Aranyaka Parva: Chapter 299

ಆರಣ್ಯಕ ಪರ್ವ: ಆರಣೇಯ ಪರ್ವ

೨೯೯

ಪಾಂಡವರು ವನವಾಸಿಗಳಿಂದ ಬೀಳ್ಕೊಂಡಿದುದು

ಯುಧಿಷ್ಠಿರನು ಹದಿಮೂರನೆಯ ಅಜ್ಞಾತವಾಸದ ವರ್ಷಕ್ಕೆ ಹೊರಡಲು ಸಿದ್ಧನಾಗಿ ಬ್ರಾಹ್ಮಣರೊಂದಿಗೆ ಬೀಳ್ಕೊಳ್ಳುವಾಗ ದುಃಖಿತನಾಗಿ ಮೂರ್ಛೆಗೊಂಡಿದುದು (೧-೭). ಆಗ ಧೌಮ್ಯನು ಸಮಾಧಾನಗೊಳಿಸಿದುದು (೮-೧೯). ಪಾಂಡವರು ಅಜ್ಞಾತವಾಸಕ್ಕೆ ತೆರಳಿದುದು (೨೦-೨೯).

03299001 ವೈಶಂಪಾಯನ ಉವಾಚ|

03299001a ಧರ್ಮೇಣ ತೇಽಭ್ಯನುಜ್ಞಾತಾಃ ಪಾಂಡವಾಃ ಸತ್ಯವಿಕ್ರಮಾಃ|

03299001c ಅಜ್ಞಾತವಾಸಂ ವತ್ಸ್ಯಂತಶ್ಚನ್ನಾ ವರ್ಷಂ ತ್ರಯೋದಶಂ||

03299001e ಉಪೋಪವಿಶ್ಯ ವಿದ್ವಾಂಸಃ ಸಹಿತಾಃ ಸಂಶಿತವ್ರತಾಃ||

ವೈಶಂಪಾಯನನು ಹೇಳಿದನು: “ಧರ್ಮನಿಂದ ಅಪ್ಪಣೆಯನ್ನು ಪಡೆದು ಸತ್ಯವಿಕ್ರಮ ಸಂಶಿತವ್ರತ ಪಾಂಡವರು ಹದಿಮೂರನೆಯ ವರ್ಷವನ್ನು ಅಜ್ಞಾತವಾಸದಲ್ಲಿ ಕಳೆಯಲು ಸಿದ್ಧರಾಗಿ ವಿನೀತರಾಗಿ ವಿಧ್ವಾಂಸರ ಸಹಿತ ಕುಳಿತುಕೊಂಡರು.

03299002a ಯೇ ತದ್ಭಕ್ತಾ ವಸಂತಿ ಸ್ಮ ವನವಾಸೇ ತಪಸ್ವಿನಃ|

03299002c ತಾನಬ್ರುವನ್ಮಹಾತ್ಮಾನಃ ಶಿಷ್ಟಾಃ ಪ್ರಾಂಜಲಯಸ್ತದಾ|

03299002e ಅಭ್ಯನುಜ್ಞಾಪಯಿಷ್ಯಂತಸ್ತಂ ನಿವಾಸಂ ಧೃತವ್ರತಾಃ||

ಶಿಷ್ಠರಾದ ಆ ಮಹಾತ್ಮ ಧೃತವ್ರತರು ಅಂಜಲೀಬದ್ಧರಾಗಿ, ಅವರ ಮೇಲಿನ ಭಕ್ತಿಯಿಂದ ಅವರೊಂದಿಗೆ ವನದಲ್ಲಿ ವಾಸಿಸುತ್ತಿರುವ ತಪಸ್ವಿಗಳಿಗೆ ಆ ವನವಾಸದ ಕೊನೆಯಲ್ಲಿ ಬೀಳ್ಕೊಂಡರು. 

03299003a ವಿದಿತಂ ಭವತಾಂ ಸರ್ವಂ ಧಾರ್ತರಾಷ್ಟ್ರೈರ್ಯಥಾ ವಯಂ|

03299003c ಚದ್ಮನಾ ಹೃತರಾಜ್ಯಾಶ್ಚ ನಿಃಶ್ವಾಶ್ಚ ಬಹುಶಃ ಕೃತಾಃ||

“ಧಾರ್ತರಾಷ್ಟ್ರರಿಂದ ನಾವು ಹೇಗೆ ಬಹು ವಿಧಗಳಲ್ಲಿ ರಾಜ್ಯ ಮತ್ತು ನಮ್ಮದೆಲ್ಲವನ್ನೂ ಕಳೆದುಕೊಂಡೆವು ನಿಮಗೆ ತಿಳಿದೇ ಇದೆ.

03299004a ಉಷಿತಾಶ್ಚ ವನೇ ಕೃಚ್ಚ್ರಂ ಯತ್ರ ದ್ವಾದಶ ವತ್ಸರಾನ್|

03299004c ಅಜ್ಞಾತವಾಸಸಮಯಂ ಶೇಷಂ ವರ್ಷಂ ತ್ರಯೋದಶಂ|

03299004e ತದ್ವತ್ಸ್ಯಾಮೋ ವಯಂ ಚನ್ನಾಸ್ತದನುಜ್ಞಾತುಮರ್ಹಥ||

ಈಗ ತುಂಬಾ ಕಷ್ಟಪಟ್ಟು ನಾವು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಿದೆವು. ಉಳಿದ ಹದಿಮೂರನೆಯ ವರ್ಷವನ್ನು ಒಪ್ಪಂದದಂತೆ ಅಜ್ಞಾತವಾಸವನ್ನೂ ಕೂಡ ನಾವು ಕಷ್ಟದಿಂದಲೇ ಕಳೆಯುತ್ತೇವೆ. ನಮಗೆ ಅನುಜ್ಞೆಯನ್ನು ನೀಡಿ.

03299005a ಸುಯೋಧನಶ್ಚ ದುಷ್ಟಾತ್ಮಾ ಕರ್ಣಶ್ಚ ಸಹಸೌಬಲಃ|

03299005c ಜಾನಂತೋ ವಿಷಮಂ ಕುರ್ಯುರಸ್ಮಾಸ್ವತ್ಯಂತವೈರಿಣಃ|

03299005e ಯುಕ್ತಾಚಾರಾಶ್ಚ ಯುಕ್ತಾಶ್ಚ ಪೌರಸ್ಯ ಸ್ವಜನಸ್ಯ ಚ||

ನಮಗೆ ಅತ್ಯಂತ ವೈರಿ, ದುಷ್ಟಾತ್ಮ ಸುಯೋಧನನು ಕರ್ಣ ಮತ್ತು ಸೌಬಲನೊಡಗೂಡಿ ನಮ್ಮನ್ನು ಹುಡಿಕಿದರೆ ನಮಗೆ, ನಮ್ಮ ಪುರಜನರಿಗೆ, ಸ್ವಜನರಿಗೆ ತೊಂದರೆಯನ್ನು ನೀಡಬಹುದು.

03299006a ಅಪಿ ನಸ್ತದ್ಭವೇದ್ಭೂಯೋ ಯದ್ವಯಂ ಬ್ರಾಹ್ಮಣೈಃ ಸಹ|

03299006c ಸಮಸ್ತಾಃ ಸ್ವೇಷು ರಾಷ್ಟ್ರೇಷು ಸ್ವರಾಜ್ಯಸ್ಥಾ ಭವೇಮಹಿ||

ಮುಂದೆ ನಾವು ಬ್ರಾಹ್ಮಣರೊಡನೆ ನಮ್ಮ ರಾಷ್ಟ್ರದಲ್ಲಿ ನಮ್ಮ ರಾಜ್ಯದಲ್ಲಿ ಒಟ್ಟಿಗೇ ಇರುವಂತೆ ಆಗುವುದೋ ಇಲ್ಲವೋ!”

03299007a ಇತ್ಯುಕ್ತ್ವಾ ದುಃಖಶೋಕಾರ್ತಃ ಶುಚಿರ್ಧರ್ಮಸುತಸ್ತದಾ|

03299007c ಸಮ್ಮೂರ್ಚಿತೋಽಭವದ್ರಾಜಾ ಸಾಶ್ರುಕಂಠೋ ಯುಧಿಷ್ಠಿರಃ||

ಕಣ್ಣೀರು ತುಂಬಿದ ಕಂಠದಲ್ಲಿ ಹೀಗೆ ಮಾತನಾಡಿ ದುಃಖಶೋಕಾರ್ತನಾದ ಆ ಶುಚಿ ಧರ್ಮಸುತ ರಾಜಾ ಯುಧಿಷ್ಠಿರನು ಮೂರ್ಛಿತನಾದನು.

03299008a ತಮಥಾಶ್ವಾಸಯನ್ಸರ್ವೇ ಬ್ರಾಹ್ಮಣಾ ಭ್ರಾತೃಭಿಃ ಸಹ|

03299008c ಅಥ ಧೌಮ್ಯೋಽಬ್ರವೀದ್ವಾಕ್ಯಂ ಮಹಾರ್ಥಂ ನೃಪತಿಂ ತದಾ||

ಎಲ್ಲ ಬ್ರಾಹ್ಮಣರೂ, ಸಹೋದರರೂ ಒಟ್ಟಿಗೇ ಅವನಿಗೆ ಆಶ್ವಾಸನೆಯನ್ನಿತ್ತರು. ಆಗ ಧೌಮ್ಯನು ಮಹಾರ್ಥವುಳ್ಳ ಈ ಮಾತುಗಳನ್ನು ನೃಪತಿಗೆ ಹೇಳಿದನು:

03299009a ರಾಜನ್ವಿದ್ವಾನ್ಭವಾನ್ದಾಂತಃ ಸತ್ಯಸಂಧೋ ಜಿತೇಂದ್ರಿಯಃ|

03299009c ನೈವಂವಿಧಾಃ ಪ್ರಮುಹ್ಯಂತಿ ನರಾಃ ಕಸ್ಯಾಂ ಚಿದಾಪದಿ||

“ರಾಜನ್! ನೀನು ತಿಳಿದವನು. ನಿಯಂತ್ರಿಸಿಕೊಂಡಿರುವವನು. ಸತ್ಯಸಂಧನು. ಜಿತೇಂದ್ರಿಯನು. ಇಂಥಹ ನರರು ಈ ರೀತಿಯಲ್ಲಿ ಯಾವುದೇ ಆಪತ್ತಿನಲ್ಲಿಯೂ ಬುದ್ಧಿಯನ್ನು ಕಳೆದುಕೊಳ್ಳುವುದಿಲ್ಲ.

03299010a ದೇವೈರಪ್ಯಾಪದಃ ಪ್ರಾಪ್ತಾಶ್ಚನ್ನೈಶ್ಚ ಬಹುಶಸ್ತಥಾ|

03299010c ತತ್ರ ತತ್ರ ಸಪತ್ನಾನಾಂ ನಿಗ್ರಹಾರ್ಥಂ ಮಹಾತ್ಮಭಿಃ||

ಮಹಾತ್ಮ ದೇವತೆಗಳು ಕೂಡ ಬಹಳ ಬಾರಿ ಆಪತ್ತನ್ನು ಪಡೆದಾಗ ಅವರ ವೈರಿಗಳನ್ನು ನಿಗ್ರಹಿಸಲು ಅಲ್ಲಲ್ಲಿ ವೇಷಮರೆಸಿಕೊಂಡು ಇದ್ದರು.

03299011a ಇಂದ್ರೇಣ ನಿಷಧಾನ್ಪ್ರಾಪ್ಯ ಗಿರಿಪ್ರಸ್ಥಾಶ್ರಮೇ ತದಾ|

03299011c ಚನ್ನೇನೋಷ್ಯ ಕೃತಂ ಕರ್ಮ ದ್ವಿಷತಾಂ ಬಲನಿಗ್ರಹೇ||

ಇಂದ್ರನು ನಿಷಾಧರಲ್ಲಿಗೆ ಹೋಗಿ ಅಲ್ಲಿ ಗಿರಿತಪ್ಪಲಿನ ಆಶ್ರಮದಲ್ಲಿ ವೇಷಮರೆಸಿಕೊಂಡು ದ್ವೇಷಿಗಳ ಬಲವನ್ನು ನಿಗ್ರಹಿಸಿದನು.

03299012a ವಿಷ್ಣುನಾಶ್ವಶಿರಃ ಪ್ರಾಪ್ಯ ತಥಾದಿತ್ಯಾಂ ನಿವತ್ಸ್ಯತಾ|

03299012c ಗರ್ಭೇ ವಧಾರ್ಥಂ ದೈತ್ಯಾನಾಮಜ್ಞಾತೇನೋಷಿತಂ ಚಿರಂ||

ದೈತ್ಯರ ವಧೆಗಾಗಿ ಅದಿತಿಯ ಗರ್ಭದಲ್ಲಿ ವಾಸಿಸುವ ಮೊದಲು ವಿಷ್ಣುವು ಕುದುರೆಯ ಮುಖವನ್ನು ಪಡೆದು ಬಹುಕಾಲದವರೆಗೆ ಅಡಗಿದ್ದನು.

03299013a ಪ್ರಾಪ್ಯ ವಾಮನರೂಪೇಣ ಪ್ರಚ್ಚನ್ನಂ ಬ್ರಹ್ಮರೂಪಿಣಾ|

03299013c ಬಲೇರ್ಯಥಾ ಹೃತಂ ರಾಜ್ಯಂ ವಿಕ್ರಮೈಸ್ತಚ್ಚ ತೇ ಶ್ರುತಂ||

ಆ ಬ್ರಹ್ಮರೂಪಿಣಿಯು ವಾಮನರೂಪವನ್ನು ಪಡೆದು ಅಡಗಿ ವಿಕ್ರಮದಿಂದ ಬಲಿಯ ರಾಜ್ಯವನ್ನು ಕಸಿದುಕೊಂಡನು ಎನ್ನುವುದನ್ನು ನೀನು ಕೇಳಿದ್ದೀಯೆ.

03299014a ಔರ್ವೇಣ ವಸತಾ ಚನ್ನಮೂರೌ ಬ್ರಹ್ಮರ್ಷಿಣಾ ತದಾ|

03299014c ಯತ್ಕೃತಂ ತಾತ ಲೋಕೇಷು ತಚ್ಚ ಸರ್ವಂ ಶ್ರುತಂ ತ್ವಯಾ||

ಮಗೂ! ಬ್ರಹ್ಮರ್ಷಿ ಔರ್ವನು ತನ್ನ ತಾಯಿಯ ತೊಡೆಯೊಳಗೆ ಅಡಗಿ ಲೋಕದಲ್ಲಿ ಏನೆಲ್ಲ ಸಾಧಿಸಿದನು ಎನ್ನುವುದೆಲ್ಲವನ್ನೂ ನೀನು ಕೇಳಿದ್ದೀಯೆ.

03299015a ಪ್ರಚ್ಚನ್ನಂ ಚಾಪಿ ಧರ್ಮಜ್ಞ ಹರಿಣಾ ವೃತ್ರನಿಗ್ರಹೇ|

03299015c ವಜ್ರಂ ಪ್ರವಿಶ್ಯ ಶಕ್ರಸ್ಯ ಯತ್ಕೃತಂ ತಚ್ಚ ತೇ ಶ್ರುತಂ||

ಧರ್ಮಜ್ಞ! ಹರಿಯು ಶಕ್ರನ ವಜ್ರವನ್ನು ಪ್ರವೇಶಿಸಿ ವೃತ್ರನನ್ನು ನಿಗ್ರಹಿಸಿದುದನ್ನು ಕೂಡ ನೀನು ಕೇಳಿದ್ದೀಯೆ.

03299016a ಹುತಾಶನೇನ ಯಚ್ಚಾಪಃ ಪ್ರವಿಶ್ಯ ಚನ್ನಮಾಸತಾ|

03299016c ವಿಬುಧಾನಾಂ ಕೃತಂ ಕರ್ಮ ತಚ್ಚ ಸರ್ವಂ ಶ್ರುತಂ ತ್ವಯಾ||

ಹುತಾಶನನು ಸಾಗರವನ್ನು ಪ್ರವೇಶಿಸಿ ಅಡಗಿ ಕುಳಿತುಕೊಂಡು ದೇವತೆಗಳಿಗೆ ಏನು ಮಾಡಿದನೆಂದು ಎಲ್ಲವನ್ನೂ ನೀನು ಕೇಳಿದ್ದೀಯೆ.

03299017a ಏವಂ ವಿವಸ್ವತಾ ತಾತ ಚನ್ನೇನೋತ್ತಮತೇಜಸಾ|

03299017c ನಿರ್ದಗ್ಧಾಃ ಶತ್ರವಃ ಸರ್ವೇ ವಸತಾ ಭುವಿ ಸರ್ವಶಃ||

ಮಗೂ! ಹೀಗೆಯೇ ಉತ್ತಮ ತೇಜಸ್ವಿ ವಿವಸ್ವತನು ಭೂಮಿಯಲ್ಲಿ ಅಡಗಿ ವಾಸಿಸಿ ಎಲ್ಲೆಡೆಯಲ್ಲಿದ್ದ ಶತ್ರುಗಳನ್ನು ಸುಟ್ಟುಹಾಕಿದನು.

03299018a ವಿಷ್ಣುನಾ ವಸತಾ ಚಾಪಿ ಗೃಹೇ ದಶರಥಸ್ಯ ವೈ|

03299018c ದಶಗ್ರೀವೋ ಹತಶ್ಚನ್ನಂ ಸಂಯುಗೇ ಭೀಮಕರ್ಮಣಾ||

ವೇಷಮರೆಸಿ ದಶರಥನ ಮನೆಯಲ್ಲಿ ವಾಸಿಸುತ್ತಿದ್ದ ವಿಷ್ಣುವು ಯುದ್ಧದಲ್ಲಿ ದಶಗ್ರೀವನನ್ನು ಕೊಲ್ಲುವ ಭಯಂಕರ ಕೃತ್ಯವನ್ನೆಸಗಿದನು.

03299019a ಏವಮೇತೇ ಮಹಾತ್ಮಾನಃ ಪ್ರಚ್ಚನ್ನಾಸ್ತತ್ರ ತತ್ರ ಹ|

03299019c ಅಜಯಂ ಶಾತ್ರವಾನ್ ಯುದ್ಧೇ ತಥಾ ತ್ವಮಪಿ ಜೇಷ್ಯಸಿ||

ಹೇಗೆ ಈ ಮಹಾತ್ಮರು ಅಲ್ಲಲ್ಲಿ ವೇಷಮರೆಸಿಕೊಂಡಿದ್ದು ಯುದ್ಧದಲ್ಲಿ ಶತ್ರುಗಳನ್ನು ಜಯಿಸಿದರೋ ಹಾಗೆ ನೀನೂ ಕೂಡ ಜಯಿಸುತ್ತೀಯೆ.”

03299020a ತಥಾ ಧೌಮ್ಯೇನ ಧರ್ಮಜ್ಞೋ ವಾಕ್ಯೈಃ ಸಂಪರಿತೋಷಿತಃ|

03299020c ಶಾಸ್ತ್ರಬುದ್ಧ್ಯಾ ಸ್ವಬುದ್ಧ್ಯಾ ಚ ನ ಚಚಾಲ ಯುಧಿಷ್ಠಿರಃ||

ಧರ್ಮಜ್ಞ ಧೌಮ್ಯನ ಮಾತುಗಳಿಂದ ಸಮಾಧಾನಗೊಂಡ ಯುಧಿಷ್ಠಿರನು ಶಾಸ್ತ್ರಬುದ್ಧಿ ಮತ್ತು ಸ್ವಬುದ್ಧಿಯಿಂದ ಚಂಚಲಿತನಾಗಲಿಲ್ಲ.

03299021a ಅಥಾಬ್ರವೀನ್ಮಹಾಬಾಹುರ್ಭೀಮಸೇನೋ ಮಹಾಬಲಃ|

03299021c ರಾಜಾನಂ ಬಲಿನಾಂ ಶ್ರೇಷ್ಠೋ ಗಿರಾ ಸಂಪರಿಹರ್ಷಯನ್||

ಆಗ ಮಹಾಬಾಹು ಮಹಾಬಲಿ ಬಲಿಗಳಲ್ಲಿ ಶ್ರೇಷ್ಠ ಭೀಮಸೇನನು ರಾಜನಿಗೆ ಪ್ರೋತ್ಸಾಹಿಸುವ ಈ ಮಾತುಗಳನ್ನಾಡಿದನು.

03299022a ಅವೇಕ್ಷಯಾ ಮಹಾರಾಜ ತವ ಗಾಂಡೀವಧನ್ವನಾ|

03299022c ಧರ್ಮಾನುಗತಯಾ ಬುದ್ಧ್ಯಾ ನ ಕಿಂ ಚಿತ್ಸಾಹಸಂ ಕೃತಂ||

“ಮಹಾರಾಜ! ನಿನ್ನನ್ನು ನೋಡಿ ಮತ್ತು ಧರ್ಮವನ್ನು ಅನುಸರಿಸುವ ಬುದ್ಧಿಯಿಂದ ಈ ಗಾಂಡೀವಧನ್ವಿಯು ಏನೂ ಸಾಹಸ ಕೃತ್ಯವನ್ನು ಇನ್ನೂ ಮಾಡಿಲ್ಲ.

03299023a ಸಹದೇವೋ ಮಯಾ ನಿತ್ಯಂ ನಕುಲಶ್ಚ ನಿವಾರಿತೌ|

03299023c ಶಕ್ತೌ ವಿಧ್ವಂಸನೇ ತೇಷಾಂ ಶತ್ರುಘ್ನೌ ಭೀಮವಿಕ್ರಮೌ||

ನಿತ್ಯವೂ ನಾನು ನಕುಲನನ್ನೂ ಸಹದೇವನನ್ನೂ ತಡೆಯುತ್ತಿದ್ದೇನೆ. ಈ ಭೀಮವಿಕ್ರಮಿ ಶತ್ರುಘ್ರ್ನರೀರ್ವರೂ ಅವರನ್ನು ವಿಧ್ವಂಸಿಸಲು ಶಕ್ತರಾಗಿದ್ದಾರೆ.

03299024a ನ ವಯಂ ತತ್ಪ್ರಹಾಸ್ಯಾಮೋ ಯಸ್ಮಿನ್ಯೋಕ್ಷ್ಯತಿ ನೋ ಭವಾನ್|

03299024c ಭವಾನ್ವಿಧತ್ತಾಂ ತತ್ಸರ್ವಂ ಕ್ಷಿಪ್ರಂ ಜೇಷ್ಯಾಮಹೇ ಪರಾನ್||

ನೀನು ನಮಗೆ ಯಾವ ಕೆಲಸವನ್ನು ಕೊಡುತ್ತೀಯೋ ಅದನ್ನು ದೂರಕ್ಕಿಡುವುದಿಲ್ಲ. ನೀನೇ ನಮಗೆ ವಿಧಿಸಿದರೆ ಶೀಘ್ರದಲ್ಲಿಯೇ ನಾವು ಆ ಎಲ್ಲ ಶತ್ರುಗಳನ್ನೂ ಜಯಿಸುತ್ತೇವೆ.”

03299025a ಇತ್ಯುಕ್ತೇ ಭೀಮಸೇನೇನ ಬ್ರಾಹ್ಮಣಾಃ ಪರಮಾಶಿಷಃ|

03299025c ಪ್ರಯುಜ್ಯಾಪೃಚ್ಚ್ಯ ಭರತಾನ್ಯಥಾಸ್ವಾನ್ ಸ್ವಾನ್ಯಯುರ್ಗೃಹಾನ್||

ಭೀಮಸೇನನು ಹೀಗೆ ಹೇಳಲು ಬ್ರಾಹ್ಮಣರು ಪರಮ ಆಶೀರ್ವಾದಗಳನ್ನಿತ್ತು, ಭಾರತರಿಂದ ಬೀಳ್ಕೊಂಡು ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.

03299026a ಸರ್ವೇ ವೇದವಿದೋ ಮುಖ್ಯಾ ಯತಯೋ ಮುನಯಸ್ತಥಾ|

03299026c ಆಶೀರುಕ್ತ್ವಾ ಯಥಾನ್ಯಾಯಂ ಪುನರ್ದರ್ಶನಕಾಂಕ್ಷಿಣಃ||

ಅವರನ್ನು ಪುನಃ ಕಾಣುವ ಇಚ್ಛೆಯುಳ್ಳವರಾಗಿ ಎಲ್ಲ ವೇದವಿದ ಮುಖ್ಯ ಯತಿ-ಮುನಿಗಳೂ ಯಥಾನ್ಯಾಯವಾಗಿ ಆಶೀರ್ವಚನಗಳನ್ನು ನೀಡಿದರು.

03299027a ಸಹ ಧೌಮ್ಯೇನ ವಿದ್ವಾಂಸಸ್ತಥಾ ತೇ ಪಂಚ ಪಾಂಡವಾಃ|

03299027c ಉತ್ಥಾಯ ಪ್ರಯಯುರ್ವೀರಾಃ ಕೃಷ್ಣಾಮಾದಾಯ ಭಾರತ||

ಭಾರತ! ವಿದ್ವಾಂಸರಾದ ಆ ವೀರ ಪಂಚ ಪಾಂಡವರು ಧೌಮ್ಯನೊಂದಿಗೆ ಮೇಲೆದ್ದು ದ್ರೌಪದಿಯೊಡನೆ ಹೊರಟರು.

03299028a ಕ್ರೋಶಮಾತ್ರಮತಿಕ್ರಮ್ಯ ತಸ್ಮಾದ್ದೇಶಾನ್ನಿಮಿತ್ತತಃ|

03299028c ಶ್ವೋಭೂತೇ ಮನುಜವ್ಯಾಘ್ರಾಶ್ಚನ್ನವಾಸಾರ್ಥಮುದ್ಯತಾಃ||

03299029a ಪೃಥಕ್ಶಾಸ್ತ್ರವಿದಃ ಸರ್ವೇ ಸರ್ವೇ ಮಂತ್ರವಿಶಾರದಾಃ|

03299029c ಸಂಧಿವಿಗ್ರಹಕಾಲಜ್ಞಾ ಮಂತ್ರಾಯ ಸಮುಪಾವಿಶನ್||

ಯಾವುದೋ ಕಾರಣದಿಂದ ಆ ಪ್ರದೇಶದಿಂದ ಕ್ರೋಶಮಾತ್ರ ದೂರದವರೆಗೆ ಪ್ರಯಾಣ ಮಾಡಿದರು. ಮರುದಿನ ಆ ಮನುಜವ್ಯಾಘ್ರರು, ಅಜ್ಞಾತವಾಸವನ್ನು ಪ್ರಾರಂಭಿಸಲು ಸಿದ್ಧರಾಗಿ ಎಲ್ಲರೂ ಒಟ್ಟಿಗೇ ಕುಳಿತು ಸಮಾಲೋಚಿಸಿದರು. ಪ್ರತಿಯೊಬ್ಬರಿಗೂ ಅವರವರ ಕಲೆಯು ತಿಳಿದಿತ್ತು. ಮಂತ್ರವಿಶಾರದರಾಗಿದ್ದರು. ಹಾಗೂ ಶಾಂತಿ ಮತ್ತು ಕಲಹಗಳ ಕಾಲವನ್ನು ಚೆನ್ನಾಗಿ ತಿಳಿದಿದ್ದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ಅಜ್ಞಾತವಾಸಮಂತ್ರಣೇ ನವನವತ್ಯಧಿಕದ್ವಿಶತತಮೋಽಧ್ಯಾಯ😐

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ಅಜ್ಞಾತವಾಸಮಂತ್ರದಲ್ಲಿ ಇನ್ನೂರಾತೊಂಭತ್ತೊಂಭತ್ತನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವ ಸಮಾಪ್ತಿ ||

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಆರಣೇಯಪರ್ವದ ಸಮಾಪ್ತಿ.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಪರ್ವ ಸಮಾಪ್ತಿ ||

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದ ಸಮಾಪ್ತಿ.

ಇದೂವರೆಗಿನ ಒಟ್ಟು ಮಹಾಪರ್ವಗಳು-೩/೧೮, ಉಪಪರ್ವಗಳು-೪೪/೧೦೦, ಅಧ್ಯಾಯಗಳು-೫೯೬/೧೯೯೫, ಶ್ಲೋಕಗಳು-೧೯೮೯೪/೭೩೭೮೪

***

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Related image

Comments are closed.