Aranyaka Parva: Chapter 295

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ: ಆರಣೇಯ ಪರ್ವ

೨೯೫

ಪಾಂಡವರು ಬ್ರಾಹ್ಮಣನ ಅರಣಿಗಳನ್ನು ತೆಗೆದುಕೊಂಡು ಹೋದ ಜಿಂಕೆಯನ್ನರಿಸಿ ಹೋದುದು

ವನವಾಸವು ಅಂತ್ಯವಾಗುತ್ತಾ ಬರುವಾಗ ಯುಧಿಷ್ಠಿರನು ಕಾಮ್ಯಕದಿಂದ ಪುನಃ ದ್ವೈತವನಕ್ಕೆ ಬಂದುದು; ಒಮ್ಮೆ ಬ್ರಾಹ್ಮಣನೋರ್ವನು ತನ್ನ ಅರಣಿಗಳನ್ನು ಜಿಂಕೆಯೊಂದು ಕೋಡುಗಳಿಗೆ ಸಿಲುಕಿಸಿಕೊಂಡು ಓಡಿಹೋಯಿತೆಂದೂ ಅದನ್ನು ಹಿಂದೆ ತನ್ನಿರೆಂದೂ ಪಾಂಡವರಿಗೆ ಹೇಳಿದುದು (೧-೧೦). ಜಿಂಕೆಯನ್ನು ಅರಸಿ ಹೋದ ಪಾಂಡವರೈವರೂ ಆಯಾಸಗೊಂಡು ದಟ್ಟ ಕಾನನದಲ್ಲಿ ಕುಳಿತಿರುವಾಗ ತಮ್ಮ ಕಷ್ಟಗಳ ಕುರಿತು ಚರ್ಚಿಸುವುದು (೧೧-೧೭).

03295001 ಜನಮೇಜಯ ಉವಾಚ|

03295001a ಏವಂ ಹೃತಾಯಾಂ ಕೃಷ್ಣಾಯಾಂ ಪ್ರಾಪ್ಯ ಕ್ಲೇಶಮನುತ್ತಮಂ|

03295001c ಪ್ರತಿಲಭ್ಯ ತತಃ ಕೃಷ್ಣಾಂ ಕಿಮಕುರ್ವತ ಪಾಂಡವಾಃ||

ಜನಮೇಜಯನು ಹೇಳಿದನು: “ಈ ರೀತಿ ಕೃಷ್ಣೆಯನ್ನು ಕಳೆದುಕೊಂಡು ಅನುತ್ತಮ ಕ್ಲೇಶವನ್ನು ಅನುಭವಿಸಿ, ಕೃಷ್ಣೆಯನ್ನು ಹಿಂದಕ್ಕೆ ಪಡೆದು ಪಾಂಡವರು ಏನು ಮಾಡಿದರು?”

03295002 ವೈಶಂಪಾಯನ ಉವಾಚ|

03295002a ಏವಂ ಹೃತಾಯಾಂ ಕೃಷ್ಣಾಯಾಂ ಪ್ರಾಪ್ಯ ಕ್ಲೇಶಮನುತ್ತಮಂ|

03295002c ವಿಹಾಯ ಕಾಮ್ಯಕಂ ರಾಜಾ ಸಹ ಭ್ರಾತೃಭಿರಚ್ಯುತಃ||

ವೈಶಂಪಾಯನನು ಹೇಳಿದನು: “ಈ ರೀತಿ ಕೃಷ್ಣೆಯನ್ನು ಕಳೆದುಕೊಂಡು ಅನುತ್ತಮ ಕ್ಲೇಷವನ್ನು ಹೊಂದಿ ರಾಜ ಅಚ್ಯುತನು ತಮ್ಮಂದಿರೊಡನೆ ಕಾಮ್ಯಕದಲ್ಲಿ ವಿಹರಿಸಿದನು.

03295003a ಪುನರ್ದ್ವೈತವನಂ ರಮ್ಯಮಾಜಗಾಮ ಯುಧಿಷ್ಠಿರಃ|

03295003c ಸ್ವಾದುಮೂಲಫಲಂ ರಮ್ಯಂ ಮಾರ್ಕಂಡೇಯಾಶ್ರಮಂ ಪ್ರತಿ||

ಪುನಃ ಯುಧಿಷ್ಠಿರನು ದ್ವೈತವನಕ್ಕೆ, ಫಲಮೂಲಗಳು ಸ್ವಾದವಾಗಿದ್ದ ಮಾರ್ಕಂಡೇಯಾಶ್ರಮದ ಬಳಿ, ಬಂದನು.

03295004a ಅನುಗುಪ್ತಫಲಾಹಾರಾಃ ಸರ್ವ ಏವ ಮಿತಾಶನಾಃ|

03295004c ನ್ಯವಸನ್ಪಾಂಡವಾಸ್ತತ್ರ ಕೃಷ್ಣಯಾ ಸಹ ಭಾರತ||

ಭಾರತ! ಕೃಷ್ಣೆಯೊಂದಿಗೆ ಪಾಂಡವರು ಎಲ್ಲರೂ ಕೇವಲ ಫಲಾಹಾರಿಗಳಾಗಿ ಕಡಿಮೆ ಆಹಾರವನ್ನು ಸೇವಿಸುತ್ತಾ ಅಲ್ಲಿ ನೆಲೆಸಿದರು.

03295005a ವಸನ್ದ್ವೈತವನೇ ರಾಜಾ ಕುಂತೀಪುತ್ರೋ ಯುಧಿಷ್ಠಿರಃ|

03295005c ಭೀಮಸೇನೋಽರ್ಜುನಶ್ಚೈವ ಮಾದ್ರೀಪುತ್ರೌ ಚ ಪಾಂಡವೌ|

03295006a ಬ್ರಾಹ್ಮಣಾರ್ಥೇ ಪರಾಕ್ರಾಂತಾ ಧರ್ಮಾತ್ಮಾನೋ ಯತವ್ರತಾಃ|

03295006c ಕ್ಲೇಶಮಾರ್ಚಂತ ವಿಪುಲಂ ಸುಖೋದರ್ಕಂ ಪರಂತಪಾಃ||

ದ್ವೈತವನದಲ್ಲಿ ಧರ್ಮಾತ್ಮ ಯತವ್ರತ ಪರಂತಪ ರಾಜ ಕುಂತೀಪುತ್ರ ಯುಧಿಷ್ಠಿರ, ಭೀಮಸೇನ, ಅರ್ಜುನ, ಮತ್ತು ಮಾದ್ರೀಪುತ್ರ ಪಾಂಡವರು ಬ್ರಾಹ್ಮಣನೋರ್ವನಿಗೆ ಸಹಾಯಮಾಡಲು ಹೋಗಿ ವಿಪುಲ ಕ್ಲೇಶವನ್ನು ಪಡೆದು ಅಂತ್ಯದಲ್ಲಿ ಸುಖವನ್ನೇ ಹೊಂದಿದರು.

03295007a ಅಜಾತಶತ್ರುಮಾಸೀನಂ ಭ್ರಾತೃಭಿಃ ಸಹಿತಂ ವನೇ|

03295007c ಆಗಮ್ಯ ಬ್ರಾಹ್ಮಣಸ್ತೂರ್ಣಂ ಸಂತಪ್ತ ಇದಮಬ್ರವೀತ್||

ಅಜಾತಶ್ರತ್ರುವು ತಮ್ಮಂದಿರೊಡನೆ ವನದಲ್ಲಿ ಕುಳಿತುಕೊಂಡಿರಲು ಬ್ರಾಹ್ಮಣನೋರ್ವನು ಓಡಿಬಂದು ಸಂತಪ್ತನಾಗಿ ಹೀಗೆ ಹೇಳಿದನು:

03295008a ಅರಣೀಸಹಿತಂ ಮಹ್ಯಂ ಸಮಾಸಕ್ತಂ ವನಸ್ಪತೌ|

03295008c ಮೃಗಸ್ಯ ಘರ್ಷಮಾಣಸ್ಯ ವಿಷಾಣೇ ಸಮಸಜ್ಜತ||

“ಮರಕ್ಕೆ ನೇಲಿಸಿದ್ದ ನನ್ನ ಅರಣಿಗಳಿದ್ದ ಚೀಲವೊಂದು ಆ ಮರಕ್ಕೆ ಮೈತಿಕ್ಕುತ್ತಿದ್ದ ಜಿಂಕೆಯ ಕೋಡುಗಳಿಗೆ ಸಿಕ್ಕಿಕೊಂಡಿತು.

03295009a ತದಾದಾಯ ಗತೋ ರಾಜಂಸ್ತ್ವರಮಾಣೋ ಮಹಾಮೃಗಃ|

03295009c ಆಶ್ರಮಾತ್ತ್ವರಿತಃ ಶೀಘ್ರಂ ಪ್ಲವಮಾನೋ ಮಹಾಜವಃ||

ರಾಜನ್! ಆ ಮಹಾಮೃಗವು ಅದನ್ನು ಎತ್ತಿಕೊಂಡು, ನನ್ನ ಆಶ್ರಮದ ಬಳಿಯಿಂದಲೇ ಕುಪ್ಪಳಿಸಿ ಹಾರುತ್ತಾ ಶೀಘ್ರವಾಗಿ ವೇಗದಿಂದ ಓಡಿಹೋಯಿತು.

03295010a ತಸ್ಯ ಗತ್ವಾ ಪದಂ ಶೀಘ್ರಮಾಸಾದ್ಯ ಚ ಮಹಾಮೃಗಂ|

03295010c ಅಗ್ನಿಹೋತ್ರಂ ನ ಲುಪ್ಯೇತ ತದಾನಯತ ಪಾಂಡವಾಃ||

ಪಾಂಡವರೇ! ನನ್ನ ಅಗ್ನಿಹೋತ್ರವು ಲುಪ್ತವಾಗಬಾರದೆಂದು ಅದು ಹೋದದಾರಿಯಲ್ಲಿಯೇ ಶೀಘ್ರವಾಗಿ ಆ ಮಹಾಮೃಗವನ್ನು ಹಿಂಬಾಲಿಸಿ ಅದನ್ನು ಹಿಂದೆ ತನ್ನಿ.”

03295011a ಬ್ರಾಹ್ಮಣಸ್ಯ ವಚಃ ಶ್ರುತ್ವಾ ಸಂತಪ್ತೋಽಥ ಯುಧಿಷ್ಠಿರಃ|

03295011c ಧನುರಾದಾಯ ಕೌಂತೇಯಃ ಪ್ರಾದ್ರವದ್ಭ್ರಾತೃಭಿಃ ಸಹ||

ಬ್ರಾಹ್ಮಣನ ಮಾತುಗಳನ್ನು ಕೇಳಿ ಯುಧಿಷ್ಠಿರನು ಸಂತಪ್ತನಾದನು. ಕೌಂತೇಯನು ಧನುಸ್ಸನ್ನು ಎತ್ತಿ ಹಿಡಿದು ತಮ್ಮಂದಿರೊಡನೆ ವೇಗದಿಂದ ಜಿಂಕೆಯನ್ನು ಹಿಂಬಾಲಿಸಿದನು.

03295012a ಸನ್ನದ್ಧಾ ಧನ್ವಿನಃ ಸರ್ವೇ ಪ್ರಾದ್ರವನ್ನರಪುಂಗವಾಃ|

03295012c ಬ್ರಾಹ್ಮಣಾರ್ಥೇ ಯತಂತಸ್ತೇ ಶೀಘ್ರಮನ್ವಗಮನ್ಮೃಗಂ||

ಎಲ್ಲ ಧನ್ವಿ ನರಪುಂಗವರೂ ಸನ್ನದ್ಧರಾಗಿ ಬ್ರಾಹ್ಮಣನಿಗೋಸ್ಕರ ಶೀಘ್ರವಾಗಿ ಆ ಜಿಂಕೆಯ ಬೆನ್ನಟ್ಟಿ ಓಡಿದರು.

03295013a ಕರ್ಣಿನಾಲೀಕನಾರಾಚಾನುತ್ಸೃಜಂತೋ ಮಹಾರಥಾಃ|

03295013c ನಾವಿಧ್ಯನ್ಪಾಂಡವಾಸ್ತತ್ರ ಪಶ್ಯಂತೋ ಮೃಗಮಂತಿಕಾತ್||

ಆ ಮಹಾರಥಿ ಪಾಂಡವರು ಕರ್ಣಿ, ಆಲೀಕ ಮತ್ತು ನಾರಾಚಗಳನ್ನು ಬಿಡುತ್ತಾ ಹತ್ತಿರದಲ್ಲಿ ಜಿಂಕೆಯನ್ನು ನೋಡಿದರೂ ಅದನ್ನು ಹೊಡೆಯಲಿಲ್ಲ.

03295014a ತೇಷಾಂ ಪ್ರಯತಮಾನಾನಾಂ ನಾದೃಶ್ಯತ ಮಹಾಮೃಗಃ|

03295014c ಅಪಶ್ಯಂತೋ ಮೃಗಂ ಶ್ರಾಂತಾ ದುಃಖಂ ಪ್ರಾಪ್ತಾ ಮನಸ್ವಿನಃ|

ಅವರು ಹೀಗೆ ಪ್ರಯತ್ನಿಸುತ್ತಿರುವಾಗ ಆ ಮಹಾಮೃಗವು ಮರೆಯಾಯಿತು. ಆ ಜಿಂಕೆಯನ್ನು ಕಾಣದೇ ಮನಸ್ವಿಗಳು ಆಯಾಸಹೊಂದಿ ದುಃಖಿತರಾದರು.

03295015a ಶೀತಲಚ್ಚಾಯಮಾಸಾದ್ಯ ನ್ಯಗ್ರೋಧಂ ಗಹನೇ ವನೇ|

03295015c ಕ್ಷುತ್ಪಿಪಾಸಾಪರೀತಾಂಗಾಃ ಪಾಂಡವಾಃ ಸಮುಪಾವಿಶನ್||

ಆ ಗಹನ ವನದಲ್ಲಿ ಒಂದು ಆಲದಮರದ ನೆರಳನ್ನು ಸೇರಿ ಬಾಯಾರಿಕೆ ಮತ್ತು ಅಂಗಾಂಗಳ ನೋವಿನಿಂದ ಬಳಲಿದ ಪಾಂಡವರು ವಿಶ್ರಾಂತಿಪಡೆದರು.

03295016a ತೇಷಾಂ ಸಮುಪವಿಷ್ಟಾನಾಂ ನಕುಲೋ ದುಃಖಿತಸ್ತದಾ|

03295016c ಅಬ್ರವೀದ್ಭ್ರಾತರಂ ಜ್ಯೇಷ್ಠಮಮರ್ಷಾತ್ಕುರುಸತ್ತಮ||

ಕುರುಸತ್ತಮ! ಅವರು ಹಾಗೆ ಅಲ್ಲಿ ಕುಳಿತಿರಲು ದುಃಖಿತನಾದ ನಕುಲನು ಹಿರಿಯ ಅಣ್ಣನಿಗೆ ನುಡಿದನು.

03295017a ನಾಸ್ಮಿನ್ಕುಲೇ ಜಾತು ಮಮಜ್ಜ ಧರ್ಮೋ|

        ನ ಚಾಲಸ್ಯಾದರ್ಥಲೋಪೋ ಬಭೂವ|

03295017c ಅನುತ್ತರಾಃ ಸರ್ವಭೂತೇಷು ಭೂಯಃ|

        ಸಂಪ್ರಾಪ್ತಾಃ ಸ್ಮಃ ಸಂಶಯಂ ಕೇನ ರಾಜನ್||

“ರಾಜನ್! ನಮ್ಮ ಈ ಕುಲದಲ್ಲಿ ಧರ್ಮವು ಎಂದೂ ತಪ್ಪುವುದಿಲ್ಲ. ಆಲಸ್ಯದಿಂದ ಅರ್ಥಲೋಪವೂ ನಡೆಯುವುದಿಲ್ಲ. ಆದರೂ ಸರ್ವಭೂತಗಳಲ್ಲಿಯೂ ಅನುತ್ತರರಾಗಿದ್ದರೂ ನಾವು ಯಾವಕಾರಣಕ್ಕಾಗಿ ಪುನಃ ಕಷ್ಟವನ್ನು ಹೊಂದುತ್ತಿದ್ದೇವೆ?”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ಮೃಗಾನ್ವೇಷಣೇ ಪಂಚನವತ್ಯಧಿಕದ್ವಿಶತತಮೋಽಧ್ಯಾಯ😐

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ಮೃಗಾನ್ವೇಷಣದಲ್ಲಿ ಇನ್ನೂರಾತೊಂಭತ್ತೈದನೆಯ ಅಧ್ಯಾಯವು.

Related image

Comments are closed.