Aranyaka Parva: Chapter 258

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೮

ರಾಮ-ರಾವಣಾದಿಗಳ ಜನನ

ರಾಮನು ಪತ್ನಿ ಸೀತೆಯ ಅಪಹರಣದಿಂದ ಪಟ್ಟ ಅಪ್ರತಿಮ ದುಃಖದ ಕುರಿತು ಮಾರ್ಕಂಡೇಯನು ಹೇಳಲು ಯುಧಿಷ್ಠಿರನು ಸಂಪೂರ್ಣ ರಾಮಕಥೆಯನ್ನು ಕೇಳಲು ಬಯಸುವುದು (೧-೫). ಇಕ್ಷ್ವಾಕುವಂಶದ ದಶರಥನಿಗೆ ರಾಮಾದಿ ನಾಲ್ವರು ಮಕ್ಕಳು - ಕೌಸಲ್ಯೆಯಲ್ಲಿ ರಾಮ, ಕೈಕೇಯಿಯಲ್ಲಿ ಭರತ ಮತ್ತು ಸುಮಿತ್ರೆಯಲ್ಲಿ ಲಕ್ಷ್ಮಣ-ಶತ್ರುಘ್ನರ ಜನನ; ಜನಕನ ಮಗಳು ಸೀತೆಯೊಂದಿಗೆ ರಾಮನ ವಿವಾಹ (೬-೧೦). ಪುಲಸ್ತ್ಯನ ಮಗ ವೈಶ್ರವಣನು ಪಿತಾಮಹ ಬ್ರಹ್ಮನೊಂದಿಗೇ ಹೆಚ್ಚುಕಾಲ ಇರುವುದನ್ನು ಕಂಡು ಕುಪಿತನಾಗಿ ತನ್ನಿಂದ ವಿಶ್ರವ ಎನ್ನುವವನ್ನು ಸೃಷ್ಟಿಸುವುದು; ಬ್ರಹ್ಮನು ವೈಶ್ರವಣ (ಕುಬೇರ)ನಿಗೆ ಅಮರತ್ವವನ್ನೂ, ಲೋಕಪಾಲತ್ವವನ್ನೂ, ಧನಾಧಿಪತ್ಯವನ್ನೂ, ಲಂಕೆಯನ್ನೂ ನೀಡಿದುದು (೧೦-೧೬).

03258001 ಮಾರ್ಕಂಡೇಯ ಉವಾಚ|

03258001a ಪ್ರಾಪ್ತಮಪ್ರತಿಮಂ ದುಃಖಂ ರಾಮೇಣ ಭರತರ್ಷಭ|

03258001c ರಕ್ಷಸಾ ಜಾನಕೀ ತಸ್ಯ ಹೃತಾ ಭಾರ್ಯಾ ಬಲೀಯಸಾ||

ಮಾರ್ಕಂಡೇಯನು ಹೇಳಿದನು: “ಭರತರ್ಷಭ! ತನ್ನ ಪತ್ನಿ ಜಾನಕಿಯನ್ನು ರಾಕ್ಷಸನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋದಾಗ ರಾಮನು ಅಪ್ರತಿಮ ದುಃಖವನ್ನು ಅನುಭವಿಸಿದನು.

03258002a ಆಶ್ರಮಾದ್ರಾಕ್ಷಸೇಂದ್ರೇಣ ರಾವಣೇನ ವಿಹಾಯಸಾ|

03258002c ಮಾಯಾಮಾಸ್ಥಾಯ ತರಸಾ ಹತ್ವಾ ಗೃಧ್ರಂ ಜಟಾಯುಷಂ||

ರಾಕ್ಷಸೇಂದ್ರ ರಾವಣನು ಮಾಯೆಯಿಂದ ಅವಳನ್ನು ಆಶ್ರಮದಿಂದ ಕದ್ದು, ಹದ್ದು ಜಟಾಯುವನ್ನು ಸಂಹರಿಸಿ ಕ್ಷಣಮಾತ್ರದಲ್ಲಿ ಆಕಾಶಮಾರ್ಗದಲ್ಲಿ ಹೋದನು.

03258003a ಪ್ರತ್ಯಾಜಹಾರ ತಾಂ ರಾಮಃ ಸುಗ್ರೀವಬಲಮಾಶ್ರಿತಃ|

03258003c ಬದ್ಧ್ವಾ ಸೇತುಂ ಸಮುದ್ರಸ್ಯ ದಗ್ಧ್ವಾ ಲಂಕಾಂ ಶಿತೈಃ ಶರೈಃ||

ರಾಮನು ಸುಗ್ರೀವನ ಸೇನೆಯ ಸಹಾಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ತೀಕ್ಷ್ಣಶರಗಳಿಂದ ಲಂಕೆಯನ್ನು ಸುಟ್ಟು ಅವಳನ್ನು ಪುನಃ ಪಡೆದನು.”

03258004 ಯುಧಿಷ್ಠಿರ ಉವಾಚ|

03258004a ಕಸ್ಮಿನ್ರಾಮಃ ಕುಲೇ ಜಾತಃ ಕಿಂವೀರ್ಯಃ ಕಿಂಪರಾಕ್ರಮಃ|

03258004c ರಾವಣಃ ಕಸ್ಯ ವಾ ಪುತ್ರಃ ಕಿಂ ವೈರಂ ತಸ್ಯ ತೇನ ಹ||

ಯುಧಿಷ್ಠಿರನು ಹೇಳಿದನು: “ರಾಮನು ಯಾವಕುಲದಲ್ಲಿ ಜನಿಸಿದನು ಮತ್ತು ಅವನು ಎಷ್ಟು ವೀರನೂ ಪರಾಕ್ರಮಿಯೂ ಆಗಿದ್ದನು? ರಾವಣನು ಯಾರ ಮಗ ಮತ್ತು ರಾಮನೊಂದಿಗೆ ಅವನ ದ್ವೇಷವಾದರೂ ಏನಿತ್ತು?

03258005a ಏತನ್ಮೇ ಭಗವನ್ಸರ್ವಂ ಸಮ್ಯಗಾಖ್ಯಾತುಮರ್ಹಸಿ|

03258005c ಶ್ರೋತುಮಿಚ್ಚಾಮಿ ಚರಿತಂ ರಾಮಸ್ಯಾಕ್ಲಿಷ್ಟಕರ್ಮಣಃ||

ಭಗವನ್! ಇವೆಲ್ಲವನ್ನೂ ನೀನು ನನಗೆ ಹೇಳಬೇಕು. ಅಕ್ಲಿಷ್ಟಕರ್ಮಿ ರಾಮನ ಕಥೆಯನ್ನು ಕೇಳಲು ಬಯಸುತ್ತೇನೆ.”

03258006 ಮಾರ್ಕಂಡೇಯ ಉವಾಚ|

03258006a ಅಜೋ ನಾಮಾಭವದ್ರಾಜಾ ಮಹಾನಿಕ್ಷ್ವಾಕುವಂಶಜಃ|

03258006c ತಸ್ಯ ಪುತ್ರೋ ದಶರಥಃ ಶಶ್ವತ್ಸ್ವಾಧ್ಯಾಯವಾಂ ಶುಚಿಃ||

ಮಾರ್ಕಂಡೇಯನು ಹೇಳಿದನು: “ಮಹಾನ್ ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಅಜ ಎಂಬ ಹೆಸರಿನ ರಾಜನಿದ್ದನು. ಅವನ ಪುತ್ರ ದಶರಥನು ಯಾವಾಗಲೂ ಸ್ವಾಧ್ಯಾಯದಲ್ಲಿ ತೊಡಗಿದ್ದು ಶುಚಿಯಾಗಿದ್ದನು.

03258007a ಅಭವಂಸ್ತಸ್ಯ ಚತ್ವಾರಃ ಪುತ್ರಾ ಧರ್ಮಾರ್ಥಕೋವಿದಾಃ|

03258007c ರಾಮಲಕ್ಷ್ಮಣಶತ್ರುಘ್ನಾ ಭರತಶ್ಚ ಮಹಾಬಲಃ||

ಅವನಿಗೆ ಧರ್ಮಾರ್ಥಕೋವಿದರಾದ ಮಹಾಬಲಶಾಲಿಗಳಾದ ರಾಮ, ಲಕ್ಷ್ಮಣ, ಶತ್ರುಘ್ನ ಮತ್ತು ಭರತರೆಂಬ ನಾಲ್ವರು ಪುತ್ರರಾದರು.

03258008a ರಾಮಸ್ಯ ಮಾತಾ ಕೌಸಲ್ಯಾ ಕೈಕೇಯೀ ಭರತಸ್ಯ ತು|

03258008c ಸುತೌ ಲಕ್ಷ್ಮಣಶತ್ರುಘ್ನೌ ಸುಮಿತ್ರಾಯಾಃ ಪರಂತಪೌ||

ರಾಮನ ತಾಯಿ ಕೌಸಲ್ಯೆ, ಭರತನ ತಾಯಿ ಕೈಕೇಯೀ ಮತ್ತು ಪರಂತಪರಾದ ಲಕ್ಷಣ-ಶತ್ರುಘ್ನರು ಸುಮಿತ್ರೆಯ ಮಕ್ಕಳು.

03258009a ವಿದೇಹರಾಜೋ ಜನಕಃ ಸೀತಾ ತಸ್ಯಾತ್ಮಜಾ ವಿಭೋ|

03258009c ಯಾಂ ಚಕಾರ ಸ್ವಯಂ ತ್ವಷ್ಟಾ ರಾಮಸ್ಯ ಮಹಿಷೀಂ ಪ್ರಿಯಾಂ||

ವಿಭೋ! ವಿದೇಹರಾಜ ಜನಕ ಮತ್ತು ಅವನ ಮಗಳು ಸೀತೆ. ಸ್ವಯಂ ಬ್ರಹ್ಮನೇ ಅವಳನ್ನು ರಾಮನ ಪ್ರಿಯ ಮಹಿಷಿಯನ್ನಾಗಿ ಮಾಡಿದ್ದನು.

03258010a ಏತದ್ರಾಮಸ್ಯ ತೇ ಜನ್ಮ ಸೀತಾಯಾಶ್ಚ ಪ್ರಕೀರ್ತಿತಂ|

03258010c ರಾವಣಸ್ಯಾಪಿ ತೇ ಜನ್ಮ ವ್ಯಾಖ್ಯಾಸ್ಯಾಮಿ ಜನೇಶ್ವರ||

ಇದು ರಾಮ ಮತ್ತು ಸೀತೆಯರ ಜನ್ಮಕಥೆ. ಜನೇಶ್ವರ! ಈಗ ರಾವಣನ ಜನ್ಮದ ಕುರಿತೂ ಹೇಳುತ್ತೇನೆ.

03258011a ಪಿತಾಮಹೋ ರಾವಣಸ್ಯ ಸಾಕ್ಷಾದ್ದೇವಃ ಪ್ರಜಾಪತಿಃ|

03258011c ಸ್ವಯಂಭೂಃ ಸರ್ವಲೋಕಾನಾಂ ಪ್ರಭುಃ ಸ್ರಷ್ಟಾ ಮಹಾತಪಾಃ||

ಸಾಕ್ಷಾತ್ ದೇವ ಪ್ರಜಾಪತಿ, ಸ್ವಯಂಭೂ, ಸರ್ವಲೋಕಗಳ ಪ್ರಭು, ಸೃಷ್ಟಿಕರ್ತ, ಮಹಾತಪನೇ ರಾವಣನ ಪಿತಾಮಹ.

03258012a ಪುಲಸ್ತ್ಯೋ ನಾಮ ತಸ್ಯಾಸೀನ್ಮಾನಸೋ ದಯಿತಃ ಸುತಃ|

03258012c ತಸ್ಯ ವೈಶ್ರವಣೋ ನಾಮ ಗವಿ ಪುತ್ರೋಽಭವತ್ಪ್ರಭುಃ||

ಅವನಿಗೆ ಪುಲಸ್ತ್ಯ ಎಂಬ ಹೆಸರಿನ ಮನಸ್ಸಿನಿಂದ ಹುಟ್ಟಿದ ಮಗನಿದ್ದನು. ಆ ಪ್ರಭುವಿಗೆ ಗೋವಿನಲ್ಲಿ ವೈಶ್ರವಣ ಎಂಬ ಹೆಸರಿನ ಪುತ್ರನಾದನು.

03258013a ಪಿತರಂ ಸ ಸಮುತ್ಸೃಜ್ಯ ಪಿತಾಮಹಮುಪಸ್ಥಿತಃ|

03258013c ತಸ್ಯ ಕೋಪಾತ್ಪಿತಾ ರಾಜನ್ಸಸರ್ಜಾತ್ಮಾನಮಾತ್ಮನಾ||

ಅವನು ತಂದೆಯನ್ನು ತೊರೆದು ಪಿತಾಮಹನಲ್ಲಿ ವಾಸಿಸಿದನು. ರಾಜನ್! ಇದರಿಂದ ಕೋಪಗೊಂಡ ತಂದೆಯು ತನ್ನಿಂದಲೇ ತನ್ನನ್ನು ಸೃಷ್ಟಿಸಿಕೊಂಡನು.

03258014a ಸ ಜಜ್ಞೇ ವಿಶ್ರವಾ ನಾಮ ತಸ್ಯಾತ್ಮಾರ್ಧೇನ ವೈ ದ್ವಿಜಃ|

03258014c ಪ್ರತೀಕಾರಾಯ ಸಕ್ರೋಧಸ್ತತೋ ವೈಶ್ರವಣಸ್ಯ ವೈ||

ಹೀಗೆ ಎರಡುಬಾರಿ ಜನಿಸಿದ ಅವನು ವೈಶ್ರವಣನ ಮೇಲಿನ ಕ್ರೋಧದಿಂದ ಪ್ರತೀಕಾರವನ್ನು ಮಾಡಲು, ತನ್ನ ಅರ್ಧದಿಂದ ವಿಶ್ರವಾ ಎಂಬ ಹೆಸರಿನವನನ್ನು ಹುಟ್ಟಿಸಿದನು.

03258015a ಪಿತಾಮಹಸ್ತು ಪ್ರೀತಾತ್ಮಾ ದದೌ ವೈಶ್ರವಣಸ್ಯ ಹ|

03258015c ಅಮರತ್ವಂ ಧನೇಶತ್ವಂ ಲೋಕಪಾಲತ್ವಮೇವ ಚ||

03258016a ಈಶಾನೇನ ತಥಾ ಸಖ್ಯಂ ಪುತ್ರಂ ಚ ನಲಕೂಬರಂ|

03258016c ರಾಜಧಾನೀನಿವೇಶಂ ಚ ಲಂಕಾಂ ರಕ್ಷೋಗಣಾನ್ವಿತಾಂ||

ಪಿತಾಮಹನಾದರೋ ವೈಶ್ರವಣನ ಮೇಲೆ ಸಂತೋಷಗೊಂಡು ಅವನಿಗೆ ಅಮರತ್ವವನ್ನೂ ಧನೇಶತ್ವವನ್ನೂ ಲೋಕಪಾಲತ್ವವನ್ನೂ, ಈಶಾನನ ಸಖ್ಯವನ್ನೂ, ನಲಕೂಬರನೆನ್ನುವ ಪುತ್ರನನ್ನೂ, ರಾಕ್ಷಸಗಣಗಳಿಂದೊಡಗೂಡಿದ ಲಂಕೆಯನ್ನು ರಾಜಧಾನಿಯಾಗಿಯೂ ನಿವಾಸಸ್ಥಾನವಾಗಿಯೂ ನೀಡಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾಮರಾವಣಯೋರ್ಜನ್ಮಕಥನೇ ಅಷ್ಟಪಂಚಾಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾಮರಾವಣರ ಜನ್ಮಕಥನದಲ್ಲಿ ಇನ್ನೂರಾಐವತ್ತೆಂಟನೆಯ ಅಧ್ಯಾಯವು.

Related image

Comments are closed.