Aranyaka Parva: Chapter 228

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೨೮

ಗೋವುಗಳನ್ನು ಎಣಿಸಲು ಹೋಗುತ್ತೇವೆಂದು ದುರ್ಯೋಧನನು ಹೇಳಲು ಧೃತರಾಷ್ಟ್ರನು ಅಲ್ಲಿ ಹತ್ತಿರದಲ್ಲಿ ಪಾಂಡವರು ವಾಸಿಸುತ್ತಿರುವುದರಿಂದ ಬೇರೆ ಯಾರನ್ನಾದರೂ ಕಳುಹಿಸಲು ಸೂಚಿಸುವುದು (೧-೧೭). ಅಲ್ಲಿ ಅನಾರ್ಯ ಸಮಾಚಾರವು ನಡೆಯುವುದಿಲ್ಲ, ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೋ ಅಲ್ಲಿಗೆ ನಾವು ಹೋಗುವುದಿಲ್ಲವೆಂದು ಶಕುನಿಯು ಭರವಸೆಯಿತ್ತನಂತರ ಧೃತರಾಷ್ಟ್ರನು ಒಪ್ಪಿಕೊಳ್ಳುವುದು (೧೮-೨೨). ದುರ್ಯೋಧನನು ತನ್ನ ಆಪ್ತರು, ಪುರಜನರು ಮತ್ತು ಸೇನೆಯೊಡನೆ ದ್ವೈತವನ ಸರೋವರದತ್ತ ಪ್ರಯಾಣಿಸಿದುದು (೨೩-೨೯).

03228001 ವೈಶಂಪಾಯನ ಉವಾಚ|

03228001a ಧೃತರಾಷ್ಟ್ರಂ ತತಃ ಸರ್ವೇ ದದೃಶುರ್ಜನಮೇಜಯ|

03228001c ಪೃಷ್ಟ್ವಾ ಸುಖಮಥೋ ರಾಜ್ಞಃ ಪೃಷ್ಟ್ವಾ ರಾಜ್ಞಾ ಚ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ಜನಮೇಜಯ! ಆಗ ಅವರೆಲ್ಲರೂ ಧೃತರಾಷ್ಟ್ರನನ್ನು ಕಂಡರು ಮತ್ತು ರಾಜನ ಸೌಖ್ಯದ ಕುರಿತು ಕೇಳಿದರು. ರಾಜನೂ ಕೂಡ ಅವರಿಗೆ ಮರಳಿ ಕೇಳಿದನು.

03228002a ತತಸ್ತೈರ್ವಿಹಿತಃ ಪೂರ್ವಂ ಸಮಂಗೋ ನಾಮ ಬಲ್ಲವಃ|

03228002c ಸಮೀಪಸ್ಥಾಸ್ತದಾ ಗಾವೋ ಧೃತರಾಷ್ಟ್ರೇ ನ್ಯವೇದಯತ್||

ಆಗ ಅದಕ್ಕೂ ಮೊದಲೇ ತಿಳಿಸಿದ್ದ ಸಮಂಗ ಎಂಬ ಹೆಸರಿನ ಗೊಲ್ಲನು ಸಮೀಪದಲ್ಲಿರುವ ಗೋವುಗಳ ಕುರಿತು ಧೃತರಾಷ್ಟ್ರನಿಗೆ ನಿವೇದಿಸಿದನು.

03228003a ಅನಂತರಂ ಚ ರಾಧೇಯಃ ಶಕುನಿಶ್ಚ ವಿಶಾಂ ಪತೇ|

03228003c ಆಹತುಃ ಪಾರ್ಥಿವಶ್ರೇಷ್ಠಂ ಧೃತರಾಷ್ಟ್ರಂ ಜನಾಧಿಪಂ||

ವಿಶಾಂಪತೇ! ಅನಂತರ ರಾಧೇಯ ಮತ್ತು ಶಕುನಿಯರು ಜನಾಧಿಪ ಪಾರ್ಥಿವಶ್ರೇಷ್ಠ ಧೃತರಾಷ್ಟ್ರನಿಗೆ ಹೇಳಿದರು:

03228004a ರಮಣೀಯೇಷು ದೇಶೇಷು ಘೋಷಾಃ ಸಂಪ್ರತಿ ಕೌರವ|

03228004c ಸ್ಮಾರಣಾಸಮಯಃ ಪ್ರಾಪ್ತೋ ವತ್ಸಾನಾಮಪಿ ಚಾಂಕನಂ||

“ಕೌರವ! ಈ ಸಮಯದಲ್ಲಿ ಗೋಶಾಲೆಗಳಿದ್ದ ಪ್ರದೇಶವು ರಮಣೀಯವಾಗಿದೆ. ಕರುಗಳನ್ನು ಎಣಿಸುವ ಮತ್ತು ಬರೆಹಾಕುವ ಸಮಯವೂ ಪ್ರಾಪ್ತವಾಗಿದೆ.

03228005a ಮೃಗಯಾ ಚೋಚಿತಾ ರಾಜನ್ನಸ್ಮಿನ್ಕಾಲೇ ಸುತಸ್ಯ ತೇ|

03228005c ದುರ್ಯೋಧನಸ್ಯ ಗಮನಂ ತ್ವಮನುಜ್ಞಾತುಮರ್ಹಸಿ||

ರಾಜನ್! ನಿನ್ನ ಮಗನು ಬೇಟೆಗೆ ಹೋಗುವುದಕ್ಕೂ ಇದು ಸರಿಯಾದ ಸಮಯ. ದುರ್ಯೋಧನನಿಗೆ ಹೋಗುವುದಕ್ಕೆ ಅನುಮತಿಯನ್ನು ನೀಡಬೇಕು.”

03228006 ಧೃತರಾಷ್ಟ್ರ ಉವಾಚ|

03228006a ಮೃಗಯಾ ಶೋಭನಾ ತಾತ ಗವಾಂ ಚ ಸಮವೇಕ್ಷಣಂ|

03228006c ವಿಶ್ರಂಭಸ್ತು ನ ಗಂತವ್ಯೋ ಬಲ್ಲವಾನಾಮಿತಿ ಸ್ಮರೇ||

ಧೃತರಾಷ್ಟ್ರನು ಹೇಳಿದನು: “ಮಗೂ! ಬೇಟೆಯಾಡುವುದೂ ಮತ್ತು ಗೋವುಗಳನ್ನು ನೋಡಿಬರುವುದೂ ಒಳ್ಳೆಯದು. ಗೋವಳರನ್ನು ನಂಬಬಾರದು ಎಂದೂ ನನ್ನ ನೆನಪಿನಲ್ಲಿದೆ.

03228007a ತೇ ತು ತತ್ರ ನರವ್ಯಾಘ್ರಾಃ ಸಮೀಪ ಇತಿ ನಃ ಶ್ರುತಂ|

03228007c ಅತೋ ನಾಭ್ಯನುಜಾನಾಮಿ ಗಮನಂ ತತ್ರ ವಃ ಸ್ವಯಂ||

ಆದರೆ ಆ ನರವ್ಯಾಘ್ರರೂ ಅಲ್ಲಿಯೇ ಸಮೀಪದಲ್ಲಿದ್ದಾರೆಂದು ಕೇಳಿದ್ದೇನೆ. ಆದುದರಿಂದ ನೀವು ಸ್ವಯಂ ಅಲ್ಲಿಗೆ ಹೋಗುವುದನ್ನು ಒಪ್ಪುವುದಿಲ್ಲ.

03228008a ಚದ್ಮನಾ ನಿರ್ಜಿತಾಸ್ತೇ ಹಿ ಕರ್ಶಿತಾಶ್ಚ ಮಹಾವನೇ|

03228008c ತಪೋನಿತ್ಯಾಶ್ಚ ರಾಧೇಯ ಸಮರ್ಥಾಶ್ಚ ಮಹಾರಥಾಃ||

ರಾಧೇಯ! ಸಮರ್ಥರೂ ಮಹಾರಥಿಗಳೂ ಆದ ಅವರು ಮೋಸದಿಂದ ಸೋಲಿಸಲ್ಪಟ್ಟು ಕಷ್ಟದಿಂದ ಅಲ್ಲಿ ತಪೋನಿರತರಾಗಿದ್ದಾರೆ.

03228009a ಧರ್ಮರಾಜೋ ನ ಸಂಕ್ರುಧ್ಯೇದ್ಭೀಮಸೇನಸ್ತ್ವಮರ್ಷಣಃ|

03228009c ಯಜ್ಞಸೇನಸ್ಯ ದುಹಿತಾ ತೇಜ ಏವ ತು ಕೇವಲಂ||

ಧರ್ಮರಾಜನು ಸಿಟ್ಟಾಗುವುದಿಲ್ಲ. ಆದರೆ ಭೀಮಸೇನನಾದರೋ ಕುಪಿತನಾಗುವನು ಮತ್ತು ಯಜ್ಞಸೇನನ ಮಗಳು ಕೇವಲ ಬೆಂಕಿಯಂತೆ!

03228010a ಯೂಯಂ ಚಾಪ್ಯಪರಾಧ್ಯೇಯುರ್ದರ್ಪಮೋಹಸಮನ್ವಿತಾಃ|

03228010c ತತೋ ವಿನಿರ್ದಹೇಯುಸ್ತೇ ತಪಸಾ ಹಿ ಸಮನ್ವಿತಾಃ||

ದರ್ಪಮೋಹಸಮನ್ವಿತರಾದ ನೀವು ಅಪರಾಧವನ್ನೆಸಗುವುದು ಖಂಡಿತ. ಆಗ ತಪಸ್ಸಿನಿಂದ ಸಮನ್ವಿತರಾದ ಅವರು ನಿಮ್ಮನ್ನು ಸುಟ್ಟುಬಿಡುತ್ತಾರೆ.

03228011a ಅಥ ವಾ ಸಾಯುಧಾ ವೀರಾ ಮನ್ಯುನಾಭಿಪರಿಪ್ಲುತಾಃ|

03228011c ಸಹಿತಾ ಬದ್ಧನಿಸ್ತ್ರಿಂಶಾ ದಹೇಯುಃ ಶಸ್ತ್ರತೇಜಸಾ||

ಅಥವಾ, ಆ ವೀರರು ಸಿಟ್ಟಿನಿಂದ ತುಂಬಿದವರಾಗಿ, ಆಯುಧಗಳಿಂದ, ಖಡ್ಗಗಳ ಸಹಿತ ತಮ್ಮ ಶಸ್ತ್ರಗಳ ತೇಜಸ್ಸಿನಿಂದ ನಿಮ್ಮನ್ನು ಸುಡುತ್ತಾರೆ.

03228012a ಅಥ ಯೂಯಂ ಬಹುತ್ವಾತ್ತಾನಾರಭಧ್ವಂ ಕಥಂ ಚನ|

03228012c ಅನಾರ್ಯಂ ಪರಮಂ ತತ್ಸ್ಯಾದಶಕ್ಯಂ ತಚ್ಚ ಮೇ ಮತಂ||

ಅಥವಾ ಒಂದುವೇಳೆ ಬಹುಸಂಖ್ಯೆಯಲ್ಲಿರುವ ನೀವು ಅವರನ್ನು ಕೊಂದರೆ ಅದು ಪರಮ ಅನಾರ್ಯವೆನಿಸಿಕೊಳ್ಳುತ್ತದೆ. ಅದಕ್ಕೆ ನೀವು ಅಶಕ್ತರೆಂದು ನನಗನ್ನಿಸುತ್ತದೆ.

03228013a ಉಷಿತೋ ಹಿ ಮಹಾಬಾಹುರಿಂದ್ರಲೋಕೇ ಧನಂಜಯಃ|

03228013c ದಿವ್ಯಾನ್ಯಸ್ತ್ರಾಣ್ಯವಾಪ್ಯಾಥ ತತಃ ಪ್ರತ್ಯಾಗತೋ ವನಂ||

ಏಕೆಂದರೆ ಮಹಾಬಾಹು ಧನಂಜಯನು ಇಂದ್ರಲೋಕದಲ್ಲಿ ಉಳಿದುಕೊಂಡು ದಿವ್ಯಾಸ್ತ್ರಗಳನ್ನು ಪಡೆದುಕೊಂಡು ವನಕ್ಕೆ ಮರಳಿ ಬಂದಿದ್ದಾನೆ.

03228014a ಅಕೃತಾಸ್ತ್ರೇಣ ಪೃಥಿವೀ ಜಿತಾ ಬೀಭತ್ಸುನಾ ಪುರಾ|

03228014c ಕಿಂ ಪುನಃ ಸ ಕೃತಾಸ್ತ್ರೋಽದ್ಯ ನ ಹನ್ಯಾದ್ವೋ ಮಹಾರಥಃ||

ಹಿಂದೆ ಈ ಅಸ್ತ್ರಗಳಿಲ್ಲದೆಯೇ ಬೀಭತ್ಸುವು ಪೃಥ್ವಿಯನ್ನು ಗೆದ್ದಿದ್ದನು. ಈಗ ಕೃತಾಸ್ತ್ರನಾದ ಆ ಮಹಾರಥಿಯು ಪುನಃ ನಿಮ್ಮನ್ನು ಕೊಲ್ಲದೆಯೇ ಇರುತ್ತಾನೆಯೇ?

03228015a ಅಥ ವಾ ಮದ್ವಚಃ ಶ್ರುತ್ವಾ ತತ್ರ ಯತ್ತಾ ಭವಿಷ್ಯಥ|

03228015c ಉದ್ವಿಗ್ನವಾಸೋ ವಿಶ್ರಂಭಾದ್ದುಃಖಂ ತತ್ರ ಭವಿಷ್ಯತಿ||

ಆಥವಾ ನನ್ನ ಮಾತನ್ನು ಕೇಳಿ ಅಲ್ಲಿ ಜಾಗರೂಕರಾಗಿದ್ದರೆ ನೀವು ಅವರ ಮೇಲಿನ ಶಂಕೆಯಿಂದ ಉದ್ವಿಗ್ನರಾಗಿ ವಾಸಿಸಬೇಕಾಗುತ್ತದೆ.

03228016a ಅಥ ವಾ ಸೈನಿಕಾಃ ಕೇ ಚಿದಪಕುರ್ಯುರ್ಯುಧಿಷ್ಠಿರೇ|

03228016c ತದಬುದ್ಧಿಕೃತಂ ಕರ್ಮ ದೋಷಮುತ್ಪಾದಯೇಚ್ಚ ವಃ||

ಅಥವಾ ಕೆಲವು ಸೈನಿಕರು ಯುಧಿಷ್ಠಿರನಿಗೆ ಅಪಕಾರವನ್ನೆಸಗಿದರೆ, ತಿಳಿಯದೇ ಮಾಡಿದ್ದರೂ, ಆ ಕರ್ಮದ ದೋಷವು ನಿನ್ನ ಮೇಲೆ ಬರುತ್ತದೆ.

03228017a ತಸ್ಮಾದ್ಗಚ್ಚಂತು ಪುರುಷಾಃ ಸ್ಮಾರಣಾಯಾಪ್ತಕಾರಿಣಃ|

03228017c ನ ಸ್ವಯಂ ತತ್ರ ಗಮನಂ ರೋಚಯೇ ತವ ಭಾರತ||

ಭಾರತ! ಆದುದರಿಂದ ಎಣಿಸಲು ಆಪ್ತಕಾರಿಣಿಗಳು ಯಾರಾದರೂ ಹೋಗಲಿ! ಸ್ವಯಂ ನೀನು ಅಲ್ಲಿಗೆ ಹೋಗುವುದು ನನಗೆ ಇಷ್ಟವಾಗುವುದಿಲ್ಲ.”

03228018 ಶಕುನಿರುವಾಚ|

03228018a ಧರ್ಮಜ್ಞಃ ಪಾಂಡವೋ ಜ್ಯೇಷ್ಠಃ ಪ್ರತಿಜ್ಞಾತಂ ಚ ಸಂಸದಿ|

03228018c ತೇನ ದ್ವಾದಶ ವರ್ಷಾಣಿ ವಸ್ತವ್ಯಾನೀತಿ ಭಾರತ||

ಶಕುನಿಯು ಹೇಳಿದನು: “ಭಾರತ! ಜ್ಯೇಷ್ಠ ಪಾಂಡವನು ಧರ್ಮಜ್ಞ ಮತ್ತು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸುತ್ತೇನೆಂದು ಮಾಡಿದ ಪ್ರತಿಜ್ಞೆಯನ್ನು ಮರೆಯುವುದಿಲ್ಲ.

03228019a ಅನುವೃತ್ತಾಶ್ಚ ತೇ ಸರ್ವೇ ಪಾಂಡವಾ ಧರ್ಮಚಾರಿಣಃ|

03228019c ಯುಧಿಷ್ಠಿರಶ್ಚ ಕೌಂತೇಯೋ ನ ನಃ ಕೋಪಂ ಕರಿಷ್ಯತಿ||

ಎಲ್ಲ ಪಾಂಡವರೂ ಆ ಧರ್ಮಚಾರಿಣಿಯನ್ನು ಅನುಸರಿಸುತ್ತಾರೆ. ಕೌಂತೇಯ ಯುಧಿಷ್ಠಿರನು ನಮ್ಮ ಮೇಲೆ ಕೋಪ ಮಾಡುವುದಿಲ್ಲ.

03228020a ಮೃಗಯಾಂ ಚೈವ ನೋ ಗಂತುಮಿಚ್ಚಾ ಸಂವರ್ಧತೇ ಭೃಶಂ|

03228020c ಸ್ಮಾರಣಂ ಚ ಚಿಕೀರ್ಷಾಮೋ ನ ತು ಪಾಂಡವದರ್ಶನಂ||

ಮತ್ತು ಬೇಟೆಗೆ ಹೋಗಬೇಕೆನ್ನುವ ಬಯಕೆಯೂ ತುಂಬಾ ಹೆಚ್ಚಾಗಿದೆ. ಗೋವುಗಳನ್ನು ಎಣಿಸಲು ಬಯಸುತ್ತೇವೆಯೇ ಹೊರತು ಪಾಂಡವರನ್ನು ಕಾಣಬೇಕೆಂದಲ್ಲ.

03228021a ನ ಚಾನಾರ್ಯಸಮಾಚಾರಃ ಕಶ್ಚಿತ್ತತ್ರ ಭವಿಷ್ಯತಿ|

03228021c ನ ಚ ತತ್ರ ಗಮಿಷ್ಯಾಮೋ ಯತ್ರ ತೇಷಾಂ ಪ್ರತಿಶ್ರಯಃ||

ಅಲ್ಲಿ ಯಾವುದೇ ರೀತಿಯ ಅನಾರ್ಯ ಸಮಾಚಾರವು ನಡೆಯುವುದಿಲ್ಲ. ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೋ ಅಲ್ಲಿಗೆ ನಾವು ಹೋಗುವುದಿಲ್ಲ.””

03228022 ವೈಶಂಪಾಯನ ಉವಾಚ|

03228022a ಏವಮುಕ್ತಃ ಶಕುನಿನಾ ಧೃತರಾಷ್ಟ್ರೋ ಜನೇಶ್ವರಃ|

03228022c ದುರ್ಯೋಧನಂ ಸಹಾಮಾತ್ಯಮನುಜಜ್ಞೇ ನ ಕಾಮತಃ||

ವೈಶಂಪಾಯನನು ಹೇಳಿದನು: “ಶಕುನಿಯ ಈ ಮಾತಿಗೆ ಜನೇಶ್ವರ ಧೃತರಾಷ್ಟ್ರನು ಇಷ್ವವಿಲ್ಲದೆಯೇ ದುರ್ಯೋಧನ ಮತ್ತು ಅವನ ಅಮಾತ್ಯರಿಗೆ ಅನುಜ್ಞೆಯನ್ನಿತ್ತನು.

03228023a ಅನುಜ್ಞಾತಸ್ತು ಗಾಂಧಾರಿಃ ಕರ್ಣೇನ ಸಹಿತಸ್ತದಾ|

03228023c ನಿರ್ಯಯೌ ಭರತಶ್ರೇಷ್ಠೋ ಬಲೇನ ಮಹತಾ ವೃತಃ||

03228024a ದುಃಶಾಸನೇನ ಚ ತಥಾ ಸೌಬಲೇನ ಚ ದೇವಿನಾ|

03228024c ಸಂವೃತೋ ಭ್ರಾತೃಭಿಶ್ಚಾನ್ಯೈಃ ಸ್ತ್ರೀಭಿಶ್ಚಾಪಿ ಸಹಸ್ರಶಃ||

ಅಪ್ಪಣೆಯನ್ನು ಪಡೆದು ಗಾಂಧಾರಿಯ ಮಗ ಭರತಶ್ರೇಷ್ಠನು ಕರ್ಣನೊಂದಿಗೆ ಮಹಾಸೇನೆಯಿಂದ ಆವೃತನಾಗಿ, ದುಃಶಾಸನ, ಜೂಜುಗಾರ ಸೌಬಲರೊಂದಿಗೆ, ಇತರ ಸಹೋದರರು ಮತ್ತು ಸಹಸ್ರಾರು ಸ್ತ್ರೀಯರೊಂದಿಗೆ ಹೊರಟನು.

03228025a ತಂ ನಿರ್ಯಾಂತಂ ಮಹಾಬಾಹುಂ ದ್ರಷ್ಟುಂ ದ್ವೈತವನಂ ಸರಃ|

03228025c ಪೌರಾಶ್ಚಾನುಯಯುಃ ಸರ್ವೇ ಸಹದಾರಾ ವನಂ ಚ ತತ್||

ಆ ಮಹಾಬಾಹುವು ದ್ವೈತವನದ ಸರೋವರವನ್ನು ನೋಡಲು ಹೊರಟಾಗ ವನಕ್ಕೆ ಅವನನ್ನು ಅನುಸರಿಸಿ ಎಲ್ಲ ಪೌರರೂ ಪತ್ನಿಯರನ್ನು ಕೂಡಿಕೊಂಡು ಹೊರಟರು.

03228026a ಅಷ್ಟೌ ರಥಸಹಸ್ರಾಣಿ ತ್ರೀಣಿ ನಾಗಾಯುತಾನಿ ಚ|

03228026c ಪತ್ತಯೋ ಬಹುಸಾಹಸ್ರಾ ಹಯಾಶ್ಚ ನವತಿಃ ಶತಾಃ||

03228027a ಶಕಟಾಪಣವೇಶ್ಯಾಶ್ಚ ವಣಿಜೋ ಬಂದಿನಸ್ತಥಾ|

03228027c ನರಾಶ್ಚ ಮೃಗಯಾಶೀಲಾಃ ಶತಶೋಽಥ ಸಹಸ್ರಶಃ||

ಎಂಟು ಸಾವಿರ ರಥಗಳು, ಮೂವತ್ತು ಸಾವಿರ ಆನೆಗಳು, ಹಲವಾರು ಸಾವಿರ ಪಾದಾತಿಗಳು, ಒಂಭೈನೂರು ಕುದುರೆಗಳು, ಚಕ್ಕಡಿಗಳು, ಮಾರಾಟದ ಗಾಡಿಗಳು, ವೇಶ್ಯೆಯರು, ವರ್ತಕರು, ಬಂದಿಗಳು, ಮತ್ತು ನೂರಾರು ಸಹಸ್ರಾರು ಮೃಗಯಾಶೀಲ ಜನರು ಸೇರಿದ್ದರು.

03228028a ತತಃ ಪ್ರಯಾಣೇ ನೃಪತೇಃ ಸುಮಹಾನಭವತ್ಸ್ವನಃ|

03228028c ಪ್ರಾವೃಷೀವ ಮಹಾವಾಯೋರುದ್ಧತಸ್ಯ ವಿಶಾಂ ಪತೇ||

ವಿಶಾಂಪತೇ! ಆ ನೃಪತಿಯ ಪ್ರಯಾಣವು ಮಳೆಗಾಲದ ಭಿರುಗಾಳಿಯಂತೆ ಮಹಾಶಬ್ಧವನ್ನುಂಟು ಮಾಡಿತು.

03228029a ಗವ್ಯೂತಿಮಾತ್ರೇ ನ್ಯವಸದ್ರಾಜಾ ದುರ್ಯೋಧನಸ್ತದಾ|

03228029c ಪ್ರಯಾತೋ ವಾಹನೈಃ ಸರ್ವೈಸ್ತತೋ ದ್ವೈತವನಂ ಸರಃ||

ದ್ವೈತವನ ಸರೋವರಕ್ಕೆ ಎರಡು ಕ್ರೋಶಮಾತ್ರದ ದೂರದಲ್ಲಿ ರಾಜಾ ದುರ್ಯೋಧನನು ವಾಹನಗಳೊಂದಿಗೆ ಬೀಡು ಬಿಟ್ಟನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪ್ರಸ್ಥಾನೇ ಅಷ್ಟವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪ್ರಸ್ಥಾನದಲ್ಲಿ ಇನ್ನೂರಾಇಪ್ಪತ್ತೆಂಟನೆಯ ಅಧ್ಯಾಯವು.

Related image

Comments are closed.