೇ ಯದಿ ತೇ ರೋಚತೇಽನಘ||
ನೀನಾಗಲೀ ನಿನ್ನ ಅನುಗರಾಗಲೀ ನನ್ನೊಡನೆ ಸುಳ್ಳಾಗಿ ನಡೆದುಕೊಳ್ಳಬಾರದು. ಅನಘ! ಈ ರೀತಿಯಲ್ಲಿ ನಾನು ನಿನ್ನ ಮನೆಯಲ್ಲಿ ನಿನಗಿಷ್ಟವಾದರೆ ಇರುತ್ತೇನೆ.
03287008a ಯಥಾಕಾಮಂ ಚ ಗಚ್ಚೇಯಮಾಗಚ್ಚೇಯಂ ತಥೈವ ಚ|
03287008c ಶಯ್ಯಾಸನೇ ಚ ಮೇ ರಾಜನ್ನಾಪರಾಧ್ಯೇತ ಕಶ್ಚನ||
ನನಗಿಷ್ಟವಾದ ಹಾಗೆ ಹೋಗುತ್ತೇನೆ ಮತ್ತು ಬರುತ್ತೇನೆ. ರಾಜನ್! ಶಯ್ಯೆಯಲ್ಲಾಗಲೀ ಆಸನದಲ್ಲಾಗಲೀ ಯಾವುದೇ ರೀತಿಯ ಅಪರಾಧವೂ ಆಗಕೂಡದು.”
03287009a ತಮಬ್ರವೀತ್ಕುಂತಿಭೋಜಃ ಪ್ರೀತಿಯುಕ್ತಮಿದಂ ವಚಃ|
03287009c ಏವಮಸ್ತು ಪರಂ ಚೇತಿ ಪುನಶ್ಚೈನಮಥಾಬ್ರವೀತ್||
ಕುಂತೀಭೋಜನು ಅವನಿಗೆ ಪ್ರೀತಿಯುಕ್ತವಾದ ಮಾತುಗಳಿಂದ “ಹಾಗೆಯೇ ಆಗಲಿ!” ಎಂದು ಪುನಃ ಹೇಳಿದನು:
03287010a ಮಮ ಕನ್ಯಾ ಮಹಾಬ್ರಹ್ಮನ್ಪೃಥಾ ನಾಮ ಯಶಸ್ವಿನೀ|
03287010c ಶೀಲವೃತ್ತಾನ್ವಿತಾ ಸಾಧ್ವೀ ನಿಯತಾ ನ ಚ ಮಾನಿನೀ||
“ಮಹಾಬ್ರಹ್ಮನ್! ನನ್ನ ಕನ್ಯೆ ಪೃಥಾ ಎಂಬ ಹೆಸರಿನವಳು ಯಶಸ್ವಿನಿಯೂ, ಶೀಲವೃತ್ತಾನ್ವಿತಳೂ ಸಾಧ್ವಿಯೂ, ನಿಯತಳೂ, ಮಾನಿನಿಯೂ ಆಗಿದ್ದಾಳೆ.
03287011a ಉಪಸ್ಥಾಸ್ಯತಿ ಸಾ ತ್ವಾಂ ವೈ ಪೂಜಯಾನವಮನ್ಯ ಚ|
03287011c ತಸ್ಯಾಶ್ಚ ಶೀಲವೃತ್ತೇನ ತುಷ್ಟಿಂ ಸಮುಪಯಾಸ್ಯಸಿ||
ಅವಳು ನಿನ್ನ ಬಳಿಯಿದ್ದು ಕಡೆಗಣಿಸದೇ ಪೂಜಿಸುತ್ತಾಳೆ. ಅವಳ ಶೀಲ ನಡತೆಗಳಿಂದ ನೀನು ತೃಪ್ತಿಯನ್ನು ಪಡೆಯುತ್ತೀಯೆ.”
03287012a ಏವಮುಕ್ತ್ವಾ ತು ತಂ ವಿಪ್ರಮಭಿಪೂಜ್ಯ ಯಥಾವಿಧಿ|
03287012c ಉವಾಚ ಕನ್ಯಾಮಭ್ಯೇತ್ಯ ಪೃಥಾಂ ಪೃಥುಲಲೋಚನಾಂ||
ಹೀಗೆ ಹೇಳಿ ಆ ವಿಪ್ರನನ್ನು ಯಥಾವಿಧಿಯಾಗಿ ಪೂಜಿಸಿ ಪೃಥುಲಲೋಚನೆ ಕನ್ಯೆ ಪೃಥೆಯನ್ನು ಕರೆಯಿಸಿ ಹೇಳಿದನು:
03287013a ಅಯಂ ವತ್ಸೇ ಮಹಾಭಾಗೋ ಬ್ರಾಹ್ಮಣೋ ವಸ್ತುಮಿಚ್ಚತಿ|
03287013c ಮಮ ಗೇಹೇ ಮಯಾ ಚಾಸ್ಯ ತಥೇತ್ಯೇವಂ ಪ್ರತಿಶ್ರುತಂ||
03287014a ತ್ವಯಿ ವತ್ಸೇ ಪರಾಶ್ವಸ್ಯ ಬ್ರಾಹ್ಮಣಸ್ಯಾಭಿರಾಧನಂ|
03287014c ತನ್ಮೇ ವಾಕ್ಯಂ ನ ಮಿಥ್ಯಾ ತ್ವಂ ಕರ್ತುಮರ್ಹಸಿ ಕರ್ಹಿ ಚಿತ್||
“ವತ್ಸೇ! ಮಹಾಭಾಗೇ! ಈ ಬ್ರಾಹ್ಮಣನು ನನ್ನ ಮನೆಯಲ್ಲಿ ವಾಸಿಸಬಯಸುತ್ತಾನೆ ಮತ್ತು ನಾನು ನಿನಗೆ ಬ್ರಾಹ್ಮಣನನ್ನು ಆರಾಧಿಸುವುದು ಚೆನ್ನಾಗಿ ತಿಳಿದಿದೆ ಎಂದು ಹಾಗೆಯೇ ಆಗಲೆಂದು ಭರವಸೆಯನ್ನಿತ್ತಿದ್ದೇನೆ. ವತ್ಸೇ! ನನ್ನ ಈ ಮಾತನ್ನು ನೀನು ಎಂದೂ ಸುಳ್ಳಾಗಿಸಬಾರದು.
03287015a ಅಯಂ ತಪಸ್ವೀ ಭಗವಾನ್ಸ್ವಾಧ್ಯಾಯನಿಯತೋ ದ್ವಿಜಃ|
03287015c ಯದ್ಯದ್ಬ್ರೂಯಾನ್ಮಹಾತೇಜಾಸ್ತತ್ತದ್ದೇಯಮಮತ್ಸರಾತ್||
ಈ ಭಗವಾನ್ ತಪಸ್ವಿ ದ್ವಿಜನು ಸ್ವಾಧ್ಯಾಯಿಯೂ ನಿಯತನೂ ಆಗಿರುವನು. ಈ ಮಹಾತೇಜಸ್ವಿಯು ಏನೆಲ್ಲ ಕೇಳುತ್ತಾನೋ ಅದನ್ನು ಮಾತ್ಸರ್ಯವಿಲ್ಲದೇ ಕೊಡಬೇಕು.
03287016a ಬ್ರಾಹ್ಮಣಾ ಹಿ ಪರಂ ತೇಜೋ ಬ್ರಾಹ್ಮಣಾ ಹಿ ಪರಂ ತಪಃ|
03287016c ಬ್ರಾಹ್ಮಣಾನಾಂ ನಮಸ್ಕಾರೈಃ ಸೂರ್ಯೋ ದಿವಿ ವಿರಾಜತೇ||
ಬ್ರಾಹ್ಮಣರೇ ಪರಮ ತೇಜಸ್ವಿಗಳು ಮತ್ತು ಬ್ರಾಹ್ಮಣರೇ ಪರಮ ತಪಸ್ವಿಗಳು. ಬ್ರಾಹ್ಮಣರ ನಮಸ್ಕಾರಗಳಿಂದಲೇ ಸೂರ್ಯನು ಆಕಾಶದಲ್ಲಿ ವಿರಾಜಿಸುತ್ತಾನೆ.
03287017a ಅಮಾನಯನ್ ಹಿ ಮಾನಾರ್ಹಾನ್ವಾತಾಪಿಶ್ಚ ಮಹಾಸುರಃ|
03287017c ನಿಹತೋ ಬ್ರಹ್ಮದಂಡೇನ ತಾಲಜಂಘಸ್ತಥೈವ ಚ||
ಈ ಮಾನಾರ್ಹರನ್ನು ಮನ್ನಿಸದೇ ಮಹಾಸುರ ವಾತಾಪಿ[2]ಯೂ ತಾಲಜಂಘನೂ ಬ್ರಹ್ಮದಂಡದಿಂದ ಹತರಾದರು.
03287018a ಸೋಽಯಂ ವತ್ಸೇ ಮಹಾಭಾರ ಆಹಿತಸ್ತ್ವಯಿ ಸಾಂಪ್ರತಂ|
03287018c ತ್ವಂ ಸದಾ ನಿಯತಾ ಕುರ್ಯಾ ಬ್ರಾಹ್ಮಣಸ್ಯಾಭಿರಾಧನಂ||
ವತ್ಸೇ! ಈ ಮಹಾಭಾರವು ನಿನ್ನ ಮೇಲಿದೆ. ನೀನು ಸದಾ ನಿಯತಳಾಗಿ ಈ ಬ್ರಾಹ್ಮಣನನ್ನು ಆರಾಧಿಸುವ ಕಾರ್ಯವನ್ನು ಮಾಡಬೇಕು.
03287019a ಜಾನಾಮಿ ಪ್ರಣಿಧಾನಂ ತೇ ಬಾಲ್ಯಾತ್ಪ್ರಭೃತಿ ನಂದಿನಿ|
03287019c ಬ್ರಾಹ್ಮಣೇಷ್ವಿಹ ಸರ್ವೇಷು ಗುರುಬಂಧುಷು ಚೈವ ಹ||
03287020a ತಥಾ ಪ್ರೇಷ್ಯೇಷು ಸರ್ವೇಷು ಮಿತ್ರಸಂಬಂಧಿಮಾತೃಷು|
03287020c ಮಯಿ ಚೈವ ಯಥಾವತ್ತ್ವಂ ಸರ್ವಮಾದೃತ್ಯ ವರ್ತಸೇ||
ನಂದಿನೀ! ಬಾಲ್ಯದಿಂದ ನೀನು ಎಲ್ಲ ಪ್ರಾಣಿಗಳ, ಬ್ರಾಹ್ಮಣರ, ಮತ್ತು ಗುರುಬಂಧುಗಳ, ಹಾಗೆಯೇ ಸೇವಕರ, ಸರ್ವ ಮಿತ್ರಸಂಬಂಧಿಗಳಲ್ಲಿ, ತಾಯಂದಿರಲ್ಲಿ ಮತ್ತು ನನ್ನಲ್ಲಿ ಹೇಗೆ ಎಲ್ಲರನ್ನೂ ಆದರಿಸಿ ನಡೆದುಕೊಳ್ಳುತ್ತಿದ್ದೀಯೆ ಎಂದು ನನಗೆ ತಿಳಿದಿದೆ.
03287021a ನ ಹ್ಯತುಷ್ಟೋ ಜನೋಽಸ್ತೀಹ ಪುರೇ ಚಾಂತಃಪುರೇ ಚ ತೇ|
03287021c ಸಮ್ಯಗ್ವೃತ್ತ್ಯಾನವದ್ಯಾಂಗಿ ತವ ಭೃತ್ಯಜನೇಷ್ವಪಿ||
ಈ ಪುರದಲ್ಲಿ ಮತ್ತು ಅಂತಃಪುರದಲ್ಲಿ ನಿನ್ನಿಂದ ಸಂತುಷ್ಟರಾಗದೇ ಇರುವ ಯಾರೂ ಇಲ್ಲ. ಅನವದ್ಯಾಂಗೀ! ನೀನು ನಿನ್ನ ಸೇವಕ ಜನರಲ್ಲಿಯೂ ಕೂಡ ಚೆನ್ನಾಗಿ ವರ್ತಿಸುತ್ತಿದ್ದೀಯೆ.
03287022a ಸಂದೇಷ್ಟವ್ಯಾಂ ತು ಮನ್ಯೇ ತ್ವಾಂ ದ್ವಿಜಾತಿಂ ಕೋಪನಂ ಪ್ರತಿ|
03287022c ಪೃಥೇ ಬಾಲೇತಿ ಕೃತ್ವಾ ವೈ ಸುತಾ ಚಾಸಿ ಮಮೇತಿ ಚ||
ಆದುದರಿಂದ ಈ ಕುಪಿತ ದ್ವಿಜನನ್ನು ನಿನ್ನ ಕಾಳಜಿಯಲ್ಲಿ ಇಡಬೇಕೆಂದು ನನಗನ್ನಿಸುತ್ತದೆ. ಪೃಥಾ! ಬಾಲಕಿಯಾಗಿದ್ದಾಗಲೇ ನಿನ್ನನ್ನು ನನ್ನ ಮಗಳನ್ನಾಗಿ ಮಾಡಿಕೊಂಡಿದ್ದೆ.
03287023a ವೃಷ್ಣೀನಾಂ ತ್ವಂ ಕುಲೇ ಜಾತಾ ಶೂರಸ್ಯ ದಯಿತಾ ಸುತಾ|
03287023c ದತ್ತಾ ಪ್ರೀತಿಮತಾ ಮಹ್ಯಂ ಪಿತ್ರಾ ಬಾಲಾ ಪುರಾ ಸ್ವಯಂ||
ನೀನು ವೃಷ್ಣಿಗಳ ಕುಲದಲ್ಲಿ ಶೂರನ ಪ್ರೀತಿಯ ಮಗಳಾಗಿ ಜನಿಸಿದ್ದೆ. ಹಿಂದೆ ನಿನ್ನ ತಂದೆಯು ನಿನ್ನನ್ನು ನನಗೆ ಪ್ರೀತಿಯಿಂದ ಮಗಳಾಗಿ ಕೊಟ್ಟಿದ್ದನು.
03287024a ವಸುದೇವಸ್ಯ ಭಗಿನೀ ಸುತಾನಾಂ ಪ್ರವರಾ ಮಮ|
03287024c ಅಗ್ರ್ಯಮಗ್ರೇ ಪ್ರತಿಜ್ಞಾಯ ತೇನಾಸಿ ದುಹಿತಾ ಮಮ||
ವಸುದೇವನ ತಂಗಿಯಾದ ನೀನು ನನ್ನ ಮಕ್ಕಳಲ್ಲಿ ಹಿರಿಯವಳು. ಈಗ ನೀನು ನನ್ನ ಮಗಳು. ಏಕೆಂದರೆ ಅವನು ತನ್ನ ಹಿರಿಯ ಮಗಳನ್ನು ನನಗೆ ಕೊಡುತ್ತೇನೆಂದು ಪ್ರತಿಜ್ಞೆಮಾಡಿದ್ದನು.
03287025a ತಾದೃಶೇ ಹಿ ಕುಲೇ ಜಾತಾ ಕುಲೇ ಚೈವ ವಿವರ್ಧಿತಾ|
03287025c ಸುಖಾತ್ಸುಖಮನುಪ್ರಾಪ್ತಾ ಹ್ರದಾದ್ಧ್ರದಮಿವಾಗತಾ||
ಅಂಥಹ ಕುಲದಲ್ಲಿ ಹುಟ್ಟಿದ ನೀನು ಸುಖದಿಂದ ಸುಖವನ್ನು ಹೊಂದುತ್ತಾ ಒಂದು ಸರೋವರದಿಂದ ಮತ್ತೊಂದು ಸರೋವರಕ್ಕೆ ಹೋದ ಕಮಲದಂತೆ ಬೆಳೆಯುತ್ತಿದ್ದೀಯೆ.
03287026a ದೌಷ್ಕುಲೇಯಾ ವಿಶೇಷೇಣ ಕಥಂ ಚಿತ್ಪ್ರಗ್ರಹಂ ಗತಾಃ|
03287026c ಬಾಲಭಾವಾದ್ವಿಕುರ್ವಂತಿ ಪ್ರಾಯಶಃ ಪ್ರಮದಾಃ ಶುಭೇ||
ಶುಭೇ! ಕೆಟ್ಟ ಕುಲದಲ್ಲಿ ಹುಟ್ಟಿದವರು ಬಾಲ್ಯದಲ್ಲಿ ವಿಶೇಷವಾಗಿ ನಿಯಂತ್ರಣದಲ್ಲಿದ್ದರೂ ಬೆಳೆಯುತ್ತಿದ್ದಂತೆ ಹೇಗೋ ಕೆಟ್ಟುಹೋಗುತ್ತಾರೆ.
03287027a ಪೃಥೇ ರಾಜಕುಲೇ ಜನ್ಮ ರೂಪಂ ಚಾದ್ಭುತದರ್ಶನಂ|
03287027c ತೇನ ತೇನಾಸಿ ಸಂಪನ್ನಾ ಸಮುಪೇತಾ ಚ ಭಾಮಿನೀ||
ಪೃಥಾ! ಭಾಮಿನೀ! ಆದರೆ ರಾಜಕುಲದಲ್ಲಿ ಜನ್ಮ ಮತ್ತು ನೋಡಲು ಅದ್ಭುತ ರೂಪವು ಇವೆರಡೂ ನಿನ್ನದೇ ಆಗಿದ್ದು ಇವುಗಳಿಂದ ಸಂಪನ್ನಳಾಗಿದ್ದೀಯೆ.
03287028a ಸಾ ತ್ವಂ ದರ್ಪಂ ಪರಿತ್ಯಜ್ಯ ದಂಭಂ ಮಾನಂ ಚ ಭಾಮಿನಿ|
03287028c ಆರಾಧ್ಯ ವರದಂ ವಿಪ್ರಂ ಶ್ರೇಯಸಾ ಯೋಕ್ಷ್ಯಸೇ ಪೃಥೇ||
ಪೃಥಾ! ಭಾಮಿನೀ! ಆದುದರಿಂದ ನೀನು ದರ್ಪ, ದಂಭ ಮತ್ತು ಮಾನವನ್ನು ಪರಿತ್ಯಜಿಸಿ ಈ ವರದ ವಿಪ್ರನನ್ನು ಆರಾಧಿಸು. ಶ್ರೇಯಸ್ಸನ್ನು ಹೊಂದುತ್ತೀಯೆ.
03287029a ಏವಂ ಪ್ರಾಪ್ಸ್ಯಸಿ ಕಲ್ಯಾಣಿ ಕಲ್ಯಾಣಮನಘೇ ಧ್ರುವಂ|
03287029c ಕೋಪಿತೇ ತು ದ್ವಿಜಶ್ರೇಷ್ಠೇ ಕೃತ್ಸ್ನಂ ದಹ್ಯೇತ ಮೇ ಕುಲಂ||
ಕಲ್ಯಾಣೀ! ಅನಘೇ! ಈ ರೀತಿ ನೀನು ಕಲ್ಯಾಣವನ್ನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಮಗಳೇ! ನೀನು ಈ ದ್ವಿಜಶ್ರೇಷ್ಠನನ್ನು ಕುಪಿತನನ್ನಾಗಿ ಮಾಡಿದರೆ ನನ್ನ ಕುಲವನ್ನು ಸುಟ್ಟುಹಾಕುತ್ತೀಯೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಪೃಥೋಪದೇಶೇ ಸಪ್ತಶೀತ್ಯಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯ ಕಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಪೃಥೋಪದೇಶದಲ್ಲಿ ಇನ್ನೂರಾಎಂಭತ್ತೇಳನೆಯ ಅಧ್ಯಾಯವು.
[1] ಈ ಬ್ರಾಹ್ಮಣನು ದುರ್ವಾಸನೆಂದು ಆದಿ ಪರ್ವದ ಅಧ್ಯಾಯ ೧೦೪ರಲ್ಲಿದೆ.
[2] ವಾತಾಪಿಯು ಅಗಸ್ತ್ಯನಿಂದ ಹತನಾದ ಕಥೆಯು ಆರಣ್ಯಕ ಪರ್ವದ ಅಧ್ಯಾಯ ೯೭ರಲ್ಲಿ ಬಂದಿದೆ.