Virata Parva: Chapter 12

ವಿರಾಟ ಪರ್ವ: ವೈರಾಟ ಪರ್ವ 

೧೨

ಸಮಯಪಾಲನ

ವಿರಾಟನಗರಿಯಲ್ಲಿ ಯುಧಿಷ್ಠಿರನ ಸಮಯಪಾಲನೆ (೧-೫). ಭೀಮನ ಸಮಯಪಾಲನೆ (೬-೨೯). ಇತರ ಪಾಂಡವರ ಸಮಯಪಾಲನೆ (೩೦-೩೨).

04012001 ಜನಮೇಜಯ ಉವಾಚ|

04012001a ಏವಂ ಮತ್ಸ್ಯಸ್ಯ ನಗರೇ ವಸಂತಸ್ತತ್ರ ಪಾಂಡವಾಃ|

04012001c ಅತ ಊರ್ಧ್ವಂ ಮಹಾವೀರ್ಯಾಃ ಕಿಮಕುರ್ವಂತ ವೈ ದ್ವಿಜ||

ಜನಮೇಜಯನು ಹೇಳಿದನು: “ದ್ವಿಜ! ಹೀಗೆ ಮತ್ಸ್ಯನ ನಗರಿಯಲ್ಲಿ ವಾಸಿಸುತ್ತಿದ್ದ ಮಹಾವಿಕ್ರಮಿ ಪಾಂಡವರು ಮುಂದೆ ಏನು ಮಾಡಿದರು?”

04012002 ವೈಶಂಪಾಯನ ಉವಾಚ|

04012002a ಏವಂ ತೇ ನ್ಯವಸಂಸ್ತತ್ರ ಪ್ರಚ್ಛನ್ನಾಃ ಕುರುನಂದನಾಃ|

04012002c ಆರಾಧಯಂತೋ ರಾಜಾನಂ ಯದಕುರ್ವಂತ ತಚ್ಚೃಣು||

ವೈಶಂಪಾಯನನು ಹೇಳಿದನು: “ಹೀಗೆ ವೇಷಮರೆಸಿಕೊಂಡು ಅಲ್ಲಿ ವಾಸಿಸುತ್ತಿದ್ದ ಕುರುನಂದನರು ರಾಜನ ಸೇವೆ ಮಾಡುತ್ತಾ ಏನು ಮಾಡಿದರೆಂದು ಕೇಳು.

04012003a ಯುಧಿಷ್ಠಿರಃ ಸಭಾಸ್ತಾರಃ ಸಭ್ಯಾನಾಮಭವತ್ಪ್ರಿಯಃ|

04012003c ತಥೈವ ಚ ವಿರಾಟಸ್ಯ ಸಪುತ್ರಸ್ಯ ವಿಶಾಂ ಪತೇ||

ವಿಶಾಂಪತೇ! ಸಭಾಸದನಾಗಿದ್ದ ಯುಧಿಷ್ಠಿರನು ಸಭಾಜನರಿಗೂ ಅಂತೆಯೇ ವಿರಾಟನಿಗೂ ಆತನ ಪುತ್ರರಿಗೂ ಪ್ರಿಯನಾದನು.

04012004a ಸ ಹ್ಯಕ್ಷಹೃದಯಜ್ಞಸ್ತಾನ್ಕ್ರೀಡಯಾಮಾಸ ಪಾಂಡವಃ|

04012004c ಅಕ್ಷವತ್ಯಾಂ ಯಥಾಕಾಮಂ ಸೂತ್ರಬದ್ಧಾನಿವ ದ್ವಿಜಾನ್||

ಪಗಡೆಯಾಟದ ರಹಸ್ಯವನ್ನು ತಿಳಿದಿದ್ದ ಆ ಪಾಂಡವನು ದಾರದಿಂದ ಕಟ್ಟಿದ ಹಕ್ಕಿಯನ್ನು ಆಡಿಸುವಂತೆ ಅವರನ್ನು ಪಗಡೆಯಾಟದಲ್ಲಿ ಆಟವಾಡಿಸುತ್ತಿದ್ದನು.

04012005a ಅಜ್ಞಾತಂ ಚ ವಿರಾಟಸ್ಯ ವಿಜಿತ್ಯ ವಸು ಧರ್ಮರಾಟ್|

04012005c ಭ್ರಾತೃಭ್ಯಃ ಪುರುಷವ್ಯಾಘ್ರೋ ಯಥಾರ್ಹಂ ಸ್ಮ ಪ್ರಯಚ್ಛತಿ||

ಆ ಪುರುಷವ್ಯಾಘ್ರ ಧರ್ಮರಾಜನು ವಿರಾಟನ ಸಂಪತ್ತನ್ನು ಗೆದ್ದು ಯಾರಿಗೂ ತಿಳಿಯದ ಹಾಗೆ ತನ್ನ ತಮ್ಮಂದಿರಿಗೆ ಬೇಕಾದಷ್ಟನ್ನು ಕೊಡುತ್ತಿದ್ದನು.

04012006a ಭೀಮಸೇನೋಽಪಿ ಮಾಂಸಾನಿ ಭಕ್ಷ್ಯಾಣಿ ವಿವಿಧಾನಿ ಚ|

04012006c ಅತಿಸೃಷ್ಟಾನಿ ಮತ್ಸ್ಯೇನ ವಿಕ್ರೀಣಾತಿ ಯುಧಿಷ್ಠಿರೇ||

ಭೀಮಸೇನನೂ ಮತ್ಸ್ಯರಾಜನಿಂದ ದೊರಕಿದ ಮಾಂಸ ಮತ್ತು ವಿವಿಧ ಭಕ್ಷ್ಯಗಳನ್ನು ಯುಧಿಷ್ಠಿರನಿಗೆ ಮಾರುತ್ತಿದ್ದನು.

04012007a ವಾಸಾಂಸಿ ಪರಿಜೀರ್ಣಾನಿ ಲಬ್ಧಾನ್ಯಂತಃಪುರೇಽರ್ಜುನಃ|

04012007c ವಿಕ್ರೀಣಾನಶ್ಚ ಸರ್ವೇಭ್ಯಃ ಪಾಂಡವೇಭ್ಯಃ ಪ್ರಯಚ್ಛತಿ||

ಅರ್ಜುನನು ಅಂತಃಪುರದಲ್ಲಿ ದೊರೆತ ಹಳೆಯ ಬಟ್ಟೆಗಳನ್ನು ಪಾಂಡವರೆಲ್ಲರಿಗೂ ಮಾರುತ್ತಿದ್ದನು.

04012008a ಸಹದೇವೋಽಪಿ ಗೋಪಾನಾಂ ವೇಷಮಾಸ್ಥಾಯ ಪಾಂಡವಃ|

04012008c ದಧಿ ಕ್ಷೀರಂ ಘೃತಂ ಚೈವ ಪಾಂಡವೇಭ್ಯಃ ಪ್ರಯಚ್ಛತಿ||

ಗೊಲ್ಲನ ವೇಷದಲ್ಲಿದ್ದ ಪಾಂಡವ ಸಹದೇವನು ಇತರ ಪಾಂಡವರಿಗೆ ಹಾಲು ತುಪ್ಪಗಳನ್ನು ಕೊಡುತ್ತಿದ್ದನು.

04012009a ನಕುಲೋಽಪಿ ಧನಂ ಲಬ್ಧ್ವಾ ಕೃತೇ ಕರ್ಮಣಿ ವಾಜಿನಾಂ|

04012009c ತುಷ್ಟೇ ತಸ್ಮಿನ್ನರಪತೌ ಪಾಂಡವೇಭ್ಯಃ ಪ್ರಯಚ್ಛತಿ||

ನಕುಲನು ಅಶ್ವನಿರ್ವಹಣೆಯಿಂದ ಸಂತುಷ್ಟನಾದ ರಾಜನಿಂದ ಧನವನ್ನು ಪಡೆದು ಪಾಂಡವರಿಗೆ ಕೊಡುತ್ತಿದ್ದನು.

04012010a ಕೃಷ್ಣಾಪಿ ಸರ್ವಾನ್ಭ್ರಾತೄಂಸ್ತಾನ್ನಿರೀಕ್ಷಂತೀ ತಪಸ್ವಿನೀ|

04012010c ಯಥಾ ಪುನರವಿಜ್ಞಾತಾ ತಥಾ ಚರತಿ ಭಾಮಿನೀ||

ಆ ತಪಸ್ವಿನಿ ಭಾಮಿನಿ ದ್ರೌಪದಿಯಾದರೋ ಆ ಸಹೋದರರನ್ನು ನೋಡುತ್ತಾ ತನ್ನ ಗುರುತು ಸಿಗದಂತೆ ನಡೆದುಕೊಳ್ಳುತ್ತಿದ್ದಳು.

04012011a ಏವಂ ಸಂಪಾದಯಂತಸ್ತೇ ತಥಾನ್ಯೋನ್ಯಂ ಮಹಾರಥಾಃ|

04012011c ಪ್ರೇಕ್ಷಮಾಣಾಸ್ತದಾ ಕೃಷ್ಣಾಮೂಷುಶ್ಚನ್ನಾ ನರಾಧಿಪ||

ನರಾಧಿಪ! ಹೀಗೆ ಆ ಮಹಾರಥಿಗಳು ಅನ್ಯೋನ್ಯರ ಬೇಕುಬೇಡಗಳನ್ನು ಪೂರೈಸುತ್ತಾ ದ್ರೌಪದಿಯನ್ನು ನೋಡಿಕೊಳ್ಳುತ್ತಾ ವೇಷಮರೆಸಿಕೊಂಡಿದ್ದರು.

04012012a ಅಥ ಮಾಸೇ ಚತುರ್ಥೇ ತು ಬ್ರಹ್ಮಣಃ ಸುಮಹೋತ್ಸವಃ|

04012012c ಆಸೀತ್ಸಮೃದ್ಧೋ ಮತ್ಸ್ಯೇಷು ಪುರುಷಾಣಾಂ ಸುಸಮ್ಮತಃ||

ನಾಲ್ಕನೆಯ ತಿಂಗಳಿನಲ್ಲಿ ಸಮೃದ್ಧ ಮತ್ಸ್ಯದ ಜನರಿಗೆ ಸಂತೋಷವನ್ನು ತರುವ ಬ್ರಹ್ಮಮಹೋತ್ಸವವು ಬಂದಿತು.

04012013a ತತ್ರ ಮಲ್ಲಾಃ ಸಮಾಪೇತುರ್ದಿಗ್ಭ್ಯೋ ರಾಜನ್ಸಹಸ್ರಶಃ|

04012013c ಮಹಾಕಾಯಾ ಮಹಾವೀರ್ಯಾಃ ಕಾಲಖಂಜಾ ಇವಾಸುರಾಃ||

ರಾಜನ್! ಕಾಲಖಂಜ ರಾಕ್ಷಸರಂತಿರುವ ಮಹಾಕಾಯ, ಮಹಾವೀರ ಮಲ್ಲರು ಸಹಸ್ರಾರು ಸಂಖ್ಯೆಗಳಲ್ಲಿ ದಿಕ್ಕುದಿಕ್ಕುಗಳಿಂದ ಅಲ್ಲಿಗೆ ಆಗಮಿಸಿದರು.

04012014a ವೀರ್ಯೋನ್ನದ್ಧಾ ಬಲೋದಗ್ರಾ ರಾಜ್ಞಾ ಸಮಭಿಪೂಜಿತಾಃ|

04012014c ಸಿಂಹಸ್ಕಂಧಕಟಿಗ್ರೀವಾಃ ಸ್ವವದಾತಾ ಮನಸ್ವಿನಃ||

04012014E ಅಸಕೃಲ್ಲಬ್ಧಲಕ್ಷಾಸ್ತೇ ರಂಗೇ ಪಾರ್ಥಿವಸನ್ನಿಧೌ||

ವೀರ್ಯೋನ್ಮತ್ತರೂ, ಬಲದಲ್ಲಿ ಮೇಲಾದವರೂ, ರಾಜನಿಂದ ಪುರಸ್ಕರಿಸಲ್ಪಟ್ಟವರೂ, ಸಿಂಹದಂಥಹ ಹೆಗಲು, ಸೊಂಟ ಮತ್ತು ಕೊರಳುಗಳುಳ್ಳವರೂ, ಸ್ವಚ್ಛ ಶರೀರಿಗಳೂ, ದೃಢಮನಸ್ಕರೂ ಆದ ಅವರು ರಾಜನ ಸಮ್ಮುಖದಲ್ಲಿ ಕಣದಲ್ಲಿ ಮಲ್ಲಯುದ್ಧಮಾಡಿ ಗೆಲ್ಲುತ್ತಿದ್ದರು.

04012015a ತೇಷಾಮೇಕೋ ಮಹಾನಾಸೀತ್ಸರ್ವಮಲ್ಲಾನ್ಸಮಾಹ್ವಯತ್|

04012015c ಆವಲ್ಗಮಾನಂ ತಂ ರಂಗೇ ನೋಪತಿಷ್ಠತಿ ಕಶ್ಚನ||

ಅವರಲ್ಲಿಯೇ ಒಬ್ಬ ಮಹಾಮಲ್ಲನು ಇತರ ಮಲ್ಲರೆಲ್ಲರನ್ನೂ ಕೂಗಿ ಕರೆದು ಕಣದಲ್ಲಿ ಸುತ್ತುವರೆಯುತ್ತಿದ್ದ. ಆದರೆ ಅವನನ್ನು ಎದುರಿಸಲು ಯಾರೂ ಮುಂದೆಬರಲಿಲ್ಲ.

04012016a ಯದಾ ಸರ್ವೇ ವಿಮನಸಸ್ತೇ ಮಲ್ಲಾ ಹತಚೇತಸಃ|

04012016c ಅಥ ಸೂದೇನ ತಂ ಮಲ್ಲಂ ಯೋಧಯಾಮಾಸ ಮತ್ಸ್ಯರಾಟ್||

ಆ ಜಟ್ಟಿಗಳೆಲ್ಲ ನಿರುತ್ಸಾಹಗೊಂಡು ಹತಚೇತಸರಾದಾಗ ಮತ್ಸ್ಯರಾಜನು ತನ್ನ ಅಡುಗೆಯವ ಆ ಮಲ್ಲನೊಡನೆ ಹೋರಾಡಲು ಹೇಳಿದನು.

04012017a ಚೋದ್ಯಮಾನಸ್ತತೋ ಭೀಮೋ ದುಃಖೇನೈವಾಕರೋನ್ಮತಿಂ|

04012017c ನ ಹಿ ಶಕ್ನೋತಿ ವಿವೃತೇ ಪ್ರತ್ಯಾಖ್ಯಾತುಂ ನರಾಧಿಪಂ||

ಈ ರೀತಿ ರಾಜನಿಂದ ಪ್ರಚೋದಿತನಾದ ಬೀಮನು ಈ ರಾಜನೆದುರು ಬಹಿರಂಗವಾಗಿ ಹೋರಾಡಲು ಅವಕಾಶವಿಲ್ಲವಲ್ಲಾ ಎಂದು ದುಃಖಿಸಿದನು.

04012018a ತತಃ ಸ ಪುರುಷವ್ಯಾಘ್ರಃ ಶಾರ್ದೂಲಶಿಥಿಲಂ ಚರನ್|

04012018c ಪ್ರವಿವೇಶ ಮಹಾರಂಗಂ ವಿರಾಟಮಭಿಹರ್ಷಯನ್||

ಆಗ ಆ ಪುರುಷವ್ಯಾಘ್ರನು ಶಾರ್ದೂಲದಂತೆ ಸಲೀಸಾಗಿ ಹೆಜ್ಜೆಗಳನ್ನಿಡುತ್ತಾ ಮಹಾರಂಗವನ್ನು ಪ್ರವೇಶಿಸಿ ವಿರಾಟನಿಗೆ ಸಂತೋಷವನ್ನಿತ್ತನು.

04012019a ಬಬಂಧ ಕಕ್ಷ್ಯಾಂ ಕೌಂತೇಯಸ್ತತಸ್ತಂ ಹರ್ಷಯಂ ಜನಂ|

04012019c ತತಸ್ತಂ ವೃತ್ರಸಂಕಾಶಂ ಭೀಮೋ ಮಲ್ಲಂ ಸಮಾಹ್ವಯತ್||

ಅಲ್ಲಿದ್ದ ಜನರಿಗೆ ಹರ್ಷವನ್ನೀಯುತ್ತಾ ಕೌಂತೇಯ ಭೀಮನು ಸೊಂಟಕ್ಕೆ ಕಟ್ಟನ್ನು ಕಟ್ಟಿ ಆ ವೃತ್ರಾಸುರನಂತಿದ್ದ ಮಲ್ಲನನ್ನು ಎದುರಿಸಿದನು.

04012020a ತಾವುಭೌ ಸುಮಹೋತ್ಸಾಹಾವುಭೌ ತೀವ್ರಪರಾಕ್ರಮೌ|

04012020c ಮತ್ತಾವಿವ ಮಹಾಕಾಯೌ ವಾರಣೌ ಷಷ್ಟಿಹಾಯನೌ||

ಮಹೋತ್ಸಾಹಿಗಳಾದ ತೀವ್ರಪರಾಕ್ರಮಿಗಳಾಗಿದ್ದ ಅವರೀರ್ವರೂ ಮತ್ತೇರಿದ ಅರವತ್ತು ವರ್ಷದ ಅತೀದೊಡ್ಡ ಆನೆಗಳಂತೆ ಕಾಣುತ್ತಿದ್ದರು.

04012021a ಚಕರ್ಷ ದೋರ್ಭ್ಯಾಮುತ್ಪಾಟ್ಯ ಭೀಮೋ ಮಲ್ಲಮಮಿತ್ರಹಾ|

04012021c ವಿನದಂತಮಭಿಕ್ರೋಶಂ ಶಾರ್ದೂಲ ಇವ ವಾರಣಂ||

ಶತ್ರುಹಂತಕ ಭೀಮನು ಘೀಳಿಡುತ್ತಿರುವ ಆನೆಯನ್ನು ಶಾರ್ದೂಲವು ಎತ್ತಿ ಹಿಡಿಯುವಂತೆ ಆ ಮಲ್ಲನ ತೋಳುಗಳಿಂದ ಮೇಲೆತ್ತಿ ಹಿಡಿದು ಗರ್ಜಿಸಿದನು.

04012022a ತಮುದ್ಯಮ್ಯ ಮಹಾಬಾಹುರ್ಭ್ರಾಮಯಾಮಾಸ ವೀರ್ಯವಾನ್|

04012022c ತತೋ ಮಲ್ಲಾಶ್ಚ ಮತ್ಸ್ಯಾಶ್ಚ ವಿಸ್ಮಯಂ ಚಕ್ರಿರೇ ಪರಂ||

ಆ ವೀರ್ಯವಂತನು ಅವನನ್ನು ಮೇಲೆತ್ತಿ ತಿರುಗಿಸುತ್ತಿದ್ದನ್ನುನೋಡಿ ಮಲ್ಲರೂ ಮತ್ಸ್ಯ ಜನರೂ ಪರಮ ವಿಸ್ಮಿತರಾದರು.

04012023a ಭ್ರಾಮಯಿತ್ವಾ ಶತಗುಣಂ ಗತಸತ್ತ್ವಮಚೇತನಂ|

04012023c ಪ್ರತ್ಯಪಿಂಷನ್ಮಹಾಬಾಹುರ್ಮಲ್ಲಂ ಭುವಿ ವೃಕೋದರಃ||

ಮಹಾಬಾಹು ವೃಕೋದರನು ಆ ಮಲ್ಲನನ್ನು ನೂರುಸಲ ತಿರುಗಿಸಿ ಸತ್ವವನ್ನು ಕಳೆದುಕೊಂಡು ಮೂರ್ಛೆ ಹೋಗಿದ್ದ ಅವನನ್ನು ನೆಲಕ್ಕಿಕ್ಕಿ ಹುಡಿಗುಟ್ಟಿದನು.

04012024a ತಸ್ಮಿನ್ವಿನಿಹತೇ ಮಲ್ಲೇ ಜೀಮೂತೇ ಲೋಕವಿಶ್ರುತೇ|

04012024c ವಿರಾಟಃ ಪರಮಂ ಹರ್ಷಮಗಚ್ಛದ್ಬಾಂಧವೈಃ ಸಹ|

ಲೋಕವಿಶ್ರುತ ಮಲ್ಲ ಜೀಮೂತನು ಈ ರೀತಿ ಹತನಾಗಲು ವಿರಾಟನು ತನ್ನ ಬಾಂಧವರೊಂದಿಗೆ ಅತೀವ ಸಂತೋಷಗೊಂಡನು.

04012025a ಸಂಹರ್ಷಾತ್ಪ್ರದದೌ ವಿತ್ತಂ ಬಹು ರಾಜಾ ಮಹಾಮನಾಃ|

04012025c ಬಲ್ಲವಾಯ ಮಹಾರಂಗೇ ಯಥಾ ವೈಶ್ರವಣಸ್ತಥಾ||

ಆ ದೊಡ್ಡಮನಸ್ಸಿನ ರಾಜನು ಸಂತೋಷದಿಂದ ಆ ಮಹಾರಂಗದಲ್ಲಿಯೇ ಬಲ್ಲವನಿಗೆ ಕುಬೇರನಂತೆ ಬಹಳಷ್ಟು ಹಣವನ್ನಿತ್ತನು.

04012026a ಏವಂ ಸ ಸುಬಹೂನ್ಮಲ್ಲಾನ್ಪುರುಷಾಂಶ್ಚ ಮಹಾಬಲಾನ್|

04012026c ವಿನಿಘ್ನನ್ಮತ್ಸ್ಯರಾಜಸ್ಯ ಪ್ರೀತಿಮಾವಹದುತ್ತಮಾಂ||

ಹೀಗೆ ಆ ಭೀಮನು ಬಹುಮಂದಿ ಮಲ್ಲರನ್ನೂ ಮಹಾಬಲಶಾಲಿ ಪುರುಷರನ್ನೂ ಕೊಂದು ಮತ್ಯ್ಸರಾಜನಿಗೆ ಅತಿಶಯ ಆನಂದವನ್ನು ತಂದನು.

04012027a ಯದಾಸ್ಯ ತುಲ್ಯಃ ಪುರುಷೋ ನ ಕಶ್ಚಿತ್ತತ್ರ ವಿದ್ಯತೇ|

04012027c ತತೋ ವ್ಯಾಘ್ರೈಶ್ಚ ಸಿಂಹೈಶ್ಚ ದ್ವಿರದೈಶ್ಚಾಪ್ಯಯೋಧಯತ್|

ಅವನಿಗೆ ಸರಿಸಮಾನ ವ್ಯಕ್ತಿಗಳು ಯಾರೂ ಅಲ್ಲಿ ಇಲ್ಲದಿದ್ದಾಗ ಅವನನ್ನು ಹುಲಿ, ಸಿಂಹ ಅಥವಾ ಆನೆಗಳೊಡನೆ ಕಾದಾಡಿಸುತ್ತಿದ್ದನು.

04012028a ಪುನರಂತಃಪುರಗತಃ ಸ್ತ್ರೀಣಾಂ ಮಧ್ಯೇ ವೃಕೋದರಃ|

04012028c ಯೋಧ್ಯತೇ ಸ್ಮ ವಿರಾಟೇನ ಸಿಂಹೈರ್ಮತ್ತೈರ್ಮಹಾಬಲೈಃ||

ಮತ್ತು ವಿರಾಟನು ತನ್ನ ಅಂತಃಪುರದ ಸ್ತ್ರೀಯರ ನಡುವೆ, ಮದಿಸಿದ ಮಹಾಬಲಶಾಲಿ ಸಿಂಹಗಳೊಡನೆ ವೃಕೋದರನು ಕಾದುವಂತೆ ಮಾಡುತ್ತಿದ್ದನು.

04012029a ಬೀಭತ್ಸುರಪಿ ಗೀತೇನ ಸುನೃತ್ತೇನ ಚ ಪಾಂಡವಃ|

04012029c ವಿರಾಟಂ ತೋಷಯಾಮಾಸ ಸರ್ವಾಶ್ಚಾಂತಃಪುರಸ್ತ್ರಿಯಃ||

ಪಾಂಡವ ಅರ್ಜುನನೂ ಕೂಡ ತನ್ನ ಗೀತ ನೃತ್ಯಗಳಿಂದ ಅಂತಃಪುರದ ಸ್ತ್ರೀಯರೊಂದಿಗೆ ವಿರಾಟನನ್ನು ಸಂತೋಷಗೊಳಿಸುತ್ತಿದ್ದನು.

04012030a ಅಶ್ವೈರ್ವಿನೀತೈರ್ಜವನೈಸ್ತತ್ರ ತತ್ರ ಸಮಾಗತೈಃ|

04012030c ತೋಷಯಾಮಾಸ ನಕುಲೋ ರಾಜಾನಂ ರಾಜಸತ್ತಮ||

ರಾಜಸತ್ತಮ! ನಾನಾಕಡೆಗಳಿಂದ ಬಂದ ವೇಗಗಾಮಿ ಕುದುರೆಗಳಿಗೆ ತರಬೇತಿಯನ್ನಿತ್ತು ನಕುಲನು ರಾಜನನ್ನು ಸಂತೋಷಪಡಿಸುತ್ತಿದ್ದನು.

04012031a ತಸ್ಮೈ ಪ್ರದೇಯಂ ಪ್ರಾಯಚ್ಛತ್ಪ್ರೀತೋ ರಾಜಾ ಧನಂ ಬಹು|

04012031c ವಿನೀತಾನ್ವೃಷಭಾನ್ದೃಷ್ಟ್ವಾ ಸಹದೇವಸ್ಯ ಚಾಭಿಭೋ||

ಪ್ರಭು! ಸಹದೇವನಿಂದ ಸುರಕ್ಷಿತವಾಗಿದ್ದ ಗೂಳಿಗಳನ್ನು ನೋಡಿ ರಾಜನು ಪ್ರೀತನಾಗಿ ಅವನಿಗೆ ಕೊಡಬೇಕಾದಷ್ಟು ಬಹುಧನವನ್ನು ನೀಡುತ್ತಿದ್ದನು.

04012032a ಏವಂ ತೇ ನ್ಯವಸಂಸ್ತತ್ರ ಪ್ರಚ್ಛನ್ನಾಃ ಪುರುಷರ್ಷಭಾಃ|

04012032c ಕರ್ಮಾಣಿ ತಸ್ಯ ಕುರ್ವಾಣಾ ವಿರಾಟನೃಪತೇಸ್ತದಾ||

ಹೀಗೆ ಆ ಪುರುಷಶ್ರೇಷ್ಠರು ವಿರಾಟರಾಜನ ಕೆಲಸ ಮಾಡುತ್ತಾ ಅಲ್ಲಿ ವೇಷಮರೆಸಿಕೊಂಡು ವಾಸಿಸುತ್ತಿದ್ದರು.”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಸಮಯಪಾಲನೇ ಜೀಮೂತವಧೋ ನಾಮ ದ್ವಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಸಮಯಪಾಲನದಲ್ಲಿ ಜೀಮೂತವಧೆ ಎನ್ನುವ ಹನ್ನೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವ ಸಮಾಪ್ತಿಃ|

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವ ಸಮಾಪ್ತಿ.

ಇದೂವರೆಗಿನ ಒಟ್ಟು ಮಹಾಪರ್ವಗಳು-೩/೧೮, ಉಪಪರ್ವಗಳು-೪೫/೧೦೦, ಅಧ್ಯಾಯಗಳು-೬೦೮/೧೯೯೫, ಶ್ಲೋಕಗಳು-೨೦೧೭೬/೭೩೭೮೪

Related image

Comments are closed.