Adi Parva: Chapter 32

ಆದಿ ಪರ್ವ: ಆಸ್ತೀಕ ಪರ್ವ

೩೨

ಶೇಷ

ಶೇಷನು ತಾಯಿಯನ್ನು ತೊರೆದು ತಪಸ್ಸು ಮಾಡಿದುದು (೧-೫). ಬ್ರಹ್ಮನಿಂದ ವರದಾನ (೬-೨೫).

01032001 ಶೌನಕ ಉವಾಚ|

01032001a ಜಾತಾ ವೈ ಭುಜಗಾಸ್ತಾತ ವೀರ್ಯವಂತೋ ದುರಾಸದಾಃ|

01032001c ಶಾಪಂ ತಂ ತ್ವಥ ವಿಜ್ಞಾಯ ಕೃತವಂತೋ ನು ಕಿಂ ಪರಂ||

ಶೌನಕನು ಹೇಳಿದನು: “ವೀರ್ಯವಂತ ದುರಾಸದ ನಾಗಗಳ ಕುರಿತು ತಿಳಿದುಕೊಂಡೆವು. ಶಾಪವನ್ನು ತಿಳಿದ ನಂತರ ಅವರು ಏನು ಮಾಡಿದರು?”

01032002 ಸೂತ ಉವಾಚ|

01032002a ತೇಷಾಂ ತು ಭಗವಾನ್ ಶೇಷಸ್ತ್ಯಕ್ತ್ವಾ ಕದ್ರೂಂ ಮಹಾಯಶಾಃ|

01032002c ತಪೋ ವಿಪುಲಮಾತಸ್ಥೇ ವಾಯುಭಕ್ಷೋ ಯತವ್ರತಃ||

ಸೂತನು ಹೇಳಿದನು: “ಮಹಾಯಶ ಭಗವಾನ್ ಶೇಷನು ಕದ್ರುವನ್ನು ತೊರೆದು ಯತವ್ರತನಾಗಿ, ಗಾಳಿಯನ್ನು ಮಾತ್ರ ಸೇವಿಸುತ್ತಾ ವಿಪುಲ ತಪಸ್ಸನ್ನು ಕೈಗೊಂಡನು.

01032003a ಗಂಧಮಾದನಮಾಸಾದ್ಯ ಬದರ್ಯಾಂ ಚ ತಪೋರತಃ|

01032003c ಗೋಕರ್ಣೇ ಪುಷ್ಕರಾರಣ್ಯೇ ತಥಾ ಹಿಮವತಸ್ತಟೇ||

ಗಂಧಮಾದನ, ಬದರಿ, ಗೋಕರ್ಣ, ಮತ್ತು ಪುಷ್ಕರಗಳ ಅರಣ್ಯಗಳಲ್ಲಿ ಮತ್ತು ಹಿಮವತ್ ಪರ್ವತದಲ್ಲಿ ತಪಸ್ಸು ಮಾಡಿದನು.

01032004a ತೇಷು ತೇಷು ಚ ಪುಣ್ಯೇಷು ತೀರ್ಥೇಷ್ವಾಯತನೇಷು ಚ|

01032004c ಏಕಾಂತಶೀಲೀ ನಿಯತಃ ಸತತಂ ವಿಜಿತೇಂದ್ರಿಯಃ||

ಈ ಎಲ್ಲ ಪುಣ್ಯ ತೀರ್ಥ-ಆಯತನಗಳಲ್ಲಿ ಏಕಾಂತಶೀಲನೂ, ನಿಯತವ್ರತನೂ, ಸತತ ಜಿತೇಂದ್ರಿಯನೂ ಆಗಿದ್ದನು.

01032005a ತಪ್ಯಮಾನಂ ತಪೋ ಘೋರಂ ತಂ ದದರ್ಶ ಪಿತಾಮಹಃ|

01032005c ಪರಿಶುಷ್ಕಮಾಂಸತ್ವಕ್ಸ್ನಾಯುಂ ಜಟಾಚೀರಧರಂ ಪ್ರಭುಂ||

ಜಟೆ ಕಟ್ಟಿ ಹರುಕು ಬಟ್ಟೆಯನ್ನು ಧರಿಸಿ, ಚರ್ಮ-ಮಾಂಸಗಳು ಒಣಗಿಹೋಗಿ, ಘೋರ ತಪಸ್ಸನ್ನು ತಪಿಸುತ್ತಿರುವ ಆ ಪ್ರಭುವನ್ನು ಪಿತಾಮಹನು ನೋಡಿದನು.

01032006a ತಮಬ್ರವೀತ್ಸತ್ಯಧೃತಿಂ ತಪ್ಯಮಾನಂ ಪಿತಾಮಹಃ|

01032006c ಕಿಮಿದಂ ಕುರುಷೇ ಶೇಷ ಪ್ರಜಾನಾಂ ಸ್ವಸ್ತಿ ವೈ ಕುರು||

ತಪಿಸುತ್ತಿರುವ ಸತ್ಯಧೃತಿಗೆ ಪಿತಾಮಹನು ಹೇಳಿದನು: “ಶೇಷ! ಇದೇನು ಮಾಡುತ್ತಿದ್ದೀಯೆ? ಲೋಕಕ್ಕೆ ಒಳಿತನ್ನು ಮಾಡು.

01032007a ತ್ವಂ ಹಿ ತೀವ್ರೇಣ ತಪಸಾ ಪ್ರಜಾಸ್ತಾಪಯಸೇಽನಘ|

01032007c ಬ್ರೂಹಿ ಕಾಮಂ ಚ ಮೇ ಶೇಷ ಯತ್ತೇ ಹೃದಿ ಚಿರಂ ಸ್ಥಿತಂ||

ಅನಘ! ನಿನ್ನ ಈ ತೀವ್ರ ತಪಸ್ಸಿನಿಂದ ಲೋಕಗಳು ಸುಡುತ್ತಿವೆ. ಶೇಷ! ನಿನ್ನ ಹೃದಯದಲ್ಲಿರುವ ಬಯಕೆಯನ್ನು ನನಗೆ ಹೇಳು.”

01032008 ಶೇಷ ಉವಾಚ|

01032008a ಸೋದರ್ಯಾ ಮಮ ಸರ್ವೇ ಹಿ ಭ್ರಾತರೋ ಮಂದಚೇತಸಃ|

01032008c ಸಹ ತೈರ್ನೋತ್ಸಹೇ ವಸ್ತುಂ ತದ್ಭವಾನನುಮನ್ಯತಾಂ||

ಶೇಷನು ಹೇಳಿದನು: “ನನ್ನ ಸಹೋದರರೆಲ್ಲರೂ ಮಂದಚೇತಸರು. ನನಗೆ ಅವರೊಡನೆ ವಾಸಿಸುವುದು ಬೇಡ. ಭಗವನ್! ಇದನ್ನೇ ನನಗೆ ಕರುಣಿಸು.

01032009a ಅಭ್ಯಸೂಯಂತಿ ಸತತಂ ಪರಸ್ಪರಮಮಿತ್ರವತ್|

01032009c ತತೋಽಹಂ ತಪ ಆತಿಷ್ಠೇ ನೈತಾನ್ಪಶ್ಯೇಯಮಿತ್ಯುತ||

ಅವರು ಪರಸ್ಪರರಲ್ಲಿ ಸದಾ ಅಸೂಯೆ ಮತ್ತು ಶತ್ರುತ್ವದಲ್ಲಿಯೇ ನಿರತರಾಗಿದ್ದಾರೆ. ಆದುದರಿಂದಲೇ ನಾನು ತಪಸ್ಸನ್ನು ಕೈಗೊಂಡೆನು. ಅವರನ್ನು ನೋಡುವುದೂ ಬೇಡವಾಗಿದೆ.

01032010a ನ ಮರ್ಷಯಂತಿ ಸತತಂ ವಿನತಾಂ ಸಸುತಾಂ ಚ ತೇ|

01032010c ಅಸ್ಮಾಕಂ ಚಾಪರೋ ಭ್ರಾತಾ ವೈನತೇಯಃ ಪಿತಾಮಹ||

ಪಿತಾಮಹ! ವಿನತೆ ಮತ್ತು ಅವಳ ಮಗ, ನಮ್ಮ ತಮ್ಮ, ವೈನತೇಯರಿಗೆ ಅವರು ಸದಾ ಕಷ್ಟಗಳನ್ನು ಕೊಡುತ್ತಿದ್ದಾರೆ.

01032011a ತಂ ಚ ದ್ವಿಷಂತಿ ತೇಽತ್ಯರ್ಥಂ ಸ ಚಾಪಿ ಸುಮಹಾಬಲಃ|

01032011c ವರಪ್ರದಾನಾತ್ಸ ಪಿತುಃ ಕಶ್ಯಪಸ್ಯ ಮಹಾತ್ಮನಃ||

ತಂದೆ ಮಹಾತ್ಮ ಕಶ್ಯಪನ ವರದಾನದಿಂದ ಮಹಾಬಲನಾದ ಅವನನ್ನು ದ್ವೇಷಿಸುತ್ತಾ ಬಂದಿದ್ದಾರೆ.

01032012a ಸೋಽಹಂ ತಪಃ ಸಮಾಸ್ಥಾಯ ಮೋಕ್ಷ್ಯಾಮೀದಂ ಕಲೇವರಂ|

01032012c ಕಥಂ ಮೇ ಪ್ರೇತ್ಯಭಾವೇಽಪಿ ನ ತೈಃ ಸ್ಯಾತ್ಸಹ ಸಂಗಮಃ||

ದೇಹದಿಂದ ಮುಕ್ತಿಯನ್ನು ಪಡೆಯಲೋಸುಗವೇ ನಾನು ಈ ತಪಸ್ಸನ್ನು ಮಾಡುತ್ತಿರುವೆನು. ಯಾವ ಕಾರಣದಿಂದಲೂ ನಾನು ಅವರೊಂದಿಗೆ ಜೀವಿಸಲು ಬಯಸುವುದಿಲ್ಲ.”

01032013 ಬ್ರಹ್ಮೋವಾಚ|

01032013a ಜಾನಾಮಿ ಶೇಷ ಸರ್ವೇಷಾಂ ಭ್ರಾತೄಣಾಂ ತೇ ವಿಚೇಷ್ಟಿತಂ|

01032013c ಮಾತುಶ್ಚಾಪ್ಯಪರಾಧಾದ್ವೈ ಭ್ರಾತೄಣಾಂ ತೇ ಮಹದ್ಭಯಂ||

ಬ್ರಹ್ಮನು ಹೇಳಿದನು: “ಶೇಷ! ನಿನ್ನ ಸಹೋದರರ ಕುರಿತು ಎಲ್ಲವನ್ನೂ ನಾನು ತಿಳಿದಿದ್ದೇನೆ. ಅಪರಾಧಗೈದು ತಾಯಿಯಿಂದ ಪಡೆದ ಶಾಪದಿಂದ ನಿನ್ನ ಸಹೋದರರಲ್ಲಿ ಮಹಾಭಯವಿದೆ.

01032014a ಕೃತೋಽತ್ರ ಪರಿಹಾರಶ್ಚ ಪೂರ್ವಮೇವ ಭುಜಂಗಮ|

01032014c ಭ್ರಾತೄಣಾಂ ತವ ಸರ್ವೇಷಾಂ ನ ಶೋಕಂ ಕರ್ತುಮರ್ಹಸಿ||

ಭುಜಂಗಮ! ಪೂರ್ವದಲ್ಲಿಯೇ ನಾನು ಇದಕ್ಕೆ ಪರಿಹಾರವನ್ನು ಮಾಡಿದ್ದೇನೆ. ನಿನ್ನ ಸಹೋದರರೆಲ್ಲರ ಸಲುವಾಗಿ ನೀನು ಶೋಕಿಸ ಬೇಡ.

01032015a ವೃಣೀಷ್ವ ಚ ವರಂ ಮತ್ತಃ ಶೇಷ ಯತ್ತೇಽಭಿಕಾಂಕ್ಷಿತಂ|

01032015c ದಿತ್ಸಾಮಿ ಹಿ ವರಂ ತೇಽದ್ಯ ಪ್ರೀತಿರ್ಮೇ ಪರಮಾ ತ್ವಯಿ||

ಶೇಷ! ನಿನಗಿಷ್ಟವಾದ ಯಾವ ವರವನ್ನಾದರೂ ಕೇಳು. ನಿನ್ನಿಂದ ಪರಮ ಪ್ರೀತನಾದ ನಾನು ಇಂದು ನಿನಗೆ ವರವನ್ನು ಕೊಡುತ್ತೇನೆ.

01032016a ದಿಷ್ಟ್ಯಾ ಚ ಬುದ್ಧಿರ್ಧರ್ಮೇ ತೇ ನಿವಿಷ್ಟಾ ಪನ್ನಗೋತ್ತಮ|

01032016c ಅತೋ ಭೂಯಶ್ಚ ತೇ ಬುದ್ಧಿರ್ಧರ್ಮೇ ಭವತು ಸುಸ್ಥಿರಾ||

ಪನ್ನಗೋತ್ತಮ! ನಿನ್ನ ಬುದ್ಧಿಯು ಧರ್ಮದಲ್ಲಿ ನಿರತವಾಗಿರುವುದನ್ನು ಗಮನಿಸಿದ್ದೇನೆ. ನಿನ್ನ ಬುದ್ಧಿಯು ಧರ್ಮದಲ್ಲಿ ಇನ್ನೂ ಸುಸ್ಥಿರವಾಗಿರಲಿ.”

01032017 ಶೇಷ ಉವಾಚ|

01032017a ಏಷ ಏವ ವರೋ ಮೇಽದ್ಯ ಕಾಂಕ್ಷಿತಃ ಪ್ರಪಿತಾಮಹ|

01032017c ಧರ್ಮೇ ಮೇ ರಮತಾಂ ಬುದ್ಧಿಃ ಶಮೇ ತಪಸಿ ಚೇಶ್ವರ||

ಶೇಷನು ಹೇಳಿದನು: “ಪ್ರಪಿತಾಮಹ! ಈಶ್ವರ, ಧರ್ಮ ಮತ್ತು ತಪಸ್ಸಿನಲ್ಲಿ ನನ್ನ ಬುದ್ಧಿಯು ರಮಿಸುತ್ತಿರಲಿ. ಇದೇ ನನ್ನ ಬಯಕೆಯ ವರ.”

01032018 ಬ್ರಹ್ಮೋವಾಚ|

01032018a ಪ್ರೀತೋಽಸ್ಮ್ಯನೇನ ತೇ ಶೇಷ ದಮೇನ ಪ್ರಶಮೇನ ಚ|

01032018c ತ್ವಯಾ ತ್ವಿದಂ ವಚಃ ಕಾರ್ಯಂ ಮನ್ನಿಯೋಗಾತ್ಪ್ರಜಾಹಿತಂ||

ಬ್ರಹ್ಮನು ಹೇಳಿದನು: “ಶೇಷ! ನಿನ್ನ ಈ ದಮ ಮತ್ತು ಪ್ರಶಮನಗಳಿಂದ ಪ್ರೀತನಾಗಿದ್ದೇನೆ. ಪ್ರಜಾಹಿತಕ್ಕೋಸ್ಕರ ನನ್ನ ನಿಯೋಗದಂತೆ ನಾನು ಹೇಳುವ ಈ ಕಾರ್ಯವೂ ನಿನ್ನಿಂದ ಆಗಲಿ.

01032019a ಇಮಾಂ ಮಹೀಂ ಶೈಲವನೋಪಪನ್ನಾಂ

        ಸಸಾಗರಾಂ ಸಾಕರಪತ್ತನಾಂ ಚ|

01032019c ತ್ವಂ ಶೇಷ ಸಮ್ಯಕ್ಚಲಿತಾಂ ಯಥಾವತ್

        ಸಂಗೃಹ್ಯ ತಿಷ್ಠಸ್ವ ಯಥಾಚಲಾ ಸ್ಯಾತ್||

ಶೇಷ! ಪರ್ವತ, ಕಣಿವೆ, ಸಾಗರ, ಪಟ್ಟಣಗಳನ್ನು ಹೊತ್ತು ಓಲಾಡುತ್ತಿರುವ ಈ ಮಹಿಯು ಅಚಲವಾಗಿರುವಂತೆ ನೀನು ಅವಳನ್ನು ಸರಿಯಾಗಿ ಹೊತ್ತಿ ನಿಲ್ಲು.”

01032020 ಶೇಷ ಉವಾಚ|

01032020a ಯಥಾಹ ದೇವೋ ವರದಃ ಪ್ರಜಾಪತಿಃ

        ಮಹೀಪತಿರ್ಭೂತಪತಿರ್ಜಗತ್ಪತಿಃ|

01032020c ತಥಾ ಮಹೀಂ ಧಾರಯಿತಾಸ್ಮಿ ನಿಶ್ಚಲಾಂ

        ಪ್ರಯಚ್ಛ ತಾಂ ಮೇ ಶಿರಸಿ ಪ್ರಜಾಪತೇ||

ಶೇಷನು ಹೇಳಿದನು: “ದೇವ! ವರದ! ಪ್ರಜಾಪತಿ! ಮಹೀಪತಿ! ಭೂತಪತಿ! ಜಗತ್ಪತಿ! ಪ್ರಜಾಪತಿ! ನಿನ್ನ ಹೇಳಿಕೆಯಂತೆ ಈ ಮಹಿಯನ್ನು ನಿಶ್ಚಲವಾಗಿ ನನ್ನ ಶಿರದಮೇಲೆ ಹೊರುತ್ತೇನೆ.”

01032021 ಬ್ರಹ್ಮೋವಾಚ|

01032021a ಅಧೋ ಮಹೀಂ ಗಚ್ಛ ಭುಜಂಗಮೋತ್ತಮ

        ಸ್ವಯಂ ತವೈಷಾ ವಿವರಂ ಪ್ರದಾಸ್ಯತಿ|

01032021c ಇಮಾಂ ಧರಾಂ ಧಾರಯತಾ ತ್ವಯಾ ಹಿ ಮೇ

        ಮಹತ್ಪ್ರಿಯಂ ಶೇಷ ಕೃತಂ ಭವಿಷ್ಯತಿ||

ಬ್ರಹ್ಮನು ಹೇಳಿದನು: “ಭುಜಂಗಮೋತ್ತಮ ಶೇಷ! ಮಹಿಯ ಅಡಿಯಲ್ಲಿ ಹೋಗು. ನಿನಗೆ ಅವಳೇ ದಾರಿಯನ್ನು ಮಾಡಿಕೊಡುವಳು. ಈ ಭೂಮಿಯನ್ನು ನೀನು ಹೊರುವುದರಿಂದ ನನಗೆ ಮಹಾ ಪ್ರಿಯವಾದುದನ್ನು ಮಾಡಿದಹಾಗೆ ಆಗುತ್ತದೆ.””

01032022 ಸೂತ ಉವಾಚ|

01032022a ತಥೇತಿ ಕೃತ್ವಾ ವಿವರಂ ಪ್ರವಿಶ್ಯ ಸ

        ಪ್ರಭುರ್ಭುವೋ ಭುಜಗವರಾಗ್ರಜಃ ಸ್ಥಿತಃ|

01032022c ಬಿಭರ್ತಿ ದೇವೀಂ ಶಿರಸಾ ಮಹೀಂ ಇಮಾಂ

        ಸಮುದ್ರನೇಮಿಂ ಪರಿಗೃಹ್ಯ ಸರ್ವತಃ||

ಸೂತನು ಹೇಳಿದನು: “ನಾಗಗಳ ಅಗ್ರಜ ಆ ಪ್ರಭುವು “ಹಾಗೆಯೇ ಆಗಲಿ” ಎಂದು ಹೇಳಿ, ದರವನ್ನು ಪ್ರವೇಶಿಸಿ, ಮಹೀದೇವಿಯನ್ನು ಶಿರದ ಮೇಲೆ ಹೊತ್ತು ಈ ಸಮುದ್ರನೇಮಿಯನ್ನು ಪರಿಗ್ರಹಿಸಿದನು.”

01032023 ಬ್ರಹ್ಮೋವಾಚ|

01032023a ಶೇಷೋಽಸಿ ನಾಗೋತ್ತಮ ಧರ್ಮದೇವೋ

        ಮಹೀಮಿಮಾಂ ಧಾರಯಸೇ ಯದೇಕಃ|

01032023c ಅನಂತಭೋಗಃ ಪರಿಗೃಹ್ಯ ಸರ್ವಾಂ

        ಯಥಾಹಮೇವಂ ಬಲಭಿದ್ಯಥಾ ವಾ||

ಬ್ರಹ್ಮನು ಹೇಳಿದನು: “ಶೇಷ! ಒಬ್ಬನೇ ಈ ಮಹಿಯನ್ನು ಧಾರಣಮಾಡಿದ ನೀನು ನಾಗಗಳಲ್ಲೆಲ್ಲಾ ಉತ್ತಮನೂ ಧರ್ಮದೇವನೂ ಆಗಿದ್ದೀಯೆ. ಇಂದ್ರ ಮತ್ತು ನಾನು ಮಾತ್ರ ಈ ಮಹಿಯನ್ನು ಹೊರಬಲ್ಲೆವು.””

01032024 ಸೂತ ಉವಾಚ|

01032024a ಅಧೋ ಭೂಮೇರ್ವಸತ್ಯೇವಂ ನಾಗೋಽನಂತಃ ಪ್ರತಾಪವಾನ್|

01032024c ಧಾರಯನ್ವಸುಧಾಮೇಕಃ ಶಾಸನಾದ್ಬ್ರಹ್ಮಣೋ ವಿಭುಃ||

ಸೂತನು ಹೇಳಿದನು: “ಈ ರೀತಿ ವಿಭು ಬ್ರಹ್ಮನ ಶಾಸನದಂತೆ ಪ್ರತಾಪಿ ನಾಗ ಅನಂತನು ಭೂಮಿಯ ಅಡಿಯಲ್ಲಿ ವಾಸಿಸುತ್ತಾ ಒಬ್ಬನೇ ಈ ವಸುಧೆಯನ್ನು ಹೊತ್ತಿದ್ದಾನೆ.

01032025a ಸುಪರ್ಣಂ ಚ ಸಖಾಯಂ ವೈ ಭಗವಾನಮರೋತ್ತಮಃ|

01032025c ಪ್ರಾದಾದನಂತಾಯ ತದಾ ವೈನತೇಯಂ ಪಿತಾಮಹಃ||

ಭಗವಾನ್ ಅಮರೋತ್ತಮ ಪಿತಾಮಹನು ವೈನತೇಯ ಸುಪರ್ಣನನ್ನು ಅನಂತನ ಸಖನಾಗಿ ನಿಯೋಜಿಸಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಶೇಷವೃತ್ತಕಥನೋ ನಾಮ ದ್ವಾತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಶೇಷವೃತ್ತಕಥನ ಎನ್ನುವ ಮೂವತ್ತೆರಡನೇ ಅಧ್ಯಾಯವು.

Related image

Comments are closed.